ಪ್ರವರ ಕೊಟ್ಟೂರು ಬರೆದ ಸಣ್ಣ ಕಥೆ

ಸಂಬಂಧ

ಪ್ರವರ ಕೊಟ್ಟೂರು

ತೆರೆದ ಕಿಡಕಿಯಿಂದ ಬೆಳಕು ಮುಖಕ್ಕೆ ರಾಚುತಿತ್ತು, ಬೇಸಿಗೆಯಾದ್ದರಿಂದಲೋ ಏನೋ ಸೆಖೆಗೆ ಮೈಯೆಲ್ಲಾ ಬೆವೆತು ಹಾಸಿಗೆಯಲ್ಲಿ ಹೊರಳಾಡುತ್ತಲೇ ಹೆಂಚಿನಲ್ಲಿ ದೋಸೆ ತಿರುವಿ ಹಾಕಿದಂತೆ ಮಗ್ಗುಲು ಬದಲಾಯಿಸಿ ಇನ್ನೊಂದಷ್ಟು ಮತ್ತಷ್ಟು ಹೊತ್ತು ನಿದ್ದೆ ಮಾಡಲಿಕ್ಕೆ ಪ್ರಯತ್ನಿಸಿದರೂ ಆಗಲಿಲ್ಲ, ಕೊನೆಗೆ ಸಣ್ಣಗಿನ ಕಣ್ಣು ಮಾಡಿಕೊಂಡು ಮೈ ಮುರಿಯುತಿದ್ದರೆ ಮೂಳೆಗಳು ಲಟಪಟ ಎಂದು ಸದ್ದು ಹೊರಡಿಸಿದವು.
ಕೋಣೆಯ ಕಿಡಕಿಯಿಂದ ಕಾಣುವ ಪ್ರಪಂಚವೇ ಅವನಿಗೆ ಸದಾ ಕಾಡುತಿತ್ತು. ಮೋಡಗಳನ್ನು ತಾಕಬಲ್ಲ ಕಟ್ಟಡಗಳು, ಟವರ್ರುಗಳು, ಕಪ್ಪಗೆ ಥಳಗುಡುವ ರೋಡುಗಳು, ಟ್ರ್ಯಾಫಿಕ್ಕು ಸಿಗ್ನಲ್ಲುಗಳು, ಕಾರು ಬಸ್ಸು, ರೋಡು ದಾಟಲು ಹೋಗಿ ಸತ್ತ ನಾಯಿಯ ಕಳೇಬರಗಳು ಅದೆಷ್ಟೋ ವರ್ಷಗಳಿಂದ ತಾನಾಗಲಿ ಜಗತ್ತಾಗಲಿ ಕಿಂಚಿತ್ತು ಬದಲಾಗಿಲ್ಲ ಹಾಗೆ ಬದಲಾಗುವ ಯಾವ ಪ್ರಮೇಯವೂ ಬಂದಿಲ್ಲ. ಆಗಾಗ ಕನ್ನಡಿಗೆ ಧೂಳು ಹತ್ತಿ ಮೊಬ್ಬಾಗಿದ್ದು ಬಿಟ್ಟರೆ ತನ್ನ ಪ್ರತಿಬಿಂಬ ಕೆಟ್ಟದಾಗಿ ಕಂಡದ್ದು ಬಿಟ್ಟರೆ ಕೋಣೆಯೂ ತನ್ನಂತೆ ಜಡವಾಗಿಯೇ ಇದೆ.
ಹಾಸಿಗೆಯಿಂದೆದ್ದು ಪೇಪರ್ರು ಓದುವುದಾಗಲಿ, ನ್ಯೂಸು ಚಾನೆಲ್ ಗಳನ್ನು ನೋಡುವುದಾಗಲಿ ಅವನಿಗೆ ಅಭ್ಯಾಸವಿರಲಿಲ್ಲ, ಅವುಗಳನ್ನು ನೋಡದೇ ಇರುವುದರಿಂದಲೇ ತಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರುವೆನೆಂಬ ನಂಬಿಕೆ. ಯಮನಿದ್ರೆಯ ಜೋಂಪಿನಿಂದ ಪಾರಾಗಲಿಕ್ಕೆ ಒಂದು ಕಪ್ ಚಹಾ ಕುಡಿಬೇಕೆಂದು ನಿರ್ಧರಿಸಿ ಹಾಲಿಗೆ ತಡಕಾಡಿದ, ಬಾಗಿಲಿನ ಚಿಲಕವನ್ನು ಸರಿಸಿ ಮೆತ್ತಗೆ ನೂಕುತ್ತಿದ್ದಂತೆ ಕಿರ್ರ್ ಎಂದು ಕೀರಲು ದನಿಯಲ್ಲಿ ಇಷ್ಟಗಲ ತೆರೆದುಕೊಂಡಿತು, ತನ್ನ ಅಪಾರ್ಟ್ಮೆಂಟಿನ ಎದುರು ಮನೆಯ ನೈಟಿ ಹಾಕಿದ್ದ ಹೆಂಗಸು ಒಂದೇ ಗುಕ್ಕಿನಲ್ಲಿ ಅವನನ್ನು ತಿಂದುಬಿಡುವಂತೆ ನಖಶಿಖಾಂತ ನೋಡಿದಳು, ತಲೆ ಬಗ್ಗಿಸಿ ಅಲ್ಲೇ ಇದ್ದ ಹಾಲಿನ ಪ್ಯಾಕೇಟನ್ನು ಕೈಲಿ ಹಿಡಿದು ಥಟ್ಟನೆ ಬಾಗಿಲನ್ನು ಮುಚ್ಚಿದ. ಮತ್ತದೇ ಕೀರಲು ದನಿಯಲ್ಲಿ ಮುಚ್ಚಿಕೊಂಡಿತು.
ಅಡುಗೆ ಕೋಣೆಯ ಸಿಂಕಿನಲ್ಲಿ ತೊಳೆಯದೇ ಪಾತ್ರೆಗಳೆಲ್ಲ ಹಾಗೆ ಬಿದ್ದಿದ್ದವು, ಹಾಗೆ ಬಿದ್ದು ಮೂರ್ನಾಲ್ಕು ದಿನಗಳಾಗಿದ್ದರಿಂದ ಕೆಟ್ಟ ವಾಸನೆಯೂ ಬರುತ್ತಿತ್ತು. ವಾಸನೆ ಕಡಿಮೆಯಾಗಲೆಂದು ಕಿಡಕಿ ತೆರೆದಿಟ್ಟು, ಸ್ವಲ್ಪ ಹೊತ್ತಿನ ನಂತರ ಚಹಾ ಮಾಡಿಕೊಳ್ಳುವಷ್ಟು ಪಾತ್ರೆಯನ್ನು ತೊಳೆದುಕೊಂಡ.
“ಆಕೆಯನ್ನು ಮಾತನಾಡಿಸದೇ ಎಷ್ಟು ದಿನಗಳಾದ್ವು, ಪ್ರೀತಿಯಿಂದ ಆಕೆ ನನ್ನ ಕೆನ್ನೆ ಗಿಂಡಿಕೊಳ್ಳುತ್ತಿದ್ದಳು, ಕಾಡು ಹರಟೆ ಹೊಡೆಯುತ್ತಾ ತಲೆಗೂದಲನ್ನು ಬೆರಳುಗಳಿಂದ ಸುತ್ತುತ್ತಾ ನನ್ನನ್ನು ಯಾವುದೋ ಮಾಂತ್ರಿಕ ಲೋಕಕ್ಕೆ ಕರೆದೊಯ್ದುಬಿಡುತ್ತಿದ್ದಳು” ಚಹಾ ಹೀರುತ್ತಾ ಯೋಚನೆಗಳನ್ನು ನದಿಗುಂಟ ತೇಲಿಬಿಟ್ಟ ಪೇಪರ್ರಿನ ಹಡಗಿನಂತೆ ಒಂದೊಂದೇ ತೇಲಿಸತೊಡಗಿದ.
“ಒಲವನ್ನು ಹಿಡಿ ಹಿಡಿಯಾಗಿ ಎದೆ ಬೊಗಸೆಗೆ ಸುರಿಯುವ ಆಕೆ ಪ್ರೇಮೋತ್ಸವದ ತೇರ ಬೀದಿಯ ಹುಡುಗಿಯೇ ಸರಿ, ಒಂದೇ ಒಂದು ದಿನ ಯಾರಿಂದಲೂ ಪ್ರೀತಿ ಕಾಣದ ನನ್ನ ಆತ್ಮದ ತುಂಬೆಲ್ಲಾ ಆಕೆಯೇ ತುಂಬಿದ್ದಾಳೆ, ಆಕೆಯಲ್ಲಿ ದೈವೀ ಶಕ್ತಿಯಿರಬಹುದು, ಪ್ರೀತಿಯ ರುಚಿಯನ್ನೂ ಚೂರೂ ಸಹ ನೋಡಿರದ ನನ್ನಂಥಾ ಒಂಟಿ ಸಪ್ಪೆ ಮನುಷ್ಯನಲ್ಲಿ ಮತ್ತೆ ಜೀವ ತುಂಬಿದ ಅಮೃತ ದೇವತೆ ಎಂದರೆ ತಪ್ಪಾಗಲಾರದು”
“ಒಂಟಿತನಗಳನ್ನು ಎಷ್ಟು ಸಹ್ಯವಾಗಿಸಿಕೊಂಡ ಜಗತ್ತು ನನ್ನದು, ನನ್ನ ಉಸಿರಿನ ಸದ್ದನ್ನು ನಾನೆ ಕೇಳಿಕೊಳ್ಳುತ್ತಿದ್ದೇನೆ. ನಿಶ್ಯಬ್ದಗಳನ್ನು ಹರಡಿಕೊಂಡು ಮಾನಸಿಕವಾಗಿ ಶವವಾಗಿದ್ದೇನೆ, ಚಲನಶೀಲತೆಯನ್ನ ಕಳೆದುಕೊಂಡ ವಸ್ತುವಾಗಿದ್ದೇನೆ… ಅಳಬೇಕು ಅನ್ನಿಸಿದಾಗಲೆಲ್ಲಾ ಯಾರೊಬ್ಬರಾದರು ಎದೆಗೆ ನನ್ನ ಮುಖ ಒತ್ತಿಕೊಂಡಲ್ಲಿ ಗಟ್ಟಿಯಾಗಿ ಅತ್ತುಬಿಡಬೇಕು, ಒಳಗೊಳಗೆ ಮಡುಗಟ್ಟಿದ ನೋವುಗಳನ್ನೆಲ್ಲಾ ಒಮ್ಮೆಲೇ ಕರಗಿ ಹೋಗುವಂತೆ ಬಿಗಿದು ತಬ್ಬಿಕೊಳ್ಳಬೇಕು”

“ಅಷ್ಟೊಂದು ಜನರ ನಡುವೆ ಒಂಟಿಯಾಗಿ ನಿಲ್ಲಲ್ಲಿಕ್ಕೆ ನಾನೇನು ಪಾಪ ಮಾಡಿದ್ದೇನೆ, ನನಗೇಕೆ ಸಂತೆಯೂ ಬಿಕೋ ಅನ್ನಿಸುತ್ತದೆ, ಅವರ ನೋವನ್ನು ನನ್ನ ನೋವೆಂದುಕೊಂಡು, ಅವರ ಅಳುವನ್ನು ನನ್ನ ನೋವುಗಳೆಂದುಕೊಂಡು, ಅವರ ಗಾಯಗಳನ್ನು ನನ್ನ ಗಾಯಗಳೆಂದುಕೊಂಡ ಹಾಗೆ ಅವರೇಕೆ ನನ್ನ ಒಂಟಿತನವನ್ನು ಅವರ ಒಂಟಿತನವೆಂದುಕೊಳ್ಳುವುದಿಲ್ಲ, ನನ್ನ ಸೋಲನ್ನು ಅವರ ಸೋಲೆಂದುಕೊಳ್ಳುವುದಿಲ್ಲ… ಒಬ್ಬರಲ್ಲ ಇಬ್ಬರಲ್ಲ ಎಲ್ಲರೂ ಹಾಗೆ ಇದ್ದಾರೆ… ನಾನೆ ಸರಿ ಇಲ್ಲವೆಂದು ತೋರುತ್ತದೆ”
“ಯಾವುದೇ ಕ್ರಿಯೆ ಪ್ರಕ್ರಿಯೆಗಳಿಲ್ಲದ ನನ್ನ ದೇಹದ ನರಗಳನ್ನು ಆಕೆಯ ಒಂದೇ ಒಂದು ಬೆಚ್ಚನೆಯ ಸ್ಪರ್ಷ ಉಲ್ಲಾಸಿತಗೊಳಿಸಬಲ್ಲುದು. ಒಂದೇ ಒಂದು ಹನಿ ಬೆವೆತಿಲ್ಲದ ನನ್ನ ದೇಹವನ್ನು ನಾನು ನಂಬುವುದಾದರೂ ಹೇಗೆ? ಅದು ಅನಾಮತ್ತು ಬದುಕಿಕೊಂಡ ಜೀವಕೋಶಗಳ ಸಂಕೀರ್ಣ ವ್ಯವಸ್ಥೆಯಾಗಷ್ಟೇ ಇದ್ದರೇನು ಗತಿ ಅವುಗಳ ಕಾರ್ಯಕ್ಷಮತೆ ನನ್ನ ಅನುಭವಕ್ಕೆ ಬಂದು ತುಂಬಾ ದಿನಗಳೇ ಆಗಿವೆ… ನಾನು ನನ್ನ ದೇಹವನ್ನು ಆಕೆಯ ಸಹಾಯದಿಂದ ಅರ್ಥೈಸಿಕೊಳ್ಳಲೇಬೇಕಿದೆ, ಹೆಣ್ಣು ಮಾತ್ರ ನನ್ನ ಗಂಡಸುತನವನ್ನು ಜಾಗ್ರತವಾಗಿಡುವವಳು.. ಅದನ್ನು ಕೇವಲ ಕಾಮವೆಂದುಕೊಂಡು ನನ್ನ ಬಗ್ಗೆ ಅಸಹ್ಯ ಪಟ್ಟುಕೊಂಡಲ್ಲಿ ಅಥವಾ ಮುಖ ಸಿಂಡರಿಸಿಕೊಂಡಲ್ಲಿ ನಾನೇನು ಹೇಳುವುದು…??? ಕಾಮ, ಮೈಥುನ, ಒಲವು ಒಂದಕ್ಕೊಂದು ಕೊಂಡಿ ಬೆಸೆದುಕೊಂಡು ಮನುಷ್ಯರ ನಡುವೆ ಕಟ್ಟಿದ ಹೂವುಗಳ ಸೇತುವೆಯೇ ಆಗಿದೆ. ಅವುಗಳ ಘಮಲನ್ನು ಆಸ್ವಾದಿಸದವನು ಮನುಷ್ಯನಾಗಿರಲು ಸಾಧ್ಯವಿಲ್ಲ”
ರೂಮಿನ ಫ್ಯಾನು ಕೀರಲು ದನಿಯಲ್ಲೇ ತಿರುಗುತ್ತಿತ್ತು. ಅವನಿಗದು ಕೇಳಿಸಿತೋ ಇಲ್ಲವೋ! ತನ್ನ ಪಾಡಿಗೆ ತಾನು ಏನೆಲ್ಲಾ ಯೋಚಿಸುತ್ತಿದ್ದಾನೆ.
ಆಕೆಯ ಕೋಮಲವಾದ ಮುಖದ ಚಿತ್ರ ಕಣ್ಮುಂದೆ ಸುಳಿಯುತ್ತಿದೆ, ಆಕೆ ನಗುತ್ತಿದ್ದಾಳೆ, ಕೋಲ್ಮಿಂಚಿನಂಥಾ ಕಣ್ಣುಗಳನ್ನು ಮಿಟುಕಿಸುತ್ತಿದ್ದಾಳೆ, ತುಟಿ ಕಚ್ಚಿ ಆಕೆ ಪೋಲಿಯಾಗಿ ಕೈಸನ್ನೆ ಮಾಡಿ ಕರೆದ ಹಾಗಾಯ್ತು…
ಏನಾದರಾಗಲಿ ಅವಳನ್ನು ಮತ್ತೇ ನೋಡಲೇಬೇಕೆಂದು ಮನಸ್ಸಿನಲ್ಲಿ ಅಂದುಕೊಂಡ. ಮೇಜಿನ ಮೇಲೆ ಬಾಟಲ್ಲಿನಲ್ಲಿದ್ದ ನೀರನ್ನು ಗಟ ಗಟ ಎಂದು ಅವಸರವಾಗಿ ಕುಡಿಯುತ್ತಾ ಚೆಲ್ಲಿಕೊಂಡು ಅಂಗಿ ಮೇಲೆ ಚೆಲ್ಲಿಕೊಂಡ, ಥೂ… ಹಾಳಾದ್ದು ಎಂದು ಕೊಡವಿದ. ಅಂಗಿಯನ್ನು ಬದಲಿಸುವ ವ್ಯವಧಾನವೂ ಇರಲಿಲ್ಲ.
ಗಾಡಿಯ ಚಾವಿಯನ್ನು ಹುಡುಕಿದ, ನೆನ್ನೆ ಹಾಕಿದ್ದ ಪ್ಯಾಂಟನ್ನು ಲ್ಯಾಪ್ ಟಾಪಿನ ಬ್ಯಾಗನ್ನೂ, ಟಿ.ವಿಯ ಹತ್ತಿರ, ಮೇಜಿನ ಮೇಲೆಲ್ಲಾ ಬೆದಕಾಡಿ ಕೊನೆಗೆ ಗಾಡಿಯಲ್ಲೇ ಬಿಟ್ಟದ್ದು ನೆನಪಾಯ್ತು, ಪರ್ಸನ್ನು ಹಿಂದಿನ ಜೇಬಿಗಿರಿಸಿ ,ರೇ ಬ್ಯಾನ್ ಗ್ಲಾಸನ್ನು ಹಾಕಿಕೊಂಡು ಹೊರಟ…
ಕಡಿಮೆ ಎಂದರೂ ಮೂರರಿಂದ ನಾಲ್ಕು ತಾಸಾದರೂ ಬೇಕು, ಸಂಜೆ ಹೊತ್ತಿಗೆ ಅಲ್ಲಿಗೆ ತಲುಪಬೇಕು…
ತಾನಿರುವ ಸ್ಥಳದಿಂದ ಸುಮಾರು ನೂರಾಮೂವತ್ತು ಕಿ.ಮಿ ಗಳು, ಎಂಭತ್ತು ಚಿಲ್ಲರೆ ಕಿ.ಮಿ ವರೆಗೆ ರೋಡು ಚೆನ್ನಾಗಿದೆ, ಅಲ್ಲಿಂದ ಮುಂದಕ್ಕೆ ಕೆಟ್ಟ ದಾರಿ. ಗಾಡಿ ಮುಂದಕ್ಕೆ ಸಾಗಿದಂತೆಲ್ಲಾ ಮರಗಳು ಹಿಂದಕ್ಕೆ ವೇಗವಾಗಿ ಹೋಗುತ್ತಿರುವಂತೆ ಅನ್ನಿಸಿತು.
ಸೂರ್ಯನಿಗೋ ಮಂಪರು ಏರಿದಂತಾಗಿ ಕಣ್ಣುಗಳನ್ನು ಮುಚ್ಚಿ ಅದಾಗಲೇ ಮಬ್ಬುಗತ್ತಲು ಆವರಿಸಿತ್ತು, ಥಂಡಿ ಗಾಳಿ ಕಳ್ಳಬೆಕ್ಕಿನಂತೆ ಒಂದೊಂದೇ ಹೆಜ್ಜೆಗಳನ್ನಿಕ್ಕಿಕೊಂಡು ಬಂದು ಅವನನ್ನು ಅವಳತ್ತ ಹೋಗು ಎನ್ನುವಂತೆ ನೂಕಿದಂತಾಯ್ತು. ಮನೆಯಲ್ಲಿ ಒಂದೇ ಒಂದು ಲೈಟು, ಕಾಂಪೌಂಡಿನ ಒಳಗೆ ಅಷ್ಟಾಗಿ ಬೆಳಕಿರಲಿಲ್ಲ. ಗೇಟನ್ನು ಕಿಂಚಿತ್ತು ಸದ್ದಾಗದಂತೆ ತೆರೆದು ಉಸಿರು ಬಿಗಿ ಹಿಡಿದು ನಡೆದ.
ಬಾಗಿಲನ್ನು ಎರಡು ಮೂರು ಬಾರಿ ಬಡಿಯುತ್ತಲೇ ತೆರೆಯಿತು. ಆಕೆಯ ಮುಖ ಭಯದಿಂದಲೂ ಆಶ್ಚರ್ಯದಿಂದಲೂ ಖುಶಿಯಿಂದಲೂ ತುಂಬಿ ಹೋಯ್ತು..
“ಬರೋ ಮುಂಚೆ ಒಂದು ಕಾಲ್ ಮಾಡೋದು ತಾನೆ!”
“ಸಡನ್ನಾಗಿ ಅನ್ನಿಸ್ತು ಬಂದೆ ಅಷ್ಟೆ, ಏನಾದ್ರು ಪ್ರಾಬ್ಲಮ್ಮಾ?”
“ಇಲ್ಲ ಹಾಗೇನಿಲ್ಲ, ಒಳಗಡೆ ಬನ್ನಿ,.. ಮುಖ ತೊಳ್ಕೊಂಡು ಫ್ರೆಶ್ ಆಗಿ ಅಷ್ಟೊತ್ತಿಗೆ ಕಾಫಿ ಮಾಡ್ತಿನಿ”
ಕರ್ಚೀಪಿನಿಂದ ಮುಖ ಒರೆಸಿಕೊಳ್ಳುತ್ತಾ ಒಮ್ಮೆ ಜೋರಾಗಿ ಉಸಿರು ಬಿಟ್ಟ.
ಮುಖ ತೊಳೆದುಕೊಂಡು ಬಂದವನೇ ಅವಳ ಕೈಯಲ್ಲಿದ್ದ ಕಾಫಿಯನ್ನು ಕಸಿದುಕೊಂಡು ಟೇಬಲ್ಲಿನ ಮೇಲಿಟ್ಟು, ಆಕೆಯ ಕಣ್ಣುಗಳನ್ನೇ ದಿಟ್ಟಿಸುತ್ತಾ ನಿಂತ. ಫ್ಯಾನು ಗಾಳಿಗೆ ಮುಂಗೂದಲು ಆಕೆಯ ತುಟಿಗಳನ್ನು ಪದೇ ಪದೆ ಸ್ಪರ್ಶಿಸುತ್ತಾ ಓಲಾಡುತಿತ್ತು, ತೋರು ಬೆರಳಿಂದ ಸರಿಸಿ ಹಣೆಯನ್ನು ಹುಬ್ಬನ್ನು ಮುತ್ತಿಟ್ಟು, ಗಟ್ಟಿಯಾಗಿ ತಬ್ಬಿಕೊಂಡ.
ಅವಳ ತೊಡೆ ಮೇಲೆ ತಲೆಯಿಟ್ಟು ಮುದುಡಿಕೊಂಡು ಮಲಗಿದ. ಕೃಶಗೊಂಡ ಗೋಡೆಗಳು ಅವರಿಬ್ಬರ ಮಾತುಗಳನ್ನಾಗಲಿ ಝೀರೊ ಬಲ್ಬಿನಡಿಯಲ್ಲಿ ಮೊಬ್ಬಾಗಿ ಕಾಣುವ ಅವರ ಮುಖಗಳನಾಗಲಿ ನೋಡಲಿಲ್ಲ,
ಕಿಡಕಿಯಿಂದ ಹೊರಗೆ ಹೆಡ್ ಲೈಟು ಹಾಕಿಕೊಂಡು ಜೋರಾಗಿ ಓಡಾಡುತಿದ್ದ ವಾಹನಗಳು ಮಿಂಚುಹುಳುಗಳಂತೆ ಕಂಡವು. ಮೊಬ್ಬುಗತ್ತಲೆಯೇ ತುಂಬಿಕೊಂಡಿದ್ದ ಕೋಣೆಯ ಗೋಡೆಗಳ ಮೇಲೆ ಒಣಕಲು ಮರಗಳು, ಮನುಷ್ಯರ ಥರಹದ ವಿಚಿತ್ರ ಆಕೃತಿಗಳು ಮೂಡಿತ್ತಲೇ ಇದ್ದವು,, ಕಿಡಕಿಯ ಸರಳುಗಳನ್ನು ದಾಟಿ ಬಂದ ಬೆಳಕಿನ ಎದುರು ಕತ್ತಲು ಪ್ರತಿಭಟಿಸುವಂತಿರಲ್ಲ ಹೊರಗಿನ ಬೆಳಕು ಅವನ ಕಣ್ಣು ಕುಕ್ಕಿದಂತಾಯ್ತು. ಕೈ ಅಡ್ಡಲಾಗಿ ಹಿಡಿದು
“ಕರ್ಟನ್ ಹಾಕ್ಲ, ಬೆಳಕು ಮುಖಕ್ಕೆ ರಾಚುತ್ತೆ.. ಒಂಥರಾ ಇರ್ರಿಟೇಷನ್ನು”
ಅವಳು ಹುಂ ಎಂದು ತಲೆ ಅಲ್ಲಾಡಿಸಿ, ಬಿಚ್ಚಿದ್ದ ಕೂದಲನ್ನು ಮುಡಿ ಕಟ್ಟಿದಳು.
ಕಿಡಕಿಯ ಪರದೆ ಸರಿಸಿದ ಕೂಡಲೆ ಕತ್ತಲಿನ ಜೊತೆ ಗಾಢ ಮೌನವೂ ಆವರಿಸಿಕೊಂಡಿತು. ಒಬ್ಬರಿಗೊಬ್ಬರು ಕಾಣಿಸುತ್ತಿಲ್ಲ! ಏನು ಮಾತನಾಡಬೇಕೆಂದು ತಿಳಿಯುತ್ತಲೂ ಇಲ್ಲ! ಕತ್ತಲಿಗೆ ಮತ್ತು ಮೌನಕ್ಕೆ ಆತ್ಮೀಯತೆಯನ್ನು ಇನ್ನಷ್ಟು ಮತ್ತಷ್ಟು ಗಾಢವಾಗಿಸುವ ಕಲೆ ಹುಟ್ಟಿನಿಂದಲೇ ಸಿದ್ದಿಸಿದೆ ಅನ್ನಿಸುತ್ತದೆ.
ಅವಳ ಮುಖದ ಮೇಲೆ ಬಲಗೈ ಆಡಿಸುತ್ತಾ ಆಕೆಯ ಚಿತ್ರವನ್ನು ಬೆಳಕಿಗಿಂತ್ ಸ್ಪಷ್ಟವಾಗಿ ಕಂಡುಕೊಂಡ.
ಆಕೆ ಧೀರ್ಘ ಉಸಿರು ತೆಗೆದುಕೊಳ್ಳುವ ಮತ್ತು ಬಿಡುವ ಸದ್ದು ಕೋಣೆಯ ಮೂಲೆ ಮೂಲೆಗಳನ್ನೆಲ್ಲಾ ಆವರಿಸಿಕೊಂಡಿತು…

****

ಯಾವುದೋ ಗುಡಿಯಲ್ಲಿ ಹಾಕಿದ್ದ ಭಕ್ತಿಗೀತೆ ಕರ್ಣಪಟಲದ ಮೇಲೆ ನಗಾರಿ ಹೊಡೆದಂತೆ ಕೇಳಿಸ್ತಿತ್ತು, ನಿದ್ದೆಯಿಂದ ಎಚ್ಚರಾದ. ಮೈಯೆಲ್ಲಾ ನೋವು ಒಂಥರಾ ಹಿತವಾದ ಬೆಳಗು ಅನ್ನಿಸಿತು.
ಹೊರಳುತ್ತಾ ಹಾಸಿಗೆಯಲ್ಲಿ ಅವಳನ್ನು ತಬ್ಬಲು ತಡಕಾಡಿದ, ಹಾಸಿಗೆ ಖಾಲಿ ಇತ್ತು.
“ಗುಡ್ ಮಾರ್ನಿಂಗ್” ಎಂದು ನಗುತ್ತಾ ಚಹಾ ಹಿಡಿದು ಬಂದಳು. ಅದಾಗಲೇ ಅವಳು ಸ್ನಾನ ಮಾಡಿ ಕೂದಲಿಗೆ ಟವೆಲ್ ಕಟ್ಟಿಕೊಂಡಿದ್ದಳು. ತೆಳು ಬೆಳಕಲ್ಲಿ ಆಕೆಯ ಮುಖ ಫಳ ಫಳನೆ ಹೊಳೆಯುತ್ತಿತ್ತು.
“ಟೈಮೆಷ್ಟಾಯ್ತು” ಎಂದು ಹಾಸಿಗೆ ಮೇಲೆ ಮಲಗಿ ನಿದ್ದೆಗಣ್ಣಲ್ಲಿ ಕೇಳಿದ. ಹಾಲ್ ನಲ್ಲಿದ್ದ ಗಡಿಯಾರವನ್ನು ತೋರಿಸುತ್ತ ಏಳುವರೆ ಆಗ್ತಾ ಬಂದಿದೆ ಎಂದಳು.
ಹಾಸಿಗೆ ಮೇಲಿದ್ದವನೇ ಥಟ್ಟನೆ ಎದ್ದು ಕೂತು “ಅಯ್ಯೊ ಇವತ್ತು ಆಫೀಸಲ್ಲಿ ಮೀಟಿಂಗ್ ಇತ್ತು ಅಟೆಂಡ್ ಮಾಡ್ಲಿಲ್ಲ ಅಂದ್ರೆ ಮುಗಿತು ಕಥೆ”
“ಸೀದಾ ಬಾತ್ ರೂಮಿಗೆ ಹೋಗಿ ಸ್ನಾನ ಮಾಡಿ, ನೀರು ರೆಡಿ ಇದೆ” ಎಂದು ಟವಲ್ಲನ್ನು ಕೈಗಿತ್ತಳು.
“ಬಾ ನೀನೆ ಸ್ನಾನ ಮಾಡ್ಸು”
“ಟೈಮಾಯ್ತು ಅಂತಿಯಾ… ಹೋಗು, ಮತ್ತೆ ಬರ್ತೀಯಲ್ಲ ಆಗ ಚೆಂದ ಸ್ನಾನ ಮಾಡಿಸ್ತಿನಿ” ಅನ್ನುತ್ತಲೇ ಅವನನ್ನು ಬಾತ್ ರೂಮಿಗೆ ನೂಕಿದಳು.
ತಾನು ಬ್ಯಾಗಿನಲ್ಲಿ ತಂದಿದ್ದ ಬಟ್ಟೆಗಳನ್ನಾಗಲೇ ಧರಿಸಿ ಸಿದ್ಧವಾಗಿ, ಕನ್ನಡಿಯಲ್ಲಿ ಎರಡು ಮೂರು ಬಾರಿ ನೋಡಿಕೊಳ್ಳುತ್ತಾ ತಲೆ ಬಾಚಿಕೊಂಡ.
ಪರ್ಸನ್ನೊಮ್ಮೆ ನೋಡಿ ಅದರಲ್ಲಿದ್ದ ಐದೂ ಸಾವಿರ ರೂಪಾಯಿಗಳಲ್ಲಿ ಮುನ್ನೂರನ್ನು ಮಿಕ್ಕಿಸಿಕೊಂಡು ಉಳಿದಿದ್ದನ್ನು ಅವಳ ಕೈಗಿತ್ತ.
“ಮತ್ತೆ ಯಾವಾಗ್ ಬರ್ತಿನೋ ಏನೋ ಗೊತ್ತಿಲ್ಲ! ನಿನ್ನೊಟ್ಟಿಗಿದ್ದು ಎಷ್ಟು ಖುಶಿಯಾಗಿದೆ ಅಂದ್ರೆ, ಇದೇ ಖುಷಿಯಲ್ಲಿ ಎಷ್ಟೋ ದಿನಗಳನ್ನು ಕಳೆದುಬಿಡಬಹುದು”
ಅವಳು ಸಪ್ಪಗೆ ನಿಂತಿದ್ದಳು,
ಒಬ್ಬರನ್ನೊಬ್ಬರು ಗಟ್ಟಿಯಾಗಿ ಅಪ್ಪಿಕೊಂಡರು, ಪರಸ್ಪರ ಚುಂಬಿಸಿದರು,
“ನಾನು ಮತ್ತೆ ಕಾಲ್ ಮಾಡ್ತಿನಿ” ಎಂದು ಗಾಡಿಯನ್ನು ಚಾಲು ಮಾಡಿ ಹೊರಟ.
ಅವನು ಮರೆಯಾಗುವವರೆಗೂ ಇವಳು ನೋಡುತ್ತಲೇ ಇದ್ದಳು
 

‍ಲೇಖಕರು G

April 3, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. bharathi b v

    ಎಷ್ಟು ಚೆಂದ ಬರ್ದಿದೀಯ ಮಗಾ … ಕವಿತೆಯಷ್ಟೇ ಚೆನ್ನಾಗಿ…..

    ಪ್ರತಿಕ್ರಿಯೆ
  2. guru sullia

    ಕೆಲವೇ ತುಮುಲಗಳನ್ನು ಸರಳವಾಗಿ ಬಿಂಬಿಸಿರುವ ಚಂದದ ಕಥೆ..

    ಪ್ರತಿಕ್ರಿಯೆ
  3. Bharath M V

    ಶಹಭಾಷ್ ಮಗ…. ಒಳ್ಳೆ ಮಜ ಬಂತು ಓದಿ 🙂

    ಪ್ರತಿಕ್ರಿಯೆ
  4. vageesha JM

    ನಿನ್ನ ಬರವಣಿಗೆಯ ಶೈಲಿ ಅದ್ಬುತ ಪ್ರವರ್, ಚಿಕ್ಕ ಚಿಕ್ಕ ವಸ್ತುವನ್ನು ಅದರದ್ದೆ ಗಾತ್ರದ ದೊಡ್ದ ರೂಪಕಕ್ಕೆ ಪಾಕ ಹೊಯ್ಯುವ ಕಲೆ ನಿನಗಿದೆ.. ಹಾಗಾಗಿಯೇ ಅಯ್ಧ ಕಥಾ ವಸ್ತು ಕೊನೆಗೆ ಎಲ್ಲಿಯೂ ಮುಟ್ಟದಿದ್ದರೂ, ಎನನ್ನೋ ಹೇಳುವಂತೆ ಭಾಸವಾಗಿ ಎನು ಹೇಳದೆ ಹೋದರೂ.. ಓದಿಸಿಕೊಂಡು ಹೋಗುತ್ತದೆ..
    example…
    “ಒಂಟಿತನಗಳನ್ನು ಎಷ್ಟು ಸಹ್ಯವಾಗಿಸಿಕೊಂಡ ಜಗತ್ತು ನನ್ನದು, ನನ್ನ ಉಸಿರಿನ ಸದ್ದನ್ನು ನಾನೆ ಕೇಳಿಕೊಳ್ಳುತ್ತಿದ್ದೇನೆ. ನಿಶ್ಯಬ್ದಗಳನ್ನು ಹರಡಿಕೊಂಡು ಮಾನಸಿಕವಾಗಿ ಶವವಾಗಿದ್ದೇನೆ, ಚಲನಶೀಲತೆಯನ್ನ ಕಳೆದುಕೊಂಡ ವಸ್ತುವಾಗಿದ್ದೇನೆ… ಅಳಬೇಕು ಅನ್ನಿಸಿದಾಗಲೆಲ್ಲಾ ಯಾರೊಬ್ಬರಾದರು ಎದೆಗೆ ನನ್ನ ಮುಖ ಒತ್ತಿಕೊಂಡಲ್ಲಿ ಗಟ್ಟಿಯಾಗಿ ಅತ್ತುಬಿಡಬೇಕು, ಒಳಗೊಳಗೆ ಮಡುಗಟ್ಟಿದ ನೋವುಗಳನ್ನೆಲ್ಲಾ ಒಮ್ಮೆಲೇ ಕರಗಿ ಹೋಗುವಂತೆ ಬಿಗಿದು ತಬ್ಬಿಕೊಳ್ಳಬೇಕು”
    ಸಂಬಂಧಗಳ ಸಂಕೀರ್ಣತೆಯನ್ನು ವಿವರಿಸ ಹೊರತಟಂತಿರುವ.. ಬರವಣಿಗೆ ಶೈಲಿಯಿಂದ ಇಷ್ಟ ಅಯಿತು..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: