ಸಂಧ್ಯಾರಾಣಿ ಕಾಲಂ : ’ರಂಗಶಂಕರ’ದಾಚೆಗೆ…

ಲಾಲನ್ ಹಾಡುಗಳೂ, ಬಾವುಲ್ ಸಂಗೀತವೂ…

ಒಮ್ಮೆರಂಗಶಂಕರದಲ್ಲಿ ಬಾವುಲ್ ಕವಿ ಲಾಲನ್ ಫಕೀರ್ ಕುರಿತ ಗೀತ ನಾಟಕಕ್ಕೆ ಹೋಗಿದ್ದೆ, ಆ ರಂಗ ಸಜ್ಜಿಕೆ, ಆ ಬೆಳಕು, ರಂಗಸಜ್ಜಿಕೆಯ ಮೇಲಿದ್ದ ಆ ನದಿಯ ಚಲನೆ, ಥಟ್ ಎಂದು ಅನಾವರಣಗೊಂಡ ಕನ್ನಡಿಗಳು ಶಹರ ….. ನಾನು ಸಂಪೂರ್ಣ ಮೂಕವಿಸ್ಮಿತಳಾಗಿ ನೋಡುತ್ತಿದ್ದೆ… ಪ್ರೇಮ, ತತ್ವ, ಆರಾಧನೆ, ಲಾಟೀನಿನ ಬೆಳಕು ಏನೆಲ್ಲಾ ಇತ್ತು ಅಲ್ಲಿ.
’ಈ ಕನ್ನಡಿಗಳ ಊರಿನಲ್ಲಿ ನನ್ನ ಆ ನೆರೆಮನೆಯವನನ್ನು ಹುಡುಕುತ್ತಿದ್ದೇನೆ, ಸಿಗುತ್ತಿರುವುದೆಲ್ಲ ಕನ್ನಡಿಗಳಲ್ಲಿರುವ ಅರೆ ಬರೆ ದೃಶ್ಯಗಳು, ಅವನು ನನ್ನ ಅಂತಃಪ್ರಜ್ಞೆಗೆ ಸಿಕ್ಕಿದ್ದಾನೆ, ಆದರೆ ಅವನನ್ನು ಕಂಡಿಲ್ಲ…’, ಬಾವುಲ್ ಸಂಗೀತ ಅನುರಣಿಸುತ್ತಿತ್ತು. ನನಗೂ ಅಷ್ಟೆ, ಲಾಲನ್ ಫಕೀರ್ ಅನುಭೂತಿಗೆ ಸಿಗುತ್ತಿದ್ದ, ಆದರೆ ಪೂರ್ತಿ ಅರ್ಥ ಆಗಿದ್ದ ಅನ್ನಲಾರೆ… ಪೂರ್ತಿಯಾಗಿ ಮುಳುಗದೇ ಅರಿವಿಗೆ ದಕ್ಕಲಾರ ಈತ ಅನ್ನಿಸಿತ್ತು. ಅಲ್ಲಿ ರಂಗದ ಮೇಲೊಂದು ನಾಟಕ, ಆಗಾಗ ಹಿಂದಿನ ತೆರೆಯ ಮೇಲೆ ಲಾಲನ್ ಬಗೆಗಿನ ಒಂದು ಕಿರುಚಿತ್ರ, ನಡುನಡುವೆ ಬಾವುಲ್ ಸಂಗೀತ … ಅದೊಂದು ಅವಿಸ್ಮರಣೀಯ ಅನುಭೂತಿ. ಆದರೆ ಮನಸ್ಸನ್ನು ಪೂರ್ತಿ ಅದರಲ್ಲಿ ಮುಳುಗಿಸಿರುವಾಗ ಬೆಂಗಾಲಿ ಭಾಷೆಯ ಕಿರುಚಿತ್ರಕ್ಕಿದ್ದ ಇಂಗ್ಲಿಷ್ ಸಬ್ ಟೈಟಲ್ ಓದುವುದು ಯಾಕೋ ರಸಭಂಗ ಅನ್ನಿಸಿ, ಭಾಷೆಯನ್ನು ಮರೆತು, ಭಾವಕ್ಕೆ ಮನಸ್ಸನ್ನೊಪ್ಪಿಸಿ ಕುಳಿತುಬಿಟ್ಟಿದ್ದೆ. ಬಾವುಲ್ ಸಂಗೀತ ಇಂಚಿಂಚಾಗಿ ನನ್ನನ್ನು ಆವರಿಸುತ್ತಿತ್ತು..
ಆದರೆ ಲಾಲನ್ ನನ್ನನ್ನು ಹಾಗೆ ಮರೆಯಲು ಬಿಡಲಿಲ್ಲ. ಅದಾಗಿ ಎಷ್ಟೋ ತಿಂಗಳಾದರೂ ಲಾಲನ್ ಮಾತುಗಳು ಮತ್ತು ಬಾವುಲ್ ಸಂಗೀತದ ಗುಂಗು ಹಾಗೇ ಇತ್ತು. ಲಾಲನ್ ಬಗ್ಗೆ, ಬಾವುಲ್ ಸಂಗೀತದ ಬಗ್ಗೆ ಸಿಕ್ಕಷ್ಟು ಮಾಹಿತಿ ಓದುತ್ತಾ ಹೋದೆ. ಯಾಕೆಂದರೆ ಲಾಲನ್ ಮತ್ತು ಬಾವುಲ್ ಸಂಗೀತಕ್ಕೆ ಅವಿನಾಭಾವ ಸಂಬಂಧವಿದೆ. ಬಾವುಲ್ ಇಲ್ಲದೆ ಲಾಲನ್ ಇಲ್ಲ, ಲಾಲನ್ ಗಿಂತ ಎಷ್ಟೋ ವರ್ಷಗಳ ಮೊದಲಿನಿಂದ ಆಚರಣೆಯಲ್ಲಿದ್ದರೂ ಲಾಲನ್ ಬಂದ ಮೇಲೆಯೇ ಬಾವುಲ್ ಗೆ ಒಂದು ಭದ್ರ ಅಸ್ತಿತ್ವ ದೊರೆತದ್ದು. ಹೀಗಾಗಿ, ಲಾಲನ್ ಬಗ್ಗೆ ತಿಳಿದುಕೊಳ್ಳುವುದೆಂದರೆ ಬಾವುಲ್ ಸಂಗೀತದ ಬಗ್ಗೆಯೂ ತಿಳಿಯಬೇಕು. ಬಾವುಲ್ ಸಂಗೀತಕ್ಕೆ ಅನುವಾಗುವುದೆಂದರೆ ಲಾಲನ್ ನನ್ನೂ ಎದೆಗಿಳಿಸಿಕೊಳ್ಳಬೇಕು.
ಲಾಲನ್ ಸಾಂಯಿ ಅಥವಾ, ಲಾಲನ್ ಶಾ ಫಕೀರ್ ಬಾಂಗ್ಲಾದವನು. ೧೭೭೪ ರಲ್ಲಿ ಈಗಿನ ಬಾಂಗ್ಲಾದೇಶದ ಕುಷ್ಟಿಯಾ ಎಂಬಲ್ಲಿ ಹುಟ್ಟಿದವನು. ಲಾಲನ್ ನ ಬಾಲ್ಯದ ಬಗ್ಗೆ ಜಾಸ್ತಿ ಗೊತ್ತಿಲ್ಲ. ಆದರೆ ಆತ ಬೆಳೆದ ಮೇಲಿನ ಒಂದು ಕಥೆ ಪ್ರಚಲಿತವಾಗಿದೆ. ಅದು ಅವನ ಜೀವನವನ್ನೇ ಬದಲಿಸಿ ಹಾಕುತ್ತದೆ. ಅದು ನಡೆದದ್ದು ಹೀಗೆ. ಹಿಂದೂ ಧರ್ಮದಲ್ಲಿ ಹುಟ್ಟಿದ ಈತ ಒಮ್ಮೆ ಹಳ್ಳಿಯವರೊಂದಿಗೆ ತೀರ್ಥಯಾತ್ರೆಗೆ ಹೋಗುತ್ತಾನೆ. ದಾರಿಯಲ್ಲಿ ಇವನಿಗೆ ಸಿಡುಬು ಬಂದು ಪರಿಸ್ಥಿತಿ ಬಿಗಡಾಯಿಸುತ್ತದೆ. ಜೊತೆಯಲ್ಲಿದ್ದವರು ಈತ ಸತ್ತನೆಂದೇ ಭಾವಿಸಿ, ಇವನನ್ನು ನದಿಯಲ್ಲಿ ತೇಲಿಬಿಟ್ಟು ಹೊರಟುಬಿಡುತ್ತಾರೆ. ಆದರೆ ಸಾವಿನೊಡನೆ ಹೋರಾಡುತ್ತಾ ಇವನು ಚೌರಿಯಾ ಎಂಬ ಊರಿಗೆ ತೇಲಿ ಬರುತ್ತಾನೆ. ದಡದಲ್ಲಿ ಬಿದ್ದು ’ನೀರು ನೀರು’ ಎಂದು ಕನವರಿಸುವಾಗ ಅಲ್ಲಿ ನೇಕಾರರ ಪಂಗಡಕ್ಕೆ ಸೇರಿದ ಒಬ್ಬ ಮುಸ್ಲಿಂ ಮಹಿಳೆ ನೀರು ತರಲು ಬರುತ್ತಾಳೆ. ಲಾಲನ್ ನೀರು ಕೇಳಿದಾಗ, ’ನಾನು ಮುಸ್ಲಿಂ ಧರ್ಮಕ್ಕೆ ಸೇರಿದವಳು, ನಾನು ಕೊಟ್ಟ ನೀರು ಕುಡಿದರೆ ನಿನ್ನ ಜಾತಿ ಕೆಡಬಹುದು’, ಎಂದಾಗ ಲಾಲನ್, ’ಅಮ್ಮಾ, ತಾಯಂದಿರಿಗೆ ಜಾತಿ ಇಲ್ಲ ಎನ್ನುತ್ತಾನೆ’. ನೀರು ಕುಡಿದು ಸುಧಾರಿಸಿಕೊಂಡಾಗ ತಾನು ನದಿಯ ಪಕ್ಕದಲ್ಲೇ ಬಿದ್ದು ನೀರಿಗಾಗಿ ತಳಮಳಿಸುತ್ತಿದ್ದೆ ಎನ್ನುವುದು ಲಾಲನ್ ಗೆ ಅರಿವಾಗುತ್ತದೆ.
ನದಿ ಆಮೇಲೆ ಲಾಲನ್ ನ ಹಾಡುಗಳಲ್ಲಿ ನಾನಾ ರೂಪದಲ್ಲಿ ಕಾಣಿಸಿಕೊಳ್ಳುತ್ತಾ ಹೋಗುತ್ತದೆ. ನದಿ ಹಾಗು ಪಕ್ಷಿ ಈತನ ಹಾಡುಗಳಲ್ಲಿ ನಾನಾ ಸತ್ಯಗಳಿಗೆ ರೂಪಕಗಳಾಗಿ ಬರುತ್ತವೆ. ಬದುಕಿಗೆ, ಪ್ರಾಣಕ್ಕೆ, ಪ್ರೇಮಕ್ಕೆ, ಆರಾಧನೆಗೆ … ಹೀಗೆ.
ಇರಲಿ. ಲಾಲನ್ ಗೆ ಆ ಮುಸ್ಲಿಂ ಹೆಣ್ಣಿನ ಮನೆಯಲ್ಲಿ ಆಶ್ರಯ ಸಿಕ್ಕುತ್ತದೆ, ಆಕೆ ಮತ್ತು ಆಕೆಯ ಪತಿ ಅವನಿಗೆ ಚಿಕಿತ್ಸೆ ನೀಡಿ ಅವನ ಜೀವ ಉಳಿಸುತ್ತಾರೆ. ಆಮೇಲೆ ತನ್ನ ಊರಿಗೆ ಹಿಂದಿರುಗುವ ಲಾಲನ್ ನನ್ನು ಜಾತಿಭ್ರಷ್ಟ ಎಂದು ಹೇಳಿ ಊರಿನಿಂದ ಗಡಿಪಾರು ಮಾಡಲಾಗುತ್ತದೆ. ಮತ್ತೆ ತನಗೆ ಮರುಜನ್ಮ ನೀಡಿದ ದಂಪತಿಗಳ ಮನೆಗೇ ಬರುವ ಲಾಲನ್ ಅಲ್ಲೇ ಉಳಿಯುತ್ತಾನೆ.

ಇದನ್ನು ಓದುವಾಗ, ಲಾಲನ್ ಹೇಳಿದ “ತಾಯಂದಿರಿಗೆ ಜಾತಿ ಇಲ್ಲ’ ಎನ್ನುವ ಮಾತು ನನ್ನ ಮನದಲ್ಲಿ ಉಳಿದುಬಿಟ್ಟಿತು. ಮುಂದೊಮ್ಮೆ ಲಾಲನ್ ನ ಒಂದು ಹಾಡಿನಲ್ಲಿ ಇದೇ ಭಾವ ಬರುತ್ತದೆ, ’ಎಲ್ಲಾರೂ ಲಾಲನ್ ನ ಜಾತಿ ಯಾವುದು ಎನ್ನುತ್ತಾರೆ, ನಾನು ನೋಡಿಲ್ಲ ಅದನ್ನು, ಹೇಗಿರುತ್ತದೆ? ಸಾವಿನಲ್ಲಿ ಜಾತಿ ಯಾವುದು?’ ’ಸುನ್ನತಿಯಾಗಿದ್ದರೆ ಆತನನ್ನು ಮುಸ್ಲಿಂ ಎನ್ನುತ್ತೀರಿ, ಸರಿ. ಆದರೆ ಮುಸ್ಲಿಂ ಹೆಣ್ಣನ್ನು ಗುರುತಿಸುವುದು ಹೇಗೆ? ಜನಿವಾರ ಇದ್ದರೆ ಬ್ರಾಹ್ಮಣ ಅನ್ನುತ್ತೀರಿ, ಆದರೆ ಬ್ರಾಹ್ಮಣಿಯನ್ನು ಗುರುತಿಸುವುದು ಹೇಗೆ?’ ಅನ್ನುತ್ತಾನೆ. ನಿಜ, ’ಅಮ್ಮಾ’ ಎನ್ನುವ ಮಾತಿಗೆ ಜಾತಿಯ ಹಂಗಿಲ್ಲ ಅಲ್ಲವೆ?
ಕಟ್ಟರ್ ಹಿಂದು ಮತ್ತು ಕಟ್ಟರ್ ಇಸ್ಲಾಮೀ ನೀತಿಯನ್ನು ವಿರೋಧಿಸಿ ಹುಟ್ಟಿದ್ದು ಬಾವುಲ್ ಪಂಥ. ಲಾಲನ್ ಬಾವುಲ್ ಪಂಥದ ಪ್ರಮುಖ ಅನುಯಾಯಿ. ಇಲ್ಲಿ ವೈಷ್ಣವ, ಇಸ್ಲಾಂ, ಸೂಫಿ, ಬೌದ್ಧ, ಶಾಕ್ತ ಮತ್ತು ನಾಥ ಪರಂಪರೆಯ ತತ್ವಗಳ ಸಮ್ಮಿಲನ ಇದೆ. ತಾಂತ್ರಿಕ ಆಚರಣೆಗಳೂ ಇವರ ಪಂಥದ ಒಂದು ನಿಯಮ. ಇವರು ಜಾತಿಗಳನ್ನು ನಂಬುವವರಲ್ಲ, ದೇವಸ್ಥಾನಕ್ಕೆ ಹೋಗುವವರಲ್ಲ. ಬಂಗಾಲಿಗಳ ಜನಸಂಖ್ಯೆಯಲ್ಲಿ ಒಂದು ಸಣ್ಣ ಭಾಗವಾಗಿದ್ದರೂ ಬಂಗಾಲಿ ಸಂಸ್ಕೃತಿಗೆ ಬಾವುಲರ ಕೊಡುಗೆ ಅಪಾರ. ಬೆಂಗಾಲಿ ಜನಮಾನಸಕ್ಕೆ ಬಾವುಲರು ನೀಡಿರುವ ಬಳುವಳಿ ಕೇವಲ ಸಂಗೀತವಲ್ಲ, ಅದು ಒಂದು ಧರ್ಮ, ಒಂದು ಜೀವನ ರೀತಿ, ಅದು ಒಂದು ಆತ್ಮಗೌರವ ಸಹ. ಮಾನವ ಜನಾಂಗದ ಇತಿಹಾಸದಲ್ಲಿ ಅದ್ಭುತ ಮೌಖಿಕ ಪರಂಪರೆಗಳಲ್ಲಿ ಬಾವುಲ್ ಸಹ ಒಂದು ಎಂದು ಯುನೆಸ್ಕೋ ೨೦೦೫ ರಲ್ಲಿ ಗುರುತಿಸಿದೆ. ಬಾವುಲ್ ಪಂಥಕ್ಕೆ ಒಂದು ಇತಿಹಾಸ, ಒಂದು ಪರಂಪರೆ ಇದೆ. ಈ ಪದದ ಮೊದಲ ಉಲ್ಲೇಖ ೧೫ನೆಯ ಶತಮಾನದಲ್ಲಿ ಬಾಂಗ್ಲಾ ಕೃತಿಗಳಲ್ಲಿ ಸಿಗುತ್ತದೆ.

ಬಾವುಲರಲ್ಲಿ ಎರಡು ಪಂಗಡ. ಒಂದು ಪಂಗಡ ಮದುವೆಯಾಗುವುದಿಲ್ಲ, ಸಂಚಾರದಲ್ಲಿ ನಂಬಿಕೆ ಇಟ್ಟಿರುತ್ತದೆ. ಒಂದು ಆಖ್ರಾದಿಂದ ಇನ್ನೊಂದು ಆಖ್ರಾಕ್ಕೆ ಪ್ರಯಾಣ ಮಾಡುತ್ತಾ ನಿರಂತರ ಸಂಚಾರದಲ್ಲಿರುತ್ತಾರೆ. (ಅಖ್ರಾ ಎಂದರೆ ಬಾವುಲ್ ಅನುಯಾಯಿಗಳು ತಂಗುವ, ಹಾಡುವ ಒಂದು ತಂಗುದಾಣ). ಇವರ ಸಾಧನೆಗೆ ಸಂಗಾತಿ ಇರುತ್ತಾಳೆ. ಲಾಲನ್ ಗೂ ಒಬ್ಬ ಸಂಗಾತಿ ಇದ್ದಳು, ಅವಳ ಹೆಸರು ವೈಶಾಖ.
ಮತ್ತೊಂದು ಪಂಗಡ ಸಂಸಾರಿಯಾಗಿದ್ದು, ದೀಕ್ಷೆಯನ್ನು ಕೈಗೊಂಡಿರುತ್ತಾರೆ. ಇವರು ಊರುಗಳಲ್ಲೇ ಇದ್ದರೂ ಇವರ ಬಿಡಾರ ಪ್ರತ್ಯೇಕವಾಗಿರುತ್ತದೆ. ಎರಡೂ ಪಂಗಡಗಳೂ ಶಾಕ್ತ ಮತ್ತು ನಾಥ ಪರಂಪರೆಯ ಆಚರಣೆಗಳನ್ನು ಮಾಡುವುದರಿಂದ ಅದನ್ನು ರಹಸ್ಯವಾಗಿರಿಸಲಾಗುತ್ತದೆ, ಹೀಗಾಗಿ ಊರಿನವರೂ ಸಹ ಅವರಿಂದ ಒಂದು ದೂರ ಕಾಯ್ದುಕೊಳ್ಳುತ್ತಾರೆ.
ಹಾಗಾದರೆ ಹಾಡುಗಳ ಮೂಲಕ ಬಾವುಲರು ಹುಡುಕುವುದಾದರೂ ಏನನ್ನು? ಬಾವುಲ್ ಹುಡುಕಾಟ ’ಮನೇರ್ ಮಾನುಶ್’ ನಿಗಾಗಿ, ಮನೇರ್ ಮಾನುಶ್ ಅಂದರೆ ಮನಸ್ಸುಳ್ಳ ಮಾನವ. ಬಾವುಲರು ಪ್ರೀತಿಸುವ ಮನಸ್ಸಿರುವ ಹೃದಯದಲ್ಲಿ ದೇವರು ನೆಲೆಸುತ್ತಾನೆ ಎಂದು ನಂಬುತ್ತಾರೆ, ಅಂತಹ ಮನಸ್ಸುಳ್ಳ ಮನುಷ್ಯನೇ ಸಾಂಯಿ ಅಥವಾ ಫಕೀರ್. ಆತನೇ ಗುರು. ಅವನ ಹುಡುಕಾಟ ಪ್ರತಿಯೊಬ್ಬ ಬಾವುಲ್ ನಿಗಿರುತ್ತದೆ. ಅಂತಹ ಒಬ್ಬ ಗುರು, ಸಾಂಯಿಯೇ ಲಾಲನ್.
ಬಾವುಲ್ ಪಂಥದಲ್ಲಿ ಆಚರಣೆಗಳಿಗೆ ಮಹತ್ವ ಇಲ್ಲ, ಇಲ್ಲಿ ಸಂಗೀತವೇ ಆಚರಣೆ. ಬಾವುಲ್ ಎಂದರೆ ಒಂದು ಪಂಥವೂ ಹೌದು, ಒಂದು ಸಂಗೀತ ಪರಂಪರೆಯೂ ಹೌದು. ಇಲ್ಲಿ ಸಂಗೀತವೇ ಆತ್ಮದ ಅನುಸಂಧಾನ. ಗಮನಿಸಬೇಕಾದ ವಿಷಯವೆಂದರೆ ಈ ಪಂಥಕ್ಕೆ ಸೇರಿದವರಲ್ಲಿ ಬಹಳಷ್ಟು ಜನ ಸಮಾಜದ ಕೆಳವರ್ಗಕ್ಕೆ, ನಿರ್ಲಕ್ಷಿತ ಸಮಾಜಕ್ಕೆ ಸೇರಿದವರು. ಅವರಲ್ಲಿ ಸುಮಾರು ಜನರಿಗೆ ಅಕ್ಷರ ಜ್ಞಾನ ಇರಲಿಲ್ಲ. ಬಹುಶಃ ಹೀಗಾಗಿ ಬಾವುಲ್ ಸಂಗೀತ ಅಕ್ಷರದಲ್ಲಿ ಬಂಧಿಯಾಗದೆ, ಮೌಖಿಕ ಪರಂಪರೆಗೇ ಉಳಿಯಿತು. ಹಾಗಾಗಿ ಅನೇಕ ಬಾವುಲ್ ಹಾಡುಗಳು ಕಾಲ ಕಳೆದಂತೆ ಕಣ್ಮರೆಯಾದರೂ, ಬಾವುಲ್ ಸಂಗೀತಕ್ಕೆ ಒಂದು ವಿಶಿಷ್ಟ ಮಿಸ್ಟಿಕ್ ಲಕ್ಷಣ ಸಹ ಸೇರ್ಪಡೆ ಆಯಿತು.
ಬಾವುಲ್ ಪಂಥದ ಮತ್ತೊಂದು ಪ್ರಮುಖ ಅಂಶವೆಂದರೆ, ಇಲ್ಲಿ ಗಂಡು ಹೆಣ್ಣಿನ ಸಂಬಂಧವನ್ನು ಮೋಕ್ಷ ಸಾಧನೆಗೆ ಅಡ್ಡಿ ಎಂದು ನೋಡುವುದಿಲ್ಲ, ಅದನ್ನು ಮೋಕ್ಷ ಸಾಧನೆಯ ಸಾಧನ ಎಂದೇ ಹೇಳುತ್ತಾರೆ. ಪ್ರೇಮ ಇರುವ ಹೃದಯದಲ್ಲಿ ದೇವರು ನೆಲೆಸುತ್ತಾನೆ ಎನ್ನುವುದು ಅವರ ನಂಬಿಕೆ. ರಂಗಶಂಕರದಲ್ಲಿ ಲಾಲನ್ ಬಗ್ಗೆ ನಾಟಕ ಆದಾಗ ಇದನ್ನು ಅದ್ಭುತವಾಗಿ ರಂಗದ ಮೇಲೆ ತಂದಿದ್ದರು. ರಂಗದ ತುಂಬೆಲ್ಲಾ ಹಾಸಿದ್ದ ಬಿಳಿ ಬಟ್ಟೆ ಅದುವರೆಗೂ ನದಿಯ ರೂಪಕವಾಗಿದ್ದು, ಈಗ ರಸ್ತೆಯ ರೂಪಕವಾಗುತ್ತದೆ. ಗಂಡು ಮತ್ತು ಹೆಣ್ಣು ಪರಸ್ಪರರಿಗೆ ಪೂರಕವಾಗಿ, ವಾಹಕರಾಗಿಯೇ ಬಾಳಿನ ಆ ದುರ್ಗಮ ಹಾದಿಯನ್ನು ದಾಟಬೇಕು ಎನ್ನುವುದನ್ನು ಭಾಷೆಯ ಹಂಗಿಲ್ಲದೆ ಭಾವಸೂಚಕವಾಗಿ ತೋರಿಸಿಕೊಡಲಾಯಿತು. ಇವರಿಬ್ಬರೂ ಪರಸ್ಪರರಿಗೆ ಹೊರೆಯಲ್ಲ, ಮಾಧ್ಯಮ ಎನ್ನುವ ಕಲ್ಪನೆಯೇ ಎಷ್ಟು ಸೊಗಸು. ಇಲ್ಲಿ ಮನೋತತ್ವದಷ್ಟೇ ಮುಖ್ಯವಾದದ್ದು ದೇಹತತ್ವ. ಮನಸ್ಸಿನಷ್ಟೇ ದೇಹವೂ ಇಲ್ಲಿ ತನ್ನತನದ ಹುಡುಕಾಟಕ್ಕೆ ಮುಖ್ಯ.
ಬಾವುಲ್ ಅಂದರೆ ಸುಮಾರು ಅರ್ಥಗಳಿವೆ, ಒಂದು ಅರ್ಥದ ಪ್ರಕಾರ ಬಾವುಲ್ ಎಂದರೆ ವಾಯು – ಅಂದರೆ ವಾಯುವಿನ ಚಲನೆಯನ್ನು ರಾಗದ ಮೂಲಕ ನಿಯಂತ್ರಿಸಿ ಮಾಡುವ ಆರಾಧನೆ. ಇದಕ್ಕೆ ಇನ್ನೊಂದು ಅರ್ಥ ವ್ಯಾಕುಲ್. ಮನಸ್ಸಿನ ಚಿಂತೆ, ವ್ಯಾಕುಲಗಳನ್ನು ಹೇಳಿಕೊಳ್ಳುವ ಸಂಗೀತ ಅಂತ ಸಹ ಅರ್ಥ. ಇದಲ್ಲದೆ ಬಾವುಲ್ ಗೆ ಇನ್ನೊಂದು ಅರ್ಥ ಸ್ಥಿಮಿತವಿಲ್ಲದ ಎಂದೂ ಆಗುತ್ತದೆ. ಒಂದು ಮತ್ತಿನ, ಒಂದು ಗುಂಗಿನ ಸಂಗೀತ ಅದು, ಸೂಫಿ ಹಾಡಿನಂತೆ. ಇಲ್ಲಿ ಸಂಗೀತಕ್ಕೆ ಚೌಕಟ್ಟಿಲ್ಲ, ಅದು ನದಿಯಂತ ಸಹಜ ಮತ್ತು ಅನಿರ್ಬಂಧಿತ.
ಲಾಲನ್ ತತ್ವ, ಚಿಂತನೆಯ ಪ್ರಭಾವ ರವೀಂದ್ರ ನಾಥ್ ಟಾಗೂರರ ಕೆಲವು ರಚನೆಗಳಲ್ಲಿ ಮತ್ತು ರಬೀಂದ್ರ ಸಂಗೀತದಲ್ಲೂ ಕಾಣಬಹುದು ಎಂದು ಹೇಳುತ್ತಾರೆ. ಬಾವುಲ್ ರನ್ನು ಕುರಿತು ರವೀದ್ರರು, ’ಅವರು ಧರಿಸುವ ಬಟ್ಟೆಗಳು ತೀರಾ ಸಾಧಾರಣ, ಆದರೆ ಒಮ್ಮೆ ಅವರು ಹಾಡತೊಡಗಿದರೆ, ಅವರ ಚಿಂತನೆ ಮತ್ತು ಅರಿವಿನ ಪರಿಚಯ ಆಗುತ್ತದೆ’ ಎನ್ನುತ್ತಾರೆ. ಇನ್ನು ಲಾಲನ್ ಬಗ್ಗೆ ಅವರು ಹೇಳುವುದು ಹೀಗೆ ’ಈ ಅನಕ್ಷರಸ್ಥ ಬಾವುಲ್ ಕವಿಯಲ್ಲಿ ನನಗೆ ಶೆಲ್ಲಿ ಕಾಣುತ್ತಾನೆ’ ಅಂತ.
ಲಾಲನ್ ಬದುಕಿನ ದುರಂತವೆಂದರೆ ಆತನ ಜೀವಿತ ಕಾಲದಲ್ಲಿ ಆತನನ್ನು ಮೇಲ್ವರ್ಗದ ಹಿಂದು ಮತ್ತು ಮುಸ್ಲಿಂ ಇಬ್ಬರೂ ದೂರ ತಳ್ಳಿದ್ದರು, ಅವನನ್ನು ಎದೆಗಪ್ಪಿಕೊಂಡು ತಮ್ಮಲ್ಲೊಬ್ಬನನ್ನಾಗಿ ಮಾಡಿಕೊಂಡಿದ್ದು ಸಮಾಜದ ಕೆಳವರ್ಗ. ಬಹುಷಃ ಹಾಗಾಗಿಯೇ ವಚನ ಚಳುವಳಿಯ ಹಾಗೆ, ಬಾವುಲ್ ಸಂಗೀತವೂ ಹೆಚ್ಚಾಗಿ ಜನಸಾಮಾನ್ಯರ ಭಾಷೆಯಲ್ಲೇ ರೂಪುಗೊಂಡಿತು. ಅವರು ಹಾಡಿಗೆ ಬಳಸುವ ವಾದ್ಯಗಳೂ ಅಷ್ಟೆ, ಜನಸಾಮಾನ್ಯರು ಸಾಧಾರಣವಾಗಿ ಬಳಸುವ ಏಕತಾರ, ದುಗ್ಗಿ ಇತ್ಯಾದಿ. ಲಾಲನ್ ಸುಮಾರು ೧೦,೦೦೦ ಹಾಡುಗಳನ್ನು ರಚಿಸಿದ್ದಾನೆ ಎಂದು ಹೇಳುತ್ತಾರೆ, ಆದರೆ ಸಧ್ಯಕ್ಕೆ ಈಗ ಲಭ್ಯವಿರುವುದು ಸುಮಾರು ೩೦೦೦ ಹಾಡುಗಳು ಮಾತ್ರ.
ಈಗ ಲಾಲನ್ ಹಾಡುಗಳ ಬಗ್ಗೆ ಸಂಶೋಧನೆಗಳಾಗುತ್ತಿವೆ, ಹಲವಾರು ಜನ ಹಳ್ಳಿ ಹಳ್ಳಿಗಳನ್ನು ಸುತ್ತಿ, ಲಾಲನ್ ಮತ್ತು ಬಾವುಲ್ ಹಾಡುಗಳನ್ನು ಸಂಗ್ರಹಿಸುತ್ತಿದ್ದಾರೆ, ಅವನ್ನು ಅಕ್ಷರ ರೂಪಕ್ಕಿಳಿಸುತ್ತಿದ್ದಾರೆ.
ಈತ ತೀರಿಕೊಂಡದ್ದು ೧೭ ಅಕ್ಟೋಬರ್ ೧೮೯೦ ರಲ್ಲಿ. ಸಾಯುವ ಎರಡು ಮೂರು ದಿನಗಳ ಮೊದಲು, ಖಾಯಿಲೆಗೆ ತುತ್ತಾಗಿದ್ದ ಈತ ನಡು ರಾತ್ರಿ ಎದ್ದು, ತನ್ನ ಶಿಷ್ಯನೊಬ್ಬನನ್ನು ಕರೆದು ಒಂದು ಭಾವವನ್ನು ಹಾಡಾಗಿಸಿ ಹೇಳಿಕೊಡುತ್ತಾನೆ, ಆ ಹಾಡಿನ ಸ್ಥೂಲ ಅನುವಾದ ಹೀಗಿದೆ ..
ಇದನ್ನೇ, ಈ ಕಾಡುಹಕ್ಕಿಯನ್ನೇ
ನಾನು ಪಳಗಿಸುವೆನೆಂದು ಕೊಂಡಿದ್ದು?
ಇದು ಹೀಗೆ, ನನ್ನ ನಿಯಂತ್ರಣಕ್ಕೆ
ಎಂದೆಂದಿಗೂ ಬರದು ಎನ್ನುವ
ಅರಿವಿದ್ದಿದ್ದರೆ, ಹೀಗೆ
ಹಚ್ಚಿಕೊಳ್ಳುತ್ತಿದ್ದೆನೇ ಇದನ್ನು?
ಈ ಹಾಡು ಹೊಂದಿರುವ ಆಯಾಮ, ಅರ್ಥ ಇನ್ನೂ ನನ್ನನ್ನು ಕಾಡುವುದನ್ನು ಬಿಟ್ಟಿಲ್ಲ. ಇಲ್ಲಿ ಇದು ಎಂದರೆ ಪ್ರಾಣವೇ? ಬದುಕೇ? ಪ್ರೇಮವೇ ಅಥವಾ ಇದಕ್ಕೂ ಮೀರಿದ್ದೇ??
ರಂಗಶಂಕರದಲ್ಲಿ ನಾಟಕ ಮುಗಿಯುವಷ್ಟರಲ್ಲಿ ಲಲನ್ ಫಕೀರ್ ಸಮಾಧಿಯ ಚಿತ್ರ ಪರದೆಯ ಮೇಲೆ ಮೂಡಿತ್ತು … ನನಗೆ ಒಂದು ಹಳೆಯ ದೇವಸ್ಥಾನ ಕಂಡಂತಹ ಭಾವನೆ … ಅಲ್ಲಲ್ಲಿ ಮರದ ಮೇಲೆ ಹಕ್ಕಿಗಳ ಚಿಲಿಪಿಲಿ, ಅಂಗಳದಲ್ಲಿ ಮಣ್ಣು, ಅಲ್ಲಲ್ಲಿ ಕುಳಿತಿದ್ದ ಫಕೀರರು, ದರವೇಸಿಗಳು … ಅವರು ಹಾಡುತ್ತಿದ್ದ ಲಲನ್ ಫಕೀರ್ ಹಾಡುಗಳು, ಬೆಂಗಾಲಿ ಅರ್ಥವಾಗದಿದ್ದರೂ ಜೋಗುಳದಂತಹ ಹಾಡುಗಳು …. ಅಲ್ಲಿ ನನಗೆ ಒಂದು ಸಮಷ್ಟಿ ಕಾಣುತ್ತಿತ್ತು. ’ಇದು ಅಂದಿನ ಚಿತ್ರ, ನಾವು ೧೫ ವರ್ಷಗಳು ನಂತರ ಹೋಗುವಷ್ಟರಲ್ಲಿ ಪರಿಸ್ಥಿತಿ ಬದಲಾಗಿತ್ತು’, ನಿರೂಪಕರು ಹೇಳುತ್ತಾ ಹೋದರು, ತೆರೆಯ ಮೇಲೆ ಬದಲಾದ ಚಿತ್ರ, ಪೂರ್ತಿ ಬಣ್ಣ ಕಂಡ ಲಾಲನ್ ಫಕೀರ್ ಸ್ಮಾರಕ ಭವನ, ಪಕ್ಕಾ ಕಟ್ಟಡ, ಕಣ್ಣಿಗೆ ಕಟ್ಟುವ ಬಣ್ಣ, ಸುತ್ತಲೂ ಭದ್ರವಾದ ಗ್ರಿಲ್ಲು, ಒಂದು ಪಿಕ್ನಿಕ್ ಸ್ಥಳದಂತೆ ಕಂಡ ಜಾಗ, ಅಲ್ಲಲ್ಲಿ ಜಾಹಿರಾತುಗಳು, ಗ್ರಾನೈಟು …… ಅಹಾ ಎಂತಹ ವೈಭವ …. ಆದರೆ ಯಾಕೋ ಅಲ್ಲಿ ಲಾಲನ್ ಫಕೀರ್ ಇರಲಿಲ್ಲ ….. ಮನಸ್ಸು ಭಾರವಾಯಿತು …

ಈಗ ಬರೆಯುವುದು ಮುಗಿಯುತ್ತಾ ಬಂದರೂ ನನ್ನ ಹುಡುಕಾಟ ಮುಗಿದಿಲ್ಲ. ಲಾಲನ್ ಕುರಿತು ಶುರುವಾದ ನನ್ನ ಹುಡುಕಾಟ, ಈಗ ಲಾಲನ್ ನ ಹುಡುಕಾಟವಾಗಿ ಬದಲಾಗಿದೆ. ನಾವೂ ಸಹ ಸುತ್ತ ಮುತ್ತ ಕನ್ನಡಿಗಳಿದ್ದರೂ ಪೂರ್ತಿಯಾಗಿ ದಕ್ಕದ ನಮ್ಮೊಳಗಿನ ನಾವು ಎಲ್ಲಿ ಎಂದು ಹುಡುಕುತ್ತಲೇ ಇರುತ್ತೇವೆ ಅಲ್ಲವೆ? ಅಷ್ಟು ಸುಲಭವೆ ಅವನನ್ನು ಕಾಣುವುದು, ನಮ್ಮನ್ನು ಕಾಣುವುದು, ನಮ್ಮಲ್ಲಿ ಅವನನ್ನು, ಅವನಲ್ಲಿ ನಮ್ಮನ್ನು ಕಾಣುವುದು? ಅದರಲ್ಲೂ ನಮ್ಮೊಳಗಿನ ನಾವು ನೀರಿನಂತೆ, ನಮ್ಮನ್ನು ಒಳಗೊಂಡ ಪಾತ್ರಗಳಿಗೆ ತಕ್ಕಂತೆ ಬದಲಾಗುತ್ತಾ, ಬರಿದಾಗುತ್ತಾ ಹೋದಾಗ ಎಲ್ಲಿ ಅಂತ ಹುಡುಕುವುದು ನಮ್ಮನ್ನು ನಾವು?

‍ಲೇಖಕರು avadhi

August 9, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. bharathi

    Avattu ninna jotheye naanu koothu nodi marethoo bittidde. Ninna baraha tumba tumba vishya thilisi kodthu …thnx

    ಪ್ರತಿಕ್ರಿಯೆ
  2. Tejaswini Hegde

    ಲಾಲನ್ ಮತ್ತು ಬಾವುಲ್ – ಈ ಹೆಸರುಗಳ ಪರಿಚಯವೇ ಇರಲಿಲ್ಲ.. ಸಾಕಷ್ಟು ಮಾಹಿತಿ ದೊರಕಿತು….
    ಎಲ್ಲರೂ ಅಷ್ಟೇ.. ಪಕ್ಕದಲ್ಲೇ ನದಿಯಿದ್ದರೂ ನೀರಿಗಾಗಿ ಹುಡುಕುವವರೇ…
    ಲೇಖನ.. ಇಷ್ಟವಾಯಿತು.:)

    ಪ್ರತಿಕ್ರಿಯೆ
  3. suri

    ನಮಸ್ಕಾರ,
    ನನ್ನ ಬೆಂಗಾಲಿ ಗೆಳೆಯ ಕೆಲವು ಲಾಲನ್ ಹಾಡುಗಳನ್ನು ಕೊಟ್ಟ. ನೀವು ನೋಡಿದ ನಾಟಕದ ನಟ ಮತ್ತು ಲೇಖಕ ನನ್ನ ಗೆಳೆಯ. ಈ ಲಾಲನ್ ಹುಚ್ಚು ನನಗೆ ಹತ್ತಿದ್ದು ಬಹಳ ಹಿಂದೆ, ಯಾವುದೋ ಒಂದು ಸಂದರ್ಭದಲ್ಲಿ ಒಮ್ಮೆ ಒಂದು ಹಾಡು ಕೇಳಿದೆ. ಅಂದಿನಿಂದ ಲಾಲನ್ ಬೆನ್ನು ಹತ್ತಿದ್ದೇನೆ. ಲಾಲನ್ ಫ಼ಕೀರನ ಒಂದಷ್ಟು ಹಾಡುಗಳನ್ನು ಮತ್ತೆ ಮತ್ತೆ ಕೇಳುತ್ತಿದ್ದೇನೆ. ಪದಗಳ ಹಿಂದಿನ ಭಾವವನ್ನು ಅರ್ಥ ಮಾಡಿಕೊಳ್ಳಲು ಇನ್ನೂ ಯತ್ನಿಸುತ್ತಿದ್ದೇನೆ. ನಮ್ಮಲ್ಲೂ ಶರೀಫ಼ ಇದ್ದನಲ್ಲ, ಅನುಭಾವಿ ಕವಿ, ಹಾಗೆ ಈತ. ನಿಮಗೆ ಬೆಂಗಾಲಿ ಬರುತ್ತದೆ ಎಂದರೆ ಹಾಡುಗಳನ್ನು ಕೊಡುತ್ತೇನೆ. ಪದಗಳ ಅರ್ಥ ತಿಳಿಸಿ ಸಹಾಯ ಮಾಡಿ. ಒಂದು ದಿನ ಇಷ್ಟ ಮನಸ್ಸಿನವರು ಒಟ್ಟಾಗಿ ಈ ಹಾಡುಗಳನ್ನು ಕೇಳಬಹುದು, ಎಲ್ಲರಿಗೂ ಇಚ್ಛೆ ಇದ್ದಲ್ಲಿ.
    ಸೂರಿ.

    ಪ್ರತಿಕ್ರಿಯೆ
    • Anonymous

      ಸರ್ ನಮಸ್ತೆ. ಲಾಲನ್ ಮತ್ತು ಬಾವುಲ್ ಸಂಗೀತ ಪರಿಚಯಿಸಿದ ರಂಗಶಂಕರಕ್ಕೆ ನಾನು ಋಣಿ. ಅರ್ಥವಾಗದೆಯೂ ನನ್ನದಾದ ಹಾಡುಗಳು ಅವು. ಅದರೆ ಆಮೇಲೆ ಹಾಡುಗಳನ್ನು ಹಿಡಿದು, ಅವಕ್ಕೆ ಇಂಗ್ಲಿಶ್, ಹಿಂದಿ ಅನುವಾದಗಳನ್ನು ಹುಡುಕಿ ಹಾಡುಗಳನ್ನು ನನ್ನದಾಗಿಸಿಕೊಳ್ಳಲು ಪ್ರಯತ್ನಿಸಿದ್ದೇನೆ. ನಿಮ್ಮಲ್ಲಿ ಆ ಹಾಡುಗಳಿದ್ದರೆ ದಯವಿಟ್ಟು ಕೊಡಿ. ಮತ್ತೆ ಬಾವುಲ್ ಸಂಗೀತ ಕೇಳುವ ಅವಕಾಶ ಸಿಕ್ಕಿದರೆ ಅದಕ್ಕಿಂತ ಮಿಗಿಲಾದುದೇನಿದೆ?
      ಸಂಧ್ಯಾರಾಣಿ

      ಪ್ರತಿಕ್ರಿಯೆ
  4. ರವೀಂದ್ರ ಮಾವಖಂಡ

    ’ಅಮ್ಮಾ, ತಾಯಂದಿರಿಗೆ ಜಾತಿ ಇಲ್ಲ ಎನ್ನುತ್ತಾನೆ’.
    WAHT A LINE!

    ಪ್ರತಿಕ್ರಿಯೆ
  5. ಉಷಾಕಟ್ಟೆಮನೆ

    ಲಾಲನ್ ಬಾವುಲ್; ಪರಿಚಯಾತ್ಮಕ ಲೇಖನ ಇಷ್ಟವಾಯ್ತು.

    ಪ್ರತಿಕ್ರಿಯೆ
  6. Prakash

    A very nice introduction to Lalan Fakir and bauls music. Will explore more. Thanks Sandhya.

    ಪ್ರತಿಕ್ರಿಯೆ
  7. umasekhar

    bhavul mathu lalan parichayisidakke thanks. ninnalli Aa hadugaliddare vomme keluva ase. Congrats sandhya.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: