ಯಾರದೋ ದಾಳಕ್ಕೆ, ಬೇಕಾದ ಗರ ಬಿದ್ದ ಕಾಯಂತೆ….

ಶಾಂತಿ ಮಂತ್ರ

ಮಂಗೇಶ ಕೈಕಂಪಾಡಿ


ಯಾವುದೋ ಕೈವಾಡ, ಗೂಢ ಪವಾಡವೆಂಬಂತೆ,
ನಡೆಸುತ್ತಿದೆ ಮಸಲತ್ತು ನಮ್ಮ ನಡುವೆ.
ಯಾರದೋ ದಾಳಕ್ಕೆ, ಬೇಕಾದ ಗರ ಬಿದ್ದ ಕಾಯಂತೆ,
ಜರುಗುತ್ತಿದೆ ಜಗತ್ತು ಎಡೆಗೊಡದೆಯೆ.
ದುರುಳ ಬಂದೂಕುಗಳ ನೀಳ ನಳಿಕೆ ಹಿಂದಿನ ಕುದುರೆ
ಮೀಂಟುವುದು ಇನ್ನಿಕೋ ಇವರ ಬೆರಳು.
ಲಕ್ಷ್ಯದೊಕ್ಕಣ್ಣೊಳಗೆ ನಿಧಾನ ಇಳಿದೀಡಾಡಿ, ನೋಡಿ,
ಗುರಿಯ ದುಂಡೊಳಗಿದ್ದೇವು ನಾವೇ ನಾವು!
ಈ ದೊಡ್ಡ ಮಂದಿಯ ದೊಡ್ಡ ದೊಡ್ಡಸ್ತಿಕೆಯ ಬಗ್ಗೆ
ಆಡಲೆಲ್ಲಿದೆ, ಇನ್ನು, ದೊಡ್ಡ ಉಪಮೆ?
ದೊಡ್‍ದೊಡ್ಡ ಗನ್ನೊಡನೆ ಬಾಂಬುಗೀಂಬಣ್ವಸ್ತ್ರವಂತ
ನಖಶಿಖಾಂತ ಶಸ್ತ್ರ ತೊಟ್ಟವರೇನು ಅರೆಯೆ?!
ಇವರ ಸುತ್ತಿದ ಗೋಡೆ ಕಂಡಿರೆ? ಅದರುದ್ದ ಎತ್ತರ ದಪ್ಪ,
ಅಡಗುವರು ಹೀಗೆ- ಹತ್ತೆಂಟು ಪಟ್ಟು ಕಾವಲೊಳಗೆ.
ಜಗದಗಲದ ಹರವೇ ಇವರೆದುರು ಮೇಜಿನ ಹಲಗೆ,
ಒದ್ದೆಗನಸೊದ್ದುಕೊಂಡಿವೆ ಹೊಸಕಿ ಬೂಟಿನಡಿಗೆ.
ಇಷ್ಟಿದ್ದು, ಆಡುವರು ಮಾತ್ರ, ಉದ್ದುದ್ದ ಅಡ್ಡಡ್ಡ
ಗೊಡ್ಡೆನಿಸಗೊಡದೆ ಜಗದೊಳಿತ ಮಂತ್ರ!
ಗೊತ್ತಾಗದೇನು ಗೊತ್ತು ನಮಗಿಂತೆಂದು, ಅಥವಾ,
(ಸ್ವತಃ) ಗೊತ್ತೆ ಇವರಿಗೆ ತಂತಮಗಿಂಥ ಸೋಗಂತರಾಳ?
ನೋಡಬಲ್ಲೆನೆ ನಾನು ಈ ತೋರು ಮುಖವಾಡದೊಳದೂರಿ
ದೂರಿರದೆ ಇವರ ಒಳಮುಖದೊಳಮನಸು ಹೊಕ್ಕು!
ಕಂಡಿರದಿದ್ದರೆ, ನೀವೂ ಹೀಗೊಮ್ಮೆ ದಿಟ್ಟಿಸಿಬಿಡಿ ಮತ್ತೆ,
ಇವರ ಮಿದುಳರ್ಥವಾದೀತು, ಗಮನ ಗಹನಿಸಿ ಸಾಕು.
ನೋಡುತ್ತಿರಿ ಹಾಗೇ; ಕಾಣುವುದೆಲ್ಲ ಸ್ವಚ್ಛ ಸುಸ್ಪಷ್ಟ ಸಾಫು ಸಾಫು,
ನಿಚ್ಚಳಿಸುವುದು ನೋಟ ಇವರೊಳಮೋರಿನೀರಲ್ಲಿಯೂ!
ಏನೆಲ್ಲ ಆಡಿದರು. ಹುಸಿ ಹುಸಿಯೆ. ಗುಣಮಟ್ಟದ ಬಾಳೆಂದು,
ಪದೇ ಪದೇ ಆಮಿಷ… ಹುಹ್ಹ್! ಗುಣ ಮುಟ್ಟದಾಯಿತೇನೂ!
ನೀವು ಬರುವಾಗಲೆಂತಿತ್ತು ಜಗವು? ಈಗಲೆಂತಿದೆ ಹೇಳಿ,
ಬೀಗುವುದು ಬಿಡುಗಡೆ, ದಿಟದಿ, ಬೋನೊಳಗಿನಿಲಿ ತಾನೆ ನಾವು?
ನೆರಳು ಚೆಲ್ಲರು ಇವರು. ಬೆಳಕಷ್ಟು ತಿಳಿ ತಾವೆಂಬರು, ಕಡೆಗೆ,
ಹಿಂಜಾವಿನಿರುಳಲ್ಲಿ ಹೊಸ ನಸುಕಿನಸು ಸಿಗಿದರೂ!
ಮೂಡದ ಮುಂಜಾವು ಮತ್ತು ತೇದಿಯಾಗದ ಹಗಲು
ತೆರಳುವವು ಹಿಂದಕ್ಕೆ ಶುರುವಿರದ ಲೆಕ್ಕ ಮುಗಿದು.
ಭಯವೆಂದರಿನ್ನೇನು? ಜತೆಗೆ ಭೀತಿ ತಾನಿನ್ನೇನು? ಈ ನಡುವೆ,
ಹೇಳಿ ಕಂಗಾಲೆಂದರೆ ದಿಗಿಲಿನೆಷ್ಟನೇ ಕಾಲು?
ಇವರ ದೊರೆತನದಲ್ಲಿ ಉಗ್ರ ರಾಷ್ಟ್ರಕಾರಣದಲ್ಲಿ
ನೆಲವಿರಲಿ ಬಾನೂ ಭಯಪೀಡಿತ ಸರಕು!
ನೀವು ಧರಿಸಲಿಕ್ಕಿರುವ ಬಸಿರು, ಮುಂದೆ ಇರಿಸಲಿಕ್ಕಿರುವ ಹೆಸರೂ
ಆಗುವುದೆ ಬೇಡ, ಅವಕೇತಕೀ ಭಯದ ಪಾಡು?!
ಆಗಲಿದ್ದರೆ ಹಾಗೆ, ನಿಜಕು, ಆಗಿಬರಲೊಬ್ಬ, ಅಥವಾ
ಒಬ್ಬಾಕೆ- ಇವರನ್ನು ನಿಶ್ಶಸ್ತ್ರ ಕೆಡವುವವರು.
ಇವರ ಸಾವಿನ ಬಳಿಕ ಇಂಥವರ ಆತ್ಮಗಳು ಮರಳು
ದಿಸದಂತೆ ನಿಸ್ಸಂದೇಹ ಕಾಯ್ದು ಜೈಸುವವರು.
 
ಓಂ ತತ್ ಸತ್!
 
 

‍ಲೇಖಕರು G

February 13, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: