ಸಂಧ್ಯಾರಾಣಿ ಕಾಲಂ : ಸಂಜಯ್ ದತ್ ಮನಸ್ಸಿನಲ್ಲೊಬ್ಬ ಬೆಳೆಯಲೊಲ್ಲದ ಬಾಲಕ

28 ಮಾರ್ಚ್, 2013 …. ತನ್ನ ಅಗಾಧ ದೇಹವನ್ನು ಕುಗ್ಗಿಸಿಕೊಂಡು ಸಂಜಯ್ ದತ್ ನಡೆದು ಬರುತ್ತಿದ್ದ. ನಡೆಯಲ್ಲಿ ಭಾರ, ಕಣ್ಣಲ್ಲಿ ದಿಗ್ಭ್ರಮೆ – ಹೌದು ದಿಗ್ಭ್ರಮೆ …. ತನ್ನ ಅಪರಾಧದ ಅರಿವೇ ಅವನಿಗಿರಲಿಲ್ಲ. ತಾನು ಮಾಡಿದ ತಪ್ಪಿಗೆ ಇದ್ಯಾಕೆ ಇಷ್ಟು ದೊಡ್ಡ ಶಿಕ್ಷೆ ಎನ್ನುವಂತೆ ಅವನು ಜಗತ್ತನ್ನು ನೋಡುತ್ತಿದ್ದ. ಪೇಜ್ ೩ ಪಾರ್ಟಿಗಳಲ್ಲಿ, ಝಣ ಝಣಾ ಮಳೆ ಸುರಿವ ಜಾಹೀರಾತು ಚಿತ್ರಗಳಲ್ಲಿ ಅವನಿಗಂಟಿ ಹಕ್ಕಿನಿಂದ, ವೈಭವದಿಂದ ನಿಲ್ಲುತ್ತಿದ್ದ ಅವನ ಪತ್ನಿ ಅವನ ಜೊತೆಯಲ್ಲಿರಲಿಲ್ಲ. ಜೊತೆಯಲ್ಲಿ ನಡೆದು ಬಂದದ್ದು ಅವನ ಪಕ್ಕದಲ್ಲಿ ಗುಬ್ಬಿಯಂತೆ ಕಾಣುತ್ತಿದ್ದ ಅವನ ತಂಗಿ ಪ್ರಿಯಾ. ಸಂಜಯ್ ದತ್ ಅಲ್ಲಿದ್ದ ಖುರ್ಚಿಯ ಮೇಲೆ ಕುಳಿತ, ಮಾತನಾಡಲು ಪ್ರಯತ್ನಿಸಿದ .. ಆಗಲಿಲ್ಲ. ತಂಗಿಯನ್ನು ನೋಡಿದ, ತನ್ನ ಖುರ್ಚಿ ಅವಳ ಕಡೆ ಜರುಗಿಸಿಕೊಂಡು ಕೂತ … ಮಾತನಾಡಿದ … ಅವನ ಮಾತಿನಲ್ಲಿ ಅವನ ಮಾತೆಷ್ಟು, ಕ್ಯಾಮೆರಾಕ್ಕಾಗಿ ಆಡಿದ ಮಾತೆಷ್ಟು ಗೊತ್ತಾಗಲಿಲ್ಲ … ಆದರೆ ಮಾತಾಡುತ್ತಾ ಮಾತಾಡುತ್ತ ತನ್ನ ಗುಬ್ಬಿಯಂತಹ ತಂಗಿಯ ಹೆಗಲು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತಾಗ ಆ ಇಡೀ ದೃಶ್ಯ ಒಂದು ವಿಡಂಬನೆಯಂತೆ ಕಾಣುತ್ತಿತ್ತು..
ಸಂಜಯ್ ದತ್ ಅಥವಾ ಎಲ್ಲರೂ ಆತನನ್ನು ಈಗಲೂ ಕರೆಯುವ ’ಸಂಜೂ ಬಾಬ’ – ಒಂದು ಮಗು ಒಂದಿಷ್ಟು ಅದೃಷ್ಟ, ಒಂದಿಷ್ಟು ಕಂಬನಿ, ಅಪಾರ ಪ್ರೀತಿ, ಪ್ರತಿ ತಪ್ಪಿಗೂ ಒಂದು ಮಾಫಿ, ಪ್ರತಿ ಕಣ್ಣೀರಿಗೂ ಒಂದು ಅವಕಾಶ ಇವೆಲ್ಲವನ್ನು ಮಿಶ್ರ ಮಾಡಿ, ಒಂದು ಬೊಂಬೆ ತಯಾರಿಸಿದರೆ ಅದು ಸಂಜಯ್ ದತ್.
ಅಮ್ಮ ಒಂದು ಕಾಲದಲ್ಲಿ ಕೇವಲ ಸೌಂದರ್ಯದಿಂದಲ್ಲದೇ ತನ್ನ ಪ್ರತಿಭೆಯಿಂದ ರಾಜ್ ಕಪೂರ್ ನಂತಹ ರಾಜ್ ಕಪೂರ್ ನನ್ನು ಆಳಿದ ನರ್ಗೀಸ್. ಆದರೆ ವರ್ಷಗಳ ಕಾಲ ಆತನ ಮನದನ್ನೆಯಾಗಿದ್ದರೂ ಪತ್ನಿಯಾಗದ ನರ್ಗಿಸ್. ಆದರೆ ಆ ಸಂಬಂಧಕ್ಕೆ ಎಂದಿಗೂ ಮಾನ್ಯತೆ ಸಿಗದು ಎಂದು ಅರಿವಾದಾಗ, ಭ್ರಮ ನಿರಸನಗೊಂಡ ಅವಳ ಬಾಳಿಗೆ ಬಂದವನು ಸುನಿಲ್ ದತ್. ಎಂದೂ ತನ್ನದಾಗದು ಎಂದುಕೊಂಡ ಸಂಸಾರ, ಗಂಡ, ಮಕ್ಕಳು ತನ್ನ ಜಗತ್ತಿಗೆ ಬಂದಾಗ ಎರಡೂ ಕೈಗಳಲ್ಲಿ ಅದನ್ನು ಬಾಚಿ ಎದೆಗಪ್ಪಿಕೊಂಡವಳು. ಎರಡನೆ ಮಗುವಾಗಿ ಅವಳ ಜೀವನ ಪ್ರವೇಶಿಸಿದ ಸಂಜು ಬಾಬ ಅವಳ ಜಗತ್ತಾಗಿ ಹೋದ. ಅವಳ ಅತಿ ಮುದ್ದು ಅವನನ್ನು ಹಂತ ಹಂತವಾಗಿ ಹಾಳು ಮಾಡುತ್ತಿತ್ತು. ಮತ್ತು ಸಂಜು ಇಡೀ ಜಗತ್ತು ಕಡ್ಡಾಯವಾಗಿ ತನ್ನ ತಾಯಿಯಂತೆಯೇ ತನ್ನನ್ನು ಎದೆಗಪ್ಪಿಕೊಂಡು, ತನ್ನೆಲ್ಲಾ ತಪ್ಪುಗಳನ್ನು ಮರೆಯಬೇಕು ಎಂದು ಬೆಳೆಯುತ್ತಾ ಹೋದ. ಅನೇಕ excess ಗಳ ನಡುವೆ, ಯಾವುದೇ ನಿಯಂತ್ರಣವಿಲ್ಲದ ಯಾವುದೇ ಮಗು ಹಾಳಾಗುವ ಹಾಗೆ ಇವನೂ ಹಾಳಾಗುತ್ತಾಹೋದ. ಆದರೆ ಯಾವಾಗ ಅವನಿಗೆ ದಂಡನೆ ಸಿಗಬೇಕಿತ್ತೋ ಆಗೆಲ್ಲ ಅವನಿಗೆ ಕ್ಷಮೆ ಸಿಗುತ್ತಾ ಹೋಯಿತು. ಹೀಗಾಗಿ ಅವನು ತನ್ನ ಕ್ರಿಯೆಗಳಿಗೆ ಜವಾಬ್ದಾರಿ ಹೊರುವುದನ್ನು ಕಲಿಯಲೇ ಇಲ್ಲ.
ಇಲ್ಲೇ ಇದ್ದರೆ ಹುಡುಗ ಹಾಳುಬಿದ್ದು ಹೋಗುತ್ತಾನೆಂದು ತಂದೆ ಸುನಿಲ್ ದತ್ ಅವನನ್ನು ಬೋರ್ಡಿಂಗ್ ಶಾಲೆಗೆ ಸೇರಿಸುತ್ತಾನೆ. ಅವನನ್ನು ಬಿಟ್ಟಿರಲಾಗದ ನರ್ಗಿಸ್ ಮನಸ್ಸು ಬಂದಾಗ ಅಲ್ಲಿವರೆಗೂ ತಾನೆ ಗಾಡಿ ಓಡಿಸಿಕೊಂಡು ಹೋಗಿ ಮಗನನ್ನು ನೋಡಲು ಹಟ ಮಾಡಿ, ಅನುಮತಿ ಸಿಗದಾಗ ಗೇಟ್ ಬಳಿ ನಿಂತಿದ್ದು ಕಣ್ಣೀರಿಡುತ್ತಾ ಬರುತ್ತಾಳೆ. ಮಗನ ಕಣ್ಣಿನಲ್ಲಿ ಅಪ್ಪ ರಾಕ್ಷಸ, ಅಮ್ಮ ದೇವತೆಯಂತೆ ಕಾಣತೊಡಗುತ್ತಾಳೆ. ಆದರೆ ಬೋರ್ಡಿಂಗ್ ಶಾಲೆ ಸಂಜುವನ್ನು ಸುಧಾರಿಸುವ ಬದಲು ಅವನ ಸ್ವೇಚ್ಛೆಗೆ ಮತ್ತಷ್ಟು ಅಣಿಯಾಗುವಂತೆ ಮಾಡುತ್ತದೆ. ಶಾಲೆಯ ಹುಡುಗ ಮಾರಿಜುವಾನ ಸೇದುತ್ತಿದ್ದಾಗ ಸಿಕ್ಕಿ ಬೀಳುತ್ತಾನೆ. ಅತಿ ಮುದ್ದಿನಿಂದ ಹಾಳಾಗುವ ದಾರಿ ಹಿಡಿದಿದ್ದ ಹುಡುಗ ಪೂರ್ತಿ ಹಾಳಾಗಿ ಮುಂಬೈಗೆ ವಾಪಸ್ಸಾಗುತ್ತಾನೆ.
ಹಣ, ಸುತ್ತ ಮುತ್ತಲಿನ ಹೌದಪ್ಪ ಗಳು, ಬಾಂಬೆಯ ಮಾದಕ ಫಿಲ್ಮಿ ಜಗತ್ತು, ಅಲ್ಲಿನ ಹೈ ಫೈ ಸೊಸೈಟಿ …. ಹಾದಿತಪ್ಪಲು ಹೇಳಿ ಮಾಡಿಸಿದ ಹಾಗಿತ್ತು. ಆಗ ಇವನಿಗೆ ಜೊತೆಯಾದವಳು ಇಂದು ಅಂಬಾನಿ ಮನೆತನದ ಕಿರಿಯ ಸೊಸೆಯಾಗಿರುವ ಟೀನಾ ಮುನೀಮ್, ಹಾಗೇ ಜೊತೆ ಜೊತೆಯಲ್ಲಿ ರತಿ ಅಗ್ನಿ ಹೋತ್ರಿ, ಸಾಲದು ಎನ್ನುವಂತೆ ಹಿಂದಿ ಚಿತ್ರರಂಗದ ಮಿಸ್.ಮಾದಕತೆ ರೇಖಾ! ಜೊತೆ ಜೊತೆಗೆ ಡ್ರಗ್ಸ್ …. ಇವನ ಡ್ರಗ್ಸ್ ಹುಚ್ಚು ಎಲ್ಲಿಗೆ ಹೋಯಿತೆಂದರೆ ಒಮ್ಮೆ ತಂದೆ ಸುನಿಲ್ ದತ್ ಇವನನ್ನು ಕೂರಿಸಿಕೊಂಡು ಮಾತನಾಡುತ್ತಿದ್ದ. ಇವನ ನಶೆ ಯಾವ ಮಟ್ಟಕ್ಕಿತ್ತು ಅಂದರೆ ಇವನ ಕಣ್ಣಿಗೆ ಎದುರಲ್ಲಿ ಕುಳಿತಿದ್ದ ತಂದೆಯ ಮುಖ ಮೇಣದ ಬತ್ತಿಯಂತೆ ಕರಗುತ್ತಿರುವಂತೆ ಕಾಣಿಸ ತೊಡಗಿತು, ಓಡಿ ಹೋದ ಸಂಜೂ ಎರಡೂ ಕೈಗಳಲ್ಲಿ ಅಪ್ಪನ ಮುಖ ಕರಗದಂತೆ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಾನೆ! ಅದು ತಂದೆಯ ಪಾಲಿಗೆ ಕೊನೆಯ ಎಚ್ಚರಿಕೆಯ ಗಂಟೆ.
ಹುಡುಗನನ್ನು ಡಿ ಅಡಿಕ್ಷನ್ ಗೆ ಅಂತ ವಿದೇಶಕ್ಕೆ ಕಳುಹಿಸಲಾಗುತ್ತದೆ. ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗಿ, ಮತ್ತೆ ಮಿಯಾಮಿಯ ಮತ್ತೊಂದು ರಿ ಹ್ಯಾಬಿಟೇಶನ್ ಸೆಂಟರ್ ಸೇರಿ ಹೇಗೋ ನೇರ್ಪಾಗಿ ಹುಡುಗ ವಾಪಸ್ಸು ಬರುತ್ತಾನೆ. ಅವನ ಮೊದಲ ಚಿತ್ರ ರಾಕಿ, ಅತಿ ಭರವಸೆಯ ಚಿತ್ರ … ಆದರೆ ಅಷ್ಟರಲ್ಲಿ ಕ್ಯಾನ್ಸರ್ ಕಾಯಿಲೆಗೆ ತುತ್ತಾದ ನರ್ಗೀಸ್ ಇಲ್ಲವಾಗಿರುತ್ತಾಳೆ. ತನ್ನ ಚಿತ್ರದ ಮೊದಲನೆಯ ಪ್ರದರ್ಶನಕ್ಕೆ, ಮೊದಲ ಸಾಲಿನ ನಡುವೆ ಒಂದು ಖಾಲಿ ಖುರ್ಚಿಯನ್ನು ಅಮ್ಮನಿಗಾಗಿ ಖಾಲಿ ಬಿಟ್ಟು ಪ್ರದರ್ಶನ ನಡೆಯುವಂತೆ ನೋಡುತ್ತಾನೆ. ಆ ಖಾಲಿ ಖುರ್ಚಿ ಅಲ್ಲಿನ ವಾಹ್ ವಾಹ್, ವೆರಿ ಗುಡ್, ’ಮಾಶಾ ಅಲ್ಲ’ ಗಳ ನಡುವೆ, ಅವನ ಇಡೀ ಜೀವನದ ಟ್ರೈಲರ್ ನಂತೆ ಖಾಲಿಯೇ ಉಳಿಯುತ್ತದೆ.

ಮೊದಮೊದಲು ಈ ನಶೆಯ ಹುಡುಗನನ್ನು ಚಿತ್ರಕ್ಕೆ ತೆಗೆದುಕೊಳ್ಳಲು ಹಿಂಜರಿದಿದ್ದ ನಿರ್ಮಾಪಕ, ನಿರ್ದೇಶಕರು ಆಮೇಲೆ ಇವನ ಹಟಕ್ಕೆ, ಕೆಲಸದ ನಿಯತ್ತಿಗೆ ಸೋತು ಇವನಿಗೆ ಕೆಲಸ ಕೊಡಲು ಮುಂದೆ ಬರುತ್ತಾರೆ. ಮಹೇಶ್ ಭಟ್ ನ ’ನಾಮ್’ ಚಿತ್ರದಲ್ಲಿ ಇವನ ನಟನೆ ಎಲ್ಲರ ಗಮನ ಸೆಳೆಯುತ್ತದೆ. ಆ ಚಿತ್ರದಲ್ಲಿ ಪಂಕಜ್ ಉಧಾಸ್ ಹಾಡಿರುವ ’ಚಿಟ್ಟಿ ಆಯೀ ಹೈ..’ ಹಾಡು ಇಂದಿಗೂ ವಿದೇಶದಲ್ಲಿರುವ ಭಾರತೀಯರ ಪಾಲಿನ ರಾಷ್ಟ್ರಗೀತೆ.
ಇವನು ರಿಚಾ ಶರ್ಮಾಳನ್ನು ಪ್ರೇಮಿಸಿ, ಮನೆಯವರನ್ನು ಒಪ್ಪಿಸಿ ಮದುವೆಯೂ ಆಗಿಬಿಡುತ್ತಾನೆ. ಇಬ್ಬರಿಗೆ ಒಬ್ಬ ಮಗಳೂ ಆಗಿ, ತಂದೆ ಸುನಿಲ್ ದತ್ ಆ ಪುಟ್ಟ ದೇವತೆಯನ್ನು ತ್ರಿಶಾಲ ಎಂದು ಪ್ರೀತಿಯಿಂದ ಕರೆಯುತ್ತಾನೆ. ಅಲ್ಲಿಗೆ ಎಲ್ಲಾ ಸರಿಯಾಗಿ, ’ಆಮೇಲೆ ಅವರೆಲ್ಲಾ ಸುಖವಾಗಿದ್ದರು’ ಎಂದು ಕಥೆ ಮುಗಿಯಬೇಕು ಅಲ್ಲವಾ, ಆದರೆ ಅದು ಹಾಗಾಗುಗುವುದಿಲ್ಲ. ಕ್ಯಾನ್ಸರ್ ಎರಡನೆಯ ಬಾರಿ ದತ್ ಪರಿವಾರದ ಮನೆ ಬಾಗಿಲು ಬಡಿಯುತ್ತದೆ. ಈ ಸಲ ಅದು ಆರಿಸಿಕೊಳ್ಳುವುದು ರಿಚಾಳನ್ನು. ಹೆಚ್ಚಿನ ಚಿಕಿತ್ಸೆಗಾಗಿ ರಿಚಾ ಮಗುವಿನೊಂದಿಗೆ ತವರಾದ ಅಮೇರಿಕಾಗೆ ಹೋಗುತ್ತಾಳೆ. ಆದರೆ ತನ್ನ ತಂದೆಯಂತೆ ಕ್ಯಾನ್ಸರ್ ಜೊತೆ ಹೋರಾಡುವ ಪತ್ನಿಯ ಜೊತೆ ನಿಲ್ಲದ ಸಂಜಯ್ ದಾರಿಯಲ್ಲಿ ಎದುರಾದ ಮುಂದಿನ ಹೆಣ್ಣಿನ ತೋಳುಗಳಲ್ಲಿ ನೆಮ್ಮದಿ ಹುಡುಕುತ್ತಾ ಹೋಗುತ್ತಾನೆ.
ಆಗ ಅವನ ಜೀವನಕ್ಕೆ ಸೆನ್ಸಿಬಲ್ ಮತ್ತು ಸರಳ ಹೆಣ್ಣು ಮಾಧುರಿಯ ಪ್ರವೇಶವಾಗುತ್ತದೆ. ಮಧ್ಯಮ ವರ್ಗದ ಮೌಲ್ಯಗಳ ಮಾಧುರಿ ಆಗಿನ ಎಲ್ಲಾ ನೆಗಟಿವ್ ಪಬ್ಲಿಸಿಟಿಯ ನಡುವೆಯೂ ಇವನ ಸಂಗಾತಿ ಆಗುತ್ತಾಳೆ. ಸಂಜೂ ಕಣ್ಣಿನಲ್ಲಿರುವ ಅಪ್ಪ ಅಮ್ಮನಿಂದ ತಪ್ಪಿಸಿಕೊಂಡ ಮಗುವಿನ ಹುಡುಕಾಟ ಎಲ್ಲ ಹೆಣ್ಣಿನೆದೆಯಲ್ಲೂ ಒಬ್ಬ ಅಮ್ಮನನ್ನು ಹುಟ್ಟಿಸುತ್ತದಾ? ಅಥವಾ ಎಲ್ಲಾ ಹೆಂಗಸರಿಗೂ ಇರುವ ಪೆದ್ದು ನಂಬಿಕೆಯಂತೆ ಮಾಧುರಿ ಸಹ ’ಪ್ರೀತಿಯಿಲ್ಲದೆ ಹೀಗಾಗಿದ್ದಾನೆ ಅಷ್ಟೆ, ನನ್ನ ಪ್ರೀತಿ ಇವನನ್ನು ಸಂಭಾಳಿಸುತ್ತದೆ’ ಎನ್ನುವ ನಂಬಿಕೆಯಿಂದ ಇವನ ಬಳಿಗೆ ಸರಿದಳಾ? ಇದು ಯಾವ ಮಟ್ಟಕ್ಕೆ ಹೋಯಿತು ಅಂದರೆ ಸಿನಿಮಾ ಪತ್ರಿಕೆಗಳು ಕ್ಯಾನ್ಸರ್ ಪೇಷಂಟ್ ರಿಚಾ ಮತ್ತು ತ್ರಿಶಾಲಳ ಫೋಟೋ ಹಾಕಿ, ಮಾಧುರಿ ದೀಕ್ಷಿತ್ ಅನ್ನು ಉದ್ದೇಶಿಸಿ ’ಇದು ಸರಿಯೇ’ ಎನ್ನುವ ಸಂಪಾದಕೀಯ ಬರೆದವು! ಸಂಜಯ್ ಗೆಳೆಯ ಜಾಕಿ ಶ್ರಾಫ್ ಅಂತೂ ಮಾಧುರಿಯನ್ನು ’ಭಾಭಿ’ ಎಂದು ಕರೆಯಲು ಪ್ರಾರಂಭಿಸುತ್ತಾನೆ.
ಆದರೆ ಅಷ್ಟರಲ್ಲಿ ಮುಂಬೈನಲ್ಲಿ ಬಾಂಬ್ ಬ್ಲಾಸ್ಟ್ ನಡೆಯುತ್ತದೆ. ಸಂಜೂವಿನ ಬಂಧನ ಆಗುತ್ತದೆ. ಇದು ಮಧ್ಯಮ ವರ್ಗದ ಮಾಧುರಿಯನ್ನು ಇನ್ನಿಲ್ಲದಂತೆ ಡಿಸ್ಟರ್ಬ್ ಮಾಡುತ್ತದೆ. ಆಕೆ ಅವನಿಂದ ದೂರ ಸರಿಯುತ್ತಾಳೆ. ಸಂಜೂಗೆ ಬೇಲ್ ಸಿಗುತ್ತದೆ, ಆಗ ಸಂಜೂವಿನ ಜೀವನಕ್ಕೆ ಬರುವವಳು ರಿಯಾ ಪಿಳ್ಳೆ. ಅವಳು ನೆರಳಿನಂತೆ, ನೆರಳಾಗಿ ಸಂಜೂನ ಜೊತೆ ನಿಲ್ಲುತ್ತಾಳೆ. ಅವನ ಬೇಲ್ ಕ್ಯಾನ್ಸಲ್ ಆಗಿ ಅವನು ಮತ್ತೆ ಆರ್ಥರ್ ರೋಡಿನ ಜೇಲ್ ಗೆ ಹೋದಾಗ, ಜೇಲಿನ ಸಲಾಕಿಗಳ ಹೊರಗೆ ನಿಂತು ಕಂಬಿಗಳ ಕಿಂಡಿಯಿಂದ ಅವನ ಕೈಬೆರಳು ಸ್ಪರ್ಶಿಸುತ್ತಾ ನಿಲ್ಲುವ ರಿಯಾಳ ಚಿತ್ರ ಕಣ್ಣಿನಿಂದ ಮಾಸುವುದೇ ಇಲ್ಲ.
ಅಷ್ಟರಲ್ಲಿ ಸುನಿಲ್ ದತ್, ತನ್ನೆಲ್ಲಾ ಪ್ರಭಾವ, ತನ್ನೆಲ್ಲಾ ಗುಡ್ ವಿಲ್, ತನ್ನೆಲ್ಲ ಪರಿಚಯ ಬಳಸಿ ಸಂಜುವನ್ನು ಹೊರಗೆ ಕರೆತರುತ್ತಾನೆ. ಹೊರಬಂದ ಈ ಹುಡುಗ ಅದುವರೆವಿಗೂ ತನ್ನ ಜೊತೆ ನಿಂತಿದ್ದ ತನ್ನ ಕುಟುಂಬದವರಿಗೆ ಒಂದು ಮೆಸೇಜ್ ಮಾತ್ರ ಕಳಿಸಿ, ಅವರ್ಯಾರ ಇರುವಿಕೆಯೂ ಇಲ್ಲದೆ ರಿಯಾಳನ್ನು ಮದುವೆ ಆಗುತ್ತಾನೆ. ಅವನ ವಯಸ್ಸಿಗೆ ತಕ್ಕಂತೆ ತನ್ನ ಎಲ್ಲಾ ಸಂಬಂಧಗಳನ್ನು ನಿಭಾಯಿಸುವುದು ಅನ್ನುವುದು ಅವನಿಗೆ ಅರಿವಾಗುವುದೇ ಇಲ್ಲ. ಅವನಿಗೆ ಅದರ ಅರಿವು ಮಾಡಿಸ ಬೇಕಾದ ಮನೆಯವರು ಮತ್ತೊಮ್ಮೆ ಅವನನ್ನು ಕ್ಷಮಿಸುತ್ತಾರೆ. ಹಿಂದಿನ ಎಲ್ಲಾ ತಪ್ಪುಗಳಂತೇ. ವಯಸ್ಸಿಗನುಸಾರವಾಗಿ ಜವಾಬ್ದಾರಿ ಹೊರುವುದನ್ನು, ಸಂಬಂಧಗಳನ್ನು ಗೌರವಿಸುವುದನ್ನು ಅವನಿಗೆ ಯಾರೂ ಹೇಳಿಕೊಡುವುದೇ ಇಲ್ಲ.. ಅವನು ಕಲಿಯುವುದೂ ಇಲ್ಲ.
ಕಡೆಗೆ ರಿಯಾಳ ಜೊತೆಗಿನ ತನ್ನ ಸಂಬಂಧವನ್ನೂ ಗೌರವಿಸುವುದು ಇವನಿಗೆ ಬರುವುದಿಲ್ಲ. ಹೆಂಗಸರ ಜೊತೆಗಿನ ಅವನ ಭೇಟಿ ಮತ್ತು ಬೇಟೆ ಮುಂದುವರಿಯುತ್ತಲೇ ಹೋಗುತ್ತದೆ. ಒಂದು ನೆಲೆ ಕಾಣಬಹುದಾಗಬಹುದಿತ್ತ ಬದುಕನ್ನು ಇವನೇ ಹಟಕ್ಕೆ ಬಿದ್ದು ಗಾಳಿಪಟದ ಸೂತ್ರವನ್ನು ಹರಿದಂತೆ ಹರಿದು ಹಾಕುತ್ತಾನೆ. ಅದನ್ನು ನೋಡಿ ಸಹಿಸಲಾಗದ ರಿಯಾ ಇವನಿಂದ ದೂರಾಗುತ್ತಾಳೆ.
ಅಮೇಲೆ ಬಂದದ್ದು ಮುನ್ನಾ ಭಾಯಿ … ಮತ್ತಷ್ಟು ಖ್ಯಾತಿ, ಮತ್ತಷ್ಟು ದುಡ್ಡು, ಮತ್ತಷ್ಟು ಹುಡುಗಿಯರು … ೫೦ ರ ಹರೆಯದ ಸಂಜಯ್ ಮಾನ್ಯತಾಳನ್ನು ಮದುವೆ ಆದಾಗ ಎಲ್ಲರೂ ಹುಬ್ಬೇರಿಸಿದವರೇ. ಮನಯವರಿಂದ, ಗೆಳೆಯರಿಂದ, ಬಹುಕಾಲದ ನಂಬಿಕಸ್ಥರಿಂದ ಎಲ್ಲರಿಂದಾ ಸಂಜಯ್ ನನ್ನು ದೂರ ಮಾಡಿದ ಆಕೆ ಇನ್ನೇನು ಗೆದ್ದೆ ಅಂದುಕೊಳ್ಳುವುದರಲ್ಲಿ ಈ ತೀರ್ಪು.
ಯಾಕೆ ಈ ಹುಡುಗನ ಬಾಳು ಹೀಗಾಗುತ್ತದೆ? ಬದುಕು ನೀಡಿದ ಅಪರಿಮಿತ ಅವಕಾಶಗಳನ್ನು ಅದು ಹೇಗೆ ಈ ಹುಡುಗ ತನ್ನ ಕೈಯಾರೆ, ಶ್ರದ್ಧೆಯಿಂದ ಹಾಳು ಮಾಡಿಕೊಳ್ಳುತ್ತಾನೆ? ಇವನ ಈ ಗ್ರೀಕ್ ಟ್ರಾಜೆಡಿಯ ಮೊದಲ ಪುಟ ಯಾವುದು?
ಒಮ್ಮೆ ತನ್ನ ಸಂಗಾತಿ ’I am true to myself’ ಎಂದು ಹೇಳುತ್ತಾ ತನ್ನ ಅಸಂಖ್ಯಾತ ಪ್ರೇಮ ಪ್ರಕರಣಗಳನ್ನು ಸಮರ್ಥಿಸಿಕೊಳ್ಳಲು ಹೋದಾಗ ನನ್ನ ಗೆಳತಿ ಸಿಡಿದು ಹೇಳಿದ್ದಳು, ’ನೀನು ನಿನ್ನ ಜೀವನದಲ್ಲಿ ಒಬ್ಬನೇ ಇರುವಾಗ ನಿನಗೆ ಮಾತ್ರ ನೀನು ನಿಷ್ಠನಾಗಿದ್ದರೆ ಸಾಕು, ಆದರೆ ನಿನ್ನ ಜೀವನದಲ್ಲಿ ಇನ್ನೊಬ್ಬರೂ ಇದ್ದಾರೆ ಎಂದಾಗ ನಿನ್ನ ನಿಷ್ಠೆಯ ಪರಿಮಿತಿ ಕೇವಲ ನೀನೊಬ್ಬನೇ ಆಗಬಾರದು’ ಅಂತ.
ನಿಜ ಅಲ್ಲವಾ, ಸಂಬಂಧಗಳಿಗೆ ಗೌರವ ಕೊಡುವುದು ಮತ್ತು ತನ್ನ ಕ್ರಿಯೆಗಳ ಜವಾಬ್ದಾರಿ ಹೊರುವುದು, ಎರಡೂ ಒಂದು ಮೆಚೂರ್ ಮನಸ್ಸಿನ ಸಹಜ ಅವಸ್ಥೆ. ಬೆಂಕಿ ಮುಟ್ಟಿದರೆ ಸುಡುತ್ತದೆ, ಅದು ಎಲ್ಲರಿಗೂ ಗೊತ್ತು. ಒಂದು ಮಗು ಗೊತ್ತಾಗದೆ ಬೆಂಕಿ ಮುಟ್ಟಿದರೆ ಎಲ್ಲರೂ ಮುದ್ದಿಸಿ ಔಷಧ ಹಚ್ಚುತ್ತಾರೆ. ಆದರೆ ಒಂದು ಬೆಳೆದ ಮನಸ್ಸು ಬೆಂಕಿ ಅಂತ ತಿಳಿದ ಮೇಲೂ ಪದೇ ಪದೇ ಮುಟ್ಟಿ, ನೋವಾಯಿತೆಂದು ಆಘಾತಗೊಂಡರೆ ಏನು ಮಾಡಬೇಕು? ಆದರೆ ಸಂಜು ಬಾಬ ನ ಜೀವನದಲ್ಲಿ ಯಾರೂ ಅವನಿಗೆ ಅದನ್ನು ಹೇಳಿಕೊಡುವುದೇ ಇಲ್ಲ, ಅವನನ್ನು ದಂಡಿಸದೇ ಎಲ್ಲರೂ ಒಪ್ಪಿಕೊಂಡ ಕಾರಣ ಅವನು ಇಡೀ ಜಗತ್ತನ್ನೇ ತನ್ನೆಲ್ಲಾ ತಪ್ಪುಗಳನ್ನು ಮನ್ನಿಸಿ ಕೇವಲ ಪ್ರೀತಿ ಮಾತ್ರ ಕೊಡುತ್ತಿದ್ದ ಅಮ್ಮನ ವಿಸ್ತೃತ ರೂಪದಂತೆ ನೋಡುತ್ತಾ ಹೋಗುತ್ತಾನೆ. ಅವನ ಆ ಗ್ರಹಿಕೆ ಅವನನ್ನು ಇಂದು ಬದುಕಿನ ಈ ಹಾದಿಯಲ್ಲಿ ತಂದು ನಿಲ್ಲಿಸಿದೆ.
ಇಂದು ಕಟ್ಜು ಏನೇ ಹೇಳಿ ತಿಪ್ಪೆ ಸಾರಿಸಲಿ, ಅವನಿಗೆ ಬೆದರಿಕೆ ಕರೆಗಳು ಬರುತ್ತಿದ್ದವು ಅದರಿಂದ ಅವನು ರಕ್ಷಣೆಯ ಬಗ್ಗೆ ಯೋಚನೆ ಮಾಡಿದ ಎಂದು ಏನೆ ಹೇಳಲಿ … ಸಂಜು ಬಾಬಾನ ಜೀವನವನ್ನು ಗಮನಿಸಿದವರಿಗೆ ಅರ್ಥವಾಗುವ ವಿಷಯ ಅಂದರೆ ಇದು ಅವನ ಮೊದಲ ಅಪರಾಧವಲ್ಲ … ಯಾವುದೇ ಮೌಲ್ಯಕ್ಕೆ, ವ್ಯವಸ್ಥೆಗೆ ತಲೆಬಾಗುವುದನ್ನು ಅವನು ಎಂದು ಕಲಿಯಲೇ ಇಲ್ಲ. ಸಂಜೂ ಬಾಬನ ಮನದಲ್ಲಿದ್ದ ಬಾಲಕ ಬೆಳೆಯಲು ಒಪ್ಪಿಕೊಳ್ಳಲೇ ಇಲ್ಲ…
 

‍ಲೇಖಕರು avadhi

April 26, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. lalitha siddabasavaiah

    ಸಂಧ್ಯಾ ,ನಿಮ್ಮ ಅಭಿಪ್ರಾಯ ಸರಿಯಾಗಿದೆ. ಒಮ್ಮೊಮ್ಮೆ ನರ್ಗಿಸ್ ತಪ್ಪು ಮಾಡಿದರಾ ಎಂದು ಕೇಳಿಕೊಳ್ಳುವ ಹಾಗಾಗುತ್ತೆ , ಬದುಕು ನಮಗೆ ಅಷ್ಟು ಸುಲಭವಾಗಿ ಕಾರಣಗಳನ್ನು ಬಿಟ್ಟುಕೊಡುವುದಿಲ್ಲ…

    ಪ್ರತಿಕ್ರಿಯೆ
  2. Shama, Nandibetta

    ’”ನೀನು ನಿನ್ನ ಜೀವನದಲ್ಲಿ ಒಬ್ಬನೇ ಇರುವಾಗ ನಿನಗೆ ಮಾತ್ರ ನೀನು ನಿಷ್ಠನಾಗಿದ್ದರೆ ಸಾಕು, ಆದರೆ ನಿನ್ನ ಜೀವನದಲ್ಲಿ ಇನ್ನೊಬ್ಬರೂ ಇದ್ದಾರೆ ಎಂದಾಗ ನಿನ್ನ ನಿಷ್ಠೆಯ ಪರಿಮಿತಿ ಕೇವಲ ನೀನೊಬ್ಬನೇ ಆಗಬಾರದು’”
    “ಯಾವುದೇ ಮೌಲ್ಯಕ್ಕೆ, ವ್ಯವಸ್ಥೆಗೆ ತಲೆಬಾಗುವುದನ್ನು ಅವನು ಎಂದು ಕಲಿಯಲೇ ಇಲ್ಲ. ”
    Excellent !!! Excellent !!! Excellent !!! Excellent !!!Excellent !!! Excellent !!!Excellent !!! Excellent !!!Excellent !!! Excellent !!!Excellent !!! Excellent !!!
    Sandhya, Love you …

    ಪ್ರತಿಕ್ರಿಯೆ
  3. c.suseela

    Fantastic sandhya.U anlysed the things & the person very deeply.The conclusion part is well concluded. Hats off to u dear.

    ಪ್ರತಿಕ್ರಿಯೆ
  4. Anuradha.B.Rao

    ಕಣ್ಮುಂದೆ ಸಂಜಯ್ ದತ್ ನ ಕಥೆ ಚಲನ ಚಿತ್ರದಂತೆ ಮೂಡಿ ಬಂತು . ತುಂಬಾ ಚೆನ್ನಾಗಿ ಬರೆದಿದ್ದೀರಿ . ಅಭಿನಂದನೆಗಳು .

    ಪ್ರತಿಕ್ರಿಯೆ
  5. sunil Rao

    ಸ೦ಜಯ್ ಪ್ರಿಯಾಳ ಪಕ್ಕ ಕೂತು ಅಳುತ್ತಿದ್ದ ಘಳಿಗೆ ಮನಸ್ಸಿಗೆ ಪಿಟ್ ಎ೦ದಿತು. ಎಲ್ಲ ದರ್ಪ ದವಲತ್ತುಗಳ ಮಧ್ಯೆ ವಿಜೃ೦ಭಿಸುವ ಯಾರಾದರೂ ಕಾನೂನಿ ಸುಪರ್ದಿಯಲ್ಲಿ ಅಪರಾಧ ಮಾಡಿದಾಗ ಬ೦ದು ಬೀಳಲೇಬೇಕಾದ್ದು ಎ೦ದು ಸತ್ಯವನ್ನು ಅರಿವಾಗಿಸಿಕೊ೦ಡಾಗ…ತನ್ನ ಅಷ್ಟೂ strenghtಗಳು ಅವನ ಸಹಾಯಕ್ಕೆ ಬರಲಾರದಲ್ಲ….ಆಗ ಅವನ ಮನಸ್ಸಿನ ಖೇದ ಮಾತ್ರ ಅವರ್ಣನೀಯ…
    ನಿಜಕ್ಕೂ ಮನತಾಕಿದ ಬರಹ

    ಪ್ರತಿಕ್ರಿಯೆ
  6. Madhukanth

    Hi Sandya, Very very Good narration. I am a BIG BIG fan of Sanju BABA from 15 years..You brought all the events under one umbrella. nanu Sanjay Dutt bagge sakastu hoddidene. But nimma narration has a Good message along with events of Sanjay dutt life.. Hats Off..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: