’ಪುಟ್ಟ ಮಡಿಕೇರಿಯ ಒಡಲೊಳಗೆ ಬೆಟ್ಟದ ರಾಶಿಯಷ್ಟು ಕನ್ನಡಿಗರು..’ – ಶಿವು ಮೊರಿಗೇರಿ


ಶಿವು ಮೊರಿಗೇರಿ

ಮಡಿಕೇರಿ ಸಾಹಿತ್ಯ ಸಮ್ಮೇಳನಕ್ಕೆ ದಾನಿಗಳ ನೀರಸ ಪ್ರತಿಕ್ರಿಯೆ ಇದೆ ಎಂಬ ಸುದ್ದಿಯನ್ನು ಪತ್ರಿಕೆಯೊಂದರಲ್ಲಿ ನೋಡಿದಾಗ ಮನಸಿನ ಮೂಲೆಯಲ್ಲೆಲ್ಲೋ ಚೂರು ನೋವಾಗಿತ್ತು. ಆಮೇಲೆ ಖಚಿತವಾಗಿ ನಂಗೆ ಮತ್ತದೇ ಮಡಿಕೇರಿಯ ಸಾಹಿತ್ಯ ಸಮ್ಮೇಳನಕ್ಕೆ ಹೊರಡುವ ಅವಕಾಶ ಸಿಕ್ಕಾಗಲೂ ಕೂಡಾ ಅಲ್ಲಿನ ಛಳಿ ಹೇಗಿರುತ್ತೋ, ವ್ಯವಸ್ಥೆ ಹೇಗಿರುತ್ತೋ ಎನ್ನುವ ಭಾವ ಒಂದೆಡೆಯಾದರೆ, ಅರೆ! ಚೀನಾದ ಜಾತ್ರೆಗೂ ಜಪಾನ್ ನ ಉರುಸ್ ಗೂ ಹೋಲಿಕೆ ಮಾಡೋಕ್ಕಾಗುತ್ತಾ ? ಅದ್ದೇನಾದ್ರೂ ಆಗ್ಲಿ ನುಗ್ಗೋದೇ ಅಂತ ಇನ್ನೊಮ್ಮೆ ಮನದೊಳಗಿನ ಮನನಕ್ಕೆ ಮಣಿದು ದಿನ ಮುಂಚೆ ಮಡಿಕೇರಿಯಲ್ಲಿಳಿದಾಗ ಮಂಜಿನ ನಗರಿಯ ಸಮ್ಮೇಳನದ ಅವಸರದ ಸಿದ್ಧತೆ ಮಂಪರು ಬೆಳಗಲ್ಲೂ ಮಿಂಚುತ್ತಿತ್ತು. ನಗರದ ಅಲ್ಲಲ್ಲಿ ಖ್ಯಾತನಾಮರ ಹೆಸರಿನ ದ್ವಾರಗಳು ಮತ್ತು ರಸ್ತೆ ಬದಿಯ ಕಂಬ ಕಂಬಗಳ ಮೇಲೂ ಕಂಗೊಳಿಸುತ್ತಿದ್ದ ಕನ್ನಡದ ಬಾವುಟಗಳು, ಸಮ್ಮೇಳನಕ್ಕಾಗಿಯೇ ನಳಿನಳಿಸುತ್ತಿದ್ದ, ಇನ್ನೂ ಹಸಿಯಾಗಿಯೇ ಇದ್ದ ಟಾರ್ ನ ಕಾರುಬಾರು, ಕೆ.ಎಂ. ಕಾರ್ಯಪ್ಪ ಕಾಲೇಜು ಮುಖ್ಯದ್ವಾರದ ಪ್ರಾಂಗಣದ ಗೋಡೆಗೆ ಲಗುಬಗೆಯಿಂದ ಸುಣ್ಣ ಬಳಿಯುತ್ತಿದ್ದುದು, ಈ ಎಲ್ಲಾ ಸಿದ್ಧತೆಗಳು ಕೂಡಾ ಕೊಡವರ ಆತಿಥ್ಯದ ಪ್ರೀತಿಯನ್ನು ಸಾರುತ್ತಿತ್ತು.
ಬಸ್ ನಿಲ್ದಾಣದಿಂದ ಮುಖ್ಯ ವೇದಿಕೆಯವರೆಗೆ ಉಚಿತ ಸಾರಿಗೆ ವ್ಯವಸ್ಥೆ, ನಗರದ ಅಷ್ಟೂ ಆಟೋ ಚಾಲಕರು ಸ್ವಯಂಕೃತವಾಗಿ ಕೇವಲ 10 ಬಾಡಿಗೆ ನಿಗದಿಪಡಿಸಿದ್ದು, ಸಮ್ಮೇಳನದಲ್ಲಿ ಉಚಿತ ಆರೋಗ್ಯ ಸೇವೆ, ಸುಸಜ್ಜಿತ ತಾತ್ಕಾಲಿಕ 150 ಕ್ಕೂ ಹೆಚ್ಚಿನ ಶೌಚಾಲಯಗಳು, ಪ್ರತಿ ಮುಂಜಾನೆ ಸಮ್ಮೇಳನಕ್ಕೆ ಆಗಮಿಸಿದ ಅತಿಥಿಗಳಿಗೆ ಬಿಸಿನೀರ ಸೌಲಭ್ಯ, ಪ್ರತಿದಿನ ಮುಂಜಾನೆ ರಾಜ್ಯದ ಎಲ್ಲಾ ದಿನ ಪತ್ರಿಕೆಗಳ ಉಚಿತ ಕೊಡುಗೆ, ಭರಪೂರ ಕುಡಿಯುವ ನೀರಿನ ವ್ಯವಸ್ಥೆ, ಬೆಳಗ್ಗೆ 12ರ ವರೆಗೂ ಉಪಹಾರದ ವ್ಯವಸ್ಥೆ, ಸರಿರಾತ್ರಿಯವರೆಗೂ ಅನ್ನ ದಾಸೋಹ, ಜಿಲೇಬಿ, ಪೂರಿ, ಲಾಡು, ಮೊಳಕೆ ಕಾಳಿನ ಪಲ್ಯ, ಅಕ್ಕಿ ರೊಟ್ಟಿ, ಕಡುಬು ಹಿಟ್ಟು, ಹಲ್ವಾ, ಚಪಾತಿ, ಹೀಗೆ ತರೇವಾರಿ ಅಡುಗೆ, ವಿದ್ಯುತ್ ದೀಪಗಳ ಅಲಂಕಾರ, ಕಳೆದ ಸಮ್ಮೇಳನದಲ್ಲಿ ನೋಡಿದಂಥಹದ್ದೇ ಬೃಹತ್ ವೈಭವದ ಮುಖ್ಯ ವೇದಿಕೆ, ವೈರಿಗಳೂ ಮೆಚ್ಚುವಂತೆ ತಯಾರಿಸಲಾಗಿದ್ದ ಬೃಹತ್ ಪುಸ್ತಕಗಳ ಮಳಿಗೆ, ಸಾರ್ವಜನಿಕ ವಾಣಿಜ್ಯ ಮಂಡಳಿ, ಪುಟ್ಟ ಮಕ್ಕಳೂ ಸಹ  ಕಾಳಜಿಯಿಂದ ತೆಗೆದುಕೊಂಡ ಸ್ವಯಂ ಸೇವಕರ ಜವಾಬ್ದಾರಿಯನ್ನು ನೋಡಿದಾಗ ‘ಕೊಡಗು ಸಣ್ಣದಲ್ಲ, ಕೊಡವ ಬಡವನಲ್ಲ’ ಎನ್ನಿಸಿಬಿಟ್ಟಿತು. ಇಷ್ಟೆಲ್ಲಾ ವ್ಯವಸ್ಥೆಗಳಿದ್ದಮೇಲೂ ಇನ್ನೇನು ಬೇಕು ಒಂದು ಸಮ್ಮೇಳನ ಭರ್ಜರಿಯಾಗಿ ಮನ ಮನಗಳಲಿ ನೆಲೆಯೂರಲು ಎಂದುಕೊಳ್ಳುತ್ತಾ ಮೊದಲ ದಿನವನ್ನು ಕಳೆದಾಗಿತ್ತು.

ಬೆಳಗಿನ ಜಾವ ಕಾವೇರಿ, ಶರಾವತಿಗಳಲ್ಲಿ ಮಿಂದೆದ್ದು ಬಂದ ಗಾಳಿ, ಬಿಂದು ಇಬ್ಬನಿಯನ್ನು ಹೊತ್ತು ತರುವುದ ಮರೆತೀತೆ ? ಅಂತೆಯೇ ಹುಲ್ಲ ಎಳೆ ಎಳೆಯಲ್ಲೂ ಸುಳಿದು ಬರುತ್ತಿದ್ದ ಛಳಿಗಾಳಿಯೊಟ್ಟಿಗೇನೆ ಸಮ್ಮೇಳನದ ಮೊದಲ ದಿನ ಮುಖ್ಯ ವೇದಿಕೆಯ ಮುಂಬಾಗಿಲಿಗೆ ಬಂದು ನಿಲ್ಲುವಷ್ಟರಲ್ಲಿ ಕಿರಣಗಳ ಬೆತ್ತ ಹಿಡಿದು ಸೂರ್ಯ ಛಳಿ ಓಡಿಸುತ್ತಿದ್ದ. ಆಮೇಲೆ ಕೆಲವೇ ಕೆಲವು ನಿಮಿಷಗಳಷ್ಟೆ, ಜಿಲ್ಲಾ ಉಸ್ತುವಾರಿ ಸಚಿವರಿಂದ ರಾಷ್ಟ್ರಧ್ವಜ, ಪರಿಷತ್ತಿನ ಅಧ್ಯಕ್ಷರಿಂದ ಪರಿಷತ್ತಿನ ಧ್ವಜ, ಜಿಲ್ಲಾ ಕ.ಸಾ.ಪ ಅಧ್ಯಕ್ಷರಿಂದ ನಾಡಧ್ವಜಗಳು ಮುಗಿಲಿಗೇರಿ ಗಾಳಿಯಲ್ಲಿ ತೇಲಿ ಪಟಪಟಿಸತೊಡಗಿದವು. ನಂತರ ನಡೆದದ್ದು ಕನ್ನಡಿಗರ ಐಕ್ಯತೆಯ ಸಂಕೇತದ ರಥೋತ್ಸವ. ಈ ರಥೋತ್ಸವದ ಉತ್ಸವ ಮೂರ್ತಿ ನಾ. ಡಿಸೋಜಾರವರು ರಥದಲ್ಲಿ ಕುಳಿತು ಕೈ ಬೀಸುವುದನ್ನು ನೋಡಲು ರಸ್ತೆಗಳ ಇಕ್ಕೆಲುಗಳ ತುಂಬೆಲ್ಲಾ ಕಿಕ್ಕಿರಿದು ತುಂಬಿದ್ದ ಸಾಹಿತ್ಯಾಸಕ್ತರು ವಂದನೆ,ಚಪ್ಪಾಳೆಗಳ ಮೂಲಕ ಗೌರವ ಸೂಚಿಸುತ್ತಿದ್ದರು.
ಉತ್ಸವ ‘ಭಾರತೀಸುತ ಮುಖ್ಯ ವೇದಿಕೆ’ಗೆ ಬಂದ ಮೇಲೆ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿದ್ಯುಕ್ತ ಉದ್ಘಾಟನೆಯನ್ನು ಮುಖ್ಯಮಂತ್ರಿಗಳು ನೆರವೇರಿಸಿದರು. ಪಕ್ಷ ಬೇಧ ಮರೆತು ಒಂದೇ ವೇದಿಕೆಯಲ್ಲಿ ಸೇರಿದ್ದ ರಾಜಕಾರಣಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಎನ್ನುವಂಥಹ ನಿಲುವುಗಳು ಭಾಷಣಗಳಾಗಿದ್ದವು. ಆದರೆ ಪ್ರತಿಯೊಬ್ಬರ ಭಾಷಣದಲ್ಲೂ ಅಖಂಡ ಕರ್ನಾಟಕದ ದೃಡ ಸಂಕಲ್ಪ ಸಹಜವಾಗಿ ಬಂದರೂ ಸೌಲಭ್ಯ ಹಂಚಿಕೆಯಲ್ಲೂ ಈ ನಿಲುವು ಒಳ್ಳೆಯದೇನೋ ಎಂದು ನನಗನ್ನಿಸಿತು. ಈ ಕಾರ್ಯಕ್ರಮ ಪ್ರಾರಂಭವಾಗುವಷ್ಟರಲ್ಲಿ ಎಲ್ಲಿತ್ತೋ ಜನ ಹರಿದು ಬಂತು ನೋಡಿ ಬೆಲ್ಲವ ಕಂಡ ಇರುವೆಗಳಂತೆ. ಒಮ್ಮೆ ಹಿಂದಕ್ಕೆ ತಿರುಗಿ ನೋಡಿದ ನಾನು ದಂಗಾಗಿ ಹೋದೆ. ಪುಟ್ಟ ಮಡಿಕೇರಿಯ ಒಡಲೊಳಗೆ ಬೆಟ್ಟದ ರಾಶಿಯಷ್ಟು ಕನ್ನಡಿಗರು. ಮೆಚ್ಚದೇ ಇರಲು ಹೇಗೆ ಸಾಧ್ಯ ಆ ಒಗ್ಗಟ್ಟಿನ ಒಳ ಹರಿವನ್ನು.
ಉದ್ಘಾಟನಾ ಸಮಾರಂಭದ ಬಳಿಕ ನಾ ಕಂಡದ್ದು ಸಂಜೆಯ ಕಾವ್ಯ-ಗಾಯನ . ಒಂದು ಸತ್ವಯುತ ಸಾಹಿತ್ಯಕ್ಕೆ ಅದರದ್ದೇ ತೂಕದ ರಾಗ ಸಂಯೋಜನೆ ಮತ್ತು ಸಂಗೀತ ಸಹಕರಿಸಿದ ಕವನವನ್ನು ಒಮ್ಮೆ ಕೇಳಿಬಿಟ್ಟರೆ ಯಾವ ಸಾಹಿತ್ಯಾಸಕ್ತನೂ ಆ ಸಾಹಿತ್ಯವನ್ನು ಮರೆಯಲಾರ. ಡಾ.ನಾ ಮೊಗಸಾಲೆಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹತ್ತು ಕವಿ/ಕವಯಿತ್ರಿಯರ ಕವನಗಳು ಗಾನರೂಪದಲ್ಲಿ ಸಭಿಕರ ಮನಗೆದ್ದವು. ಅದರಲ್ಲಿ ಲಕ್ಷ್ಮಿಪತಿ ಕೋಲಾರರ ‘ನವಿಲು ಮರಿ’ ಮತ್ತು ಶ್ರೀಮತಿ ವಿನಯಾ ಒಕ್ಕುಂದರ ‘ಹೊಸ ನದಿಯ ಹುಡುಕಿ’ ಕವನಗಳಿಗೆ ಸಿಕ್ಕ ಚಪ್ಪಾಳೆಗಳ ಗಣನೆಗೆ ನಕ್ಷತ್ರಗಳನ್ನು ಕೆಳಗಿಳಿಸಬೇಕಾದೀತು. ಅದರಲ್ಲೂ ವಿನಯಾ ಒಕ್ಕುಂದರವರ ಕವನವನ್ನು ಗಾಯನಕ್ಕಾಗಿಯೇ ಬರೆದಿದ್ದಾರೇನು? ಎನ್ನುವಷ್ಟು ಅನುಮಾನ ಕಾಡುವ ಹಾಗೆ ಈಗಲೂ ಗುಂಯ್ ಗುಡುತ್ತಿದೆ ಆ ಕವನ. ’ಒಂದಲ್ಲ ಒಂದುದಿನ….’ ಕವನದ ಸಾಲನ್ನು ನಾನು ತುಂಬಾ ದಿನಗಳ ಕಾಲ ಮರೆಯಲಾರೆನೆನ್ನಿಸುತ್ತೆ. ಪುತ್ತೂರು ನರಸಿಂಹ ನಾಯಕ್,ಶ್ರೀಮತಿ ಎಸ್.ಸುನಿತಾ,ಶ್ರೀಮತಿ ಸೀಮಾ ರಾಯ್ಕರ್ ಇವರ ಧ್ವನಿಗಳಿಗೆ ಮನಸೋಲದ ಮನಸುಗಳಿರಲಿಲ್ಲವೇನೋ ಅಲ್ಲಿ. ಕಾರ್ಯಕ್ರಮವನ್ನು ಮುಗಿಸಿಕೊಂಡು ಎರಡನೆಯ ದಿನದ ಕಾರ್ಯಕ್ರಮದ ವೀಕ್ಷಣೆಯ ವೇಳಾಪಟ್ಟಿಯೊಂದಿಗೆ ಯೋಜನೆ ಹಾಕಿಕೊಂಡ ಮೇಲೆಯೇ ನಾನು ಗಡತ್ತಾಗಿ ನಿದ್ದೆ ಹೋದದ್ದು.

ಸಾಹಿತ್ಯ ಸಮ್ಮೇಳನದ ಎರಡನೆಯ ದಿನ ನಿಜಕ್ಕೂ ಅದ್ಭುತ ವಿಭಿನ್ನ ದಿನ. ಸಾಹಿತ್ಯ ಸಮ್ಮೇಳನವೊಂದರ ಮುಖ್ಯ ವೇದಿಕೆಯಲ್ಲಿ ‘ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ’ ಎನ್ನುವಂಥಹ ಕಾರ್ಯಕ್ರಮಕ್ಕೆ ಅವಕಾಶ ನೀಡುವ ಮೂಲಕ ಮಡಿಕೇರಿ ಸಮ್ಮೇಳನ ಹೊಸ ನಡೆಯೊಂದಕ್ಕೆ ನಾಂದಿಯಾಡಿದೆ. ಆದರೆ ಈಗಲೂ ನಂಗೆ ಕಾಡುವ ಇನ್ನೊಂದು ಪ್ರಶ್ನೆಯೆಂದರೆ ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆಯಂಥಹ ಕಾರ್ಯಕ್ರಮಗಳು ಹೇಗೆ ಮುಖ್ಯ ವೇದಿಕೆಗೆ ಬಂದಿತೋ ಖುದ್ದು ಹಾಗೇನೇ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳಿಗೂ ಮುಖ್ಯ ವೇದಿಕೆಯಲ್ಲೊಂದಿಷ್ಟು ಅವಧಿ ಅವಕಾಶ ನೀಡಬೇಕಿತ್ತು. ವಿಷಯಾಂತರವನ್ನು ಬಿಟ್ಟು. ವೇದಿಕೆಯಲ್ಲಿ ನಡೆದ ಅಪೂರ್ವ ಕಾರ್ಯಕ್ರಮದ ಕುರಿತು ಹೇಳೋದಾದ್ರೆ ಡಾ.ಸಿದ್ಧಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚರ್ಚಿತಗೊಂಡ ವಿಷಯಗಳೆಲ್ಲವೂ ಅಲ್ಲಿ ನೆರೆದಿದ್ದ ಸಮಾನ ಮನಸ್ಕರು, ಪ್ರಜ್ಞಾವಂತರುಗಳ ಹಿಡಿದಿಟ್ಟಿತ್ತು. ಸಾಹಿತ್ಯಾಸಕ್ತರಿಗೆ ಸಾಹಿತ್ಯದ ಇನ್ನೊಂದು ಮಗ್ಗುಲಿನ ದರ್ಶನವಾಯಿತು ಎನ್ನಬಹುದೇನೋ.
ಈ ಸಮ್ಮೇಳನದಲ್ಲಿ ಮುಖ್ಯವೇದಿಕೆಯಷ್ಟೇ ಘನತೆಯುಳ್ಳ ‘ಕೊಡಗಿನ ಗೌರಮ್ಮ ವೇದಿಕೆ’ ಎನ್ನುವ ಇನ್ನೊಂದು ವೇದಿಕೆಯೂ ಇತ್ತು. ಆ ಸಮನಾಂತರ ವೇದಿಕೆಯ ಕುರಿತು ಹಲವರಿಗೆ ಹಲವು ಅಭಿಪ್ರಾಯಗಳಿದ್ದಾವೆ. ಸಮಾನಾಂತರ ವೇದಿಕೆಗಳಿಗೆ ಹೆಚ್ಚು ಸಭಿಕರು ಇರೊಲ್ಲ ಅನ್ನೋದು ಕೂಡಾ ಸೇರಿರುತ್ತೆ. ನಾನು ಈ ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ ಕಾರ್ಯಕ್ರಮದಿಂದ ಸಮಾನಾಂತರ ವೇದಿಕೆಗೆ ಹೋದಾಗ ಅಲ್ಲಿಯೂ ಕೂಡಾ ಪ್ರಗತಿಪರ ಚಿಂತನೆಯುಳ್ಳ ವಿಜ್ಞಾನ-ತಂತ್ರಜ್ಞಾನ ಕಾರ್ಯಕ್ರಮ ಟಿ.ಆರ್.ಅನಂತರಾಮು ಅಧ್ಯಕ್ಷತೆಯಲ್ಲಿ ನಡೆಯುತ್ತಿತ್ತು. ಒಂದೆಡೆ ಮಾನವ ಸಂಬಂಧಗಳಲ್ಲಿ ಪ್ರಗತಿಪಥ ಸಾಧಿಸುವ ಹುಮ್ಮಸ್ಸಿನ ಕಾರ್ಯಕ್ರಮವಾದರೆ ಇನ್ನೊಂದೆಡೆ ಮಾನವ ನಿರ್ಮಿತ ಲೋಕದೊಳಗಿನ ಪ್ರಗತಿಪಥ ಸಾಧಿಸುವ ಹುಮ್ಮಸ್ಸಿನ ಕಾರ್ಯಕ್ರಮ. ಅದಕ್ಕೇ ನಾನು ಹೇಳಿದ್ದು, ಇಂಥಹ ಎರಡೂ ಕಾರ್ಯಕ್ರಮಗಳೂ ಒಂದೇ ವೇದಿಕೆಯಲ್ಲಿ ನಡೆದರೆ ಸಾಹಿತ್ಯಾಸಕ್ತರಿಗೆ ಜ್ಞಾನದ ಭೂರಿ ಭೋಜನ ಎಂದುಕೊಳ್ಳುತ್ತಾ ಕಾರ್ಯಕ್ರಮದಿಂದ ಹೊರಬಂದವನು ಮತ್ತೆ ನಾನು ಭಾಗವಹಿಸಿದ್ದು ಮತ್ತೆ ಮುಖ್ಯ ವೇದಿಕೆಯಲ್ಲಿದ್ದ ಸಮ್ಮೇಳನಾಧ್ಯಕ್ಷರೊಂದಿಗಿನ ಸಂವಾದಕ್ಕೆ.
ಈ ಸಂವಾದದಲ್ಲಿ ನನ್ನ ಮನನಕ್ಕೆ ಬಂದದ್ದೇನೆಂದರೆ ವೇದಿಕೆಯ ಮೇಲೆ ಮಾತನಾಡೋಕ್ಕೆ ಕೇವಲ ಮಾತುಗಾರಿಕೆಯಿದ್ದರೆ ಸಾಲದು ಜೊತೆಗೆ ಸಮಯ ಪ್ರಜ್ಞೆಯೂ ಇರಬೇಕು ಎಂಬುದನ್ನು. ಈ ಸಂವಾದದಲ್ಲಿ ನಾ.ಡಿಸೋಜಾರವರು ನೀಡಿದ ಉತ್ತರಗಳನ್ನು ಕೇಳುತ್ತಲೇ ಇವರು ಕೇವಲ ನಾ.ಡಿಸೋಜ ಅಲ್ಲ ನಾಡಿನ ನಾಡಿ ಮಿಡಿತವೇ ಹೌದು ಎಂದೆನಿಸಿದ್ದು ಅತಿಶಯೋಕ್ತಿಯೇನಲ್ಲ. ಇನ್ನೇನು ಎಲ್ಲಾ ಸರಿಹೋಯ್ತು ಎನ್ನುವಷ್ಟರಲ್ಲಿಯೇ ಎಲ್ಲಿಂದಲೋ ಬಂದ ಸಮಸ್ಯೆಯೊಂದು ಸಂವಾದದ ಆರೋಗ್ಯಕರ ವಾತಾವರಣಕ್ಕೆ ತುಸು ಬೇಜಾರು ತರಿಸಿಬಿಟ್ಟಿತು. ಅದೇ ಬೇಜಾರಿನಲ್ಲಿ ಅಂದಿನ ಕಾರ್ಯಕ್ರಮ ವೀಕ್ಷಣೆಗೆ ವಿರಾಮವಿಟ್ಟುಬಿಟ್ಟೆ. ಈ ನಡುವೆ ಸ್ವಲ್ಪ ಜಾಸ್ತಿ ಬಿಡುವು ಮಾಡಿಕೊಂಡು ವೇದಿಕೆಯ ಆಚೆ ಸುತ್ತಿದ್ದು ಜಾಸ್ತಿಯಾಗಿದ್ದಕ್ಕೋ ಏನೋ ರಾತ್ರಿ ಮಲಗಿದ ತಕ್ಷಣ ಸರ್ರನೆ ಏರಿದ ನಿದ್ದೆಗೆ ಕಾಲು ನೋವು ಕೂಡಾ ಕಾಣಿಸಲೇ ಇಲ್ಲ.
ಇದ್ದಕ್ಕಿದ್ದಂತೆ ಕಣ್ಣು ಕುಕ್ಕಿದಂತಾಗಿ ಕಣ್ತೆರೆದು ನೋಡಿದರೆ ಅದಾಗಲೇ ಬೆಳಗಾಗಿತ್ತು. ಹಾಸಿಗೆಯಿಂದ ಏಳುತ್ತಲೇ ನೆನಪಾಯ್ತು ನಂಗೆ ಇದು ಸಮ್ಮೇಳನದ ಕೊನೆಯ ದಿನ ಎಂದು. ಒಂದೆಡೆ ಸಮ್ಮೇಳನದಿಂದ ಮರಳುತ್ತಿರುವ ಸಮಾಧಾನದ ನಡುವೆಯೇ ಇನ್ನೇನೋ ಕಳಕೊಂಡ ಭಾವ. ಯಾರನ್ನೋ ಬಿಟ್ಟು ಒಬ್ಬಂಟಿಯಾದಾಗಿನ ನಿಗಿಶಾಖ ಎದೆಯೊಳಗೆ. ಕೇವಲ ಎರಡೇ ಎರಡು ದಿನದೊಳಗೆ ನನ್ನನ್ನು ಹೀಗೆ ಸೆಳೆದ ಪ್ರಕೃತಿ ಸಿರಿಗೆ, ಅಲ್ಲಿ ಕಂಡ ಮೌಲ್ಯಗಳಿಗೆ ,ಅಗಾಧ ಜೀವನ ಪ್ರೀತಿಗೆ ಸಿಂಹ ಗುಂಡಿಗೆಯ ಆದರಾತಿಥ್ಯಕ್ಕೆ ಎಲ್ಲ ಅಂದರೆಲ್ಲವುಗಳ ಪಾದಗಳಿಗೆರಗಿ ಬರಲಿ ನನ್ನ ಮನದ ಭಾವ ಪುಟಗಳು ಎನ್ನುವಂಥಹ ಭಾರದ ನಡುವೆಯೇ ಕಾರ್ಯಕ್ರಮಗಳಿಗೆ ರೆಡಿಯಾಗಿ ನಾನು ಕೊನೆಯ ದಿನ ನೋಡಿದ ಮೊತ್ತ ಮೊದಲ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆಹ್ವಾನಿತರಲ್ಲಿ ನನ್ನ ಪರಿಚಯದ ಹಿರಿಕರೇ ತುಂಬಿದ್ದು ನನ್ನ ಖುಷಿಯ ಇಮ್ಮಡಿಗೆ ಇಂಬುಕೊಟ್ಟ ಅಂಶವಾಗಿತ್ತು.
ಈ ಕಾರ್ಯಕ್ರಮ ಪೂರ್ತಿ ನಮ್ಮವರದ್ದೇನೋ ಎಂಬಂಥಾ ಖುಷಿಯಲ್ಲಿ ನೋಡಿದ್ದು ‘ಕವಿಗೋಷ್ಠಿ’ಯನ್ನು. ಈ ಕಾರ್ಯಕ್ರಮವನ್ನು ಮುಗಿಸಿಕೊಂಡು ನಾನು ಮತ್ತೆ ನೇರವಾಗಿ ಸಮ್ಮೇಳನದ ಪುಸ್ತಕಗಳ ಮಳಿಗೆ, ವ್ಯಾಪಾರಿ ಮಳಿಗೆ ಹೀಗೆ ಸುತ್ತಾಡಿ ಮತ್ತೆ ಸಮಾರೋಪ ಸಮಾರಂಭಕ್ಕೆ ಬಂದು ಕುಳಿತುಕೊಳ್ಳುವಷ್ಟರಲ್ಲಿ ನನ್ನ ಎದೆಬಡಿತದಲ್ಲಿ ಮತ್ತದೇ ಕಂಪನ. ಪುಂಡಲೀಕ ಹಾಲಂಬಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಎಲ್ಲರೂ ಕೊಡಗನ್ನು ನೆನೆಯುತ್ತಿರಿ. ಕೊಡಗು ತನ್ನ ಶಕ್ತಿ ಮೀರಿ ಇಂಥಹ ಒಂದು ಬೃಹತ್ ಸಾಹಸದ ಕಾರ್ಯಕ್ರಮವನ್ನು ಇಡೀ ಕೊಡಗು ನಾಡಿನ ಎಲ್ಲರ ಸಹಕಾರದೊಂದಿಗೆ ಸಾಕಾರಗೊಳಿಸಿದ್ದೇವೆ. ಕೆಲವು ವ್ಯತ್ಯಗಳಾಗಿರಬಹುದು ಮನ್ನಿಸಿಬಿಡಿ, ಮುನಿಸಿಕೊಳ್ಳಬೇಡಿ ನಿಮ್ಮ ಕೊಡಗಿನ ಜೊತೆ ಹೀಗಂತ ಮಾತುಗಳನ್ನು ಕೇಳುತ್ತಲೇ ನಾನು ಸಾಹಿತ್ಯ ಸಮ್ಮೇಳನ ಗೆಲುವಿನ ಅಲೆಯಲ್ಲಿ ನಮ್ಮ ಕರುನಾಡ ಕೊಡಗಿನಲಿ ಎಂದೇಳಿಕೊಳ್ಳುತ್ತಾ ಕೆಲವು ಮುಖ್ಯವಾದ ವ್ಯಕ್ತಿಗಳಿಗೆ ವಿದಾಯವನ್ನು ಹೇಳಿ ಮಡಿಕೇರಿಯಿಂದ ಮರಳಿದ್ದೇನೆ. ಒಂದಂತೂ ಸತ್ಯ, ಕೇವಲ ಮೂರೇ ಮೂರು ದಿನಗಳಲ್ಲಿ ನೀವು ಒಂದು ಗ್ರಂಥಾಲಯದೊಳಗಿನಷ್ಟು ಕೃತಿಗಳ ಜ್ಞಾನ ಬೇಕಿದ್ದರೆ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದರೆ ಸಾಕೇನೋ ಎಂದೆನಿಸುತ್ತಿದೆ ನನಗೀಗ.
ನಂಗೆ ಈ ಬಾರಿ ಮತ್ತೊಂದು ಸಂತಸ ಕುದುರಿದೆ ಅದು ನೂರರ ಸಂಭ್ರಮದ ಅತ್ಯಮೂಲ್ಯ ಸಮ್ಮೇಳನ ನಮ್ಮ ಕೈ ಅಳತೆ ದೂರದಂತಿರುವ ಹಾವೇರಿಗೆ ಕೊಟ್ಟಿದ್ದಾರೆ. ಈಗಾಗಲೇ ಕಾರ್ಯಕ್ರಮದ ಕುರಿತು ವಿಚಾರ ವಿನಿಮಯ ನಡೆಯುತ್ತಿದೆ ಎಂಬ ಸುದ್ದಿಯನ್ನು ಕೇಳಿದ ಯಾವೊಬ್ಬ ಕನ್ನಡಿಗನಿಗೂ ಖುಷಿಯಾಗದಿರದು. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ.

‍ಲೇಖಕರು G

January 11, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. mallikarjuna kalamarahalli

    NIREEKSHEGE MEERIDA ATYANTA YASHASVEE SAMMEELANA. NIMMA GRAHIKE SARI IDE.SANGHATAKARADA T.P.RAMESH, BA.SHAMSUDIN&TANDAKKE ABHINANDANEGALU.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: