ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ : ’ನಾಟಕದ ಗುಂಗಿನ ನಡುವೆಯೂ..’

(ಇಲ್ಲಿಯವರೆಗೆ…)
ಅದು ಹಳ್ಳಿಯಾದ್ದರಿಂದ ಹೆಣ್ಣುಮಕ್ಕಳು ಗಂಡುಮಕ್ಕಳು ಸೇರಿ ನಾಟಕ ಆಡಲು ಸಾಧ್ಯವಿರಲಿಲ್ಲ. ಈಗ ನಾಟಕದ ಗಂಡು ಪಾತ್ರಗಳನ್ನೂ ಹೆಣ್ಣುಮಕ್ಕಳೇ ನಿರ್ವಹಿಸಬೇಕಿತ್ತು. ಆರೋಗ್ಯ ಯಮನಾದರೆ, ಭಾರತಿ ಯಮದೂತ, ಸರೋಜ ಯಕ್ಷ, ಚಿಟ್ಟಿ ಸತ್ಯವಾನ, ನಕ್ಕತ್ತು ಸಾವಿತ್ರಿ ಹೀಗೆ ಪಾತ್ರಗಳನ್ನು ಹಂಚಲಾಗಿತ್ತು. ಗುರುಪಾದಪ್ಪ ಮೇಷ್ಟ್ರು ನಾಟಕದ ಪುಸ್ತಕವನ್ನು ಕೊಟ್ಟು ‘ಎಲ್ಲ ಬಾಯಿಪಾಠ ಮಾಡಿಬಿಡಿ, ಆಮೇಲೆ ಮಿಕ್ಕ ವಿಷಯ’ ಅಂತ ಹೇಳಿದ್ದರಿಂದ ಒಂದೇ ಸಮನೆ ಗಟ್ಟಿಹೊಡೆದು ತಯಾರಾಗಿದ್ದರು. ಅವತ್ತು ಶಾಸ್ತ್ರೋಕ್ತವಾಗಿ ಸರಸ್ವತಿಯ ಪೂಜೆ ಮಾಡಿ ನಾಟಕ ಶುರುಮಾಡುವವರಿದ್ದರು.
ತಾಲ್ಲೂಕು ಮಟ್ಟದ ನಾಟಕ ಸ್ಪರ್ಧೆಗೆ ಕಳಿಸಬೇಕಾಗಿದ್ದರಿಂದ ಇವೆಲ್ಲಾ ತಾಲೀಮು ನಡಿತಿತ್ತು. ಗುರುಪಾದಪ್ಪ ಮೇಷ್ಟ್ರು ಎಲ್ಲರನ್ನ ಕೂಡಿಸಿಕೊಂಡು ‘ನೋಡಿ ಹೇಗಾದರೂ ಸರಿಯೇ ನಮ್ಮ ಶಾಲೆಗೆ ಒಂದು ಪ್ರೈಸ್ ಬರಲೇಬೇಕು ಇಲ್ಲಾಂದ್ರೆ ನಮ್ಮ ಮರ್ಯಾದೆ ಹೋಗಿಬಿಡುತ್ತೆ’ ಎಂದು ನಾಟಕ ಅಭ್ಯಾಸ ಮಾಡುವಾಗ ಇರಬೇಕಾದ ಗಾಂಭಿರ್ಯತೆಯ ಬಗ್ಗೆ ಎಚ್ಚರಿಕೆಯನ್ನು ಕೊಟ್ಟಿದ್ದರಾದ್ದರಿಂದ ಎಲ್ಲರ ಮನಸ್ಸಿನಲ್ಲು ಒಂದು ಆತಂಕ ಇದ್ದೇ ಇತ್ತು.
ಪೂಜೆಗೆ ಬಂದ ಹಿರಿಯರಾದ ಮೈದು ಸಾಬರು ಸಾವಿತ್ರಿ ಎಂದು ಉಚ್ಚರಿಸಿ ಸಂತಸ ಪಟ್ಟುಕೊಂಡರೆ, ರಾಮೇಗೌಡರು ತಮ್ಮ ಮಗಳಾದಿಯಾಗಿ ಎಲ್ಲ ಮಕ್ಕಳ ಬಗ್ಗೆ ಹುಷಾರಾಗಿರಿ ಎನ್ನುವ ಕಿವಿಮಾತನ್ನು ಹೇಳಿದ್ದರು. ಅರಳುತ್ತಿದ್ದ ದೇಹ ಮನಸ್ಸುಗಳ ಆ ಪುಟ್ಟ ಹುಡುಗಿಯರ ಜೊತೆ ಗುರುಪಾದಪ್ಪ ಮೇಷ್ಟ್ರು ಬಹುಶಃ ಕೃಷ್ಣನ ಹಾಗೆ ಕಂಡಿದ್ದರೋ ಏನೋ?
ನಾರಾಯಣ ಗೌಡರ ಮನೆಯ ಹಿತ್ತಲಿನಲ್ಲಿ ಕಾಸಗಲ ಅರಳಿದ್ದ ಕಾಕಡ ಹೂಗಳನ್ನು ಮುಡಿಗೇರಿಸಿಕೊಂಡು ‘ಶಾರದೆಯೇ ಕರಗಳ ಜೋಡಿಸಿ . . ’ ಹಾಡನ್ನು ಹೇಳಿಸಿಕೊಂಡು ಸರಸ್ವತಿ ಎಲ್ಲರನ್ನೂ ಹರಸಿದ್ದಳು. ಚಿಟ್ಟಿಗೆ ಅಂಥಾ ಆಸಕ್ತಿಯೇನೂ ಇರಲಿಲ್ಲ. ನಾಟಕ ಅಂದ್ರೆ ಹೇಳಿಕೊಟ್ಟಿದ್ದನ್ನು ಮತ್ತೆ ವಾಪಾಸು ಹೇಳುವುದಷ್ಟೇ ಅಲ್ವಾ? ಒಂದೇ ಸಮಸ್ಯೆ ನೆನಪಿನದ್ದು. ಲೆಕ್ಕದ ಹಾಗೇ ಇದೂ ಸರಿಯಾದ ಸಮಯಕ್ಕೆ ಕೈ ಕೊಟ್ಟುಬಿಟ್ಟರೆ ಎನ್ನುವ ಆತಂಕ. ಕಾಡುತ್ತಿದ್ದ ನಿಂಗರಾಜುವಿನ ನೆನಪಿನ ನಡುವೆಯೇ ತಾಲೀಮು ಶುರುವಾಯ್ತು. ‘ನೀವೆಲ್ಲಾ ಇನ್ನೊಂದು ಸಲ ಮತ್ತೊಂದು ಸಲ ಉರು ಹೊಡೆದುಬಿಡಿ ನಾಟಕ ಆಡಲಿಕ್ಕೆ ಸುಲಭ ಆಗುತ್ತೆ’ ಎಂದು ಬಂದಿದ್ದ ಊರ ಹಿರಿಯರನ್ನು ಬಾಗಿಲತನಕ ಬಿಡಲು ಗುರುಪಾದಪ್ಪ ಮೇಷ್ಟ್ರು ಹೋಗಿದ್ದರು.
ಎಲ್ಲರೂ ಒಟ್ಟಿಗೆ ಹೇಳಿಕೊಳ್ಳಲು ಶುರು ಮಾಡಿದ್ದರಿಂದ ಮತ್ತು ಎಲ್ಲರಿಗೂ ಜೋರಾಗಿ ಹೇಳುವ ಅಭ್ಯಾಸವಿದ್ದಿದ್ದರಿಂದಲೋ ಏನೋ ಯಾರೊಬ್ಬರೂ ಸರಿಯಾಗಿ ಮನಸ್ಸಿಟ್ಟು ಹೇಳಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಚಿಟ್ಟಿ ನಕ್ಕತ್ತು ಮೇಲೆ ‘ಮನಸ್ಸಿನಲ್ಲಿ ಓದಿಕೊಳ್ಳೆ’ ಎಂದು ರೇಗಿದಳು. ‘ನಂಗೆ ಮನಸ್ಸಿನಲ್ಲಿ ಓದಿಕೊಳ್ಳಲು ಬರೋದಿಲ್ಲ ಗೊತ್ತಾಯಿತಾ?’ ಎಂದಳು ನಕ್ಕತ್ತು. ಅವಳ ಒಳಗೂ ಆತಂಕ ಇತ್ತು. ಹೀಗೆ ಎಲ್ಲರ ಆತಂಕ ಒಟ್ಟುಗೂಡುತ್ತಾ ಮಾತು ಬೆಳೆದು ಜಗಳವೇ ಶುರುವಾಯಿತು. ತನಗಿದೆಲ್ಲಾ ಬೇಕಿತ್ತಾ ತನ್ನ ಪಾಡಿಗೆ ತಾನಿದ್ದೆ. ಸುಮ್ಮನೆ ಬಂದು ಇದರಲ್ಲಿ ಸಿಕ್ಕಿಕೊಂಡೆನಲ್ಲಾ ಅನ್ನಿಸಿ ಚಿಟ್ಟಿಗೆ ಅಳುಬಂತು. ‘ಅರೆ ಒಳ್ಳೆ ಕೆಲಸ ಅಂತ ಶುರುಮಾಡಿರುವಾಗ ಹೀಗೆ ಅಳೋದಾ? ಸುಮ್ಮನಿರು’ ಆರೋಗ್ಯ ಗದರಿದಳು. ಸ್ಕೂಲಾದ್ದರಿಂದ ಮೇಷ್ಟ್ರು ಬರ್ತಾರೆ, ಇನ್ನೊಂದು ರಗಳೆ ಆಗುತ್ತೆ ಅಂತ ಎಲ್ಲರೂ ಗಪ್‌ಚಿಪ್ ಆದರು.
ಮೊದಲ ದಿನ ಎಂದೇ ಗುರುಪಾದಪ್ಪ ಮೇಷ್ಟ್ರು ಒಂದಿಷ್ಟು ಸಂಗತಿಗಳನ್ನು ನಾಟಕದ ಬಗ್ಗೆ ಹೇಳಿದ್ದರು, ‘ನಾಟಕ ಅಂದ್ರೇನು? ಅದು ಹೇಗೆ ಹುಟ್ಟಿತು?’ ಇತ್ಯಾದಿ. ಅದಕ್ಕಾಗಿ ಒಂದು ಕಥೆಯನ್ನೂ ಹೇಳಿದರು. ‘ಒಂದು ಸಲ ಈಶ್ವರ ಪಾರ್ವತಿ ಇಬ್ಬರೂ ಸಂತೋಷದಿಂದ ಮಾತಾಡ್ತಾ ಕೂತಿದ್ದರಂತೆ. ಆ ಸಂತೋಷ ಹುಣ್ಣಿಮೆಯ ಚಂದ್ರನ ಹಾಗೆ ಬೆಳೀತಾ ಹೋಯ್ತಂತೆ. ಆಗ ಈಶ್ವರ ಪಾರ್ವತಿಗೆ ‘ಪಾರ್ವತಿ ಪಾರ್ವತಿ ನನ್ನೊಳಗೆ ಯಾಕೋ ಆನಂದ ತುಂಬಿಕೊಳ್ತಾ ಇದೆ. ನನಗೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಾಗ್ತಾ ಇಲ್ಲ. ಏನು ಮಾಡಲಿ?’ ಅಂದನಂತೆ. ಅದಕ್ಕೆ ಪಾರ್ವತಿ ನಗುತ್ತ ‘ಹೌದೇ ಮಹಾದೇವ ಎಲ್ಲಿ ಆ ಸಂತೋಷವನ್ನು ನನಗೆ ಒಮ್ಮೆ ತೋರಿಸಿ, ಆಮೇಲೆ ಅದನ್ನು ಏನು ಮಾಡಬೇಕು ಅಂತ ಹೇಳ್ತೀನಿ’ ಅಂದಳಂತೆ. ಈಶ್ವರ ಪಾರ್ವತಿಗೆ ತನ್ನ ಸಂತೋಷವನ್ನು ತೋರಿಸಲಿಕ್ಕೆ ಅಂತ ಅದನ್ನು ತೆಗೆದು ಹೊರಗಿಟ್ಟನಂತೆ. ಆ ಆನಂದ ಬೆಳಿತಾನೇ ಹೋಯ್ತಂತೆ.
ಈಶ್ವರ, ಪಾರ್ವತಿ, ನಂದಿ, ಭೃಂಗಿ, ಗಣಪತಿ ಸುಬ್ರಹ್ಮಣ್ಯ, ಕೈಲಾಸ ಎಲ್ಲವನ್ನೂ ಆವರಿಸಿಕೊಳ್ಳತೊಡಗಿತಂತೆ. ಈಶ್ವರ ಪಾರ್ವತಿಯರು ಆ ಆನಂದವನ್ನು ನೋಡುತ್ತಾ ನಿಂತರಂತೆ. ಆಗ ಆನಂದ ಈಶ್ವರ ಪಾರ್ವತಿಯರಿಗೆ ಕೈ ಮುಗಿದು ‘ನಿರಾಕಾರನಾದ ನಾನು ನಿಮ್ಮ ಅನುಭವದಿಂದ ಜೀವ ತಳೆದಿದ್ದೇನೆ, ಅನಂಗನಿಗೆ ಜೀವ ಕೊಟ್ಟ ಮಹಾನುಭಾವರು ನೀವು ನನಗೂ ಜೀವ ಕೊಡಲಾರಿರಾ?’ ಅಂತ ಕೇಳಿಕೊಂಡಿತಂತೆ. ಆಗ ಪಾರ್ವತಿಗೆ ಈಶ್ವರನಿಗೆ ‘ಅಯ್ಯಾ ಪರಮೇಶ್ವರ, ನಿನ್ನೊಳಗಿನ ಆನಂದಾಂದ್ರೆ ಅದು ಸುಮ್ಮನೆಯ ಮಾತಾ? ಅದಕ್ಕೆ ಆಕಾರ ಕೊಡು. ಅದು ಜಗತ್ತಿಗೆ ಬೆಳಕಾಗುತ್ತೆ. ಅದನ್ನು ನೋಡಿ ನಾನು ಸಂತೋಷ ಪಡ್ತೀನಿ’ ಅಂದಳಂತೆ. ಪಾರ್ವತಿಯ ಮಾತಿಗೆ ನಕ್ಕು ಪರವೇಶ್ವರ ಆ ಆನಂದವನ್ನು ತನ್ನ ತನ್ನ ಕಾಲಿನ ಗೆಜ್ಜೆ ಮಾಡಿಕೊಂಡು ಢಮರುಗವನ್ನು ಬಾರಿಸುತ್ತಾ, ಡ್ಯಾನ್ಸ್ ಮಾಡಲಿಕ್ಕೆ ಶುರು ಮಾಡಿದನಂತೆ. ಅದನ್ನು ನೋಡುತ್ತಾ ನೋಡುತ್ತಾ ಪಾರ್ವತಿ ಕೂಡಾ ಅವನ ಜೊತೆ ಸೇರಿ ಡ್ಯಾನ್ಸ್ ಮಾಡಲಿಕ್ಕೆ ಶುರು ಮಾಡಿದ್ಲಂತೆ. ಆಗ ಇದ್ದಕ್ಕಿದ್ದ ಹಾಗೆ ಶಿವ ಕಾಲಿಗೆ ಕಟ್ಟಿಕೊಂಡಿದ್ದ ಗೆಜ್ಜೆಯ ದಾರ ಹರಿದು ಗೆಜ್ಜೆ ಚೆಲ್ಲಾಪಿಲ್ಲಿಯಾಗಿ ಒಂದು ಗೆಜ್ಜೆ ಭೂಮಿಯ ಕಡೆಗೆ ಉರುಳಿ ಬಂತಂತೆ, ಅದನ್ನು ಈಶ್ವರ ನೋಡುತ್ತಾ ನಗುತ್ತಾ ನಿಂತನಂತೆ. ಆ ಗೆಜ್ಜೆ ಭೂಮಿಯನ್ನು ತಲುಪುವ ವೇಳೆಗೆ ಸಂಗೀತ, ಸಾಹಿತ್ಯ, ಡ್ಯಾನ್ಸ್, ನಾಟಕ ಹೀಗೆ ಕಲೆಗಳಾಗಿಬಿಟ್ವಂತೆ’.
‘ಮಿಕ್ಕವು?’ ಚಿಟ್ಟಿಯ ಮನಸ್ಸಿನಲ್ಲಿ ಪ್ರಶ್ನೆ ಬಂದರೂ ಕಥೆಯ ಓಘಕ್ಕೆ ಅಡ್ಡಿಯಾಗಬಾರದು ಎಂಡು ಸುಮ್ಮನೆ ಕುಳಿತಳು.
‘ನೋಡ ನೋಡುತ್ತಿದ್ದಂತೆ ಅವು ಮನುಷ್ಯನ ಮನಸ್ಸನ್ನು ಸೇರಿ ಬೆಳಯ ತೊಡಗಿತಂತೆ. ಈಶ್ವರನ ಆನಂದ ಮನುಷ್ಯನ ಎದೆಯಲ್ಲಿ ಬಂದು ನಿಂತು ಕಲೆಗಳಾಗಿವೆ. ಹೀಗೆ ನಮಗೆ ಸಿಕ್ಕಿದ್ದು ಈ ನಾಟಕ. ಇಂಥಾ ಅವಕಾಶ ಎಲ್ಲರಿಗು ಸಿಕ್ಕಲ್ಲ ನಿಮಗೆ ಸಿಕ್ಕಿದೆ ಅಂದ್ರೆ ನಿಮ್ಮ ಪುಣ್ಯ. ದೇವ ದೇವನನ್ನು ನೆನೆದು ನಮ್ಮ ನಾಟಕವನ್ನು ಶುರು ಮಾಡೋಣ’ ಗುರುಪಾದಪ್ಪ ಮೇಷ್ಟ್ರು ಕಥೆ ಮುಗಿಸಿದರು.

ಮೇಷ್ಟ್ರು ಹೇಳಿದ ಕಥೆಯ ಕಾರಣಕ್ಕೋ ಅಥವಾ ಯಾರಿಗೂ ಸಿಗದೆ ತನಗೆ ಈ ಅವಕಾಶ ಸಿಕ್ಕಿದ್ದಕ್ಕೋ ಎಲ್ಲರ ಮನಸ್ಸಿನಲ್ಲೂ ಒಂದು ಧನ್ಯತೆ ಹುಟ್ಟಿಕೊಂಡಿತ್ತು. ಚಿಟ್ಟಿಗೆ ಈ ಅವಕಾಶ ಯಾರಿಗೂ ಸಿಗದೆ ತನಗೆ ಮಾತ್ರ ಸಿಕ್ಕಿರುವುದಕ್ಕೆ ತಾನೇನೋ ಪುಣ್ಯ ಮಾಡೆ ಹುಟ್ಟಿರಬೇಕು ಎಂದು ಭಾವಿಸಿದಳು. ಎಲ್ಲದಕ್ಕಿಂತ ಹೆಚ್ಚಾಗಿ ತಾನು ‘ಮೂಡುವನು ರವಿ ಮೂಡುವನು’, ‘ದೇವರು ರುಜು ಮಾಡಿದನು ಹೀಗೆ ಪದ್ಯಗಳನ್ನು ಓದಿದ್ದಳಲ್ಲ, ಆ ಕವಿ ಕುವೆಂಪುರವರ ನಾಟಕ, ಅದರ ಮಾತಿನ ವಾಗ್ಝರಿ ನಿಜಕ್ಕೂ ಅವಳ ಒಳಗೆ ವಿಚಿತ್ರ ಲೋಕವನ್ನು ಸೃಜಿಸುತ್ತಿತ್ತು. ತನಗೆ ಸಿಗದ ಈ ಪದಗಳು ಈ ಅವರಿಗೆ ಎಲ್ಲಿ ಸಿಕ್ಕಿದ್ದು? ‘ಅಮ್ಮ ಹೀಗಂದ್ರೇನು? ಅಪ್ಪ ಹಾಗಂದ್ರೇನು?‘ ಚಿಟ್ಟಿಯ ಪ್ರಶ್ನೆಗಳಿಗೆ ಮನೆಯಲ್ಲಿ ಉತ್ತರವಿರಲಿಲ್ಲ. ಚಿಟ್ಟಿ ಮನೆಗೆ ಬಂದಳು ಅಂದ್ರೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳೇ. ‘ಯಾಕೆ ಚಿಟ್ಟಿ ಇಷ್ಟೊಂದು ಪ್ರಶ್ನೆ ಕೇಳ್ತೀಯ?’ ಅಂತ ಪುಟ್ಟಿ ಕೇಳಿದ್ರೆ ‘ಗೊತ್ತಿಲ್ಲ ಕಣೆ, ಆದ್ರೆ ಒಂದು ದಿನ ನಾನೂ ಇದೇ ಥರಾ ಏನೋ ಬರೀತೀನಿ ಅನ್ನಿಸ್ತಾ ಇದೆ’ ಎನ್ನುತ್ತಿದ್ದಳು ಚಿಟ್ಟಿ. ಹೊಸ ಪದಗಳನ್ನು ಹುಡುಕುವುದು ಅದನ್ನು ಸೇರಿಸಿಕೊಂಡು ಮಾತಾಡುವುದು ಅವಳಿಗೆ ಸಾಮಾನ್ಯ ಆಗುತ್ತಾ ಬಂತು.
ನಾಟಕದ ಒಂದು ದೃಶ್ಯ, ಅದು ಸತ್ಯವಾನನ ಕೊನೆಯ ದಿನ ಇವತ್ತು ಅವನ ಸಾವು ಬರುತ್ತದೆ ಎಂದು ಅರಿತ ಸಾವಿತ್ರಿ ಅವನ ಜೊತೆ ಕಾಡಿಗೆ ಬಂದಿದ್ದಾಳೆ. ಪ್ರಕೃತಿಯ ಸೊಬಗನ್ನು ನೋಡುತ್ತಾ ‘ನೋಡಲ್ಲಿ ಮುತ್ತುಗದ ಹೂಗಳು ವನದೇವಿಯ ಬರುವಿಗಾಗಿ ಹಿಡಿದ ಪಂಜುಗಳೋ ಎಂಬಂತೆ ತೋರುತ್ತಿದೆ’ ಎಂದು ಸತ್ಯವಾನ ಹೇಳಿದರೆ ಸಾವಿತ್ರಿ ‘ನನಗಂತೋ ಬಹುದೂರ ಮಸಣದೊಳು ಉರಿವ ಸೂಡುಗಳೋ ಎಂಬಂತೆ ಭಾಸವಾಗುತ್ತಿದೆ’ ಎಂದು ಹೇಳುತ್ತಾಳೆ. ಯಾಕೋ ಮಾತುಗಳನ್ನು ಹೇಳುವಾಗ ಚಿಟ್ಟಿಯ ಒಳಗೆ ಒಂದು ಪುಳಕ ಹುಟ್ಟಿಕೊಳ್ಳುತ್ತಿತ್ತು. ಅವಳ ದೇಹದ ಹಾವ, ಮುಖದ ಭಾವ ಎರಡು ಮೇಳೈಸಿ ಗುರುಪಾದಪ್ಪ ಮೇಷ್ಟ್ರು ಭೇಷ್ ಅಂತ ಅದೆಷ್ಟು ಸಲ ಹೇಳಿಬಿಟ್ಟಿದ್ದರೋ ಅವಳು ಲೆಕ್ಕಕ್ಕೆ ಇಡಲಾಗುತ್ತಿರಲಿಲ್ಲ. ಅವಳಿಗೆ ತಾನು ನಟಿಸುತ್ತೇನೆ ಎನ್ನುವುದೇ ಮರೆತುಹೋಗುತ್ತಿತ್ತು. ಇದಕ್ಕಾಗಿ ಸಹನಟರ ಅಸೂಯೆಯನ್ನು ಅವಳು ಎದುರಿಸಬೇಕಾಗುತ್ತಿತ್ತು.
ಈ ಮಧ್ಯೆ ಅಜ್ಜಿಯ ಅನಾರೋಗ್ಯ ಹೆಚ್ಚಾಗುತ್ತಾ ಬಂದಿತ್ತು. ಅವಳಿಗೆ ಕಿವಿ ಕೇಳುವುದಿರಲಿ ಮರೆವೂ ಜಾಸ್ತಿಯಾಗುತ್ತಾ ಬಂದಿತ್ತು. ಅಪ್ಪ ಅವಳಿಗಾಗಿ ಅಂತ ಒಂದು ಮಂಚವನ್ನು ಮಾಡಿಸಲಿಕ್ಕೆ ಹಾಕಿದ್ದ. ಅದು ನಾರಾಯಣ ಗೌಡ ಹಿತ್ತಲಿನ ಮನೆಯಲ್ಲಿದ್ದ ಬಡಗಿ ಮಲ್ಲಣ್ಣನ ಹತ್ತಿರ. ನಾಟಕ ನೋಡಲಿಕ್ಕೆ ಸೀನು ಪುಟ್ಟಿ ಕೂಡಾ ಬರುತ್ತಿದ್ದರು. ಸೀನುವೂ ಎಲ್ಲಾ ಮಾತುಗಳನ್ನು ಗಟ್ಟಿ ಮಾಡಿಕೊಂಡು ತಾನೂ ಹೇಳುತ್ತಿದ್ದ. ಅವನ ನೆನಪಿನ ಶಕ್ತಿಗೆ ಚಿಟ್ಟಿ ಕೂಡಾ ಬೆರಗಾಗುತ್ತಿದ್ದಳು. ಆದರೆ ಅವನು ತುಂಬಾ ಹಟಮಾರಿಯಾಗುತ್ತಿದ್ದುದು ಮಾತ್ರಾ ಅವಳಿಗೆ ಸಹಿಸಲಾಗುತ್ತಿರಲಿಲ್ಲ. ಒಮ್ಮೆ ಅವಳ ಎದೆಗೆ ತನ್ನ ಮುಷ್ಟಿ ಕಟ್ಟಿ ಹೊಡೆದ ಚಿಟ್ಟಿ ‘ಅಯ್ಯೋ ‘ ಎನ್ನುತ್ತಾ ಕೂಗಿದಳು. ಅಮ್ಮ ಓಡಿ ಬಂದಳು ‘ಏನಾಯ್ತು ಚಿಟ್ಟಿ?’ ಅಂತ. ‘ಸೀನು ಹೊಡೆದ ಅಮ್ಮಾ’ ಎಂದಳು ಚಿಟ್ಟಿ. ‘ಹೊಡೀಬೇಡ ಸೀನು ಅಕ್ಕ ಅಲ್ವಾ’ ಎಂದು ಮುದ್ದಿಸಿ ರಮಿಸಿ ಆಕಡೆಗೆ ಹೋದ ತಕ್ಷಣವೇ ಸೀನು ‘ನನ್ನ ಮೇಲೆ ಹೇಳ್ತೀಯ’ ಎಂದು ಮತ್ತೆ ಎದೆಗೇ ಹೊಡೆದಿದ್ದ. ಅವಳ ಆ ಮೃದುಭಾಗ ನೋವಿನಿಂದ ತತ್ತರಿಸಿತ್ತು. ಆದರೆ ಅದನ್ನು ಹೇಳಿಕೊಳ್ಳಲು ಅವಳಿಗೆ ಯಾಕೋ ಸಂಕೋಚ ಅನ್ನಿಸಿ ಆ ನೋವನ್ನು ಸಹಿಸಿಕೊಂಡು ಸುಮ್ಮನೆ ಉಳಿದು ಬಿಟ್ಟಿದ್ದಳು. ಯಾಕೋ ಈಚೆಗೆ ಇವನು ತುಂಬಾ ಪುಂಡ ಆಗ್ತಾ ಇದ್ದಾನೆ ಅಂತ ಅಮ್ಮ ಗೊಣಗಿದ್ದಳು.
ನಾಟಕ ಮುಗಿಸಿಕೊಂಡು ಚಿಟ್ಟಿ, ಸೀನು, ಪುಟ್ಟಿ ಎಲ್ಲರೂ ಮಂಚ ತಯಾರಾಗುವ ಅದ್ಭುತವನ್ನು ನೋಡಲಿಕ್ಕೆ ಓಡುತ್ತಿದ್ದರು. ಚಿಟ್ಟಿಗೆ ಅದರ ಮೇಲೆ ತಾನು ಮಲಗುತ್ತೇನೆ ರಾಜಕುಮಾರಿಯ ಹಾಗೆ ಎನ್ನುವ ಕನಸು. ಆಮೇಲೆ ಅದಕ್ಕೆ ವಿಕ್ರಮಾದಿತ್ಯನ ಸಿಂಹಾಸನಕ್ಕಿರುವಂತೆ ವಿಶೇಷ ಶಕ್ತಿ ಬಂದು ಅದು ತನ್ನೊಂದಿಗೆ ಮಾತಾಡುತ್ತೆ, ಜಗತ್ತಿನಲ್ಲಿ ಯಾರಿಗೂ ಗೊತ್ತಿರದ ಸಂಗತಿಗಳನ್ನು ಹೇಳುತ್ತೆ, ರಾತ್ರಿಯಾದರೆ ರೆಕ್ಕೆ ಮೂಡಿಸಿಕೊಡು ತನ್ನನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಕರೆದೊಯ್ಯುತ್ತೆ ಎನ್ನುವ ಏನೇನನ್ನೋ ತುಂಬಿಕೊಳ್ಳುತ್ತಿದ್ದಳು. ಇದನ್ನು ಅಪ್ಪ ಅಮ್ಮನ ಹತ್ತಿರ ಹೇಳಲಿಕ್ಕೆ ಆಗದೆ ಸೀನು ಪುಟ್ಟಿಯ ಕೈಲಿ ಹೇಳಿಕೊಳ್ಳುತ್ತಿದ್ದಳು.
ಪುಟ್ಟಿ ಯಾವಾಗಿನಂತೆ ಪುಸು ಪುಸು ನಗುತ್ತಾ ‘ಲೇ ಅದನ್ನು ನಿನಗೋಸ್ಕರ ಅಲ್ಲ ಅಪ್ಪ ಮಾಡಿಸ್ತಾ ಇರೋದು… ಅಜ್ಜಿಗೋಸ್ಕರ. ಅದೇನಾದ್ರೂ ಮಂಚದ ಮೇಲೆ ಸತ್ತು ಹೋಗಿ, ನೀನೇನಾದ್ರೂ ಅದರ ಮೇಲೆ ಮಲಗಿಕೊಂಡ್ರೆ ದೆವ್ವ ಆಗಿ ನಿನ್ನ ಕಾಡಿಸುತ್ತೆ ಅಷ್ಟೇ’ ಎಂದಿದ್ದಳು. ತನ್ನ ಕಲ್ಪನೆಗೆ ಸ್ವಲ್ಪವೂ ಬೆಲೆ ಕೊಡಲಿಲ್ಲವಲ್ಲ ಅಂತ ಚಿಟ್ಟಿಗೆ ಪುಟ್ಟಿಯ ಮೇಲೆ ಕೋಪ ಬಂತು. ‘ಇನ್ನು ಮುಂದೆ ಇವಳಿಗೆ ಏನೂ ಹೇಳಲ್ಲ’ ಎಂದು ನಿರ್ಧಾರ ಮಾಡಿದಳು. ಸೀನು ‘ಆಮೇಲೇನಾಗುತ್ತೇ?’ ಎಂದು ಕೇಳಿದ್ದರಿಂದ ಬಾ ಕಂದ ನಿಂಗೆ ಹೇಳ್ತೀನಿ ಎನ್ನುತ್ತಾ ತನ್ನ ಹೇಳುವಿಕೆಗೆ ಅವನನ್ನೇ ಗುರಿ ಮಾಡಿಕೊಂಡಳು, ಅವನು ಕೊಡುವ ಎಲ್ಲಾ ಕಾಟವನ್ನೂ ಸಹಿಸಿಕೊಂಡು.
ನಿಂಗರಾಜು ನೀನಿರಬೇಕಿತ್ತು ಇವತ್ತು ಎಷ್ಟು ಚೆನ್ನಾಗಿ ನಟಿಸ್ತಾ ಇದೀನಿ ಗೊತ್ತಾ? ತನಗೆ ತಾನೇ ಚಿಟ್ಟಿ ಹೇಳಿಕೊಳ್ಳುತ್ತಿದ್ದಳು. ಅವಳ ಮುಗ್ಧವಾದ ಕಣ್ಣುಗಳಲ್ಲಿ ಮಿಂಚು ಆರಿ ಹೋಗಿ ಸಪ್ಪಗಾಗುತ್ತಿತ್ತು. ಒಂದು ದಿನ ಮನೆಗೆ ಬರುವಾಗ ಅಮ್ಮ ಅವಳ ಬ್ಯಾಗನ್ನು ಹುಡುಕಿ ಅದರಲ್ಲಿ ತುಂಬಿಕೊಂಡಿದ್ದೆಲ್ಲವನ್ನೂ ಕಸ ಅಂತ ಎಸೆದುಬಿಟ್ಟಿದ್ದಳು. ಅವಳು ಜತನದಿಂದ ಇಟ್ಟುಕೊಂಡಿದ್ದ ನಿಂಗರಾಜುವನ್ನು ನೆನಪಿಸುವ ಎಲ್ಲವೂ ಅವನನ್ನೆ ಹುಡುಕಿ ಹೊರಟುಬಿಟ್ಟಿದ್ದವು. ಚಿಟ್ಟಿಯ ದುಃಖಕ್ಕೆ ಎಣೆಯೇ ಇರಲಿಲ್ಲ. ಯಾಕೆ ಹೀಗ್ ಅಳ್ತಾ ಇದೀಯ?’ ಅಮ್ಮ ಏನೂ ತಿಳಿಯದೆ ಕೇಳಿದ್ದಳು. ಚಿಟ್ಟಿಯಾವುದಕ್ಕೂ ಉತ್ತರಿಸಿರಲಿಲ್ಲ.
ನಾಟಕದಲ್ಲಿ ಮನಸ್ಸನ್ನು ತೊಡಗಿಸಿ ಒಂದೇ ಸಮನೆ ಅಭ್ಯಾಸಕ್ಕೆ ಬಿದ್ದಳು. ಚಿಟ್ಟಿಗೆ ನಾಟಕದಲ್ಲಿ ಆಸಕ್ತಿ ಜಾಸ್ತಿ ಎನ್ನುತ್ತಾ ಅಪ್ಪ ಸಂತೋಷಪಟ್ಟು ಅವಳನ್ನು ಎದುರಿಗೆ ಕೂಡಿಸಿಕೊಂಡು ನಾಟಕದ ಹಾಡುಗಳನ್ನು ಹೇಳಿಕೊಂಡ. ಉಮೇಶ ‘ನಮ್ಮ ಭೂತಯ್ಯು ದೊಡ್ದಕಲಾವಿದೆ ಆಗ್ತಾಳೆ, ನಾಟಕ ಸಿನಿಮಾಗಳಲ್ಲಿ ಆಕ್ಟ್ ಮಾಡ್ತಾಳೆ ಎಲ್ಲಿ ಹೋಗ್ಲಿ ಜನ ಜನ. ಇನ್ನ ಇವಳನ್ನ ಹಿಡಿಯೋಕ್ಕಾಗುತ್ತಾ?’ ಎಂದು ಅನ್ನುತ್ತಿದ್ದರೆ ಚಿಟ್ಟಿಯ ಒಳಗೆ ಹೆಮ್ಮೆ ಬೆಳೆಯುತ್ತಿತ್ತು.
ಒಂದು ದಿನ ನಾಟಕದ ಅಭ್ಯಾಸ ಮುಗಿಸಿಕೊಂಡು ಮಂಚ ಆಗುವ ಅದ್ಭುತವನ್ನು ನೋಡಿ ಬರೋಣ ಎಂದು ಗುಂಗಿನಲ್ಲಿ ಹೊರಟ ಚಿಟ್ಟಿಗೆ ಅಯೋಮಯವೆ ಎದುರಿಗೆ ನಿಂತ ಹಾಗಾಗಿತ್ತು. ಮಲ್ಲಣ್ಣನ ಮನೆಗೆ ಹೋಗುವಾಗ ನಾರಾಯಣ ಗೌಡರ ಮನೆಯನ್ನು ಹಾದು ಹೋಗಬೇಕಿತ್ತು. ಅಲ್ಲಿ ಸಣ್ಣದಾಗಿ ತಂದೆ ಮಗನ ನಡುವೆ ಜಗಳ ಶುರುವಾಗಿತ್ತು.
ನಾರಾಯಣ ಗೌಡರಿಗೆ ಇಬ್ಬರು ಹೆಂಡತಿಯರು. ಮೊದಲ ಹೆಂಡತಿ ಚಂದ್ರಕ್ಕನಿಗೆ ಮೂವರು ಗಂಡು ಮಕ್ಕಳು. ಸುಂದರಿ ಮುನಿಯಮ್ಮಳನ್ನು ಅದ್ಯಾವ ಗಳಿಗೆಯಲ್ಲಿ ನೋಡಿದರೋ ‘ನಿನಗೆ ಬರೀ ಗಂಡು ಮಕ್ಕಳೇ ಅದಕ್ಕೆ ಹೆಣ್ಣು ಮಗುವಿಗಾಗಿ ಇವಳನ್ನು ಮದುವೆ ಮಾಡಿಕೊಳ್ಳುತ್ತೇನೆ’ ಎಂದುಬಿಟ್ಟಿದ್ದರು. ದೊಡ್ಡ ಜಗಳ ಆಗಿ ಚಂದ್ರಕ್ಕ ತನ್ನ ಗಂಡ ತನ್ನ ಹಾದಿಗೆ ಬರೋನಲ್ಲ ಎಂದು ಅರ್ಥ ಮಾಡಿಕೊಂಡು ಸವತಿಯ ಜೊತೆ ಗಂಡನನ್ನು ಹಂಚಿಕೊಳ್ಳಲಾರದೆ ತವರು ಮನೆಗೆ ಹೋಗಿಬಿಟ್ಟಿದ್ದಳು. ಅದೃಷ್ಟವೋ ದುರಾದೃಷ್ಟವೋ ಮುನಿಯಮ್ಮಳಿಗೆ ಮೂವರೂ ಹೆಣ್ಣುಮಕ್ಕಳೇ. ಒಬ್ಬರಿಗಿಂತ ಒಬ್ಬರು ಸುಂದರಿಯರು.
ಗಂಡು ಮಕ್ಕಳು ದೊಡ್ಡವರಾಗುವವರೆಗೂ ನಾರಾಯಣ ಗೌಡರಿಗಾಗಲೀ ಮುನಿಯಮ್ಮನಿಗಾಗಲಿ ಯಾವ ತೊಂದರೆಯೂ ಇರಲಿಲ್ಲ. ತಮ್ಮ ಪಾಲು, ಆಸ್ತಿ, ಅಪ್ಪ ಅಂತೆಲ್ಲಾ ಬಂದು ಹೋಗಿ ಮಾಡಲಿಕ್ಕೆಶುರು ಮಾಡಿದ ಅವರು ಸ್ವಂತ ಚಿಕ್ಕಮ್ಮನ ಮೇಲೆ ಕಣ್ಣು ಹಾಕಿದ್ದರು. ಅಪ್ಪ ಇಟ್ಟುಕೊಂಡಿರುವವಳು ಎಂದು ಎದುರೂಗೆ ಬೈಯ್ಯುತ್ತಿದ್ದರು. ನಾರಾಯಣಗೌಡರಿಗೆ ಈ ಗಂಡು ಮಕ್ಕಳು ನುಂಗಲಾರದ ತುಪ್ಪ ಆಗಿದ್ದರು. ಹೇಗಾದರೂ ಸರಿ ತಾನು ಬದುಕಿರುವಾಗಲೇ ತನ್ನ ಹೆಣ್ಣುಮಕ್ಕಳಿಗೆ ಮದುವೆ ಮಾಡಿಬಿಡಬೇಕು ಇಲ್ಲಾಂದ್ರೆ ಇವರ ಬದುಕು ಮೂರಾ ಬಟ್ಟೆಯಾಗುತ್ತದೆ ಎಂದು ಭಾವಿಸಿ ಗಂಡು ನೋಡತೊಡಾಗಿದ್ದರು. ಮುನಿಯಮ್ಮನಂತೂ ಜೀವವನ್ನು ಅಂಗೈಲಿ ಹಿಡಿದು ಕೂತಿದ್ದಳು.
ದೊಡ್ಡ ಹುಡುಗಿ ಶಾರದಾಳ ಮೇಲೆ ಅದು ಹೇಗೋ ಮಲ‌ಅಣ್ಣ ರಾಜು ಕಣ್ಣು ಹಾಕೇ ಬಿಟ್ಟ. ಈ ಸೂಕ್ಷ್ಮವನ್ನು ಗಮನಿಸಿದ ಮುನಿಯಮ್ಮ ಅವನನ್ನು ಮನೆಗೆ ಬರದೆ ಇರುವ ಹಾಗೇ ಸಾಕಷ್ಟು ಪ್ರಯತ್ನವನ್ನೂ ಪಟ್ಟಳು. ತನ್ನ ಅಕ್ಕ ಚಂದ್ರಕ್ಕನ ಹತ್ತಿರ ಹೋಗಿ ‘ಅಕ್ಕ ಹೀಗೆಲ್ಲಾ ಆಗಿಬಿಟ್ಟಿದೆ ನಿನ್ನ ಮಗನನ್ನು ತಡೀ, ಎಷ್ಟಾದರೂ ರಕ್ತಸಂಬಂಧ’ ಎಂದು ಬೇಡಿಕೊಂಡಳು. ಚಂದ್ರಕ್ಕ ‘ನೀನು ನನಗೆ ಮಾಡಿದ ಅನ್ಯಾಯ ಕಡಿಮೇನಾ ನಾನು ಆಗ ಎಷ್ಟೆಲ್ಲಾ ಅನುಭವಿಸಿದೆ ಈಗ ನೀನು ಅನುಭವಿಸು’ ಎಂದುಬಿಟ್ಟಿದ್ದಳು. ಇನ್ನು ತನ್ನ ಜೀವನ ಇಷ್ಟೇನಾ? ಎಂದು ಸಂಕಟ ಪಟ್ಟು, ಈಗ ತನಗೆ ಇರುವ ಒಂದೇ ದಾರಿ ಶಾರದಾಳ ಮದುವೆ ಎನ್ನುವ ನಿರ್ಧಾರಕ್ಕೆ ಬಂದುಬಿಟ್ಟಿದ್ದಳು.
ಗಂಡು ನೋಡಿ ಮದುವೆ ಮಾತುಕಥೆ ಎಲ್ಲಾ ಆಗಬೇಕು ಎನ್ನುವ ತಯಾರಿಯಲ್ಲಿರುವಾಗ ಗಂಡಿನ ಕಡೆಯವರಿಂದ ನಿಮ್ಮ ಹುಡುಗಿ ನಮಗೆ ಬೇಡ ಎನ್ನುವ ಉತ್ತರ ಬಂದಿತ್ತು. ಮುನಿಯಮ್ಮ ತಲೆಯ ಮೇಲೆ ಕೈ ಹೊತ್ತು ಕೂತಿದ್ದಳು. ಇದೆಲ್ಲಾ ರಾಜುವಿನ ಕೆಲಸ ಎಂದು ಅರ್ಥವಾದರೂ ಏನೂ ಮಾಡಲಿಕ್ಕಾಗದ ಸ್ಥಿತಿ. ಸೂಕ್ಷ್ಮ ಮನಸ್ಸಿನ ಹುಡುಗಿ ಶಾರದಾ ಆತ್ಮಹತ್ಯೆಗೂ ಪ್ರಯತ್ನ ಪಟ್ಟಿದ್ದಳು. ‘ಆ ದೇವ್ರೂ ಜೀವನ ಕೊಟ್ಟಿರುವುದು ಜೀವಿಸು ಅಂತ ಜೀವ ಕಳ್ಕೋ ಅಂತ ಅಲ್ಲ‘ ಎಂದು ಬಲ್ಲವರು ಬುದ್ಧಿಹೇಳಿದ್ದರು.
ಈ ವಿಷಯವನ್ನೆಲ್ಲಾ ಈಗ ಚಿಟ್ಟಿ ಅರ್ಥ ಮಾಡಿಕೊಳ್ಳಬಲ್ಲವಳಾಗಿದ್ದಳು. ಪಾಪ ಶಾರದ ಎಷ್ಟೆಲ್ಲಾ ಕಷ್ಟ ಪಟ್ಟಿದ್ದಾಳೆ, ಅದೂ ಈ ವಯಸ್ಸಿಗೆ ಎಂದು ಅನುಕಂಪ ಪಟ್ಟಿದ್ದಳು. ತಾನೇನಾದ್ರೂ ಶಾರದಾ ಆಗಿದ್ದಿದ್ರೆ ಅಣ್ಣನ ಕಾಲರ್ ಹಿಡಿದು ಕೆಟ್ಟ ಮಾತೊಂದನ್ನು ಆಡಿಬಿಡುತ್ತಿದ್ದೆ ಎಂದುಕೊಂಡಿದ್ದಳು. ಜೊತೆಗೆ ತನಗೆ ಅಣ್ಣ ಇಲ್ಲವಲ್ಲ ಎಂದೂ ಸಮಾಧಾನ ಪಟ್ಟುಕೊಂಡಿದ್ದಳು.
ಚಿಟ್ಟಿಗೆ ಕುತೂಹಲ ಹೆಚ್ಚಾಗಿ ಹಾಗೆ ನಾರಾಯಣಗೌಡರ ಮನೆಯ ಕಿಟಕಿಯಲ್ಲಿ ಬಗ್ಗಿ ನೋಡಿದಳು. ಇದೆಲ್ಲಾ ಹೇಗಾಯ್ತು ಏನಯ್ತು ಅಂತ ಅವಳಿಗೆ ಹಿಂದೆ ಮುಂದೆ ಗೊತ್ತಾಗಲಿಲ್ಲ. ರಾಜು ಶಾರದಾಳನ್ನು ಹಿಡಿಲಿಕ್ಕೆ ನೋಡ್ತಾ ಇದಾನೆ. ಶಾರದಾ ಕಿರುಚಿಕೊಂಡು ಅವನಿಂದ ತಪ್ಪಿಸಿಕೊಳ್ಳಲು ನೋಡುತ್ತಿದ್ದಾಳೆ. ನಾರಾಯಣ ಗೌಡರು ಮತ್ತು ಮುನಿಯಮ್ಮ ಅವನನ್ನು ತಡೆಯಲು ನೋಡುತ್ತಿದ್ದಾರೆ. ಎಷ್ಟಾದರೂ ಗಂಡಲ್ಲವಾ? ಶಕ್ತಿ ಜಾಸ್ತಿಯಲ್ಲವಾ? ಅವನ ಕೈಯ್ಯಿಂದ ತಪ್ಪಿಸಿಕೊಳ್ಳಲು ಶಾರದಾ ಮಾಡಿದ ಎಲ್ಲಾ ಪ್ರಯತ್ನ ವಿಫಲವಾಗಿ ಅವಳು ಅವನ ತೋಳಿಗೆ ಸಿಕ್ಕೇಬಿಟ್ಟಳು. ಬಲವಂತವಾಗಿ ಅವನು ಅವಳ ತುಟಿಗಳಿಗೆ ತನ್ನ ತುಟಿಯನ್ನು ಸೇರಿಸಿಯೇ ಬಿಟ್ಟ.
ಚಿಟ್ಟಿ ಕಣ್ಣನ್ನು ಮುಚ್ಚಿದಳು, ಇನ್ನು ಶಾರದಾಳ ಕಥೆ ಮುಗಿದೇ ಹೋಯಿತು ನಿರ್ಧಾರ ಮಾಡಿದವಳಂತೆ. ಮುಚ್ಚಿದ ಕಣ್ಣಿನ ಹಿಂದೆ ಚಕಚಕನೆ ನೂರಾರು ಚಿತ್ರಗಳು ಹಾದುಹೋದವು. ಅವು ಚಿಟ್ಟಿಯನ್ನು ಅಲ್ಲಾಡಿಸಿಬಿಟ್ಟವು. ಅಷ್ಟರಲ್ಲಿ ರಾಜು ಜೋರಾಗಿ ಕೂಗಿದ. ಅವನ ತಲೆಯಿಂದ ರಕ್ತ ಸೋರುತ್ತಿತ್ತು. ಮುನಿಯಮ್ಮ ಕೆರಳಿ ಕೆಂಡವಾಗಿದ್ದಳು. ಅವಳ ಕೈಲಿದ್ದ ಕುಡುಲನ್ನು ತನ್ನ ಮಗಳನ್ನು ರಕ್ಷಿಸಲು ಇದ್ದ ಒಂದೇ ಅಸ್ತ್ರ ಎಂದು ಭಾವಿಸಿದ್ದಳು. ನಾರಾಯಣಗೌಡರು ದಂಗಾಗಿದ್ದರು. ನೋಡ ನೋಡುತ್ತಿದ್ದಂತೆ ರಾಜು ನೆಲಕ್ಕೆ ಬಿದ್ದು ಒದ್ದಾಡಿ ಕಣ್ಣುಗಳನ್ನು ಮೇಲಕ್ಕೆ ತೇಲಿಸಿ ಸತ್ತೇ ಹೋದ.
ಚಿಟ್ಟಿಯ ಆಗಲ ಕಣ್ಣುಗಳು ಗಾಬರಿಯಿಂದ ಮತ್ತಷ್ಟು ಅಗಲವಾದವು. ಜೋರಾಗಿ ಕೂಗಿದ್ದಳು. ಅವಳನ್ನು ಹಾಗೆ ನೋಡಿದವಳೇ ಮತ್ತಷ್ಟು ಗಾಬರಿಯಿಂದ ಮುನಿಯಮ್ಮ ಓಡಿ ಬಂದು ಅವಳನ್ನು ಒಳಗೆ ಎಳೆದುಕೊಂಡು ಬಂದಿದ್ದಳು. ಅವಳ ಬಾಯನ್ನು ಬಿಗಿಯಾಗಿ ಮುಚ್ಚಿ, ಕಣ್ಣಲ್ಲಿ ನೀರನ್ನು ತಂದುಕೊಂಡು ‘ದಯವಿಟ್ಟು ಈ ವಿಷಯವನ್ನು ಯಾರಿಗೂ ಹೇಳಬೇಡ. ನನ್ನ ಮಗಳ ಮಾನ ಪ್ರಾಣದ ಪ್ರಶ್ನೆ’ ಎಂದು ಬೇಡಿಕೊಂಡಿದ್ದಳು. ಹಸಿ ರಕ್ತದ ವಾಸನೆಗೆ ಉಮ್ಮಳಿಸಿ ಬರುತ್ತಿದ್ದ ವಾಕರಿಕೆಯನ್ನು ತಡೆದುಕೊಂಡಳು ಚಿಟ್ಟಿ. ಸತ್ತುಬಿದ್ದ ಅಣ್ಣನ ಮುಂದೆ ಅಳುತ್ತಾ ಕೂತಿದ್ದ ಶಾರದಾಳ ಭುಜವನ್ನು ತಾಕಿದ್ದಳು ಚಿಟ್ಟಿ.
ಚಂದ್ರಕ್ಕ ಬಂದು ‘ನನ್ನ ಮಗ ಇಲ್ಲೇ ಬಂದಿದ್ದ, ನೀವೇ ಅವನನ್ನು ಏನೋ ಮಾಡಿದ್ದೀರ’ ಅಂತ ಗಲಾಟೆ ಮಾಡಿದ್ದಳು. ಇಲ್ಲ ಇಲ್ಲಿಗೆ ಬಂದೆ ಇಲ್ಲ ಎಂದು ನಾರಾಯಣ ಗೌಡರು ವಾದ ಮಾಡಿದರು. ಮುನಿಯಮ್ಮ ಸಾಯಿಸಿರಬಹುದು ಎನ್ನುವ ಊಹೆಯನ್ನು ಕೂಡಾ ಅವರು ಮಾಡಲಿಕ್ಕೆ ಸಾಧ್ಯ ಇರಲಿಲ್ಲ.
ಒಂದು ಸಾವನ್ನು ಅದೂ ಅಂಥಾ ಸಾವನ್ನು ಹತ್ತಿರದಿಂದ ನೋಡಿದ ಚಿಟ್ಟಿಗೆ ನಿದ್ದೆ ಬರುವುದು ಸಾಧ್ಯವಿರಲಿಲ್ಲ. ಆ ಭಯಾನಕತೆಯ ನಡುವೆಯೇ ಅವಳ ಮನಸ್ಸಿನಲ್ಲಿ ಪ್ರಶ್ನೆಯೊಂದು ಹುಟ್ಟಿತ್ತು. ಮುನಿಯಮ್ಮ ಮಾಡಿದ ತಪ್ಪಿಗೆ ಶಾರದಾ ಯಾಕೆ ಗುರಿಯಾಗಬೇಕು? ಇಲ್ಲ ಇಲ್ಲಿ ಮುನಿಯಮ್ಮ ಶಾರದಾ ತಾನು ಎನ್ನುವ ಬೇಧವೂ ಇರೋದಿಲ್ಲ. ಹೆಣ್ಣು ಎನ್ನುವ ಈ ದೇಹ ಹೊತ್ತ ಯಾರಿಗೂ ಶಿಕ್ಷೆ ತಪ್ಪಿದ್ದಿಲ್ಲ. ಆದರೆ ಈ ಘಟನೆಯಲ್ಲಿ ರಾಜುಗೆ ಶಿಕ್ಷೆ ಆಗಿದ್ದು ಸರಿ ಅನ್ನಿಸಿತ್ತು. ಇದನ್ನು ಯಾರಿಗೂ ಹೇಳಬಾರದು. ತಾನೇ ಶಾರದಾಳ ಸ್ಥಿತಿಯಲ್ಲಿದ್ದಿದ್ದರೆ . . . ಅವಳ ಕಣ್ಣುಗಳು ತುಂಬಿ ಬಂದವು. ಹನಿಯಿಂದ ಮಂಜಾದ ಅವಳ ಕಣ್ಣುಗಳಲ್ಲಿ ರಕ್ತಸಿಕ್ತವಾದ ಅವನ ದೇಹ, ತೆರೆದುಕೊಂಡ್ದಿದ್ದ ಕಣ್ಣುಗಳು ಎಲ್ಲವೂ ತೇಲಿತು. ತನ್ನ ನಿರ್ಧಾರ ಸರಿ ಇದನ್ನು ಯಾರಿಗೂ ಹೇಳುವುದಿಲ್ಲ. ಇದು ತನ್ನ ಜೀವನದ ಒಳ್ಳೆಯ ಕೆಲಸ ಎಂದುಕೊಂಡಳು. ಎಲ್ಲವನ್ನೂ ಮರೆಸುವಂತೆ ನಿದ್ದೆ ಅವಳನ್ನು ಆವರಿಸಿಕೊಂಡಿತ್ತು.
ಶಾರದಾ ಕಾಕಡ ಗಿಡದ ಹತ್ತಿರ ನಿಂತು ಏನನ್ನೋ ನೋಡುತ್ತಿದ್ದಳು. ಶಾಲೆಗೆ ಹೊರಟ ಚಿಟ್ಟಿ ಅವಳನ್ನೇ ಕುತೂಹಲದಿಂದ ನೋಡುತ್ತಾ ಹತ್ತಿರ ಬಂದಳು. ಯಾರೋ ಬಂದ ಹೆಜ್ಜೆ ಸಪ್ಪಳಕ್ಕೆ ತಿರುಗಿ ನೋಡಿದ ಶಾರದಾ ಚಿಟ್ಟಿಯನ್ನು ನೋಡಿ ನಕ್ಕಳು. ಆ ನಗುವಿನಲ್ಲಿ ಗಾಢವಾದ ವಿಶಾದವಿತ್ತು. ‘ಶಾರದಾ ಏನ್ ನೋಡ್ತಾ ಇದೀಯಾ?’ ಎಂದಳು ಚಿಟ್ಟಿ. ‘ಈ ಹೂಗಳು ಯಾಕೆ ಕೆಂಪಾಗಿಲ್ಲ ಅಂತ ನೋಡ್ತಾ ಇದೀನಿ’ ಎಂದಳು ಶಾರದಾ. ಚಿಟ್ಟಿ ಗಾಬರಿಯಾದಳು ‘ಅಂದರೆ. . . ‘ ಯಾರಿಗೂ ಗುಟ್ಟು ಬಿಟ್ಟಿಕೊಡದೆ ಕಾಕಡ ಗಿಡದ ಕೆಳಗೆ ಮಲಗಿದ್ದ ರಾಜುವಿನ ಮೂಳೆಗಳು ಯಾವಾಗ ಹೊರಬರಲಿ ಎನ್ನುವ ಉಮೇದಿನಿಂದ ಮೈಮುರಿದ ಹಾಗೆ ಲಟಪಟ ಶಬ್ದ ಕೇಳಿ ಚಿಟ್ಟಿ ಬೆಚ್ಚಿನಿಂತಳು.
(ಮುಂದುವರಿಯುವುದು…)

‍ಲೇಖಕರು G

January 14, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

Trackbacks/Pingbacks

  1. ಪಿ ಚಂದ್ರಿಕ ಕಾಲಂ ’ಚಿಟ್ಟಿ’ : ಚಿಟ್ಟಿ ಬೆಳೆಯುತ್ತಿದ್ದಾಳೆ… « ಅವಧಿ / Avadhi - [...] ಪಿ ಚಂದ್ರಿಕ ಕಾಲಂ ’ಚಿಟ್ಟಿ’ : ಚಿಟ್ಟಿ ಬೆಳೆಯುತ್ತಿದ್ದಾಳೆ… January 21, 2014 by G (ಇಲ್ಲಿಯವರೆಗೆ…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: