ಸಂಪು ಕಾಲಂ : 'ಮಡಿವಂತಿಕೆ'ಗೆ ಸವಾಲೆಸೆದ ನಳಿನಿ ಜಮೀಲ…

ದೆಹಲಿಯಲ್ಲಿ ಹಸುಗೂಸ ಮೇಲೆ ನಡೆದ ಘೋರ ಅತ್ಯಾಚಾರ, ವಿಧವೆಯನ್ನು ಹರಾಜು ಹಾಕುತ್ತಿರುವ ವೈಪರೀತ್ಯ ಇತ್ಯಾದಿ ಬೆಳಕಿಗೆ ಬಂದ ನಿಷ್ಕರುಣ ಹೇಯ ಕೃತ್ಯಗಳು ಇತ್ತೀಚೆಗಷ್ಟೇ ನಡುಗಿಸಿದ್ದವು. ಅದಕ್ಕಿಂತಲೂ ಹೆಚ್ಚಾಗಿ ಬೆಳಕಿಗೆ ಬರದ ಇದೇ ರೀತಿಯ ಲಕ್ಷೋಪಲಕ್ಷ ಘೋರಾಪರಾಧಗಳನ್ನು ನೆನೆದು ಮನಸ್ಸು ನಿಶ್ಶಬ್ದವಾಗಿ ನಿಡುಸುಯ್ದಿದ್ದು ನಮ್ಮೆಲ್ಲರ ಅಸಹಾಯಕತೆಯ ಪ್ರತೀಕವಾಗಿಬಿಟ್ಟಿತೇ ಎನಿಸಿತ್ತು.
ಎಲ್ಲ ಮಾಧ್ಯಮಗಳಲ್ಲೂ ಚರ್ಚೆ, ಎಲ್ಲರ ಬಾಯಲ್ಲೂ ಅನುಕಂಪ, ಸಮಾಜದ ಪ್ರತಿಯೊಬ್ಬ ಜವಾಬ್ದಾರೀ ವ್ಯಕ್ತಿಯಲ್ಲೂ ಆತಂಕೋದ್ವೇಗ, ಸಿಟ್ಟು. ಜೊತೆಗೆ ಜಾಗೃತಿ ಜಾಥಾಗಳು, ಮುಷ್ಕರ, ವಿರೋಧಗಳು. ಇಷ್ಟೆಲ್ಲಾ ನಡೆಯುತ್ತಿದ್ದರೂ, ಒಂದು ಲವಲೇಶವೂ ಬದಲಾವಣೆಯಾಗದ ಪಾತಕರ ಮನದಾಳದ ಕೃತ್ರಿಮತೆ, ಅಮಾನವೀಯ ನಡತೆಗಳು ಕೊಂಚವೂ ಲಂಗುಲಗಾಮಿಲ್ಲದೆ ತನ್ನ ಕೆಲಸ ಮಾಡುತ್ತಿವೆ. ಯಾವ ಜ್ಞಾನದರ್ಶನಗಳೂ, ಮನೋವಿಜ್ಞಾನ ಸಿದ್ಧಾಂತಗಳೂ ತನ್ನ ಮುಲಾಮಿನಿಂದ ಈ ದುಷ್ಟ ಸಾಮಾಜಿಕ ಗಾಯವನ್ನು ಒಣಗಿಸಿ ಇಲ್ಲವಾಗಿಸುವ ಸಾಧ್ಯತೆ ಇಲ್ಲವೇ, ಎಂದು ಬರೀ ಯೋಚಿಸುವುದರಲ್ಲೇ ನಮ್ಮಂತಹವರ ಸಮಯ ವ್ಯರ್ಥವಾಗುತ್ತಿದೆ ಅಷ್ಟೇ ಹೊರತು ಮತ್ತೇನೂ ದಾರಿ ತೋರುತ್ತಿಲ್ಲ ಎಂಬ ಅಸಹನೆ ಸಹ ತುಂಬಿತ್ತು.
ಮನಸ್ಸು ರಾಡಿಯಾಗಿತ್ತು. ಈ ಗೊಂದಲ, ಗೋಜಲುಗಳಿಗೆ ಕೈ ಸೇರಿಸುವಂತೆ ಮತ್ತೊಂದು ವಿಚಾರ ನನ್ನನ್ನು ವಿಚಲಿತಗೊಳಿಸಿದೆ. ಅದೇನೆಂದರೆ, ಇತ್ತೀಚೆಗೆ ಓದಿದ ಒಂದು ಪುಸ್ತಕ! ನಡೆಯುತ್ತಿರುವ ಎಲ್ಲ ಪಾಪಕೂಪಗಳಿಗೂ ಮರ್ಯಾದೆ ಮೀರಿದ ಲೈಂಗಿಕ ದುರ್ನಡತೆಗಳು, ವಿಕಾರ ಮಾನಸಗಳು, ಹಿಡಿತ ಮೀರಿ ಬೆಳೆದ ಮೈ ಮನಗಳು ಎಂಬ ಖಿನ್ನತೆಯಲ್ಲಿ ಬೇಯುತ್ತಿರುವಾಗಲೇ, ಇದಕ್ಕೆಲ್ಲಾ ಕಾರಣವಾದ ಶರೀರವನ್ನೇ, ತನ್ನ ಶಾರೀರವಾಗಿಸಿ ಉತ್ಕಟ ಕಂಠದಿಂದ, ನಾವು “ವಿಲಕ್ಷಣ” ಎಂದರಿತ ದೇಹವ್ಯಾಪಾರವನ್ನು ಸೆಲೆಬ್ರೇಟ್ ಮಾಡುವ, ಅದನ್ನು ಒಂದು ಗೌರವಯುತ, ಗಂಭೀರ “ವೃತ್ತಿ” ಎಂದು ಕರೆಯುತ್ತಾ ಬದುಕನ್ನು ಗೆದ್ದಿರುವ ಒಬ್ಬ ದಿಟ್ಟ ಮಹಿಳೆಯ ಜೀವನಗಾಥೆ. ಈ ಪುಸ್ತಕ, ಕೇರಳದ ನಳಿನಿ ಜಮೀಲ ಅವರ “ದಿ ಆಟೋಬಯಾಗ್ರಫಿ ಆಫ್ ಎ ಸೆಕ್ಸ್ ವರ್ಕರ್” ಎಂಬ ಆತ್ಮಕಥೆ.
ನಳಿನಿ ಜಮೀಲರ ಈ ಪುಸ್ತಕ, ಸಾಧಾರಣವಾಗಿ ಪುಸ್ತಕ ಓದುವಾಗಿನ ಮೆಚ್ಚುಗೆ ಅಥವಾ ತೆಗಳಿಕೆ ಎರಡೂ ಆಗದೆ ಎರಡರ ನಡುವೆಯೂ ನಡೆಯುತ್ತಾ ಸಾಗುವ ಕಥಾ ಹಂದರ, ಸಾಕಷ್ಟು “ಅಡ್ಡ ಗೋಡೆ ಮೇಲೆ” ಎನ್ನುವಂತಹ ಮಿಶ್ರ ಪ್ರತಿಕ್ರಿಯೆಗಳು ಉಂಟಾಗಿ ಮನಸ್ಸಿಗೆ ಕಚಗುಳಿಕೊಡುತ್ತಾ ಓದು ಸಾಗಿಸುತ್ತದೆ. ಬಡ ಕುಟುಂಬದಲ್ಲಿ ಹುಟ್ಟಿದ ನಳಿನಿ, ಫ್ಯಾಕ್ಟರಿಗಳಲ್ಲಿ ದುಡಿದು, ಮದುವೆಯಾಗಿ, ತಾಯಾಗಿ, ವೇಶ್ಯಾವೃತ್ತಿಗೆ ತೆರಳಿ, ಮತ್ತೆ ಕೆಲವು ಸಣ್ಣ ವ್ಯಾಪಾರಗಳನ್ನೂ ಮಾಡಿ ಕೊನೆಗೆ ಸಾಮಾಜಿಕ ಕಾರ್ಯಕರ್ತೆಯಾಗಿ ಸಮಾಜಸೇವೆ ಮಾಡಿದ್ದು, ಒಂದು ಬಹುರೂಪಿ ಜೀವನವನ್ನು ಕಂಡುಂಡು ಬೆಳೆದಿದ್ದಾರೆ.
ವೇಶ್ಯೆಯೊಬ್ಬಳ ಆತ್ಮಚರಿತ್ರೆ ಎಂದಾಕ್ಷಣ ಮನಸ್ಸಿಗೆ ರಾಚುವುದು, ಅವರ ಕರುಣಾಜನಕ, ಕಷ್ಟ ಕೋಟಲೆಗಳು ತುಂಬಿದ ಜೀವನದ ಒಂದು ಬರಹ ಎಂಬ ಪೂರ್ವಾರ್ಜಿತ ಕಲ್ಪನೆಗಳಿಂದ ಈ ಪುಸ್ತಕವನ್ನು ಓದಲು ಪ್ರಾರಂಭಿಸಿದರೆ, ನಮಗಾಗುವುದು ಒಂದು ಕಲ್ಚರಲ್ ಶಾಕ್ ಅಷ್ಟೇ! ಮೊದಲ ಓದಿಗೆ ಒಂದು ತಿಳಿಕಾದಂಬರಿಯಂತೆ ಕಾಣುವ ಈ ಕಥಾನಕ, ಒಬ್ಬ ವೇಶ್ಯೆಯ ಕಷ್ಟ, ಆತಂಕಗಳು, ಇತರ ಸಾಮಾನ್ಯ ಸ್ತ್ರೀಯರಂತೆ ಇವರಿಗೂ ಇರುವ ಆಸೆ ಆಕಾಂಕ್ಷೆಗಳೂ, ಸ್ಥಾನಮಾನಗಳೂ, ಇವೆಲ್ಲ ವಿಚಾರಗಳ ಬಿತ್ತರಿಸುವ ಒಂದು ಗಂಭೀರ ಹೊತ್ತಗೆ. ಆಕೆಯ ಜೀವನದ ಮಜಲುಗಳು ದಾರುಣ ತಿರುವುಗಳನ್ನು ಕಂಡಿದ್ದರೂ, ಧೃತಿಗೆಡದೆ ಎಲ್ಲವನ್ನೂ ಧೈರ್ಯವಾಗಿ ಮೆಟ್ಟಿ, ಏನೇ ಆಗಲೀ ತಾನು ಗೌರವವಾಗಿ, ಸಂತೋಷವಾಗಿ ಬದುಕಬೇಕು ಎಂಬ ಜೀವನ ಪ್ರೀತಿಗೆ ಓದುಗರು ಮಾರುಹೋಗದೆ ವಿಧಿಯಿಲ್ಲ. ತನಗಾದ ಪ್ರತೀ ಅನುಭವವನ್ನೂ ಒಂದು ಕೀಟಲೆ, ಚೇಷ್ಟೆಯಂತೆ ಕಂಡು ಅದನ್ನು ಅಷ್ಟೇ ಗಂಭೀರವಾಗಿ ಅಣಕವಾಗಿಸುವ ಆಕೆಯ ಮಾತುಗಳು ಆಕೆಯ ಧನಾತ್ಮಕ ಮನಸ್ಸು ಮತ್ತು ಧೈರ್ಯದ ಪ್ರತೀಕ.
ಆಕೆಯ ಮೊದಲ “ಗಿರಾಕಿ” ಒಬ್ಬ ದೊಡ್ಡ ಹುದ್ದೆಯವನಾಗಿದ್ದು, ಕತ್ತಲಲ್ಲಿ ಅತ್ಯಂತ ನವುರಾದ ಪ್ರೀತಿತೋರಿ, ಬೆಳಕು ಹರಿದಾಕ್ಷಣ ಆಕೆಯನ್ನು ಪೊಲೀಸರಿಗೆ ತಾನೆ ಒಪ್ಪಿಸುವುದು, ಹಿಂಸೆಗೆ ಒಳಪಡಿಸುವುದನ್ನೂ ಕೂಡ ಆಕೆ ತಿಳಿಯಾಗಿಯೇ ನಮ್ಮೊಂದಿಗೆ ಹಂಚಿಕೊಳ್ಳುವುದು ಆಕೆಯ ಜೀವನಾನುಭವವನ್ನು ಪ್ರತಿಬಿಂಬಿಸುತ್ತದೆ. ವೇಶ್ಯಾವೃತ್ತಿಯನ್ನು ಒಂದು ಗಂಭೀರ, ಮಾನ್ಯ ವೃತ್ತಿ ಎಂಬುದನ್ನೇ ಬಿಂಬಿಸುತ್ತಾ ತನ್ನ ಕಥೆ ಹೇಳುವ ಈಕೆ, ತನ್ನ ಮೇಲೆ ನಡೆದ ದೌರ್ಜನ್ಯ ಅತ್ಯಾಚಾರಗಳನ್ನು ವಿವರಿಸುತ್ತಲೇ, ಗಂಡಿನ ಒಂದು ಸೌಮ್ಯ ಮುಖವನ್ನು ಉಲ್ಲೇಖಿಸುತ್ತಾರೆ. ತನ್ನ ಬಳಿ ಬರುವ ಗಂಡಸರೆಲ್ಲಾ ಕಾಮದೃಷ್ಟಿಯಿಂದ ಬರುವವರಲ್ಲ ಎಂದೂ ಆಕೆ ಹೇಳಿಕೊಳ್ಳುತ್ತಾರೆ. ನಮ್ಮ ಸಮಾಜದಲ್ಲಿ ಮೂರು ಮಿಲಿಯನ್ ಮೀರಿ ವೇಶ್ಯೆಯರಿರುವಾಗ, ತಾವು ಮಾಡುತ್ತಿರುವುದೂ ಒಂದು ಕೆಲಸವಾದ್ದರಿಂದ ತಮಗೂ ಒಂದು ಗೌರವ ಮರ್ಯಾದೆ ಇರಬೇಕು. ಸಮಾಜದಲ್ಲಿ ಸ್ಥಾನ ಇರಬೇಕು ಎಂಬುದು ನಳಿನಿಯ ಅಂಬೋಣ.

ಆಕೆಯ ಹೆಸರು ಗಮನಿಸಿದರೆ ತಿಳಿಯುತ್ತದೆ, ಆಕೆ ತನ್ನನ್ನು ಒಬ್ಬ ಹಿಂದೂ ಆಗಿಯೂ ಮುಸಲ್ಮಾನರಾಗಿಯೂ ಕರೆಸಿಕೊಳ್ಳಲು ಇಷ್ಟ ಪಡುತ್ತಾರೆ. ಇದಕ್ಕೆ ಎರಡು ಕಾರಣ, ಒಂದು ತಾನು ಎಲ್ಲಾ ರೀತಿಯ ಜನರನ್ನೂ ಕಂಡಿದ್ದೇನೆ, ತನಗೆ ಯಾವ ಜಾತಿ ಬೇಧವಿಲ್ಲ, ತಾನು ನೀರಿನಂತೆ ಎಂದು. ಮತ್ತೊಂದು, ಆಕೆ ಮದುವೆಯಾದ ಇಬ್ಬರು ಗಂಡಸರಲ್ಲಿ ಒಬ್ಬಾತ ಹಿಂದೂ ಮತ್ತೊಬ್ಬ ಮುಸಲ್ಮಾನ. ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿ, ಇಂದು ಅವರು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಬದುಕುತ್ತಿರುವುದು ಈಕೆಗೂ, ಇವರ ಮಕ್ಕಳಿಗೂ ಹೆಮ್ಮೆಯ ವಿಚಾರ. ಸಾಧಾರಣವಾಗಿ ತಾನು ವೇಶ್ಯೆ ಎಂದು ಹೇಳಿಕೊಳ್ಳಲು ಅನುಮಾನಿಸುವ ಸಂದರ್ಭದಲ್ಲಿ, ನಳಿನಿ ನಿರಾತಂಕವಾಗಿ ತಾನೊಬ್ಬ ವೇಶ್ಯೆ ಎಂದೇ ಮಾತು ಪ್ರಾರಂಭಿಸುತ್ತಾರೆ. ಅಷ್ಟೇ ಅಲ್ಲದೆ ಆಕೆಯ ಮಕ್ಕಳೂ ಆಕೆಯ ಬಗ್ಗೆ ಯಾವುದೇ ಅನುಮಾನವಿಲ್ಲದೆ ಗೌರವಿಸುವುದು, ಹೆಮ್ಮೆ ಪಡುವುದು ತೃಪ್ತಿಕರವಾಗಿ ಕಂಡುಬರುತ್ತದೆ. ತನ್ನೆಲ್ಲಾ ದುರ್ಬರ ಕ್ಷಣಗಳನ್ನು, ಕೈಲಾದಷ್ಟೂ ಚೆನ್ನಾಗಿಸುವ, ಸುಂದರವಾಗಿಸುವ ಆಕೆಯ ಪ್ರಯತ್ನ ಮತ್ತು ಬದುಕು ಎಲ್ಲ ಮಹಿಳೆಯರಿಗೆ ಒಂದು ಉದಾಹರಣೆ ಎಂದರೆ ಬಹುಷಃ ತಪ್ಪಾಗಲಾರದು.
ತನ್ನ ಈ ಪುಸ್ತಕ ಪ್ರಕಟಗೊಂಡ 100 ದಿನಗಳಲ್ಲಿ 13,000 ಪ್ರತಿಗಳು ಮಾರಾಟಗೊಂಡಿದ್ದು, ಕೆಲವು ಪ್ರತಿಷ್ಟಿತ ಮಲಯಾಳೀ ಸಾಹಿತಿಗಳು ಪುಸ್ತಕವನ್ನು ಖಂಡಿಸುತ್ತಾ, ಈಕೆಯನ್ನು “ದುಡ್ಡು ಮಾಡುವ ತಂತ್ರ” ಎಂದು ಅವಹೇಳನ ಮಾಡಿದ್ದಾರೆ, ಇದಕ್ಕೆ ನಳಿನಿ ಕೊಡುವ ಉತ್ತರ ಹೀಗಿದೆ: “My book’s not a salacious account of my bedroom stories. It has only helped reduce violence towards women. Some of the famous Malayalam writers were my clients, but I don’t want to name any”.
ನಳಿನಿ ಜಮೀಲರ ಈ ಆತ್ಮಕಥೆಯಲ್ಲಿ ಸ್ಪುಟವಾಗಿ ಕಾಣಸಿಗುವ ವಿಚಾರವೆಂದರೆ, ಸಮಾಜದಲ್ಲಿ ವೇಶ್ಯೆಯರಿಗೆ ಸಿಗಬೇಕಾದ ಸ್ಥಾನ, ಗೌರವಗಳ ಹಕ್ಕುಗಳ ಪ್ರತಿಪಾದನೆ ಮತ್ತು ಹುಡುಕಾಟದ ಅತ್ಯಂತ ಪ್ರಾಮಾಣಿಕ ಪ್ರಯತ್ನ.
ನನ್ನ ಸ್ತ್ರೀವಾದೀ ಧೋರಣೆಗಳು, ವ್ಯಕ್ತಿಗತ ಮಾನ್ಯತೆಗಳು ನಳಿನಿಯ ಮಾತುಗಳಿಗೆ ಮಿಡಿದದ್ದು ನಿಜವಾದರೂ, ನನ್ನದೇ ಸಾಕಷ್ಟು ಅನುಮಾನಗಳು, ಭಿನ್ನ ವಿಚಾರಗಳು ಇದಕ್ಕೆ ವಿರೋಧಿಸಿದ್ದು ಹೌದು. ಇದಕ್ಕೆ ನನ್ನ ಕಲ್ಪನೆಯ ‘ಸಮಾಜ’ ಅಥವಾ ನನ್ನ ‘ಮಡಿವಂತ’ ಮನಸ್ಸು ಕಾರಣವಾಗಿರಬಹುದೇ? ಗೊತ್ತಿಲ್ಲ! ಒಟ್ಟಿನಲ್ಲಿ, ಎಲ್ಲರೂ ಓದಬೇಕಾದ ಈ ಪುಸ್ತಕ, ನಾನಾಗಲೇ ಹೇಳಿದಂತೆ ಒಂದು ವಿಚಾರಲಹರಿಯನ್ನು ಹುಟ್ಟಿಸದೇ ಇರಲಾರದು.
 

‍ಲೇಖಕರು avadhi

April 26, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Rj

    ತುಂಬ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ.
    ಆದರೆ ಇನ್ನಷ್ಟು ಒಳಗೆ ಹೋಗಬೇಕಿತ್ತು ಅಂತ ನನಗೆ ಅನಿಸಿತು.ಯಾಕಂದರೆ gender ಪ್ರಕಾರ,ನಿಮಗೆ ಒಂದು ಅನುಕೂಲತೆಯಿತ್ತು.ಸ್ವತಃ ಒಬ್ಬ ಗಟ್ಟಿ ಬರಹಗಾರ್ತಿಯಾಗುತ್ತಿರುವ ನೀವು ಆಕೆಯ ಬಹಳಷ್ಟು ವಿಚಾರಗಳನ್ನು ಓದುಗರಿಗೆ ವಿಶದಪಡಿಸಬಹುದಿತ್ತು ಅನ್ನುವದು ನನ್ನ ಕಳಕಳಿ ಮತ್ತು ಆಸೆಯಾಗಿತ್ತು.
    -Rj

    ಪ್ರತಿಕ್ರಿಯೆ
  2. Anuradha.B.Rao

    ಚೆನ್ನಾಗಿ ವಿಶ್ಲೇಷಿಸಿದ್ದೀರಿ, ಅಭಿನಂದನೆಗಳು .

    ಪ್ರತಿಕ್ರಿಯೆ
  3. D.Ravivarma

    ತನ್ನ ಈ ಪುಸ್ತಕ ಪ್ರಕಟಗೊಂಡ 100 ದಿನಗಳಲ್ಲಿ 13,000 ಪ್ರತಿಗಳು ಮಾರಾಟಗೊಂಡಿದ್ದು, ಕೆಲವು ಪ್ರತಿಷ್ಟಿತ ಮಲಯಾಳೀ ಸಾಹಿತಿಗಳು ಪುಸ್ತಕವನ್ನು ಖಂಡಿಸುತ್ತಾ, ಈಕೆಯನ್ನು “ದುಡ್ಡು ಮಾಡುವ ತಂತ್ರ” ಎಂದು ಅವಹೇಳನ ಮಾಡಿದ್ದಾರೆ, ಇದಕ್ಕೆ ನಳಿನಿ ಕೊಡುವ ಉತ್ತರ ಹೀಗಿದೆ: “My book’s not a salacious account of my bedroom stories. It has only helped reduce violence towards women. Some of the famous Malayalam writers were my clients, but I don’t want to name any”.
    ನಳಿನಿ ಜಮೀಲರ ಈ ಆತ್ಮಕಥೆಯಲ್ಲಿ ಸ್ಪುಟವಾಗಿ ಕಾಣಸಿಗುವ ವಿಚಾರವೆಂದರೆ, ಸಮಾಜದಲ್ಲಿ ವೇಶ್ಯೆಯರಿಗೆ ಸಿಗಬೇಕಾದ ಸ್ಥಾನ, ಗೌರವಗಳ ಹಕ್ಕುಗಳ ಪ್ರತಿಪಾದನೆ ಮತ್ತು ಹುಡುಕಾಟದ ಅತ್ಯಂತ ಪ್ರಾಮಾಣಿಕ ಪ್ರಯತ್ನ.
    ನನ್ನ ಸ್ತ್ರೀವಾದೀ ಧೋರಣೆಗಳು, ವ್ಯಕ್ತಿಗತ ಮಾನ್ಯತೆಗಳು ನಳಿನಿಯ ಮಾತುಗಳಿಗೆ ಮಿಡಿದದ್ದು ನಿಜವಾದರೂ, ನನ್ನದೇ ಸಾಕಷ್ಟು ಅನುಮಾನಗಳು, ಭಿನ್ನ ವಿಚಾರಗಳು ಇದಕ್ಕೆ ವಿರೋಧಿಸಿದ್ದು ಹೌದು. ಇದಕ್ಕೆ ನನ್ನ ಕಲ್ಪನೆಯ ‘ಸಮಾಜ’ ಅಥವಾ ನನ್ನ ‘ಮಡಿವಂತ’ ಮನಸ್ಸು ಕಾರಣವಾಗಿರಬಹುದೇ? ಗೊತ್ತಿಲ್ಲ! ಒಟ್ಟಿನಲ್ಲಿ, ಎಲ್ಲರೂ ಓದಬೇಕಾದ ಈ ಪುಸ್ತಕ, ನಾನಾಗಲೇ ಹೇಳಿದಂತೆ ಒಂದು ವಿಚಾರಲಹರಿಯನ್ನು ಹುಟ್ಟಿಸದೇ ಇರಲಾರದು…..ondu kshana manasannu hidididuva baraha…aa pustike tarisikolluve..publisherbagge tilisiddare chennagiruttittu…bangasloreninda pustike tarisode ondu saahasa…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: