ಸಂಧ್ಯಾರಾಣಿ ಕಾಲಂ : ’ಯಾವುದು ಕಣ್ಣ ತೆರೆಯಿಸಿತು…’

‘ಇಂಕಿಲಾಬ್ ಜಿಂದಾಬಾದ್’, ‘ಇಂಕಿಲಾಬ್ ಜಿಂದಾಬಾದ್’ ….. ಆಗ ತಾನೆ ಬಸ್ಸಿನ ತೂಗಾಟಕ್ಕೆ ತಕ್ಕಡಿ ತೂಗತ್ತಿದ್ದ ನಾನು ಬೆಚ್ಚಿ ಎದ್ದು ಕೂತೆ, ನಾನು ಬೆಚ್ಚಿದ್ದು ನೋಡಿ, ಅಪ್ಪ ಮೆಲ್ಲಗೆ ಕೈ ತಟ್ಟಿದ್ದರು …. ಬಸ್ ನ ಹಿಂಭಾಗದಲ್ಲಿ ಇಬ್ಬರು ಜುಬ್ಬ ಹಾಕಿದ್ದ ಯುವಕರು ನಿಂತು ಹಾಗೆ ಕೂಗಿದ್ದರು … ತರಕಲು ಗಡ್ಡ, ಭಯ ಹುಟ್ಟಿಸುತ್ತಿದ್ದ ಕಣ್ಣುಗಳು … ಆದರೆ ಅವರು ಕೂಗಿದ ಆ ಹಠಾತ್ ಸದ್ದಿಗಿಂತಲೂ ಹೇಳಲಾಗದ ಹೆದರಿಕೆ ಹುಟ್ಟಿಸಿದ್ದು ಬಸ್ ನಲ್ಲಿದ್ದವರ ಪ್ರತಿಕ್ರಿಯೆ ಎಂದು ನೆನಪು … ಧುತ್ ಎಂದು ಮನೆಯ ನಡುಮನೆಯಲ್ಲಿ ಒಂದು ಬಾವಿ ಉದ್ಭವವಾದ ಹಾಗೆ, ನಮ್ಮ ನಡುವೆಯೇ ಉಧ್ಭವವಾದಂತಹ ಇದ್ದಕ್ಕಿದ್ದಂತೆಯೇ ಹುಟ್ಟಿದ ಅಸಹಜ ಮೌನ, ಹೆದರಿಕೆ, ದೊಡ್ಡವರ್ಯಾರೂ ಆ ಹುಡುಗರ ಕಡೆ ನೋಡುತ್ತಿಲ್ಲ, ತಲೆ ಬಗ್ಗಿಸಿ ಕೂತು, ಮುಂದೆ ಇನ್ನೇನಾಗಿಬಿಡುವುದೋ ಎನ್ನುವಂತೆ ಕುಳಿತಲ್ಲೇ ಮಿಸುಕಾಡುತ್ತಿದ್ದಾರೆ .. ’ಮಲಗು, ಮಲಗು’ ಎನ್ನುವಂತೆ ಅಪ್ಪ ಮೆಲುವಾಗಿ ತಟ್ಟಿದರು … ಕಂಡಕ್ಟರ್ ಡ್ರೈವರ್ ಹತ್ತಿರ ಹೋದ, ಪಿಸು ಪಿಸು ಮಾತು, ಬಸ್ ನಿಂತಿತು …ಕಂಡಕ್ಟರ್ ಆ ಹುಡುಗರ ಬಳಿ ಹೋದ, ಇನ್ನಷ್ಟು ಪಿಸು ಪಿಸು ಮಾತು… ’ಬೇಡಪ್ಪ…… ಅಲ್ಲಿವರೆಗು ಬೇಡ…’, ಆಮೇಲೆ ಆ ಹುಡುಗರು ಇಳಿದು ಹೋದರು. ಸ್ವಲ್ಪ ದೂರ ಆ ಮೌನದ ಬೆವರಿನ ವಾಸನೆ ಉಳಿದಂತೆ ಮೌನದ ತುಣುಕುಗಳು, ಆಗ ಮೊದಲ ಸಲ ನಾನು ಕೇಳಿದ ಪದ …’ಯಮರ್ಜನ್ಸಿ…’. ಆಗಿನ್ನೂ ನಾನು ೮-೯ ವರ್ಷದ ಹುಡುಗಿ .. ನನಗೆ ನೆನಪಿರುವ ಬಾಲ್ಯದ ತುಣುಕುಗಳಲ್ಲಿ ಇದೂ ಒಂದು. ಆ ಪದ ಕಷ್ಟ ಅನ್ನಿಸಿದ್ದರಿಂದ ಪದೇ ಪದೇ ನನ್ನೊಳಗೇ ಹೇಳಿಕೊಂಡು ನನ್ನದಾಗಿಸಿಕೊಂಡಿದ್ದೆ. ಆಗೆಲ್ಲಾ ನನ್ನಂತಹ ಮಕ್ಕಳಿಗೂ ಅರಿವಾಗುವಂತಹ ಭೀತಿಯ ವಾತಾವರಣ … ಅದೇ ದಿನಗಳಲ್ಲಿ ಚಿಕ್ಕಮ್ಮನ ಮದುವೆ ನಿಶ್ಚಯವಾಗಿತ್ತು, ಅದೇ ಎಮರ್ಜೆನ್ಸಿ ಕಾರಣದಿಂದ ಆಹಾರ ಪದಾರ್ಥಗಳ ನಿಯಂತ್ರಣ ಕಾಯಿದೆ ಜಾರಿಯಿದ್ದದ್ದಕ್ಕೆ, ಆಹ್ವಾನ ಪತ್ರಿಕೆಯಲ್ಲಿ ’ಮದುವೆಗೆ ಬರುವ ನೆಂಟರಿಷ್ಟರು ನಿಮ್ಮ ನಿಮ್ಮ ಆಹಾರ ಪದಾರ್ಥಗಳಿಗೆ ಬೇಕಾದ ಅಕ್ಕಿ, ಬೇಳೆ, ಸಕ್ಕರೆಯನ್ನು ಒಂದು ವಾರ ಮುಂಚಿತವಾಗಿ ನಮಗೆ ಕಳುಹಿಸಿಕೊಡಿ’ ಎಂದು ಮುದ್ರಿಸಲಾಗಿತ್ತು! ಆಗ ಮದುವೆ ಕಾರ್ಡ್ ಕೊಡುವಾಗೆಲ್ಲಾ ಪ್ರತಿಯೊಬ್ಬರಿಗೂ ಅದರ ವಿವರಣೆ ಕೊಟ್ಟು, ’ಇದು ಸುಮ್ಮನೇ … ಕಾಲ ಸರಿ ಇಲ್ಲ ನೋಡಿ….’ ಅನ್ನೋದನ್ನ ಕೇಳಿ ಕೇಳಿ ನನ್ನ ತಲೆಯಲ್ಲಿ ಆ ನೆನಪು ಭದ್ರವಾಗಿ ಕೂತಿದೆ!
ಆಮೇಲೆ ಸ್ವಲ್ಪ ದಿನಗಳ ನಂತರ ೧೯೭೭ರಲ್ಲಿ ಚುನಾವಣೆ ಘೋಷಣೆ ಆಗಿತ್ತು. ಆಗ ಶುರು ಆಯಿತು ನೋಡಿ. ಅದುವರೆಗೂ ತಡೆದು ನಿಲ್ಲಿಸಿದ್ದ ಪ್ರತಿರೋಧ ಇನ್ನಿಲ್ಲದಂತೆ ಎದ್ದು ನಿಂತಿತ್ತು. ಜೆಪಿ, ಮುರಾರ್ಜಿ, ಚೌದರಿ ಚರಣ್ ಸಿಂಗ್, ಫರ್ನಾಂಡೀಸ್, ಜಗಜೀವನ್ ರಾಂ, ಇಂದಿರೆಯಂತಹ ಇಂದಿರೆಯನ್ನು ಎದುರಿಸಿ ನಿಂತಿದ್ದ, ಜೋಕರ್ ಎಂದು ಚುಡಾಯಿಸಿಕೊಳ್ಳುತ್ತಿದ್ದ ರಾಜ್ ನಾರಾಯಣ್ … ಈ ಎಲ್ಲಾ ಹೆಸರುಗಳನ್ನು ಮೊದಲ ಸಲ ಕೇಳಿದ್ದೇ ಆಗ ನಾನು!
ಅಜ್ಜನ ಮನೆ ಇದ್ದದ್ದು ಹಳ್ಳಿಯಲ್ಲಿ, ಅಲ್ಲಿ ಪಂಚಾಯತಿ ಕಟ್ಟಡದಲ್ಲಿ ಒಂದು ಸಾರ್ವಜನಿಕ ಗ್ರಂಥಾಲಯ, ಊರಲ್ಲಿ ಪ್ರಮುಖರೆಲ್ಲಾ ಲೈಬ್ರರಿಗೆ ಒಂದೊಂದು ನಿಯತಕಾಲೀಕಗಳನ್ನು ಪ್ರಾಯೋಜಿಸಬೇಕಿತ್ತು. ಆಗ ತಾನೆ ಕಾಲೇಜ್ ಓದಿದ್ದ, ಓದುತ್ತಿದ್ದ ಸೋದರ ಮಾವಂದಿರು ಅಲ್ಲಿಗೆ ’ಹಿಮ್ಮತ್’ ಅನ್ನುವ ಮ್ಯಾಗಜೀನ್ ಕೊಡಿಸ್ತಾ ಇದ್ದರು. ಅದು ಈಗಿನ ತೆಹಾಲ್ಕಾಕ್ಕೆ ಸಮ ಅಂತ ಆಮೇಲೆ ಗೊತ್ತಾಗಿದ್ದು ನನಗೆ. ತಾತನಿಗೆ ಕಸಿವಿಸಿ. ನೆಹರು ಪಕ್ಕಾ ಅನುಯಾಯಿಯಾಗಿದ್ದ ತಾತನಿಗೆ, ’ನಮ್ಮ ನೆಹರು ಮಗಳು ಹೀಗೆ ಮಾಡ್ತಾಳಾ…’ ಅನ್ನೋ ಗೊಂದಲ … ಆಗೆಲ್ಲ ಸ್ವಾತಂತ್ರ್ಯ ಮೆರವಣಿಗೆಯಲ್ಲಿ ಭಾಗವಹಿಸಿದ್ದ ತಾತ, ಅವರಿಗೆ ಲಹರಿ ಬಂದಾಗ ಹಾಲ್ ನ ಬಲಬದಿಯಲ್ಲಿದ್ದ ಪುಟಾಣಿ ಅಲಮಾರಿನ ಬಾಗಿಲು ತೆಗೆದು, ಮಾಸಿದ ಹಾಳೆಗಳನ್ನು ಅಜ್ಜಿ ಮಕ್ಕಳನ್ನು ಎತ್ತುಕೊಳ್ಳುವ ಹಾಗೆ ಹುಷಾರಾಗಿ ಎತ್ತಿಕೊಂಡು, ಹಾಳೆ ಬಿಡಿಸಿ, ನಮಗೆಲ್ಲಾ
’ಯಾವುದು ಕಣ್ಣ ತೆರೆಯಿಸಿತು,
ಘನತೆಯ ಪಡೆದಿಹ ಕಾಂಗ್ರೆಸ್ಸು…’,
’ದುಂಡು ಮೇಜಿನ ಪರಿಷತ್ತು
ಲಂಡನ್ ನಗರದಿ ಸೇರಿತ್ತು
ಬಿಳಿಯರ ಕುಟಿಲತೆ ಗೊತ್ತಿತ್ತು
ಆಂಗ್ಲರ ಪತ್ರವು ಸತ್ತಿತ್ತು’ ಅಂತೆಲ್ಲಾ ಹೇಳಿಕೊಡ್ತಾ ಇದ್ದವರು ಈಗೀಗ ಆ ಪುಸ್ತಕವನ್ನ ಸಂದೂಕದ ಹಿಂಭಾಗಕ್ಕೆ ನೂಕಿ ಬಿಟ್ಟಿದ್ದರು. ಸೋದರ ಮಾವಂದಿರ ಮಾತುಗಳನ್ನು ಒಪ್ಪಿಕೊಳ್ಳಲಾಗದೆ, ವಿರೋಧಿಸಲಾಗದೆ ತಾತ ಮೌನವಾಗುತ್ತಾ ಇದ್ದರು.
ಅಜ್ಜನ ಮನೆ ಎದುರಲ್ಲಿ ಒಂದು ಮೈದಾನ, ಅಲ್ಲಿ ಶಾಮಿಯಾನ ಹಾಕಿ, ಮೈಕು ಹಾಕಿಸಿ, ಅಲ್ಲೇ ತಾತ್ಕಾಲಿಕವಾಗಿ ಜನತಾ ಪಾರ್ಟಿ ಆಫೀಸ್ ಬೀಡುಬಿಟ್ಟಿತ್ತು. ಕುತೂಹಲಕ್ಕೆ ಅಂತ ಹೋಗಿದ್ದವಳನ್ನ ಮಾತಾಡ್ತೀಯಾ ಅಂತ ಮಾವನ ಗೆಳೆಯ ಗೋಪಾಲಣ್ಣ ಕೇಳಿದ್ದ. ಮಾತಿನ ಮಲ್ಲಿ ಆಗಿದ್ದ ನಾನು ’ಓಹೋ’ ಅಂತ ತಲೆ ಆಡಿಸಿದ್ದೆ, ಒಂದು ಪಾಂಪ್ಲೆಟ್ ಕೈಲಿಟ್ಟು, ಮೈಕ್ ಮುಂದೆ ಕೂರಿಸಿದ ಗೋಪಾಲಣ್ಣ ಅದನ್ನ ಜೋರಾಗಿ ಓದು ಅಂದರು …. ನಾನು ಭಾರಿ ಹುಮ್ಮಸ್ಸಿನಲ್ಲಿ ಓದುತ್ತಾ ಹೋದೆ. ಅದು ನನ್ನ ಜೀವನದ ಮೊದಲ ಭಾಷಣ, ನನ್ನ ಜೀವನದ ಏಕೈಕ ಎಲೆಕ್ಶನ್ ಕ್ಯಾಂಪೈನು!! ತಮಾಶೆಯಾಗಿ ಶುರು ಆಗಿದ್ದು ದಿನಾ ಅದೇ ಕೆಲಸ ಆಗೋಯ್ತು! ಮಾವ, ಅಪ್ಪ ಭಾಷಣಗಳನ್ನು ಬರೆದು ಕೊಡೋರು, ನಾನು ವೀರಾವೇಶದಲ್ಲಿ ಮಾತಾಡಿದ್ದೇ ಮಾತಾಡಿದ್ದು. ನೇಗಿಲು ಹೊತ್ತ ರೈತ ಮನೆ ಅಂಗಳದಲ್ಲಿ, ಮನೆ ಒಳಗೆ, ಮಾತುಗಳಲ್ಲಿ… ಆಗ ಬೆಂಗಳೂರು ಗ್ರಾಮಾಂತರದಲ್ಲಿ, ದೇವನಹಳ್ಳಿಯಲ್ಲಿ ಜನತಾ ಪಾಟಿಯಿಂದ ಎಲೆಕ್ಶನ್ ಗೆ ನಿಂತಿದ್ದವರು ಕೆ ನಾರಾಯಣಪ್ಪ – ಕೆನ್ನಮಂಗಲದ ನಾರಾಯಣಪ್ಪ. ಎಲೆಕ್ಶನ್ ಆಯ್ತು, ಅವರು ಗೆದ್ದಿದ್ದು ಆಯ್ತು, ಗೆದ್ದು ಅವರು ಬಂದಾಗ ಸ್ಪೀಚ್ ಮಾಡಿದ ಹುಡುಗಿ ಅಂತ ಯಾರೋ ಹೇಳಿದಾಗ ಅವರಿಗೆ ಹಾಕಿದ್ದ ಹಾರ ತೆಗೆದು, ನನಗೆ ಹಾಕಿ, ಜೇಬಿನಿಂದ ಒಂದು ರೂ ನಾಣ್ಯ ತೆಗೆದುಕೊಟ್ಟಿದ್ದರು, ನಾನು ಅಚಾನಕ್ ನಮ್ಮ ಮನೆಯ ಹೀರೋಯಿನ್ ಆಗಿಬಿಟ್ಟಿದ್ದೆ!! ಸುಮಾರು ವರ್ಷ ಆ ಒಂದು ರೂ ನಾಣ್ಯ ನನ್ನ ಹತ್ತಿರ ಭದ್ರವಾಗಿತ್ತು!

ನನ್ನ ಪ್ರಪಂಚದ ಹೊರಗೆ, ನನ್ನ ಪ್ರಪಂಚಕ್ಕೂ ಮೀರಿದ ಒಂದು ಪ್ರಪಂಚವಿದೆ ಅಂತ ಮೊದಲು ಅರಿವಾಗಿದ್ದು ಆಗ. ಆಗ ರಾಜಕೀಯ ಏನೂ ಗೊತ್ತಿಲ್ಲದಿದ್ದರೂ, ಗೊತ್ತಾಗದಿದ್ದರೂ, ಮನಸ್ಸಿಗೆ ಒಂದು ಎಚ್ಚರಿಕೆಯ ಅರಿವಿನ ಎಳೆ ಆಗ ತಾಕಿತ್ತು. ಅಷ್ಟರಲ್ಲಾಗಲೇ ಮನೆಯಲ್ಲಿ ತಂಗಿ ಅಮ್ಮನ ಫೇವರೇಟ್ ಪಾಪು ಆಗಿದ್ದಳು, ನಾನು ಹೆಚ್ಚು ಹೆಚ್ಚು ಅಪ್ಪನಿಗೆ ಅಂಟಿಕೊಂಡು ಬೆಳೆದವಳು. ನನಗೆ ಅರ್ಥವಾಗುತ್ತಿತ್ತೋ ಇಲ್ಲವೋ ಅಪ್ಪ ನನ್ನ ಮುಂದೆ ದಿನಪತ್ರಿಕೆ ಓದುತ್ತಾ, ಅದರ ಬಗ್ಗೆ ಮಾತಾಡುತ್ತ ಇರುತ್ತಿದ್ದರು. ಆ ನಂತರದ ದಿನಗಳಲ್ಲಿ ಅಪ್ಪನ ಕೈನಲ್ಲಿ ನೋಡಿದ ಒಂದು ಪುಸ್ತಕ ’ಬರೋಡ ಡೈನಮೇಟ್ ಸಂಚು’, ಪುಸ್ತಕದ ಮುಖ ಪುಟದಲ್ಲಿ ಒಂದು ದೊಡ್ಡ ಸಂಕೋಲೆಯ ಚಿತ್ರ, ಅದರ ಹಿಂದೆ ದೇವರಂತೆ, ಮಗುವಂತೆ ನಗುತ್ತಿದ್ದ ಒಬ್ಬಾತ. ’ಇವರ್ಯಾರು?’ ನಾನು ಕೇಳಿದ್ದೆ. ’ಅದು ಜಾರ್ಜ್ ಫರ್ನಾಂಡೀಸ್ ಅಂತ … ಕನ್ನಡದವರು ಅವರು, ನೀನು ಎಮರ್ಜೆನ್ಸಿ ಬಗ್ಗೆ ಮಾತಾಡ್ತಿದ್ದಾಗ ಹೆಸರು ಹೇಳಿದ್ದಲ್ಲಾ, ಅದೇ ಫರ್ನಾಂಡಿಸ್’ …. ’ಇವರೆಲ್ಲಿದ್ದಾರೆ?’, ’ಎಲ್ಲಾ ಕಡೆ ಓಡಾಡ್ತರಮ್ಮ, ಬಾಂಬೆಯಲ್ಲಿ ಎಲ್ಲಾ ಲೇಬರ್ ಯೂನಿಯನ್ ಇವರ ಒಂದು ಮಾತಿಗೆ ಕೆಲಸ ನಿಲ್ಲಿಸ್ತಾವೆ, ಕೆಲ್ಸ ಮಾಡ್ತಾವೆ. ಅವರು ಒಂದು ಮಾತಿನಿಂದ ಬಾಂಬೆಯನ್ನು ನಿಲ್ಲಿಸಬಲ್ಲರು…’ ಅಪ್ಪ ಅಪಾರ ಮೆಚ್ಚಿಗೆಯಲ್ಲಿ ಹೇಳಿದ್ದರು. ಆಮೇಲೆ ನಿಧಾನವಾಗಿ ಆ ಪುಸ್ತಕ ಓದಿದೆ … ಎಲ್ಲಾ ಅರ್ಥವಾಯಿತು ಎನ್ನಲಾರೆ, ಆದರೆ ಅದು ಮತ್ತು ಅಂತಹ ಪುಸ್ತಕಗಳು ನನಗೆ ಯೋಚಿಸಲು ಕಲಿಸಿದವು. ಆ ಎಲೆಕ್ಶನ್ ನಲ್ಲಿ ಅರಿಯದೆ ಮಾಡಿದ ಒಂದು ಭಾಷಣ ಆಮೇಲೆ ನಾನು ಜಗವನ್ನು ನೋಡುವ ರೀತಿಯನ್ನೇ ಬದಲಿಸಿ ಹಾಕಿತ್ತು.
ಅದುವರೆಗೂ ನನ್ನ ಮಟ್ಟಿಗೆ ಇಂದಿರಾ ಗಾಂಧಿ ಅಂದರೆ ನಿಶೇಧಿತ ಶಬ್ಧ. ಆದರೆ ಅಷ್ಟರಲ್ಲಾಗಲೇ ಜನತಾ ಪಾರ್ಟಿ ನಗೆಪಾಟಲಿಗೀಡಾಗುವಂತೆ ಹರಿದು ಹಂಚಿಹೋಗಿತ್ತು. ಪ್ರಧಾನಿ ಆಗುವ ಎಲ್ಲಾ ಅರ್ಹತೆ ಇದ್ದ ಜಗಜೀವನ್ ರಾಂ (೭೭ ರ ಎಲೆಕ್ಶನ್ ಕ್ಯಾಂಪೇನ್ ಸಮಯದಲ್ಲಿ ಅವರು ಕಾರಿನಲ್ಲಿ ನಮಸ್ಕರಿಸುತ್ತಾ ಹೋದಾಗ, ನಾನು ಅವರ ಕೈಗೆ ಹೂಗುಚ್ಚ ಕೊಟ್ಟಿದ್ದೆ, ಪುಟ್ಟ ಪುಟ್ಟ ಕಂಗಳ, ಕೆನ್ನೆ ತುಂಬಾ ನಗು ತುಂಬಿಕೊಂಡ, ಪುಟ್ಟ ಪುಟ್ಟ ಕೈಬೆರಳುಗಳನ್ನು ಜೋಡಿಸಿ ’ನಮಶ್ಕಾರ್’ ಅಂದಿದ್ದ ಜಗಜೀವನ್ ರಾಂ) ತಮ್ಮ ಮಗನ ಮಾನಗೇಡಿ ಕೆಲಸದಿಂದ ಹಿಂದೆ ಸರಿಯುವಂತಾಯಿತು, ಇಲ್ಲದಿದ್ದರೆ ಈ ದೇಶ ಮೊದಲ ಬಾರಿ ಒಬ್ಬ ದಲಿತ ಪ್ರಧಾನಿಯಾಗುವುದನ್ನು ನೋಡುತ್ತಿತ್ತಾ ಎಂದು ಈಗಲೂ ಚಿಂತಿಸುತ್ತೇನೆ ನಾನು, ಶಾ ಕಮಿಶನ್ ನಡೆಸುತ್ತಿದ್ದ ವಿಚಾರಣೆಗೆ ಗಂಭೀರವಾಗಿ ಬಂದು ಕೂರುತ್ತಿದ್ದ ಪುಟ್ಟದೇಹದ ಇಂದಿರಾ ಯಾಕೋ ಗೌರವ ಹುಟ್ಟುವಂತೆ ಕಾಣುತ್ತಾ ಇದ್ದರು.
ಈಗ ಅಪ್ಪ ಇಲ್ಲ, ಅಜ್ಜ ಇಲ್ಲ, ಗೋಪಾಲಣ್ಣ ಎಲ್ಲಿರಬಹುದು … ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಬಾಲ್ಯದ ಹೀರೋ, ಇಡೀ ಬಾಂಬೆಯನ್ನು ನಿಲೆ ಹಾಕಿ ಕಟ್ಟಿ ನಿಲ್ಲಿಸುತ್ತಿದ್ದ ಆ ಬಿಳಿ ನಗೆಯ ಜಾರ್ಜ್ ಫರ್ನಾಂಡಿಸ್ ತನ್ನ ನೆನಪಿನ ಶಕ್ತಿಯನ್ನು ಆಲ್ಜಮೀರ್ ಎಂಬ ರಾಕ್ಷಸನಿಗೆ ಬಲಿ ಕೊಟ್ಟು, ಸಂಬಂಧಕ್ಕೊಂದು ಚೌಕಟ್ಟಿರಲಿಲ್ಲ ಎಂಬ ಒಂದೇ ಕಾರಣಕ್ಕೆ ಜೀವಕ್ಕಿಂತ ಹತ್ತಿರದ ಗೆಳತಿಯಿಂದ ದೂರಾಗಿ, ತಮ್ಮದೇ ಮನೆಯಲ್ಲಿ ಅಪರಿಚಿತರಂತೆ ಬದುಕುತ್ತಾ, ನಿರ್ದಯಿ ಕ್ಯಾಮೆರಾ ಕಣ್ಣಿಗೆ ಪೇಲವ ನಗು ನಗುತ್ತಾ…. ಮೊನ್ನೆ ಎಲೆಕ್ಶನ್ ಕಾರ್ಡ್ ಹುಡುಕುತ್ತಾ ಇದ್ದಾಗ ಅನಿರೀಕ್ಷಿತವಾಗಿ ಸಿಕ್ಕ ಆ ಹಳೆಯ ಒಂದು ರೂ ನಾಣ್ಯವನ್ನು ಉಜ್ಜಿದಾಗ ಮೇಲೆದ್ದ ಜಿನಿ ಏನೆಲ್ಲಾ ನೆನಪುಗಳನ್ನು ನನ್ನ ಉಡಿಗೆ ಹಾಕಿತ್ತು…
 

‍ಲೇಖಕರು avadhi

April 19, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

12 ಪ್ರತಿಕ್ರಿಯೆಗಳು

  1. bharathi

    ಅಂತೂ ಏನೇನೆಲ್ಲಾ ಮಾಡಿದ್ದೀರಿ ಸಂಧ್ಯಾರಾಣಿಯವರೇ ನಿಮ್ಮ ಜೀವನದಲ್ಲಿ ! ಚೆನ್ನಾಗಿದೆ ನಿಮ್ಮ ನೆನಪುಗಳ ಮೆರವಣಿಗೆ …:)

    ಪ್ರತಿಕ್ರಿಯೆ
  2. Sandhya Bhat

    ರಾಜಕೀಯ ಅಷ್ಟೊಂದು ಗೊತ್ತಿಲ್ಲ. ಆದರೆ ನಿಮ್ಮ ನೆನಪಿನ ದೋಣಿಯಲ್ಲಿ ಒಂದು ಸುತ್ತು ಚೆನ್ನಾಗಿತ್ತು …

    ಪ್ರತಿಕ್ರಿಯೆ
  3. umasekhar

    ninna aghada nenapu. mathu adannu hakida ninna baravanigege my biggest salute and abig big hug for uuuuu……..

    ಪ್ರತಿಕ್ರಿಯೆ
  4. sunil Rao

    indigoo emergency nanna kaalada hudugarige kalpisikollalaagada chitrana..
    adara bagge halavaaru kitaabu odiruvenaadaroo, personal anubhavagaLa aadhaaritavaadaddu odode vishista…
    nimma column pratee vaara adara kaatarate mattu moulyavanna hecchu maadi kodtide nanage

    ಪ್ರತಿಕ್ರಿಯೆ
  5. Tejaswini Hegde

    ನೆನಪುಗಳ ಮೆರವಣಿಗೆ ಚೆನ್ನಾಗಿದೆ ಸಂಧ್ಯಾ 🙂 ಎಮರ್ಜನ್ಸಿ ಕಥೆಗಳನ್ನು ನನ್ನ ಅಪ್ಪನೂ ಆಗಾಗ ಹೇಳ್ತಾ ಇರ್ತಾರೆ!

    ಪ್ರತಿಕ್ರಿಯೆ
  6. suguna mahesh

    ಅಬ್ಬಾ..!! ಎಷ್ಟೆಲ್ಲಾ ನೆನಪಿಟ್ಟುಕೊಂಡಿದ್ದೀರಿ… ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ

    ಪ್ರತಿಕ್ರಿಯೆ
  7. akshata

    ನಿಮ್ಮ ಬರವಣಿಗೆ ಇಷ್ಟವಾಗುತ್ತಿದೆ ಸಂಧ್ಯಾ. ನೆನಪಿನ ದೋನಿಯನ್ನು ಮುಂದೆ ಸಾಗಿಸಲು ನಿಮಗಿರುವ ಸ್ಮರಣಶಕ್ತಿ ಅದ್ಭುತವಾದದ್ದು. ನಿಜವಾಗಿಯೂ ಚಿಕ್ಕಂದಿನಲ್ಲಿ ನಡೆದ ಘಟನೆಗಳು ನಮ್ಮ ಮುಂದೆ ನಮ್ಮ ಬೆಳವಣಿಗೆಗೆ ಕಾರನವಾಗುತ್ತವೆ.

    ಪ್ರತಿಕ್ರಿಯೆ
  8. Badarinath Palavalli

    ಎಮರ್ಜೆನ್ಸಿ ಕಾಲದ ನಮಗೆ ಗೊತ್ತಿಲ್ಲದ ಎನಿತೋ ಸಂಗತಿಗಳು ಈಗ ಅರಿವೆ ಬಂದವು.

    ಪ್ರತಿಕ್ರಿಯೆ
  9. Anuradha.B.Rao

    ನಾವು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುತ್ತಿದ್ದ ನೆನಪಾಯಿತು . ಮೆರವಣಿಗೆಯಲ್ಲಿ ಭಾಗವಹಿಸಿದ್ದು ಎಲ್ಲವೂ ನಿಮ್ಮ ಈ ಲೇಖನದಿಂದ ನೆನಪಾದವು . ನಿಮ್ಮ ನೆನಪಿನ ಶಕ್ತಿ ಅಧ್ಭುತ . ಅಭಿನಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: