ಸಂಧ್ಯಾ ರಾಣಿ ಕಾಲಂ: ಸಾಗುತ್ತಾ ಹೋಗುವ ಬದುಕು ಮತ್ತು…

’ಜಿಂದಗಿ ಬೀತ್ ಜಾತೀ ಹೈ, ಲೆಕಿನ್ ಖರ್ಚ್ ಹಮ್ ಹೋ ಜಾತೇ ಹೈ’ ’ಬದುಕು ಸಾಗುತ್ತಾ ಹೋಗುತ್ತದೆ, ಆದರೆ ನಾವು ವ್ಯಯವಾಗುತ್ತಾ ಹೋಗುತ್ತೇವೆ’ ಥಿಯೇಟರಿನ ಆರಾಮ ಖುರ್ಚಿಯಲ್ಲಿ ಕೂತು ನೆಮ್ಮದಿಯಿಂದ ಫಿಲಂ ನೋಡುತ್ತಿದ್ದವಳು ಒಂದು ಕ್ಷಣ ಬೆಚ್ಚಿಬಿದ್ದೆ .. ಇದೇನಪ್ಪ ಇದು, ಇಂತಹ ಸಾಕ್ಷಾತ್ಕಾರಗಳು ಥಿಯೇಟರಿನಲ್ಲೂ ಆಗಬಹುದ ಅಂತ ಒಂದು ಕ್ಷಣ ವಿಸ್ಮಿತಳಾದೆ. ಅದೊಂದು ಕರಣ್ ಜೋಹರ್ ಸಿನೆಮಾ, ಖುಷಿ ಖುಷಿಯಾಗಿ ಜೀವನದ ಮೇಲ್ಪದರದ ಕೆನೆ ಮಾತ್ರ ಕಟ್ಟಿಕೊಟ್ಟು ಒಳಗಿನ ಕುದಿತದ ಕಡೆ ಗಮನ ಕೊಡದ ಸಿನಿಮಾ. ಹಾಗೆಂದುಕೊಂಡೇ ನಾನೂ ಸಹ ಆ ಸಿನಿಮಾಕ್ಕೆ ಹೋಗಿದ್ದು. ಅದಕ್ಕೊಂದು ಮೈಲುದ್ದದ ಹೆಸರು, ಯೆ ಜವಾನಿ ಹೈ ದಿವಾನಿ ಅಂತ. ನಾನು ಎದುರು ನೋಡಿದ್ದು ರಣಬೀರ್ ಕಪೂರ್ ನ ಹದ ಮೀರದ ನಟನೆ, ನಮ್ಮ ದೀಪಿಕಾಳ ಭಾವತುಂಬಿದ ಕಣ್ಣಗಳು ಮತ್ತು ಮಾಧುರಿ ನೃತ್ಯ. ಆದರೆ ಕರಣ್ ಜೋಹರ್ ನನಗೊಂದು ಸರ್ಪ್ರೈಸ್ ಕೊಟ್ಟಿದ್ದ! ಚಿತ್ರ ನೋಡುವಾಗ ನನ್ನನ್ನು ಕಲಕಿದ್ದು ಈ ಮಾತು ಮತ್ತೊಂದು ದೃಶ್ಯ.
ಅಮ್ಮನ ಕನಸನ್ನು ನನಸು ಮಾಡುತ್ತಾ ಮಾಡುತ್ತಾ ಕನಸು ಕಾಣುವುದನ್ನೇ ಮರೆತ ಹುಡುಗಿ ಮತ್ತು ಕನಸು ಕಾಣುತ್ತಾ ಕಾಣುತ್ತಾ ಕಣ್ಣೆದುರಿನ ವಾಸ್ತವ, ಸುತ್ತಲಿನ ಸಂಬಂಧಗಳು ಎಲ್ಲಕ್ಕೂ ಕುರುಡಾದ ಹುಡುಗನ ಕಥೆ ಇದು. ಅವಳ ವಾಸ್ತವಕ್ಕೊಂದು ಕನಸಿನ ಸ್ಪರ್ಶ, ಅವನ ಕನಸ ಕಣ್ಣಿಗಂದು ನೆಲದ ಕಾಲು ಬೇಕು. ಅವನಿಂದ ಅವಳು, ಅವಳಿಂದ ಅವನು ಬದುಕಿನ ಸತ್ಯಗಳನ್ನು ಹೆಕ್ಕಿಕೊಂಡು, ಬದುಕನ್ನು ಕಂಡುಕೊಳ್ಳುವುದು ಸ್ಥೂಲವಾಗಿ ಚಿತ್ರದ ಹಂದರ.
ಓದುವುದರ ಹೊರತಾಗಿ ಇನ್ನು ಬದುಕೇ ಇಲ್ಲ ಎನ್ನುವಂತೆ ಬದುಕಿದ ಹುಡುಗಿಗೆ ಬರಬರುತ್ತಾ ಆ ಗುರಿಯೇ ಸಂಕೋಲೆಯಾಗಿ ಬಿಡುಗಡೆಗೆ ಚಡಪಡಿಸಿಬಿಡುತ್ತಾಳೆ. ಅದೇ ಸಮಯದಲ್ಲಿ ಶಾಲೆಯ ಗೆಳೆಯರ ಗುಂಪೊಂದು ಹಿಮಾಲಯದ ತಪ್ಪಲಲ್ಲಿ ಟ್ರೆಕ್ಕಿಂಗ್ ಹೋಗುತ್ತಿರುವುದು ಗೊತ್ತಾಗಿ, ಆ ಕ್ಷಣದ ತನ್ನ ಒಳನುಡಿಯನ್ನು ಕೇಳಿ ಆಕೆಯೂ ಅವರ ಜೊತೆ ಹೊರಟು ಬಿಡುತ್ತಾಳೆ. ಪ್ರಯಾಣದಲ್ಲಿ ಅವರು ಒಂದು ಆಟ ಆಡುತ್ತಾರೆ. ಗುಂಪಿನಲ್ಲಿ ಎಲ್ಲರ ಕೈಲೂ ಪಾನೀಯ ತುಂಬಿದ ಒಂದು ಗ್ಲಾಸ್ ಇರುತ್ತದೆ. ಒಬ್ಬೊಬ್ಬರಾಗಿ ತಾವು ಜೀವನದಲ್ಲಿ ಮಾಡಬೇಕೆಂದುಕೊಂಡೂ ಮಾಡದ ಒಂದೊಂದು ಕೆಲಸ, ಪಡೆಯದ ಒಂದೊಂದು ಅನುಭವ ಹೇಳುತ್ತಾ ಹೋಗುತ್ತಾರೆ. ಆಗ ಆ ಗುಂಪಿನಲ್ಲಿ ಆ ಕೆಲಸ ಮಾಡಿದವರು ಮಾತ್ರ ತಮ್ಮ ಕೈಯಲ್ಲಿನ ಪಾನೀಯದ ಬಟ್ಟಲಿನಿಂದ ಒಂದೊಂದು ಗುಟುಕು ಗುಟುಕರಿಸುತ್ತಾ ಹೋಗುಬೇಕು. ಆಟ ಸಾಗುತ್ತಾ ಹೋಗತ್ತದೆ, ಬಟ್ಟಲುಗಳು ಇಷ್ಟಿಷ್ಟೇ ಇಷ್ಟಿಷ್ಟೇ ಖಾಲಿ ಆಗುತ್ತಾ ಹೋಗುತ್ತವೆ. ಆದರೆ ಆಟ ಮುಗಿಯುವ ಹಂತಕ್ಕೆ ಬಂದಾಗಲೂ ಈ ಹುಡುಗಿಯ ಕೈಯಲ್ಲಿದ್ದ ಗ್ಲಾಸ್ ಒಂದಿಷ್ಟೂ ಖಾಲಿಯಾಗುವುದಿಲ್ಲ …. ಖಾಲಿಯಾಗದ ಆ ಬಟ್ಟಲು, ಅವಳಿಗೆ ತನ್ನ ಖಾಲಿ ಖಾಲಿ ಜೀವನದ ಪ್ರತೀಕ ಅನ್ನಿಸಿಬಿಡುತ್ತದೆ. ಆ ಕ್ಷಣದಿಂದ ಅವಳು ಬದುಕನ್ನು ತೆರೆದ ತೋಳುಗಳಿಂದ ಅಪ್ಪಿಕೊಳ್ಳುವ ನಿರ್ಧಾರ ತೆಗೆದುಕೊಳ್ಳುತ್ತಾಳೆ.
ಹಾಗಾದರೆ ಬದುಕನ್ನು ತೀವ್ರವಾಗಿ ಜೀವಿಸಿದ ಆ ಹುಡುಗನ ಕಥೆ ಏನು? ಇವಳು ಚೌಕಟ್ಟಿನಂತಹ ಹುಡುಗಿಯಾದರೆ ಅವನು ಕನ್ನಡಿಯಂತಹ ಹುಡುಗ. ಚೌಕಟ್ಟಿಗೆ ಒಂದು ಮಿತಿಯಿದೆ, ಅದರಲ್ಲಿ ಒಳಗೊಳ್ಳುವುದು ಒಂದು ಚಿತ್ರ. ಆದರೆ ಕನ್ನಡಿ ಹಾಗಲ್ಲ. ಕನ್ನಡಿ ಅಂದರೆ ಪಾದರಸ, ಕನ್ನಡಿ ಅಂದರೆ ಹೊಳಪು, ಕನ್ನಡಿ ಅಂದರೆ ಪ್ರತಿಫಲನ. ತನ್ನೆದುರಿಗೆ ಬಂದ ಮುಖಗಳನ್ನೆಲ್ಲಾ ಕನ್ನಡಿ ಮೋಹಿಸುತ್ತದೆ, ತೋಳಿಗೆ ತೆಗೆದುಕೊಳ್ಳುತ್ತದೆ. ಹಣಿಕಿ ಹಾಕಿದವರೆಲ್ಲಾ ಕನ್ನಡಿಯ ಸಂಗಾತಿಗಳು. ಆದರೆ ಕನ್ನಡಿಯ ದುರಂತವೆಂದರೆ ಕನ್ನಡಿಯ ಪಾಲಿಗೆ ಒಂದು ಮುಖವೂ ಉಳಿಯುವುದಿಲ್ಲ. ಚೌಕಟ್ಟು ಚಿತ್ರ ಒಳಗೊಳ್ಳುವವರೆಗೆ ಮಾತ್ರ ಒಂಟಿಯಾಗಿರುತ್ತದೆ, ಕನ್ನಡಿ ಖುಷಿ ಹಂಚುತ್ತದೆ, ಆದರೆ ಸದಾ ಒಂಟಿಯಾಗೇ ಉಳಿದುಬಿಡುತ್ತದೆ.
ಮುಂದೇನೋ ಒಂದು ಘಟನೆ ತನ್ನನ್ನು ಕಾಯುತ್ತಿದೆ, ಈಗ ನಿಧಾನಿಸಿದರೆ ತಾನು ಅದನ್ನು ಕಳೆದುಕೊಂಡು ಬಿಡುತ್ತೇನೆ ಎಂದು ಓಡುತ್ತಲೇ ದಣಿಯುವ ಹುಡುಗ ತನ್ನ ’ಇಂದು’ಗಳನ್ನಲ್ಲಾ ಕಳೆದುಕೊಳ್ಳುತ್ತಾ ಹೋಗುತ್ತಾನೆ.

ವರ್ಷಗಳ ನಂತರ ಅವನು ತನ್ನ ಇನ್ನೊಬ್ಬ ಗೆಳತಿಯ ಮದುವೆಗೆಂದು ತನ್ನ ದೇಶಕ್ಕೆ ಮರಳಿ ಬಂದಾಗ ಎಲ್ಲವೂ ಬದಲಾಗಿರುತ್ತದೆ. ಇವನು ಯಾವುದೋ ಟ್ರೆಕಿಂಗ್ ಗೆ ಹೋಗಿರುವಾಗ ತಂದೆ ಗತಿಸಿ, ಆ ಸುದ್ದಿ ಇವನಿಗೆ ತಿಳಿಯದೆ, ಇವನು ತನ್ನನ್ನು ಜೀವದಂತೆ ಪ್ರೀತಿಸಿದ ತಂದೆಯ ಮುಖವನ್ನೇ ನೋಡಲಾಗುವುದಿಲ್ಲ, ಇವನನ್ನು ಕಾಯಲು ಈಗ ಹಳೆ ಮನೆಯಲ್ಲಿ ತಂದೆ ಇಲ್ಲ. ಇವನು ವಿದೇಶಕ್ಕೆ ಹೋಗುವ ಮೊದಲು ಇದ್ದ ಜೀವದ ಗೆಳೆಯ. ಇವನ ಕಲ್ಪನೆಯಲ್ಲಿ ಅವನಿನ್ನೂ ಅದೇ ಗೆಳೆಯನೇ. ಆದರೆ ಆ ಗೆಳೆಯ ’ಈಗ ನಾವಿಬ್ಬರೂ ಗೆಳೆಯರಲ್ಲ’ ಎಂದು ತಣ್ಣಗೆ ಹೇಳಿಬಿಡುತ್ತಾನೆ. ನನ್ನ ನೋವಿನ ಘಳಿಗೆಗಳನ್ನು ಹಂಚಿಕೊಳ್ಳದ, ನನ್ನ ಕಣ್ಣೀರಿಗೆ ಹೆಗಲಾಗದ ನೀನು ಈಗ ಅಪರಿಚಿತ ಎಂದು ಬಿಡುತ್ತಾನೆ. ವ್ಯಾಪಾರದಲ್ಲಿ ನಷ್ಟವಾಗಿ ಮುಳುಗಿ ಹೋಗುತ್ತಿದ್ದರೂ ಇವನ ಹಣವನ್ನು ಸ್ನೇಹಿತ ಮುಟ್ಟುವುದಿಲ್ಲ. ನಿನಗೆ ನಿಜವಾಗಿಯೂ ಕೊಡಬೇಕು ಅಂತ ಇದ್ದರೆ, ಒಂದು ಡ್ರಿಂಕ್ ಕುಡಿಯುವಷ್ಟು ನಿನ್ನ ಸಮಯವನ್ನು ನನಗಾಗಿ ಕೊಡು ಸಾಕು ಎನ್ನುತ್ತಾನೆ.
ಸಂಬಂಧಗಳನ್ನು ಪೋಷಿಸಬೇಕು, ಅವಕ್ಕೆ ಸದಾ ನೀರೆರೆಯಬೇಕು, ಸಮಯ ಕೊಡಬೇಕು. ಬದುಕು ಸಹ ಒಂದು ಬ್ಯಾಂಕಿನಂತೆ. ಸಂಬಂಧಗಳಲ್ಲಿ ನಾವು ಎಷ್ಟು ನಮ್ಮನ್ನು ಜಮಾ ಮಾಡುತ್ತೇವೆಯೋ, ಎಷ್ಟು ಕಾಲ ಜಮಾ ಮಾಡುತ್ತೇವೆಯೋ ಅಷ್ಟನ್ನು ಮಾತ್ರ ನಮ್ಮದಾಗಿಸಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಬದುಕು ನಮ್ಮ ಬೇಡಿಕೆಯ ಚೆಕ್ಕನ್ನು ಬೌನ್ಸ್ ಮಾಡಿ ಹಿಂದಿರುಗಿಸಿಬಿಡುತ್ತದೆ. ಹಣ ಸಮಯಕ್ಕೆ ಎಂದೂ ಸಬ್ಸ್ ಟಿಟ್ಯೂಟ್ ಅಲ್ಲ. ಬದುಕಿನ ಸೌಂದರ್ಯ ಇರುವುದು ಇಲ್ಲಿ, ಈ ಘಳಿಗೆಯಲ್ಲಿ ಎನ್ನುವುದು ಆ ಹುಡುಗನಿಗೆ ನಿಧಾನವಾಗಿ ತಿಳಿಯುತ್ತಾ ಹೋಗುತ್ತದೆ. ಆ ಹುಡುಗ ಆ ಹುಡುಗಿಯ ಬದುಕಿನ ಚೌಕಟ್ಟಿನ ಚಿತ್ರವಾಗುತ್ತಾನೆ. ಇಬ್ಬರ ಜೀವನವೂ ಅರ್ಥಪೂರ್ಣವಾಗುತ್ತದೆ.
ಇದು ಯಾಕೋ ತೀರಾ ಸಿನಿಮೀಯ ಆಯಿತು. ’ಔರ್ ಭಿ ಘಮ್ ಹೈ ಜಿಂದಗೀ ಮೆ ಮೊಹಬ್ಬತ್ ಕೆ ಸಿವಾ’!
ಒಂದು ಸತ್ಯ ಅಂದರೆ ಬದುಕನ್ನು ಪ್ರೀತಿಸುವ, ಜೀವಿಸುವ ಒಂದು ಧೈರ್ಯ, ಒಂದು ಬಯಕೆ, ಒಂದು ಸಣ್ಣ ಹುಚ್ಚು ಬೇಕು ಬದುಕಿಗೆ! ಅದೇನು ದೊಡ್ಡ ದೊಡ್ಡ ಘಟನೆಗಳೇ ಆಗಬೇಕಿಲ್ಲ. ಬದುಕು ಇರುವುದು ಸಣ್ಣ ಸಣ್ಣ ಖುಷಿಗಳಲ್ಲಿ, ಆ ಖುಷಿಗೆ ಜೊತೆಯಾಗುವುದರಲ್ಲಿ, ಕೆಲವು ಸಲ ನೋವಿಗೆ ಹೆಗಲಾಗುವುದರಲ್ಲಿ, ಮೌನವಾಗಿ ಮಡಿಲಾಗುವುದರಲ್ಲಿ. ಸಣ್ಣ ಸಣ್ಣ ಸಾರ್ಥಕತೆಗಳಲ್ಲಿ.
ಮಳೆ ಸುರಿಯುತ್ತಿರುವಾಗ ಮಸುಕು ಕತ್ತಲಲ್ಲಿ ಈ ದನಿ, ಮತ್ತು ಆ ಹೃದಯ ಬಿಟ್ಟು ಜಗತ್ತಿನಲ್ಲಿ ಬೇರೇನೂ ಇಲ್ಲವೇನೋ ಎಂಬಂತೆ ಕೂತು ಕೇಳಿದ ’ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು, ಒಳಗೊಳಗೆ ಉರಿಯುವವಳು, ಜೀವ ಹಿಂಡಿ ಹಿಪ್ಪೆ ಮಾಡಿ ಒಳಗೊಳಗೆ ಕೊರೆಯುವವಳು, ಸದಾ ಗುಪ್ತ ಗಾಮಿನಿ ನನ್ನ ಶಾಲ್ಮಲೆ’ ಹಾಡಿನಲ್ಲಿ, ಆ ಹಾಡು ನನ್ನ ಮಡಿಲಿಗಿಟ್ಟ ಅನುಭಾವದಲ್ಲಿ, ವಾಕಿಂಗ್ ಹೋಗುವಾಗ ಯಾವುದೋ ಕಳೆದ ರಾಗವನ್ನು ಗುಣುಗುಣಿಸುತ್ತಾ, ಸುತ್ತಲಿನ ಜಗ ಮರೆತು, ವಯಸ್ಸು ಮರೆತು ಒಮ್ಮೆ ಜಿಗಿದು ಕೈಗೆ ಎಟುಕಿಸಿಕೊಂಡ ಆ ಮರದ ಒದ್ದೆ ಎಲೆಗಳ ಸ್ಪರ್ಶದಲ್ಲಿ, ಪಲ್ಲವಿ ನೆನಪಿಗೆ ಬಾರದೆ ಸತಾಯಿಸುತ್ತಿದ್ದ ಹಾಡೊಂದು ರಾತ್ರಿಯ ಜಾವದಲ್ಲೆಲ್ಲೋ ಥಟ್ಟನೆ ಕೈಗೆಟುಕಿದ ಘಳಿಗೆಯಲಿ, ಇಬ್ಬರ ನಡುವೆ ಬೆಳೆದ ಮೌನ ಒಂದು ’ಸಾರಿ’ಗೆ ಕರಗಿದ ಕ್ಷಣದಲ್ಲಿ, ದಾರಿಯಲ್ಲಿ ಹೋಗುವಾಗ ಯಾವುದೋ ಮಗು ಕಾರಣವೇ ಇಲ್ಲದೆ ದಯಪಾಲಿಸುವ ಒಂದು ನಗೆಯಲ್ಲಿ, ಗೆಳತಿಯರೊಡನೆ ಸುಮ್ಮನೆ ಮಾತಾಡುತ್ತಾ ಆಡುತ್ತಾ ತಾನೇ ತಾನಾಗಿ ಕರಗಿ ಆವಿಯಾದ ದುಗುಡದ ಮೂಟೆ ಉಳಿಸಿ ಹೋದ ಮುಗುಳ್ನಗುವಿನಲ್ಲಿ …. ಹೀಗೆ ಒಬ್ಬೊಬ್ಬರದು ಒಂದೊಂದು ಪಟ್ಟಿ.
ಆ ಫಿಲಂ ನೋಡುವಾಗ ನನಗೆ ನೆನಪಾಗಿದ್ದು ನನ್ನ ಕೈಯಲ್ಲಿ ಉಳಿದ ಬಟ್ಟಲು, ಗುಟುಕರಿಸಿದ ಕ್ಷಣಗಳು, ಗುಟುಕರಿಸದೇ ಉಳಿದ ಬದುಕು .. ಓಡುವುದನ್ನು ನಿಲ್ಲಸಿ ನನ್ನ ಪಟ್ಟಿಯಲ್ಲಿ ಉಳಿದದ್ದೇನು ಅಂತ ನೋಡಿಕೊಳ್ಳುತ್ತಿದ್ದೇನೆ. ನೋಡಬೇಕೆಂದು ಕೊಂಡ ಜಾಗ, ಹೇಳಬೇಕೆಂದು ಕೊಂಡು ಹೇಳದ ಒಂದು ಮಾತು, ಕನವರಿಸುವ ಒಂದು ಸ್ಪರ್ಶ, ಕಲಿಯಬೇಕೆಂದುಕೊಂಡ ಚಿತ್ರಕಲೆ, ಓದದ ಪುಸ್ತಕಗಳು, ಕೇಳಬೇಕೆಂದಿರುವ ಹಾಡುಗಳು, ಬಿಗಿ ಮಾಡಿಕೊಳ್ಳಬೇಕಾದ ಸಂಬಂಧಗಳು, ಮನೆಯ ಪುಟಾಣಿಯನ್ನು ಕೂರಿಸಿಕೊಂಡು ಹೇಳಬೇಕಾಗಿರುವ ಕಥೆಗಳು, ಕೇಳಬೇಕೆಂದಿರುವ ತೊದಲುಗಳು, ಹುಣ್ಣಿಮೆಯಂದು ಕೇಳಬೇಕೆಂದಿರುವ ಸಮುದ್ರದ ಮೊರೆತ….
ಯಾಕೋ ಬರೆಯತ್ತಿರುವಾಗ ಲಂಕೇಶ್ ನೆನಪಾದರು :
ಪ್ರೇಮ ಕಾಮಗಳನ್ನು ಧಿಕ್ಕರಿಸುವ
ಹಠ ಮಾಡಬೇಡ;
ಅವೆರಡು ನಿನ್ನತ್ತ ಸುಳಿಯದ
ವರ್ಷಗಳೂ
ಕ್ಯಾಲೆಂಡರಿನಲ್ಲಿ ಕಾಯುತ್ತಿವೆ
– ನೀಲು

‍ಲೇಖಕರು avadhi

June 21, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

24 ಪ್ರತಿಕ್ರಿಯೆಗಳು

  1. D.Ravivarma

    ಆ ಫಿಲಂ ನೋಡುವಾಗ ನನಗೆ ನೆನಪಾಗಿದ್ದು ನನ್ನ ಕೈಯಲ್ಲಿ ಉಳಿದ ಬಟ್ಟಲು, ಗುಟುಕರಿಸಿದ ಕ್ಷಣಗಳು, ಗುಟುಕರಿಸದೇ ಉಳಿದ ಬದುಕು .. ಓಡುವುದನ್ನು ನಿಲ್ಲಸಿ ನನ್ನ ಪಟ್ಟಿಯಲ್ಲಿ ಉಳಿದದ್ದೇನು ಅಂತ ನೋಡಿಕೊಳ್ಳುತ್ತಿದ್ದೇನೆ. ನೋಡಬೇಕೆಂದು ಕೊಂಡ ಜಾಗ, ಹೇಳಬೇಕೆಂದು ಕೊಂಡು ಹೇಳದ ಒಂದು ಮಾತು, ಕನವರಿಸುವ ಒಂದು ಸ್ಪರ್ಶ, ಕಲಿಯಬೇಕೆಂದುಕೊಂಡ ಚಿತ್ರಕಲೆ, ಓದದ ಪುಸ್ತಕಗಳು, ಕೇಳಬೇಕೆಂದಿರುವ ಹಾಡುಗಳು, ಬಿಗಿ ಮಾಡಿಕೊಳ್ಳಬೇಕಾದ ಸಂಬಂಧಗಳು, ಮನೆಯ ಪುಟಾಣಿಯನ್ನು ಕೂರಿಸಿಕೊಂಡು ಹೇಳಬೇಕಾಗಿರುವ ಕಥೆಗಳು, ಕೇಳಬೇಕೆಂದಿರುವ ತೊದಲುಗಳು, ಹುಣ್ಣಿಮೆಯಂದು ಕೇಳಬೇಕೆಂದಿರುವ ಸಮುದ್ರದ ಮೊರೆತ,,..
    ಯಾಕೋ ಬರೆಯತ್ತಿರುವಾಗ ಲಂಕೇಶ್ ನೆನಪಾದರು :
    ಪ್ರೇಮ ಕಾಮಗಳನ್ನು ಧಿಕ್ಕರಿಸುವ
    ಹಠ ಮಾಡಬೇಡ;
    ಅವೆರಡು ನಿನ್ನತ್ತ ಸುಳಿಯದ
    ವರ್ಷಗಳೂ
    ಕ್ಯಾಲೆಂಡರಿನಲ್ಲಿ ಕಾಯುತ್ತಿವೆ
    – ನೀಲು…nimma ii baraha mana muttuvantide aste alla kaaduttide kuda…

    ಪ್ರತಿಕ್ರಿಯೆ
  2. Rj

    Hey!
    This is really good.Ten on Ten!
    ನನಗೆ ವಿಚಿತ್ರ ಖುಶಿ ಕೊಟ್ಟ ಬರಹವಿದು.
    ಅದೇ ಖುಶಿಯಲ್ಲಿ ಧನ್ಯವಾದ ಹೇಳುತ್ತಿದ್ದೇನೆ.
    🙂
    -Rj

    ಪ್ರತಿಕ್ರಿಯೆ
  3. bharathi

    Waah! Ninna baraha odi nanna badukannoo theredu patti maadbeku annisithu …wonderful ..

    ಪ್ರತಿಕ್ರಿಯೆ
  4. G Venkatesha

    Jeevanadalli kanasiddellavannu padeyalu saadyave? Lekhana hrudayasparshi! Dhanyavaadagalu

    ಪ್ರತಿಕ್ರಿಯೆ
  5. Anjali Ramanna

    ಬಿಗಿ ಮಾಡಿಕೊಳ್ಳಬೇಕಾದ ಸಂಬಂಧಗಳು – Nice usage Sandy ! 🙂

    ಪ್ರತಿಕ್ರಿಯೆ
  6. ಮಂಜುಳಾ

    ನೀ ಚಂದಾನೇ ನಿನ್ ಬರಹ ಚಂದಾನೇ.. 🙂 ಎಂದಿನಂತೆ ಮನ ಸೇರೋ ಬರಹ.. ನಾನೂ ಚಿತ್ರ ನೋಡಿ ಬಂದೆ.. ನನಗೂ ಆ ಸಾಲು ಸಕತ್ ಇಷ್ಟ ಆಗಿತ್ತು.. ಧನ್ಯವಾದ ಅದರ ಸುತ್ತಲೊಂದು ಬರಹ ಕಟ್ಟಿ ಕೊಟ್ಟಿದ್ದಕ್ಕೆ 🙂

    ಪ್ರತಿಕ್ರಿಯೆ
  7. Sarala

    ಒಂದು ಕಮರ್ಷಿಯಲ್ ಸಿನಿಮಾ ನೋಡಿ ನಿಮಗೆ ಹೀಗೆ ಅನಿಸುತ್ತೆದೆ ಅಂದರೆ, ನೀವೆಷ್ಟು ಸಂವೇದನಾಶೀಲರು ಅಂತ ಗೊತ್ತಾಗತ್ತೆ. Very well written. I am sure KJ would be very pleased to see such a nice review of his film.

    ಪ್ರತಿಕ್ರಿಯೆ
  8. Raghunandan K

    ಸಿನೆಮಾ ಹೇಗಿದೆಯೋ ಗೊತ್ತಿಲ್ಲ, ನಿಮ್ಮ ಬರಹವಂತೂ ತುಂಬಾನೇ ಇಷ್ಟವಾಯಿತು…

    ಪ್ರತಿಕ್ರಿಯೆ
  9. ಬಸೂ

    ನಡೆದ ದಾರಿಯನ್ನು ಹೊಳ್ಳಿ ನೋಡಲು ಹಚ್ಚುವ ಬರಹ.. ಇಷ್ಟವಾಯಿತೆಂದು ಬೇರೆ ಹೇಳಬೇಕು.. ಲೇಖಕಿಯ ಜತೆಗೆ ಅವಧಿಗೂ ತ್ಯಾಂಕ್ಸ್

    ಪ್ರತಿಕ್ರಿಯೆ
  10. Vinay Bharadwaj

    ಬರಹ ತುಂಬಾ ಮುದ ನೀಡ್ತು ಸಂಧ್ಯಾಕ್ಕ 🙂

    ಪ್ರತಿಕ್ರಿಯೆ
  11. Manoj Hipparagi

    nimma e line galu mast ava ri… ನೋಡಬೇಕೆಂದು ಕೊಂಡ ಜಾಗ, ಹೇಳಬೇಕೆಂದು ಕೊಂಡು ಹೇಳದ ಒಂದು ಮಾತು, ಕನವರಿಸುವ ಒಂದು ಸ್ಪರ್ಶ, ಕಲಿಯಬೇಕೆಂದುಕೊಂಡ ಚಿತ್ರಕಲೆ, ಓದದ ಪುಸ್ತಕಗಳು, ಕೇಳಬೇಕೆಂದಿರುವ ಹಾಡುಗಳು, ಬಿಗಿ ಮಾಡಿಕೊಳ್ಳಬೇಕಾದ ಸಂಬಂಧಗಳು, ಮನೆಯ ಪುಟಾಣಿಯನ್ನು ಕೂರಿಸಿಕೊಂಡು ಹೇಳಬೇಕಾಗಿರುವ ಕಥೆಗಳು, ಕೇಳಬೇಕೆಂದಿರುವ ತೊದಲುಗಳು, ಹುಣ್ಣಿಮೆಯಂದು ಕೇಳಬೇಕೆಂದಿರುವ ಸಮುದ್ರದ ಮೊರೆ

    ಪ್ರತಿಕ್ರಿಯೆ
  12. ಸತೀಶ್ ನಾಯ್ಕ್

    ಜವಾನಿ ಹಾಯ್ ದಿವಾನಿ ಫಿಲಂ ನೋಡಿ ಬಂದ ನನ್ನ ಬಾಸ್ ಹೇಳಿದ್ರು.. ನಿನ್ನಂಥವರು ಖಂಡಿತ ನೋಡಬೇಕಾದ ಸಿನಿಮಾ ಅದು ಅಂತ.. ಅದೆಷ್ಟು ಅಂದ್ಕೊಂಡ್ರು ಬಿಡುವು ಮಾಡ್ಕೊಂಡು ಹೋಗೋಕೆ ಆಗಿಲ್ಲ ಇನ್ನು.. ನಿಮ್ಮೀ ಲೇಖನ ನೋಡಿದ ಮೇಲೆ ಖಂಡಿತ ಅದನ್ನ ನೋಡಿಯೇ ತೀರಬೇಕು ಅನ್ನಿಸ್ತಿದೆ.. ಸಿನಿಮಾದಲ್ಲಿನ ಆಶಯದ ಬಗ್ಗೆ ಒಳ್ಳೆ ಪರಿಚಯಾತ್ಮಕ ಬರಹ.. ಇಷ್ಟ ಆಯ್ತು.. ಆ ಸಿನಿಮಾದ ಆಶಯ ನಮ್ಮೆಲ್ಲರ ಬದುಕಿನದ್ದು ಕೂಡಾ.. ಕಲಿಯೋದು ಸಿನಿಮಾಗಳಿಂದ ಕೂಡಾ ಸಾಧ್ಯ.. ಸಾಧ್ಯವಾದಲೆಲ್ಲ ಕಲಿಯುವ.. 🙂

    ಪ್ರತಿಕ್ರಿಯೆ
  13. rangaswamy mookanahalli

    ಇತ್ತೀಚಿಗೆ ಆವಧಿ ಓದಲು ಶುರು ಮಾಡಿದೆ , ಮೊನ್ನೆಯಷ್ಟೇ ನಿಮ್ಮ ಒಂದು ಲೇಖನ ಓದಿದೆ , ಇಷ್ಟ ಆಯ್ತು ಕಾಮೆಂಟ್ ಹಾಕಿದೆ, FB ಲಿ ಶೇರ್ ಮಾಡ್ಕೊಂಡೆ , ಕುಶಿ ಆಗ್ತಾ ಇತ್ತು ನಮ್ಮ ಕನ್ನಡದಲ್ಲಿ ಎಂತ ವರೆಲ್ಲ ಇದ್ದಾರಲ್ಲ ಅಂತ , ಶೈಲಿ ಇಂದು ಕೂಡ ಚನ್ನಾಗೇಇದೆ , ವಿಷಯ ಅಲ್ಲ , ಹಣ ಮಾಡಲು ಮಾಡಿರುವ ಒಂದು ಯಕ್ಷಿತ್ ಫಿಲಂ ನ ಪದ ಪೋಣಿಕೆ ಯಲ್ಲಿ ಗೆಲ್ಲಿಸಿ ಬಿಡುತ್ತಿರಿ , ದಯಮಾಡಿ ನಿಮ್ಮ ಅಮೂಲ್ಯ ವೇಳೆಯನ್ನು ಉತ್ತಮ ವಿಷಯಗಳಿಗೆ ಮಿಸಲಿಡಿ , ಇದಕ್ಕೆ ಅಂತ ಬೇಕಾದಷ್ಟು ಜನ ಇದಾರೆ . ಧನ್ಯವಾದಗಳು .

    ಪ್ರತಿಕ್ರಿಯೆ
    • ಸಂಧ್ಯಾ ರಾಣಿ

      ನಮಸ್ತೆ ರಂಗಸ್ವಾಮಿ ಅವರೆ. ನಿಮ್ಮ ವಿಶ್ವಾಸಕ್ಕೆ ಧನ್ಯವಾದಗಳು. ಇಲ್ಲಿ ನನ್ನ ಬರಹ ಇರುವುದು ಆ ಚಿತ್ರದ ಮೇಲಲ್ಲ, ಅದನ್ನು ಗೆಲ್ಲಿಸುವುದು ನನ್ನ ಉದ್ದೇಶವೂ ಅಲ್ಲ. ಇಲ್ಲಿ ನಾನು ಬರೆದಿರುವುದು ಆ ಚಿತ್ರದ ಒಂದು ದೃಶ್ಯ ಮತ್ತು ಒಂದು ಸಂಭಾಷಣೆ ನನ್ನಲ್ಲಿ ಮೂಡಿಸಿದ ಸ್ಪಂದನೆಯ ಬಗ್ಗೆ. ಅದನ್ನು ನೋಡಿ ನನ್ನ ಮನದಲ್ಲಿ ನಡೆದ ಸಂವಾದದ ಚಿತ್ರಣ ನನ್ನ ಕಾಲಂ. ಇನ್ನೊಂದು ಮಾತು, ಅದು ಒಂದು ಸಾಧಾರಣ ಚಿತ್ರ, ನಿಜ. ಆದರೆ ’ಹಣ ಮಾಡಲು ಮಾಡಿರುವ ಒಂದು ಯಕಶ್ಚಿತ್ ಚಿತ್ರ’ ಅಂದದ್ದು ಯಾಕೋ ಕಸಿವಿಸಿ. ಜೋಹರ್ ಕುಟುಂಬ ಎರಡು ತಲೆಮಾರಿನಿಂದ ಚಿತ್ರ ನಿರ್ಮಾಣದಲ್ಲಿ ತೊಡಗಿದೆ. ಕೇವಲ ಹಣ ಮಾಡುವುದಷ್ಟೇ ಉದ್ದೇಶ ಅಂತೀರಾ? ಸಿನಿಮಾದ ಬಗ್ಗೆ ಪ್ರೀತಿಯೂ ಇರಬಹುದು ಅಲ್ಲವಾ? ಅವರು ನಮಗಿಂತ ಭಿನ್ನ ಅಂದ ಮಾತ್ರಕ್ಕೆ ಕೆಟ್ಟವರಾಗಿರಬೇಕಿಲ್ಲ ಅಲ್ಲವಾ?
      ನನ್ನ ಲೇಖನ ಓದಿ ಅಭಿಪ್ರಾಯ ತಿಳಿಸಿದ ನಿಮಗೆ ಮತ್ತೊಮ್ಮೆ ವಂದನೆಗಳು. ವಿಶ್ವಾಸ ಹೀಗೆ ಇರಲಿ… 🙂

      ಪ್ರತಿಕ್ರಿಯೆ
  14. Vidyadhar Lonarmath

    ಓದ್ತಾ ಓದ್ತಾ ಕಣ್ಣು ಒದ್ದೆಆಯ್ತು ಮೇಡಂ . ಜೀವನದಲ್ಲಿ ಏನೊ ಕಳಕೊಂಡ ಭವನೆ.. ಹಾಗೇ ಕಳಕೊಂಡಿದ್ದೆಲ್ಲ ತಿರುಗಿ ಪಡೆಯುವ ಹಂಬಲನೂ ಶುರುವಾಯ್ತು

    ಪ್ರತಿಕ್ರಿಯೆ
  15. Amrut

    Very well written… Reminded me of Allama Iqbal’s lines
    “Acha Hai Dil Ke Sath Rahe Paasban-e-Aqal
    Lekin Kabhi Kabhi Isse Tanha Bhi Chor De”

    ಪ್ರತಿಕ್ರಿಯೆ
  16. Shwetha Hosabale

    ಹಾಯ್,
    ನಾನೂ ಸಿನೆಮಾ ನೋಡಿದ್ದೀನಿ…ಆದ್ರೆ ಸಿನೆಮಾಕ್ಕಿಂತ ನೀವು ಬರೆದಿದ್ದೇ ಚೆನ್ನಾಗಿದೆ…ಜೀವನಪ್ರೀತಿಯನ್ನು ಹೆಚ್ಚಿಸೋ ಬರಹ…ಇಷ್ಟ ಆಯ್ತು.

    ಪ್ರತಿಕ್ರಿಯೆ
  17. ದಿನೇಶ್ ಕುಕ್ಕುಜಡ್ಕ

    ಖುಷಿ ಖುಷಿ ಸಾಲು….ಹಿತ ಕೊಡ್ತು.

    ಪ್ರತಿಕ್ರಿಯೆ
  18. umasekhar

    sandhya lekhana vodi bahala khushi ayiti. Manushyaru jeevanadalli shanthiinda sukhavagi nadesali onedu nambike bahala avasyaka allava. lekhana tumba khushi kodthi. sandhya adare D>V>G> avara baligondu nambike vodu.Advice alla adare ninna lekhana nodi Aa pusthaka gnapakakke banthu.

    ಪ್ರತಿಕ್ರಿಯೆ
  19. Srinidhi Rao

    ಸಂಬಂಧಗಳನ್ನು ಪೋಷಿಸಬೇಕು, ಅವಕ್ಕೆ ಸದಾ ನೀರೆರೆಯಬೇಕು, ಸಮಯ ಕೊಡಬೇಕು. ಬದುಕು ಸಹ ಒಂದು ಬ್ಯಾಂಕಿನಂತೆ. ಸಂಬಂಧಗಳಲ್ಲಿ ನಾವು ಎಷ್ಟು ನಮ್ಮನ್ನು ಜಮಾ ಮಾಡುತ್ತೇವೆಯೋ, ಎಷ್ಟು ಕಾಲ ಜಮಾ ಮಾಡುತ್ತೇವೆಯೋ ಅಷ್ಟನ್ನು ಮಾತ್ರ ನಮ್ಮದಾಗಿಸಿಕೊಳ್ಳಲು ಸಾಧ್ಯ. ವಾಹ್ ಏನು ಚಂದ ಬರ್ದಿದ್ದೀರಿ.. !!!

    ಪ್ರತಿಕ್ರಿಯೆ
  20. rangaswamy mookanahalli

    ನಮಸ್ಕಾರ ಮೇಡಂ , ನನ್ನ ಉದ್ದೇಶ ಯಾರನ್ನು ಹೀಯಾಳಿಸುವುದಲ್ಲ , ಬಿನ್ನತೆಯಲ್ಲಿ ಏಕತೆ ಸಣ್ಣವನಿಂದ ಶಾಲೆಯಲ್ಲಿ ಕಲಿಸಿದ್ದಾರೆ , ಹಾಗಾಗಿ ನಮಗಿಂತ ಬಿನ್ನರನ್ನು ತಪ್ಪೆನ್ನುವ /ಒಪ್ಪದೇ ಇರುವ ಮನಸ್ಥಿತಿ ನನ್ನದಲ್ಲ. ನಿಮ್ಮ ಬರಹ ಚನ್ನಾಗಿದೆ, ಇನ್ನೂ ಉತ್ತಮ ವಿಷಯ/subjet ದ ಬಗ್ಗೆ ನೀವು ಬರೆಯಲಿ ಎನ್ನುವ ಸದ್ದುದೇಶ ಅಷ್ಟೇ, ಇಷ್ಟು ಮೀರಿ ನಿಮಗೆ ನಾನು ಬರೆದದ್ದು ತಪ್ಪೆನಿಸಿದ್ದರೆ ಕ್ಷಮೆ ಇರಲಿ.
    ಧನ್ಯವಾದಗಳು .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: