ನಾನು ಓದಿದ 'ಕಾಮಾಕ್ಷಿ ಸಂಸಾರ ನೌಕೆ'

‘ಕಾಮಾಕ್ಷಿ ಸಂಸಾರ ನೌಕೆ’ : ಗಂಭೀರ ಸಂಗತಿಗಳ ಚಿಂತನೆ

ಡಾ ರಾಜೇಶ್ವರಿ ಗೌಡ


ಲಕ್ಷ್ಮಣ ಕೊಡಸೆ ಅವರ ಈ ಕಾದಂಬರಿ ವಸ್ತುವಿನ ದೃಷ್ಟಿಯಿಂದ ಚಿಂತನೆಗೆ ಒಳಗು ಮಾಡುತ್ತದೆ. ಕಾಮಾಕ್ಷಿ ಸಂದೀಪ ಅಂತರಜಾತಿ ವಿವಾಹಿತರು. ಪ್ರೇಮಿಸಿ ಮದುವೆಯಾದವರು. ಏನೇ ಸಮಸ್ಯೆ ಎದುರಾದರೂ ನಿಭಾಯಿಸುವ ಛಾತಿಯ ಸಫಲ ದಾಂಪತ್ಯ ಇವರದು. ಇದಕ್ಕೆ ಸಮಾನಾಂತರವಾಗಿ ಅಹಲ್ಯಾ ಮತ್ತು ಮೂರ್ತಿ ಅವರ ದಾಂಪತ್ಯ ಚಿತ್ರಣ ಮೊಟಕಾಗಿ ಬಂದರೂ ಒಳಗೆ ನೋವುಂಡು ಮೇಲೆ ನಗುವ ಅಹಲ್ಯಾ ಭಾರತೀಯ ನಾರಿಯ ಪ್ರತೀಕವಾಗಿಯೇ ಚಿತ್ರಣಗೊಂಡಿದ್ದಾರೆ. ಮೂತರ್ಿ ಒಬ್ಬ ಪ್ರಸಿದ್ಧ ಕವಿ ಹಾಗೂ ನಾಟಕಕಾರ. ‘ಪ್ರಸಿದ್ಧರ ಪತ್ನಿಯರು’ ಮಾಲಿಕೆಗೆ ಕಾಲೇಜು ಉಪನ್ಯಾಸಕಿಯಾದ ಲೇಖಕಿ ಕಾಮಾಕ್ಷಿ ಅಹಲ್ಯಾ ಅವರನ್ನು ಸಂದರ್ಶಿಸುವ ಮೂಲಕ ಪರಿಚಯವಾಗುತ್ತಾಳೆ. ಕ್ರಮೇಣ ಕಾಮಾಕ್ಷಿ ಮತ್ತು ಸಂದೀಪರ ದಾಂಪತ್ಯದ ಬದುಕು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
ಸಂದೀಪ ತನ್ನ ಬಾಲ್ಯದ ದಿನಗಳನ್ನು ನೆನೆಯುವ ನೆಪದಲ್ಲಿ ಅನಾವರಣಗೊಳ್ಳುವ ಮಲೆನಾಡಿನ ಕೃಷಿಕರ ಚಿತ್ರಣ, ಸಾಂಪ್ರದಾಯಿಕವಾದ ಸೋದರತ್ತೆಯ ಶ್ರಮದ ಬದುಕು, ಭೂಮಿ ಹುಣ್ಣಿಮೆಯಂತಹ ಹಬ್ಬಗಳ ಸಾಂಸ್ಕೃತಿಕ ಆಚರಣೆ, ತಾನು ಬಸುರಿ ಎಂಬುದನ್ನೂ ಮರೆತು ಕೆಲಸ ಮಾಡುವ ರೀತಿ, ಕಷ್ಟ ಸಹಿಷ್ಣುತೆ- ಇವೆಲ್ಲವೂ ಓದುಗರಿಗೆ ಹಿಂದಿನ ತಲೆಮಾರಿನವರ ತಾಳ್ಮೆಯ ಬದುಕನ್ನು ಪರಿಚಯಿಸುತ್ತವೆ. ತರಕಾರಿ ಮಾರುವವರೊಂದಿಗೆ ಚೌಕಾಸಿ ಮಾಡಬಾರದೆಂದು ಕಾಮಾಕ್ಷಿಗೆ ತಾಕೀತು ಮಾಡುವುದು ಸಂದೀಪನ ಮಾನವೀಯ ಅಂತಃಕರಣವನ್ನು ಪರಿಚಯಿಸುತ್ತದೆ. ಸೋದರಮಾವ ಮತ್ತು ಅತ್ತೆಯವರ ಜೀವನ ಶೈಲಿಯಲ್ಲಿ ವ್ಯಕ್ತವಾಗುವ ಹಳೆಯ ತಲೆಮಾರಿನವರ ಬಾಳುವೆಯ ಪರಿ ಈಗಿನವರಿಗೆ ಮಾದರಿ ಎನ್ನುವಂತಿದೆ. ಕತ್ತಲಲ್ಲಿ ಬಿಸಿ ಸಾರಿನ ತಪ್ಪಲೆ ಕಾಣದೆ ಎಡವಿ ಕೈಸುಟ್ಟುಕೊಂಡ ಪುಟ್ಟ ಮಗುವಿಗೆ ಸಕಾಲಕ್ಕೆ ವೈದ್ಯಕೀಯ ಚಿಕಿತ್ಸೆ ದೊರೆಯದಿದ್ದರೂ ಧೃತಿಗೆಡದೆ ಅತ್ತೆ ಮನೆ ಮದ್ದು ಮಾಡಿ ಸಂಭಾಳಿಸುವ ಪರಿ ಹಿಂದಿನವರ ತಾಳ್ಮೆಯ ಜೀವನ ಪ್ರೀತಿಗೆ ನಿದರ್ಶನ. ಹಿಂದಿನ ದಿನಗಳ ಜೀವನ ಮತ್ತು ಇಂದಿನ ಆಧುನಿಕ ಬದುಕು- ಈ ಎರಡೂ ಶೈಲಿಗಳ ಚಿತ್ರ ಮಧ್ಯೆ ಮಧ್ಯೆ ಸಾಂದರ್ಭಿಕವಾಗಿ ಹೊರಳುವ ವಿವರಗಳು ಚಿತ್ರಕಶಕ್ತಿಯನ್ನು ಪಡೆದಿವೆ. ಅದರಲ್ಲಿ ಸಾಹಿತ್ಯ ಜಿಜ್ಞಾಸೆ, ಕಾವ್ಯ, ಗದ್ಯ, ಕಾವ್ಯಮೀಮಾಂಸೆ, ಪತ್ರಿಕೋದ್ಯಮ, ಬ್ಯಾಂಕಿಂಗ್, ಅಡುಗೆ, ಬ್ಯೂಟಿ ಪಾರ್ಲರ್- ಹೀಗೆ ಹಲವು ಬಗೆಯ ವಿಷಯಗಳು ತಳುಕು ಹಾಕಿಕೊಂಡು ಕೆಲವೊಮ್ಮೆ ಕಾದಂಬರಿಯ ಸ್ರೋತಕ್ಕೆ ತಡೆಗೋಡೆಯಂತೆ ಎಂಬಂತಿವೆ.
ಆದರೂ ಕಾಮಾಕ್ಷಿಯನ್ನು ಪುನಶ್ಚೇತನ ಶಿಬಿರಕ್ಕಾಗಿ ಮೈಸೂರಿಗೆ ಕಳುಹಿಸಿ ತಾನು ಶ್ರುತಿಯಂಥ ಕಚಗುಳಿಯ ಹೆಣ್ಣೊಬ್ಬಳು ಮೈಚಳಿ ಬಿಟ್ಟು ಮಾತನಾಡುವ ಸಂದರ್ಭದಲ್ಲಿ ಅಡ್ಡ ದಾರಿ ಹಿಡಿಯ ಹೊರಟವನು ಅದೃಷ್ಟವಶಾತ್ ಎಂಬಂತೆ ತಪ್ಪಿಸಿಕೊಂಡದ್ದು ಕಾಮಾಕ್ಷಿಯ ಗಟ್ಟಿ ಪ್ರೀತಿಯೋ, ಸಂದೀಪನ ಗಟ್ಟಿ ನಿಲುವೋ ಎಂಬುದನ್ನು ಓದುಗರೇ ನಿರ್ಣಯಿಸಿಕೊಳ್ಳುವಂತಾಗಿದೆ. ತಾನೂ ಬೆಳೆದು ಕಾಮಾಕ್ಷಿಯನ್ನೂ ಬೆಳೆಸುವ ಸಂದೀಪನ ಮನಃಸ್ಥಿತಿ ಮೆಚ್ಚುಗೆಗೆ ಪಾತ್ರವಾಗುತ್ತದೆ. ಅಲ್ಲಲ್ಲಿ ಗಂಡಿನ ದರ್ಪ, ಅದನ್ನು ತಿರಸ್ಕರಿಸುವ ಸ್ತ್ರೀವಾದ, ಸಣ್ಣಪುಟ್ಟ ಕಾರಣಗಳಿಗೆಲ್ಲ ವಿಚ್ಛೇದನ ನೀಡುವವರ ಉಲ್ಲೇಖ ಓದುಗರನ್ನು ವಿಚಾರದ ನೆಲೆಗೆ ಒಯ್ಯುತ್ತದೆ.
ಯಲ್ಲಪ್ಪನ ಮಡಿವಂತಿಕೆ, ಆ ಬಗ್ಗೆ ನಡೆಯುವ ಸಂವಾದ, ಆ ಮೂಲಕ ವ್ಯಕ್ತವಾಗುವ ಕಾಮಾಕ್ಷಿಯ ನಿಲುವು ಸಹಜ ಎನಿಸುತ್ತವೆ. ರೇಣುಕಾಳ ಬಗ್ಗೆ ಯಲ್ಲಪ್ಪನ ಟೀಕೆ ಪುರುಷದೃಷ್ಟಿ ಎನಿಸಿದರೆ ಅದನ್ನು ವಿರೋಧಿಸುವ ಕಾಮಾಕ್ಷಿಯ ಮಾತುಗಳು ಸ್ತ್ರೀಪರವಾಗಿವೆ. ಪತ್ರಕರ್ತ ಬಡಿಯಪ್ಪನ ಅನುಭವದ ಮಾತುಗಳು, ಕೇಂದ್ರ ಸರ್ಕಾರದಲ್ಲಿ ಉನ್ನತ ಅಧಿಕಾರಿಯಾಗಿದ್ದ ವ್ಯಕ್ತಿ ಐದು ತಿಂಗಳ ಮಗುವನ್ನು ಕರೆತಂದಿದ್ದ ಕಾಮಾಕ್ಷಿಯನ್ನು ಕೆಲವು ಹೊತ್ತು ಕೂಡ ಮನೆಯೊಳಕ್ಕೆ ಬಿಟ್ಟುಕೊಳ್ಳುವುದಕ್ಕೆ ಕುಂಟು ನೆಪ ಹೇಳಿ ಹಿಂದೆ ಕಳುಹಿಸುವಂಥ ಪ್ರಕರಣಗಳು ಅಂತರ್ ಜಾತಿ ವಿವಾಹಿತರ ಬಗ್ಗೆ ಸಮಾಜದಲ್ಲಿರುವ ತಪ್ಪುಗ್ರಹಿಕೆಗಳನ್ನು ಸೂಚಿಸುತ್ತವೆ.
ಒಟ್ಟಾರೆಯಾಗಿ ಸ್ತ್ರೀ ಕೇಂದ್ರಿತವಾಗಿರುವ ಈ ಕಾದಂಬರಿ ಮನರಂಜನೆಗಿಂತಲೂ ಗಂಡು- ಹೆಣ್ಣುಗಳ ನಡುವಣ ಬಾಂಧವ್ಯ ಗಟ್ಟಿಗೊಳಿಸುವಂಥ ಗಂಭೀರ ಸಂಗತಿಗಳತ್ತ ಓದುಗರ ಗಮನ ಸೆಳೆಯುತ್ತದೆ.
 

‍ಲೇಖಕರು G

January 11, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: