ಸಂಧ್ಯಾರಾಣಿ ಕಾಲಂ : ಹೆಣ್ತನಕ್ಕೆ ಎಷ್ಟೆಲ್ಲಾ ಆಯಾಮಗಳು…


’ಉದ್ದ ಲಂಗದಂತಹ ಲಾಂಗ್ ಸ್ಕರ್ಟ್ ಹಾಕೋಕೆ ನನಗೆ ಇಷ್ಟ ಅಕ್ಕ, ಆದರೆ ಮಗನಿಗೆ ಇಷ್ಟ ಆಗಲ್ಲ, ಆಗ ಅಪ್ಪ, ಈಗ ಮಗ ….’ ಅಂತ ನಿನ್ನೆ ಗೆಳತಿಯೊಬ್ಬಳು ಬೇಸರದ ದನಿಯಲ್ಲಿ ಹೇಳುತ್ತಿದ್ದಳು. ೩೦ ರ ಹೆಣ್ಣು, ಸ್ವಾವಲಂಬಿ, ಪ್ರತಿಭಾವಂತೆ, ಬೇಕಾಗಿದ್ದು ಸಾಧಿಸುವವಳು. ಅವಳು ಈ ಮಾತು ಹೇಳಿದಾಗ, ನಕ್ಕು ’ನಾವು ಮಾತು ಕಲಿಸಿದ ಮಕ್ಕಳು ಈಗ ಆ ಮಾತನ್ನು ನಮ್ಮನ್ನು ತಿದ್ದಲು ಬಳಸುತ್ತಾರೆ ನೋಡು’ ಎಂದು ನಕ್ಕಿದ್ದೆನಾದರೂ ಯಾಕೋ ಆ ಮಾತು ಮನಸನ್ನು ಕೊರೆಯುತ್ತಲೇ ಇದೆ.
ನನ್ನ ಬರಹಗಳನ್ನು ಪ್ರೀತಿಯಿಂದ ಓದುವ, ಅಷ್ಟೇ ಪ್ರೀತಿಯಿಂದ ಪ್ರತಿಕ್ರಯಿಸುವ, ಲಲಿತಾ ಸಿದ್ದಬಸವಯ್ಯ ಅವರು ಒಮ್ಮೆ ಬರೆದಿದ್ದರು, ’ಪ್ರಿಯ ಸಂಧ್ಯಾ , …. ಹೀಗೆಯೆ ಅಲಂಕಾರ ಮಾಡಿಕೊಳ್ಳುವ ಹೆಣ್ಣುಮಕ್ಕಳ ಬಗ್ಗೆಯೂ ಅಸಹನೆಯಿದೆ. ಅವಳು ತುಂಬಾ ಫ್ಯಾಷನ್ನು ಅಂತ ಹೀಯಾಳಿಸಿ ಲಕ್ಷಣವಾಗಿ ಅಲಂಕರಿಸಿಕೊಳ್ಳುವ ಕಲೆಯಿರುವ ಹೆಣ್ಣುಮಕ್ಕಳ ಚೇತೋಹಾರಿ ಗುಣವನ್ನೆ ಅವಗುಣವನ್ನಾಗಿ ಮಾಡಿಬಿಡುವ ಧ್ವಂಸಕ ಬುದ್ಧಿಯೂ ಹಲವಾರು ಜನದಲ್ಲಿದೆ. ಕಪಿಗಳಂತಿರುವುದು ಮುಗ್ಧತೆಯ ಒಂದು ಭಾಗ ಅನ್ನೋ ಮನೋಭಾವವೂ ಇದೆ. ನಮ್ಮ ಸ್ಕೂಲು ದಿನಗಳಲ್ಲಿ ಮಂಗನಂತಿರುತ್ತಿದ್ದ ನಾವು ಇಂಥಾ ಮಾತು ಕೇಳಿ ನಾವು ಬಹಾಳ ಗ್ರೇಟ್ ಅಂತ ತಿಳ್ಕೊಂಡು ನಮ್ಮೊಂದಿಗೆ ಓದುತ್ತಿದ್ದ ಲಕ್ಷಣವಾಗಿ ಶಿಸ್ತಾಗಿ ಶಾಲೆಗೆ ಬರುತ್ತಿದ್ದ ಚಂದ್ರಾ ಎನ್ನುವ ಹುಡುಗಿಯನ್ನು ಸುಮ್ಮ ಸುಮ್ಮನೆ ಆಡಿಕೊಂಡು ದೂರ ಇಟ್ಟಿದ್ದೆವು.ವಾಸ್ತವವಾಗಿ ತುಂಬ ಬುದ್ಧಿವಂತೆ ಅವಳು. ಈಗ ಅಷ್ಟಿಲ್ಲವಾದರೂ ಲಕ್ಷಣವಾಗಿ ಅಲಂಕರಿಸಿಕೊಳ್ಳುವ ಹೆಣ್ಣುಮಕ್ಕಳ ಬಗ್ಗೆ ಒಂದು ಅಸಹನೆಯಂತು ಒಳಗೊಳಗೆ ಇರುತ್ತದೆ. ಸಂಧ್ಯಾ ಇದರ ಬಗ್ಗೆಯೂ ಬರೆಯಿರಿ….’, ಆಗಿನಿಂದ ಈ ಮಾತು ನನ್ನ ಮನಸ್ಸಿನಲ್ಲಿ ಅನುರಣನಗೊಳ್ಳುತ್ತಲೇ ಇತ್ತು. ನಿನ್ನೆ ನನ್ನ ಗೆಳತಿಯ ಮಾತು ಕೇಳಿದಾಗ ಆ ಮಾತು ಮತ್ತೆ ನೆನಪಾಯಿತು.
’ಅಲಂಕಾರ’ ಅಂದರೇನೆ ಯಾಕೆ ನಾವು ಒಂದು ಸಣ್ಣ ವ್ಯಂಗ್ಯದ ಎಳೆಯಲ್ಲಿ ನೋಡುತ್ತೇವೆ? ಅಲಂಕಾರ ಎಂದರೆ ನಮ್ಮನ್ನು ನಾವು ಮಟ್ಟಸವಾಗಿ, ನೀಟಾಗಿ, ಪ್ರೆಸೆಂಟಬಲ್ ಆಗಿ ಇಟ್ಟು ಕೊಳ್ಳುವ ರೀತಿ ಅಲ್ಲವಾ? ಎಲ್ಲಾ ಸುಖಕ್ಕೂ ಒಂದು ಗಿಲ್ಟ್ ಮೆತ್ತಿಕೊಳ್ಳುವ ಹಾಗೆ, ಎಲ್ಲಾ ಸೌಂದರ್ಯಕ್ಕೂ ಯಾಕೆ ಒಂದು ನಿರಾಕರಣೆ, ಒಂದು ಅಸಹನೆ ಇರಬೇಕು? ಒಮ್ಮೆ ಕಲ್ಪಿಸಿಕೊಳ್ಳಿ, ಅಜ್ಜಿ ಹಾಕುತ್ತಿದ್ದ ಗಂಟು, ಅದರ ತುದಿಗೊಂದು ಜಡೆ ಹೂವು, ಓಲೆ, ಜುಮ್ಕಿ, ಬುಗುಡಿ, ಮೂಗಿಗೆ ಫಳ ಫಳ ಹೊಳೆವ ನತ್ತು, ಕೆನ್ನೆಯಲ್ಲಿ ಅರಸಿನ, ಹಣೆಯಲ್ಲಿ ನಗುವ ಕುಂಕುಮ, ಮಾಟಿ, ಕೆನ್ನೆ ಸರಪಳಿ, ತುಟಿ, ನಾಲಿಗೆ ಕೆಂಪು ಕೆಂಪಾಗಿಸುತ್ತಿದ್ದ, ಹತ್ತಿರ ಬಂದರೆ ಘಂ ಎನ್ನಿಸುತ್ತಿದ್ದ ತಾಂಬೂಲ, ಮಲ್ಲಿಗೆ, ಕತ್ತಿಗೆ ಸರ, ತೋಳಬಂದಿ, ಸೊಂಟಕ್ಕೆ ಡಾಬು, ಕಾಲಿಗೆ ಗೆಜ್ಜೆ – ಕಡಗ ….. ಅರೆ ಇವೆಲ್ಲಾ ಅಲಂಕಾರವೇ ಅಲ್ಲವೇ? ಕೇವಲ ಹಳೆಯಕಾಲದ್ದು ಎನ್ನುವ ಕಾರಣಕ್ಕೆ ಅದಕ್ಕೆ ಸಂಪ್ರದಾಯದ ಅನುಮೋದನೆ ಸಿಕ್ಕಿಬಿಡುತ್ತದಾ, ಮತ್ತು ಹೊಸತು ಎನ್ನುವ ಕಾಲಕ್ಕೆ ಈಗಿನ ಅಲಂಕಾರ ಪೂಜೆಗೆ ಸಲ್ಲುವುದಿಲ್ಲವಾ ಎನ್ನುವ ಒಂದು ಕಿಡಿಗೇಡಿ ಆಲೋಚನೆ ಸಹ ಬಂತು ಮನಸ್ಸಿಗೆ.
ಮನಸ್ಸಿಗೆ ಖುಷಿಯೆನಿಸುವಂತೆ ಕಾಣುವುದು, ಹಾಗೆ ಅಲಂಕರಿಸಿಕೊಳ್ಳುವುದನ್ನು ಯಾಕೆ ನಾವು ಕಡೆಗಣ್ಣಿನಿಂದ ನೋಡುತ್ತೇವೆ. ಮನೆ, ಆಫೀಸು, ಕೆಲಸ ಮಾಡುವ ಮೇಜು, ನಮ್ಮ ಕಂಪ್ಯೂಟರು ಇವೆಲ್ಲವನ್ನೂ ಚೆನ್ನಾಗಿಟ್ಟುಕೊಳ್ಳುವುದು ಒಂದು ಗುಣವಾಗಿ, ಮಾದರಿಯಾಗಿ ಕಂಡರೆ ನಮ್ಮನ್ನು ನಾವು ಸುಂದರವಾಗಿ ಕಾಣುವಂತೆ ಇಟ್ಟುಕೊಂಡಾಗ ಯಾಕೆ ಅದು ಒಂದು ಚುಡಾಯಿಸುವಿಕೆಗೆ, ಒಮ್ಮೊಮ್ಮೆ ಹೀಗಳೆಯುವಿಕೆಗೆ ಕಾರಣವಾಗಿ ಬಿಡುತ್ತದೆ?
ಕಣ್ಣಿಗೆ ಕಾಡಿಗೆ ಹಚ್ಚುವುದು ಎಂದರೆ ಪರಮ ಪ್ರೀತಿ ನನಗೆ, ಕಣ್ಣಿಗೆ ಕಾಡಿಗೆ ಹಚ್ಚದ ದಿನ ನನ್ನ ಕಣ್ಣು ನನಗೇ ಅತ್ತಂತೆ ಕಾಣುತ್ತದೆ, ಇದು ಶಾಲಾ ದಿನಗಳಿಂದಲೇ ಬಂದ ಹುಚ್ಚು! ಒಮ್ಮೆ ಶಾಲೆಗೆ ತಡವಾಗಿದ್ದರೂ ಕನ್ನಡಿ ಮುಂದೆ ನಿಂತು ಅವಸರವಸರವಾಗಿ ಕಾಡಿಗೆ ಹಚ್ಚಿಕೊಳ್ಳುತ್ತಿದ್ದವಳನ್ನು ಅಮ್ಮ ಬೈದಿದ್ದರು, ’ಓದೋ ಹುಡುಗಿ ನೀನು, ಈ ಅಲಂಕಾರ ಎಲ್ಲಾ ಬೇಕಾ, ಒಳ್ಳೇದಲ್ಲ’ ಇದು ಅಂತ. ಆಗ ಅಲ್ಲೇ ಪೇಪರ್ ಓದುತ್ತಿದ್ದ ಅಪ್ಪ ಥಟ್ಟನೆ ಅಂದಿದ್ದರು, ’ನೋಡಿದರೆ ಮನಸ್ಸಿಗೆ ನೆಮ್ಮದಿ ಆಗುವ ಹಾಗೆ, ಸಂತೋಷವಾಗುವ ಹಾಗೆ ಇರುವುದು ಅಂದರೆ ಅದು ಅಪರಾಧ ಅಲ್ಲ, ಅದಕ್ಕೆ ಮಕ್ಕಳನ್ನು ಬೈಬೇಡ ನೀನು’ ಅಂತ, ತುಂಬಾ ಸಣ್ಣ ಮಾತು, ಆದರೆ ಇಂದಿಗೂ ಅದನ್ನು ನನಗೆ ಮರೆಯಲಾಗಿಲ್ಲ. ಅಷ್ಟೇ ಅಲ್ಲ ೪೦ ದಾಟಿದ ಅಮ್ಮನ ಕೂದಲು ನೆರೆತಾಗ ಮೊದಲ ಸಲ ಬಣ್ಣ ತಂದುಕೊಟ್ಟು ’ಹಚ್ಚಿಕೋ’ ಅಂತ ಬಲವಂತ ಮಾಡಿದವರು ಅಪ್ಪ. ಇಂದಿಗೂ, ಇಷ್ಟು ವರ್ಷಗಳ ನಂತರವೂ ಸಹ ಅಪ್ಪನ ಮಾತು ನನಗೆ ಇನ್ನಿಲ್ಲದ ಧೈರ್ಯ, ಕಾನ್ಫಿಡೆನ್ಸ್ ಕೊಡುತ್ತದೆ.

ತಾನು ಚೆನ್ನಾಗಿ ಕಾಣಬೇಕು ಅನ್ನುವುದು ಪ್ರತಿಯೊಬ್ಬರಲ್ಲೂ ಇರುವ ಆಸೆ, ಗಂಡಾಗಲೀ, ಹೆಣ್ಣಾಗಲಿ. ಕೆಲವರು ಅದಕ್ಕಾಗಿ ಪ್ರಯತ್ನ ಪಡಬಹುದು, ಕೆಲವರು ಉದಾಸೀನ ಮಾಡಬಹುದು, ಆದರೆ ಆಸೆ ಅಂತೂ ಇರುತ್ತದೆ. ನನ್ನ ಗೆಳತಿಯ ಅಮ್ಮ ಒಬ್ಬರು ಕೂದಲಿಗೆ ಬಣ್ಣ ಹಾಕಿಕೊಳ್ಳಲೇ ಅಂದಾಗ ಅವರ ಮನೆಯಲ್ಲಿ ದೊಡ್ಡ ವಿರೋಧವೇ ಎದುರಾಗಿತ್ತಂತೆ. ೪೦ – ೫೦ ಪ್ರಾಯದ ಒಬ್ಬ ಹೆಣ್ಣು ಮಗಳು ತನ್ನ ನೆರೆತ ಕೂದಲಿಗೆ ಬಣ್ಣ ಹಚ್ಚಿಕೊಳ್ಳಲೂ ಒಪ್ಪಿಗೆ ಕೇಳಬೇಕಾ? ಆ ಒಂದು ಸಣ್ಣ ಖುಷಿಗೂ ಅಮ್ಮನನ್ನು ಎರವಾಗಿಸಬೇಕ? ನಮ್ಮತನ, ನಮ್ಮ ಸ್ಪೇಸ್, ನಮ್ಮ ಆಲೋಚನೆ, ನಮ್ಮ ಸ್ವಾತಂತ್ರ್ಯ, ನಮ್ಮ ಅಭಿವ್ಯಕ್ತಿ …. ಹೀಗೆ ಇಷ್ಟೆಲ್ಲಾ ’ನಮ್ಮ’ ತನಗಳನ್ನು ಸಾಧಿಸಿಕೊಳ್ಳುವ ನಾವು ಅವರ ಆ ಒಂದು ಸಣ್ಣ ಆಸೆಯ ವಿಷಯ ಬಂದಾಗ ಅದು ಹೇಗೆ ಅಷ್ಟು ಸಂಪ್ರದಾಯವಾದಿಗಳಾಗಿಬಿಡುತ್ತೇವೆ?
ಇದು ಅವರೊಬ್ಬರ ಸಮಸ್ಯೆ ಅಲ್ಲ. ’ಮೊದಮೊದಲು ಮಗ ನನ್ನ ಬಟ್ಟೆ ಬರೆ, ಅಲಂಕಾರ ಚೆನ್ನಾಗಿದೆ ಅಂದಾಗ ಖುಷಿ ಆಗ್ತಾ ಇತ್ತು, ಆದರೆ ಬರ್ತಾ ಬರ್ತಾ ಅವನ ದನಿಯಲ್ಲಿ ನನ್ನ ಅಪ್ಪನ ದನಿ ಕೇಳಿಸತೊಡಗಿ ಒಂದು ಹೆದರಿಕೆ ಆಯ್ತು, ಆಮೇಲೆ ನಿಧಾನವಾಗಿ ಇದು ನನ್ನ ಆಸೆ, ನನ್ನ ಆಯ್ಕೆ ಅನ್ನುವುದನ್ನು ಮಗನಿಗೆ ಮನವರಿಕೆ ಮಾಡಿಕೊಟ್ಟೆ’ ಅಂತ ಇನ್ನೊಬ್ಬ ಗೆಳತಿ ಅಂದಿದ್ದಳು.
ಇಲ್ಲಿ ಪ್ರಶ್ನೆ ಇರುವುದು ಕೇವಲ ಅಲಂಕಾರದ್ದಲ್ಲ. ಅದಕ್ಕೂ ಮೀರಿ ಪ್ರಶ್ನೆ ಇರುವುದು ಹೆಣ್ಣಿನ ಹೆಣ್ತನದ್ದು. ಹೆಣ್ಣಿನ ಹೆಣ್ತನ ಒಂದು ಸಂಭ್ರಮಿಸಬೇಕಾದ ವಿಷಯವಾ ಅಥವಾ ಅವಮಾನದಲ್ಲಿ ಮುಚ್ಚಿಟ್ಟುಕೊಳ್ಳಬೇಕಾದ ವಿಷಯವಾ ಅಂತ. ಹೈಸ್ಕೂಲು ತಲುಪಿದಾಗಲೇ ಬೆನ್ನು ಬಗ್ಗಿಸಿ ನಡೆಯುವುದನ್ನು ಹೇಳಿಕೊಡದೆಯೇ ಕಲಿತವರು ನಾವು. ಚೆಂದ ಕಾಣುವಂತಹ ಅಲಂಕಾರ ಮಾಡಿಕೊಂಡರೆ ತಪ್ಪು, ಆಕರ್ಷಕವಾಗಿ ಕಂಡರೆ ತಪ್ಪು, ಜೋರಾಗಿ ಮಾತನಾಡಿದರೆ ತಪ್ಪು, ಗಟ್ಟಿ ದನಿಯಲ್ಲಿ ನಕ್ಕರೆ ತಪ್ಪು …. ಈ ತಪ್ಪುಗಳ, ಬೇಡಗಳ ಪಂಜರದಿಂದ ಈಗೀಗ ಹೊರಗೆ ಬರುತ್ತಿದ್ದೇವೆ. ಈಗ ಆಕರ್ಷಕವಾಗಿ ಕಾಣಬೇಕು ಎಂದು ಅಂದುಕೊಳ್ಳುವುದಕ್ಕೂ ಒಂದು ಎಕ್ಸ್ ಪೈರಿ ಡೇಟ್ ಇದೆ ಎನ್ನುವುದನ್ನು ಹೇಗೆ ಒಪ್ಪಲಿ ನಾನು?
ಒಮ್ಮೆ ನನ್ನ ಕಿರಿಯ ಗೆಳತಿ ಒಬ್ಬಳು ನರೆತ ತಲೆಗೂದಲಿಗೆ ಬಣ್ಣ ಹಚ್ಚಿಕೊಳ್ಳುವವರನ್ನು ವ್ಯಂಗ್ಯ ಮಾಡಿ, you should age gracefully ಅಂದಿದ್ದಳು. ಆಗ ನಗುತ್ತಾ ಹೇಳಿದ್ದೆ, ’ಮೊದಲು ಈ ಮಾತನ್ನು ನೀನು ಇನ್ನು ೧೫ ವರ್ಷಗಳಾದ ಮೇಲೂ ಸಹ ಹೇಳಬಲ್ಲೆಯಾ ಎಂದು ಯೋಚಿಸು, ಎರಡನೆಯದಾಗಿ, ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದು ಗ್ರೇಸ್ ಫುಲ್ ಅಲ್ಲ ಅಂತ ನಿನಗೆ ಹೇಳಿದ್ದು ಯಾರು?’ ಅಂತ. ವಯಸ್ಸಿಗೆ, ದೇಹದ ಆಕಾರಕ್ಕೆ, ಸಂದರ್ಭಕ್ಕೆ ಒಪ್ಪದ ಬಟ್ಟೆ ತೊಟ್ಟರೆ ಅದು ಹಾಸ್ಯಾಸ್ಪದ ಆಗಬಹುದು, ಆದರೆ ವಯಸ್ಸಾದ ಮೇಲೆ ಚೆನ್ನಾಗಿ ಕಾಣುವುದೇ ತಪ್ಪು ಅಂದರೆ ಹೇಗೆ?!
ಇಲ್ಲಿ ಇನ್ನೊಂದು ತಮಾಶೆ ಗಮನಿಸಿ. ವಯಸ್ಸಾದ ಒಬ್ಬ ಗಂಡಸು ತನ್ನನ್ನು ತಾನು ನೋಡಲು ಮೆಚ್ಚಿಗೆಯಾಗುವಂತೆ ಇಟ್ಟುಕೊಂಡಿದ್ದರೆ ಯಾರಾದರೂ ಟೀಕೆ ಮಾಡುವುದನ್ನ ಕಂಡಿದ್ದೀರಾ?! ೬೦ ರ ಅಜ್ಜ, ದೇಹವನ್ನು ನೀಟಾಗಿಟ್ಟುಕೊಂಡು, ಇಸ್ತ್ರಿ ಮಾಡಿದ ಬಟ್ಟೆಯಲ್ಲಿ, ನೀಟಾಗಿ ಕತ್ತರಿಸಿದ ಉಗುರುಗಳು, ಟ್ರಿಮ್ ಆದ ದಾಡಿ, ಮೀಸೆಗಳೊಡನೆ ಕಂಡರೆ ’ನೋಡು ಈ ವಯಸ್ಸಲ್ಲಿ ಎಷ್ಟು ಹ್ಯಾಂಡ್ಸಂ’ ಅನ್ನಿಸುವ ನಮಗೆ, ಅದೇ ಆ ವಯಸ್ಸಿನ ಹೆಣ್ಣು ಹಾಗೆ ಚೇತೋಹಾರಿಯಾಗಿ ಇದ್ದರೆ ಯಾಕೆ ಒಪ್ಪಿಕೊಳ್ಳಲು ಕಸಿವಿಸಿ ಆಗಬೇಕು? ಹೆಣ್ತನ ಅಂದರೆ ಯಾಕೆ ನಾಚಿಕೆ ಅನ್ನಿಸ ಬೇಕು? ಹೆಣ್ತನದ ಬಗ್ಗೆ ಯಾಕೆ ಅಸಹನೆ ಆಗಬೇಕು?

ಹೆಣ್ಣನ್ನು ಕಂಡರೆ ಯಾಕೆ ಪ್ರತಿಯೊಬ್ಬರ ಮನಸ್ಸಿನಲ್ಲೂ ಒಬ್ಬ ನ್ಯಾಯಾಧೀಶ ಪೀಠ ಹಾಕಿ ಕುಳಿತುಬಿಡುತ್ತಾನೆ? ಯಾಕೆ ನ್ಯಾಯ ದಂಡ ಕೈಲಿ ಹಿಡಿದು, Dos and Donts ಗಳ ಪಟ್ಟಿ ಬರೆಯಲು ಶುರು ಮಾಡುತ್ತಾನೆ? ಎದಿರಾಗುವ ಪ್ರತಿಯೊಬ್ಬರಿಗೂ, ಹಿರಿಯರಿಗೂ, ಕಿರಿಯರಿಗೂ, ಅಪ್ಪನಿಗೆ, ಅಣ್ಣನಿಗೆ, ಗಂಡನಿಗೆ, ಕಡೆಗೆ ಮಗನಿಗೂ ಸಹ ಹೆಣ್ಣನ್ನು ನಿರ್ದೇಶಿಸುವ ದೈವದತ್ತ ಅಧಿಕಾರ ಇದೆ ಅಂತ ಯಾಕನ್ನಿಸಿಬಿಡುತ್ತದೆ.
ನನಗೆ ಭಾರತಿ ಸುತರ ಎಡಕಲ್ಲು ಗುಡ್ಡ ಕಾದಂಬರಿ ನೆನಪಾಯಿತು, ಅದನ್ನು ಪುಟ್ಟಣ್ಣನವರು ತಮ್ಮ ದೃಷ್ಟಿಕೋನದಲ್ಲಿ ಮಾಡಿದ ಚಿತ್ರ ನೆನಪಾಯಿತು. ಓದಿ, ನೋಡಿ ಸುಮಾರು ದಿನಗಳಾಗಿದ್ದರು, ಚಿತ್ರದ ಹಂದರ ನೆನಪಿನಲ್ಲಿದೆ. ಯುದ್ಧಕ್ಕೆ ಹೋಗಿ ಕಾಲು ಕಳೆದುಕೊಂಡು ಆ ಮೂಲಕ ತನ್ನ ಪುರುಷತ್ವವನ್ನೂ ಕಳೆದುಕೊಂಡ ಮೇಜರ್, ಆತನ ತುಂಬು ಯೌವನದ ಮಡದಿ. ಗಂಡನಿಂದ ಸಿಗಬೇಕಾದ ಸುಖ ಸಿಗುತ್ತಿಲ್ಲ ಎಂದು ತೊಳಲಾಡುವ, ತನ್ನನ್ನು ತಾನು ನಿಯಂತ್ರಿಸಿಕೊಳ್ಳಬೇಕೆಂದುಕೊಂಡರೂ ಸಾಧ್ಯವಾಗದೆ ಇನ್ನೊಬ್ಬ ಗಂಡಸಿನ ಸಹವಾಸ ಮಾಡುವ ಮಾಧವಿ. ಪತ್ನಿಯಾಗಿ, ಮನೆಯ ಒಡತಿಯಾಗಿ ಎಲ್ಲಾ ಕರ್ತವ್ಯ ನಿರ್ವಹಿಸುತ್ತಾಳೆ, ಆ ಮಟ್ಟಿಗೆ ಮಾದರಿ ಹೆಣ್ಣು, ಅಂತಹ ಸ್ಥಿತಿಯಲ್ಲಿಯೂ ಗಂಡನನ್ನು ಬಿಟ್ಟುಹೋಗದೆ ಜೊತೆಯಲ್ಲಿ ನಿಲ್ಲುತ್ತಾಳೆ. ಆದರೆ ನಂಜುಂಡ ಕೈ ಚಾಚಿದಾಗ ಕೈ ಕಟ್ಟಿ ದೂರ ಸರಿಯಲಾಗದೆ ಅವನ ಬಳಿಸಾರುತ್ತಾಳೆ. ಅವಳ ತಂಗಿ ದೇವಕಿ. ಭಾರತಿ ಸುತರ ಕಾದಂಬರಿಯಲ್ಲಿ ಕೇವಲ ತಂಗಿಯಾಗಿ ಬರುವ ದೇವಕಿ, ಪುಟ್ಟಣ್ಣನವರ ಚಿತ್ರದಲ್ಲಿ ಮಾಧವಿಯ ಪಾತ್ರಕ್ಕೆ ಎದುರಾಗಿ, ಪುಟ್ಟಣ್ಣನವರ ಮಾದರೀ ಸ್ತ್ರೀಯಾಗಿ ಚಿತ್ರಗೊಳ್ಳುತ್ತಾಳೆ. ದೇವಕಿ ಪಾತ್ರದಲ್ಲಿದ್ದ ಆರತಿಯ ಪಾತ್ರವನ್ನು ದೈವತ್ವಕ್ಕೇರಿಸುವ ಭರದಲ್ಲಿ, ಮಾಧವಿ ಪಾತ್ರಕ್ಕೆ ಪುಟ್ಟಣ್ಣನವರು ಅನ್ಯಾಯ ಮಾಡಿದರೇನೋ ಅನ್ನಿಸಿತ್ತು. ಇಲ್ಲಿ ಪ್ರಶ್ನೆ ಮಾಧವಿ ಮಾಡಿದ್ದು ತಪ್ಪು ಅಥವಾ ಸರಿ ಅನ್ನುವುದಲ್ಲ. ಅದು ತಪ್ಪ, ಸರಿಯಾ ಎನ್ನುವ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರೇಕ್ಷಕರಿಗೆ ಪುಟ್ಟಣ್ಣನವರು ಅವಕಾಶವನ್ನೇ ಕೊಡಲಿಲ್ಲ ಎನ್ನುವುದು. ಒಬ್ಬ ನಿರ್ದೇಶಕರಾಗುವುದನ್ನು ಬಿಟ್ಟು ಪುಟ್ಟಣ್ಣ ಅಲ್ಲಿ ಒಬ್ಬ ನ್ಯಾಯಾಧೀಶರಾಗಿಬಿಡುತ್ತಾರೆ. ಅವಳು ಆತ್ಮಹತ್ಯೆ ಮಾಡಿಕೊಳ್ಳದೇ ವಿಧಿಯೇ ಇಲ್ಲ ಅನ್ನಿಸಿಬಿಡುತ್ತಾರೆ. ಮಾದವಿಯ ಹೆಣ್ತನದ ತುಡಿತ ಅವರಿಗೆ ಅರ್ಥವಾಗುವುದೇ ಇಲ್ಲ..
ಇದೇ ಪ್ರಶ್ನೆ ಪ್ರತಿಭಾರವರ ’ಅನುದಿನದ ಅಂತರಗಂಗೆ’ ಪುಸ್ತಕ ಬಂದಾಗ ಬಂದ ಪ್ರತಿಕ್ರಿಯೆಯನ್ನು ನೋಡಿ ನನ್ನನ್ನು ಕಾಡಿತ್ತು. ಸಾಹಿತ್ಯ ಕೃತಿಯಾಗಿ ಅದರ ಸೋಲು ಅಥವಾ ಗೆಲುವುಗಳನ್ನು ಚರ್ಚಿಸಬಹುದು ಆದರೆ ಅವರ ಜೀವನವನ್ನೇ ಚರ್ಚೆ ಮಾಡಲು ನಮಗೆ ಅಧಿಕಾರ ಕೊಟ್ಟವರು ಯಾರು? ಕೇವಲ ಬರೆದುದರಿಂದ, ಆಗಿದ್ದನ್ನು ಒಪ್ಪಿಕೊಂಡದ್ದರಿಂದ ಅವರ ಬದುಕನ್ನು ಚರ್ಚಿಸುವ ಹಕ್ಕು ನಮಗೆ ಸಿಕ್ಕಿಬಿಡುತ್ತದಾ? ಅದು ಅವರ ಬದುಕು, ಆ ಬದುಕಿಗೆ ಅವರು ಬೆಲೆ ತೆತ್ತಿದ್ದಾರೆ, ಆ ಬದುಕಿನ ಫಲ – ನೋವು ಎರಡಕ್ಕೂ ಅವರೇ ಹೊಣೆ ಅನ್ನುವುದಾದರೆ, ಅದರ ಬಗ್ಗೆ ತೀರ್ಪು ನೀಡಲು ನಾವ್ಯಾರು?
ತುಂಬಾ ವರ್ಷಗಳ ನಂತರ ಹಳೆಯ ಗೆಳತಿಯೊಬ್ಬಳು ಸಿಕ್ಕಿದ್ದಳು, ಮಂಕಾಗಿದ್ದಳು, ಮಾತಾಡುತ್ತಾ ಆಡುತ್ತಾ ಹೇಳಿದಳು… ’ನನಗೀಗ ೪೫ ಕಣೆ… ಗೊತ್ತು ನನಗೆ … ಆದರೆ ಯಾಕೆ ಎಲ್ಲರೂ ನನಗೆ ಇದನ್ನು ನೆನಪಿಸಲು, ಮತ್ತು ಅವರ ದೃಷ್ಟಿಕೋನದ ೪೫ ಅನ್ನು ನನ್ನ ಮೇಲೆ ಹೇರಲು ಬರುತ್ತಾರೆ….? ನನ್ನ ಗಂಡ ಸಹ… ಈಗಲೂ ನನಗೆ ನನ್ನ ಗಂಡನ ಸ್ಪರ್ಶ, ಸಾಮಿಪ್ಯ ಬೇಕು ಅನ್ನಿಸುತ್ತೆ, ಟಿವಿ ನೋಡುತ್ತ ಅವರು ನನ್ನ ಕೈ ಹಿಡಿಯಲಿ, ಆಗಾಗ ಒಂದು ಅಪ್ಪುಗೆ, ಎಲ್ಲೋ ಹಾದುಹೋಗುವಾಗ ಒಂದು ಸ್ಪರ್ಶ ಬೇಕು ಅನ್ನಿಸುತ್ತ. ಇಷ್ಟು ವಯಸ್ಸಲ್ಲಿ ಇದೆಲ್ಲಾ ಏನು, ನಾವೇನು ಹೊಸದಾಗಿ ಮದುವೆಯಾಗಿರುವವರಾ ಅಂತಾರೆ… ಆದರೆ ಅವರಿಗೆ ಹೇಗೆ ಅರ್ಥ ಮಾಡಿಸಲಿ. ಅವರ ಮೆಚ್ಚುಗೆ, ನನಗೆ ನನ್ನ ಹೆಣ್ತನದ ಮೇಲಿನ ಅಭಿಮಾನವನ್ನ ತುಂಬಿಕೊಡುತ್ತೆ ಅಂತ … ಅವರ ಕಣ್ಣಿಗೆ ನಾನಿನ್ನೂ ಸುಂದರವಾಗಿ ಕಾಣುತ್ತೇನೆ ಅನ್ನುವುದರಿಂದ ನನ್ನ ಕಣ್ಣಿಗೇ ನಾನು ಸುಂದರವಾಗಿ ಕಾಣಿಸುತ್ತೇನೆ ಅಂತ… ನಾನು ಇನ್ನೂ ಆಕರ್ಷಕಳಾಗಿದ್ದೇನೆ ಅನ್ನುವುದರಿಂದಲೇ ನನ್ನ ಆತ್ಮವಿಶ್ವಾಸ ಹೆಚ್ಚುತ್ತದೆ ಅಂತ… ಮೊನ್ನೆ ಇದೇ ನೋವು ತೋಡಿಕೊಂಡಾಗ ನನ್ನ ಇನ್ನೊಬ್ಬ ಗೆಳತಿ ಹೇಳಿದಳು, ’ಇದೆಲ್ಲಾ ಬಿಡು, ಮೆಡಿಟೇಶನ್ ಮಾಡು, ಏನಾದರೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಕೋ ಅಂತ. ಅರೆ ಇದೇನು ಖಾಯಿಲೆಯೇನೆ ಔಷಧಿ ತಗೋಳ್ಳೋಕೆ’ ಅಂತ ದುಃಖ ತೋಡಿಕೊಂಡಳು.
ಏನು ಹೇಳಲಿ ಅವಳಿಗೆ? ವಯಸ್ಸಾಯಿತು ಗಂಡನ ಬಗೆಗಿನ ಪ್ರೀತಿ, ಹಂಬಲ ಕಡಿಮೆ ಮಾಡಿಕೋ ಅನ್ನಲಾ? ವಯಸ್ಸಾಯಿತು, ನಿನ್ನ ಹೆಣ್ತನಕ್ಕೂ ವಾನಪ್ರಸ್ಥ ಅನ್ನಲಾ?
ಹೆಣ್ತನದ ಗುರ್ತಿಸುವಿಕೆಗೆ, ಹೆಣ್ತನವನ್ನು ಒಪ್ಪಿಕೊಂಡದ್ದಕ್ಕೆ, ಹೆಣ್ತನವನ್ನು ಸಂಭ್ರಮಿಸುವುದಕ್ಕೆ ಎಷ್ಟೆಲ್ಲಾ ಆಯಾಮಗಳಿರುತ್ತವೆ… ಅಲಂಕಾರದಿಂದ, ಆಸೆಗಳ ತನಕ…
 

‍ಲೇಖಕರು G

October 25, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

22 ಪ್ರತಿಕ್ರಿಯೆಗಳು

  1. bharathi b v

    Arre! Idu Ninna maathalla Sandhya … tumba tumba hengasara ola maathu koodaa …1000 likes

    ಪ್ರತಿಕ್ರಿಯೆ
    • ನೂತನ

      ಸಂಧ್ಯಾ..ಅನೇಕರು ಈಗಲೂ ಹೀಗೆ ಯೋಚಿಸುತ್ತಾರೆ ಮಾತಾಡುತ್ತಾರೆ ಕೂಡ.ಅದರಲ್ಲಿ ಲಿಂಗ ತಾರತಮ್ಯವಿಲ್ಲ..
      ಆದರೆ ಕೆಲವರು ಹೇಳಿರುವಂತೆ ಕಾಲ ಬದಲಾಗುತ್ತಿದೆ.ಅಲಂಕಾರವನ್ನು ಸಂಭ್ರಮಿಸುವವರು ಹೆಚ್ಚುತ್ತಿದ್ದಾರೆ..

      ಪ್ರತಿಕ್ರಿಯೆ
  2. Nalina, Melbourne

    ಎಲ್ಲಾ ಹೆಣ್ಣುಮಕ್ಕಳ ಮನದಾಳದ ಮಾತುಗಳು.ನಿಜ ಅಲಂಕಾರಕ್ಕೆ ವಯಸಿಲ್ಲ ಆದರೆ ಅದು ಹಾಸ್ಯಾಸ್ಪದ ಆಗಬಾರದು.

    ಪ್ರತಿಕ್ರಿಯೆ
  3. Vidyashankar H

    I completely agree with this view point. Simplicity may be great but allow people to dress and live as they like.

    ಪ್ರತಿಕ್ರಿಯೆ
  4. Swarna

    ಚೆನ್ನಾಗಿದೆ.
    ಭಾರತಿಸುತರಿಗೂ ಸಹ ಪುಟ್ಟಣ್ಣ ಮಾಧವಿಯನ್ನ ತೋರಿಸಿದ್ದರ ಬಗ್ಗೆ
    ಅಸಮಧಾನವಿತ್ತು ಮತ್ತು ಅವರು ಅದನ್ನ ಪುಟ್ಟಣ್ಣನವರಲ್ಲಿ ಹೇಳಿಯೂ ಇದ್ದರು ಎಂದು ಯಾವುದೋ
    ಸಿನೆಮಾ ಪುರವಣಿಯಲ್ಲಿ ಓದಿದ ನೆನಪು.
    Existence must be celebrated in all forms.

    ಪ್ರತಿಕ್ರಿಯೆ
  5. ಶಿವ

    ನೀಟಾಗಿ ಇರುವುದಕ್ಕೂ ಅಲಂಕಾರಮಾಡಿಕೊಂಡು ಚೆನ್ನಾಗಿ(!) ಕಾಣುವುದಕ್ಕೂ ವ್ಯತ್ಯಾಸವಿದೆ. ಹೆಣ್ತನ ಅಂದ್ರೆ ಬಟ್ಟೆ , ಅಲಂಕಾರ, ಸಂಭ್ರಮಿಸೋದು ಇವಷ್ಟಕ್ಕೇ ಸೀಮಿತಗೊಳಿಸಿಕೊಂಡದ್ದಕ್ಕೇ ಹೆಣ್ಣನ್ನು ಸಮಾಜ ಎರಡನೇ ದರ್ಜೆಯಲ್ಲಿಟ್ಟಿದ್ದು. ಇನ್ನೂ ಈ ತಲೆಮಾರಿನ ಹೆಂಗಸರೂ ಹೀಗೆ ಆಡುತ್ತಿರುವುದು ದುರಂತ. ದಯವಿಟ್ಟು ಇದರಿಂದ ಹೊರಗೆ ಬಂದು ಪರ್ಸನಾಲಿಟಿ ಡೆವಲಪ್ ಮೆಂಟ್ ಕಡೆಗೆ ಮತ್ತು ನಿಮ್ಮಿಂದ ಸಮಾಜಕ್ಕೆ, ದೇಶಕ್ಕೆ, ಮುಂದಿನ ತಲೆಮಾರಿಗೆ ವೈಯಕ್ತಿಕವಾಗಿ, ಕೌಟುಂಬಿಕವಾಗಿ , ಸಾಮಾಜಿಕವಾಗಿ ಏನು ಮಾಡಬಹುದು ಎಂದು ಯೋಚಿಸಿಕೊಂಡು ಅದು ಹೆಣ್ತನದ ಸಂಭ್ರಮವಾದರೆ ಚೆನ್ನ. ಎಲ್ಲವನ್ನೂ ಗಂಡಸರ ದೃಷ್ಟಿಯಿಂದಲೇ ನೋಡಿಕೊಂಡು ಅದನ್ನು ಟೀಕೆ ಮಾಡಿಕೊಳ್ಳುತ್ತಾ ಇರುವುದರಿಂದ ಹೆಣ್ತನಕ್ಕೆ ಸಮಾನತೆ ಬರುವುದಿಲ್ಲ.

    ಪ್ರತಿಕ್ರಿಯೆ
    • Aravind

      ಹೆಣ್ತನ ಅಂದ್ರೆ ಬಟ್ಟೆ , ಅಲಂಕಾರ, ಸಂಭ್ರಮಿಸೋದು ಇವಷ್ಟಕ್ಕೇ ಸೀಮಿತಗೊಳಿಸಿಕೊಂಡದ್ದಕ್ಕೇ ಹೆಣ್ಣನ್ನು ಸಮಾಜ ಎರಡನೇ ದರ್ಜೆಯಲ್ಲಿಟ್ಟಿದ್ದು. Shiva Shivaaa… Entha adbhuta vishleshane. Aa samaaj yaavdoontha swalpaa thilisteeraa? Hogi naalku kallesedu barona 🙂

      ಪ್ರತಿಕ್ರಿಯೆ
  6. Shwetha Hosabale

    ನಂಗೂ ತುಂಬ ಇಷ್ಟ ಆಯ್ತು…ಎಂದಿನಂತೆ ಚೆಂದದ ಬರಹ…ಈಗ ಸ್ವಲ್ಪ ಬದಲಾವಣೆಯಾಗಿದೆಯಾದರೂ ಇನ್ನೂ ಮದುವೆಯ ನಂತರ ನಮಗೆ ಕಂಫರ್ಟಬಲ್ ಅನ್ನಿಸೋ ಉಡುಪನ್ನು ಹಾಕಿ ಖುಷಿಪಡಲೂ ಗಂಡನ, ಗಂಡನ ಮನೆಯವರ ಅನುಮತಿ ಪಡೆಯಬೇಕಾದ ಪರಿಸ್ಥಿತಿ ಇದೆ.

    ಪ್ರತಿಕ್ರಿಯೆ
  7. Ashok Shettar

    ಲೇಖನ ಹೇಳಬಯಸುವ ಕೇಂದ್ರವಿಚಾರವೇನೋ ಮನದಟ್ಟಾಯಿತು. ಆದರೆ ಜನರಲೈಝೇಶನ್ ನ ಪಾಲು ಅಲ್ಲಿಲ್ಲಿ ಸ್ವಲ್ಪ ಜಾಸ್ತಿನೇ ಇದೆ ಎನ್ನಿಸಿತು. ನಲವತ್ತರಿಂದ ಐವತ್ತರ ಪ್ರಾಯದಲ್ಲಿರುವ ತಮ್ಮ ತಾಯಂದಿರು ಯಂಗ್ ಆಗಿ, ಕ್ಯೂಟ್ ಆಗಿ ಕಾಣಬೇಕೆಂದು ಬಯಸುವ ಮಕ್ಕಳೂ ಅಕರ್ಷಕವಾಗಿ ಕಾಣಬೇಕೆಂದು ಬಯಸುವ ಪತಿದೇವರುಗಳೂ ವರ್ತಮಾನದ ನಗರ ಭಾರತದಲ್ಲಿ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆಂಬ ಗುಮಾನಿ ನನ್ನದು. ಅದರೆ ಅ ವಯಸಿನಲ್ಲಿ ಟ್ರೆಂಡಿ ಬಟ್ಟೆಗಳನ್ನು ಹಾಕುವ ಮನಸ್ಥಿತಿ ಒಂದು ಗೀಳು ಎಂಬಂತೆ ಬೆಳೆದರೆ ಸ್ವಲ್ಪ ಅಸಮಾಧಾನಕ್ಕೆ ಕಾರಣವಾಗಬಹುದು. ಅದರ ಹಿಂದೆಯೂ ಕೂಡ ತಮ್ಮ ಪ್ರೀತಿಪಾತ್ರ ತಾಯಿ ಅಥವಾ ಮಡದಿ ಮತ್ತೊಬ್ಬರ “ಒಂಥರಾ” ನೋಡುವಿಕೆಗೋ ಆಡಿಕೊಳ್ಳುವಿಕೆಗೋ ಕಾರಣವಾಗಬಾರದೆಂಬ ಕಾಳಜಿ ಇದ್ದರೂ ಇದ್ದೀತು., ಗೊತ್ತಿಲ್ಲ…!

    ಪ್ರತಿಕ್ರಿಯೆ
  8. sindhu

    ಸಂಧ್ಯಾ ರಾಣಿ,
    ಹೆಣ್ಣುಹೆಣ್ಣು ತನ್ನ ಪಾಡಿಗೆ ತಾನು ಸಂತೋಷ ಅನುಭವಿಸುವ ಮತ್ತು ಹೆಣ್ಣೆಂದರೆ ಇಷ್ಟೇ ಇದೇ ಅನ್ನೋ ಚೌಕಟ್ಟು ಮೀರುವ ಎಲ್ಲ ಸನ್ನಿವೇಶಗಳಲ್ಲೂ ಅಸಹನೆಯೇ ಮೊದಲ ಗೋಡೆ. ಅದನ್ನ ಒಡೆಯದೆ ಬಯಲು ಸಿಕ್ಕುವುದಿಲ್ಲ.
    ನಿಮ್ಮ ಬರಹ ನಮ್ಮ ಸ್ಥಿತಿಗಳನ್ನು ಇನ್ನೂ ಸುಸ್ಪಷ್ಟಗೊಳಿಸುತ್ತಾ ಹೋಗುವ ಪರಿ ನನಗೆ ತುಂಬ ಇಷ್ಟ.
    ಸಿಂಧು

    ಪ್ರತಿಕ್ರಿಯೆ
  9. amardeep.p.s.

    madam, bahala ishta ayitu…. eegalU nannamma 60+ aadarU appa teeri hodarU hair dye maadkotare…aadre avarannu avara ishtada haage irali ennuvudu nanna niluvu..ivattigU nannammanige yavude kaaryakrama anta maadidare mattasavaagi seere uttu acchukattaagi horahoguttaare..avarige shistu andre ishta… nim lekhana odi nannammana helabeku annisitu..thanks.

    ಪ್ರತಿಕ್ರಿಯೆ
  10. Sharadhi

    If someone writes about ‘gaoudasuthanakke eshtellaa aayaamagaLu” it looks absurd! (the same with this article too), I feel India should come out of ‘gender-based-bias’ and start looking at the other as a human being.

    ಪ್ರತಿಕ್ರಿಯೆ
  11. Veena Shivanna

    Nice Article Sandhya avare. Dressing is a choice, something which fits, looks neat could be chosen by people. While those women who are longing for appreciation or attention, I wonder what makes them to be so apprehensive to ask for it? Just thinking.
    Well, after several years of relationships(marriage), each other must overcome all these apprehensions/inhibitions and communicate openly alva? Just thinking aloud. they can simply ask, ಏನಯ್ಯ ಗಂಡ(ಸೊ ಅಂಡ್ ಸೊ) ನಾನ್ ಚೆನ್ನಾಗಿ ಕಾಣ್ಸ್ ತಿದ್ದೀನ ಅಂತ.. 🙂 ನೀವು ಲಂಗ ಬ್ಲೌಸ್ ನಲ್ಲಿ ತುಂಬಾ ಚೆನ್ನಾಗಿ ಕಾಣಿಸುತಿದ್ರಿ.. ನನ್ನ ಆರು ವರ್ಷದ ಮಗ, ಒಮ್ಮೆ ನಾನು ರೆಡಿ ಆಗ್ತಾ ಇರ್ಬೇಕಾದ್ರೆ ಬಂದು ಅಮ್ಮ ನಿಂಗೆ ಈ ಹಸಿರು ಸೀರೆ ಚೆನ್ನಾಗಿ ಕಾಣುತ್ತೆ, ಇದನ್ನೇ ಹಾಕೋ ಅಂತೇನೋ ಕ್ಯೂಟ್ ಆಗಿ ಹೇಳಿದ್ದ.. ಅದೊಂದು ಸಂತೋಷ ದ ಕ್ಷಣ ಅಷ್ಟೇ, ಬಹುಶ ಅದು ಬೇಡ ಇದು ಬೇಡ ಅಂದ್ರೆ ಹೋಗಣ್ಣ, ನಿನ್ನ ಬಟ್ಟೆ ನೀನ್ ಹಾಕೋ ಅನ್ನಬೇಕಾಗುತ್ತೇನೋ.. 🙂

    ಪ್ರತಿಕ್ರಿಯೆ
  12. Anil Talikoti

    ನನಗೇನೋ ಈ ಬರಹ ಸ್ವಲ್ಪ dated ಅನಿಸಿತು. ಒಂದೆರಡು ಉದಾಹರಣೆ ಕೊಟ್ಟಿದ್ದಿರಾದರೂ ಅಲಂಕಾರವನ್ನು ಅವಹೇಳನದಿಂದ ನೋಡುವವರು ಈ ‘ಫೆಸಬುಕ’ ಯುಗದಲ್ಲಿ ಕಮ್ಮಿ ಅಂತಲೆ ಅನಿಸುತ್ತದೆ. ಈ ಆಯಾಮಗಳನ್ನು ಪ್ರಶ್ನಿಸುವವರಲ್ಲಿ ಜಾಸ್ತಿ ಹೆಣ್ಣುಗಳೊ ಅಥವಾ ಗಂಡುಗಳೋ ಗೊತ್ತಾಗಲಿಲ್ಲ(?). ನೋಡಿಲ್ಲದ ಫಲವೋ ಏನೋ ‘ಪ್ರತಿಯೊಬ್ಬರಿಗೂ, ಹಿರಿಯರಿಗೂ, ಕಿರಿಯರಿಗೂ, ಅಪ್ಪನಿಗೆ, ಅಣ್ಣನಿಗೆ, ಗಂಡನಿಗೆ, ಕಡೆಗೆ ಮಗನಿಗೂ ಸಹ ಹೆಣ್ಣನ್ನು ನಿರ್ದೇಶಿಸುವ ದೈವದತ್ತ ಅಧಿಕಾರ’ ಬಗ್ಗೆ ಯಾಕೋ ನಂಬಿಕೆ ಇನ್ನೂ ಬಂದಿಲ್ಲಾ.
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
  13. Uday Itagi

    ಸಂಧ್ಯಾರಾಣಿಯವರೇ,
    ನೀವು ಏನು ಬರೆಯುತ್ತೀರಿ ಎಂದು ನಾನು ವಾರದಿಂದ ವಾರಕ್ಕೆ ಕುತೂಹಲದಿಂದ ಕಾಯುವವರಲ್ಲಿ ಒಬ್ಬ ಮತ್ತು ನಿಮ್ಮ ಬಹಳಷ್ಟು ಲೇಖನಗಳನ್ನು ಮೆಚ್ಚಿಕೊಂಡವನು ನಾನು. ಆದರೆ ಈ ಸಾರಿ ಅದೇಕೋ ನಿರಾಸೆಗೊಳಿಸಿದಿರಿ. ನಿಮ್ಮ ಲೇಖನವನ್ನೋದಿ ನನಗೆ ಕಸಿವಿಸಿಯೆನಿಸಿತು ಜೊತೆಗೆ ಮುಜುಗುರವಾಯಿತು ಕೂಡಾ.
    ಒಂದು ಕಡೆ ನಾವು ಪುರುಷರಿಗೇನೂ ಕಮ್ಮಿಯಿಲ್ಲ ಎಂದು ಅವರ ಸರಿಸಮಕ್ಕೆ ನಿಲ್ಲುತ್ತೀರಿ. ಇನ್ನೊಂದು ಕಡೆ ಪುರುಷರು ಸ್ತ್ರೀ ಸಂವೇದನೆಗಳನ್ನು ಅರ್ಥಮಾಡಿಕೊಳ್ಳುವದಿಲ್ಲವೆಂದು ಹಳಹಳಿಸುತ್ತೀರಿ. ಇದೆಂಥ ವಿಪರ್ಯಾಸ!
    ’ನನಗೀಗ ೪೫ ಕಣೆ… ಗೊತ್ತು ನನಗೆ … ಆದರೆ ಯಾಕೆ ಎಲ್ಲರೂ ನನಗೆ ಇದನ್ನು ನೆನಪಿಸಲು, ಮತ್ತು ಅವರ ದೃಷ್ಟಿಕೋನದ ೪೫ ಅನ್ನು ನನ್ನ ಮೇಲೆ ಹೇರಲು ಬರುತ್ತಾರೆ….? ನನ್ನ ಗಂಡ ಸಹ… ಈಗಲೂ ನನಗೆ ನನ್ನ ಗಂಡನ ಸ್ಪರ್ಶ, ಸಾಮಿಪ್ಯ ಬೇಕು ಅನ್ನಿಸುತ್ತೆ, ಟಿವಿ ನೋಡುತ್ತ ಅವರು ನನ್ನ ಕೈ ಹಿಡಿಯಲಿ, ಆಗಾಗ ಒಂದು ಅಪ್ಪುಗೆ, ಎಲ್ಲೋ ಹಾದುಹೋಗುವಾಗ ಒಂದು ಸ್ಪರ್ಶ ಬೇಕು ಅನ್ನಿಸುತ್ತ. ಇಷ್ಟು ವಯಸ್ಸಲ್ಲಿ ಇದೆಲ್ಲಾ ಏನು, ನಾವೇನು ಹೊಸದಾಗಿ ಮದುವೆಯಾಗಿರುವವರಾ ಅಂತಾರೆ… ಆದರೆ ಅವರಿಗೆ ಹೇಗೆ ಅರ್ಥ ಮಾಡಿಸಲಿ. ಅವರ ಮೆಚ್ಚುಗೆ, ನನಗೆ ನನ್ನ ಹೆಣ್ತನದ ಮೇಲಿನ ಅಭಿಮಾನವನ್ನ ತುಂಬಿಕೊಡುತ್ತೆ ಅಂತ …’ ನೀವು ಈ ಪ್ಯಾರಾಗಿಂತ ಮುಂಚಿನ ಪ್ಯಾರಾಗಳಲ್ಲಿ ಹೆಣ್ಣು ಸದಾ ಗಂಡು ನಿರ್ದೇಶಿಸುವಂತೆ ಬದುಕಬೇಕು ಎಂದು ಹಳಹಳಿಸಿದ್ದೀರಿ. ಆದರೆ ಈ ಪ್ಯಾರಾದಲ್ಲಿ ಮತ್ತದೇ ಗಂಡಿನ ಮೆಚ್ಚುಗೆಯಂತೆ ಬದುಕಬೇಕೆಂದು ಹಪಹಪಿಸಿದ್ದೀರಿ. ಇದೆಂಥಾ ವೈರುಧ್ಯಗಳಲ್ಲಿ ಬದುಕುತ್ತೀರಿ ನೀವೆಲ್ಲಾ? ಮೇಲಾಗಿ ದಾಂಪತ್ಯದಲ್ಲಿ ವಯಸ್ಸಾದಂತೆ ಗಂಡು ಹೆಣ್ಣಿನ ನಡುವಿನ ಬಿಸುಪು ತಗ್ಗುತ್ತಾ ಹೋಗುತ್ತದೆ. ಆಡದೆಯೂ ಆಡಿದಂತೆ, ಅಪ್ಪದೆಯೂ ಅಪ್ಪಿದಂಥ, ಸ್ಪರ್ಶಿಸದೆಯೂ ಸ್ಪರ್ಶಿಸಿದಂಥ ಸೂಕ್ಷ್ಮ ಭಾವಬಂಧನಗಳಲ್ಲಿ ಬದುಕು ಸಾಗುತ್ತಾ ಹೋಗುವದರಿಂದ ಈ ತೆರದ ಪ್ರಕ್ರಿಯೆಗಳು ನಿಮ್ಮ ಗೆಳತಿಯ ಗಂಡನಿಗೆ ಬಾಲಿಶ ಎನಿಸಿರಬಹುದು. ಹಾಗಿರುವಾಗ ನಿಮ್ಮ ಗೆಳತಿ ’ನನ್ನ ಗಂಡ ನನ್ನ ಸಂವೇದನೆಗಳನ್ನು ಅರ್ಥಮಾಡಿಕೊಳ್ಳುವದಿಲ್ಲವೆಂದ” ನಿರೀಕ್ಷೆ ಮಾಡುವದು ತಪ್ಪಾಗುತ್ತದೆ.
    ಅಷ್ಟಕ್ಕೂ ನೀವು ಸ್ತ್ರೀಯರು, ಗಂಡಸರು ಸದಾ ನಿಮ್ಮ ಸ್ತ್ರೀತ ಸಂವೇದನೆಗಳನ್ನು ಅರ್ಥಮಾಡಿಕೊಳ್ಳಲೇಬೇಕೆಂಬ ಹಟಕ್ಕೆ ಏಕೆ ಬೀಳುತ್ತೀರಿ? ಮತ್ತು ಆ ಮೂಲಕ ಪ್ರಪಂಚದ ಅನುಕಂಪವನ್ನೆಲ್ಲಾ ನಿಮ್ಮದಾಗಿಸಿಕೊಳ್ಳಲು ಪ್ರಯತ್ನಪಡುತ್ತೀರಿ? ಹಾಗಾದರೆ ನಿಮ್ಮ ಪ್ರಕಾರ ಪ್ರಪಂಚದ ಎಲ್ಲ ಗಂಡಸರು ಶಹಜಾನ್ ಆಗಬೇಕಾಗುತ್ತದೆ ಮತ್ತು ಎಲ್ಲ ಕಡೆ ಒಂದೊಂದು ತಾಜಮಹಲ್ನ್ನುಪ ಕಟ್ಟಿಸಬೇಕಾಗುತ್ತದೆ. ಹೇಳಿ ಅದು ಸಾಧ್ಯವೇ?
    ಒಂದು ವೇಳೆ ನಾವು ಗಂಡಸರು ನಮ್ಮ ಹೆಂಡಿರು ನಾವು ಇದ್ದಲ್ಲಿಗೆ ಕಾಫಿ ಕೊಡಬೇಕು, ನಮ್ಮ ಮನೆಯವರೆನ್ನೆಲ್ಲಾ ಚನ್ನಾಗಿ ನೋಡಿಕೊಳ್ಳಬೇಕು, ಆಕೆ ನಮ್ಮ ಕಾಲು ಒತ್ತಬೇಕು ಎಂದೆಲ್ಲಾ ನಮ್ಮ ಗಂಡಸುತನದ ಆಯಾಮಗಳ ಪರಿಧಿಯಲ್ಲಿ ಅವರನ್ನು ನೋಡಿದರೆ ನೀವು ಅದನ್ನು ಶೋಷಣೆ, ಹೆಣ್ಣುಗಳ ಮೇಲೆ ಗಂಡುಗಳ ದಬ್ಬಾಳಿಕೆ ಎಂದೆಲ್ಲಾ ಭಾವಿಸುತ್ತೀರಲ್ಲವೆ?
    ಉದಯ್ ಇಟಗಿ

    ಪ್ರತಿಕ್ರಿಯೆ
  14. M.S.Krishna Murthy

    ಬಹಳ ಸರಳ ವಿಚಾರ.. ಸರವಾಗೇ ಹೇಳಿದ್ದೀರಿ… ಯಾವುದೇ ಬಿನ್ನಾಬಿಪ್ರಾಯ ಮಾಡುವ ಹಾಗೆ ಇಲ್ಲ… ಇಷ್ಟವಾಯಿತು

    ಪ್ರತಿಕ್ರಿಯೆ
  15. sunil rao

    Absolutely right..
    Dressing is a personal choice. Adu ellarigoo anwaya..
    Ondu kade saamajika mattu saampradaayika nirdhaaragalige hondikondu banda namage moda modalu ee thara guilt aagbahudu…ade tade maadbahudu..nantara ella badalaagatte.
    Aa badalaavaneya manas stithi maatra dorakodu kashta ide..elladdakku konkaadu reeti endigoo namminda hogolla ansatte.

    ಪ್ರತಿಕ್ರಿಯೆ
  16. veda

    Bharathi baredante nammelara matugalanne barediddireno annuva hage ide Sandhya. Nice write up. Liked it.

    ಪ್ರತಿಕ್ರಿಯೆ
  17. shadakshari.Tarabenahalli

    Its really awesome…
    I remember my dad and his dress sense… its amazing at his 80’s and my grandfather near his 100 yrs…
    Its about looking good and feeling good … as well as motivating others too… I simply liked your recent picture shared with bharathi BV akka… 🙂
    I dont care for age… LOL 🙂 🙂 🙂
    ~ ರಿ. ಶಕ್ತಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: