ಅವರು ಲಂಕೇಶ್, ಅವರು ಹುಳಿಮಾವು..

sandhyarani3

ಎನ್  ಸಂಧ್ಯಾರಾಣಿ 

ಇಂದು ಲಂಕೇಶ್ ಅವರ ಹುಟ್ಟಿದ ಹಬ್ಬ ಮತ್ತು ಮಹಿಳಾ ದಿನಾಚರಣೆಯೂ ಹೌದು.

ನಮಗೆಲ್ಲಾ ’ಮೇಷ್ಟ್ರಾಗಿದ್ದ’ ಲಂಕೇಶ್, ಅವರ ಪತ್ನಿಯ ಕಣ್ಣಲ್ಲಿ, ಲೇಖನಿಯಲ್ಲಿ ಹೇಗೆ ಮೂಡಿ ಬಂದಿದ್ದಾರೆ?

***

 

ಅವರನ್ನು ಪ್ರೀತಿಸುತ್ತಲೇ ಇರುವುದು ಎಷ್ಟು ಕಷ್ಟ…

lankesh and indira’ಹೇಯ್ ಇಲ್ಲಿ ಕೇಳು’, ಫೋನ್ ಮಾಡಿದ್ದ ಗೆಳತಿ, ಅವಳು ಓದುತ್ತಿದ್ದ ಪುಸ್ತಕಗಳ ಸಾಲುಗಳನ್ನು ನನಗಾಗಿ ಓದುತ್ತಿದ್ದಳು.

“ನೀಲು ಕವನಗಳಂತೂ ಹೆಣ್ಣಿನ ಮನಸ್ಸು ಏನೆಲ್ಲಾ ಯೋಚಿಸುತ್ತದೆ, ಅನುಭವಿಸುತ್ತದೆ ಎಂಬುದನ್ನು ಸ್ಪಷ್ಟವಾಗಿ ಬಿಂಬಿಸುತ್ತಿದ್ದವು. ಮಹಿಳೆಯರ ಮನಸ್ಸನ್ನು ಇಷ್ಟು ಚೆನ್ನಾಗಿ ತಿಳಿದಿದ್ದ ಲಂಕೇಶರು ನನ್ನ ಮನಸ್ಸನ್ನು ಯಾಕೆ ಅರ್ಥ ಮಾಡಿಕೊಳ್ಳಲಿಲ್ಲ ಎಂದು ನನಗೆ ಅನಿಸುತ್ತಿತ್ತು..”

– ಫೋನ್ ಆಚೆಯಿದ್ದ ಅವಳು ತಣ್ಣನೆಯ ದನಿಯಲ್ಲಿ ಈ ಸಾಲನ್ನು ಹೇಳುತ್ತಾ ಹೋದಳು. ಅವಳ ಕೈಯಲ್ಲಿದ್ದ ಪುಸ್ತಕ ಇಂದಿರಾ ಲಂಕೇಶರ ’ಹುಳಿ ಮಾವು ಮತ್ತು ನಾನು’. ಆ ಇಡೀ ದಿನ ಅವಳು ಆಗಾಗ ಫೋನ್ ಮಾಡಿ ಪುಸ್ತಕದ ಸಾಲುಗಳನ್ನು, ಅವಳನ್ನು ಕಾಡಿದ ಸಾಲುಗಳನ್ನು ಹೇಳುತ್ತಾ ಹೋದಳು. ನನ್ನ ಮುಂದೆ ಒಂದು ದೃಶ್ಯದ ತುಣುಕುಗಳು ಪೇರಿಸಲ್ಪಡುತ್ತಾ ಹೋದವು. ಎಲ್ಲ ಅರಿತಂತೆ ಅನ್ನಿಸುತ್ತಿದೆ ಆದರೆ ಯಾಕೋ ಏನೂ ಸ್ಪಷ್ಟವಾಗುತ್ತಿಲ್ಲ. ನಾನು ಹೊರಗೆಲ್ಲೂ ಹೋಗಿಲ್ಲವಾದ್ದರಿಂದ ಪುಸ್ತಕ ಇನ್ನೂ ತಂದಿರಲಿಲ್ಲ, ಮರು ದಿನ ಗೆಳತಿ ಆ ಪುಸ್ತಕ ನನ್ನ ಕೈಯಲ್ಲಿಟ್ಟಳು.

ಆಗಾಗಲೇ ಅವಳ ಮೂಲಕ ಪುಸ್ತಕದ ಬಗೆಗಿನ ಅವಳ ಪ್ರೊಮೋ ಗಳನ್ನು ಅರಿತುಕೊಂಡಿದ್ದ ನಾನು, ಆಗಲೇ ಒಂದು ಕನ್ನಡಕ ಧರಿಸಿ ರೆಡಿಯಾಗಿ ಕುಳಿತಿದ್ದೆ. ನನ್ನ ಪ್ರೀತಿಯ ಲಂಕೇಶ್ ಬಗ್ಗೆ ಅವರ ಅತ್ಯಂತ ಹತ್ತಿರದ ವ್ಯಕ್ತಿ ಏನು ಬರೆದಿರಬಹುದು ಎನ್ನುವ ಕುತೂಹಲ ಇದ್ದರೂ, ಈಗಾಗಲೇ ಕೇಳಿದ್ದ ವಾಕ್ಯಗಳಿಂದ ಯಾಕೋ ಮನಸ್ಸಲ್ಲಿ ತುಸು ಕಸಿವಿಸಿ ಸಹ ..

ಲಂಕೇಶ್ ಕಣ್ಣಲ್ಲಿ ಅವರು ’ಹುಳಿ ಮಾವಿನ ಮರ’, ಆದರೆ ಇಂದಿರಾ ಕಣ್ಣಲ್ಲಿ ಅವರು ’ಹುಳಿ ಮಾವು’.. ನಾನೂ ಇದೇ ಮನೋಸ್ಥಿತಿಯಲ್ಲಿ ಪುಸ್ತಕ ಕೈಗೆತ್ತಿಕೊಂಡು ಕೂತೆ… ಹುಳಿ ಮಾವನ್ನು ಬುಟ್ಟಿಯಲ್ಲಿಅದೇ ಹಣೆ ಪಟ್ಟಿಯೊಡನೆ ಇಡುವ ಎಲ್ಲಾ ಇರಾದೆಯೂ ನನಗಿತ್ತು…. ಆದರೆ ಓದುತ್ತಾ ಓದುತ್ತಾ ಹುಳಿ ಮಾವು ಮಾಗುತ್ತಾ ಹೋಯಿತು..

ಮೊದಲಿಗೆ, ಇಂದಿನ ದಿನಮಾನದ ವ್ಯಕ್ತಿ ಸ್ವಾತಂತ್ರ್ಯ ಮತ್ತು ದಾಂಪತ್ಯದ ರೀತಿ ನೀತಿಗಳ ಮಾನ ದಂಡಗಳಲ್ಲಿ ೫೦ ವರ್ಷಗಳ ಹಿಂದಿನ ದಾಂಪತ್ಯವನ್ನು ಅಳೆಯುವುದೇ ತಪ್ಪು ಅನ್ನಿಸುತ್ತದೆ. ಓದುತ್ತಾ ಓದುತ್ತಾ ಒಂದು ಸಣ್ಣ ಸಿಗರೇಟಿನ ಎಳೆ ಮತ್ತು ಅದರೊಡನೆ ಗಂಟು ಹಾಕಿಕೊಂಡಿದ್ದ ನನ್ನದೇ ಬಾಲ್ಯದ ಅನೇಕ ಚಿತ್ರಗಳು ನನ್ನ ಮನದಾಳದಲ್ಲಿ ಮೂಡತೊಡಗಿದವು.

ಒಂದು ಸಲ ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಕ್ಕೆ ಅಪ್ಪನ ಜೊತೆ ಒಂದು ಸಭೆಗೆ ಹೋಗಿದ್ದೆ, ಅಲ್ಲಿ ನಾವು ನಿಂತಿರುವಂತೆಯೇ ನಮ್ಮ ಮುಂದೆ, ಲಂಕೇಶ್, ತೇಜಸ್ವಿ ಇನ್ನೂ ಹಲವರು ನಡೆದು ಹೋಗಿದ್ದರು. ಲಂಕೇಶ್ ನಮ್ಮ ಮುಂದೆ ಹಾದು ಆಗುವಾಗ ಒಂದು ಸಣ್ಣ ಸಿಗರೇಟಿನ ಎಳೆಯ ಪರಿಮಳ, ಥೇಟ್ ನನ್ನ ಅಪ್ಪನ ಪಕ್ಕ ಕೂತರೆ ಆವರಿಸುವಂತಹದ್ದು …

ತಂಗಿ ಮಗುವಾಗಿದ್ದಾಗ ಹಠ ಅಂದರೆ ಹಠ, ಇಡೀ ರಾತ್ರಿ ಅಳು, ನಿದ್ದೆ ಕೆಟ್ಟರೆ ಕೂಗಾಡುತ್ತಿದ್ದ ಅಪ್ಪ, ಆಗ ಪಕ್ಕದ ರೂಮಿನಲ್ಲಿ ಮಲಗುತ್ತಿದ್ದರು. ಆದರೆ ಅದೇ ಅಪ್ಪ ಒಮ್ಮೆ ರಾತ್ರಿ ನಾನು ಬಾಳೆಹಣ್ಣು ಇರದಿದ್ದರೆ ಊಟ ಮಾಡುವುದಿಲ್ಲ ಎಂದು ಹಟ ಹಿಡಿದಾಗ, ರಾತ್ರಿ ೧೧ ಕ್ಕೆ ಪೇಟೆಬೀದಿಗೆ ಹೋಗಿ, ಅಂಗಡಿಯವನ ಮನೆ ಬಾಗಿಲು ತಟ್ಟಿ, ಹಣ್ಣು ಕೊಂಡು ತಂದು ಕೊಟ್ಟಿದ್ದರು.

hulimavuಮಗುವಾಗಿದ್ದಾಗ ಕವಿತಾ ಲಂಕೇಶ್ ಆರೋಗ್ಯ ಸರಿ ಇರದೆ ಅಳುವಾಗ, ’ಮಕ್ಕಳನ್ನು ಕರೆದುಕೊಂಡು ಬೇರೆ ಕಡೆ ಮಲಗಿಕೋ’ ಎನ್ನುವ ಲಂಕೇಶರು ಮುಂದೆ ಕವಿತಾ ’ದೇವೀರಿ’ ಚಿತ್ರ ಮಾಡುವಾಗ, ಮಾತನಾಡುತ್ತಾ ಆಡುತ್ತಾ ಫೋನ್ ಕಟ್ ಆದರೆ, ಅಕಸ್ಮಾತ್ ಅವಳಿಗೆ ಏನಾದರೂ ಸಲಹೆ ಕೇಳುವುದಿತ್ತೇನೋ ಎಂದುಕೊಂಡು, ಆಗಾಗಲೇ ಒಂದು ಕಣ್ಣು ಕುರುಡಾಗಿದ್ದರೂ ಇನ್ನೊಂದೇ ಕಣ್ಣಿನಲ್ಲಿ ನೋಡುತ್ತಾ, ಗಾಡಿ ಓಡಿಸುತ್ತಾ ಶೂಟಿಂಗ್ ಜಾಗಕ್ಕೆ ಬರುತ್ತಾರೆ …. ಯಾವ ಮಾನದಂಡದಲ್ಲಿ ಇವರನ್ನು ಸ್ವಕೇಂದ್ರಿತ ವ್ಯಕ್ತಿ ಎನ್ನಲಿ … ವ್ಯಕ್ತಿಯ ನಡವಳಿಕೆ ಯಾವುದೇ ಒಂದು ಘಟನೆಯಲ್ಲಿ ಆತ ಪ್ರತಿಕ್ರಯಿಸುವ ರೀತಿಯಿಂದಲ್ಲಾ, ಹಲವಾರು ಘಟನೆಗಳಲ್ಲಿ ಆತನಡೆದುಕೊಳ್ಳುವ ರೀತಿಯಿಂದ ನಿರ್ಧಾರವಾಗುತ್ತದೆ ಅಲ್ಲವೇ?

ಒಂದು ಸಲ ಮನಸ್ಸಿಗೆ ನಾನು ಹಾಕಿಕೊಂಡಿದ್ದ ಆ ಕನ್ನಡಕ ತೆರೆದ ಮೇಲೆ ಪುಸ್ತಕವನ್ನು ನಾನು ಇನ್ನಷ್ಟು ತೆರೆದ ಮನಸ್ಸಿನಿಂದ ಓದಲು ಸಾಧ್ಯ ಆಯಿತು..

ಇದನ್ನೊಂದು ಸಾಹಿತ್ಯ ಕೃತಿ ಎಂದಷ್ಟೇ ಓದದೆ ಒಬ್ಬ ಅಪ್ಪಟ ಪ್ರತಿಭಾವಂತ ಮತ್ತು ಅಷ್ಟೇ ವಿಕ್ಷಿಪ್ತ ಮನಸ್ಸಿನ, ಕರಡಿ ಪ್ರೀತಿಯ ಗಂಡನ ಜೊತೆಗಿನ ತನ್ನ ದಾಂಪತ್ಯದ ಬಗ್ಗೆ ಒಬ್ಬ ಗಟ್ಟಿ ವ್ಯಕ್ತಿತ್ವದ, ಸ್ವಾವಲಂಬಿ ಹೆಣ್ಣು ಮಗಳೊಬ್ಬಳು ಬರೆದ ಪುಸ್ತಕ ಎಂದು ಓದಿಕೊಂಡಾಗ ಪುಸ್ತಕಕ್ಕೆ ನಾವು ಸರಿಯಾಗಿ ಸ್ಪಂದಿಸಲು ಸಾಧ್ಯ ಅನ್ನಿಸುತ್ತದೆ.

ಇದು ಆತ್ಮ ಚರಿತ್ರೆಯಲ್ಲ, ಯಾಕೆಂದರೆ ಪುಸ್ತಕ ಶುರುವಾಗುವುದು ಇಂದಿರಾ ಅವರು ಲಂಕೇಶರನ್ನು ಮದುವೆಯಾಗುವುದರೊಂದಿಗೆ, ಮುಗಿಯುವುದು ಲಂಕೇಶ್ ಬದುಕಿಂದ ದೂರಾದ ಮೇಲೆ..

ಈ ಪುಸ್ತಕದುದ್ದಕ್ಕೂ ಎಲ್ಲೂ ಸ್ವ ಮರುಕ ಇಲ್ಲ, ತನ್ನ ಯಾವುದೇ ನಡುವಳಿಕೆಗೆ ತ್ಯಾಗದ ಉಡುಗೆ ತೊಡಿಸಿಲ್ಲ, ತನ್ನ ಯಾವುದೇ ನಡಿಗೆಗೆ, ನಿರ್ಧಾರಕ್ಕೆ, ಬದುಕಿದ್ದ ರೀತಿಗೆ, ’ನೋಡಿ ಅವರು ಹಾಗೆ ಮಾಡಿದರಲ್ಲಾ, ಅದಕ್ಕೆ ನಾನು ಹೀಗೆ ಮಾಡ ಬೇಕಾಯ್ತು’ ಎನ್ನುವ ವಿವರಣೆ ಇಲ್ಲ, ನನಗೆ ಇಂದಿರಾ ಅವರ ಬಗ್ಗೆ ಗೌರವ ಬರುವುದು ಆ ಕಾರಣಕ್ಕಾಗಿ. ಗಂಡ ಮನೆ ಕಟ್ಟುತಾನೆ, ತೋಟ ಮಾಡುತ್ತಾನೆ, ಇವರೂ ಅದನ್ನು ಮಾಡುತ್ತಾರೆ. ನಾನೂ ಅದನ್ನು ಮಾಡಬೇಕು ಅನ್ನುವ ಆಸೆ ಇರಬಹುದು, ಆದರೆ ’ನಾನೂ ಮಾಡಬಲ್ಲೆ’ ಎನ್ನುವ ಅಹಂಕಾರ ಇಲ್ಲೆಲ್ಲೂ ಕಾಣಿಸುವುದಿಲ್ಲ.

ಅಷ್ಟೇ ಮೆಚ್ಚಿಗೆ ಬರುವುದು ಈ ಬಗ್ಗೆ ಲಂಕೇಶರು ನಡೆದುಕೊಳ್ಳುವ ರೀತಿಯಿಂದ. ಇಂದಿರಾ ಮನೆ ಕಟ್ಟುವ ವಿಷಯ ಲಂಕೇಶ್ ಗೆ ಮೊದಲೇ ಹೇಳಿರುವುದಿಲ್ಲ, ತೋಟ ಮಾಡುವ ವಿಷಯ ಹೇಳಿರುವುದಿಲ್ಲ. ಆದರೆ ಆಮೇಲೆ ಅದು ಗೊತ್ತಾದಾಗ ’ನೀನು ನನಗೆ ಒಂದು ಮಾತೂ ಹೇಳಲಿಲ್ಲ’ ಅನ್ನುವ ಕೊಂಕು ಲಂಕೇಶರ ನಡೆ ನುಡಿಯಲ್ಲಿ ಎಲ್ಲೂ ಕಾಣುವುದಿಲ್ಲ. ಅದನ್ನು ಅವರು ಮೆಚ್ಚಿಕೊಳ್ಳುತ್ತಾರೆ ಸಹ. ಆ ಮನೋಭಾವ ಎಷ್ಟು ಜನ ಗಂಡಂದಿರಲ್ಲಿ ಕಾಣಬರುತ್ತದೆ? ಇಂದಿನ ದಿನಗಳಲ್ಲಿ ಸಹ?? ಲಂಕೇಶರು ಕೆಲಸ ಬಿಟ್ಟು ಮನೆಯಲ್ಲಿದ್ದಾಗ ಇಂದಿರಾ ಅವರ ಸೀರೆ ಅಂಗಡಿಯ ವ್ಯಾಪಾರದಿಂದಲೇ ಮನೆ ನಡೆಯುತ್ತಿರುತ್ತದೆ. ಆದರೆ ಅದರ ಬಗ್ಗೆ ಯಾವುದೇ ಕೀಳರಿಮೆ ಮತ್ತು ಅದರ ಕಾರಣದಿಂದಲೇ ಮೂಡಿಬರುವ ನಂಜು, ಅಸಹನೆ ಲಂಕೇಶರಲ್ಲಿ ಕಾಣುವುದಿಲ್ಲ. ’ಇದು ನನ್ನ ಹೆಂಡತಿ ಕಷ್ಟ ಪಟ್ಟು ದುಡಿದು, ನಮಗೆ ನೀಡಿರುವ ಅನ್ನ’ ಅಂತ ಗೆಳೆಯರ ಜೊತೆ ಊಟ ಮಾಡುತ್ತ ಹೇಳುತ್ತಾರೆ.

ಇಂದಿರಾ ಅವರ ಬಗ್ಗೆ ಕೂಗಾಡುವುದು ಎಷ್ಟು ನಿಜವೂ ಒಮ್ಮೆ ಗೆಳೆಯರೊಂದಿಗೆ ಸೇರಿ ಮನೆಯಲ್ಲಿ ಗುಂಡು ಹಾಕುತ್ತಿದ್ದಾಗ, ರಾತ್ರಿ ಸಮಯ ಮೀರಿ, ಇಂದಿರಾ ಬಂದು ಕೂಗಾಡಿದಾಗ ಅದನ್ನು ಮೌನವಾಗಿ ಒಪ್ಪಿಕೊಳ್ಳುವುದೂ ಅಷ್ಟೇ ನಿಜ.

ಹಾಗೆ ಅವರು ಒಮ್ಮೆ ಹೆಂಡತಿಯ ಮೇಲೆ ಕೂಗಾಡಿದಾಗ ಮಗಳು ಗೌರಿ, ’ನೀನು ಹೀಗೆ ಕೂಗಾಡುತ್ತಿದ್ದರೆ, ಅಮ್ಮನನ್ನು ಕರೆದುಕೊಂಡು ಹೋಗಿ ನಿನಗೆ ಡೈವೋರ್ಸ್ ಕೊಡಿಸಿಬಿಡುತ್ತೇನೆ’ ಎಂದು ಪ್ರತಿಭಟಿಸಿದಾಗ ಅವರಿಗೆ ಮೊದಲು ಆಗುವುದು ಶಾಕ್. ಅಂದರೆ ಅದುವರೆವಿಗೂ ಅವರಿಗೆ ತಮ್ಮ ನಡುವಳಿಕೆ ಅಸಹಜ, ತಪ್ಪಿರಬಹುದು ಎಂದು ಅನ್ನಿಸಿರುವುದೇ ಇಲ್ಲ! ಗೌರಿ ಹಾಗೆಂದಾಗ, ಯೋಚಿಸಿ ಅದನ್ನು ಒಪ್ಪಿಕೊಳ್ಳುತ್ತಾರಷ್ಟೇ ಅಲ್ಲದೆ ಮತ್ತೆಂದೂ ಇಂದಿರಾ ಅವರ ಮೇಲೆ ಕೂಗಾಡುವುದಿಲ್ಲ, ಗೌರವದಿಂದಲೇ ನಡೆಸಿಕೊಳ್ಳುತ್ತಾರೆ. ಅಂದರೆ ಅವರ ಸುಮಾರು ನಡುವಳಿಕೆಗಳಿಗೆ ಪುರುಷಾಹಂಕಾರ ಕಾರಣವಾಗಿರುವುದಿಲ್ಲ, ಅದೊಂದು ಅವರ ಮಟ್ಟಿಗೆ ಸಹಜ ಕ್ರಿಯೆಯಾಗಿ ನಡೆದುಕೊಂಡು ಬಂದಿರುತ್ತದೆ. ಲಂಕೇಶರಲ್ಲಿದ್ದ ’ಮನುಷ್ಯ’ ನಮಗೆ ಇಷ್ಟವಾಗುವುದು ಇಲ್ಲಿ.

ಇಡೀ ಪುಸ್ತಕದಲ್ಲಿ ತಮ್ಮ ಅಸಂಖ್ಯಾತ ಗೆಳತಿಯರ ನಡುವೆಯೂ ಲಂಕೇಶರು ಹೆಂಡತಿಯನ್ನು ಗೌರವದಿಂದಲೇ ನಡೆಸಿಕೊಳ್ಳುತ್ತಾರೆ, ರಾಷ್ಟಪ್ರಶಸ್ತಿ ಸ್ವೀಕರಿಸಲು ಪ್ಲೇನಿನಲ್ಲಿ ವಿಮಲಾ ನಾಯ್ಡು ಜೊತೆಯಲ್ಲಿ ಪ್ರತ್ಯೇಕವಾಗಿ ಹೋಗುತ್ತಾರೆ, ಹೊಸ ಜಾಗದಲ್ಲಿ, ಇಂದಿರಾ ಸಮಯಕ್ಕೆ ಸರಿಯಾಗಿ ಬರುವುದು ತಡವಾಗಿ, ವಿಮಲಾ ನಾಯ್ಡು ನಿರ್ಮಾಪಕಿಗೆ ಕೊಡುವ ಪ್ರಶಸ್ತಿ ಸ್ವೀಕರಿಸಿ, ಕ್ಯಾಮೆರಾಗಳು ಕ್ಲಿಕ್ ಕ್ಲಿಕ್ ಎನ್ನುತ್ತವೆ, ಆದರೆ ಲಂಕೇಶರು ಅವು ಯಾವುದೇ ಪತ್ರಿಕೆಗಳಲ್ಲಿ ಬರದಂತೆ ನೋಡಿಕೊಳ್ಳುತ್ತಾರೆ. ಇಲ್ಲಿ ನಾನು ಹೇಳಬೇಕೆಂದಿರುವುದು ಹಾಗೆ ಮಾಡಿದ್ದರಿಂದ ಲಂಕೇಶರದು ತಪ್ಪಿಲ್ಲ ಅಂತ ಅಲ್ಲ, ಈ ಕಾರಣದಿಂದ ಗಂಡ ಹೆಂಡತಿಯ ನಡುವಿನ ಪ್ರೀತಿ ಮುಕ್ಕಾಗುತ್ತದೆ, ಆದರೆ ಲಂಕೇಶರು ಹೆಂಡತಿಯನ್ನು ಗೌರವಿಸುವುದನ್ನು ನಿಲ್ಲಿಸುವುದಿಲ್ಲ.

ಇಡೀ ಪುಸ್ತಕದಲ್ಲಿ ನನಗೆ ಇಷ್ಟವಾದ ಇನ್ನೊಂದು ಅಂಶವೆಂದರೆ ಸಾಧಾರಣವಾಗಿ ತಮ್ಮ ದಾಂಪತ್ಯ ಹಳಿ ತಪ್ಪಿದಾಗ ಮಾಡುವಂತೆ ಅದಕ್ಕೆ ಕಾರಣರಾದ ವ್ಯಕ್ತಿಗಳನ್ನು ಹೆಸರಿಸಿ ದೂಷಿಸುವ ಕೆಲಸ ಇಂದಿರಾ ಮಾಡುವುದಿಲ್ಲ. ಅದಕ್ಕೆ ಬದಲಾಗಿ ಅವರ ಹೆಸರೇ ಎತ್ತದೆ, ಅವರ್ಯಾರೂ ಅಪಾರ ಬುದ್ಧಿವಂತರಾಗಲೀ, ರೂಪಸಿಗಳಾಗಲೀ ಆಗಿರಲಿಲ್ಲ ಎನ್ನುವ ಒಂದು ವಾಕ್ಯದಲ್ಲಿ ಅದನ್ನು ಮುಗಿಸಿಬಿಡುತ್ತಾರೆ. ಇಲ್ಲಿ ಆಕೆ ತನ್ನ ಘನತೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಆ ಅನಾಮಿಕ ಸಂಬಂಧಗಳಿಗೆ ಹೆಸರು ಕೊಡದಿರುವ ಮೂಲಕ ಅವೆಲ್ಲವನ್ನೂ ನಗಣ್ಯ ಎನ್ನುವಂತೆ ಬಟ್ಟೆಯಲ್ಲಿ ಒರೆಸಿ ಹಾಕಿಬಿಡುತ್ತಾರೆ!

smt-indira-lankesh-awardಲಂಕೇಶರಂತಹ ಮಹಾ ಸಾಗರದ ಜೊತೆಯಲ್ಲಿದ್ದರೂ ತನ್ನನ್ನು ಕಳೆದುಕೊಳ್ಳದ, ತೊರೆದು ಹೋಗದ, ಸಾಗರದ ಸಖ್ಯದಲ್ಲಿ ನರಳಿದರೂ ಉಪ್ಪಾಗದ ಜೀವನದಿ ಇಂದಿರಾ.

ಒಂದು ಸಂಬಂಧದಲ್ಲಿ ಮತ್ತೊಬ್ಬರ ಪ್ರವೇಶವಾದಾಗ ನಿರಾಕರಣೆಗೊಳಗಾಗ ವ್ಯಕ್ತಿ ಅದನ್ನು ಎದುರಿಸುವ ರೀತಿ, ಭಿನ್ನವಾಗಿರುತ್ತದೆ. ’ಹಾಳಾಗಿ ಹೋಗಲಿ, ನನ್ನ ಕಣ್ಣೆದುರಿಗೆ ನಡೆಯದಿದ್ದರೆ ಸಾಕು’ ಎನ್ನುವ ಹೊಂದಾಣಿಕೆ ಮಾಡಿಕೊಳ್ಳಬಹುದು, ’ಇದೋ ನಾನು ಹೊರಟೆ’ ಎಂದು ಚೌಕಟ್ಟಿನಿಂದ ಚಿತ್ರ ಎದ್ದು ಹೋದಂತೆ ಎದ್ದು ಹೊರಡಬಹುದು, ಹಟ ಮಾಡಿ, ಜಗಳ ಆಡಿ ಸಂಬಂಧ ಉಳಿಸಿಕೊಳ್ಳಲು ಬಡಿದಾಡಬಹುದು ಅಥವಾ ಹೆಜ್ಜೆ ಕಿತ್ತಿಟ್ಟ ವ್ಯಕ್ತಿಯೊಡನೆ ಒಂದೇ ಮನೆಯಲ್ಲಿ ಒಂದು ದೂರ ಕಾದುಕೊಂಡು ಉಳಿದುಬಿಡಬಹುದು. ಇಂದಿರಾ ಆರಿಸಿಕೊಂಡಿದ್ದು ಇದನ್ನು. ಅದೇ ಮನೆಯಲ್ಲಿಯೇ ಲಂಕೇಶರೂ ಬೆಳೆದರು, ಇಂದಿರಾ ಅವರೂ ಬೆಳೆದರೂ, ಆದರೆ ಪಾತಿ ಹಾಕಿಟ್ಟ ಎರಡು ಮರಗಳು ಪ್ರತ್ಯೇಕವಾಗಿ ಬೇರು ಮೂಡಿಸಿಕೊಂಡ ಹಾಗೆ.

ಆದರೆ ಇವೆಲ್ಲಾ ಸ್ನೇಹ, ಪ್ರೀತಿ, ಪರಸ್ಪರ ಗೌರವ, ಹೊಂದಾಣಿಕೆಯ ನಡುವೆಯೇ ಇಬ್ಬರ ನಡುವಿನ ಅವಲಂಬನೆ, ದಾಂಪತ್ಯ, ಅನುರಾಗ ಸೊರಗುತ್ತದೆ. ಸಾಧಾರಣವಾಗಿ ಅಂತಹ ಸಂದರ್ಭಗಳಲ್ಲಿ ಆಗುವ ಹಾಗೆ The kids start parenting the parents. ಮಕ್ಕಳು ಅಪ್ಪ ಅಮ್ಮನ ಅಗತ್ಯಗಳ ಬಗ್ಗೆ ಸಂವೇದನಾ ಶೀಲರಾಗಿರುತ್ತಾರೆ. ಮತ್ತು ಅಪ್ಪ ಅಮ್ಮ ಇಬ್ಬರನ್ನೂ ತಾವು ನೋಡಿಕೊಳ್ಳಲು ಕಲಿತುಬಿಡುತ್ತಾರೆ.

ಸರಿ ಎಲ್ಲಾ ಸರಿ, ಆದರೆ ಪುಸ್ತಕ ಓದುತ್ತಾ, ಓದುತ್ತಾ ಇಂದಿರಾ ಅವರ ತಣ್ಣನೆಯ ನಿರೂಪಣೆಗೆ ಹೃದಯದಲ್ಲಿನ ರಕ್ತ ಹೆಪ್ಪುಗಟ್ಟುತ್ತಾ ಹೋಗಿ, ಮನಸ್ಸು ಕೊರಡಾಯ್ತಲ್ಲ ಅದಕ್ಕೇನು ಮಾಡಲಿ…. ಲಂಕೇಶರು ಎರಡನೇ ಸಲ ತಮ್ಮ ಮೇಲೆ ಕೈ ಮಾಡಿದ ಘಟನೆಯನ್ನು ಹೇಳುವಾಗ ಒಂದೇ ವಾಕ್ಯದಲ್ಲಿ ’ಆಗ ಲಂಕೇಶರು ನಿದ್ರಿಸಿರಲಿಲ್ಲ’ ಅಂದಾಗ ಮುಂದೆ ಒಂದು ವಾಕ್ಯ ಓದಲಾಗದಂತೆ ಪುಸ್ತಕ ಮುಚ್ಚಿ ಕೂತ ಆ ಸ್ಥಬ್ಧತೆಯನ್ನು ಹೇಗೆ ಮರೆಯಲಿ? ಮೊದಲ ಬಾರಿ ತನ್ನ ಇಡೀ ಜೀವನದ ಕಾರಣ, ಆಧಾರ, ಆಸರೆ, ಜೀವವೇ ಅಂದುಕೊಂಡಿದ್ದ ಜೀವ ಇನ್ನೊಬ್ಬಳಿಗೆ, ಮನೆ, ಮಡದಿ, ಮಕ್ಕಳು ಎಲ್ಲವನ್ನೂ ಬಿಟ್ಟು ನಿನ್ನೊಂದಿಗೆ ಬಂದುಬಿಡುತ್ತೇನೆ ಎಂದು ಪತ್ರ ಬರೆದುದನ್ನು ಇಂದಿರಾ ಓದುವಾಗ, ಹಾಗೆ ಬರೆದ ಆ ಪತ್ರ ಚೂರು ಚೂರಾಗಿರುವುದು ಎಷ್ಟು ಸಾಂಕೇತಿಕ … ಆ ಘಳಿಗೆಯ ಶೂನ್ಯ ಇನ್ನೂ ನನ್ನ ಅರಿವನ್ನು ಕಾಡುತ್ತಿದೆ.

ಯಾಕೆ ಹೀಗೆ? ಯಾವುದೇ ಕಲೆಯಲ್ಲಿ ಅಥವಾ ಯಾವುದೇ ಕ್ಷೇತ್ರದಲ್ಲಿ ವ್ಯಕ್ತಿ ಕೌಶಲ್ಯ ಸಾಧಿಸುತ್ತಾ ಹೋದ ಹಾಗೆ, ಕಸುಬುದಾರಿಕೆ ಮತ್ತು ಕಸುಬುದಾರಿಕೆಯ ಮೇಲಿನ ಹಿಡಿತ, ನಿಯತ್ತು ಮತ್ತು ಅದರೆಡೆಗಿನ ನಿಷ್ಠೆಯ ಎದುರಲ್ಲಿ ಮಿಕ್ಕೆಲ್ಲಾ ನಿಯಮಗಳು, ನಿಷ್ಠೆಗಳೂ ಗೌಣವಾಗಿ ಬಿಡುತ್ತದಾ?

ಯಾಕೆ ಕೆಲವೇ ಕೆಲವು ಜನ ಮಾತ್ರ ರಾಜೇಶ್ವರಿ ತೇಜಸ್ವಿಯ ಹಾಗೆ ’ನನ್ನ’ ತೇಜಸ್ವಿ ಎಂದು ಬರೆಯಲಾಗುತ್ತದೆ?

ಒಬ್ಬ ಅದ್ಭುತ ಪ್ರತಿಭಾವಂತನನ್ನು ಅವನ ಎಲ್ಲಾ ವೈಯಕ್ತಿಕ ದೌರ್ಬಲ್ಯಗಳನ್ನೂ ಕಡೆಗಣಿಸಿ ಮೆಚ್ಚದೆ, ಪ್ರೀತಿಸದೆ, ಆರಾಧಿಸದೆ ಇರುವುದು ಎಷ್ಟು ಕಷ್ಟ..

ಆದರೇ ಒಬ್ಬ ಸಂಗಾತಿಯಾಗಿ ಅದೇ ಪ್ರತಿಭಾವಂತನನ್ನು ಅವನ ಪ್ರತಿಭೆಯ ಕಾರಣದಿಂದ ಅವನ ಎಲ್ಲಾ ದೌರ್ಬಲ್ಯಗಳನ್ನೂ ಕಡೆಗಣಿಸಿ ಪ್ರೀತಿಸುತ್ತಲೇ ಇರುವುದು ಎಷ್ಟು ಕಷ್ಟ……

‍ಲೇಖಕರು admin

March 8, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

39 ಪ್ರತಿಕ್ರಿಯೆಗಳು

  1. ವಿನಯ

    ಒಳ್ಳೆಯ ನಿರೂಪಣೆ ಅಕ್ಕ :)ನಾನು ಓದಬೇಕು ಅನ್ನೋಯಾಸೆ ಮೂಡುವಂತೆ ಬರೆದಿದ್ದೀರಿ

    ಪ್ರತಿಕ್ರಿಯೆ
  2. anu pavanje

    ಮನಸ್ಸು ಹುಚ್ಚುಗಟ್ಟಿ ಸಿಟ್ಟುಸೆಡವುಗಳಿ೦ದ ಅಲುಗಾಡಿದರೂ ಮರು ಕ್ಷಣ ತಾನು ಪ್ರೀತಿಸಿದವನನ್ನ ಆತನನ್ನ ಆತನಿಗಾಗೇ ಪೂರ್ತಿಯಾಗಿ ಮತ್ತಷ್ಟು ಪ್ರೀತಿಸೋದು ಸಾಧ್ಯವೂ ಆಗುತ್ತಲ್ಲ……ಇದುವೇ ಕೊನೆತನಕ ಇಬ್ಬರನ್ನ ಜೊತೆಗಿರಿಸುತ್ತೆ ಅನ್ಸುತ್ತೆ….ಸೋತು ಗೆಲ್ಲುವುದು ಅ೦ದರೆ ಇದೇ ಏನು……ಎಷ್ಟು ಚ೦ದ….!!!

    ಪ್ರತಿಕ್ರಿಯೆ
  3. anitha naresh

    ಲಂಕೇಶರಂತಹ ಮಹಾ ಸಾಗರದ ಜೊತೆಯಲ್ಲಿದ್ದರೂ ತನ್ನನ್ನು ಕಳೆದುಕೊಳ್ಳದ, ತೊರೆದು ಹೋಗದ, ಸಾಗರದ ಸಖ್ಯದಲ್ಲಿ ನರಳಿದರೂ ಉಪ್ಪಾಗದ ಜೀವನದಿ ಇಂದಿರಾ.nice….

    ಪ್ರತಿಕ್ರಿಯೆ
  4. bharathi

    ನನಗಂತೂ ಆ ಪುಸ್ತಕ ಓದುತ್ತಾ ಹೋದ ಹಾಗೆ ಮನಸ್ಸೆಲ್ಲ ಹೆಪ್ಪುಗಟ್ಟಿದ ಹಾಗಾಗಿಬಿಟ್ಟಿತು …

    ಪ್ರತಿಕ್ರಿಯೆ
  5. Jayalaxmi Patil

    ಸಂಧ್ಯಾ ನಿಮ್ಮ ಈ ಲೇಖನವನ್ನು ಓದುತ್ತಿದ್ದರೆ, ಚೂಪಾದ ಉಗುರುಗಳಿಂದ ಪರಪರ ಹೃದಯ ಕೆರೆದ ನೋವು….

    ಪ್ರತಿಕ್ರಿಯೆ
  6. renuka manjunath

    ನಾನೊಬ್ಬ ಲಂಕೇಶ್ ಓದುಗಳಾಗಿ, ಅವರ ಸಂಗಾತಿ ಇಂದಿರಾ ‘ಏನನ್ನು ಬರೆದಿರಬಹುದು’ ಎಂಬ ಕುತೂಹಲ ಹಾಗೂ ಆಸಕ್ತಿಗೆ ನಿಮ್ಮ ಲೇಖನ ಸಾಕಷ್ಟು ವಿಷಯಗಳೊಂದಿಗೆ ವೈಚಾರಿಕ ನೆಲೆಯಲ್ಲಿ, ‘ಜಾಣಜಾಣೆ’ಯಾಗಿ ವಿಮರ್ಷೆ ಮೂಡಿಬಂದಿದೆ! ಸಂಧ್ಯಾ ಥ್ಯಾಂಕ್ಸ್ ಫಾರ್ ಹೈಲೈಟಿಂಗ್ ದ್ ಬುಕ್……ನನಗೆ ನಿಜಕ್ಕೂ ಕೊಂಡು ಓದಬೇಕೆನಿಸಿತು!

    ಪ್ರತಿಕ್ರಿಯೆ
  7. Anjali Ramanna

    Sandhya, neevu idE jaaDinalli bareyuttaa hOdare , naa antoo nimma coloumn Oduvudannu, mecchuvudannu, adaroLage ondaagOdannu- taDeyalu saadhyavE illa! Wonderful 🙂
    Anjali Ramanna

    ಪ್ರತಿಕ್ರಿಯೆ
  8. pravara

    ಪುಸ್ತಕನ್ನು ಓದಲೆಬೇಕೆಂಬ ಹುಚ್ಚು ಹಿಡಿಸಿ ಕೈ ಬಿಟ್ಟಿರಿ… ಅದೆಷ್ಟು ಚೆಂದ ನಮ್ಮನ್ನು ಆವರಿಕೊಳ್ಳುವ ಹಾಗೆ ಬರೆಯುತ್ತೀರಿ… ತುಂಬಾ ಆಪ್ತವೆನ್ನಿಸಿತು

    ಪ್ರತಿಕ್ರಿಯೆ
  9. ಮಂಜುಳಾ ಬಬಲಾದಿ

    ಪುಸ್ತಕವೊಂದನ್ನು ಓದುವ ಅನುಭವವನ್ನು ಹೀಗೂ ಬಿಡಿಸಿಡಬಹುದೇ ಅಂತ ಅಚ್ಚರಿ ಮೂಡಿಸೋ ಹಾಗೆ ಬರೆದಿದ್ದೀರಿ ಸಂಧ್ಯಾ. ನಿಮ್ಮ ಶೈಲಿ ನಮ್ಮನ್ನು ಒಳ ಸೆಳೆಯುತ್ತಾ ಹೋಗತ್ತದೆ, ಏನೆಲ್ಲ ಯೋಚನೆಗೆ ಹಚ್ಚುತ್ತದೆ. ಇಂಥ ಒಂದು ವಿಷಯವನ್ನೂ ಹೀಗೆ ಮನ ಮುಟ್ಟೋ ತರಹ ಬರೀಬಹುದಲ್ಲ, ಅಂತ ನಾ ಇನ್ನೂ ಅಚ್ಚರಿ ಪಡ್ತಾನೇ ಇದೀನಿ! 🙂

    ಪ್ರತಿಕ್ರಿಯೆ
  10. ಶಮ, ನಂದಿಬೆಟ್ಟ

    “ಒಬ್ಬ ಸಂಗಾತಿಯಾಗಿ ಅದೇ ಪ್ರತಿಭಾವಂತನನ್ನು ಅವನ ಪ್ರತಿಭೆಯ ಕಾರಣದಿಂದ ಅವನ ಎಲ್ಲಾ ದೌರ್ಬಲ್ಯಗಳನ್ನೂ ಕಡೆಗಣಿಸಿ ಪ್ರೀತಿಸುತ್ತಲೇ ಇರುವುದು ಎಷ್ಟು ಕಷ್ಟ……”

    Beautiful sandhya… ನಾನು ನಿನಗೆ ಫಿದಾ…

    ಪ್ರತಿಕ್ರಿಯೆ
  11. samyuktha

    “ಲಂಕೇಶರಂತಹ ಮಹಾ ಸಾಗರದ ಜೊತೆಯಲ್ಲಿದ್ದರೂ ತನ್ನನ್ನು ಕಳೆದುಕೊಳ್ಳದ, ತೊರೆದು ಹೋಗದ, ಸಾಗರದ ಸಖ್ಯದಲ್ಲಿ ನರಳಿದರೂ ಉಪ್ಪಾಗದ ಜೀವನದಿ ಇಂದಿರಾ”…..ಎಂತಹ ಮನಮುಟ್ಟುವ ಸಾಲುಗಳು! ತುಂಬಾ ಚೆಂದದ ಬರಹ ಸಂಧ್ಯಾ….ಈ ಪುಸ್ತಕವನ್ನು ಈಗ ಓದಲೇಬೇಕು!

    ಪ್ರತಿಕ್ರಿಯೆ
  12. Rj

    ತಡವಾಗಿ ಓದಿದೆ.ನಿಮ್ಮ ಬರಹ ಆರ್ದ್ರಗೊಳಿಸಿತು.
    ಕೊನೆಯ ಮೂರು ಸಾಲುಗಳು ನಿಮ್ಮ ಓದನ್ನೂ,ಓದುವ ಕಲೆಯನ್ನೂ,ಓದಿದ ನಂತರ ಮಥಿಸುವ ಮನವನ್ನೂ ಸಾಕಷ್ಟು ತೆರದಿಟ್ಟಿವೆ.
    ಒಂದೇ ಮಾತು: Good Going.. 🙂
    -Rj

    ಪ್ರತಿಕ್ರಿಯೆ
  13. Aparna Rao

    obba vyaktiya koushalyavannu naavu mechchuttaa hodante… arivilladeye avara ella durguna sadgunagaligoo andina sanniveshakke anugunavaagi samarthisikolluva tappannu naavu maadutteveno ennuva aluku.. nimma baravanigeyalloo oppikolluvudo biduvudo annuva viplava neratineravaagi prakatisiddeeri..kandita abhinandaneeya..

    ಪ್ರತಿಕ್ರಿಯೆ
  14. ಉಷಾಕಟ್ಟೆಮನೆ

    ನಿಮ್ಮ ಗ್ರಹಿಕೆ ಮತ್ತು ನಿರೂಪಣೆ ತುಂಬಾ ಚೆನ್ನಾಗಿದೆ ಸಂಧ್ಯಾ.

    ಪ್ರತಿಕ್ರಿಯೆ
  15. ಉದಯ್ ಇಟಗಿ

    ಒಬ್ಬ ಗಂಡಸನ್ನು ಅವನ ಪ್ರೇಯಸಿ, ಅವನ ಅಕ್ಕ-ತಂಗಿಯರು, ಅವನ ಅಮ್ಮ, ಕೊನೆಗೆ ಅವನ ಮಕ್ಕಳು ನೋಡುವದಕ್ಕೂ ಹಾಗೂ ಅವನ ಹೆಂಡತಿ ನೋಡುವದಕ್ಕೂ ಎಷ್ಟೊಂದು ವ್ಯತ್ಯಾಸವಿರುತ್ತದೆ ಅಲ್ವೆ? ಹೆಂಡತಿಯಾದವಳು ಅವನನ್ನು ಹತ್ತಿರದಿಂದ ನೋಡುವಷ್ಟು ಬಹುಶಃ ಬೇರಾವ ಸಂಬಂಧಗಳು ನೋಡಲಾರವು ಎನಿಸುತ್ತದೆ. ಹಾಗೆಂದೇ ಅವನೆಲ್ಲಾ ದೌರ್ಬಲ್ಯಗಳು ಅವಳಿಗೆ ಎದ್ದು ಕಾಣುತ್ತವೆ ಹಾಗೂ ಅದೇ ದೌರ್ಬಲ್ಯಗಳು ಅವನೊಟ್ಟಿಗೆ ಬದುಕುತ್ತಾ ಹೋದಂತೆ ಗೌಣವಾಗುವದು ಮತ್ತು ಅಂಥವನೊಟ್ಟಿಗೆ ಸಂಸಾರ ನಡೆಸುವದು ಇಂದಿರಾ ಲಂಕೇಶ್‍ರಂಥ ಹೆಣ್ಣುಮಕ್ಕಳಿಗೆ ಸಾಧ್ಯವಾಗುತ್ತದೆ.
    ನಿಮ್ಮ ಲೇಖನದ ಕೊನೆಯ ಎರಡು ಸಾಲುಗಳು ಲಂಕೇಶ್‍ರಂಥ ಗಂಡನನ್ನು ಪಡೆಯುವ ಹೆಣ್ಣುಗಳ ತುಮುಲ ಹಾಗೂ ಸಂದಿಗ್ಧತೆಯನ್ನು ಒತ್ತಿ ಹೇಳಿದರೂ ಅಂಥವನೊಟ್ಟಿಗೆಯೇ ಸಂಸಾರ ನಡೆಸುವ ಹೆಣ್ಣುಮಕ್ಕಳು ನಮಗೆ ಎಲ್ಲೆಲ್ಲೂ ಸಿಗುತ್ತಾರೆ.
    ಶೇಕ್ಷಪೀಯರ್ ನ ಹೆಂಡತಿ ಕೂಡಾ ಇದಕ್ಕೆ ಹೊರತಾಗಿರಲಿಲ್ಲ. ಆಕೆಗೆ ಒಮ್ಮೆ ತನ್ನ ಗಂಡ ಒಬ್ಬ ಸಲಿಂಗಕಾಮಿ ಎಂದು ಗೊತ್ತಾಗುತ್ತದೆ. ಹಾಗೆ ಗೊತ್ತಾದ ಮೇಲೂ ಆಕೆ ಅವನೊಟ್ಟಿಗೆಯೇ ಸಂಸಾರ ಮಾಡಿಕೊಂಡು ಹೋಗುತ್ತಾಳೆ. ಏಕೆಂದರೆ ಅವಳಿಗೆ ವ್ಯಯಕ್ತಿಕವಾಗಿ ಸಾಹಿತ್ಯದಲ್ಲಿ ಆಸಕ್ತಿಯಿರಲಿಲ್ಲವಾದರೂ ಅವನ ಅದ್ಭುತ ಸಾಹಿತ್ಯ ಪ್ರತಿಭೆ ಅವಳನ್ನು ಹಿಡಿದಿಡುವಂತೆ ಮಾಡುತ್ತದೆ.
    ಹೀಗೆ ತಮ್ಮ ಗಂಡಂದಿರನ್ನು ಅನಗತ್ಯವಾಗಿ ವೈಭವಿಕರಿಸದೆ ಹಾಗೂ ವ್ಯಯಕ್ತಿಕ ದ್ವೇಷದ ನೆಲೆಗಟ್ಟಿನಲ್ಲಿ ನಿಂತು ನೋಡದೆ ಅವನಿದ್ದಂತೆ, ಅವನಿರುವಂತೆ ಹಿಡಿದಿಡುವ ಪ್ರಯತ್ನ ನಮ್ಮ ಕನ್ನಡ ಸಾಹಿತ್ಯದಲ್ಲಿ ಆಗಬೇಕಾಗಿದೆ.
    ನಾನು “ಹುಳಿಮಾವಿನ ಮರ ಮತ್ತು ನಾನು” ನ್ನು ಬೆಂಗಳೂರಿಗೆ ಬಂದಾಗೊಮ್ಮೆ ಗೌರಿ ಲಂಕೇಶ್‍ರ “ಲಂಕೇಶ್” ಪತ್ರಿಕೆಯಲ್ಲಿ ಓದುತ್ತಿದ್ದೆ. ಈಗ ಅದು ಪುಸ್ತಕವಾಗಿ ಬಂದಿರುವದು ಖುಷಿಯ ವಿಚಾರ. ಈ ಸಾರಿ ಬೆಂಗಳೂರಿಗೆ ಬಂದಾಗ ತಪ್ಪದೇ ಓದುತ್ತೇನೆ.
    ಥ್ಯಾಂಕ್ಸ್ ಸಂಧ್ಯಾ ಅವರೇ ನಿಮ್ಮ ಲೇಖನಕ್ಕೆ ಹಾಗೂ ನಿಮ್ಮ ನಿರೂಪಣೆಗೆ.

    ಪ್ರತಿಕ್ರಿಯೆ
  16. lalitha siddabasavaiah

    ಸಂಧ್ಯಾ ನಿಮ್ಮ ಸಹನೆ ದೊಡ್ಡದು. ಹುಳಿಮಾವು ಓದಿದಾಗಿನಿಂದ ಲಂಕೇಶ್ ಅವರ ಬಗ್ಗೆ ಹುಟ್ಟಿರುವ ಜಿಗುಪ್ಸೆ ನನಗೆ ಮರೆಯಲು ಸಾಧ್ಯವಿಲ್ಲದಾಗಿದೆ. ನಿಮ್ಮ ಲೇಖನ ಓದಿದ ಮೇಲೂ ಈ ಭಾವವನ್ನು ದೂರಮಾಡುವುದು ಕಷ್ಟಸಾಧ್ಯವಾಗಿದೆ.
    ಒಂದೆರಡು ದಿನದ ಮಾತಲ್ಲ, ವರ್ಷಾನುಗಟ್ಟಲೆ ವಿಷಮದಾಂಪತ್ಯ ನಡೆಸುವುದು ಸುಲಭದ ಮಾತೇ? ಕಹಿಯನ್ನು ಎಷ್ಟು ನುಂಗಬಹುದು ಹೇಳಿ? ಇಂದಿರಾ ಅವರ ಮಾನಸಿಕ ಪ್ರಬುದ್ಧತೆ ಅಂತಿಂತಹುದಲ್ಲ. ಬಹುಪತ್ನಿತ್ವದ ಬಗ್ಗೆ ಓದಬಹುದು,ಕೇಳಬಹುದು , ನೋಡಲೂಬಹುದು, ಆದರೆ ನಾವೇ ಅದರ ಪಾತ್ರವಾಗುವುದಿದೆಯಲ್ಲ ಅದು ಭೂಮಿ ಮೇಲಿನ ನರಕ. ಲಂಕೇಶ್ ಅವರ ಕುರಿತು ಒಂದೂ ಸಿಟ್ಟಿನ ಮಾತಾಡದೆ ಇರುವ ನಿಮ್ಮ ಸಹನೆ ದೊಡ್ಡದು !

    ಪ್ರತಿಕ್ರಿಯೆ
  17. Usha Rai

    ಸಂಧ್ಯಾ ತುಂಬ ಚೆನ್ನಾಗಿದೆ ವಿಶ್ಲೇಷಣೆ. ಪುಸ್ತಕ ಓದಬೇಕು ಎಂದನಿಸುತ್ತಿದೆ.

    ಪ್ರತಿಕ್ರಿಯೆ
  18. Gopaal Wajapeyi

    Abbaa… nimma barahada ‘pari’ge naanu mattomme beragaade. Haageye neevettida prashnegalige ideega uttara kandukollalu ‘aa’ pustakavannu hudkikondu horadabekaagide…

    ಪ್ರತಿಕ್ರಿಯೆ
  19. ಸಂಧ್ಯಾ ರಾಣಿ

    ಈ ಪುಸ್ತಕ ನನ್ನನ್ನು ತುಂಬಾ ಕಾಡಿದ್ದು ನಿಜ, ಓದುವ ಮೊದಲೂ, ಓದಿದ ನಂತರವೂ … ಇದನ್ನು ಓದಿದ, ಮೆಚ್ಚಿಕೊಂಡ ನಿಮಗೆಲ್ಲಾ ವಂದನೆ ಅಂದರೆ ಸಾಕೆ …. ನನ್ನ ಜೊತೆ ಈ ಪುಸ್ತಕದುದ್ದಕ್ಕೂ ಬಂದಿರಲ್ಲ, ಈಗ ನೀವೆಲ್ಲಾ ನನ್ನವರೇ …

    ಲಲಿತಾ ಸಿದ್ದಬಸವಯ್ಯ ಮೇಡಂ ಬಹಳ ಹಿಂದೆ ನಾನು ತಮಿಳ್ ಲೇಖಕ ಜಯಕಾಂತ್ ಅವರ ಕಥೆಯ ಒಂದು ಅನುವಾದ ಓದಿದ್ದೆ, ’ಅಂತರಂಗ ಪುನೀತ’ ಅಂತ ಇರ್ಬೇಕು ಅನ್ನಿಸುತ್ತೆ, ಅದರಲ್ಲಿ ಹೆಂಡತಿ ಮಗನಿಗೆ ಒಂದು ಮಾತು ಹೇಳುತ್ತಾಳೆ, ’ಇನ್ನೊಬ್ಬರ ಅಂತರಂಗ, ಅದು ನಿನ್ನ ತಂದೆಯದ್ದೇ ಆಗಿರಲಿ, ಅವರ ಅನುಮತಿ ಇಲ್ಲದೆ ಅದನ್ನು ನೀನು ಪ್ರವೇಶಿಸುವುದು ತಪ್ಪು’ ಅಂತ .. ಇಲ್ಲಿ ಇಂದಿರಾ ಅವರು ಬರೆದಿರುವುದು ಕಥೆಯಲ್ಲ, ಅವರ ದಾಂಪತ್ಯದ ಕಥೆ. ಹಾಗಾಗಿ ಇಲ್ಲಿ ಸರಿ, ತಪ್ಪು ಹೇಳಲು ನಾನು ಯಾರು, ಅಲ್ಲದೆ ಇಂದಿರಾ ಯಾರದ್ದಾದರೂ ಬೆಂಬಲ ಬಯಸುವ ಹೆಣ್ಣಲ್ಲ, ಸ್ವಂತ ನಿರ್ಧಾರ ತೆಗೆದುಕೊಂಡು ಬದುಕಿದ ಹೆಣ್ಣು. ಅವರ ನಿರ್ಧಾರ ಅದು ಏನೇ ಆಗಿರಲಿ ನಾನು ಗೌರವಿಸುತ್ತೇನೆ. ಆದರೂ ಹತ್ತು ವರ್ಷ ತುಂಬು ಪ್ರೀತಿಯಿಂದ ಬದುಕಿದ ಜೀವವನ್ನು ತನ್ನ ಜೀವನದಿಂದ ಹಾಗೆ ಒರೆಸಿ ಎಸೆಯುವುದೂ ಕಷ್ಟ ಅಲ್ಲವಾ? ನನಗೆ ಅನ್ನಿಸುವುದು ಹೀಗೆ, ಯಾವುದೇ ಪ್ರೇಮದಲ್ಲಿ ಸಮ ಸಮ ಅಂತ ಪ್ರೀತಿ ಸಾಧ್ಯವಿಲ್ಲ, ಒಬ್ಬರು ಇನ್ನೊಬ್ಬರಿಗಿಂತ ಜಾಸ್ತಿ ಪ್ರೀತಿಸುತ್ತಾರೆ, ಮತ್ತು ಆ ಪ್ರೀತಿಯಿಂದಲೇ ಅವರಿಗೆ ಕ್ಷಮಿಸುವುದು ಸಾಧ್ಯವಾಗುತ್ತದೆ ಅಲ್ಲವಾ?

    ಇನ್ನು ಓದುಗಳಾದ ನನ್ನ ಮಟ್ಟಿಗೆ ಲಂಕೇಶ್ ವ್ಯಕ್ತಿಯಾಗಿ ಏನು ಅನ್ನುವುದಕ್ಕಿಂತ, ಬರಹಗಾರನಾಗಿ ಏನು ಅನ್ನೋದು ಮುಖ್ಯ ….

    ಹುಳಿ ಮಾವಿನ ಮರ, ಲಂಕೇಶ್ ಪತ್ರಿಕೆ, ಹುಳಿಮಾವು ಮತ್ತು ನಾನು ಎಲ್ಲಾ ಓದಿದ ಮೇಲೆ ನನಗನ್ನಿಸಿದ್ದು ಹೀಗೆ.

    ಪ್ರತಿಕ್ರಿಯೆ
  20. ಜಿ.ಎನ್ ನಾಗರಾಜ್

    ಹುಳಿಮಾವಿನ ಮರ ಇಷ್ಟವಾಗುವುದು, ಆದರೆ ಅದು ಬಿಟ್ಟ ಹುಳಿಮಾವು ಇಷ್ಟವಾಗದಿರುವುದು ಇದು ಜೀವನದ ಒಂದು ಮೂಲ ವೈರುಧ್ಯವನ್ನು ಮುಂದಿಡುತ್ತದೆ. ನಿಮ್ಮಬರಹ ಪುಸ್ತಕವೊಂದನ್ನು ಇಷ್ಟೊಂದು ಆಕರ್ಷಕವಾಗಿ , ಅದರ ಒಳತಿರುಳನ್ನು, ಸರಳೀಕರಿಸದೆಯೂ ಅದರ ಕಾಂಪ್ಲೆಕ್ಸಿಟಿಗಳನ್ನು, ಪದರಗಳನ್ನು ಬಿಡಿಸಿ ಸುಲಿದ ಬಾಳೆಯ ಹಣ್ಣಿನಂದದಿ ‘ ಪ್ರೆಸೆಂಟ್ ‘ ಮಾಡಬಹುದು ಎಂಬುದನ್ನು ತೊರಿಸಿದೆ. ಆ ಕಲೆಯನ್ನು ದಕ್ಕಿಸಿಕೊಂಡ ನಿಮಗೆ ಅಭಿನಂದನೆಗಳು. ಇನ್ನು ಮೂಲ ಪ್ರಶ್ನೆಗೆ ಮರಳೋಣ. ಇದು ಪ್ರತಿಭೆ ಮತ್ತು ಪ್ರತಿಭಾವಂತನ ವೈಯುಕ್ತಿಕ ಬದುಕಿನ ನಡುವೆ ಇರುವ ಬಿರುಕಿನ ಪ್ರಶ್ನೆ ಅಲ್ಲವೇ ಅಲ್ಲ. ನಮ್ಮ ದೇಶದ ದಾಂಪತ್ಯದೊಳಗಿನ ಪಾಳೆಯಗಾರಿ ಮನಸ್ಸುಗಳು ಹಾಗೂ ಸಮಾಜ ಹೇರುವ ಪದ್ಧತಿ, ಕಟ್ಟಳೆಗಳ ನಡುವಣ ಗೊಂದಲ ತರುವ ಸಂಕಟಗಳ ಪ್ರಶ್ನೆ. ಭಾರತೀಯ ಜೀವನದ, ಅದರಲ್ಲಿಯೂ ಮಹಿಳೆಯರ ಜೀವನದ ಒಂದು ಪ್ರಮುಖ ಪ್ರಶ್ನೆ. ಆ ವ್ಯಕ್ತಿ ಪ್ರತಿಭಾವಂತನಿರಬಹುದು ಅಥವಾ ಅಲ್ಲದಿರಬಹುದು. ಈ ವಿಷಯವನ್ನು ವಿಷದವಾಗಿ ಚರ್ಚೆಗೊಡ್ಡುವ ಮೂಲಕ ಇಡೀ ಸಮಾಜ ಸ್ಪಷ್ಟತೆ ಮತ್ತು ಆ ಮೂಲಕ ಪರಿಹಾರವನ್ನು ಕಂಡುಕೊಳ್ಳಬೇಕಿದೆ.

    ಪ್ರತಿಕ್ರಿಯೆ
  21. lalitha siddabasavaiah

    ಸಂಧ್ಯಾ,ಆ ಕಥೆ ನಾನೂ ಓದಿದ್ದೇನೆ. ಅದು ದೂರದರ್ಶನ ದೆಹಲಿಯಿಂದ ಭಾರತದ ಪ್ರಮುಖ ಕಥೆಗಾರರ ಮಾಲಿಕೆಯಲ್ಲಿ ಚಿತ್ರೀಕರಣವೂ ಆಗಿ ಪ್ರಸಾರವಾಯ್ತು. ಸುಮಾರು ೨೦ ವರ್ಷದ ಹಿಂದೆ. ನಾನು ಈ ಕಥೆಯನ್ನು ಅನೇಕ ಸಂದರ್ಭಗಳಲ್ಲಿ
    ಅನೇಕರ ಮುಂದೆ ಕೋಟ್ ಮಾಡುತ್ತಾ ಇರುತ್ತೀನಿ. ಬೇರೊಬ್ಬ ಹೆಣ್ಣೊಂದಿಗೆ ಅಪ್ಪ ಸಿನಿಮ ನೋಡುತ್ತಿರುವುದನ್ನು ಕಂಡ ಮಗ ರೇಗಿ ಕೂಗಿ ರಾದ್ಧಾಂತ ಮಾಡಿದಾಗ ಅಮ್ಮ ಹೇಳುವ ಮಾತದು. ಆಕೆಯ ಘನತೆ ದೊಡ್ಡದು. ಆದರೆ ನಮ್ಮದೆ ಬದುಕಿನಲ್ಲಿ ಹೀಗಾದಾಗ ಈ ಘನತೆ ಉಳಿಸಿಕೊಳ್ಳುವ ಬಗ್ಗೆ ನನಗೆ -ಮುಖ್ಯವಾಗಿ ನನಗೆ -ಗ್ಯಾರಂಟಿ ಇಲ್ಲ !

    ಪ್ರತಿಕ್ರಿಯೆ
  22. sandhya rani

    ಮೇಡಂ ನೀವು ಹೇಳಿದ್ದು ನಿಜ ಅಕಸ್ಮಾತ್ ನಾನು ಇಂದಿರಾ ಅವರ ಸ್ಥಾನದಲ್ಲಿದ್ದಿದ್ದರೆ ಏನು ಮಾಡುತ್ತಿದ್ದೆನೋ ಗೊತ್ತಿಲ್ಲ! ಅದು ಹೈಪಾತಟಿಕಲ್! ಆದ್ರೆ ಲಂಕೇಶರ ಆ ಒಂದು ಗುಣದಿಂದಾಗಿ ಅವರ ಪ್ರತಿಭೆಯನ್ನು ಗೌರವಿಸದೆ ಇರುವುದು ನನಗೆ ಸಾಧ್ಯ ಇಲ್ಲ ಅಷ್ಟೆ!

    ಆದರೆ ನನಗೆ ತಿಳಿದ ಹಾಗೆ ಸಂಸಾರದಲ್ಲಿದ್ದುಕೊಂಡು ಒಂದು ಸ್ವತಂತ್ರ ವ್ಯಕ್ತಿತ್ವ ಜೀವನ ಹೇಗೆ ಬೆಳೆಸಿಕೊಂಡಿದ್ದರೋ ಹಾಗೆ ಇಂದಿರಾ ಅವರೂ ವ್ಯಕ್ತಿತ್ವ ಮತ್ತು ಬದುಕು ರೂಢಿಸಿಕೊಳ್ಳಲು ಯಾವುದೇ ಅಡೆ ತಡೆ ಒಡ್ಡಿರಲಿಲ್ಲ … ನನ್ನ ಮಟ್ಟಿಗೆ ಅದೂ ದೊಡ್ಡತನವೇ..

    ಪ್ರತಿಕ್ರಿಯೆ
  23. shobhavenkatesh

    nijavagalu olleya pustakagala relese functionge nimmanau karedare chennagiruthade.yestu chennagi pustakada bagge tilisidire.nimma anisikeya shylee chennagide sandhya.

    ಪ್ರತಿಕ್ರಿಯೆ
  24. ಜಿ.ಎನ್ ನಾಗರಾಜ್

    ನಿಮ್ಮಿಬ್ಬರ ಸಂವಾದ ಕೇವಲ ವೈಯುಕ್ತಿಕ ನೆಲೆಯಲ್ಲಿ ಲಂಕೇಶರು ಹಾಗೂ ಇಂದಿರಾ ರವರ ವರ್ತನೆಯನ್ನು ತೂಗಿ ನೋಡುತ್ತಿರುವಂತಿದೆ. ಪ್ರತಿಯೊಬ್ಬ ವ್ಯಕ್ತಿ ತನಗೆ ಬೇಕಾದ ತೀರ್ಮಾನವನ್ನು ಕೈಗೊಳ್ಳಲು ಪೂರ್ಣ ಸ್ವತಂತ್ರನು/ಳು.ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದು ಅವರ ವ್ಯಕ್ತಿತ್ವವನ್ನು/ಸ್ವಂತ ತೀರ್ಮಾನವನ್ನು ಮಾತ್ರ ಅವಲಂಬಿಸಿದೆ ಎಂಬಂತೆ ಈ ಚರ್ಚೆ ನಡೆದಿದೆ. ಅವರ ಜೀವನದ ಪರಿಸ್ಥಿತಿಗಳು ಹಾಗೂ ಸಮಾಜ ರೂಪಿಸಿದ ಚಿಂತನೆ, ಹಾಕಿದ ಕಟ್ಟಳೆಗಳು ಪ್ರತಿಯೊಬ್ಬರ ಮುಂದೆ ಲಭ್ಯವಿರುವ ಆಯ್ಕೆಗಳನ್ನು ಸೀಮಿತಗೊಳಿಸುತ್ತವೆ.ಆ ಮಿತಿಯಲ್ಲಿ ಮಾತ್ರ ಅವರ ಅಥವಾ ಯಾರ ವ್ಯಕ್ತಿತ್ವವೂ ಆಯ್ಕೆಮಾಡಿಕೊಳ್ಳಲು ಸಾಧ್ಯ.ನನ್ನ ಮುಂದೆ ಈ ಕ್ಷಣದಲ್ಲಿ ಎರಡೂ ಪುಸ್ತಕಗಳೂ ಇಲ್ಲ. ಆದ್ದರಿಂದ ಅವರ ನಿರ್ದಿಷ್ಟ ಸಂದರ್ಭದ ಆಧಾರದ ಮೇಲೆ ನನ್ನ ಪ್ರತಿಕ್ರಿಯೆ ನೀಡುವುದಾಗುತ್ತಿಲ್ಲ.ಆದರೆ ನಮ್ಮ ದೇಶದಲ್ಲಿ ಮದುವೆ ಮತ್ತು ಬಿಡುಗಡೆ ಎರಡರ ಮೇಲೂ ಇರುವ ನಿರ್ಬಂಧಗಳು ಇಂತಹ ಸನ್ನಿವೇಶಗಳನ್ನು ವ್ಯಕ್ತಿಗಳ ಮೇಲೆ ಹೇರುತ್ತಿರುತ್ತವೆ.

    ಪ್ರತಿಕ್ರಿಯೆ
  25. ಸುಗುಣಮಹೇಶ್

    ನನ್ನ ಮುಂದಿನ ಪುಸ್ತಕ ಇದೇ.. ನಿಮ್ಮ ಬರವಣಿಗೆ ಶೈಲಿ ತುಂಬಾ ಚೆನ್ನಾಗಿದೆ.

    ಪ್ರತಿಕ್ರಿಯೆ
  26. M.A.Sriranga

    ಸಂಧ್ಯಾರಾಣಿ ಅವರಿಗೆ– ಹಿಂದೆ ಪ್ರಕಟವಾಗಿದ್ದ ತಮ್ಮ ಲೇಖನವನ್ನು ಈ ದಿನ ಓದಿದೆ. ದಾಂಪತ್ಯ/ದಾಂಪತ್ಯರಹಿತವಾದ ಗಂಡು-ಹೆಣ್ಣಿನ ನಡುವಿನ ಸಂಬಂಧಗಳ ನೈತಿಕ ಪ್ರಶ್ನೆಗಳು/ಸಮಸ್ಯೆಗಳು ಅವರಿಬ್ಬರಲ್ಲಿ ಯಾರಾದರೊಬ್ಬರ ಸಾಹಿತ್ಯ ಸಾಂಸ್ಕೃತಿಕ ಅಥವಾ ಇನ್ನ್ಯಾವುದೇ ಕ್ಷೇತ್ರದಲ್ಲಿನ ಅವರ ಹಿರಿಮೆ,ಹೆಸರು ಪ್ರಸಿದ್ಧಿ ಇತ್ಯಾದಿಗಳ ಮೇಲೆ ಅವಲಂಬಿತವಾಗಿದೆ ಎಂದು ಭಾವಿಸುವುದು ಎಷ್ಟರಮಟ್ಟಿಗೆ ಸರಿ?

    ಪ್ರತಿಕ್ರಿಯೆ
  27. mmshaik

    Enu illadiddaru kelavaru oNa badukannu pritisalu badukuttaralla adu innuuu kasta..!!!!!!!!!!!!!!

    ಪ್ರತಿಕ್ರಿಯೆ
  28. ಲಲಿತಾ ಸಿದ್ಧಬಸವಯ್ಯ

    ಮತ್ತೆ ಲೇಖನ ಓದಿ ಮತ್ತೆ ಪ್ರತಿಕ್ರಿಯೆಗಳ ಓದುತ್ತಿದ್ದರೆ ಸಂಧ್ಯಾ ಮತ್ತೆ ಮತ್ಪೆ ಇಷ್ಟ ಆಗುತ್ತೀರಲ್ಲ ನೀವು,,,,,,, ಹುಳಿಮಾವಿನ ಮರ ಅಲ್ಲ , ನೀವು.

    ಪ್ರತಿಕ್ರಿಯೆ
  29. umavallish

    ನನ್ನ ”ಪ್ರೀತಿಯ” ಸಂದ್ಯಾಗೆ ಮೊದಲು ಮಹಿಳಾ ದಿನಾಚರಣೆಯ ಶುಭಾಶಯಗಳು. ನಿಮ್ಮ ಲೇಖನ ಗಳ, ವಸ್ತು, ವಿಷಯ, ವ್ಯಕ್ತಿ , ಏನೇ ಇರಲಿ ಆದರೆ ಅದರ ನಿರೂಪಣೆ ನೋಡುವ ದೃಷ್ಟಿಗೆ ನೀವು ಕೊಡುವ ಅಕ್ಷರ ರೂಪ ನನ್ನನ್ನು ಸಂದ್ಯಾ ಬಗ್ಗೆ, ಪದೇ ಪದೇ ಮೆಚ್ಚುವಂತೆ ಮಾಡುತ್ತದೆ. ಚೆನ್ನಾಗಿದೆ ಸಂದ್ಯಾ.

    ಪ್ರತಿಕ್ರಿಯೆ
  30. Sangeeta Shenoy

    ಇದು ನಾನು ಬರೆದ ವಿಮರ್ಶೆ. 2013 ರಲ್ಲಿ. ಒಪ್ಪಿಸಿಕೊಳ್ಳಿ.
    ನಿಮ್ಮ ವಿಮರ್ಶೆ ಅದ್ಭುತವಾಗಿದೆ.
    My dear friends,
    Just finished reading ‘huLimavu mattu nanu’ by Indira Lankesh, Lankesh’s wife. First thing I noticed was her Shimoga kannada. She is a 1943 born. So she is 14 years older than me. My big cousin’s age. I could relate to her on so many levels. She has written about her relationship with Lankesh. That how after the first shock of facing his infidelity.. culminated into a mom dad’s relationship for their children. She did not leave the house. She started her own business and became financially independent. Even then she didn’t leave him. Though the marital relationship had gone for a toss.. the intimacy had ended.. she did not leave her business or house. She didn’t resort to revenge or finding a new relationship to boost her ego. She has not talked about her physical relationship with her husband anywhere in the book. She has maintained a dignified silence which I think speaks of her character. She maintained her responsibilities and duties even with his parents, and kids no matter what. She never used his name or influence to promote her well being or to establish herself. Even Lankesh was proud of her about this fact. She helped him whenever he needed her support. She didn’t do anything illegal or scandalous things which were against his principles or which might have harmed his reputation. She had no problem overcoming such temptations. Even when she looked like she was one very ordinary housewife.. she was not. On the contrary I had read so much about Lankesh’s colorful life and about his flings, affairs.. somehow.. his image fell flat and looked so ordinary. She is not blaming him anywhere. She is not a fatalist. She didn’t lie down low or receive whatever fate handed her. She went ahead and did something about her life to keep up her self esteem, self respect, dignity, identity and morale. Over the years the relationship became more caring and respectful towards each other. He built his house and she had her own room in his house like her three children. She helped him build his kitchen room. When he bought his own land to grow an orchard and a farm.. though she was there through out the process, she didnt impose her wishes or rights. But when he transferred his 11 acres of land to his son.. she bought her own 5 acre land and created her own farmhouse paradise.. She also built her own house in the city. Didn’t even tell him about it.. let alone ask for his help. That only made him more proud. When she offered him her liver.. he declined and said.. “I have already received a lot more than I intend from her. I don’t want to take her body part too”. That is a huge compliment to her according to me. And I cant relate to her on so many other levels. Only thing I could feel was she was a bigger than life personality. On the contrary he looked very ordinary and very normal. Not bigger than life image he used to be in my mind all these years. Punishing somebody is only one option of the many options we have. It is a conscious decision not to punish somebody. She is not being magnanimous about it. She is not boasting about it. She just could not leave him. If that is not love what is? She was not sacrificing or anything. Instead she chose herself to rise above the situation and spent her years to make herself strong and independent. Hats off to her. Her spontaneous, natural sense of humor is awesome. Being a celebrity’s wife is not easy. I should know.
    Sangeeta Shenoy. 21.03.13.

    ಪ್ರತಿಕ್ರಿಯೆ
  31. Ramesh.chikkaballapur

    Madam super article.I am also lankesh abhimani since 1982. I am really depresses when they passed on 25th Jan 2000. Whatever may be complaints against our great Lankesh Sir.still I love him.until my death

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: