ಸಂಪು ಕಾಲಂ: ಬಿಡಿಸಿದಷ್ಟೂ ಒಗಟಾಗುವ 'ಲೈಫ್ ಆಫ್ ಪೈ'!


ಹೀಗೊಂದು ಶನಿವಾರ ಸಂಜೆ ಕೆಲಸವಿಲ್ಲದೇ ಹುಟ್ಟು ಹಾಕಿಕೊಂಡ ಕೆಲಸ ಒಂದು ಸಿನೆಮಾ ನೋಡಿ ಬರುವುದು. ಹೇಳಿ ಕೇಳಿ ‘ಸಿನೆಮಾ’, ಅದೂ ವಾರಾಂತ್ಯದ ಕ್ಯಾಶುಯಲ್ ಮನೋಭಾವ ನಮ್ಮನ್ನಾವರಿಸಿತ್ತು. ಇಂತಹ ಸಮಯದಲ್ಲಿ ಒಂದಷ್ಟು ಸಮಯ ಕಳೆದು, ಅಲ್ಲಿ ಸಿಗುವ ಪಾಪ್ ಕಾರ್ನ್ ತಿಂದು ಮನೆಗೆ ಬರುವ ಉದ್ದೇಶವಿದ್ದು ಹೊರಟ ನಮಗೆ ಅಲ್ಲೊಂದು ಅಚ್ಚರಿ ಕಾದಿತ್ತು! ಆ ಸಿನೆಮಾ ನಮ್ಮನ್ನು ಒಂದು ವಿಶುಯಲ್ ಟ್ರೀಟ್ ನಲ್ಲಿ ತೇಲಾಡಿಸಿದ್ದಷ್ಟೇ ಅಲ್ಲದೆ ಒಂದು ಯೋಚನಾ ಲಹರಿಯಲ್ಲಿ ಮುಳುಗಿಸಿ ಬಿಟ್ಟಿತ್ತು. ನಾವು ಹೋದದ್ದು ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ತನ್ನ ಬುಟ್ಟಿಯಲ್ಲಿ ಅಲಂಕರಿಸಿಕೊಂಡ ‘ಲೈಫ್ ಆಫ್ ಪೈ’ ಸಿನೆಮಾಗೆ.
ಅದ್ಭುತ ದೃಶ್ಯನಿರ್ವಹಣೆ, ಮನೋಜ್ಞ ಅಭಿನಯ, ಇದು ನಿಜಕ್ಕೂ ಅನಿಮೇಶನ್ ಹೌದೇ ಎಂದು ಗುಮಾನಿಯಾಗುವಷ್ಟು ನಿಖರತೆ, ಹಿತವಾದ ಸಂಗೀತ ಇವೆಲ್ಲಕ್ಕೂ ಮಿಗಿಲಾಗಿ ವಿವಿಧ ಪದರಗಳಲ್ಲಿ ಅನೇಕ ಗೂಢಾರ್ಥಗಳನ್ನು ವಿಸ್ತಾರವಾಗಿ ಹರಡಿಕೊಂಡು ಕೊನೆಗೂ ನಿಗೂಢತೆಯಿಂದಲೇ ನಮ್ಮ ವಿಶ್ಲೇಷಣಾ ಸಾಮರ್ಥ್ಯಕ್ಕೆ ಕಚಗುಳಿಕೊಡುತ್ತಾ ಒಂದು (ಅಥವಾ ಹಲವು) ಸಂದೇಶದ ಮೂಲಕ ಕೊನೆಗೊಳ್ಳುವ ಚಿತ್ರದ ಕಥಾವಸ್ತು, ಎಲ್ಲವೂ ಅಭಿನಂದನಾರ್ಹ. ಬಹುಶಃ ಒಂದು ಸಿನೆಮಾ ನನ್ನನ್ನು ಇಷ್ಟಾಗಿ ಕಾಡಿದ್ದು ಇದೇ ಮೊದಲ ಬಾರಿ!
ಯಾನ್ ಮಾರ್ಟೆಲ್ ಬರೆದಿರುವ ಕಾದಂಬರಿ ‘ಲೈಫ್ ಆಫ್ ಪೈ’ ದೃಶ್ಯ ಮಾಧ್ಯಮದಲ್ಲಿ ಬೆಳಗಿದ್ದು ತೈವಾನ್ ಮೂಲದ ಆಂಗ್ ಲೀ ಎಂಬ ನಿರ್ದೇಶಕನಿಂದ. ಒಂದು ಮಾತಿನಲ್ಲಿ ಹೇಳಬೇಕಾದರೆ, ಈ ಸಿನೆಮಾ ವಿವಿಧ ಹಂತಗಳಲ್ಲಿ, ವಿವಿಧ ವಯೋಮಾನದ, ವಿವಿಧ ಮನೋಭಾವಾಭಿರುಚಿಗಳನ್ನು ಹೊಂದಿರುವ ಎಲ್ಲರಿಗೂ ಮುದನೀಡುತ್ತದೆ. ಸಿನೆಮಾ ಮಂದಿರದಲ್ಲಿ, “ಅಮ್ಮಾ ಆ ಹುಲಿ ಎಲ್ಲಿ ಹೋಯ್ತು” ಎಂದ ಸಿನೆಮಾದಲ್ಲಿ ತಲ್ಲೀನಗೊಂಡ ಪುಟ್ಟ ಮಗುವಿನಿಂದ ಹಿಡಿದು ಕೆಲವು ತುಂಬಾ ಸೂಕ್ಷ್ಮ, ಗಂಭೀರ ಪರಿಸ್ಥಿತಿಯಲ್ಲಿ ಕಣ್ಣೆವೆಯಿಕ್ಕದೆ ಪರದೆಯನ್ನು ಕಾಣುತ್ತಿದ್ದ ಅನೇಕ ಜನರು ಈ ಮಾತಿಗೆ ಸಾಕ್ಷಿಯಾಗಿದ್ದರು.
ಕಥೆಯೊಳಗೊಂದು, ಅದರೊಳಗೊಂದು ಕಥೆ ಇರುವ ಈ ಕಥೆ ಹೀಗಿದೆ (ಬಹಳ ಸಂಕ್ಷಿಪ್ತ):
ಪಿಸೀನ್ ಪಟೇಲ್ (ಪೈ ಎಂದು ಕರೆಸಿಕೊಳ್ಳುವ) ಎಂಬ ಹುಡುಗ, ಕುಟುಂಬ ಸಮೇತ ಸಮುದ್ರಪ್ರಯಾಣ ನಡೆಸುತ್ತಿರುವಾಗ, ಅವರಿರುವ ಜಹಜು ಬಿರುಗಾಳಿಗೆ ಆಹುತಿಯಾಗಿ ಮುಳುಗಿಹೋಗುತ್ತದೆ. ಪೈ ತನ್ನ ಮಂದಿಯನ್ನೆಲ್ಲಾ ಕಳೆದುಕೊಳ್ಳುತ್ತಾನೆ. ಸುಮಾರು ಏಳು ತಿಂಗಳುಗಳ ಕಾಲ ಸಮುದ್ರದ ನಡುವೆ ಸಿಲುಕಿಕೊಂಡು, ತನ್ನ ಜೀವನ ಪ್ರೀತಿಯಿಂದ, ಹರ ಸಾಹಸ ಮಾಡಿ ಕೊನೆಗೂ ಬದುಕುಳಿಯುವ ಪ್ರಸಂಗ ನಡೆಯುತ್ತದೆ. ಈ ಘಟನೆಯನ್ನು ಅನೇಕ ವರ್ಷಗಳ ನಂತರ ಈತ ಒಬ್ಬ ಬರಹಗಾರನಿಗೆ ಸವಿವರವಾಗಿ ತಿಳಿಸುತ್ತಾನೆ. ಇದರ ಮೂಲಕ ಆ ಬರಹಗಾರನಿಗೆ ದೇವರನ್ನು ತೋರಿಸುವ ಉದ್ದೇಶ ಪೈನದು. ಇಲ್ಲಿ ಪೈ ತನ್ನ ಕುಟುಂಬ ಕಳೆದುಕೊಂಡದ್ದು, ಜೀವಕ್ಕಾಗಿ ಹೋರಾಡಿ ಗೆದ್ದು ಬಂದದ್ದು, ಬದುಕುಳಿದು ಈಗ ಸಂಸಾರ ಸಮೇತನಾಗಿ ಸಂತೋಷದಿಂದಿರುವುದು ಎಲ್ಲವೂ ಸತ್ಯ. ಆದರೆ, ಅವನು ಆ ಏಳು ತಿಂಗಳ ಕಾಲ ಪಟ್ಟ ಪಾಡು, ಗೆದ್ದ ಯುದ್ಧ ಇವಕ್ಕೆ ಯಾವ ಪುರಾವೆಯೂ ಇಲ್ಲ. ಅಲ್ಲಿ ಜರುಗಿದ್ದೇನು ಎಂದು ಆತನೊಬ್ಬನಿಗೇ ಗೊತ್ತು. ಆತನು ಎರಡು ಕಥೆಗಳನ್ನು ಹೇಳುತ್ತಾನೆ. ಒಂದು, ಅವನೊಂದಿಗೆ ಕೆಲವು ಪ್ರಾಣಿಗಳು ಲೈಫ್ ಬೋಟ್ ನಲ್ಲಿ ಸಿಲುಕಿ, ಕೊನೆಗೆ ಪೈ ಮತ್ತು ಒಂದು ಹುಲಿ ಎರಡೇ ಕೊನೆವರೆಗೂ ಉಳಿದುಕೊಂಡು ಬದುಕಿಗೆ ಮರಳುತ್ತಾರೆ. ಈ ಕಥೆ ಪ್ರಾಣಿ-ಮನುಷ್ಯರ ಸಂಬಂಧ, ಯಾವುದೋ ಒಂದು ಶಕ್ತಿಯ ನಂಬಿಕೆ, ಜೀವನ ಪ್ರೀತಿ, ಹಗಲು-ಇರುಳಿನ ಸಮುದ್ರ ಪಯಣದ ರೋಚಕತೆ, ಹೀಗೆ ಅನೇಕ ಸಕಾರಾತ್ಮಕ, ಭ್ರಾಮಕ, ಕಲ್ಪನಾತೀತ ಲೋಕವನ್ನು ನಮ್ಮ ಮುಂದೆ ತೆರೆದಿಡುತ್ತದೆ. ಮತ್ತೊಂದು ಕಥೆ, ಮನುಷ್ಯರನ್ನು ಒಳಗೊಂಡಿದ್ದು. ಪೈನೊಂದಿಗೆ ತನ್ನ ತಾಯಿಯೂ ಸೇರಿದಂತೆ ಕೆಲವರು ಲೈಫ್ ಬೊಟ್ ನಲ್ಲಿ ಉಳಿದುಕೊಂಡು, ಒಬ್ಬರನ್ನೊಬ್ಬರು ಕೊಂದು ತಿಂದು, ಕೊನೆಗೂ ಪೈ ನರಭಾಕ್ಷಕನಾಗಿ ಜೀವವುಳಿಸಿಕೊಳ್ಳುತ್ತಾನೆ. ನಮಗೆ ತಿಳಿಯಬಾರದ, ನಾವು ತಿಳಿದುಕೊಳ್ಳಲು ಹೆದರುವ ನಮ್ಮಲ್ಲಿನ ಕೆಲವು ರಾಕ್ಷಸೀ ಪ್ರವೃತ್ತಿಯನ್ನು ಈ ಕಥೆ ಹಿಡಿದಿಡುತ್ತದೆ. ಕಥೆಯ ಸ್ವಾರಸ್ಯ ಇರುವುದು ಆ ಬರಹಗಾರನನ್ನು ಪೈ “ಯಾವ ಕಥೆಯನ್ನು ನೀನು ಆರಿಸಿಕೊಳ್ಳುವೆ?” ಎಂದು ಕೇಳುವ ಕೊನೆಯ ಭಾಗದಲ್ಲಿ. ಆ ಬರಹಗಾರ ಕಥೆ ಕೇಳುಗನಾಗಿ, ನಮ್ಮೆಲ್ಲರನ್ನೂ ಪ್ರತಿನಿಧಿಸುತ್ತಾನೆ ಮತ್ತು ಈ ಪ್ರಶ್ನೆ ನಮಗೆಲ್ಲರಿಗೂ ಅನ್ವಯವಾಗುತ್ತದೆ.

ಹಲವು ವ್ಯಾಖ್ಯಾನಗಳ ಬೆಳಕಿಂಡಿ:
ಮೊದಲನೇದಾಗಿ, ಇದೊಂದು ಅದ್ಭುತ ಕಥಾ ಹಂದರ. ಇಂತಹ ಕಥೆಯನ್ನು ನಮಗೆ ನೀಡಿದ್ದಕ್ಕಾಗಿ ಯಾನ್ ಮಾರ್ಟೆಲ್ ಗೆ ಶಹಬ್ಬಾಸ್ ಗಿರಿ ಸೇರಲೇಬೇಕು. ಅಷ್ಟೇ ಬೆನ್ನು ತಟ್ಟು ಆಂಗ್ ಲೀನ ಪಾಲಿಗೂ. ಕಣ್ಣಿಗೆ ಕಟ್ಟುವಂತ ಸಿನೆಮಾ ಮುಗಿದು ಎಷ್ಟು ಹೊತ್ತಾದರೂ ಅಚ್ಚಳಿಯದಂತೆ ಉಳಿಯುವ ದೃಶ್ಯಗಳು. ಅಲ್ಲಿರುವ ಹುಲಿ, ಹೈನಾ, ಒರಾಂಗುಟಾನ್, ಜೀಬ್ರಾ, ತರಾವರಿ ಮೀನುಗಳು, ದೋಣಿ, ನೀರು, ಬಿರುಗಾಳಿ, ಕತ್ತಲು, ಇಬ್ಬನಿ, ಹಸಿರು ಹೀಗೆ ಹತ್ತು ಹಲವಾರು ಮನಸೂರೆಗೊಳಿಸುವ, ನಮ್ಮನ್ನು ಹಿಡಿದಿಡುವ ನೋಟಗಳು ಎಲ್ಲರನ್ನೂ ಸೆಳೆಯುತ್ತವೆ. ಆದರೆ ಕೆಲವೊಮ್ಮೆ ಇವೆಲ್ಲವೂ ಕೊಂಚ ಅತಿ ಅಥವಾ ಅಸಹಜ ಎನಿಸುವಷ್ಟು ತೀವ್ರವಾಗಿ ಕಾಣುವುದೂ ಹೌದು.
ಮತ್ತೆ ಇಲ್ಲಿ ನಾವು ಗಮನಿಸಬೇಕಾದ್ದು, ಕಥಾ ಹೆಣಿಕೆಯ ಸಾಮರ್ಥ್ಯವನ್ನು ಮತ್ತು ಕಥೆ ಹೇಳುವ ಕಲೆಯನ್ನು. ಕಥೆ ಹೇಳುತ್ತಾ ಹೇಳುತ್ತಾ ಪೈ ಎಷ್ಟು ಸರಾಗವಾಗಿ ನಮ್ಮನ್ನೆಲ್ಲಾ ಸಮುದ್ರಯಾನ ಮಾಡಿಸಿಬಿಡುತ್ತಾನೆ. ನಮ್ಮಲ್ಲಿ ಮೊದಲಿನಿಂದಲೂ ಕಥೆ ಹೇಳುವುದು, ಕೇಳುವುದರಲ್ಲಿ ಇರುವ ಒಂದು ಸುಖ ದೃಶ್ಯ ಮಾಧ್ಯಮದಲ್ಲಿ ಸಿಗಲಾರದು. ಏಕೆಂದರೆ ಕೇಳುವ ಕಥೆಯ ದೃಶ್ಯ ಮೂಲ ನಮ್ಮ ಮನಸ್ಸಿನಲ್ಲಿರುತ್ತದೆ. ಈ ಸಿನೆಮಾದಲ್ಲಿ, ಪೈನಿಂದ ಕಥೆ ಕೇಳುತ್ತಿರುವ ಬರಹಗಾರ ಇದೇ ಸ್ಥಿತಿಯನ್ನು ತಲುಪಿರುತ್ತಾನೆ. ಕಥೆ ಕೇಳುತ್ತಾ ಕೇಳುತ್ತಾ ಸಂಪೂರ್ಣವಾಗಿ ಒಂದು ಹೊಸ ಲೋಕದಲ್ಲಿ ಮುಳುಗಿಹೊಗುತ್ತಾನೆ. ಇದನ್ನು ಆಂಗ್ ಲೀ ಅವರು “ದ ಪವರ್ ಆಫ್ ಸ್ಟೋರಿ ಟೆಲ್ಲಿಂಗ್” ಎಂದು ಗುರುತಿಸುತ್ತಾರೆ.
ಮುಖ್ಯವಾಗಿ ನಾವು ಯೋಚಿಸಬೇಕಾದ್ದು, ನಮಗೆ ಪೈ ಹೇಳುವ ಯಾವ ಕಥೆ ನಿಜ ಅಥವಾ ನಂಬಬಹುದಾದ್ದು ಎನಿಸುತ್ತದೆ ಎಂದು. ರೋಚಕತೆ, ರಂಜಕತೆ ಇದ್ದು ಸಾಕಷ್ಟು ಕಾಲ್ಪನಿಕ ಎನಿಸಿದರೂ ಮೊದಲನೆಯ ಅಂದರೆ ಪ್ರಾಣಿಗಳ ಕಥೆಯೇ ನಮ್ಮ ಮೆಚ್ಚುಗೆಯನ್ನು ಪಡೆಯುತ್ತದೆ. ತಾರ್ಕಿಕವಾಗಿ ಒಪ್ಪಬಹುದಾದ, ನಿಜವಿರಬಹುದೇನೋ ಎನಿಸುವ ಕಥೆ, ಪೈಶಾಚಿಕ, ರಾಕ್ಷಸೀ ತನವನ್ನು ಎತ್ತಿ ತೋರಿಸುವ ಎರಡನೇ ಕಥೆ ನಮ್ಮಿಂದ ಜೀರ್ಣಮಾಡಿಕೊಳ್ಳಲು ಕಷ್ಟವೇ ಸರಿ. ಬದುಕು ತುಂಬ ಒಣ, ಕಠೊರ ಎಂದು ತಿಳಿದಿದ್ದರೂ ಒಂದು ರಮ್ಯತೆಯ, ಸುಖದ ಕನಸು ಕಾಣುತ್ತಾ ಆಶಾವಾದೀ ಹೆಜ್ಜೆ ಹಾಕುತ್ತಿರುತ್ತೇವೆ. ನಮ್ಮಲ್ಲಡಗಿರುವ ಅನೇಕ ಕೃತ್ರಿಮತೆಗಳನ್ನು ತಿಳಿದೂ ಸಹ ನಮ್ಮಿಂದ ಒಪ್ಪಲು ಸಾಧ್ಯವಾಗುವುದಿಲ್ಲ ಎಂಬುದಕ್ಕೆ ಇದೊಂದು ನಿದರ್ಶನ. ಇದರಿಂದ ಎರಡನೇ ಕಥೆ ನಿಜವಾಗಿದ್ದರೂ, ಪೈನನ್ನೂ ಸೇರಿ ಬರಹಗಾರ, ಪತ್ರಕರ್ತ ಎಲ್ಲರೂ ಮೊದಲ ಕಥೆಗೇ ಮೊರೆಹೋಗುತ್ತಾರೆ ಎಂಬುದು ಕಥೆಯನ್ನು ಕಾಣಬಹುದಾದ ಒಂದು ವಿಶ್ಲೇಷಣೆ.
ನಮ್ಮ ನಂಬಿಕೆಗಳ ಒರೆಹಚ್ಚುವಿಕೆ ಮತ್ತೊಂದು ವಿಶ್ಲೇಷಣೆ. ಎರಡು ಕಥೆಗಳಲ್ಲೂ ಪೈ ತಾನು ಬದುಕಿ ಹೋಗುತ್ತೇನೆ ಎಂಬ ಅತೀವ ನಂಬಿಕೆ, “ಸರ್ವೈವಲ್ ಆಫ್ ದಿ ಫಿಟ್ಟೆಸ್ಟ್” ಎಂಬ ಡಾರ್ವಿನ್ನನ ಸಿದ್ಧಾಂತದ ಸುದೀರ್ಘ ಮನನ ಮತ್ತು ಕಾರ್ಯಾಚರಣೆ, ಇವುಗಳಿಂದ ಅವನಿಗೆ ಸಂದ ಜಯ. ಇವು ಪ್ರತಿಬಿಂಬಿಸುವುದು, ನಮ್ಮ ‘ನಂಬಿಕೆ’ ಎನ್ನುವ ಜೀವಾಳವೇ ದೇವರು ಎಂದು. ಅದು ಯಾವುದೇ ರೂಪದಲ್ಲಿರಲಿ, ಅದು ನಮ್ಮ ಶಕ್ತಿಯಾಗಿ, ನಮ್ಮ ಬದುಕು ಸಾಗಿಸುತ್ತಾ ಹೋಗುತ್ತದೆ. ಬರಹಗಾರ ಪ್ರಾಣಿಗಳ ಕಥೆಯನ್ನು ತಾನು ಮೆಚ್ಚುವುದಾಗಿ ತಿಳಿಸಿದಾಗ, ಪೈ “ದಟ್ಸ್ ಹೌ ಇಟ್ ಗೋಸ್ ವಿತ್ ಗಾಡ್” ಎನ್ನುತ್ತಾನೆ. ಅಂದರೆ, ಇಲ್ಲಿ ಪೈ ತಾನು ದೇವರನ್ನು ನಂಬಿದ್ದಕ್ಕೆ ತಾನು ಬದುಕುಳಿದೆ ಎಂದು ಹೇಳುತ್ತಿರಬಹುದು ಅಥವಾ ಅದಕ್ಕಿಂತ ಹೆಚ್ಚಾಗಿ, ಬರಹಗಾರ ತನ್ನ ನಂಬಿಕೆಯಿಂದ ಒಂದು ಕಥೆಯನ್ನು ಆಯ್ಕೆ ಮಾಡಿದ್ದಕ್ಕಾಗಿ ಇರಬಹುದು. ಒಟ್ಟಿನಲ್ಲಿ ಯಾವುದೇ ವಿಚಾರದ ಬಗೆಗಿನ ಅಗಾಧ ನಂಬಿಕೆ ಎಂದೂ ದೇವರ ಮೂಲ. ಒಬ್ಬ ವ್ಯಕ್ತಿಗೆ ತನ್ನ ಬಗ್ಗೆ ತನಗೆ ಅತೀವ ನಂಬಿಕೆ ಇರಬಹುದು, ಅಥವಾ ತನ್ನ ಧರ್ಮದ ಬಗ್ಗೆ ನಂಬಿಕೆ ಇರಬಹುದು, ದೇವರ ಬಗ್ಗೆ ಅಥವಾ ಒಂದು ಕಲ್ಲಿನ ಬಗ್ಗೆ ನಂಬಿಕೆ ಇರಬಹುದು. ಆ ನಂಬಿಕೆ ಆತನನ್ನು, ಆತನ ಪ್ರಯತ್ನಗಳನ್ನು ಬಲಗೊಳಿಸುತ್ತವೆ. ತನ್ನ ಎಲ್ಲಾ ಪ್ರಯತ್ನಗಳಿಗೆ ತನ್ನ ಪ್ರಬಲ ನಂಬಿಕೆ ಒಂದು ಆಸರೆಯಾಗಿ, ಜೊತೆಗಾರನಾಗಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂಬ ಸಂದೇಶ ಸಹ ಇದರಲ್ಲಿ ಅಡಗಿರಬಹುದು.
ಅಥವಾ ಮನುಷ್ಯ ತನ್ನಲ್ಲಿ ತಾನು ದೇವರನ್ನು ಕಂಡರೆ, ಏನಾದರೂ ಸಾಧಿಸಬಹುದು. ತನ್ನ ಸಾಮರ್ಥ್ಯಗಳ ಬಗ್ಗೆ ತನಗೆ ಅರಿವು ಮೂಡಿದರೆ, ಅದು ಬ್ರಹ್ಮಾಂಡವನ್ನು ಗೆಲ್ಲುವ ಸಾಧನೆಗೆ ಸಮ. ಇದಕ್ಕೆ ಪೈನ ಪ್ರಯತ್ನ ಮತ್ತು ಗೆಲುವುಗಳೇ ಸಾಕ್ಷಿ ಎಂದು ತೋರಿಸುತ್ತಾ “ಅಹಂ ಬ್ರಹ್ಮಾಸ್ಮಿ” ಎಂಬ ಅದ್ವೈತ ತತ್ವದ ಪ್ರತಿಪಾದನೆಯ ಪ್ರಯತ್ನವೂ ಆಗಿರಬಹುದು.
ಚಿತ್ರದಲ್ಲಿ ಯಾವುದೇ ನಿರ್ದಿಷ್ಟ ಕೊನೆಯನ್ನು ಅರ್ಥಿಸದೆ, ಅದನ್ನು ವೀಕ್ಷಕರಿಗೆ ಬಿಟ್ಟು, ಅವರು ತಮ್ಮ ಆಂತರಿಕ ಒಳನೋಟಕ್ಕೆ ಒಳಗಾಗಲು ಕಾರವಾಗುವ ಈ ಸಿನೆಮಾ ಒಂದು ಸಾಧಾರಣ ಸುಖವಾದ ರೋಚಕತೆಯಿಂದ ಒಂದು ಅಭೂತಪೂರ್ವ ಆಧ್ಯಾತ್ಮ ತತ್ವಗಳ ಸೂಕ್ಷ್ಮ ಪರಿಚಯ ಮಾಡಿಸುವುದು ಖಂಡಿತ. ಇಷ್ಟೆಲ್ಲಾ ಹೇಳಿದ ಮೇಲೂ, ಇನ್ನೂ ಸಾಕಷ್ಟು ಹೇಳಿಲ್ಲವೇ? ನನಗೆ ಹೊಳೆದಿಲ್ಲವೇ? ಎಂಬಂತಹ, ಬಿಡಿಸಿದಷ್ಟೂ ಒಗಟಾಗುವ ಈ ಸಿನೆಮಾದ ಬಗ್ಗೆ ನೀವೇನಂತೀರಿ?!

‍ಲೇಖಕರು avadhi

June 21, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. roopa

    Naanu idara bagge baredu, nanna computer nalle ittiddene 🙂 summary of my write up ishte. Entire movie naavu makkalige koduva pre image anisibiduthe. Konegu amma kotta pre image (abt god) gellutte. Kathe kooda namage ondu preimage kodtha hoguthe. Eegagale drushyagalalli kathe nodiruva naavu, nanthara aatha baayalli heluva katheyannu nambolla. Drushya madhyama hege baayi mathina katheyannu, namma kalpana shakthiyannu kithukondide anisibittittu.

    ಪ್ರತಿಕ್ರಿಯೆ
  2. bharathi

    Eeeeeega adanne nodtha idini sampu … ardha nodidini …poorthi mugso aase bandu bidthu ninna baraha odi …chenda bardidiya

    ಪ್ರತಿಕ್ರಿಯೆ
  3. ಉಷಾಕಟ್ಟೆಮನೆ

    ಸಂಯುಕ್ತಾ,
    ನಾನು ಈ ಸಿನೇಮಾವನ್ನು ನೋಡಿದಾಗ ನನ್ನಲ್ಲೂ ಮೂಡಿದ ಪ್ರಶ್ನೆ; ಯಾವ ಕಥೆಯನ್ನು ನಂಬುವುದು ಎಂಬುದೇ ಆಗಿತ್ತು. ನಿಜ ಸಿನೇಮಾ ಮುಗಿದ ಮೇಲೂ ನಮ್ಮ ಮನಸ್ಸಿನಲ್ಲಿ ಬೆಳೆಯುತ್ತಾ ಹೋದ ಸಿನಿಮಾವಿದು. ಇದಕ್ಕೆ ಹಲವು ಆಯಾಮಗಳಿವೆ.ಆಧ್ಯಾತ್ಮದ ಲೇಪನವಿದೆ. ನನಗೆ ಈ ಸಿನೇಮಾ ತುಂಬಾ ಇಷ್ಟವಾಗಿತ್ತು. ಜನವರಿ ಒಂದರಂದು ಈ ಸಿನೇಮಾವನ್ನು ನೋಡಿ ನನ್ನ ಹೊಸವರ್ಷವನ್ನು ಆರಂಬಿಸಿದ್ದೆ. ಹಾಗಾಗಿ ಆ ಸಿನೇಮಾ ಹಸಿರಾಗಿದೆ. ಇಂದು ಕೂಡಾ ನನ್ನ ಪಾಲಿಗೆ ಬಲು ವಿಶಿಷ್ಟ ದಿನ! ಹಾಗಾಗಿ ನಿಮ್ಮ ಬರಹವೂ ನೆನಪಲ್ಲಿ ಉಳಿಯುತ್ತೆ.
    ಥ್ಯಾಂಕ್ಯು ಸಂಯುಕ್ತಾ.

    ಪ್ರತಿಕ್ರಿಯೆ
  4. Sarala

    naanu cinema nodideeni. halavaaru satyagalu galu vyakta matte kelavu avyakta anistu.Good review Samyutka.

    ಪ್ರತಿಕ್ರಿಯೆ
  5. ಸತೀಶ್ ನಾಯ್ಕ್

    ಫಿಲಂ ಮುಗುಸ್ಕೊಂಡು ಥಿಯೇಟರ್ ನಿಂದ ಹೊರಗೆ ಬಂದ್ವೇ ಹೊರತು ಆ ಒಂದಿಡೀ ವಾರ ಆ ಫಿಲಂನ ಗುಂಗಿನಿಂದ ಹೊರಗೆ ಬರೋಕೆ ಆಗ್ಲಿಲ್ಲ. ಸುರಜ್ ಶರ್ಮ.. ಇರ್ಫಾನ್ ಖಾನ್.. ತಬು ಇವರೆಲ್ಲರೂ ಮನಸ್ಸಿನಲ್ಲಿ ಹಾಗೆ ಉಳ್ಕೊಂಡು ಬಿಟ್ಟಿದ್ರು ಅದರಲ್ಲೂ ರಿಚರ್ಡ್ ಪಾರ್ಕೆರ್ ನ ಇನ್ನೂ ಮರೆಯೋಕೆ ಆಗ್ತಿಲ್ಲ. ಮನುಷ್ಯರು ಮನುಷ್ಯರನ್ನೇ ಹೊಂದ್ಕೊಂಡು ಬದುಕೋಕಾಗದ ಈ ಕಾಲದಲ್ಲಿ ಏಳು ತಿಂಗಳು ಅಂಥಾ ಒಂದು ಕ್ರೂರ ಮೃಗದ ಜೊತೆ ಬದುಕಿ ಅದನ್ನ ಪ್ರಾಣ ಸ್ನೇಹಿತನಿಗಿಂತ ಪ್ರೀತಿಸೋದು ಅಂದ್ರೆ ಸುಳ್ಳಲ್ಲ. ನೀವು ಹೇಳೋ ಹಾಗೆ ಒಂದು ಅದಮ್ಯ ನಂಬಿಕೆ ಬೇಕು. ನಂಬಿಕೆಯ ಜೀವಾಳವೇ ದೇವರು. ತನ್ನ ಹೆಸರು ಹಿಡಿದು ಛೇಡಿಸುವ ಗೆಳೆಯರಿಗೆಲ್ಲ ಪೈ ಬೆಲೆಯನ್ನ ಅಷ್ಟು ವಿಸ್ತಾರವಾಗಿ, ಅಷ್ಟು ನಿಖರವಾಗಿ ತಿಳಿಸುತ್ತಾ ಹೋಗುವ ಆ ಹುಡುಗ ಎಲ್ಲೋ ಆತ್ಮವಿಶ್ವಾಸದ ಖನಿ ಅನಿಸೋದು ಸುಳ್ಳಲ್ಲ. ಎಷ್ಟು ಜನರಿಗಿದ್ದೀತು ಹೀಗೆ ಛೇಡಿಸುವ ಜಗದೊಳಗೆ ಹಾಗೆ ಜಾವಾಬು ಕೊಟ್ಟು ಬದುಕೋ ವಿಶ್ವಾಸ..?? ಚಿತ್ರದಲ್ಲಿ ಬಹಳ ಅಂಶಗಳಿವೆ ನಮ್ಮ ಬದುಕೊಳಗೆ ಅಳವಡಿಸಿ ಬದುಕು ಕಂಡು ಕೊಳ್ಳ ಬೇಕಿರುವಂಥವು..
    ಒಳ್ಳೆಯ ಲೇಖನ ಮೇಡಂ.. ಓದ್ತಾ ಓದ್ತಾ ಇಡೀ ಚಿತ್ರ ಹಾಗೆ ಒಮ್ಮೆ ಕಣ್ಮುಂದೆ ಹಾದು ಹೋಯ್ತು. ಮತ್ತೊಮ್ಮೆ ನೋಡ್ಬೇಕು ಅನ್ನೋ ಆಸೆ ಆಯ್ತು.

    ಪ್ರತಿಕ್ರಿಯೆ
  6. Vasuki

    ನನಗೆ ಈ ಚಿತ್ರ ಅಷ್ಟಾಗಿ ಹಿಡಿಸಲಿಲ್ಲ. ‘ವಿಶುವಲೀ’ ಚಿತ್ರ ಅದ್ಭುತ, ಆದರೆ ದೃಶ್ಯವೈಭವವೇ ಮುಖ್ಯ ಆನೋದಾದರೆ ನಾವು ನ್ಯಾಶನಲ್ ಜಿಯೊಗ್ರ್ಯಾಫಿಕ್ ಅನ್ನು ನೋಡಬಹುದು ಅಲ್ವೇ? 🙂
    ಈ ‘ಕಥೆ’ ಏನಿದೆ ಅದು ನನಗೆ ತುಂಬಾ ‘ಪ್ರಿಟೆನ್ಶಿಯಸ್’ ಅನಿಸಿತು. ಇದರ ಉದ್ದೇಶ ಪಾಶ್ಚಾತ್ಯರಿಗೆ ‘ಭಾರತೀಯ ಆಧ್ಯಾತ್ಮಿಕತೆ’ ಪರಿಚಯಿಸುವುದು ಅಷ್ಟೇನಾ ಅನ್ನೋ ಅನುಮಾನ ಇದೆ! ಕೇವಲ ಅಷ್ಟೇ ಅಂತ ಪರಿಗಣಿಸಿದರೂ, ಈ ಚಿತ್ರ ಎಲ್ಲೋ ‘ಸೂಪರ್‌ಫೀಶಿಯಲ್’ ಅನಿಸಿಬಿಡುತ್ತೆ. ಕಾರಣಗಳು ಹೀಗಿವೆ.
    ಸೂರಜ್ ಅವನ ಮನೆಯವರು ಡಿನ್ನರ್ ಟೇಬಲ್ ಅಲ್ಲಿ ಕೂತಾಗಲೆಲ್ಲಾ ಬರೀ ‘ಆಧ್ಯಾತ್ಮಿಕತೆ’ಯ ಬಗ್ಗೆಯೇ ಮಾತುಕತೆ, ಇದು ಬಾಲಿಶ ಅನಿಸಿತು! ಭಾರತೀಯರು ಬೇರೆ ವಿಷಯಗಳನ್ನೂ ಮಾತಾಡುತ್ತಾರೆ!
    ಮೊದಲ ಕಥೆಯಲ್ಲಿ, ತನ್ನ ಕುಟುಂಬದವರನ್ನೆಲ್ಲಾ ಕಳೆದುಕೊಂಡವನ ಮನಸ್ಥಿತಿಯ ಸಂಕೀರ್ಣತೆಯನ್ನ ತೋರಿಸುವಲ್ಲಿ ವಿಫಲರಾಗಿದ್ದಾರೆ. ಒಂಟಿತನ, ಪಾರಾಗಲಾರೆನೋ ಎಂಬ ಭಯ, ಅನಾಥಪ್ರಜ್ಞೆ, ಉಳಿವಿಗಾಗಿ ಹೋರಾಟ – ಅದೆಷ್ಟು ಒಳ್ಳೆಯ ‘ಡ್ರಾಮ’ ಆಗಬಹುದಿತ್ತು. ಆದರೆ ಹುಲಿಯ ಜೊತೆ ಹರಟೆ ಹೊಡೆಯುತ್ತಾ ಕೂರುವ ಸೂರಜ್, ನಾಯಿ ಆನೆಯ ಜೊತೆ ‘ಕ್ಯೂಟ್’ ಅನಿಸಿಕೊಳ್ಳೋದಕ್ಕೆ ಮಾತಾಡುತ್ತಿದ್ದ ಬೇಬೀ ಶ್ಯಾಮಿಲಿಯ ಇಂಪ್ರೂವ್ಡ್ ವರ್ಷನ್ ಅಂತೆ ಕಂಡ! ಆಮೇಲೆ ಹುಲಿಯನ್ನು ಪ್ರತಿಬಾರಿ ‘ರಿಚರ್ಡ್ ಪಾರ್ಕರ್’ ಅಂತ ಪೂರ್ಣ ಹೆಸರಿನಿಂದ ಸಂಬೋಧಿಸುವುದು ಸಿಲ್ಲೀ ಅನಿಸಿತು (‘ಮುಕ್ತ ಮುಕ್ತ’ ಅಲ್ಲಿ ಪ್ರತಿಸಲ ಮನೆಯವರೂ ಕೂಡ ‘ಸುಶೀಲ್ ಕುಮಾರ್ ಭಿಂಗ’ ಅಂತ ಸಂಪೂರ್ಣ ನಾಮ ಸ್ಮರಣೆ ಮಾಡ್ತಿದ್ರಲ್ಲಾ ಹಂಗೆ!)
    ಜೀವನ ಬಗ್ಗೆ ಧೇನಿಸಲು, ಮನುಷ್ಯನ ಅಸ್ತಿತ್ವದ ಬಗ್ಗೆ ಯೋಚಿಸಲು, ನಗುತ್ತಲೇ ಮನಸ್ಸು ಭಾರವಾಗಲು ಜೇಮ್ಸ್ ಸ್ಟೂವರ್ಟ್ ನ “ಇಟ್ಸ್ ಆ ವಂಡರ್‌ಫುಲ್ ಲೈಫ್” ಇನ್ನೂ ಪರಿಣಾಮಕಾರಿಯಾಗಿದೆ, ಯಾವುದೇ 3ಡಿ ಸಹಾಯವಿಲ್ಲದೆ!

    ಪ್ರತಿಕ್ರಿಯೆ
    • samyuktha

      ವಾಸುಕಿ ಅವರೇ, ನೀವು ಹೇಳಿದ ಕೆಲ ವಿಷಯಗಳನ್ನು ನಾನು ಒಪ್ಪುತ್ತೇನೆ. ಇಟ್ಸ್ ಆ ವಂಡರ್‌ಫುಲ್ ಲೈಫ್ ನಾನೂ ನೋಡಿದ್ದೇನೆ. ಇಟ್ ಇಸ್ ವಂಡರ್ ಫುಲ್. ಆದರೆ ಆ ಸಿನೆಮಾವನ್ನು ನೋಡುವ ದೃಷ್ಟಿ ಬೇರೆ, ಈ ಸಿನೆಮಾ ಬಗೆಯನ್ನು ಭೇದಿಸುವ ರೀತಿ ಬೇರೆ ಎಂದು ನನಗೆ ಅನ್ನಿಸಿದ್ದು. ನೀವು ಹೇಳಿದ ಪೈ ಕುಟುಂಬ ನೀರಲ್ಲಿ ಮುಳುಗಿ ಹೋದಾಗ ರಿಯಾಕ್ಟ್ ಮಾಡುವ ವಿಚಾರ ನನಗೂ ಅನ್ನಿಸಿತು. ಅದನ್ನು ಇನ್ನೂ ಕೊಂಚ ‘ಡ್ರಾಮಾ’ ಮಾಡಬಹುದಿತ್ತು.
      ಸಿನೆಮಾದಲ್ಲಿ ಎಲ್ಲೋ ನನಗೆ ಭಾರತೀಯರೆಂದರೆ ಅಧ್ಯಾತ್ಮ ಮಾತನಾಡುವವರು ಎಂದು ಪ್ರಾಜೆಕ್ಟ್ ಮಾಡಿದ್ದಾರೆ ಅನಿಸಲಿಲ್ಲ. ಇಲ್ಲಿ ನಾವು ಭಾರತೀಯರು ಅಂತ ಗೆನೆರಲೈಸ್ ಮಾಡಕ್ಕಿಂತ ಪೈ ಎಂಬ ಹುಡುಗ ಮತ್ತು ಅವನು ಪ್ರತಿನಿಧಿಸುತ್ತಿರುವ ಪ್ರತಿ ವ್ಯಕ್ತಿ ಎಂದು ಕನ್ಸಿಡರ್ ಮಾಡಬೇಕು ಎಂದು ನನ್ನ ಅನಿಸಿಕೆ. ಆಮೇಲೆ, ರಿಚರ್ಡ್ ಪಾರ್ಕರ್ ಅಂತ ಕರೆಯೋದರಲ್ಲಿ ನನಗೇನೂ ಸಿಲ್ಲಿ ಅನಿಸಲಿಲ್ಲ. ನಿಮ್ಮ ಪ್ರಕಾರ ಆ ಹುಲಿಯನ್ನು “ರಿಚ್ಚಿ” “ಟೈಗರ್” “ರಿಚ್” ಎಂದೆಲ್ಲಾ ಕರೆಯಬೇಕಿತ್ತೆ? ನಿಮಗೆ ಇದು ಸಿಲ್ಲಿ ಅನ್ನಿಸಿದ್ದು ಯಾಕೆ ಅಂತ ಗೊತ್ತಾಗಲಿಲ್ಲ. ಹೀಗೆ ಸಣ್ಣ ಸಣ್ಣ ವಿಚಾರ ಹುಡುಕುತ್ತಾ ಹೋದರೆ ಅನೇಕ ಸಿಗುತ್ತವೆ. ಇನ್ನೂ ಕೆಲವು ರಿವ್ಯೂ ನೋಡಿದೆ ಅದರ ಅಬ್ಜರ್ವೇಶನ್ ನೋಡಿ, ಪೈ ಪಟೇಲ್ ಗೆ ಕಂಕುಳಲ್ಲಿ ಸಾಕಷ್ಟು ಕೂದಲು ಕಾಣಿಸುತ್ತದೆ. ಹಾಗಾಗಿ ಅವನು ದೊಡ್ಡ ಹುಡುಗನೇ ಹೌದು, ಆದರೆ ಸಿನೆಮಾ ಉದ್ದಕ್ಕೂ (ಅಂದರೆ ಏಳು ತಿಂಗಳ ಕಾಲ) ಅವನ ಗಡ್ಡ ಬೆಳೆಯುವುದಿಲ್ಲವೇ ಎಂದು ಪ್ರಶ್ನೆ!! ಇವೆಲ್ಲ ನಗಣ್ಯ ಎಂದು ನನ್ನ ಅನಿಸಿಕೆ. ಓದಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್. 🙂

      ಪ್ರತಿಕ್ರಿಯೆ
  7. Vasuki

    ಪ್ರತಿಫಲನದಲ್ಲಿ ಕ್ಯಾಮರ ಕಾಣಿಸುತ್ತೆ, ಸೀನ್ ಶುರುವಿನಲ್ಲಿ ಕೊನೆಯಲ್ಲಿ ಇರುವ ಶೂಸ್ ಬೇರೆಬೇರೆ ಇದೆ – ಈ ರೀತಿಯ ಟ್ರಿವಿಯಲ್ ‘ಗೂಫ್ಸ್’ ಬಗ್ಗೆ ನಾನು ಹೇಳುತ್ತಿಲ್ಲ ಎಂದು ನಿಮಗೆ ಗೊತ್ತಿದೆ. ನನ್ನ ತಕರಾರು ಇರುವುದು ‘ಪಾತ್ರ’ದ ಬಗ್ಗೆ (ಇನ್ನು ಹತ್ತು ವರ್ಷ ಆದಮೇಲೆ ಈ ಪ್ರಶ್ನೆ ಕೇಳೋಣ – ‘ನಿಮಗೆ ತುಂಬಾ ಇಷ್ಟವಾದ ಸಿನಿಮಾ ಪಾತ್ರ ಯಾವುದು?’ ಅಂತ. ‘ಪೈ’ ಪಾತ್ರದ ಬಗ್ಗೆ ಹೆಚ್ಚು ಜನ ಹೇಳುವುದಿಲ್ಲ ಅಂತ ನನ್ನ ಅಭಿಪ್ರಾಯ!) ಈ ಅಡ್ವೆಂಚರ್ ಕಥೆಯಲ್ಲಿ ಮುಖ್ಯ ಪಾತ್ರ ಬಹಳ ಯೂನೀ-ಡೈಮೆನ್ಶನಲ್ ಅನಿಸಿತು. ಇದೇ ನನಗೆ ಸಿನಿಮಾ ಜೊತೆಗಿನ ಡಿಸ್‌ಕನೆಕ್ಟ್ ಗೆ ಕಾರಣ ಆನ್ಕೋತೀನಿ. ಸಿನಿಮಾ ಬಹಳ ಪರ್ಸನಲ್ ಆದ ಅನುಭವ, ಯಾರಿಗೆ ಯಾಕೆ ಇಷ್ಟ ಆಗುತ್ತೆ ಇಲ್ಲ ಅಂತ ಹೇಳೋದು ಕಷ್ಟ…ಅವರವರ ಭಾವಕ್ಕೆ ತಕ್ಕಂತೆ… 🙂

    ಪ್ರತಿಕ್ರಿಯೆ
  8. Pramod

    ವಾಸುಕಿ ಹೇಳಿದ್ದನ್ನು ನಾನು ಪೂರ್ತಿ ಒಪ್ಪುತ್ತೇನೆ. ಪ್ರಿಟೆನ್ಶಿಯಸ್. ಭಾರತೀಯ ಅಧ್ಯಾತ್ಮಿಕತೆಯ ಸಣ್ಣ ಡೋಸ್ ಅಷ್ಟೇ. ಸಿನೆಮಾಟೋಗ್ರಾಫಿ ಚೆನ್ನಾಗಿದೆ. ಹೆಚ್ಚಿನ ನಟನೆ ಇದರಲ್ಲೇ ಕವರ್ ಅಪ್ ಆಗಿದೆ. ಕಾದ೦ಬರಿಯನ್ನು ಉತ್ತಮವಾಗಿಯೇ ರೂಪಾ೦ತರಗೊಳಿಸಿದ್ದಾರೆ. ಆದರೆ ದೃಶ್ಯಗಳ ನಡುವೆ ಕಥೆಯ ಸ೦ಕೀರ್ಣತೆಯ ಸ್ವಲ್ಪ ಜಾಸ್ತಿಯೇ ಸರಲೀಕರಣವಾಗಿದೆ, ಎಲ್ಲರನ್ನೂ ಕಳಕೊ೦ಡ ಭಾರ ಕಮ್ಮಿಯಾಗಿ ತೋರಿಸಲಾಗಿದೆ. ಕ್ಲೈಮಾಕ್ಸ್ ನಲ್ಲಿ ಒ೦ದು ಪ೦ಚ್ ಇದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: