ಸಂಪು ಕಾಲಂ : ನನಗೂ ನಂಬಲಿಕ್ಕಾಗಲಿಲ್ಲ!


ಕಲ್ಲಿದ್ದಲಿನ ಕಪ್ಪು (ಮಸಿ ಲೇಪಿತ) ಮುಖವನ್ನು ಹೊತ್ತು ಒಂದು ಹುಡುಗಿ ಮಂಕಾಗಿ ಅಳುತ್ತಿರುವುದು, ಅವಳನ್ನು ಕೆಲವರು ಮೂದಲಿಸುವುದು, ಮತ್ತೆ ಒಂದು ಬಾಟಲ್ ಲೋಶನ್ ಹಚ್ಚಿ ಕೆಲವೇ ವಾರಗಳಲ್ಲಿ ನಮ್ಮ ಕತ್ರಿನಾ ಕೈಫ್ ಳ ತ್ವಚೆಯಂತೆ ಹೊಳೆಯುವ ತ್ವಚೆ ಪಡೆದ ಆ ಹುಡುಗಿಯನ್ನು ಹುಡುಗರು ಕೊಂಡಾಡುವುದು, ಅದ ಕಂಡು ಆಕೆ ಬೀಗುತ್ತಾ ನಗುನಗುತ್ತಾ ಆ ಬಾಟಲ್ ಹಿಡಿದು ಮುದ್ದಾಡುವುದು….ದೊಗಳೆ ಒಳಕುಪ್ಪಸ ಧರಿಸಿ, ಕಾನ್ಷಿಯಸ್ ಆಗಿ ಒದ್ದಾಡುತ್ತಿದ್ದ ಮಹಿಳೆಗೆ, ಮತ್ತೊಬ್ಬಾಕೆ ಬಂದು ಒಂದು ಬಿಗಿ, ಆಕರ್ಷಕ ಒಳ ಉಡುಪು ಕೊಟ್ಟು, ತನ್ನ ಮೈಮಾಟ ಹೆಚ್ಚಿಸಿ, ಪಕ್ಕದ ಮನೆ ಮಹಿಳೆಗೆ ಹೊಟ್ಟೆ ಉರಿಸುವುದಕ್ಕೆ ಸಹಾಯ ಮಾಡಿದ್ದಕ್ಕೆ ಆಕೆ ನಗುತ್ತಾ ಧನ್ಯೋಸ್ಮಿ ಎನ್ನುವುದು…..
ಐದಾರು ಜಪಾನೀ ಹುಡುಗಿಯರು ತಮ್ಮ ದೇಹದ ಮೇಲಿನ ರೋಮಗಳನ್ನು ‘ಕ್ಲೀನ್’ ಮಾಡಿಕೊಂಡ ಮೇಲೆ ಅವರ ತೆಳ್ಳನೆ, ನುಣುಪಾದ ಕಾಲುಗಳನ್ನು ಒಂದಷ್ಟು ಜನ ಹುಡುಗರು ಇಣುಕಿ ನೋಡುವುದು, ಅವರ ಆ ಸೂಕ್ಷ್ಮ ಗಮನಿಕೆಗೆ ಹುಬ್ಬೇರಿಸಿ, ಎದೆಯೇರಿಸಿ ಕುಣಿಯುವ ಆ ಹುಡುಗಿಯರು….. ಹೌದು ಸ್ವಾಮೀ, ಇವೆಲ್ಲಾ ರಾತ್ರಿ ಹನ್ನೊಂದರ ನಂತರ ಬಿತ್ತರಗೊಳ್ಳುವ ನಮ್ಮ ಟಿವಿ ಚಾನೆಲ್ಲುಗಳ ಪ್ರಕಟಣಾ ಪ್ರಲಾಪಗಳು!
ಕಾರ್ಟೂನ್ ನೆಟ್ವರ್ಕ್, ಪೋಗೋ, ಡಿಸ್ನಿ ಹೀಗೆ ಯಾವ ಮಕ್ಕಳ (?!) ಚಾನೆಲ್ ಹಾಕಿದರೂ ಅದರಲ್ಲಿ ಕಂಡುಬರುವುದು ಇವೇ ಇತ್ಯಾದಿ ವೈಪರೀತ್ಯಗಳು. ರಿಮೋಟ್ ನಲ್ಲಿ ಚಾನೆಲ್ಲುಗಳನ್ನು ತಿರುವುತ್ತಾ ಹಾಗೇ ತಲೆಯೂ ತಿರುಗುತ್ತಾ ನನಗೆ ಅನಿಸಿದ್ದು, ಮಹಿಳೆಯೊಬ್ಬಳನ್ನು ಎಷ್ಟೆಲ್ಲಾ ವಿವಿಧ ಬಗೆಗಳಲ್ಲಿ ಒಂದು ‘ಕಳಪೆ’ಯಾಗಿ, ಜಾಳಾಗಿ ತೋರಿಸಬಹುದು ಎಂದು! ಅಸಹ್ಯವೆನಿಸಿ ಕೈಲಿದ್ದ ಪುಸ್ತಕದಲ್ಲಿ ಮುಖ ಅದ್ದಿ, ಓದಲು ಪ್ರಾರಂಭಿಸಿದೆ.
ಬೇಂದ್ರೆಯ ನಾದದ ನವನೀತದಲ್ಲಿ ಕಳೆದು ಹೋಗಿದ್ದ ನನ್ನನ್ನು “ನೋಡು, ದಿಸ್ ಮೈಟ್ ಇಂಟರೆಸ್ಟ್ ಯು” ಅಂತ ಪಕ್ಕದಲ್ಲಿನ ಆತ ಹೇಳಿದಾಗಲೇ ಎಚ್ಚೆತ್ತು ಟಿವಿ ಕಡೆ ನೋಡಿದ್ದು. ಡಿಸ್ಕವರಿ ಚಾನೆಲ್ ನಲ್ಲಿ ಲಿಂಗ ತಾರತಮ್ಯ ಹುಟ್ಟಿಕೊಂಡ ಬಗೆ, ಅದು ಜಗತ್ತಿನ ವಿವಿಧ ಎಡೆಗಳಲ್ಲಿ, ವಿವಿಧ ಮುಖಿಯಾಗಿ ಪಸರಿಸಿಕೊಂಡದ್ದು, ಸುಮಾರು ಎಪ್ಪತ್ತರ ದಶಕದಿಂದೀಚೆಗೆ ಇದು ಸರಿಯಾದದ್ದಲ್ಲ ಎಂದು ಜನ ಕಾಣಲು ಪ್ರಾರಂಭಿಸಿದ್ದು, ಅದಕ್ಕಾಗಿ ತಮಗೆ ತೋಚಿದಂತೆ ಪ್ರತಿಭಟಿಸುತ್ತಾ ಬಂದದ್ದು ಇತ್ಯಾದಿ ವಿವರಗಳನ್ನು ತೋರಿಸುತ್ತಿದ್ದರು. ಅಲ್ಲಿ ಕಂಡು ಕೇಳಿದ ಕೆಲ ವಿಚಾರಗಳಂತೂ ನಂಬಲಸಾಧ್ಯವೆನಿಸುವಷ್ಟು ನಯವಾಗಿ ಕಂಡಿತ್ತು.
ಒಬ್ಬ ಹೆಣ್ಣು ಎಷ್ಟೆಲ್ಲಾ ರೀತಿಗಳಲ್ಲಿ ಬಳಸಲ್ಪಟ್ಟಿದ್ದಾಳೆ. ಆಕೆಯನ್ನು “ಟೇಕನ್ ಫಾರ್ ಗ್ರಾಂಟೆಡ್” ಅನ್ನುವ ರೀತಿ ಪಳಗಿಸಿ, ಆ ಪಳಗುವಿಕೆ ವಾಡಿಕೆಯಾಗಿ, ಈಗ ಲೋಕಾಭಿರಾಮವಾದ, ಸಂತೋಷದ, ಆಟ-ಕೂಟಗಳ ವಿಷಯಗಳಾಗಿ ಬಿಟ್ಟಿವೆ. ಹೆಣ್ಣಿನ ಶೋಷಣೆ ಒಂದು ಸಿಂಬಲಿಸಂ ಕೂಡ ಆಗಿ ನಮ್ಮ ನಡುವೆ, ನಮಗೆ ತಿಳಿಯದಂತೆ ರಾರಾಜಿಸುತ್ತಿದೆ ಎಂಬ ವಿಚಾರಗಳ ಪ್ರತಿನಿಧಿಯಾಗಿ ಆ ಕಾರ್ಯಕ್ರಮ ಮೂಡಿಬಂದಿತ್ತು. ಮೊದಲು ಕಂಡ ಆ ಸಿಲ್ಲಿ ಜಾಹೀರಾತುಗಳಿಗಿಂತ ಹೆಚ್ಚಿನ ಕರಾಳತೆ, ಭೀಕರತೆಗಳು ಈ ಕಾರ್ಯಕ್ರಮದ ವಿಚಾರಗಳಲ್ಲಿ ಅಡಗಿದ್ದು ಕಂಡಿತು! ಇಷ್ಟೆಲ್ಲಾ ಸಂಶೋಧನೆ ಮಾಡಿದ ಆ ವ್ಯಕ್ತಿಗೆ (ಆತನ ಹೆಸರು ಗುರುತಿಸಲಾಗಲಿಲ್ಲ. ಬಹುಶಃ ಡಿಸ್ಕವರಿ ಚಾನೆಲ್ ನ ವೆಬ್ಸೈಟ್ ನಲ್ಲಿ ವಿವರಗಳು ಸಿಗಬಹುದು) ಒಂದು ಸಲಾಂ ಹಾಕಿ ನಿಮಗೂ ಈಗ ಆ ವಿಚಾರಗಳನ್ನು ತಿಳಿಸುತ್ತೇನೆ!
ನಮಗಿನ್ನೂ ರಮ್ಯ ಕಥೆಯಂತೆ ಕಾಣುವ ಗಂಡು ಹೆಣ್ಣಿನ ಸಮಾನತೆ ಮೊದಲು ನಿಜಕ್ಕೂ ಇತ್ತಂತೆ. ಗಂಡು ಹೆಣ್ಣು ಇಬ್ಬರೂ ಬೇಟೆಗೆ ಹೋಗುತ್ತಿದ್ದರಂತೆ. ಹುಟ್ಟುವ ಮಗು ತನ್ನ ಒಡಲಿನಿಂದಲೇ ಆದ್ದರಿಂದ, ಬರಬರುತ್ತಾ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೆಣ್ಣು ಹೆಚ್ಚು ಸುಸೂತ್ರವಾಗಿ ನಿಭಾಯಿಸುತ್ತಿದ್ದಳಂತೆ. ಗಂಡು ಬೇಟೆಯನ್ನು ಚೆನ್ನಾಗಿ ಆಡಬಲ್ಲವನಾಗಿದ್ದನಂತೆ. ಇದರಿಂದ ಹೆಣ್ಣು ಮನೆಯಲ್ಲಿದ್ದು ಮಕ್ಕಳನ್ನು ನೋಡಿಕೊಳ್ಳುವುದು, ಮನೆ ನಿಭಾಯಿಸುವ ಜವಾಬ್ದಾರಿ ಹೊತ್ತರೆ ಗಂಡು ಹೊರಗೆ ಹೋಗಿ ಬೇಟೆಯಾಡಿ ಬರುತ್ತಿದ್ದನಂತೆ. ಈ ಒಂದು ವ್ಯತ್ಯಾಸ ಬಿಟ್ಟರೆ ಗಂಡು ಹೆಣ್ಣಿನ ನಡುವೆ ಇದ್ದುದು ದೈಹಿಕ ವ್ಯತ್ಯಾಸ ಮಾತ್ರ. ಹೀಗೆ ಕಾಲಾಯಗತ ನಡೆದಿತ್ತು. ಆದರೆ ಹಸಿವನ್ನೂ ಮೀರಿ, ಚಪಲಕ್ಕಾಗಿ, ದುರಾಸೆಗಾಗಿ ಬೇಟೆ, ಅದರ ಇನ್ನೂ ಸಿವಿಲೈಜ್ಡ್ ರೂಪವಾದ ಯುದ್ಧ ಹೆಚ್ಚಾಗುತ್ತಾ ಹೋದಂತೆ ಗಂಡಿಗೆ ತಾನು ಮತ್ತೊಂದು ಲಿಂಗಕ್ಕಿಂತ ಒಂದು ಕೈ ಮೇಲು ಎನ್ನುವ ಭಾವನೆ ಪ್ರಾರಂಭವಾಯಿತಂತೆ. ಈ ಮೇಲರಿಮೆಯು ಹೆಜ್ಜೆ ಹೆಜ್ಜೆಗೂ ಹೆಚ್ಚಾಗುತ್ತಾ ಜಗತ್ತು ವಿಕಾಸವಾದಂತೆ ಇದೂ ವಿಕಸನಗೊಂಡೇ ಬೆಳೆಯಿತು. ಈ ಪೀಠಿಕೆಯೊಂದಿಗೆ ಆ ನಿರೂಪಕ ಕಾರ್ಯಕ್ರಮ ಪ್ರಾರಂಭಿಸುತ್ತಾನೆ.
ನಂತರ ಆತ ನಿಲ್ಲುವುದು ಅದ್ಯಾವುದೋ ವಿಚಿತ್ರ ಎನಿಸುವ ದೇವತೆಯ ಮೂರ್ತಿಯ ಎದುರು. ಆ ದೇವತೆ ಒಬ್ಬ ‘ಮಹಾನ್ ಕನ್ಯೆ’ಯಂತೆ! ವರ್ಜಿನ್ ಮೇರಿ ತರಹ ಕನ್ಯೆಯಾಗಿಯೇ ಮಕ್ಕಳನ್ನು ಪಡೆಯಬೇಕಾಗಿ ಬಂದಾಗ ಸುಮಾರು ಮೂವತ್ತು ಗಂಡು ವೃಷಣಗಳನ್ನು ಈಕೆಯ ಹೊಟ್ಟೆಯ ಸುತ್ತ ಕಟ್ಟಿ (!) ಹಾಕಿದಾಗ, ಈಕೆಯ ಗರ್ಭಧಾರಣೆಯಾಯಿತಂತೆ. ನಂತರ ಈಕೆಯನ್ನು ಒಬ್ಬ ದೇವತೆಯಂತೆ ಪೂಜಿಸುತ್ತಿದ್ದರಂತೆ. ಇದರಿಂದ ಆತ ತಿಳಿಸಿದ ಒಳ ಮರ್ಮ, ಒಂದು ಸಮಾಜ ಹೆಣ್ಣು ‘ಪ್ಯೂರ್’ ಆಗಿದ್ದರೆ ಆಕೆಯನ್ನು ಹೆಚ್ಚು ಗೌರವಿಸುವುದು ಎಂದು.
ಜಗತ್ತಿನ ಬಹುಭಾಗಗಳಲ್ಲಿ ಇಂದಿಗೂ ಗಂಡು ಹೆಣ್ಣಿನ ಬೆರಳಿಗೆ ಒಂದು ಉಂಗುರ ತೊಡಿಸಿದರೆ ಅವರಿಬ್ಬರ ವಿವಾಹಮಹೋತ್ಸವ ಜರುಗಿದಂತೆ ಅಲ್ಲವೇ. ಈ ಪದ್ಧತಿಯ ಜಾಡು ಹಿಡಿದು ಹೋದ ಈ ನಿರೂಪಕನಿಗೆ ತಿಳಿದ ಸತ್ಯ ಹೀಗಿದೆ: ಉಂಗುರದ ಬೆರಳು ತನ್ನಷ್ಟಕ್ಕೆ ತಾನೇ ಸ್ವತಂತ್ರವಾಗಿ ಕೆಲಸ ಮಾಡಲಾರದು, ಅಂತೆಯೇ ಒಬ್ಬ ಹೆಣ್ಣು. ಆ ಬೆರಳಿಗೆ ಒಂದು ಉಂಗುರ ತೊಡಿಸುವ ಮೂಲಕ ಒಂದು ಅಬಲೆಯನ್ನು ತನ್ನ ಪೊಸೆಶನ್ ಗೆ ತೆಗೆದುಕೊಂಡು, ತಾನು ಜೀವಾವಧಿ ಆಕೆಯನ್ನು ಕಾಪಾಡುವುದು ಎಂಬುದನ್ನು ಸಿಂಬಾಲಿಕ್ ಆಗಿ ತೋರಿಸುವುದು! ಮದುವೆಯಲ್ಲಿ ವಿಜ್ರುಂಭಣೆಯಿಂದ ಗಂಡು ಹೆಣ್ಣಿಗೆ ತೊಡಿಸುವ ರಿಂಗಿನ (ಈಗ ಅದು ಗಂಡು ಹೆಣ್ಣು ಇಬ್ಬರೂ ಉಂಗುರ ಬದಲಾಯಿಸಿಕೊಳ್ಳುವ ಪ್ರತೀತಿ ಚಾಲ್ತಿಯಲ್ಲಿದೆ) ಮೂಲ ಹೀಗಿದೆ.
ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿ ಕಂಡು ಬರುವ ಮದುವೆ ಸಂಭ್ರಮಗಳಲ್ಲಿ ಒಂದು ಆಚರಣೆ ಹೀಗಿದೆ: ಮದುವೆಯಾದ ತಕ್ಷಣ ಗಂಡು ತನ್ನ ಹೆಂಡತಿಯ ಕನ್ಯಾ ಹೆಸರನ್ನು (ಮೇಡನ್ ನೇಮ್ ಅನ್ನು) ಒಂದು ಚೀಟಿಯಲ್ಲಿ ಬರೆದು ಒಂದು ಸಣ್ಣ ಬಾಟಲಿಯಲ್ಲಿ ಅದನ್ನು ತುಂಬಿಡುತ್ತಾನೆ. ಮದುವೆಗೆ ಬಂದ ನೆಂಟರೆಲ್ಲರೂ ಆ ಬಾಟಲಿಗೆ ಸಣ್ಣ ಪುಟ್ಟ ಕಲ್ಲುಗಳನ್ನು ತುಂಬುತ್ತಾರೆ. ಇದಾದ ಮೇಲೆ, ಮದುಮಗ ಆ ಬಾಟಲಿಯನ್ನು ದೂರದ ಸಮುದ್ರದಾಳಕ್ಕೆ ಎಸೆಯುತ್ತಾನೆ. ಆತ ಅದನ್ನು ಎಷ್ಟು ದೂರ ಎಸೆಯುತ್ತಾನೋ ಅಷ್ಟು ಆಕೆಯನ್ನು ಪ್ರೀತಿಸುತ್ತಾನೆ ಎಂಬ ನಂಬಿಕೆ. ಬಾಟಲಿ ಎಸೆದ ತಕ್ಷಣ ಆತನ ನವವಧು ಸಂತೋಷದಿಂದ ಚಪ್ಪಾಳೆ ತಟ್ಟುತ್ತಾ ಪಕ್ಕ ಬಂದು ನಿಲ್ಲುತ್ತಾಳೆ, ಆಗ ಅಲ್ಲಿ ನಿಂತ ಪ್ರೀಸ್ಟ್ ಅವರಿಬ್ಬರನ್ನೂ “ಮಿಸ್ಟರ್ ಅಂಡ್ ಮಿಸಸ್….. (ಗಂಡಿನ ಹೆಸರು)” ಎಂದು ಉಲ್ಲೇಖಿಸುತ್ತಾನೆ. ಇದು ಒಂದು ಸಂಭ್ರಮಾಚರಣೆ, ಆದರೆ ಇದರ ಮೂಲ, ಹೆಣ್ಣು ತನ್ನ ಮದುವೆಯ ನಂತರ ತನ್ನ ಮೇಡನ್ ನೇಮ್ ಕಳೆದುಕೊಂಡು ತನ್ನ ಗಂಡನ ಹೆಸರಿನಿಂದಲೇ ಕರೆಯಲ್ಪಡುತ್ತಾಳೆ. ಇನ್ ಅದರ್ ವರ್ಡ್ಸ್, ಆಕೆಯ ಸಂಪೂರ್ಣ ಐಡೆಂಟಿಟಿ ಇನ್ನು ಮುಂದೆ ತನ್ನ ಗಂಡನ ಹೆಸರಿನ ಮೂಲಕವೇ ಎಂದು! ಇದನ್ನು ಬಿಂಬಿಸುವ ಪ್ರತೀಕವೇ ಈ ಆಚರಣೆ.
ನಮ್ಮ ಪವರ್ ಸ್ಟಾರ್ ಪುನೀತ್ ಅಭಿನಯದ ‘ಪರಮಾತ್ಮ’ ಚಿತ್ರ ಎಲ್ಲರೂ ನೋಡಿರುತ್ತೀರಿ. ಅದರಲ್ಲಿ ಪುನೀತ್ ಆಕೆಯ ಪ್ರಿಯತಮೆಯನ್ನು ಬೆನ್ನ ಮೇಲೆ ಹೊತ್ತು ಓಡುವ ಒಂದು ಸೀನ್ ಇದೆ ಗಮನಿಸಿದ್ದೀರಾ? ಥೇಟ್ ಅದರಂತೆಯೇ, ಜಗತ್ತಿನ ವಿವಿಧ ಭಾಗಗಳಲ್ಲಿ ನವದಂಪತಿಗಳಿಗೆ ಈ ‘ಆಟ’ವನ್ನು ಆಡಿಸಲಾಗುತ್ತದೆ. ಇದರ ಅರ್ಥ, ದುರ್ಬಲಳಾದ ಹೆಣ್ಣಿನ ಜವಾಬ್ದಾರಿಯನ್ನು ಗಂಡು ತನ್ನ ಮೇಲೆ ಹೊತ್ತು ಜೀವನ ಪರ್ಯಂತ ಕಾಪಾಡಬೇಕು ಎಂಬುದು.
ಇಷ್ಟೆಲ್ಲಾ ವಿವಿಧ ದೇಶಗಳ ಕಥೆ ಹೇಳುವ ಈತ ಭಾರತದ ಬಗ್ಗೆ ಏನು ಹೇಳುತ್ತಾನೋ ಎಂಬ ಕುತೂಹಲದಿಂದ ಕಾದಿದ್ದ ನನಗೆ, ಆತ ಬರೀ ಜೈಪುರದ ಹವಾಮಹಲ್ ಕಟ್ಟಿದ್ದು ಏಕೆ ಎಂದು ಮಾತ್ರ ಹೇಳಿ ಬೇರೆಡೆಗೆ ಹೊರಳಿದ್ದು ಕೊಂಚ ನಿರಾಶೆಯಾಯಿತಾದರೂ, ವಿಷಯ ಕೇಳಿ ಆಶ್ಚರ್ಯವೇ ಆಯಿತು. ಹವಾ ಮಹಲ್ ಕಟ್ಟಿಸಿದ ರಾಜನ ಉದ್ದೇಶ ಆತನ ಅನೇಕ ರಾಧಿಕೆಯರು ‘ರೋಡಿಗಿಳಿಯದೆ’ ಕಿಟಕಿಯ ಮರೆಯಿಂದಲೇ ಊರಿನ ಆಗುಹೋಗುಗಳನ್ನು ನೋಡಬೇಕು. ಇದರಿಂದ ಯಾವ ಪರ ಗಂಡಸೂ ಆಕೆಯರನ್ನು ನೋಡಲು ಅಸಾಧ್ಯ ಎಂಬ ವಿಚಿತ್ರ ತೃಪ್ತಿಯನ್ನು ಹೊಂದಲು! ಇದರ ಜೊತೆಗೆ ಆತ ಹೆಸರಿಸಿದ್ದು ಮುಸ್ಲಿಂ ಜನಾಂಗದ ಬುರ್ಖಾ ಉಪಯೋಗದ ಬಗ್ಗೆ. ನಮಗೆಲ್ಲರಿಗೂ ಗೊತ್ತಿರುವಂತೆ, ಈಗ ಒಂದು ಪದ್ಧತಿಯಾಗಿ, ಅಭ್ಯಾಸವಾಗಿಬಿಟ್ಟಿರುವ ಈ ಬುರ್ಖಾ ಧಾರಣೆ, ಪ್ರಾರಂಭವಾದದ್ದು, ಗಂಡು ತನಗೆ ‘ಸೇರಿದ’ ಹೆಣ್ಣನ್ನು ತಾನು ಬಿಟ್ಟು ಮತ್ಯಾರೂ ನೋಡಬಾರದು ಎಂಬ ಧೋರಣೆಯಿಂದ.
ಈ ಎಲ್ಲಾ ವಿಷಯಗಳೂ ಒಂದು ಹಂತ ಎಂದರೆ, ಈಗ ಹೇಳುವ ವಿಚಾರ ಮತ್ತೊಂದು ಎಂದೇ ಹೇಳಬಹುದು! ನಾನು ಕೂತಲ್ಲೇ ಬೆಚ್ಚಿದ ವಿಚಾರ ಹೀಗಿದೆ: ‘ಹನಿಮೂನ್’ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ! ಈಗಂತೂ ಪುಟ್ಟ ಮಕ್ಕಳೂ ಇದರ ಬಗ್ಗೆ ಮಾತನಾಡುತ್ತಾರೆ. ಮಕ್ಕಳಿಂದ ಹಿಡಿದು ವಯಸ್ಕರೆಲ್ಲರಿಗೂ ಒಂದು ತುಂಟ ಕಿರುನಗೆ ಮೂಡಿಸುವ ಮಾತು ಈ ‘ಹನಿಮೂನ್’. ಈ ಪದದ ಮೂಲ ಅಥವಾ ಎಟಿಮಾಲಜಿ ಏನು ಗೊತ್ತಾ? ಮೊದಲೆಲ್ಲಾ ಈ ಹನಿಮೂನ್ ಎಂಬುದು ಒಂದು ತಿಂಗಳ ಕಾಲ ಇರಲೇ ಬೇಕಾಗಿತ್ತು. ಮೂನ್ ಅಥವಾ ಚಂದ್ರ ಪೂರ್ಣ ತುಂಬಿಕೊಳ್ಳಲು ಒಂದು ತಿಂಗಳು ತೆಗೆದುಕೊಳ್ಳುತ್ತಾನೆ. ಅದೇ ರೀತಿ, ಒಬ್ಬ ಹೆಣ್ಣು ತನ್ನ ಹೆಣ್ತನದ ಕಾಯೊಡೆದು ಪುಷ್ಪವತಿಯಾಗಿ ಫಲಪ್ರದವಾಗಬೇಕಾದರೆ ಸಹ ಒಂದು ಸಂಪೂರ್ಣ ತಿಂಗಳು ಬೇಕಾಗುತ್ತದೆ. ಈ ಒಂದು ತಿಂಗಳಿನಲ್ಲಿ ಗಂಡು ತನ್ನ ಹೆಣ್ಣನ್ನು ಎಲ್ಲರಿಂದ ದೂರ ಕರೆದುಕೊಂಡು ಹೋದರೆ, ಆಕೆಯ ಗರ್ಭ ತನ್ನದೇ ಆಗಿರುತ್ತದೆ ಎಂಬ ಖಾತ್ರಿ ಅವನಿಗಿರುತ್ತದೆ. ಇನ್ನು ಹನಿ ಅಥವಾ ಜೇನು ತಿಂದರೆ, ಗಂಡಿನ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬ ವೈಜ್ಞಾನಿಕ ಸತ್ಯದ ವಿಚಾರ. ಈ ಎರಡು ಥಾಟ್ ಪ್ರಾಸಸ್ ನೊಂದಿಗೆ ಹುಟ್ಟಿದ್ದು ಈ ‘ಹನಿಮೂನ್’ ನ ಕಾನ್ಸೆಪ್ಟ್!
ಆ ನಿರೂಪಕನ ಈ ಎಲ್ಲಾ ಸಂಶೋಧನಾಧಾರಿತ ಮಾತುಗಳೂ ಸತ್ಯವೇ ಆಗಿದ್ದಲ್ಲಿ, ನಾವು ತಿಳಿಯಬೇಕಾದ್ದು, ತಿಣುಕಬೇಕಾದ್ದು ಇನ್ನೆಷ್ಟು ಸೂಕ್ಷ್ಮಗಳಿದ್ದಾತು! ಕೆಲವು ಆಚಾರ-ವಿಚಾರಗಳು ಕಾಲಾಯಗತ ಎಷ್ಟು ರಕ್ತಗತವಾಗಿ ಬೆಳೆದು ಬಿಡುತ್ತವೆ. ಕೊನೆಗೆ ಅದು ನಮಗರಿವಿಲ್ಲದೆಯೇ ನಮ್ಮ ಬದುಕಿನ ಒಂದು ಭಾಗವಾಗಿ ಬಿಡುತ್ತವೆ ಎಂಬ ಸತ್ಯವನ್ನು ಬಿಂಬಿಸುವ ಇಂತಹ ಸಂಶೋಧನೆಗಳನ್ನು ಅರಿತಾಗ, ಬಹುಶಃ ಡಾರ್ವಿನ್ನಿನ ಗಿಡ್ಡ ಕತ್ತಿನ ಜಿರಾಫೆ ಸರಿಯಾಗಿ ಕಂಡುಬರುತ್ತದೆ!

‍ಲೇಖಕರು avadhi

August 9, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. prans

    ಹೌದಲ್ಲ, ಲಿಂಗ ತಾರತಮ್ಯಕ್ಕೆ ಎಷ್ಟೆಲ್ಲಾ ಮುಖಗಳು… 🙁 🙁
    [ಅಂದ ಹಾಗೆ ಒಂದು ಕರೆಕ್ಷನ್ನು. ಗಿಡ್ಡ ಕತ್ತಿನ ಜಿರಾಫೆ ಮೇಲಿನ ಎಲೆಗಳಿಗಾಗಿ ಬಾಯಿ ಚಾಚುತ್ತಾ ಅದರ ಕತ್ತು ಉದ್ದವಾಗಿಹೋಯ್ತು ಅಂತ ಡಾರ್ವಿನ್ ಎಂದೂ ಹೇಳಲಿಲ್ಲ, ಬದಲಿಗೆ ಈ ಥಿಯರಿಯನ್ನ ನಿರಾಕರಿಸಿದ! ಈ ‘ಕತ್ತು ಉದ್ದವಾದ ಕಥೆ’ಯನ್ನ ಹೇಳಿದ್ದು ಲ್ಯಾಮಾರ್ಕ್ ಅಂತೊಬ್ಬ ವಿಜ್ಞಾನಿ. ಅದನ್ನ ವಿಜ್ಞಾನ ಲೋಕ ಯಾವತ್ತೋ ನಿರಾಕರಿಸಿಬಿಟ್ಟಿದೆ 🙂 ]

    ಪ್ರತಿಕ್ರಿಯೆ
  2. Pramod

    ಒಳ್ಳೆಯ ಲೇಖನ.
    ನೀವು ಬ್ಲಾಕ್ ಈಸ್ ಬ್ಯೂಟಿಫುಲ್ ಬಗ್ಗೆ ಬರೆಯುತ್ತಿದ್ದೀರಿ ಆ೦ದುಕೊ೦ಡೆ. ಕೋಮಲ ತ್ವಚೆ, ಗೌರವ ವರ್ಣ, ಫೇರ್ ಸುಪಿರಿಯರ್ ಕಲರ್ ಎ೦ಬ ಸೌತ್ ಇ೦ಡಿಯನ್ ಇನ್ಫಿರಿಯಾರಿಟಿ ಕಾ೦ಪ್ಲೆಕ್ಸ್ ಅ೦ತ ಯೋಚನೆ ಮಾಡುವಷ್ಟ್ರರಲ್ಲಿ ಗತಿ ಬದಲಿಸಿತು.
    ನ೦ದಿತಾ ದಾಸ್ ಅವರ ಈ ಅಭಿಯಾನ ನೋಡಿ.

    ಪ್ರತಿಕ್ರಿಯೆ
  3. bharathi

    Sampu che naanu aa program nodabekittu .. miss madkonde. Ninna lekhana odidakke sumaaru vishya aadroo gottaythu. Wonderful write up

    ಪ್ರತಿಕ್ರಿಯೆ
  4. Sarala

    A very interesting program nodi namagu ondu olle perspctive kottiddeera Samyukta. Neevu helida haage ಕೆಲವು ಆಚಾರ-ವಿಚಾರಗಳು ಕಾಲಾಯಗತ ಎಷ್ಟು ರಕ್ತಗತವಾಗಿ ಬೆಳೆದು ಬಿಡುತ್ತವೆ. Many times we unconsciously endorse such male-dominance behavior alva?

    ಪ್ರತಿಕ್ರಿಯೆ
  5. Rj

    ಸಂಯುಕ್ತ ಅವರೇ,ನಿಮ್ಮ ವಿಭಿನ್ನ ನೋಟಗಳೂ,ಆಸಕ್ತಿಗಳೂ ಖುಷಿ ಕೊಡುವಂಥದ್ದು.
    ಅನೇಕ ಇಂಟರೆಸ್ಟಿಂಗ್ ಅನ್ನಿಸುವಂಥ ವಿಷಯಗಳನ್ನು ಮಂಡಿಸುತ್ತೀರಿ.
    ಕಾಲಂ ಚೆನ್ನಾಗಿದೆ.ಅಭಿನಂದನೆಗಳು.
    -Rj

    ಪ್ರತಿಕ್ರಿಯೆ
  6. ರಾಧಾಕೃಷ್ಣ

    ಜ್ಞಾನ ಕುತರ್ಕಗಳ ವಿತರ್ಕಗಳ ನೆಲೆಗೆ ಬಂದಾಗ ತಾವು ಹೇಳುವುದೇ ಸತ್ಯ ನಂಬಿಸ ಹೊರಟವರ ಮೇಧಾವಿತನ ಕಾಣಿಸತ್ತೆ… :/
    ಸಮಾಜದಲ್ಲಿ ಬಣ್ಣ, ರುಚಿ, ಲಿಂದ ನಡೆಗಳ ಆಧಾರದಲ್ಲಿ ರೂಪಿಸುಚ ೆಲ್ಲಾ ಜಾಹೀರಾತುಗಳು ಈ ವಿಕೃತ ಮನಗಳ ಫಲಶೃತಿಯೇ

    ಪ್ರತಿಕ್ರಿಯೆ
  7. kusumabaale

    ಎಲ್ಲೋ ಹೋಗ್ ಬಂದಂಗಾತು ಇದನ್ ಓದಿ..ವೋಲ್ಗಾದಿಂದ ಗಂಗಾವರೆಗೆ ಅಂತೊಮದು ಪುಸ್ತಕವಿದೆ. ನೀವು ಓದಿರಲೂಬಹುದು.. ಓದದಿದ್ದರೆ ಓದಿ..ಈ ಲೇಖನದ ಎರಡನೆ ಮೂರನೆ ನಾಲ್ಕನೇ….ಭಾಗಗಳೇ ಹುಟ್ಟ್ಇಕೊಳ್ಳಬಹುದು ಅದರಿಂದ.

    ಪ್ರತಿಕ್ರಿಯೆ
  8. ಉಷಾಕಟ್ಟೆಮನೆ

    ಲೇಖನ ಚೆನ್ನಾಗಿದೆ ಸಂಯುಕ್ತಾ..ನನ್ನ ತವರಿನ ಗುರುತಾಗಿ ’ಕಟ್ಟೆಮನೆ’ಯನ್ನು ನನ್ನ ಹೆಸರಿನೊಂದಿಗೆ ಜೋಡಿಸಿಕೊಂಡಿರುವುದು ನನ್ನ ಸ್ವಂತಿಕೆಯನ್ನು ಕಾಯ್ದುಕೊಳ್ಳಲು ನನಗೆ ತುಂಬಾ ಸಹಕಾರಿಯಾಗಿದೆ. ವಿಧ್ಯಾವಂತ ಹೆಣ್ಣುಮಕ್ಕಳು ಕನಿಷ್ಟ ಇಷ್ಟನ್ನಾದರೂ ಮಾಡಬಹುದು ಎಂಬುದು ನನ್ನ ಅನ್ನಿಸಿಕೆ.

    ಪ್ರತಿಕ್ರಿಯೆ
  9. ಶಮ, ನಂದಿಬೆಟ್ಟ

    ಸಲಾಂ ಸಂಯುಕ್ತಾ ನಿನ್ನ ಒಳನೋಟಕ್ಕೆ, ನಿರೂಪಣೆಯ ರೀತಿಗೆ, ಮಾಹಿತಿಯ ಸಂಗ್ರಹಣೆಗೆ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: