ಬಿಡಿ ಬಿಡಿ ಸಮಸ್ಯೆಗೆ ಇಡಿಯಾದ ಪರಿಹಾರ ಧ್ವನಿಸಿದ ಸಮ್ಮೇಳನ

ಗಿರೀಶ್ ಕೆ

ಕನ್ನಡದ ಛಾವಣಿಯಡಿಯಲ್ಲಿ ಚೈತನ್ಯ ತುಂಬಿಕೊಂಡ ಕನ್ನಡತನ

ಬಿಡಿ ಬಿಡಿ ಸಮಸ್ಯೆಗೆ ಇಡಿಯಾದ ಪರಿಹಾರ ಧ್ವನಿಸಿದ ಸಮ್ಮೇಳನ

ಮಡಿಕೇರಿ: ಘೋಷಿತ ಆಶಯಗಳನ್ನು ಸಂಪೂರ್ಣವಾಗಿ, ಅಂತರ್ಗತ ಉದ್ದೇಶವನ್ನು ತಕ್ಕಮಟ್ಟಿಗೆ ಈಡೇರಿಸುತ್ತಾ

ಮಡಿಕೇರಿಯ ಎಂಬತ್ತನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮುಕ್ತಾಯಗೊಂಡಿದೆ.

ಕೊಡಗಿನಲ್ಲಿ ಅಲ್ಪಸಂಖ್ಯಾತರಾಗುತ್ತಾ ಅಭದ್ರತೆ ಮತ್ತು ಕೀಳರಿಮೆಯಲ್ಲಿರುವ ಕನ್ನಡಿಗರಿಗೆ ಆತ್ಮಸ್ಥೈರ್ಯ ನೀಡುವ ಜತೆಗೆ ಕೊಡಗು ಕರ್ನಾಟಕದ ಅವಿಭಾಜ್ಯ ಅಂಗ ಎನ್ನುವ ಸಂದೇಶವನ್ನು ನೀಡುವುದು ಈ ಸಮ್ಮೇಳನದ ಘೋಷಿತ ಉದ್ದೇಶವಾಗಿತ್ತು. ನಾಡಿನ ಮೂಲೆ ಮೂಲೆಗಳಿಂದ ಹರಿದು ಬಂದು ಇಲ್ಲಿ ಹೆಪ್ಪುಗಟ್ಟಿದ ಲಕ್ಷದಷ್ಟು ಕನ್ನಡ ಮನಸ್ಸುಗಳು ಹಾಗೂ ಸ್ಥಳೀಯವಾಗಿ ದೊರೆತ ಬೆಂಬಲ ಇವೆಲ್ಲವೂ ಘೋಷಿತ ಉದ್ದೇಶ ಈಡೇರಿದ್ದರ ಕುರುಹುಗಳು. ಸಮ್ಮೇಳನಾಧ್ಯಕ್ಷ ನಾ.ಡಿಸೋಜ ಅವರ ಅಧ್ಯಕ್ಷೀಯ ಭಾಷಣ ಮತ್ತು ವಿವಿಧ ಸಂದರ್ಭದಲ್ಲಿ ಅವರು ಆಡಿದ ಮಾತುಗಳು ಹಾಗೂ ಗೋಷ್ಠಿಗಳಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಕನ್ನಡದ ಬದುಕು ವರ್ತಮಾನದಲ್ಲಿ ಅನುಭವಿಸುತ್ತಿರುವ ಮುಖ್ಯವಾದ ತಲ್ಲಣಗಳನ್ನು ಸಮಗ್ರವಾಗಿ ಗ್ರಹಿಸಿದ್ದರ ಸೂಚನೆಗಳು. ಆ ತಲ್ಲಣಗಳನ್ನು ಸರ್ಕಾರಕ್ಕೆ ಕೇಳಿಸುವಂತೆ ಹೇಳಿದ್ದು ಮತ್ತು ಒಂದು ಭಾಗದ ಕನ್ನಡಿಗರ ನೋವನ್ನು ಇಡಿ ನಾಡಿನ ನೋವನ್ನಾಗಿ ಬಿಂಬಿಸಿದ್ದು ಸಮ್ಮೇಳನದ ಅಂತರ್ಗತ ಉದ್ದೇಶ ತಕ್ಕ ಮಟ್ಟಿಗೆ ಈಡೇರಿದ್ದರ ಕುರುಹುಗಳು.
ಹಲವು ಕಾರಣಗಳಿಗಾಗಿ ಅಭದ್ರತೆ ಅಂಚಿನಲ್ಲಿದ್ದ ಮಡಿಕೇರಿ ಸಮ್ಮೇಳನ ಮೊದಲ ದಿನವೇ ಮೈ ಕೊಡವಿ ಎದ್ದು ಎರಡನೇ ದಿನ ಇನ್ನಷ್ಟು ಮೈ ಕೈ ತುಂಬಿಕೊಂಡು ಮೂರನೇ ದಿನದ ಹೊತ್ತಿಗೆ ಇನ್ನಷ್ಟು ನಿರ್ದಿಷ್ಟತೆ ಒದಗಿಸಿಕೊಂಡಿತು. ಇದುವರೆಗೂ ಕನ್ನಡ ಸಾಹಿತ್ಯದ ಮುಖ್ಯವಾಹಿನಿಯ ಚರ್ಚೆಯ ವ್ಯಾಪ್ತಿಯಿಂದ ಆಚೆಯೇ ಉಳಿದಿದ್ದ ಆದಿವಾಸಿ, ಬುಡಕಟ್ಟು, ಕ್ರೈಸ್ತ ಮತ್ತು ಮುಸ್ಲಿಂ ಸಂವೇದನೆ ಜತೆಗೆ ಪರಿಸರ ಸಂವೇದನೆ ಕೂಡ ಮುಖ್ಯವಾಹಿನಿಯ ವ್ಯಾಪ್ತಿಯಲ್ಲೇ ಸ್ಪರ್ಷಿಸಿದ್ದು ಈ ಸಮ್ಮೇಳನದ ಪ್ರಮುಖ ಸಂಗತಿಗಳಲ್ಲಿ ಒಂದು.

ದಲಿತ ಬಂಡಾಯ ಪ್ರಗತಿಶೀಲ ಇತ್ಯಾದಿ ಸೈದ್ಧಾಂತಿಕ ನಿಲುವಿನವರೆಲ್ಲಾ ಕನ್ನಡ ಎನ್ನುವ ಒಂದೇ ಛಾವಣಿಯ ಅಡಿಯಲ್ಲಿ ಸಂಘಟಿತವಾಗಿದ್ದು, ಬ್ರಿಟಿಷ್ ಭಾರತದಲ್ಲಿನ ಕನ್ನಡ ಸಾಹಿತ್ಯದ ಸವಾಲುಗಳನ್ನು ಇವತ್ತಿನ ಸಾಮ್ರಾಜ್ಯಶಾಹಿ ಸಂದರ್ಭದ ಸವಾಲಿನ ಜತೆಗೆ ಹೋಲಿಸಿ ಚರ್ಚಿಸುವ ಹೊತ್ತಲ್ಲೇ ಬ್ರಿಟೀಷ್ ಪೂರ್ವದ ಜಾಯಮಾನಕ್ಕೂ ಕನ್ನಡಿ ಹಿಡಿದು “ದೇಸೀ’ಯನ್ನು ಚರ್ಚಿಸಿದ್ದು, ದಲಿತ ಸಂವೇದನೆಯನ್ನು ಹರಿತಗೊಳಿಸಬೇಕಾದ ನಿಟ್ಟಿನಲ್ಲಿ ಮಂಡಿತವಾದ ವಿಷಯಗಳು ಮೆಚ್ಚುಗೆಗೆ ಪಾತ್ರವಾಯಿತು. ಹಾಗೆಯೇ ಕೊಡಗಿನ ಸ್ಥಳೀಯ ಸಮಸ್ಯೆಗಳನ್ನು ಒಟ್ಟು ಕನ್ನಡದ ಸಮಸ್ಯೆಯಾಗಿ ಬಿಂಬಿಸಿ ಅದಕ್ಕೆ ಸಮಸ್ತ ಕನ್ನಡಿಗರ ಬೆಂಬಲವನ್ನು ದೊರಕಿಸಿಕೊಟ್ಟಿದ್ದು ಮುಖ್ಯವಾದ ಬೆಳವಣಿಗೆ. ಮನೆ ಮಾತನ್ನು ಬಿಟ್ಟುಕೊಡದೆ ಕನ್ನಡವನ್ನು ಆಚರಿಸುವ ಕೊಡವ ಮತ್ತು ಅರೆಗನ್ನಡದವರ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಾಬೀತುಪಡಿಸಿದ್ದು ಒಟ್ಟು ಕನ್ನಡತನವನ್ನು ಕಟ್ಟುವ ಮತ್ತು ಗಟ್ಟಿಗೊಳಿಸಬೇಕಾದ ಮಾರ್ಗವನ್ನು ತೋರಿಸಿದಂತಿತ್ತು.
ಬ್ರಾಹ್ಮಣ ಸಾಹಿತ್ಯ ಎನ್ನುವ ತಪ್ಪು ಮಿತಿಯಿಂದ ದಾಸ ಸಾಹಿತ್ಯವನ್ನು ಬಿಡುಗಡೆಗೊಳಿಸಿ ಅದನ್ನು ಇನ್ನಷ್ಟು ವಿಶಾಲಗೊಳಿಸುವ ನಿಟ್ಟಿನಲ್ಲಿ ಆರೋಗ್ಯಕರ ಪ್ರಯತ್ನ ನಡೆಯಿತು. ಆ ಮೂಲಕ ದಾಸ ಸಾಹಿತ್ಯ ಒಟ್ಟು ಕನ್ನಡ ಸಂವೇದನೆಯ ಭಾಗವಾಗಿ ಚರ್ಚಿತವಾಯಿತು. ಸಾಮಾಜಿಕ ತಾಣಗಳಲ್ಲಿ ಕನ್ನಡವನ್ನು ಹಿಗ್ಗಿಸುವ ಜತೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣ ಮತ್ತು ಕ್ಷೇತ್ರದಲ್ಲಿ ಕನ್ನಡ ಬಳಸುವ ಕ್ರಿಯೆಯನ್ನು ಇನ್ನಷ್ಟು ಹೆಚ್ಚಿಸುವ ದಿಕ್ಕಿನಲ್ಲಿ ಅಗತ್ಯ ಹೊಳಹುಗಳನ್ನು ಹೊರಹಾಕುವಲ್ಲೂ ಸಮ್ಮೇಳನ ಯಶಸ್ವಿಯಾಯಿತು. ಸಾಂಸ್ಕೃತಿಕ ಸಂಶೋಧನೆಗೆ ಅಗತ್ಯವಾದ ಹೊಸ ಆಯಾಮಗಳಿಗೂ ಬೆಳಕು ಹಿಡಿಯಲಾಯಿತು.
ಇನ್ನು ದೇಶವನ್ನೇ ಆವರಿಸಿರುವ ನಕ್ಸಲ್ ಚರ್ಚೆ, ನಾಡಿನ ಜೀವನಾಡಿಯಾದ ಪಶ್ಚಿಮ ಘಟ್ಟಕ್ಕೆ ಆತಂಕ ತಂದೊಡ್ಡಿರುವ ಕಸ್ತೂರಿ ರಂಗನ್ ವರದಿಯ ವಿರುದ್ದ ಕೊಡವರ ಆಕ್ರೋಶ ಕರ್ನಾಟಕ ಮತ್ತು ದೆಹಲಿ ಸರ್ಕಾರಕ್ಕೆ ತಟ್ಟುವ ಜತೆಗೆ ನಾಡು ಇದರ ವಿರುದ್ದ ಒಟ್ಟಾಗಿ ನಿಲ್ಲಭೇಕಾದ ಅಗತ್ಯವನ್ನು ಸಮ್ಮೇಳನ ಧ್ವನಿಸಿತು.
ನಾಡು ನುಡಿ ಭಾಷೆ ಸಂಸ್ಕೃತಿ ಗಡಿ ಜಲ ಅರಣ್ಯ ಪರಿಸರ ಇವೆಲ್ಲಕ್ಕೂ ಬಂದಿರುವ ಅಪಾಯಗಳನ್ನು ಬಿಡಿ ಬಿಡಿಯಾಗಿ ಚರ್ಚಿಸಿ ಇವನ್ನೆಲ್ಲಾ ಎದುರಿಸಲು ಬೇಕಾದ ‘ಇಡಿ’ಯನ್ನು ಹಿಡಿದು ಕೊಟ್ಟಿದ್ದು ಸಮ್ಮೇಳನದ ಮತ್ತೊಂದು ಹೆಗ್ಗಳಿಕೆ. ಹಾಗೆಯೇ ಭೂಮಿಯ ಅರ್ಧಭಾಗದಷ್ಟಿರುವ ಮಹಿಳಾ ಸಾಹಿತ್ಯದ ಮೇಲೆ ಒಂದೂ ಗೋಷ್ಠಿ ಇಲ್ಲದಿರುವುದು, ಇವತ್ತಿನ ಹೊಸ ಮತ್ತು ಜಾಗತೀಕರಣದ ಹುನ್ನಾರದಲ್ಲಿ ಲೀನವಾಗಿರುವ ಕನ್ನಡದ ಹೊಸ ತಲೆಮಾರಿನ ಬರಹಗಾರರ ಸವಾಲುಗಳು ಸೇರಿದಂತೆ ಇನ್ನಷ್ಟು ವಿಷಯಗಳಿಗೆ ಜಾಗ ಒದಗಿಸಬೇಕಿತ್ತು ಎನ್ನುವ ಕೊರಗು ಎದ್ದು ಕಾಣುತ್ತದಾದರೂ, ಇದ್ದುದರಲ್ಲಿ ಯಾವುದನ್ನು ಕೈ ಬಿಡಲು ಸಾಧ್ಯವಿರಲಿಲ್ಲ ಎನ್ನುವ ಸಂಗತಿಯೂ ರಾಚುತ್ತದೆ.
ಒಟ್ಟಿನಲ್ಲಿ ೮೦ನೇ ಸಮ್ಮೇಳನ ನೀರಸ ಮತ್ತು ನಿರಾಶದಾಯಕವಾಗದೆ ಕೊರತೆಗಳ ನಡುವೆಯೂ ಯಶಸ್ವಿಯಾಯಿತು ಎನ್ನುವ ಹೆಮ್ಮೆಯನ್ನು ಹೆಗಲಿಗೇರಿಸಿಕೊಳ್ಳಬಹುದು.
 

‍ಲೇಖಕರು G

January 11, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: