ಸಂಧ್ಯಾರಾಣಿ ಕಾಲಂ : ಹೀಗೊಂದು ವಿಳಾಸ ಮರೆತ ಥರ್ಮಾಸ್ ಫ್ಲಾಸ್ಕು..

‘ತಣ್ಣಾನೆ ರಸ್ತೆಯಲಿ ಎತ್ತರೆತ್ತರ ಗೋಡೆಗಳು, ಬೆರಳ ಬಿಸಿ ತಾಕಿದರೆ ಕರಗುವ ಗೋಡೆಗಳು, ಮನೆ ಮನೆಗಳ ನಡುವೆ, ಮನ ಮನಗಳ ನಡುವೆ ಯಾರೂ ದಾಟದ, ಯಾರೂ ಸ್ಪರ್ಷಿಸದ, ಉಸಿರಿನ ಬಿಸುಪು ತಾಕದ ಖಾಲಿ ಖಾಲಿ ಗೋಡೆಗಳು..’, ಎದುರಿಗಿದ್ದ ಸಾಲುಗಳನ್ನೇ ನೋಡುತ್ತಾ ಕುಳಿತವಳಿಗೆ ನೆನಪಾದದ್ದು ಅಂದು ರಂಗಶಂಕರದಲ್ಲಿ ನೋಡಿದ್ದ ನಾಟಕ. ಕಲಾ ಸೌರಭ ತಂಡ ಮಾಡಿದ್ದ ಕಾಯ್ಕಿಣಿ ಕಥೆಗಳ ನಾಟಕ.
ಕಾಯ್ಕಿಣಿ ಕಥೆಗಳನ್ನು ನಾಟಕವಾಗಿಸುವುದು ಸುಲಭವಲ್ಲ, ಅಲ್ಲಿ ಮಾತಿನ ಒಂದು ಪ್ರಪಂಚವಿದ್ದರೆ, ಅದಕ್ಕೆ ಸಂವಾದಿಯಾದ ಮಾತಿನ ಪ್ರತಿಧ್ವನಿಗಳದೇ ಒಂದು ಪ್ರಪಂಚ ಇರುತ್ತದೆ. ಹೀಗಾಗಿ ಅವರ ಕಥೆಗಳು ಎರಡು ನೆಲೆಗಳಲ್ಲಿ ನಡೆಯುತ್ತಾ ಹೋಗುತ್ತದೆ. ಅಲ್ಲದೆ ಜಯಂತರ ಕಥೆಗಳಿಗೂ ಅವರ ಭಾಷೆಗೂ ಒಂದು ಅವಿನಾಭಾವ ಸಂಬಂಧ ಇದೆ. ಅವು ಕಟ್ಟಿಕೊಡುವ ಆವರಣವನ್ನು ನಾಟಕದಲ್ಲಿ ನಿರ್ಮಿಸಿಕೊಡಲು ಹೋದಾಗ ಬೇರೆ ಮಾತುಗಳಲ್ಲಿ ಆ ಬಂಧವನ್ನು ಹಿಡಿಯುವುದು ಕಷ್ಟ. ಹಾಗಾಗೇ ಅವರ ಕಥೆಗಳನ್ನು ಕಥೆಗಳನ್ನಾಗಿಯೇ ನಮ್ಮದಾಗಿಸಿಕೊಳ್ಳಬೇಕು.
ಈ ಒಂದು ಆಂಟಿಸಿಪೇಟರಿ ಬೇಲ್ ಹಿಡಿದುಕೊಂಡೇ ನಾನು ಅಂದು ನಾಟಕಕ್ಕೆ ಹೋಗಿದ್ದೆ. ಅಂದು ನಾಟಕದಲ್ಲಿ ಜಯಂತರ ಮೂರು ಕಥೆಗಳ ರಂಗರೂಪ ಇತ್ತು. ನಗರ ಜೀವನ ಒಂಟಿ ಬದುಕಿನೆಡೆಗೆ ಎಸೆಯುವ ಥಣ್ಣನೆಯ ಕ್ರೌರ್ಯ, ಅನಾಥ ಪ್ರಜ್ಞೆ, ಪರದೇಸಿತನ …. ಇವೆಲ್ಲವನ್ನೂ ಜಯಂತ ಕಾಯ್ಕಿಣಿ ತಮ್ಮದೇ ಆದ ನಿರುದ್ವಿಗ್ನ ದನಿಯಲ್ಲಿ, ಆಡಂಬರವಿಲ್ಲದ ಭಾಷೆಯಲ್ಲಿ ನಿರೂಪಿಸುತ್ತಾರೆ.
ಅರ್ಧ ಎದ್ದ ಮೆಟ್ರೋ ಕಂಬಗಳ ಗದ್ದಲದ ನಡುವೆಯೂ ತಮ್ಮ ಗೂಡು ನಿರ್ಮಿಸಿಕೊಳ್ಳುವ ಉಮೇದಿನಲ್ಲಿರುತ್ತಾರೆ ಅಸಾವರಿ ಮತ್ತು ಪೋಪಟ್. ತಮ್ಮ ಗಡಿಬಿಡಿ ಬದುಕಿನಲ್ಲಿಯೇ, ತಮ್ಮ ಕೆಲಸದ ನಡುವೆಯೇ ಒಂದಿಷ್ಟು ಸಮಯವನ್ನು ಕದ್ದು, ರಾಕ್ಷಸರ ಸಂತೆಯಂತಹ ಮುಂಬೈ ಮೆಟ್ರೋ ಕಟ್ಟುತ್ತಿರುವ ರಕ್ಕಸ ಗಾತ್ರದ ಕಂಬಗಳ ನಡುವೆ ಕೂತು ತಮ್ಮ ಹಸೆಮಣೆಗೆ ರಂಗೋಲಿ ಬರೆಯುವ ಉಮೇದಿ ಅವರದು. ಇಬ್ಬರೂ ಅನಾಥರು, ಇಬ್ಬರೂ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ, ಆ ಮೂಲಕ ತಮ್ಮ ಪರದೇಸಿತನಕ್ಕೊಂದು ಆಸರೆ ಕೊಡುವ, ತಮ್ಮ ಹೆಸರಿನ ಜೊತೆಗೊಂದು ಹೆಸರು ಜೋಡಿಸಿಕೊಳ್ಳುವ ಹಂಬಲ ಅವರಲ್ಲಿ.
ಅಂದು ಅವರು ಅಲ್ಲಿ ಸೇರಿರುವುದು ತಮ್ಮ ಮದುವೆ ಆಹ್ವಾನ ಪತ್ರಿಕೆಯ ವಿನ್ಯಾಸ ಮತ್ತು ಒಕ್ಕಣೆಯನ್ನು ನಿರ್ಧಾರ ಮಾಡಲು. ಅನಾಥವಾಗೇ ಬೆಳೆದ ಅವರಿಗೆ ಈ ಬಗ್ಗೆ ಹೇಗೆ ಮಾತನಾಡಬೇಕೋ ಗೊತ್ತಿಲ್ಲ, ಯಾರನ್ನು ಹೇಗೆ ಕರೆಯಬೇಕು ಎನ್ನುವ ಗೊಂದಲ ಬೇರೆ. ಅಲ್ಲೇ ಸಂತೆ ಗದ್ದಲದ ನಡುವೆ ಕೂತು ತಮ್ಮ ಮದುವೆಗಾಗಿ ತಮ್ಮ ಹಣಕ್ಕೆ ಒಗ್ಗುವ ಒಂದು ಕಾರ್ಡನ್ನು ಆರಿಸಿಕೊಳ್ಳುತ್ತಾರೆ, ಅಲ್ಲಿ ಏನು ಬರೆಯುವುದು ಎಂದು ಕೂರುತ್ತಾರೆ ನೋಡಿ, ಆಗ ಈ ಲೋಕ ಅವರಿಬ್ಬರ ನಡುವೆ ಮಧ್ಯೆ ಪ್ರವೇಶಿಸಿ, ತನ್ನೆಲ್ಲಾ ಚಾಲು ಚಾಲಾಕಿಗಳ ಮೂಲಕ ಅವರ ಸಂತೋಷವನ್ನು ಒಡೆಯುತ್ತಾ, ಹೊಸಕುತ್ತಾ ನಡೆಯುತ್ತದೆ. ತಮ್ಮ ತಮ್ಮ ಹೆಸರನ್ನು ಲಗ್ನ ಪತ್ರಿಕೆಯಲ್ಲಿ ಇಳಿಸುವಾಗ ಮನೆತನದ ಹೆಸರು ಗೊತ್ತಿಲ್ಲದ ಅವರ ಪರದೇಸಿತನ ಅವರ ಆ ಘಳಿಗೆವರೆಗಿನ ಸಂಭ್ರಮವನ್ನು ನುಂಗಿಹಾಕಿ ಬಿಡುತ್ತದೆ. ಇಲ್ಲಿ ಅಸಾವರಿಗೆ ಅನಾಥಾಶ್ರಮದಲ್ಲಿ ಯಾರೋ ಕೊಟ್ಟ ಸರ್ ನೇಮ್ ಆದರೂ ಅದೆ, ಆದರೆ ಸರಿಯಾಗಿ ಒಂದು ಹೆಸರನ್ನು ಸಹಾ ಪಡೆಯದ ಪೋಪಟ್ ನಿಗೆ ಆ ಘಳಿಗೆಯಿಂದಲೇ ಕೀಳರಿಮೆ ಪ್ರಾರಂಭವಾಗಿಬಿಡುತ್ತದೆ. ಹೆಸರಿನ ಜೊತೆಗೊಂದು ಅಡ್ಡ (ಸರ್ ನೇಮ್) ಹೆಸರನ್ನು ಅಧಿಕಾರಯುತವಾಗಿ ಕೇಳುವ ಈ ಸಮಾಜ ಆಸಾವರಿಯ ಆ ವರೆಗಿನ ಬೆಳಕನ್ನು ಒರೆಸಿ ಹಾಕುತ್ತದೆ.
ಮುಂದಿನ ಕಥೆ ಮಧ್ಯವಯಸ್ಕನಾದರೂ ಅವಿವಾಹಿತನಾಗಿಯೇ ಉಳಿದ ಒಬ್ಬಾತನದು. ಏನೇನೂ ಘಟಿಸದ ಖಾಲಿ ಖೋಲಿಯಂತಹ ಬಾಳಿಗೆ ಮದುಮಗಳ ಕೆಂಪು ಮೇಲು ಹೊದಿಕೆಯಂತೆ ಬರುವ ಶಾಲಿನಿ ಸೇನ್ ಎನ್ನುವ ಹೆಸರು, ಮತ್ತು ಆ ಹೆಸರು ತನ್ನೊಂದಿಗೆ ತರುವ ಮತ್ತು ಬಂದ ಮೇಲೆ ನೇಯುವ ಕನಸುಗಳ ಜಾಲ ಅವನ ಜೀವನವನ್ನೇ ಬದಲಾಯಿಸಿಬಿಡುತ್ತವೆ. ಇನ್ನು ತನ್ನ ಬಾಳಿನಲ್ಲಿ ಏನೆಂದರೆ ಏನೂ ಘಟಿಸುವುದಿಲ್ಲ ಎಂದು ಸುಮ್ಮನಿದ್ದ ಅವನ ಬಾಳಿನಲ್ಲಿ ಈಗ ಎದುರು ನೋಡಲು ಒಂದು ನಾಳೆ ಇದೆ. ಮತ್ತು ಆ ನಾಳೆಯಲ್ಲಿ ಏನೋ ಘಟಿಸಿಬಿಡುತ್ತದೆ ಎನ್ನುವ ಆಶಯ ಅವನ ಇಂದನ್ನು ಸಂಪೂರ್ಣವಾಗಿ ಬದಲಿಸಿಹಾಕುತ್ತದೆ. ವರ್ಷಗಳಿಂದಲೂ ಹಾಗೆ ಇದ್ದ ದಿನಚರಿಯಲ್ಲಿ, ತಾನೂ ಒಂದು ಭಾಗವಾಗಿಯೇ ಹೋಗಿದ್ದ ಅವನ ಮನೆಯೊಳಕ್ಕೆ ಒಂದು ದಿನ ಹಿರಿಯರೊಬ್ಬರು ನಡೆದು ಬರುತ್ತಾರೆ. ಮಗಳಿಗೆ ಮದುವೆಯಾಗಿದೆ, ಮದುವೆಯಿಂದ ಅವಳು ಹೊರಬಂದಿದ್ದಾಳೆ. ಆದರೆ…..ಅವಳಿನ್ನೂ ಕನ್ಯೆ..’ ಎನ್ನುವಾಗ ಆ ತಂದೆ ನುಂಗಿಕೊಳ್ಳುವ ಅವಮಾನ ತಂದೆ ಅದನ್ನು ಅಂಡರ್ ಪ್ಲೇ ಮಾಡುವುದರ ಮೂಲಕವೇ ಅದರ ನೋವನ್ನು ನಮಗೆ ಮುಟ್ಟಿಸಿಬಿಡುತ್ತಾರೆ. ಅವರು ಈಗ ಬಂದಿರುವುದು ಮಗಳಿಗೆ ಎರಡನೆಯ ಮದುವೆಗೆ ಸಂಬಂಧ ಹುಡುಕಲು.

ಮರುದಿನ ತನ್ನನ್ನು ಕಾಣಲು ಬರುವ ಆ ಶಾಲಿನಿ ಸೇನ್ ಳ ಆಗಮನದ ನಿರೀಕ್ಷೆ ಅವನನ್ನು ಸಂಪೂರ್ಣವಾಗಿ ಬದಲಿಸಿ ಹಾಕುತ್ತದೆ. ಇವನು ಬೇಡ ಬೇಡ ಎನ್ನುತ್ತಲೇ ಮಾನಸಿಕವಾಗಿ ಮದುವೆಗೆ ಸಿದ್ಧನಾಗಿರುತ್ತಾನೆ, ಆದರೆ ಮದುವೆಯನ್ನು ಶಾಲಿನಿ ನಿರಾಕರಿಸುತ್ತಾಳೆ. ಹಾಗೆ ಆ ಒಂದು ನಿರಾಕರಣೆ ಅವನ ಇಷ್ಟು ದಿನಗಳ ಕಾಯುವಿಕೆಯನ್ನು ಸಹ ನಿರಾಕರಿಸಿಬಿಡುತ್ತದೆ. ನಮ್ಮ ಸ್ಥಿತಿ ಹೀಗೆ ಎಂದು ಒಪ್ಪಿಕೊಂದು ಬದುಕುವುದು ಒಂದು ರೀತಿ, ಆದರೆ ಅದು ಬದಲಾಗುತ್ತದೆ ಎನ್ನುವ ಸೂಚನೆ ದೊರೆತು, ಮನಸ್ಸು ಹಳೆಯ ಗಂಟು ಮೂಟೆಗಳನ್ನು ಕೆಳಗಿಟ್ಟು ಮೈ ಮುರಿಯಬೇಕು ಎಂದುಕೊಳ್ಳುವಾಗ ಅವು ನಮ್ಮ ಬೆನ್ನಿಗಂಟಿಕೊಂಡು ಬಿಟ್ಟಿವೆ, ಇನ್ನೆಂದೂ ಅವುಗಳಿಂದ ನನಗೆ ಮುಕ್ತಿ ಇಲ್ಲ ಎನ್ನುವಾಗ ಎದೆಯನ್ನು ಒಂದು ಭಯ ಆವರಿಸುತ್ತದಲ್ಲಾ, ಅಂತಹ ಸ್ಥಿತಿ ಅವನದು.
ಕಥೆಯ ಪಾತ್ರಗಳೆಲ್ಲಾ ನಮ್ಮೆದುರಿಗೆ, ನಮ್ಮೊಳಗೆ.
ಮೂರನೇ ಕಥೆಯಲ್ಲಿ ಇರುವುದು ಒಂದು ಭವ್ಯ ಇತಿಹಾಸ ಹೊಂದಿದ್ದರೂ ಸಧ್ಯದಲ್ಲೇ ಸ್ಮಾರಕವಾಗಲಿರುವ ’ಅಪೆರಾ ಹೌಸ್’ ಚಿತ್ರ ಮಂದಿರ. ಅಲ್ಲಿ ಚಿತ್ರ ನೋಡಲು ಬಂದವರು ಯಾರೋ ಮರೆತು, ತ್ಯಜಿಸಿ ಹೋದ ಒಂದು ಫ್ಲಾಸ್ಕ್. ತನ್ನ ಒಡಲಲ್ಲಿ ಬೆಚ್ಚನೆಯ ಚಹ ತುಂಬಿಕೊಂಡು ಎಲ್ಲೆಲ್ಲಿ ಅಲೆಯುತ್ತದೆ.. ಬಿಸುಪನ್ನು ಕಾದಿರಿಸಿಕೊಳ್ಳುವ ಫ್ಲಾಸ್ಕ್ ಗೆ ತನ್ನ ಸಲುವಾಗಿ ಒಂದು ಬಿಸುಪನ್ನು ಕಾದಿರಿಸಿಕೊಳ್ಳಲಾಗುವುದಿಲ್ಲ. ’ಇದು ನಿಮ್ಮದಾ’ ’ಇದು ನಿಮ್ಮದಾ’ ಎನ್ನುವ ಸಂದೇಶಕ್ಕೆ ಸಾಥಿಯಾಗಿ ಎಲ್ಲೆಲ್ಲಿ ಓಡಾಡುತ್ತದೆ ಈ ಫ್ಲಾಸ್ಕು..
ಇಂದ್ರನೀಲನ ಬಳಿಯಿಂದ ಚಹ ಅಂಗಡಿಗೆ, ನಾಚ್ ವಾಲಿಗಳ ಸುಳ್ಳು ದಾಂಪತ್ಯದ ಕನಸುಗಳ ಮನೆಗೆ, ಥೇಟರಿನ ಹುಡುಗರ ಖೋಲಿಗೆ, ಕಡೆಗೆ ತಾರ್ ದೇವ್ ನ ಮನೆಗೆ …. ಪ್ರತಿ ಕಡೆ ಇದು ಬಾಗಿಲು ತಟ್ಟುತ್ತದೆ, ಪ್ರತಿ ಸಲ ನಿರಾಕರಣೆಗೆ ಒಳಗಾಗುತ್ತದೆ.
ಕಡೆಗೂ ಅದಕ್ಕೆ ಒಂದು ವಿಳಾಸ ಸಿಗುವುದಿಲ್ಲ, ’ಇದು ನನ್ನದು’ ಅಂತ ಯಾರೂ ಅದನ್ನು ಕ್ಲೈಮ್ ಮಾಡುವುದೇ ಇಲ್ಲ, ಕೈಗೆತ್ತಿಕೊಳ್ಳದ ಪ್ರೀತಿಯಂತೆ ತನ್ನ ಇಲ್ಲದ ವಿಳಾಸಕ್ಕಾಗಿ ಮೌನದಲ್ಲೇ ಕಾಯುತ್ತಾ, ಕಥೆಯ ಒಂದು ಪಾತ್ರವಾಗಿ ಬರುವ ಫ್ಲಾಸ್ಕ್ ….
ಗುಂಗುರೂ ಕಿ ಥರಾಹ್ ಭಜ್ತಾ ಹೀ ರಹಾ ಹೂ ಮೇ… ಕಭಿ ಅಪ್ನೊಮೆ, ಯಾ ಗೈರೋ ಮೆ, ಗುಂಗ್ ರೂಕಿ ಜಗ ಥೋ ಹೈ ಪೈರೋ ಮೆ.. (ಕಾಲಿಗೆ ಕಟ್ಟಿದ್ದ ಗೆಜ್ಜೆಗಳ ಥರಹ ಹಾಡುತ್ತಲೇ ಇದ್ದೇನೆ ನಾನು, ನನ್ನವರಾದರೇನು, ಬೇರೆಯವರಾದರೇನು, ನನ್ನ ಜಾಗ ಮಾತ್ರ ಅಲ್ಲೇ… ಪಾದದಲ್ಲೇ)…
ಇಲ್ಲಿ ಎಲ್ಲರೂ ಅಸ್ತಿತ್ವಕ್ಕಾಗಿ, ಒಂದು ಗುರುತಿಗಾಗಿ, ತನ್ನದು ಮತ್ತು ಪೂರ್ತಿಯಾಗಿ ತನ್ನದು ಅನ್ನುವ ಒಂದು ಜೀವಕ್ಕಾಗಿ, ಕಡೆಗೆ ಒಂದು ವಿಳಾಸಕ್ಕಾಗಿ ಪರಿತಪಿಸುವವರೇ …. ಎಲ್ಲರಿಗೂ ಒಂದು ಬಂಧ ಬೇಕು. ಅದು ಅಸಾವರಿಗೆ, ಆ ನಡುವಯಸ್ಕ ಅವಿವಾಹಿತನಿಗೆ, ನಾಚ್ ವಾಲಿ ಮನೆಯಲ್ಲಿ ಬಂದವರೊಡನೆ, ಉಳಿದವರೊಡನೆ ಕ್ಷಣ ಭಂಗುರದ ದಾಂಪತ್ಯ ಹಂಚಿಕೊಳ್ಳುವವರಿಗೆ, ಕಡೆಗೆ ಆ ಫ್ಲಾಸ್ಕಿಗೆ ಸಹ ಒಂದು ನೆಲೆ ಬೇಕು. ಇಷ್ಟೆಲ್ಲಾ ಮನೆ, ಜನಗಳನ್ನು ತುಂಬಿಕೊಂಡ ಶಹರದಲ್ಲಿ ಇವರಿಗೆ ಇವರದು ಅಂತ ಏನೂ ಇಲ್ಲ. ಇವರದು ಮದುವೆ ಮನೆಯಲ್ಲಿ ಯಾರೂ ಪರಿಚಯ ಇರದೆ ಹೋಗಿ ಕೂರುವವರ ಪಾಡು. ಸುತ್ತಲೂ ಸಂಭ್ರಮ ಇದೆ, ಹೊಸ ಸಂಬಂಧಗಳು ಹುಟ್ಟುಕೊಳ್ಳುತ್ತಿವೆ, ಎಲ್ಲೆಲ್ಲೂ ನಗು … ಆದರೆ ಆ ಖುಷಿಯ ಹೊಳೆಯ ನಡುವೆ ಇವರದು ಮಾತ್ರ ಒಂದು ದ್ವೀಪ..
ಅದಿರಲಿ, ಓದಿ ಮುಗಿಸಿದ ಮೇಲೆ ಕಥೆ ಯಾಕೆ ನಮ್ಮದೂ ಅನ್ನಿಸಿಬಿಡುತ್ತದೆ? ಪ್ರೀತಿ ಬೇಕು ಎಂದು ರಚ್ಚೆ ಹಿಡಿದ ಮನಸ್ಸಿಗೆ ಸಮಾಧಾನ ಹೇಳಿಬಿಡಬಹುದು ಆದರೆ ಪ್ರೀತಿ ಕೊಡುತ್ತೇನೆ ಎಂದು ರಚ್ಚೆ ಹಿಡಿದ ಮನಸ್ಸಿಗೆ ಏನೆಂದು ಸಮಾಧಾನ ಹೇಳುವುದು?? ಜಯಂತರ ಕಥೆಗಳಲ್ಲಿ ಗೋಕರ್ಣ ಎಷ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ಮುಂಬೈ ಸಹ ಇದೆ. ಮುಂಬೈ ಶಹರದ ಆ ಅನಾಮಿಕತೆ ಮತ್ತು ಬೆವಾರಸು ತನ ಅವರ ಈ ಮೂರು ಕಥೆಗಳಲ್ಲೂ ಪ್ರಕಟವಾಗಿಯೇ ಕಾಣಿಸಿಕೊಳ್ಳುತ್ತದೆ. ಅವೆಲ್ಲವೂ ನಮ್ಮವಾಗುತ್ತಾ ಹೋಗುತ್ತವೆ.
ಎಲ್ಲಾ ಮುಗಿದ ಮೇಲೂ,   ಒಡಲಿನ ತುಂಬಾ ಬಿಸುಪು ತುಂಬಿಕೊಂಡಿದ್ದರೂ ಯಾರ ಮನೆಗೂ ಸೇರದ ಆ ಫ್ಲಾಸ್ಕ್ ಇಂದಿಗೂ ನನ್ನಲ್ಲೇ ಉಳಿದುಕೊಂಡಿದೆ.

‍ಲೇಖಕರು G

January 11, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. bharathi b v

    Idee lekhana Ede tumbaaaaaa .. ಬೇಕು ಎಂದು ರಚ್ಚೆ ಹಿಡಿದ ಮನಸ್ಸಿಗೆ ಸಮಾಧಾನ ಹೇಳಿಬಿಡಬಹುದು ಆದರೆ ಪ್ರೀತಿ ಕೊಡುತ್ತೇನೆ ಎಂದು ರಚ್ಚೆ ಹಿಡಿದ ಮನಸ್ಸಿಗೆ ಏನೆಂದು ಸಮಾಧಾನ ಹೇಳುವುದು?? ….entha saalu !

    ಪ್ರತಿಕ್ರಿಯೆ
  2. sunil rao

    Jayanth avara naataka bahala muda…aa metro maduve naa innu maretilla..succha fixed image.
    Opera house nodabeku..

    ಪ್ರತಿಕ್ರಿಯೆ
  3. ಲಕ್ಷ್ಮೀಕಾಂತ ಇಟ್ನಾಳ

    ಸಂಧ್ಯಾರಾಣಿ ಜಿ, ನಮಸ್ತೆ. ಬಹು ಆಪ್ತ ಬರಹ ಎಂದಿನಂತೆ. ಆ ಫ್ಲಾಸ್ಕ ನನಗೆ ಗುಲ್ಜಾರರ ಗತ ಜೀವನದ ಬಾಲ್ಯದ ನೆನಪನ್ನು ತಂದಿತು. ಗುಲ್ಜಾರರು, ತಮ್ಮ ಜೀವನವನ್ನು ಯಾವ ಮುಚ್ಚುಮರೆಯಿಲ್ಲದೆ, ತಮ್ಮ ಗತ ಜೀವನವನ್ನು ಹೇಳುತ್ತ,ಅಮ್ಮನನ್ನು ಬಾಲ್ಯದಲ್ಲಿಯೇ ಕಳೆದುಕೊಂಡ ತಮ್ಮ ಸ್ಥಿತಿ, ತಮ್ಮ ಮನೆಯಲ್ಲಿ ಎಲ್ಲೆಲ್ಲೊ ಎತ್ತಿ ಬಿಸಾಕುವ ಹಳೆಯ ಗೊಂಬೆಯಂತೆ ಬದಲಾಗುತ್ತಿತ್ತು ಎಂದು ಹೇಳಿಕೊಳ್ಳುತ್ತಾರೆ.
    ಆ ಮನೆಯಲ್ಲಿ ತನ್ನ ಸ್ಥಾನದ ಕುರಿತು ಮಣ್ಣಿನ ಬೊಂಬೆಯ ರೂಪದ ಅವರ ಕವನ ಹೀಗಿದೆ :
    ಬೇಮಾನಿ ಸಿ ಚೀಜ್ ಥಾ ವೊ
    ಮಿಟ್ಟಿ ಕಾ ಬನಾ ಭಟ್ಟಿ ಮೇ ಪಕಾ
    ಇಕ್ ಬಟ್ ಕಾ ಚೆಹರಾ ಥಾ
    ಡ್ರಾಯಿಂಗ್ ರೂಮ್ ಮೇಂ ರಖಾ ರೆಹತಾ ಥಾ
    ಬಾತೇಂ ಕರತೆ ಕಯಿ ದಫಾ ವೊ ಬೀಚ್ ನಜರ್ ಮೇಂ ಪಡತಾ ಥಾ
    ಏಕ್ ಜಗಹ್ ಸೆ ದೂಸರೀ ಜಾನಿಬ್ ರಖನಾ, ಖಿಸಕನಾ ಪಡ್ತಾ ಥಾ
    ಸಾಫ್ ಸಫಾಯಿ ಕರತೇ ಅಕ್ಷರ್ ಊಪರ್ ನೀಚೆ ರಖ್ ಕೆ ದೇಖಾ
    ದರವಾಜೋಂ ಕೆ ಆಗೆ ಫೀಛೆ
    ಕೋಯಿ ಜಗಹ್ ಬನ್ ಪಾಯೀ ನಹೀಂ
    ಟೂಟಾ ಭೀ ನಹೀ ಕೆ ಫೇಂಕ್ ಹೀ ದೇತೆ
    ಬರಸೋ ತಕ್ ಕುಛ್ ಆಗೆ ಪೀಛೆ ದಾಯೇಂ ಬಾಯೇಂ ರಖತೇ ರಖತೇ
    ಘರ್ ಕೆ ಬಾಹರ್ ಜಾ ರಖಾ ಜಬ್
    ಭಾಗ್ ಗಯಾ ವೊ!
    ಪೂಛತೇ ಹೈಂ ಅಕ್ಸರ್ ಚೌರಾಹೇ ಪರ್ ಅಬ್ ಮುಝ್ ಸೆ
    ಮಿಟ್ಟಿ ಕಾ ಬನಾ ಭಟ್ಟಿ ಮೇಂ ಪಕಾ
    ಇಕ್ ಚೆಹರಾ ಥಾ… ವೊ ತುಮ್ ತೊ
    ಜಯಂತರ ಫ್ಲಾಸ್ಕ್ ನನ್ನನ್ನು ಗುಲ್ಜಾರ ಕಡೆಗೆ ಕರೆದೊಯ್ದಿತು, ತಮ್ಮ ಆಪ್ತ ಬರಹಗಳ ಮೂಲಕ ಸಂಧ್ಯಾಜಿ. ಬರಹ ತುಂಬ ಆಪ್ತವಾಯಿತು. ಅಂದಹಾಗೆ, ಮೊನ್ನೆ ಜಯಂತರ ‘ತೆರೆದಷ್ಟೆ ಬಾಗಿಲು’ ಕಥೆಯ ಬಗ್ಗೆ ಬರೆಯಲು ಪ್ರಯತ್ನಿಸಿರುವೆ. ‘ಸಂಪದ.ನೆಟ್’ ನಲ್ಲಿ ಪ್ರಕಟಿತವಾಗಿದೆ. ಅದರಲ್ಲಿ ತಮ್ಮ ಒಂದು ಮಾತಿನಿಂದಲೇ ಪ್ರಾರಂಭಿಸಿದ್ದೇನೆ.ಬರಹವನ್ನು ಮುಖಪುಟಕ್ಕೆ ವಾರದಿಂದ ಹಾಕಿಕೊಂಡು ಜಯಂತರಿಗೆ ಅರ್ಹ ಗೌರವ ತೋರಿಸಿದ್ದಾರೆ.

    ಪ್ರತಿಕ್ರಿಯೆ
  4. Anil Talikoti

    ವಾವ್ -ಜಯಂತರ ಇವೆಲ್ಲ ಕಥೆಗಳನ್ನು ತುಂಬಾ ಮೆಚ್ಚಿಕೊಂಡಿದ್ದೇನೆ. ನಿಮ್ಮ ನಿರೂಪಣೆಯು ಅಷ್ಟೆ ಸೊಗಸಾಗಿದೆ. ನಾಟಕಗಳು ಎಷ್ಟರ ಮಟ್ಟಿಗೆ ಕಥೆಗಳ ಭಾವವನ್ನು ಹಿಡಿದಿಡುವಲ್ಲಿ ಯಶಸ್ವಿಯಾದವೋ ಎಂಬುವದರ ಬಗ್ಗೆ ಸ್ವಲ್ಪ ಹೇಳಬೇಕಾಗಿತ್ತು ಎನಿಸಿತು. May be ಮುಂದಿನ ಅಂಕಣದಲ್ಲಿ ?

    ಪ್ರತಿಕ್ರಿಯೆ
  5. ಶಮ, ನಂದಿಬೆಟ್ಟ

    ಪ್ರೀತಿ ಬೇಕು ಎಂದು ರಚ್ಚೆ ಹಿಡಿದ ಮನಸ್ಸಿಗೆ ಸಮಾಧಾನ ಹೇಳಿಬಿಡಬಹುದು ಆದರೆ ಪ್ರೀತಿ ಕೊಡುತ್ತೇನೆ ಎಂದು ರಚ್ಚೆ ಹಿಡಿದ ಮನಸ್ಸಿಗೆ ಏನೆಂದು ಸಮಾಧಾನ ಹೇಳುವುದು??
    ಕಾಡುತಾವ ನೋಡ ಇವೆಲ್ಲ 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: