ಸಂಧ್ಯಾರಾಣಿ ಕಾಲಂ : ಸರ್ಕಲ್ ಮತ್ತು ಕಂಪಾರ್ಟ್‌ಮೆಂಟ್‌ಗಳ ನಡುವಿನಲ್ಲಿ ಬದುಕು

ಇತ್ತೀಚಿಗೆ ಒಂದು ಸಂದರ್ಶನದಲ್ಲಿ ಟಿ ಎನ್ ಸೀತಾರಾಂ ಅವರ ಬಾಲ್ಯದ ಬಗ್ಗೆ ಮಾತನಾಡುತ್ತಾ, ’ಬಾಲ್ಯದಲ್ಲಿ ಯಾವುದಾದರೂ ಕಾರಣಕ್ಕೆ ಇನ್ಫೀರಿಯಾರಿಟಿ ಕಾಂಪ್ಲೆಕ್ಸ್ ಇದ್ದರೆ ಅದು ನಂತರದಲ್ಲಿ ಎಲ್ಲರನ್ನೂ ಮೆಚ್ಚಿಸ ಬಯಸುವ, ಎಲ್ಲರಿಂದಲೂ ಒಂದು ಒಪ್ಪಿಗೆಯನ್ನು ಬಯಸುವ ಗುಣವಾಗಿ ಬದಲಾಗಿಬಿಡುತ್ತದೆ’ ಅಂತ ಹೇಳಿದ್ದರು. ಬಾಲ್ಯದ ಈ ಹಿನ್ನಲೆ ಕಾರಣವೋ ಇಲ್ಲವೋ ಗೊತ್ತಿಲ್ಲ, ಆದರೆ ಎಲ್ಲರಿಗೂ ಒಳ್ಳೆಯವರಾಗ ಬಯಸುವ, ಯಾರಿಗೂ ’ಇಲ್ಲ’ ಎನ್ನಲಾಗದ ಗುಣ ಅನೇಕರಲ್ಲಿರುತ್ತದೆ. ಅದಕ್ಕಾಗಿ ಅವರು ತೆರುವ ಬೆಲೆ, ಅನುಭವಿಸುವ ಸಂಕಟ ಅಷ್ಟಿಷ್ಟಲ್ಲ.
’ಇಲ್ಲ’, ’ನೋ’ ಎನ್ನುವುದು ಒಂದು ಕಲೆ, ಅದನ್ನು ಬಳಸಬೇಕು ಮತ್ತು ಸರಿಯಾದ ಸಮಯದಲ್ಲಿ ಬಳಸಬೇಕು. ಆದರೆ ಬಾಲ್ಯದ ಯಾವುದೇ ಅನುಭವ ನಮ್ಮ ಆತ್ಮವಿಶ್ವಾಸವನ್ನು ಮೊಂಡಾಗಿಸಿದಾಗ ಹೀಗೆ ’ನೋ’ ಎನ್ನುವುದು ಕಷ್ಟ ಆಗುತ್ತದೆ. ಆಗ ಎಲ್ಲರ ಮಾತಿಗೂ ಒಪ್ಪಿಕೊಳ್ಳುತ್ತಾ, ಎಲ್ಲರ ಅನುಮೋದನೆಗಾಗಿ ಕಾಯುವ ಮನೋಭಾವ ಹುಟ್ಟಿಕೊಳ್ಳುತ್ತದೆ.
ನಾವು ಬೆಳೆಯುವಾಗ ನಾಲ್ಕು ಹಂತಗಳನ್ನು ದಾಟಿ ಬೆಳೆಯುತ್ತೇವೆ ಎಂದು ಮನೋ ವಿಜ್ಞಾನಿಗಳು ಹೇಳುತ್ತಾರೆ, I am not ok – you are not ok, you are ok – I am not ok, I am ok – you are not ok, ಮತ್ತು ನಂತರದ್ದು I am ok, you are ok. ಮೊದಲನೆಯದು ಶೈಶವ, ನಾನೂ ಸರಿ ಇಲ್ಲ, ನೀನೂ ಸರಿ ಇಲ್ಲ ಅನ್ನೋ ಹಿಂಜರಿಕೆ, ಗೊಂದಲ, ಗಲಿಬಿಲಿ. ನಂತರದ್ದು ನೀನು ಸರಿ, ಆದರೆ ನಾನು ಸರಿ ಇಲ್ಲ ಅನ್ನೋ ಹಿಂಜರಿಕೆ, ಮೂರನೆಯದು ನಾನು ಸರಿ ಇದ್ದೆನೆ, ಆದರೆ ನೀನೇ ಸರಿ ಇಲ್ಲ ಅನ್ನೋ ದಾರ್ಷ್ಟ್ಯ. ಈ ಎರಡನೆಯ ಮತ್ತು ಮೂರನೆಯ ಹಂತಗಳು ನಮ್ಮ ಬಾಲ್ಯ, ಕಿಶೋರಾವಸ್ಥೆ ಹೇಗೆ ಕಳೆದೆವು ಎನ್ನುವುದರ ಮೇಲೆ ನಿರ್ಭರವಾಗಿರುತ್ತದೆ. ಕೆಲವರಿಗೆ ಮೊದಲು ಎರಡನೆಯ ಹಂತ ಬಂದು ಆಮೇಲೆ ಮೂರನೆಯ ಹಂತ ಬರುತ್ತದೆ, ಅಥವಾ ಮೊದಲು ಮೂರನೇ ಹಂತ ಬಂದು ಆಮೇಲೆ ಎರಡನೆಯ ಹಂತ ಬರಬಹುದು.
ಇವೆಲ್ಲಾ ದಾಟಿದ ನಂತರ ಬರುವ ಸ್ಥಿತಿ ನಾನೂ ಚೆನ್ನಾಗಿದ್ದೇನೆ, ನೀನೂ ಚೆನ್ನಾಗಿರುವೆ ಅಂತ. ಆದರೆ ಬಹಳಷ್ಟು ಜನ ಈ ಹಂತ ತಲುಪುವುದೇ ಇಲ್ಲ, ಎರಡನೆಯ ಅಥವಾ ಮೂರನೆಯ ಘಟ್ಟದಲ್ಲೇ ನಿಂತುಬಿಡುತ್ತಾರೆ. ಆಗ ಇಲ್ಲಾ ಪ್ರಪಂಚ ಚೆನ್ನಾಗಿಲ್ಲ, ನಾನು ಸರಿ ಇದ್ದೇನೆ ಎನ್ನುವ ಅಹಂಕಾರಿ ಧೋರಣೆ ಅಥವಾ ಪ್ರಪಂಚ ಸರಿ ಇದೆ, ನನ್ನಲ್ಲೇ ಏನೋ ಕೊರತೆ ಇದೆ ಅನ್ನುವ ಹಿಂಜರಿಕೆ ವ್ಯಕ್ತಿತ್ವದಲ್ಲಿ ಮೂಲಧಾತುವಾಗಿ ನಿಂತು ಬಿಡುತ್ತದೆ. ಈ ಮೂಲಭೂತವಾದ ಗುಣ ಅವರ ಎಲ್ಲಾ ಸಂಬಂಧಗಳನ್ನೂ, ನಡುವಳಿಕೆಗಳನ್ನೂ ನಿರ್ದೇಶಿಸುತ್ತದೆ.
ನೆನಪಿಸಿಕೊಳ್ಳಿ ಸಾಧಾರಣವಾಗಿ ನಾವೆಲ್ಲಾ ಬೆಳೆಯುವಾಗ ಸುಮಾರು ಕೀಳರಿಮೆಗಳನ್ನಿಟ್ಟುಕೊಂಡೇ ಬೆಳೆದವರು. ಬಣ್ಣ ಮಾಸಿದ ಯೂನಿಫಾರ್ಮ್, ಮೈಯ್ಯ ಬಣ್ಣ, ಮೊಂಡು ಮೂಗು, ಬಣ್ಣ ಕಾಣದ ಮನೆಯ ಗೋಡೆಗಳು, ನಮಗಿಂತಾ ಅಪ್ಪ ಅಮ್ಮನಿಗೆ ಪ್ರೀತಿ ಪಾತ್ರರಾದ ಅಣ್ಣ-ತಂಗಿಯರು, ಮುಂದಿನ ಬೆಂಚಿನ ಸಹಪಾಠಿಯ ಅಂಕಗಳು, ಗೆಳತಿಯ ಎತ್ತರ ಏನೆಲ್ಲಾ ನಮ್ಮ ಮನಸ್ಸಿನಲ್ಲಿ ಒಂದು ಸಣ್ಣ ಕೀಳರಿಮೆಯನ್ನು ಉಳಿಸಿಬಿಡುತ್ತಿದ್ದವು. ಆ ಕಾರಣದಿಂದಾಗಿ ನಮಗೆ ಬೆಳೆದ ಮೇಲೂ ಸಹ ಸುತ್ತಲಿನವರ ಒಂದು ಒಪ್ಪಿಗೆ, ಒಂದು ಅನುಮೋದನೆ ಮುಖ್ಯವಾಗಿರುತ್ತಿತ್ತು. ಇಲ್ಲಿ ನನ್ನದೇ ಬದುಕಿನ ಒಂದು ಉದಾಹರಣೆಯನ್ನು ಕೊಡಬೇಕು ನಾನು, ಮನೆಗೆ ದೊಡ್ಡ ಮಗಳಾದ ನನಗೆ ಸಿಕ್ಕ ಮುದ್ದು ಕಡಿಮೆಯಲ್ಲವಾದರೂ ಹಿಂದೆ ಹಿಂದೆ ತಂಗಿಯರು ಬಂದಂತೆ ನನ್ನ ಸ್ಥಾನ ಪಲ್ಲಟ ಆಗುತ್ತಾ ಹೋಯಿತು! ಗಮನದಲ್ಲಿರಬೇಕಾದರೆ ತೋಚಿದ ಉಪಾಯ ಅಪ್ಪ ಅಮ್ಮ ಹೇಳಿದ ಹಾಗೆ, ಟೀಚರ್ ಹೇಳಿದ ಹಾಗೆ ಕೇಳಿ, ’ಒಳ್ಳೆ ಹುಡುಗಿ’ ಅನ್ನಿಸಿಕೊಳ್ಳುವುದು ಮತ್ತು ಅಸಮಾಧಾನವನ್ನು ಮೌನವಾಗಿ ನುಂಗಿಕೊಳ್ಳುವುದು. ಆದರೆ ಇದು ತುಂಬಾ ತಪ್ಪು ಅನ್ನುವುದು ಜೀವನದಲ್ಲಿ ಮುಂದೆ ಎಂದೋ ಅರ್ಥವಾಯಿತು. ಅದೇ ರೀತಿ ವಿಪರೀತ ಸಂವೇದನಾಶೀಲತೆ ಗುಣವೂ ಹೌದು, ಒಂದು ಶಾಪವೂ ಹೌದು. ಹಾಗೆಂದು ’ಯಾರೇ ಕೂಗಾಡಲಿ, ಊರೇ ಹೋರಾಡಲಿ ನಿನ ನೆಮ್ಮದಿಗೆ ಭಂಗವಿಲ್ಲ’ ಅಂತ ಇರೋಕ್ಕಾಗುತ್ತಾ? ಆಗ ನಾನು ಕಂಡುಕೊಂಡ ದಾರಿ ಸರ್ಕಲ್, ವೃತ್ತ.
ಬದುಕಿನ ಸುಮಾರು ಸಂಬಂಧಗಳನ್ನು ಹೀಗೆ ವೃತ್ತಗಳಲ್ಲಿ ಹಿಡಿದಿಡಬಹುದು. ನಮ್ಮ ಸುತ್ತಲಿನ ಮೊದಲ ವೃತ್ತ, ಅದರಲ್ಲಿರುವರನ್ನು ಪ್ರಶ್ನಿಸುವುದೇ ಬೇಡ, ಸುಮ್ಮನೆ ನಂಬಿ ಬಿಡಬಹುದು. ನಮ್ಮ ತಪ್ಪಿದ್ದರೆ ಹೇಳುತ್ತಾರೆ ಮತ್ತು ನಮಗೇ ಹೇಳುತ್ತಾರೆ, ತಿದ್ದುತ್ತಾರೆ. ಅವರ ಮಟ್ಟಿಗೆ ನೀವು ಮತ್ತು ನಿಮ್ಮ ಮಟ್ಟಿಗೆ ಅವರು ನಿರಾತಂಕವಾಗಿ ನಂಬಬಹುದಾದ ನಂಟು. ಅವರ ಮಾತು, ಅವರ ಅಭಿಪ್ರಾಯ ನಿಮಗೆ ಮಾನ್ಯ ಹಾಗು ಗೌರವನೀಯ. ನಂತರದ ವೃತ್ತ ಅತ್ಮೀಯತೆಗಿಂತ ಸ್ವಲ್ಪ ಆಚಿನದು, ಪರಿಚಯಕ್ಕಿಂತ ಸ್ವಲ್ಪ ಈಚಿನದು. ಅದರಾಚಿಗಿನದು ಪರಿಚಿತರ ವೃತ್ತ.. ಹೀಗೆ. ಇದು ತೀರಾ ಸರಳೀಕರಣ ಅನಿಸಿದರೂ ಒಮ್ಮೆ ಯೋಚಿಸಬಹುದಾದ ವಿಷಯ. ಆಡುವವರ ಮಾತಿಗೆ ನಿಮ್ಮ ಮನಸ್ಸಿನ ಬೆಲೆ ಮತ್ತು ನೀವು ಕೊಡುವ ಮಹತ್ವ ಅವರು ಯಾವ ವೃತ್ತದಲ್ಲಿದ್ದಾರೆ ಎನ್ನುವುದರ ಮೇಲೆ ಆಧಾರ ಪಟ್ಟಿರುತ್ತದೆ. ಯಾರ ಮಾತು ಆಣತಿ, ಯಾರ ಮಾತು ಅಭಿಪ್ರಾಯ ಎನ್ನುವುದು ಆ ವ್ಯಕ್ತಿ ನಿಮಗೆ ಎಷ್ಟು ಹತ್ತಿರದಲ್ಲಿದ್ದಾರೆ ಎನ್ನುವುದರ ಮೇಲೆ ಆಧಾರ ಪಟ್ಟಿರುತ್ತದೆ. ಇದು ಒಂದು ರೀತಿಯಲ್ಲಿ ಬದುಕನ್ನು ಸರಳಗೊಳಿಸಿತು.

ಆದರೆ ಇದಕ್ಕೂ ಸಂಪೂರ್ಣ ಭಿನ್ನವಾಗಿ ಸಂಬಂಧಗಳನ್ನು ನೋಡಬಹುದು ಅಂತ ಕೆಲವರನ್ನು ನೋಡಿದಾಗ ತಿಳಿಯಿತು. ಅದು ಬದುಕನ್ನು ಕಂಪಾರ್ಟಮೆಂಟಲೈಸ್ ಮಾಡಿಕೊಳ್ಳುವುದು. ತಮ್ಮ ಸುತ್ತ ಮುತ್ತಲಿನ ಸಂಬಂಧಗಳನ್ನು ಪ್ರತ್ಯೇಕವಾದ ಬೋಗಿಗಳನ್ನಾಗಿಸಿಕೊಂಡು ಎಲ್ಲಾಕ್ಕೂ ಸಮಾನ ಮತ್ತು ಪ್ರತ್ಯೇಕ ಬೆಲೆ ಕೊಡುತ್ತಾ ಹೋಗುವುದು. ಆಗ ಯಾವುದೇ ಒಂದು ವ್ಯಕ್ತಿ ಅಥವಾ ಸಂಬಂಧ ಇವರಿಗೆ ಕೇಂದ್ರ ಬಿಂದು ಆಗುವುದಿಲ್ಲ, ಎಲ್ಲರ ಪ್ರೀತಿಯನ್ನು ಪಡೆದುಕೊಳ್ಳುತ್ತಾರೆ ಮತ್ತು ಎಲ್ಲರ ಪ್ರೀತಿ, ಕೋಪ, ಹಟ, ಹೀಯಾಳಿಕೆಗಳಿಗೆ ತಮ್ಮನ್ನು ಕೊಟ್ಟುಕೊಳ್ಳುತ್ತಾರೆ. ಇದರಲ್ಲಿ ಒಂದು ಅನುಕೂಲವಿದೆ, ನಮ್ಮ ಇರುವಿಕೆ, ಸಂತಸ, ಸಂಕಟಗಳು ಯಾವುದೇ ಒಂದು ವ್ಯಕ್ತಿಯ ಮೇಲೆ ನಿಂತಿರುವುದಿಲ್ಲ. ಮತ್ತು ಆಯಾ ಸಂದರ್ಭಕ್ಕೆ ತಕ್ಕಂತೆ ಅವರ ಅನುಮೋದನೆಗೆ ನಾವು ಕೊಡುವ ಬೆಲೆ ನಿರ್ಧಾರವಾಗುತ್ತದೆ. ಇದು ಬದುಕಿನೆಡೆಗೆ ಬಹುಶಃ ಹೆಚ್ಚು ಪ್ರಾಕ್ಟಿಕಲ್ ಆದ ನಡೆ.
ಸಾಧಾರಣವಾಗಿ ಹೆಣ್ಣುಗಳದು ವೃತ್ತಕೇಂದ್ರಿತ ಭಾವನೆಗಳು ಮತ್ತು ಗಂಡಿನ ಪ್ರಪಂಚ ಹೀಗೆ ಕಂಪಾರ್ಟಮೆಂಟಲೈಸ್ ಆಗಿರುವಂತಾದ್ದು. ಇದಕ್ಕೆ ಅಪವಾದಗಳು ಇರಬಹುದಾದರೂ ಸ್ಥೂಲವಾಗಿ ಸಂಬಂಧಗಳನ್ನು ನೋಡುವ ರೀತಿಯನ್ನು ಹೀಗೆ ವಿಭಾಗಿಸಬಹುದು.
ಸಂಬಂಧಗಳಲ್ಲಿ ಮತ್ತು ಬದುಕಿನಲ್ಲಿ ಇದು ಸರಿ ಮತ್ತು ಇದೇ ಸರಿ ಎನ್ನುವ ಯಾವುದೇ ಅಂತಿಮ ಸತ್ಯ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ, ಸಂಬಂಧದಿಂದ ಸಂಬಂಧಕ್ಕೆ ಅದು ಬದಲಾಗುತ್ತಾ ಹೋಗುತ್ತದೆ. ’ಯಾವ ಜೀವ ಯಾವ ನೋವಿಗೀಡೋ, ಯಾವ ಭಾವ ನೆಮ್ಮಿ ಅದರ ಪಾಡೋ, ಕಾಣಲು ಬಿಡಿ ತಮ್ಮೊಳಗಿನ ಬೆಳಕ..’ ನಿಜ ಅವರ ಭಾವ, ಅವರ ಬೆಳಕನ್ನು ಅವರವರೇ ಕಂಡುಕೊಳ್ಳಬೇಕು. ಮತ್ತು ಅವರ ನಿರ್ಧಾರದ ಹೊಣೆ ಸಹ ಅವರದೇ. ಅದರ ಬಗ್ಗೆ ಆಮೇಲೆ ಯಾವ ಕಾರಣಕ್ಕೇ ಆಗಲಿ ಆರೋಪ ಹೊರೆಸುವುದರಲ್ಲಿ, ಗೊಣಗುವುದರಲ್ಲಿ ಅರ್ಥವಿಲ್ಲ. ಎಷ್ಟೇ ಆಗಲಿ ’ಒಗ್ಗಿಕೊಳುವುದೆ ರೀತಿ ಒಪ್ಪಿದುದಕೆ’.
ಸರಿ, ಹಾಗೆಂದೇ ಒಪ್ಪಿಕೊಳ್ಳೋಣ. ವ್ಯಕ್ತಿಯ ಮಟ್ಟಿಗೇನೋ ಈ ಸಮೀಕರಣ ಸರಿ. ಆದರೆ ಇಬ್ಬರು ವ್ಯಕ್ತಿಗಳು, ಎರಡು ಪ್ರತ್ಯೇಕ ವ್ಯಕ್ತಿತ್ವಗಳು ಜೊತೆಯಾಗಿರಬೇಕಾಗಿ ಬಂದಾಗ ಆಗ? ಬಹುಶಃ ಆಗ ಮಾತುಗಳು, ಮೌನಗಳು ಹೊಂದಾಣಿಕೆಯಾಗಬೇಕಾಗುತ್ತವೆ. ಆಗ ವೃತ್ತದೊಳಗಡೆಯೇ ಕಂಪಾರ್ಟ್ ಮೆಂಟ್ ಗಳು, ಕಂಪಾರ್ಟ್ ಮೆಂಟ್ ಒಳಗಡೆ ವೃತ್ತಗಳೂ ಬೇಕಾಗುತ್ತವೆ.
ಮೌನದಲ್ಲಿ ಪ್ರೀತಿ ಹುಟ್ಟಬಹುದು, ಪ್ರೀತಿ ಬೆಳೆಯಲೂ ಬಹುದು, ಆದರೆ ಪ್ರೀತಿ ಉಳಿಸಿಕೊಳ್ಳಬೇಕಾದರೆ ಮೌನದ ಜೊತೆ ಮಾತೂ ಬೇಕು. ಸಣ್ಣ ಅಸಮಾಧಾನ ಹುಟ್ಟಿದಾಗ ಮೌನ ಅದನ್ನು ಹಾಗೆ ಅಳಿಸಿಬಿಡಬಹುದು, ಆದರೆ ತಪ್ಪು ಅಭಿಪ್ರಾಯ ಬಂದಾಗ ಮಾತು ಬೇಕಾಗುತ್ತದೆ. ಮೌನ ಆಗ ಸಮಸ್ಯೆಯ ಪರಿಣಾಮವನ್ನು ಮುಂದೂಡಬಹುದೇ ಹೊರತು, ಪರಿಹಾರ ಒದಗಿಸಲಾರದು. ಹಾಗೆ ಮಾತುಗಳು ಬೇಕಾದಾಗ ಈ ವೃತ್ತ, ಬೋಗಿಗಳ ಸಮೀಕರಣದಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ.
ಹೌದು, ಇಬ್ಬರ ನಡುವೆ ನಂಬಿಕೆ, ವಿಶ್ವಾಸ ಇರಬೇಕಾದರೆ ಬೋಗಿಯೊಳಗೆ ಇಬ್ಬರಿಗೆಂದೇ ಒಂದು ವೃತ್ತ ಮತ್ತು ವೃತ್ತದೊಳಗೆ ಅವರಿಬ್ಬರಿಗೆಂದೇ ಒಂದು ಬೋಗಿ ಕಟ್ಟಿಕೊಳ್ಳಬೇಕಾಗುತ್ತದೆ.
ಅದಕ್ಕಿಂತ ಮೊದಲು ನಮ್ಮ ಸಂಬಂಧಗಳಲ್ಲಿ ವೃತ್ತ ಎಷ್ಟಿದೆ, ಬೋಗಿಗಳೆಷ್ಟಿದೆ ಎಂದು ನೋಡಿಕೊಳ್ಳಬೇಕಾಗುತ್ತದೆ.
 
 

‍ಲೇಖಕರು G

April 3, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

20 ಪ್ರತಿಕ್ರಿಯೆಗಳು

  1. sushma

    Thumba chennagide. I completely agree with you.E naduve hengasaru practical aaguthidaare. Its really nice.

    ಪ್ರತಿಕ್ರಿಯೆ
  2. ಲಕ್ಷ್ಮೀಪತಿ.ಎನ್.

    ಜೀವನ್ಮುಖಿ ಮನೋಭಾವವುಳ್ಳವರ ಮನದ ಮಾತುಗಳು ಸೊಗಸಾಗಿವೆ.

    ಪ್ರತಿಕ್ರಿಯೆ
  3. lalithasiddabasavaiah

    ನೀವು ಹೇಳೋದು ಸರಿ ಸಂಧ್ಯಾ, ಮೌನ ಯಾವಾಗಲೂ ಬಂಗಾರವಲ್ಲ. ಅಗತ್ಯವಿಲ್ಲದ ಕಡೆ ಅದನ್ನ ಅಪ್ಪ್ಲೈ ಮಾಡಿದ್ರೆ ಅಲ್ಯುಮಿನಿಯಮ್ ಗಿಂತ ಅತ್ತತ್ತವಾಗಿಬಿಡುತ್ತೆ.

    ಪ್ರತಿಕ್ರಿಯೆ
  4. Anil Talikoti

    ಒಳ್ಳೆಯ ಲೇಖನ – ಒಂದು ಹಂತದವರೆಗೆ ಬದುಕಿನ ಈ ಸಂಬಂಧಗಳನ್ನು ವೃತ್ತವೋ, ಬೋಗಿಯೋ ಮಾಡಿಕೊಳ್ಳಬಹುದೇನೋ -ಆದರೆ ಈ ಸಂಬಂಧಗಳು static ಆಗಿರದೆ dynamic ಆಗಿರುವದರಿಂದ ವೃತ್ತದ ಒಳಗೆ ಹೊರಗೆ ಜಿಗಿದಾಡುತ್ತಲೆ ಇರುತ್ತವೆ ಎನಿಸುತ್ತದೆ – ಅವುಗಳನ್ನು ಹೇಗೆ ಅರ್ಥೈಸಿಕೊಳ್ಳುವದು? ವೃತ್ತ,ಬೋಗಿಗಳ ಕೌಂಟು ಕಂಡುಕೊಳ್ಳುವದರಲ್ಲಿ ಅರ್ಧ ಆಯುಸ್ಸು ಟುಸ್ಸಾಗಿರುತ್ತದೆ ಏನೋ? ಒಂದಂತೂ ನಿಜ ‘ಅವರ ಬೆಳಕನ್ನು ಅವರವರೇ ಕಂಡುಕೊಳ್ಳಬೇಕು’.
    -ಅನಿಲ

    ಪ್ರತಿಕ್ರಿಯೆ
  5. ಅಪರ್ಣ ರಾವ್

    ಇನ್ನೂ ಕೆಲವರು.. ಬಾಲ್ಯದ ಕೀಳರಿಮೆಯನ್ನ.. ಸೇಡಾಗಿ ಪರಿವರ್ತಿಸಿಕೊಂಡು ಇನ್ನೊಬ್ಬರ ತಪ್ಪನ್ನು ಎತ್ತಿ ತೋರಿಸುವುದರಲ್ಲೇ ಸಂತೃಪ್ತಿ ಹೊಂದುತ್ತಾರೆ.. ಮನುಷ್ಯನ ಮನಸ್ಸು ತುಂಬಾ ಸಂಕೀರ್ಣ.

    ಪ್ರತಿಕ್ರಿಯೆ
  6. ಪ್ರಮೋದ್

    ಚೆನ್ನಾಗಿದೆ. ಈ ಕ್ಲಿಷ್ಟತೆಯ ಬಗ್ಗೆ ಇನ್ನೂ ಬರೆಯಿರಿ. ಸಾವಿರ ಪಿಎಚ್ ಡಿ ಮಾಡುವ ಎರಕದ ಬ೦ಧವಿದು

    ಪ್ರತಿಕ್ರಿಯೆ
  7. umavallish

    ಸಂದ್ಯಾ ನಿಮ್ಮ ಈ ಲೇಖನ ಪದೇ ಪದೇ ಓದುವಂತಿದೆ. ವಿಚಾರಪೂರ್ಣವಾದ,ಬರಹ.

    ಪ್ರತಿಕ್ರಿಯೆ
  8. Niveditha

    Nannade anubhavavannu ofida hagaythu. Baavu vahisuva anavasjyala mouna namma jeevanada athyamoooolya savigalanna namminda kasidukollutthade.

    ಪ್ರತಿಕ್ರಿಯೆ
  9. Ravivarma

    ಮೌನದಲ್ಲಿ ಪ್ರೀತಿ ಹುಟ್ಟಬಹುದು, ಪ್ರೀತಿ ಬೆಳೆಯಲೂ ಬಹುದು, ಆದರೆ ಪ್ರೀತಿ ಉಳಿಸಿಕೊಳ್ಳಬೇಕಾದರೆ ಮೌನದ ಜೊತೆ ಮಾತೂ ಬೇಕು. ಸಣ್ಣ ಅಸಮಾಧಾನ ಹುಟ್ಟಿದಾಗ ಮೌನ ಅದನ್ನು ಹಾಗೆ ಅಳಿಸಿಬಿಡಬಹುದು, ಆದರೆ ತಪ್ಪು ಅಭಿಪ್ರಾಯ ಬಂದಾಗ ಮಾತು ಬೇಕಾಗುತ್ತದೆ. ಮೌನ ಆಗ ಸಮಸ್ಯೆಯ ಪರಿಣಾಮವನ್ನು ಮುಂದೂಡಬಹುದೇ ಹೊರತು, ಪರಿಹಾರ ಒದಗಿಸಲಾರದು. ಹಾಗೆ ಮಾತುಗಳು ಬೇಕಾದಾಗ ಈ ವೃತ್ತ, ಬೋಗಿಗಳ ಸಮೀಕರಣದಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ.
    ಹೌದು, ಇಬ್ಬರ ನಡುವೆ ನಂಬಿಕೆ, ವಿಶ್ವಾಸ ಇರಬೇಕಾದರೆ ಬೋಗಿಯೊಳಗೆ ಇಬ್ಬರಿಗೆಂದೇ ಒಂದು ವೃತ್ತ ಮತ್ತು ವೃತ್ತದೊಳಗೆ ಅವರಿಬ್ಬರಿಗೆಂದೇ ಒಂದು ಬೋಗಿ ಕಟ್ಟಿಕೊಳ್ಳಬೇಕಾಗುತ್ತದೆ.
    ಅದಕ್ಕಿಂತ ಮೊದಲು ನಮ್ಮ ಸಂಬಂಧಗಳಲ್ಲಿ ವೃತ್ತ ಎಷ್ಟಿದೆ, ಬೋಗಿಗಳೆಷ್ಟಿದೆ ಎಂದು ನೋಡಿಕೊಳ್ಳಬೇಕಾಗುತ್ತದೆ.arthapurna chintane..

    ಪ್ರತಿಕ್ರಿಯೆ
  10. Veda H

    ತುಂಬಾ ಸುಂದರವಾಗಿದೆ ನಿಮ್ಮ ಲೇಖನ. ಮನಸ್ಸಿಗೆ ತುಂಬಾ ಹತ್ತಿರವಾಯಿತು. ಮೊದಲರ್ಧಭಾಗವನ್ನು ಓದಿದಾಗ ನನ್ನ ಜೀವನದ ಕಥೆಯನ್ನೆ ಓದುತ್ತಿದ್ದೇನೋ ಅನ್ನಿಸಿತು. ಸಂಬಂಧಗಳ ಬಗ್ಗೆ ಚೆನ್ನಾಗಿ ಬರೆದಿದ್ದೀರಾ. 🙂

    ಪ್ರತಿಕ್ರಿಯೆ
  11. ಲಕ್ಷ್ಮೀಕಾಂತ ಇಟ್ನಾಳ

    ಬಲು ಸೊಗಸು ನಿಮ್ಮ ಬರಹ, ಚಿಂತನೆ. ಸಾಗರದಾಳದ ಮುತ್ತು ಮಣಿಗಳನ್ನು ಹೆಕ್ಕುವ ಜಾಣ್ಮೆಗಳ ಸಾಲುಗಳಿವು. ಮನಸ್ಸಿನ ಪರಿಧಿಯೊಳಗೆ ವೃತ್ತ, ಆವರಣಗಳು, ಆವರಣಗಳಲ್ಲಿ ಸರಹದ್ದುಗಳು, ಸರಹದ್ದಿನಾಚೆಯ ಲಕ್ಷ್ಮಣರೇಖೆಗಳು, ಯಾವುದು ಬೇಕು, ಎಷ್ಟು ಬೇಕು, ಯಾವುದು ಬೇಡ, ಬೇಕಿದ್ದೆಷ್ಟು, ಬೇಡವಾದದ್ದೆಷ್ಟು. ನೆಲೆಗಳೊಳಗೆ ಗೋಡೆಗಳು, ಗೋಡೆಗಳ ನಡುವೆ ನೆಲೆಗಳು, ನೆಲೆಗಳ ನಡುವೆ ಕಂದಕಗಳು, ಕಂದಕಗಳಾಚೆ ನಮ್ಮ ವೃತ್ತಗಳು ಮುನ್ನಡೆವ ಪರಿ ಅದ್ಭುತ ಮಾನಸಿಕ ದ್ವಂದ್ವಗಳ ಜಂತರ್ ಮಂತರ್ ಇದು. ಒಳಅರಿವಿಗೆ ದಕ್ಕಿದವ ಜಾಣ, ಇಲ್ಲದಿರೆ,ತೊಳಲಾಟಗಳನ್ನು ಮೈಮೇಲೆ ಎಳೆದುಕೊಂಡಂತೆಯೆ. ಸಂಭಂಧ ಕಾಯ್ದುಕೊಳ್ಳಲು ನಿತ್ಯದ ಸತ್ಯದ ಫಾರ್ಮುಲಾಗಳು. ಗುಲ್ಜಾರರ, ‘ಕೋಯೀ ಹೋತಾ ಜಿಸಕೋ ಅಪನಾ, ಹಮ್ ಅಪನಾ ಕೆಹಲಾತೇ ಯಾರೋ, ಪಾಸ್ ನಹೀಂ ತೊ ದೂರ ಹೀ ಹೋತಾ, ಲೇಕಿನ ಕೊಯಿ ಮೇರಾ ಅಪನಾ’ಈ ಚಿಂತನೆಗೆ ಸನಿಹದಲ್ಲೆ ಸಾಗಿ ಹೋಗುವ ಹೊರವೃತ್ತ ಅಂದುಕೋತೀನಿ. ಧನ್ಯವಾದಗಳು ಸಂಧ್ಯಾಜಿ, ಎಂದಿನಂತೆ ಉತ್ತಮ ಲೇಖನ.

    ಪ್ರತಿಕ್ರಿಯೆ
  12. ತಿಲಕ್ ರಾಜ್ ಸೋಮಯಾಜಿ

    ಸಂಬಂಧಗಳನ್ನು ಬೋಗಿಗಳಲ್ಲಿ ಸಮೀಕರಿಸುವವನಿಗೆ ಮುಂದೊಂದು ದಿನ ತಾನು ಯಾವ ಬೋಗಿಯ ಪ್ರಯಾನಿಕಣಿಕನೆಂದು ಗೊಂದಲ ಮೂಡಬಹುದು ಅಥವಾ ಎಲ್ಲ ಬೋಗಿಗಳಿಂದ ದೂರ ನಿಂತು ವೈರಾಗಿಯಾಗುವ ಅವಕಾಶವು ಕೂಡ ಆತನಿಗಿದೆ. ಆದರೆ ವೃತ್ತದೊಳು ನಿಂತವನು ಹೊರಗಿನ ಎಲ್ಲ ವೃತ್ತಗಳು ಕಳಚಿ ಬೀಳುವ ತನಕ ಬಂಧಿಯೇ, ಸಂಬಂಧದೊಳಗೆ. ಯೋಚಿಸಲು ಪ್ರೇರೇಪಿಸುವ ಉತ್ತಮವಾದ ಬರಹಕ್ಕೆ ಧನ್ಯವಾದಗಳು.

    ಪ್ರತಿಕ್ರಿಯೆ
  13. Kantha

    Yes!! You are absolutely right,and relevant and perfect to present days we living in. I completely agree with you, thanks.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: