ಮಡಿಕೇರಿ ಸಮ್ಮೇಳನ : ಹತ್ತಿ ಇಳಿಯುವ ಗೋಳು

ಡಾ ಪ್ರಕಾಶ ಗ ಖಾಡೆ

ಮಡಿಕೇರಿ ಸಮ್ಮೇಳನಕ್ಕೆ ಹೋಗಿ ಬಂದೆವು,ಸಮ್ಮೇಳನ ಎಲ್ಲ ದೃಷ್ಟಿಯಿಂದಲೂ ಯಶಸ್ವಿಯಾಯಿತು. ಅಲ್ಲಿ ನಡೆದ ಗೋಷ್ಟಿಗಳು,ಗೋಷ್ಟಿಗಳಲ್ಲಿ ಮಂಡಿತವಾದ ವಿಷಯಗಳು ಹೊಸತನದಿಂದ ಕೂಡಿದ್ದವು. ಸುಮಾರು ಒಳ್ಳೆಯ  ಕವಿತೆಗಳು ಎರಡೂ ಕವಿಗೋಷ್ಟಿಗಳಲ್ಲಿ ಮಂಡಿತವಾದವು. ಸಾಧಕರಿಗೆ ಸತ್ಕಾರವೂ ಜರುಗಿತು. ನಿರ್ಣಯಗಳನ್ನೂ ಸರಕಾರದ ಅಂಗಳಕ್ಕೆ ತೂರಿಬಿಡಲಾಯಿತು,ಸಾಂಸ್ಕೃತಿಕ ,ಹಾಡು,ಸಂಗೀತ,ನೃತ್ಯ,ಹಾಸ್ಯ ಎಲ್ಲವೂ ಅಚ್ಚುಕಟ್ಟಾಗಿ ನಡೆದವು. ಮೊದಲ ಗೋಷ್ಟಿ ಸೇರಿದಂತೆ ಕೆಲವು ಗೋಷ್ಟಿಗಳು ಕೇಳುಗರ ಕೊರತೆ ಅನುಭವಿಸಿದವು. ಓಓಡಿಗಾಗಿ ಪ್ರತಿಸಲದಂತೆ ಮೊದಲ ದಿನದಿಂದಲೆ ಹುಸಿ ಫಲಾನುಭವಿಗಳು ಹಾರಾಟ,ಪೌರುಷ ತೋರಿ ಸಮ್ಮೇಳನಕ್ಕೆ ಧಿಕ್ಕಾರವನ್ನೂ ಕೂಗಿದರು. ಪುಸ್ತಕ ಮಳಿಗೆ ವ್ಯವಸ್ಥೆಯಂತೂ ಕಣ್ಣು ಕೊರೈಸುವಷ್ಟು ಅದ್ಭುತವಾಗಿತ್ತು,ಜನ ಜಾತ್ರೆಯಂತೆ ಸೇರಿ ಪುಸ್ತಕ ಖರೀದಿಸುವ ಸಂಭ್ರಮವೇ ಜೋರಾಗಿತ್ತು. ಹೊರಗಡೆ ದಾರಿಯುದ್ದಕ್ಕೂ ಬಳೆ,ಪುಗ್ಗಾ,ಪೀಪೀ,ಸ್ವೇಟರು,ಮಪ್ಲರು,ಚಪ್ಪಲು,ಬಟ್ಟೆ ಬರೆ,ಪಾತ್ರೆ ಪಗಡಿ,ಕ್ಯಾಲೆಂಡರು,ಗೊಂಬೆ ಮುಂತಾದ ಸಕಲ ಸರಂಜಾಮುಗಳನ್ನು ಮಾರುವವರ ಮತ್ತು ಚೌಕಾಸಿ ಮಾಡಿ ಖರೀದಿಸುವವರ ವ್ಯಾಪಾರ ಸಾಂಗವಾಗಿತ್ತು. ಭವಿಷ್ಯ ಹೇಳುವವರು ,ಕೇಳುವವರು,ಕನಸು ಮಾರುವವರು ,ಕನಸು ಕೊಳ್ಳುವವರು ಪರಿಷೆಯಲ್ಲಿ ಸೇರಿಹೋಗಿದ್ದರು. ಬೆಟ್ಟದ ಊರು ಮಡಿಕೇರಿಯ ಕಿರು ರಸ್ತೆಗಳಲ್ಲಿ ವಾಹನಗಳ ಭರಾಟೆಗೆ ಅಲ್ಲಿನ ಗಿಡ ಮರಗಳೂ ಕನಲಿದಂತೆ ಕಂಡು ಬಂದವು. ಸಮ್ಮೇಳನದ ವೇದಿಕೆಯೂ ಸೇರಿ ರಸ್ತೆ ಅಗಲೀಕರಣ. ವಾಹನಗಳ ಪಾರ್ಕಿಂಗ್ ಗಾಗಿ ಅಲ್ಲಲ್ಲಿ ಅಮೂಲ್ಯ ಗಿಡಗಳನ್ನು ಕಡಿದು ಹಾಕಿದ್ದು ಕಂಡು ನೋವೆನಿಸಿತು.

ಮಡಿಕೇರಿ ಬೆಟ್ಟ ಗುಡ್ಡಗಳಿಂದ ಆವೃತವಾದ ಹಸಿರು ಹೊದ್ದ ಸುಂದರ ಊರು. ಬಯಲು ನಾಡಿನ ನಮಗಂತೂ ಅಲ್ಲಿ ಹತ್ತಿ ಇಳಿಯುವ ಪರಿ ಹೊಸದು,ಮೈಸೂರು ರಸ್ತೆಯಿಂದ ಸಮ್ಮೇಳನ ನಡೆಯುತ್ತಿದ್ದ ಸ್ಥಳಕ್ಕೆ ಹೋಗಬೇಕೆಂದರೆ ಅದೆಷ್ಟೊ ಬಾರಿ ಬೆಟ್ಟ ಹತ್ತಿ ಇಳಿದು ಹೋಗಬೇಕಿತ್ತು,ಪುಣ್ಯಕ್ಕೆ ಸಾರಿಗೆ ಇಲಾಖೆಯವರು ಅಲ್ಲಿಯ ಶಾಲೆಯ ಮಕ್ಕಳ ಶಾಲಾ ವಾಹನಗಳ ಸೌಲಭ್ಯ ಕಲ್ಪಿಸಿ ಕೆಲವರ ಶ್ರಮ ಹಗುರಗೊಳಿಸಿದ್ದರು. ಆದರೆ ಸಮ್ಮೇಳನ ಸ್ಥಳದಿಂದ ತುಂಬಾ ದೂರವೇ ಇದ್ದ ಊಟದ ಮನೆಗೆ ಬಂದವರು ಮರಳಿ ಸಮ್ಮೇಳನದ ಕಡೆಗೆ ಮುಖ ಮಾಡುತ್ತಿರಲಿಲ್ಲ.

ಬೆಟ್ಟ ಹತ್ತಿ ಇಳಿಯುವ ಗೋಳು ಹೇಳತೀರದು. ವಯಸ್ಸಾದವರೂ ಮೊದಲ ದಿನವೇ ಹೊರಟು ಹೋಗಿದ್ದರು. ಮಡಿಕೆ ಮಡಿಕೆಯಂತೆ ಮಡಿಚಿಟ್ಟ ಬೆಟ್ಟಗಳ ಈ ಊರನ್ನು ರಾಜಾಶೀಟನಿಂದ ನೋಡಿ ನನ್ನ ಫೇಸ್ ಬುಕ್ಕಿಗೆ ಒಂದು ಪದ್ಯ ಹಾಕಿದ್ದೆ,

ಮಡಿಕೆ ಮಡಿಕೆಯಂತೆ ಮಡಿಚಿಟ್ಟ

ಹಸಿರು ಬೆಟ್ಟಗಳ ಸಾಲು :

ಯಾರೀಟ್ಟರೀ ಹೆಸರುಮಡಿಕೇರಿ

ಭೂ ಸ್ವರ್ಗಕ್ಕೆ ಮೇಲು.

ನನಗೆ ಆಶು ಕವಿಯೆಂದು ಹೊಗಳಿ ಕೆಲವರು ಕಾಮೆಂಟು ಹಾಕಿದ್ದರು. ಇರಲಿ ಮಡಿಕೇರಿ ಖಂಡಿತ ಕರ್ನಾಟಕದ ಪ್ರಕೃತಿಯ ಸೌಂದರ್ಯದ ತವರು ಮನೆ,ಕಾಫಿ,ಕಿತ್ತಳೆ ಬೆಳೆವ ಸಮೃದ್ಧ ನಾಡು. ಜೇನು,ಯಾಲಕ್ಕಿ,ಮೆಣಸುದೊರೆವ ತಾಜಾತನದ ಬೀಡು,ಅಚ್ಚುಕಟ್ಟಾಗಿ ಜೋಡಿಸಿಟ್ಟ ಬಗೆ ಬಗೆಯ ವೈನ್ ಬಾಟಲಿಗಳು ಕೊಳ್ಳುವವರ ಕೈಗೂಸಾಗಿದ್ದವು. ಎಲ್ಲ ಭಾಗಗಳಿಂದ ಆಗಮಿಸಿದ್ದ ಕನ್ನಡಿಗರ ಮನ ನೋಯದಂತೆ ಕೊಡಗರು ಮೂರು ದಿನಗಳ ಕಾಲ ತೋರಿದ ಪ್ರೀತಿ ದೊಡ್ಡದು. ಅಲ್ಲಿನ ಜಿಲ್ಲಾಡಳಿತ,ಪೋಲಿಸ್ ಅಧಿಕಾರಿಗಳ ಶ್ರಮ ಅಭಿನಂದನಾರ್ಹ. ಮುಖ್ಯವಾಗಿ ಅಲ್ಲಿನ ಶಾಲಾ ಕಾಲೇಜಿನ ಮಕ್ಕಳು ಸ್ವಯಂಸೇವಕರಾಗಿ ನಗುಮೊಗದಿಂದ ತೊಡಗಿದ್ದು ಕಣ್ಣಿಗೆ ಕ್ಪಟ್ಟಿದಂತಿದೆ.

ಈ ಎಲ್ಲದರ ನಡುವೆ ಸಮ್ಮೇಳನದ ಸಭಾಂಗಣದ ಸಮೀಪದಲ್ಲಿಯೇ ಡೊಂಬರಾಟದ ಹುಡುಗಿಯೊಂದು ಬೆಳಗಿನಿಂದ ಸಂಜೆಯವರೆಗೂ ಹಗ್ಗದ ಮೇಲೆ ನಡೆವ ನಡುಗೆಯನ್ನು ಜನ ನಿಂತು ನೋಡಿ ಹೋಗುತ್ತಿದ್ದರು. ಆದರೆ ಶಾಲಾ ವಯಸ್ಸಿನ ಆ ಮಗುವಿನ ಶಿಕ್ಷಣ ಹಕ್ಕಿನ ಬಗ್ಗೆ ಅಲ್ಲಿನ ಶಿಕ್ಷಣ ಪ್ರೇಮಿಗಳು ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ಏನೇ ಆಗಲಿ ಕಾವೇರಿ ನಾಡಿನ ಮಡಿಲ ಮಡಿಕೇರಿಯಲ್ಲಿ ಜರುಗಿದ ಕನ್ನಡ ಸಮ್ಮೇಳನ ಹಲವು ಕಾಲ ನೆನಪಿನಲ್ಲುಳಿಯುವಂತೆ ಮಾಡಿತು

ಹೋಗಿ ಬರ್ತೀವಿ ತಾಯಿ ಕಾವೇರಿ

ಮತ್ತೆ ಕನ್ನಡಕ್ಕಾಗಿ ಸೇರ್ತೀವಿ ಹಾವೇರಿ.

 

‍ಲೇಖಕರು avadhi

January 14, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. h a patil

    – ಮಡಿಕೇರಿ ಕುರಿತಾದ ಸೊಗಸಾದ ಬರಹ ಸುಂದರ ಚಿತ್ರಗಳು ಮಡಿಕೇರಿಯನ್ನು ಮತ್ತೆ ನೆನಪಿಸಿದವು, ಮಡಿಕೇರಿಯ ನಾಕದಿಂದ ಹಾವೇರಿಯ…ಕಕ್ಕೆ

    ಪ್ರತಿಕ್ರಿಯೆ
  2. y k sandhya sharma

    sammelanada bagge hrudya chitra needideeri.padyavuu chennaagide.niruupaneya gadyavuu.

    ಪ್ರತಿಕ್ರಿಯೆ
  3. ವಿಕ್ರಮ

    ತುಂಬಾ ಸುಂದರವಾಗಿ ಸಮ್ಮೇಳನದ ನಿಮ್ಮ ಅನುಭವಗಳನ್ನು ವ್ಯಕ್ತಪಡಿಸಿದ್ದಿರಿ. ಧನ್ಯವಾದಗಳು .

    ಪ್ರತಿಕ್ರಿಯೆ
  4. Shankar Baichabal

    ಸಮ್ಮೇಳನ ನೆನಪುಗಳು ಎಷ್ಟೊಂದು ಸುಂದರ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: