ಸಂಧ್ಯಾರಾಣಿ ಕಾಲಂ : ’ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದ ಸೊಂಪು…’

Love has no Limits , but Relationship has It .
’ಪ್ರೀತಿಗೆ ವಯಸ್ಸಿನ ಹಂಗಿಲ್ಲ’,   ’ಒಗ್ಗರಣೆ’ಸಿನಿಮಾದ ಬಗ್ಗೆ, ನಡುವಯಸ್ಸಿನ ಪ್ರೀತಿಯ ಬಗ್ಗೆ ಬರೆದಾಗ ಮೇಲಿನ ಸಾಲನ್ನು ಬರೆದಿದ್ದೆ. ನಿಜ ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ, ಯಾವುದೇ ಹಂಗಿಲ್ಲ, ಆದರೆ ಅದೇ ಪ್ರೀತಿ ಒಂದು ಸಂಬಂಧವಾದಾಗ ಎಷ್ಟೆಲ್ಲಾ ಪ್ರಶ್ನೆಗಳು, ಎಷ್ಟೆಲ್ಲಾ ಮಿತಿಗಳು, ಎಷ್ಟೆಲ್ಲಾ ಗೋಡೆಗಳು.. ಹಾಗೆ ಯೋಚಿಸುತ್ತಿದ್ದಾಗ ಇದೇ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಬಂದ ಹಲವಾರು ಚಿತ್ರಗಳು ನೆನಪಿಗೆ ಬಂದವು. ಒಂದು ವಿಶೇಷವೆಂದರೆ ಆ ಎಲ್ಲಾ ಚಿತ್ರಗಳಲ್ಲೂ ಈ ಪ್ರೀತಿಯನ್ನು ಅತ್ಯಂತ ಗೌರವದಿಂದ, ಸಹಾನುಭೂತಿಯಿಂದ ಕಂಡಿದ್ದರು.
ಈ ಹಿನ್ನಲೆಯನ್ನಿಟ್ಟುಕೊಂಡು ಬಂದ ಚಿತ್ರಗಳಲ್ಲಿ ನಾನು ಮೊದಲು ನೋಡಿದ್ದು, ಕೆ ಬಾಲಚಂದರ್ ನಿರ್ದೇಶಿಸಿದ್ದ ’ಅಪೂರ್ವ ರಾಗಂಗಳ್’. ಘಟಾನುಘಟಿ ಕಲಾವಿದರಾದ ರಜನಿಕಾಂತ್, ಕಮಲ್ ಹಾಸನ್, ಜಯಸುಧ ನಟಿಸಿದ್ದರು. ಸಂಗೀತಗಾರ್ತಿ ವಸಂತಕುಮಾರಿ ಮಗಳಾದ ಶ್ರೀವಿದ್ಯಾ ಸ್ವತಃ ಸಂಗೀತಗಾರ್ತಿಯಾಗಿ ನಟಿಸಿದ್ದರು. ಆ ಕಾಲಕ್ಕೆ ಅದೊಂದು ಅದ್ಭುತವಾದ ಮತ್ತು ಅತ್ಯಂತ ಬೋಲ್ಡ್ ಅನ್ನಿಸಿಕೊಂಡ ಚಿತ್ರ. ಚಿತ್ರವನ್ನು ಮೊದಲು ನೋಡಿದಾಗ ನನಗೆ ಪರಮ ಗೊಂದಲವಾಗಿತ್ತು, ಯಾವುದಾದರು ಫಿಲಂ ಗೆ ಹೋದಾಗ ನಡುವೆ ಎದ್ದುಬರುವುದು ಅಕ್ಷಮ್ಯ ಅಪರಾಧ ಅಂತ ಬಲವಾಗಿ ನಂಬಿದ್ದರಿಂದ ಪೂರ್ತಿ ಸಿನಿಮಾ ನೋಡಿದ್ದೆ. ಆದರೆ ಮೊನ್ನೆ ಮೊನ್ನೆ ಯಾಕೋ ನೆನಪಾಗಿ ಮತ್ತೆ ಆ ಚಿತ್ರ ನೋಡಿದೆ. ಚಿತ್ರ ಅರ್ಥವಾಗಿತ್ತು.
ಚಿತ್ರದ ಹಂದರವೇ ಮಹಾನ್ ಸಂಕೀರ್ಣ. ತಾಯಿಲ್ಲದ ಮನೆಯಲ್ಲಿ ಅಪ್ಪ ಮತ್ತು ಮಗ, ಸ್ವಭಾವದಲ್ಲಿ ಪರಸ್ಪರ ಉತ್ತರ ಮತ್ತು ದಕ್ಷಿಣ ಧೃವಗಳು. ಅವರಿಬ್ಬರ ನಡುವೆ ಸದಾ ತಿಕ್ಕಾಟ. ವಾದ, ಜಗಳ ಎಲ್ಲವನ್ನೂ ನೋಡಿ ಕಡೆಗೆ ಮಗ ಮನೆ ಬಿಟ್ಟು ಹೋಗುತ್ತಾನೆ. ಅವನು ಹೋಗಿ ಸೇರುವುದು ಸಂಗೀತಗಾರ್ತಿಯ ಮನೆ. ಅವಳು ಮಧ್ಯವಯಸ್ಕೆ. ಇಲ್ಲಿ ಅಪ್ಪನಿಗೆ ಪರಿಚಯವಾದ ಒಬ್ಬ ಸೇಲ್ಸ್ ಗರ್ಲ್ ತನ್ನ ಜೀವಂತಿಕೆಯಿಂದ ಅಪ್ಪನ ಮನಸ್ಸಿನಲ್ಲಿ ಲವಲವಿಕೆ, ಜೀವನ ಪ್ರೀತಿ ತುಂಬುತ್ತಾಳೆ. ಮನೆಬಿಟ್ಟು ಹೋದ ಮಗನ ಸ್ಥಾನದಲ್ಲಿ ನೀನಿರು ಬಾ ಎಂದು ಆತ ಅವಳನ್ನು ಮನೆಯಲ್ಲಿ ನಿಲ್ಲಿಸಿಕೊಳ್ಳುತ್ತಾನೆ. ದಿನಗಳೆದಂತೆ ಮಗ ಆ ಸಂಗೀತಗಾರ್ತಿಯತ್ತ, ಆ ಹುಡುಗಿ ಅಪ್ಪನತ್ತ ಆಕರ್ಷಿತರಾಗುತ್ತಾ ಹೋಗುತ್ತಾರೆ. ಇನ್ನೇನು ಮದುವೆ ಆಗಬೇಕು ಎಂದುಕೊಳ್ಳುವಾಗ ಗೊತ್ತಾಗುವುದು ಆ ಸೇಲ್ಸ್ ಗರ್ಲ್ ಈ ಸಂಗೀತಗಾರ್ತಿಯ ಮಗಳು, ಅವಳ ಹದಿಹರೆಯದ ಪ್ರೇಮದ ಸಂಕೇತ ಅಂತ. ಆ ಕಾಲದಲ್ಲಿ ಸಾಧಾರಣ ಪರಿಹಾರಗಳಾಗಿದ್ದ ಕಣ್ಣೀರು, ಅಳು, ಆತ್ಮಹತ್ಯೆಗಳ ಯಾವುದೇ ಮೆಲೋಡ್ರಾಮಾ ಇಲ್ಲದೆ ಆ ಮದುವೆ ನಿಲ್ಲುತ್ತದೆ, ಮದುವೆ ಆಗಬೇಕು ಅಂತಿದ್ದವರು ದೂರವಾಗುತ್ತಾರೆ.
ಇಲ್ಲಿ ಬಾಲಚಂದರ್ ಯಾಕೆ ಇಷ್ಟ ಆಗ್ತಾರೆ ಅಂದ್ರೆ ಅವರು ಇಲ್ಲೆಲ್ಲೂ ಪಾತ್ರಗಳಿಗೆ ಅನಗತ್ಯ ಗಿಲ್ಟ್ ತುಂಬಲು ಹೋಗಿಲ್ಲ, ನಲವತ್ತರ ಹೆಣ್ಣು ಸಹ ಚಿಕ್ಕ ಹುಡುಗನ ಪ್ರೀತಿಯನ್ನು ಮೊದಮೊದಲಿನ ವಿರೋಧದ ನಂತರ ಸಹಜವಾಗಿ ಒಪ್ಪಿಕೊಳ್ಳುತ್ತಾಳೆ. ಇಲ್ಲೆಲ್ಲೂ ನಿರ್ದೇಶಕರು ಗಂಡಿಗೊಂದು ನ್ಯಾಯ ಹೆಣ್ಣಿಗೊಂದು ನ್ಯಾಯ ಎಂದು ಮಾಡಿಲ್ಲ. ಆ ಕಾಲಕ್ಕೆ, ತಮಿಳುನಾಡಿನ ಸಂಪ್ರದಾಯಸ್ಥ ಸಮಾಜಕ್ಕೆ ಈ ಚಿತ್ರ ಕೊಟ್ಟ ತಲ್ಲಣಗಳು ಅಷ್ಟಿಷ್ಟಲ್ಲ.
ಆ ನಂತರ ನಾನು ನೋಡಿದ ಚಿತ್ರ ಸಹ ತಮಿಳಿನದೇ. ಶಿವಾಜಿ ಗಣೇಶನ್ ಮನೋಜ್ಞವಾಗಿ ನಟಿಸಿದ್ದ ’ಮುದಲ್ ಮರ್ಯಾದೈ’. ಯಾವುದೋ ಋಣ ತೀರಿಸಲು ಮದುವೆಗೆ ಒಪ್ಪಿಕೊಂಡು ಹೊಂದಿಕೊಳ್ಳದ ಹೆಂಡತಿಯೊಡನೆ ಒಂದೇ ಮನೆಯಲ್ಲಿದ್ದ ಆ ನಡುವಯಸ್ಕನಿಗೆ ಆ ವಯಸ್ಸಿನಲ್ಲಿ ಪ್ರೇಮ ಒಬ್ಬ ಬೆಸ್ತರ ಹುಡುಗಿಯ ರೂಪದಲ್ಲಿ ತಂಗಾಳಿಯಂತೆ ತಾಕುತ್ತದೆ. ಚಿತ್ರದಲ್ಲಿ ಏನೇನೋ ಕಥೆ, ಉಪಕಥೆ, ಅತಿ ಭಾವುಕತೆ ಎಲ್ಲವೂ ಇದ್ದರೂ ಅವರಿಬ್ಬರ ನಡುವಿನ ಪ್ರೇಮ ಮಾತ್ರ ಅತ್ಯಂತ ನವಿರಾಗಿ ಚಿತ್ರೀಕರಣಗೊಂಡಿದೆ. ಅಲ್ಲಿ ಎಲ್ಲೂ ಭಾವ ಮಾತಿನ ದೇಹ ಧರಿಸಿಲ್ಲ, ಅದು ಅಲ್ಲಿ ಆತ್ಮದಂತೆ, ಹಣತೆಯ ಬೆಳಕಿನಂತೆ ಅವರಿಬ್ಬರ ಕಣ್ಣುಗಳಲ್ಲಿ ಬೆಳಗುತ್ತಿರುತ್ತದೆ. ಆಕೆಯ ಸವಾಲನ್ನೆದುರಿಸಲು ಆತ ಗುಂಡುಕಲ್ಲು ಎತ್ತುವುದು, ಆಕೆ ಅವನಿಗಾಗಿ ಮೀನಿನ ಸಾರು ಮಾಡಿ ಊಟ ಬಡಿಸುವುದು… ಎಲ್ಲಾ ಇಂದಿಗೂ ಕಣ್ಣಿಗೆ ಕಟ್ಟಿದಂತೆ.  ಆ ಚಿತ್ರದ ಹಾಡುಗಳಂತೂ ಅರ್ಥವಾಗದಿದ್ದರೂ ಪದೇ ಪದೇ ಮೆಲುಕು ಹಾಕುವಂತಿದ್ದವು.
ಇವೆರಡೂ ನಡು ವಯಸ್ಸಿನಲ್ಲಿ ಪ್ರೀತಿಸಲು ಧೈರ್ಯ ಮಾಡಿದವರ ಕಥೆ ಆಯಿತು. ಆದರೆ ತೆಲುಗಿನಲ್ಲಿ ಒಂದು ಚಿತ್ರ ಬಂದಿತ್ತು, ’ಮೇಘಸಂದೇಶಂ” ಅಂತ. ತನ್ನ ಫಾರ್ಮುಲಾ ಚಿತ್ರಗಳಿಗೆ ಹೆಸರಾಗಿದ್ದ ದಾಸರಿ ನಾರಾಯಣರಾವ್ ನಿರ್ದೇಶಿಸಿದ್ದ ಚಿತ್ರ. ಪುಟ್ಟಣ್ಣನವರಂತ ನಿರ್ದೇಶಕ ದಾಸರಿ, ಕಲಾವಿದರಾದರೂ ನಟನೆಯಲ್ಲಿ ನುರಿತ ಅಕ್ಕಿನೇನಿ ನಾಗೇಶ್ವರ ರಾವ್, ಕಣ್ಣುಗಳಲ್ಲೇ ಮಾತನಾಡುವ ಜಯಸುಧ, ಜಯಪ್ರದ. ಚಿತ್ರಕ್ಕೆ ಇನ್ನೊಬ್ಬ ನಾಯಕನಿದ್ದ, ಅದು ಚಿತ್ರದ ಹಾಡುಗಳು. ಜಯದೇವನ ಅಷ್ಟಪದಿಯೂ ಸೇರಿದಂತೆ ಮನಮೋಹಕವಾಗಿದ್ದ ಹಾಡುಗಳು. ಒಂದು ಊರಿನ ಅತ್ಯಂತ ಗೌರವಾನ್ವಿತ ವ್ಯಕ್ತಿ, ದೈವಭೀರು ಹೆಂಡತಿ, ಪುಟ್ಟ ಮಗಳು ಎಲ್ಲವೂ ಇರುವ, ಯಾರೇ ನೋಡಿದರು ಅತ್ಯಂತ ಸುಖಿ ಎನ್ನಬಹುದಾದ ಸಂಸಾರ. ಆದರೆ ಆ ಮದುವೆಯಲ್ಲಿ ತಾನು ಎಷ್ಟು ಏಕಾಂಗಿಯಾಗಿದ್ದೇನೆ ಎಂದು ಅವನಿಗೆ ಅರಿವಾಗುವುದು ಆ ಊರಿಗೆ ಒಂದು ಕುಣಿಯುವ ಹೆಣ್ಣು ಬಂದಾಗ. ಮೊದಲು ಅವಳನ್ನು ತುಂಬಾ ಕೇವಲವಾಗಿ ನೋಡಿರುತ್ತಾನೆ, ಅಕಸ್ಮಿಕವಾಗಿ ಕೇಳಿದ ಅವಳ ಹಾಡು ಅವನ ಎದೆಯ ಯಾವುದೋ ತಂತಿಯನ್ನು ಮೀಟುತ್ತದೆ. ಅವನಿಗೇ ಅರಿವಿಲ್ಲದಂತೆ ಅವನು ಒಂದಾದ ಮೇಲೊಂದರಂತೆ ಕವಿತೆಗಳನ್ನು ಬರೆಯಲು ತೊಡಗುತ್ತಾನೆ. ಅವಳಿಂದ ದೂರಾಗಲು ಪ್ರಯತ್ನಿಸಿದಷ್ಟೂ ಸೋಲುತ್ತಾ ಹೋಗುತ್ತಾನೆ. ’ವಿರಹವೋ, ದಾಹವೋ. ಬಿಡಲಾರದ ಮೋಹವೋ….’, ಮನೆ, ಆಸ್ತಿ, ಹೆಂಡತಿ, ಮಗಳು ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು ಕೇವಲ ಅವಳಿಗಾಗಿ, ಅವಳ ಪ್ರೀತಿಗಾಗಿ ಅವಳ ನೆರಳನ್ನು ಹುಡುಕುತ್ತಾ ಹೊರಟು ಬಿಡುತ್ತಾನೆ. ಸಾಧಾರಣವಾಗಿ ಮಾತುಗಳಿಂದ ತನ್ನ ಚಿತ್ರಗಳನ್ನು ಗೆಲ್ಲಿಸುತ್ತಿದ್ದ ದಾಸರಿ ಅಲ್ಲಿ ನೆಚ್ಚಿದ್ದು ಮಾತುಗಳ ನಡುವಿನ ಮೌನವನ್ನು, ಎರಡು ಮನಸ್ಸುಗಳ ನಡುವೆ ಹರಿಯುವ ಶಾಲ್ಮಲೆಯನ್ನು.
ಇದೇ ನಡುವಯಸ್ಸಿನ ಪ್ರೇಮದ ಬಗ್ಗೆ ಬಂದ ಚಿತ್ರಗಳು, ಹಿಂದಿಯ ’ಲಮ್ಹೆ’, ’ಇಷ್ಕಿಯಾ’. ’ಜಾಗರ್ಸ್ ಪಾರ್ಕ್’, ’ಏಕ್ ಬಾರ್ ಫಿರ್’, ತಮಿಳಿನ ’ಕೇಳಡಿ ಕಣ್ಮಣಿ’, ’ಸಿಂಧುಭೈರವಿ’, ಕನ್ನಡದಲ್ಲಿ ’ಪ್ರೀತಿ, ಪ್ರೇಮ, ಪ್ರಣಯ’, ಇತ್ಯಾದಿ.
ಇಲ್ಲಿರುವ ಯಾರೂ ಉಡಾಫೆ ವ್ಯಕ್ತಿತ್ವದವರಲ್ಲ, ಎಷ್ಟೋ ಸಲ ವೃತ್ತಿಬದುಕಿನಲ್ಲಿ ಉತ್ತುಂಗಕ್ಕೇರಿದವರು. ವೃತ್ತಿಯ ಘನತೆ, ಸಮಾಜದ ಒಪ್ಪಿಗೆ, ಸಾಮಾಜಿಕ ಕಟ್ಟುಪಾಡು ಇವೆಲ್ಲಕ್ಕೂ ಮೀರಿ ’ದೂರದೊಂದು ತೀರದಿಂದ, ತೇಲಿ ಪಾರಿಜಾತ ಗಂಧ, ದಾಟಿ ಬಂತು ಬೇಲಿಸಾಲ, ಮೀಟಿ ಹಳೆಯ ಮಧುರ ನೋವ’ ಎನ್ನುವಂತೆ, ಬೇಲಿಯಾಚೆಗಿನ ಆ ಪಾರಿಜಾತದ ಪರಿಮಳಕ್ಕೆ ಮಾರುಹೋದವರು. ಆ ಎರಡು ಕಣ್ಣುಗಳ ಎದಿರು ಇಡೀ ಜಗವೇ ಸುಳ್ಳು ಅನ್ನುವಂತೆ ಅವರನ್ನು ಸೆಳೆವ ಆ ಸೆಳೆತವಾದರೂ ಯಾವುದು? ಇಲ್ಲ, ’ಇದೆಲ್ಲಾ ಸಿನಿಮಾದಲ್ಲಿ ಮಾತ್ರ ಸಾಧ್ಯ’ ಅನ್ನಬೇಡಿ, ಇವು ಬದುಕಿನಲ್ಲೂ ಸಾಧ್ಯ ಅನ್ನುವಂತಹ ಹಲವಾರು ಉದಾಹರಣೆಗಳು ನಮ್ಮ ಕಣ್ಣೆದುರಿಗೇ ಇವೆ. ವಿಪರ್ಯಾಸ ಎಂದರೆ ಅಕಾಲ ವಯಸ್ಸಿನಲ್ಲಿ ಉಂಟಾಗುವ ಕಾಮುಕತನಕ್ಕೆ ಶಿಕ್ಷೆ ಆಗುವುದಕ್ಕಿಂತ ಹೆಚ್ಚಾಗಿ ಆಗ ಹುಟ್ಟುವ ಪ್ರೇಮಕ್ಕೆ ಕಡ್ಡಾಯವಾಗಿ ಶಿಕ್ಷೆ ಜಾರಿಯಾಗಿಬಿಡುತ್ತದೆ. ಅದಕ್ಕಿಂತ ದುರಂತ ಎಂದರೆ ದೊಡ್ಡವರು ಮಕ್ಕಳ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಬೊಬ್ಬಿರಿಯುವ ಹುಡುಗರು ಇಂತಹ ಪ್ರೀತಿ ಅಪ್ಪಿ ತಪ್ಪಿ ಎದುರಾಗಿಬಿಟ್ಟರೆ ಅದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದೂ ಇಲ್ಲ. ಸಂಬಂಧ ಹತ್ತಿರವಾದಷ್ಟೂ ಅವರ ’ನ್ಯಾಯ ಪ್ರಜ್ಞೆ’ ತೀಕ್ಷ್ಣವಾಗುತ್ತಾ ಹೋಗುತ್ತದೆ.

ನನ್ನ ಪರಿಚಯದಲ್ಲಿ ಒಬ್ಬರು, ಸರ್ಕಾರದಲ್ಲಿ ಹಿರಿಯ ಅಧಿಕಾರಿಯಾಗಿದ್ದರು, ಮಕ್ಕಳನ್ನು ಓದಿಸಿ, ಬೆಳಸಿ, ಮದುವೆ ಮಾಡಿದ್ದು ಆಯ್ತು. ಆನಂತರ ಹೆಂಡತಿಗೆ ಕ್ಯಾನ್ಸರ್ ಬಂತು. ಕೈಲಾದ ಎಲ್ಲಾ ಚಿಕಿತ್ಸೆ ಮಾಡಿಸಿದರು, ಹತ್ತಿರವಿದ್ದು ನೋಡಿಕೊಂಡರು. ಹೆಂಡತಿಯನ್ನು ಉಳಿಸಿಕೊಳ್ಳಲಾಗಲಿಲ್ಲ. ಆಮೇಲೆ ಒಂಟಿ ಬದುಕಿಗೆ ಬೇಸತ್ತು ತನ್ನಂತೆ ಒಂಟಿ ಇದ್ದ ವಿಧವೆಯನ್ನು ಮದುವೆ ಆಗುತ್ತೇನೆ ಅಂದ ಕೂಡಲೆ ಮೊದಲು ವಿರೋಧ ಬಂದದ್ದು ಮಕ್ಕಳಿಂದಲೇ. ಅದರಲ್ಲೂ ಒಬ್ಬಾಕೆ ಎಲ್ಲರನ್ನೂ ಎದುರಿಸಿ ಪ್ರೇಮ ವಿವಾಹ ಮಾಡಿಕೊಂಡಿದ್ದವಳು. ತನ್ನ ಮದುವೆಯ ಕಾಲಕ್ಕೆ ಪ್ರೇಮ ಉದಾತ್ತವಾಗಿ ಕಂಡಿದ್ದ ಆಕೆಗೆ ಅಪ್ಪನ ಪ್ರೇಮವನ್ನು, ಸಾಂಗತ್ಯದ ಬಯಕೆಯನ್ನು ಅರ್ಥ ಮಾಡಿಕೊಳ್ಳಲಾಗಲೇ ಇಲ್ಲ. ಅಪ್ಪ ಆಸ್ತಿಯನ್ನು ಪಾಲು ಮಾಡಿಕೊಟ್ಟ ಮೇಲೆಯೇ ಮಕ್ಕಳು ಅಪ್ಪನ ಮದುವೆಗೆ ಒಪ್ಪಿಗೆ ಕೊಟ್ಟಿದ್ದು.
ಇಂತಹದೆ ಎಳೆಯನ್ನು ಹಿಡಿದು ಬಂದ ಚಿತ್ರ ’ಕೇಳಡಿ ಕಣ್ಮಣಿ’. ಇಲ್ಲೂ ಒಬ್ಬ ವಿಧುರ, ಮಗಳಿಗೆ ಪಾಠ ಹೇಳುವ ಟೀಚರ್ ಅನ್ನು ಮದುವೆ ಆಗಬೇಕು ಎಂದುಕೊಂಡಿರುವಾಗ ಮಗಳು ಇನ್ನಿಲ್ಲದ ವಿರೋಧ ಒಡ್ಡಿಬಿಡುತ್ತಾಳೆ. ಅವರಿಬ್ಬರೂ ದೂರಾಗಿಬಿಡುತ್ತಾರೆ. ಅಪ್ಪನ ಪ್ರೀತಿಯನ್ನು ಅವಳು ಗೌರವಿಸಬೇಕಾದರೆ, ಅವಳಿಗೆ ಪ್ರೀತಿ ಆಗಿ, ತಾನು ಅಪ್ಪನನ್ನು ಬಿಟ್ಟು ಹೋದರೆ ಅಪ್ಪನ ಬದುಕೆಷ್ಟು ಒಂಟಿ ಎನ್ನುವುದರ ಅರಿವಾಗಬೇಕಾಗುತ್ತದೆ. ಆ ವಯಸ್ಸಿನಲ್ಲಿ ಪ್ರೇಮ ಒಂದು ಪ್ರೌಢತೆಯ ಜೊತೆಯಲ್ಲಿಯೇ ಬರುತ್ತದೆ. ವಯಸ್ಸಿನ ಘನತೆಯೊಂದಿಗೇ ಬೇರೆಯಾಗುವ ಅವರಿಬ್ಬರೂ ಯಾಕೋ ತುಂಬಾ ಮಕ್ಕಳಂತೆ ಕಂಡುಬಿಡುತ್ತಾರೆ. ವಯಸ್ಸಿಗೆ ಪ್ರೇಮಕ್ಕೆ ವಿರೋಧ ಬಂದಾಗ ಕೂಗಾಡುವ, ಹಟ ಮಾಡುವ ಅಧಿಕಾರವಾದರೂ ಇರುತ್ತದೆ. ಮಾಗಿದ ವಯಸ್ಸಿಗೆ ಆ ಸವಲತ್ತೂ ಇಲ್ಲ. ಅಲ್ಲಿ ಪ್ರೇಮ ಕೊಳದ ನೀರು, ಅದರ ಕಂಪನಗಳಿಗೂ ಮಿತಿ ಇರುತ್ತದೆ.
ಇದೆಲ್ಲಾ ಒಂದು ಕಡೆಯಾದರೆ ನಾನು ಇತ್ತೀಚಿಗೆ ನೋಡಿದ ಮಲಯಾಳಂ ಚಿತ್ರ ’ಪ್ರಣಯಂ’ ಕಥೆಯೇ ಬೇರೆ. ಹೀಗೊಂದು ಕಥೆ, ಹೀಗೊಂದು ಸಂಬಂಧ ಸಾಧ್ಯವೇ ಅನ್ನುವ ಚಿತ್ರ ಅದು. ಆ ಕಥೆ ಗೆಲ್ಲಲು ಮುಖ್ಯ ಕಾರಣ ಆ ಕಥೆಯ ಪಾತ್ರಧಾರಿಗಳು. ಅನುಪಂ ಖೇರ್, ಮೋಹನ್ ಲಾಲ್ ಮತ್ತು ಜಯಪ್ರದ. ಕಥೆಯ ಬಗ್ಗೆ, ಅಲ್ಲಿನ ಘಟನೆಗಳ ಸಾಧ್ಯತೆ ಮತ್ತು ಸಾಧ್ಯವಾಗುವಿಕೆಗಳ ಬಗ್ಗೆ ತಾರ್ಕಿಕವಾಗಿ ಯೋಚಿಸಲೂ ಬಿಡದಂತೆ ಅವರು ನಿಮ್ಮನ್ನು ಆಕ್ರಮಿಸಿಕೊಂಡು ಬಿಡುತ್ತಾರೆ. ಇಲ್ಲಿ ಮೂರು ನಡುವಯಸ್ಸನ್ನೂ ದಾಟಿದ ಪಾತ್ರಗಳು. ಒಬ್ಬಾತನ ವಿಚ್ಛೇದಿತ ಪತ್ನಿ, ಇನ್ನೊಬ್ಬಾತನ ಮಡದಿ. ಆ ಇನ್ನೊಬ್ಬಾತನಿಗೆ ಈಗ ಪಕ್ಷವಾತವಾಗಿ ವೀಲ್ ಚೇರ್ ಮೇಲೆ ವಾಸ. ಅವರಿಬ್ಬರಿಗೂ ಒಬ್ಬ ಮಗಳು ಇದ್ದಾಳೆ. ಮಗ. ಅಳಿಯನೊಂದಿಗೆ ಅವರ ವಾಸ. ಈ ವಿಚ್ಛೇದಿತನಿಗೆ ಒಬ್ಬ ಮಗ, ಆತ ಸೊಸೆ, ಮೊಮ್ಮಗಳ ಜತೆ ಇರುತ್ತಾನೆ. ಮಗನಿಗೆ ಕೊಲ್ಲಿಯಲ್ಲಿ ಕೆಲಸ. ಅಪ್ಪ ಮಗನ ನಡುವೆ ಅದ್ಭುತವಾದ ಸ್ನೇಹ ಇರುತ್ತದೆ. ಅಕಸ್ಮಿಕವಾಗಿ ತನ್ನ ಮೊದಲ ಗಂಡನನ್ನು ಆಕೆ ಭೇಟಿ ಆಗುವುದರೊಂದಿಗೆ ಕಥೆ ಪ್ರಾರಂಭ. ಅವಳನ್ನು ಕಂಡ ಆಘಾತಕ್ಕೆ ಅವನಿಗೆ ಹೃದಯಾಗಾತವಾಗುತ್ತದೆ, ಅದೇ ಲಿಫ್ಟ್ ನಲ್ಲಿದ್ದ ಈಕೆಯೇ ಅವನನ್ನು ಆಸ್ಪತ್ರೆಗೆ ಸೇರಿಸುತ್ತಾಳೆ. ಕೋರ್ಟಿನಲ್ಲಿ ವಿಚ್ಛೇದನಕ್ಕೆ ಸಹಿ ಹಾಕಿದಷ್ಟು ಸುಲಭವಾಗಿ ಅವನನ್ನು ನಿನ್ನೆಯ ಲೆಕ್ಕಕ್ಕೆ ಸೇರಿಸುವುದು ಅವಳಿಗೆ ಸಾಧ್ಯವಾಗುವುದಿಲ್ಲ. ಅವನ ಒಂಟಿತನ ಅವಳಿಗೆ ಅರ್ಥವಾಗುತ್ತದೆ. ಅವನನ್ನು ಭೇಟಿಯಾಗುತ್ತಾಳೆ, ಆರೋಗ್ಯ ವಿಚಾರಿಸುತ್ತಾಳೆ ಮತ್ತು ಇವು ಯಾವುದನ್ನೂ ಆಕೆ ಗಂಡನಿಂದ ಮುಚ್ಚಿಡುವುದಿಲ್ಲ.
ಆ ಗಂಡನಾದರೂ ಎಂತಹ ಅದ್ಭುತ ಗೆಳೆಯ ಎಂದರೆ, ಇವಳ ಉಸಿರಿನ ಏರಿಳಿತದಲ್ಲಿ ಇವಳ ಮನಸ್ಸಿನ ಬಯಕೆ ಅರಿಯಬಲ್ಲವನು, ಈ ವಯಸ್ಸಿನಲ್ಲೂ ಹೆಂಡತಿಯ ದೇಹ. ಮನಸ್ಸು ಎರಡನ್ನೂ ಸಂಭ್ರಮಿಸುವವನು, ಪ್ರೀತಿಸುವವನು. ಅವರಿಬ್ಬರ ನಡುವಿನ ಆ ಹತ್ತಿರತನವೇ ಚಿತ್ರವನ್ನು ಎತ್ತರಕ್ಕೆ ಕೊಂಡು ಹೋಗುತ್ತದೆ. ಅವಳ ಎದುರಿನಲ್ಲಿ ತಮ್ಮನ್ನು ತಾವು ಸಾಬೀತು ಪಡಿಸಿಕೊಳ್ಳಲು ಅವರು ಮಾಡುವ ಸಣ್ಣ ಸಣ್ಣ ಪ್ರಯತ್ನ, ಅವಳ ಮತ್ತು ಅವಳ ಗಂಡನ ನಡುವಿನ ಪ್ರೀತಿ ನೋಡಿ ಮೊದಲ ಪತಿಗಾಗುವ ನೋವು, ಅದನ್ನು ಮೀರಿ ಅವರೆಡೆಗೆ ತೋರುವ ಒಂದು ಘನತೆಯ ನಡವಳಿಕೆ…. ಸಾಧಾರಣವಾಗಬಹುದಾಗಿದ್ದ ಚಿತ್ರವನ್ನು ಅಸಾಧಾರಣವಾಗಿಸಿಬಿಡುತ್ತದೆ.ಇಲ್ಲಿಯೂ ಸಹ ಮಕ್ಕಳಿಗಿಂತ ಪ್ರೌಢತನದಿಂದ ವಯಸ್ಕರು ನಡೆದುಕೊಳ್ಳುತ್ತಾರೆ.
ಇಂತಹದೇ ಕಥೆ ಎಂ ಎಸ್ ಶ್ರೀರಾಂ ಅವರದ್ದು, ಮೊನ್ನೆ ಮೊನ್ನೆ ಅನಂತ್ ನಾಗ್ ಮತ್ತು ವಿನಯಾ ಪ್ರಸಾದ್ ಅಭಿನಯದಲ್ಲಿ ’ನಿತ್ಯೋತ್ಸವ’ವಾಗಿತ್ತು. ಇರಲಿ, ಪ್ರೇಮಕ್ಕೆ ವಯಸ್ಸಿನ ಮಿತಿ ಇಲ್ಲ, ಹಾಗೆ ಸಂಬಂಧಕ್ಕೂ ಎನ್ನುವ ಮನೋಭೂಮಿಕೆ ಈಗಲಾದರೂ ನಮಗೆ ಸಿದ್ಧಿಸಿದೆಯಾ? ಸಂಗಾತಿಗಾಗಿ ಪರಿತಪಿಸುವ ಇಳಿವಯಸ್ಸಿನ ಪರಿತಾಪವನ್ನು ಇನ್ನಾದರೂ ನಮಗೆ ಅರ್ಥ ಮಾಡಿಕೊಳ್ಳಲು ಆಗಿದೆಯಾ? ’ಹಿಂದೆ ಯಾವ ಜನ್ಮದಲ್ಲೋ, ಮಿಂದ ಪ್ರೇಮ ಜಲದ ಸೊಂಪು, ತಂದು ಚೀರುವೆದೆಯ ಭಾವ…’ ಅರಿಯುವ, ಅವರನ್ನು ಸಹಾನುಭೂತಿಯಿಂದ ನೋಡುವ, ಅರ್ಥ ಮಾಡಿಕೊಳ್ಳುವ, ಅದನ್ನು ಗೌರವದಿಂದ ಕಾಣುವ ಮನೋಭಾವ ನಮಗೆ ಸಿದ್ದಿಸಲಿ ಎಂದು ಕೇಳಿಕೊಳ್ಳುತ್ತಾ……
 

‍ಲೇಖಕರು G

February 13, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

22 ಪ್ರತಿಕ್ರಿಯೆಗಳು

  1. Anil Talikoti

    ಎಂದಿನಂತೆ ಉತ್ತಮ ವಿಷಯ ಅತ್ಯುತ್ತಮ ಬರಹ.

    ಪ್ರತಿಕ್ರಿಯೆ
  2. Sarala

    nijakku vayassadante sangaatiya agatya hechche iratte. sangaati yannu kaledu knodavarige matte avakasha sikkare artha maadikondu avara korateyannu neegisalu jotegiddavaru sahakarisabeku

    ಪ್ರತಿಕ್ರಿಯೆ
  3. ushaumesh

    ಮನಮುಟ್ಟಿದ ಲೇಖನ ಸಂಧ್ಯಾ.ಹೌದು ಕೆಲವು ಪಾತ್ರಗಳು ಅಚ್ಚಳಿಯದೆ ಮನಸ್ನಲ್ಲಿ ನಿಂತುಬಿಡುತ್ತವೆ…

    ಪ್ರತಿಕ್ರಿಯೆ
  4. ಕುಸುಮಬಾಲೆ

    “ನಿತ್ಯೋತ್ಸವ” ತುಂಬಾ ಚೆಂದದ ಸೀರಿಯಲ್..ಅತ್ತೆ-ಸೊಸೆ, ಸಂಚು, ಅವವೇ ಕಿತ್ತೋದ ಕಥೆಗಳನ್ನ ಯಾಕೆ ತೋರಿಸ್ತೀರಿ? ಅಂತ ನಮ್ಮಂತವರ ಮುಖಕ್ಕೆ ತಿವಿಯೋ ಪ್ರೇಕ್ಷಕ ಮಹಾಶಯರು ಈ ಸೀರಿಯಲ್ ನ ಗೆಲ್ಲಿಸಲಿಲ್ಲ.ಲವಲವಿಕೆ, ಹೊಸತನ, ಪ್ರಸ್ತುತ ಸಮಾಜದ ವಕ್ರಗಳ ವ್ಯಂಗ್ಯ ಎಲ್ಲವೂ ಮಿಳಿತವಾಗಿತ್ತು. ಜನಕ್ಕೆ ಸಂಚಿನ ಸಬ್ಜೆಕ್ಟೇ ಇಷ್ಟ ಕಣ್ರೀ ಅಂತ ಚಾನಲ್‍ನವರು ಮತ್ತೆ ಮೀಸೆ ತಿರುವಿಕೊಂಡರು.

    ಪ್ರತಿಕ್ರಿಯೆ
  5. bhuvana

    “chennagide’ endare…bariya padavaste aagibiduththadeno…naviru galiyanthe, madhura naadadanthe…endare sarihogabahudeno…
    thank u. antha olleya baraha kottiddakke.

    ಪ್ರತಿಕ್ರಿಯೆ
  6. vidyashankar

    Love-ly article… but PraNayam needs some more space and writing… Once more please 🙂

    ಪ್ರತಿಕ್ರಿಯೆ
  7. amardeep.p.s.

    ಸಾಲು ಸಾಲು ಚಿತ್ರಗಳಲ್ಲಿನ ಮಧ್ಯ ವಯಸ್ಸಿನ ಪ್ರೀತಿ ಪ್ರೇಮದ ಒಳಹೊರಗುಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಬರಹ ಚೆನ್ನಾಗಿದೆ ಮೇಡಂ….

    ಪ್ರತಿಕ್ರಿಯೆ
  8. suseela

    fantastic Sandhya.U hold everyone’s heart by ur writings. I saw all the movies. I felt the same about all of them. Great! U got appreciation from The Great Actor Prakash Raj.Congrats.

    ಪ್ರತಿಕ್ರಿಯೆ
  9. ಅಕ್ಕಿಮಂಗಲ ಮಂಜುನಾಥ

    ಮನಸ್ಸುಗಳ ಕಲಕುವ ಬರಹ.

    ಪ್ರತಿಕ್ರಿಯೆ
  10. Palahalli Vishwanath

    ಲೇಖನ ಇಷ್ಟವಾಯಿತು. ಬಾಲಚ೦ದರ್ ಅವರ ಅಪೂರ್ವ ರಾಗ೦ಗಳ್ ಅನ೦ತರ ಹಿ೦ದಿಯಲೂ ಬ೦ದಿತ್ತು : ಕಮಲ್ ಹಸನ್, ಹೆಮಮಲಿನಿ, ರಾಜ್ ಕುಮಾರ್, ಪದ್ಮಿನಿಕೊಲ್ಹಾಪುರಿ. ಇದು ವಿಕ್ರ್ಮಮ್ ಭೆತಾಳದ ಕಡೆಯ ಪ್ರಶ್ನೆ ಆಧಾರಿತ ಚಿತ್ರ : ಈ ಪ್ರಹ್ನೆಗೆ ವಿಕ್ರಮನ ಹತ್ತಿರ್ ಉತ್ತರವಿಲ್ಲ – ಒ೦ದು ದೇಶದ ರಾಜ ಇನ್ನೊ೦ದು ದೇಶದ ರಾಜಕುಮರಿಯನ್ನು ಮದುವೆಯಾಗುತ್ತನೆ. ಆ ರಾಜಕುಮಾರಿಯ ತಾಯಿಯನ್ನು ಆ ರಾಜನ ಮಗ ರಾಜಕುಮಾರ ಮದುವೆಯಾಗುತ್ತನೆ ಅವ್ರಿಗೆ ಹುಟ್ಟುವ ಮಕ್ಕಳ ಮಧ್ಯೆ ಯ ಸ೦ಬ೦ಧವೇನು ಎ೦ದು ಭೇತಾಳ ಪ್ರಶ್ನಿ ಕೇಳುತ್ತದೆ. . ಅವಧಿಯಲ್ಲಿ ಪ್ರಕಟವಾದ ‘ ಶಹಜಾದೆಯ ಕೊನೆಯ ಕಥೆ – ಇದೇ ಪ್ರಸ್ಸ್ತಾಪವಿದೆ.

    ಪ್ರತಿಕ್ರಿಯೆ
  11. Ramesh Megaravalli

    It is a poetic article Sandhya madam. ” Love has no limits, may it be of age, status, caste or creed. But the relationship has limits” – You have given a vivid picture of this statement by refering the good films you have viewed. Hats off!
    — Ramesh Megaravalli.

    ಪ್ರತಿಕ್ರಿಯೆ
  12. Nalla Tambi

    ತುಂಬಾ ಸೊಗಸಾಗಿದೆ. “ವಯಸ್ಸಿಗೆ ಪ್ರೇಮಕ್ಕೆ ವಿರೋಧ ಬಂದಾಗ ಕೂಗಾಡುವ, ಹಟ ಮಾಡುವ ಅಧಿಕಾರವಾದರೂ ಇರುತ್ತದೆ. ಮಾಗಿದ ವಯಸ್ಸಿಗೆ ಆ ಸವಲತ್ತೂ ಇಲ್ಲ. ಅಲ್ಲಿ ಪ್ರೇಮ ಕೊಳದ ನೀರು, ಅದರ ಕಂಪನಗಳಿಗೂ ಮಿತಿ ಇರುತ್ತದೆ.” ಸುಂದರವಾದ ಅಭಿವ್ಯಕ್ತಿ. ನೀವು ಹೇಳಿದ ಎಲ್ಲ ಸಿನಿಮಾ ನೋಡಿದ್ದೇನೆ. ಮಲಯಾಳಂ ಪ್ರಣಯವನ್ನು ಹೊರತು. ನೀವು ಹೇಳಿದಮೇಲೆ ಅದನ್ನೂ ನೋಡಿಬಿಡುತ್ತೇನೆ. ಇಂತಹ ಪ್ರೇಮಗಳನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಅಭಿನಂದನೆಗಳು. ನನ್ನ ಮನಸ್ಸಿನ ಅನೇಕ ಸಂಗತಿಗಳನ್ನು ನಿಮ್ಮ ಅಕ್ಷರಗಳಲ್ಲಿ ಕಂಡುಕೊಂಡೆ.

    ಪ್ರತಿಕ್ರಿಯೆ
  13. Dr.T.N.Venkata subba rao

    ಆತ್ಮ ಸಾಂಗತ್ಯದ ಅವಶ್ಯಕತೆ ಮತ್ತು ಕೆಲವು ಸಂಬಂಧಗಳಲ್ಲಿ ಅದಕ್ಕೆ ಸಿಗುವ ಮಾನ್ಯತೆ ಕುರಿತ , ಬಹಳ ಮಹತ್ವದ ಲೇಖನ ಇದು .
    ತಾನು ಬದುಕಿರುವವರೆಗೂ ತಾನು ಪ್ರೀತಿಸುವ ಹಾಗೆಯೇ ತನ್ನನ್ನು ನಿಜವಾಗಿ ಪ್ರೀತಿಸುವ ಒಬ್ಬ ಆತ್ಮಸಂಗಾತಿ ,ಪ್ರತಿಯೊಬ್ಬ ಮನುಷ್ಯ ಜೀವಿಯ ಅತ್ಯಂತ ಸ್ವಾಭಾವಿಕ ,ಮಾನಸಿಕ ಹಾಗೂ ಒಂದು ಬೌದ್ಧಿಕ ಅವಶ್ಯಕತೆ. It is not a luxury ! ದೈಹಿಕ ಅಗತ್ಯವಾದರೆ ಮಾರುಕಟ್ಟೆಯಲ್ಲಿ ಸಿಗುವಂಥದ್ದು , ಆದರೆ ಇದು ಹಾಗಲ್ಲವಲ್ಲ !
    ಏನೋ ಕಾರಣಕ್ಕೆ ಚಿಕ್ಕವಯಸ್ಸಿನ ಮಕ್ಕಳನ್ನು ಬಿಟ್ಟು ಗಂಡ ಅಥವಾ ಹೆಂಡತಿ ಸತ್ತಾಗ , ಮಕ್ಕಳ ದೃಷ್ಟಿಯಿಂದ ಬೇರೊಂದು ಮದುವೆಯಾಗದೆ ( ತಾನಿಷ್ಟ ಪಡುವ ಒಂದು ಜೀವಿ ಸಿಕ್ಕರೂ ) ‘ಪಾಪ ಎಂಥ ತ್ಯಾಗಿ ! ‘ಅನ್ನೋ ಒಂದು ಸಂತಾಪ ಸೂಚಕದಂತಹ ಬಿರುದು ಹೊತ್ತು ಇಡೀ ಬದುಕನ್ನು ಒಂಟಿಯಾಗಿ ಶಾಪದಂತೆ ಬದುಕುವ ಎಷ್ಟೊಂದು ಜನರ ಉದಾಹರಣೆಗಳನ್ನು ನಾವು ನೋಡುತ್ತೇವೆ ! ಚಿಕ್ಕ ವಯಸ್ಸಿನ ಮಕ್ಕಳಿಗೆ ಪ್ರ್ರೀತಿ ಸಾಂಗತ್ಯ ಇವು ಅರ್ಥ ಕೂಡ ಆಗಲು ಸಾಧ್ಯವಿಲ್ಲದ್ದರಿಂದ ,ನಮ್ಮ ಸಮಾಜದಲ್ಲಿ ಅದು ಏನೋ ಒಂದು limited sense ನಲ್ಲಿ ಅವಶ್ಯ ಅಂತಲೇ ಬೇಕಾದರೆ ಕರೆದುಕೊಳ್ಳಲಿ . ಆದರೆ , ಹರೆಯಕ್ಕೆ ಬಂದ ನಂತರ , ಪ್ರ್ರಿತಿ ಪ್ರೇಮ ಸಾಂಗತ್ಯ ಇವೆಲ್ಲವನ್ನೂ ಅರ್ಥ ಮಾಡಿಕೊಳ್ಳುವ ಶಕ್ತಿ ಬಂದ ನಂತರ , ಎಷ್ಟೋ ಸಂದರ್ಭಗಳಲ್ಲಿ ತಾವೇ ಅದನ್ನು ಅನುಭವಿದ ನಂತರ ಕೂಡ ,ತನ್ನ ಸಂಗಾತಿ ರಹಿತ ತಂದೆಯ ಅಥವಾ ತಾಯಿಯ ಈ ಅವಶ್ಯಕತೆಯನ್ನು ಅರ್ಥ ಮಾಡಿಕೊಳ್ಳದ ಮಾನ್ಯಗೊಳಿಸದ ಮಕ್ಕಳ ಮತ್ತು ಕುಟುಂಬದ ಇತರೆ ಜನರ ಈ ಧೋರಣೆ ಎಷ್ಟು ಅಮಾನವೀಯ ಅಲ್ಲವೇ ? ( Remember ,poor N.T.Rama rao lost his power and was made to suffer a lot as the woman in his life wasn’t accepted by his family members !)
    ಮಕ್ಕಳು ಏನೇ ಪ್ರೀತಿಸಲಿ ಆ ಪ್ರೀತಿಯ ಸ್ವರೂಪವೇ ಬೇರೆ . ಅವರು ಒಬ್ಬ ವ್ಯಕ್ತಿಯ , ಆತ್ಮಸಂಗಾತಿಯ ಸ್ಥಾನವನ್ನು ತುಂಬಲು ಸಾಧ್ಯವೇ ? ಅವರು ವಯಸ್ಸಿಗೆ ಬಂದ ನಂತರ ತಮ್ಮ ತಮ್ಮ ಸಂಗಾತಿಗಳೊಡನೆ ಬದುಕನ್ನು ಹಂಚಿಕೊಂಡು ಬದುಕುತ್ತಾ ಇರಬೇಕಾದರೆ , ಅಯ್ಯೋ ಆ ತನ್ನ ತಂದೆ ಅಥವಾ ತಾಯಿ ಒಂಟಿ ಬಾಳು ಬಾಳುತ್ತಿದ್ದಾಳೆ ಅಂತ ಯಾಕೆ ಅನ್ನಿಸೋದಿಲ್ಲ ? After all ಅವರಿಗೆ ಇರೋದೂ ಒಂದೇ ಜನ್ಮ , ಒಂದೇ ಲೈಫು ತಾನೆ ? ಇದು ಗಂಡ ಅಥವಾ ಹೆಂಡತಿ ಬದುಕಿದ್ದಾಗಲೇ ಇಟ್ಟುಕೊಳ್ಳುವ ಅಕ್ರಮ ಸಂಬಂಧವೇನೂ ಅಲ್ಲವಲ್ಲ ? This is so selfish and inconsiderate on the part of the children /others ,isn’t it ?
    ಅದೇ ಪಶ್ಚಿಮದ ಸಮಾಜದಲ್ಲಿ ನೋಡಿ ! ಮಕ್ಕಳು ಚಿಕ್ಕವರು ಅಂತಲೂ ಲೆಕ್ಕಿಸುವುದಿಲ್ಲ ,ತಮಗೆ ಅನಿವಾರ್ಯವಾದಾಗ ಮುಲಾಜಿಲ್ಲದೆ ಡೈವೋರ್ಸು ಕೊಟ್ಟು ಬೇರೆಯಾಗಿಬಿಡುತ್ತಾರೆ ,ಹಾಗೆಯೇ ಅದು ನಡು ವಯಸ್ಸೋ ಇಳಿ ವಯಸ್ಸೋ ಅದು ಕೇವಲ ತನ್ನ ವಯ್ಯಕ್ತಿಕ ಬದುಕಿಗೆ ಸಂಬಂಧಿಸಿದ ವಿಷಯ ಆದ್ದರಿಂದ ಅದಕ್ಕೆ ಮಕ್ಕಳ , ಕುಟುಂಬದ ಇತರರ , ಸ್ನೇಹಿತರ ಹೀಗೆ ಯಾರದೇ ಒಪ್ಪಿಗೆ ಅನುಮತಿ ಇದ್ಯಾವುದರ ಮರ್ಜಿಯ ಅವಶ್ಯಕತೆ ಏನಿದೆ ಅನ್ನೋ ಸ್ಪಷ್ಟ ಧೋರಣೆಯಿಂದ , ಯಾವುದೇ ವಯಸ್ಸಿನಲ್ಲಿ ತಮ್ಮ ಆತ್ಮ ಸಂಗಾತಿಯೊಂದು ಸಿಕ್ಕಿದರೆ ಮದುವೆಯಾಗುತ್ತಾರೆ ಹಾಗೂ ಅದಕ್ಕೆ ಎಲ್ಲರ ಮಾನ್ಯತೆ ಕೂಡ ಇದೆ . How healthy and fair , isn’t it ? In fact ಈ ನಡು ಅಥವಾ ಇಳಿ ವಯಸ್ಸಿನಲ್ಲಿ ಅದೃಷ್ಟವಶಾತ್ ಲಭಿಸುವ ಸಾಂಗತ್ಯ ನಿಜವಾದ ಸುಂದರವಾದ ಆತ್ಮ ಸಾಂಗತ್ಯಗಳಾಗಿರುವ ಸಾಧ್ಯತೆ ಹೆಚ್ಚು ಇರುತ್ತದೆ . The sanctity of their love should be considered even greater because ‘ sex’ is not a significant element of these relations at all , at this age !
    ನ್ಯಾಯವಾಗಿ ,ಸಕಾರಣವಾಗಿ ಮನುಷ್ಯ ತನ್ನ ಹಿತವನ್ನು ತನ್ನ ಬದುಕಿನ ಕೇಂದ್ರವಾಗಿಸಿಕೊಂಡರೆ ಅದು ‘ಸ್ವಾರ್ಥ’ ಅಲ್ಲ , ಅದು ‘ಆರೋಗ್ಯಕರ ಸ್ವಹಿತ’ ಅನಿಸಿಕೊಳ್ಳುತ್ತದೆ ಅನ್ನುವ ಒಂದು ಪರಿಕಲ್ಪನೆ ನಮ್ಮ ಸಮಾಜದಲ್ಲಿ ಇಲ್ಲದಿರುವುದೇ ಇದೆಲ್ಲ ಅನಿಷ್ಟದ ಮೂಲ. We in the east need to do a lot of introspection about our so called “great value system ” which is in reality very illogical ,discriminatory and inhuman at times

    ಪ್ರತಿಕ್ರಿಯೆ
  14. bharathi b v

    ನಾನು ದೇವರೇನಾದರೂ ಆಗಿದ್ದರೆ ಜಗತ್ತಿನಲ್ಲಿ ಪ್ರೇಮರಾಹಿತ್ಯವೇ ಇರದಂತೆ ನೋಡಿಕೊಳ್ಳುತ್ತಿದ್ದೆ …. ಚೆಂದದ ಬರಹ …. ಓದಿ ಮುಗಿಸಿದ ನಂತರವೂ ಕಾಡುವಂಥದ್ದು ….

    ಪ್ರತಿಕ್ರಿಯೆ
  15. ಲಕ್ಷ್ಮೀಕಾಂತ ಇಟ್ನಾಳ

    ಅರ್ಧದಾರಿಯಲ್ಲಿ ಸಂಗಾತಿಗಳನ್ನು ಕಳೆದುಕೊಂಡ, ಅಥವಾ ಅರ್ಧದಾರಿಯವರೆಗೆ ಒಂಟಿ ಹುಟ್ಟುಹಾಕಿದ ದೋಣಿಗಳ ಮನಗಳ ತುಮುಲಗಳ, ದ್ವಂದ್ವಗಳಲ್ಲಿಯೇ ಬದುಕು ಮೂಡುವ ಸಾಧ್ಯತೆಗಳ, ಪ್ರೀತಿಯ ಒರತೆ ಎಲ್ಲೋ ಒಂದು ಕಡೆ ಜಿನುಗುವ ಭಾವಗಳ ಹಿಡಿದಿಡುವ ದೃಶ್ಯಕಾವ್ಯ ಇದು ಈ ನಿಮ್ಮ ಬರಹ. ತುಂಬ ಕಾಡಿತು. ಭುಜದ ಮೇಲೆ ಕೈಯಿಟ್ಟು ಸಾಂತ್ವನಿಸಿದಂತನಿಸುತ್ತವೆ ತಮ್ಮ ಬರಹಗಳು ಅವರವರಿಗೆ ಮತ್ತ ಮತ್ತೆ ಯಾಕೋ!

    ಪ್ರತಿಕ್ರಿಯೆ
  16. ಲಲಿತಾ ಸಿದ್ಧಬಸವಯ್ಯ

    ಪ್ರಿಯ ಸಂಧ್ಯಾ, ಇದೊಂದು ಮನಮುಟ್ಟುವ ಲೇಖನ, ಇದಕ್ಕೆ ಡಾ.ವೆಂಕಟೇಶ್ ಬರೆದಿರುವ ಪ್ರತಿಕ್ರಿಯೆಯನ್ನು ಮೀರಿ ನಾನೇನು ಬರೆದರೂ ಅದು ದ್ವಿರುಕ್ತಿಯೇ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: