ಸಂಪು ಕಾಲಂ : ಎಳೆಯ ಮನಸಿನ ಎಳೆಗಳು

ಮುಗ್ಧ ಮಕ್ಕಳ ಮನಸ್ಸು ಯಾರನ್ನೂ ಆಕರ್ಷಿಸುವಂತೆ, ಅಥವಾ ಅದಕ್ಕಿಂತ ಕೊಂಚ ಹೆಚ್ಚು ಎಂಬಂತೆ, ಮಕ್ಕಳು ನನ್ನನ್ನು ಮೋಡಿ ಮಾಡುತ್ತಾರೆ. ಅವರ ನಿಷ್ಕಲ್ಮಶ ಮಾತು, ನಗೆ, ಒಳಗೂ ಹೊರಗೂ ಒಂದೇ ಆದ ಪಾರದರ್ಶಕ ಮನಸ್ಸು, ಎಲ್ಲಾ ಎಷ್ಟು ಹಿತ ಅಲ್ಲವೇ. “ನೂರಾರು ನಗೆ ಹರಿದು, ಬೇಸರಿಕಿ ಯಾತಾಕ, ಮಕ್ಕಾಳ ಮಾರಿ ಒಮ್ಮೆ ನೋಡಾ ನನ ಧೀರ” ಎಂಬಂತೆ ಮಕ್ಕಳ ಮುಖ ನೋಡಿದರೆ, ಅವರೊಟ್ಟಿಗೆ ಬೆರೆತುಬಿಟ್ಟರೆ ನಮಗಿರುವ ಎಂತಹಾ ನೋವು, ದುಗುಡವೇ ಆದರೂ ಮಾರು ದೂರ! ಈ ಸಂತೋಷವನ್ನು ಅನುಭವಿಸಲು ಸದಾ ಎದುರು ಕಾಯುವ ನನಗೆ ನಮ್ಮ ಆಫೀಸಿನಲ್ಲೇ ಒಂದು ಮಗು ಕಾಣಬೇಕೇ! ಒಂದು ಸೋಮವಾರ ಬೆಳಗ್ಗೆ ಮನಸ್ಸಿಲ್ಲದ ಮನಸ್ಸಿನಲ್ಲಿ ಆಫೀಸಿಗೆ ಹೊರಟ ನನಗೆ ಬಾಗಿಲಲ್ಲೇ ಆ ಮಗು ಕಂಡಿತು. ಕಿತ್ತಳೆ ಹಣ್ಣಿನ ತೊಳೆಯನ್ನು ಬಿಡಿಸುವಾಗ “ಹುಳೀ” ಎನಿಸಿದ್ದು, ಬಾಯಿಗಿಟ್ಟ ಕೂಡಲೇ ತುಂಬಾ ಸಿಹಿ ಇದ್ದರೆ ಆಗುವ ಅಚಾನಕ್ ಸಂತೋಷದ ಅನುಭವ ಒಂದು ಕ್ಷಣ ಆಗಿ, ಮುಖದಲ್ಲಿ ಮಂದಹಾಸ ಮೂಡಿತು. ಅವಳಿಗೆ ಹಲೋ ಹೇಳಿ, ನನ್ನ ಸೀಟು ಸೇರಿದ ನಂತರ, ಪಕ್ಕದಲ್ಲಿ ವಿಚಾರಿಸಿದೆ.
ನಮ್ಮ ಆಫೀಸಿನಲ್ಲೇ ಒಬ್ಬರ ಮಗಳು. “ಎಕ್ಸ್ಟ್ರೀಮ್ಲೀ ಬ್ರಿಲಿಯೆಂಟ್, ತುಂಬಾ ಶಿಸ್ತು, ಈಗಿನ ಕಾಲದ ಮಕ್ಕಳ ಹಾಗೆ ಚೂರೂ ಎಳಸಲ್ಲ, ತುಂಬಾ ಗಂಭೀರ”, ಎಂದೆಲ್ಲಾ ಆ ಮಗುವಿನ ಬಗ್ಗೆ ಕೇಳಲ್ಪಟ್ಟೆ. ಕೆಲಸವಿರಲಿ ಪಕ್ಕಕ್ಕೆ ಎಂದು ಹೇಳಿ, ಆ ಮಗುವನ್ನು ಮಾತನಾಡಿಸಲು ಉತ್ಸುಕಳಾಗಿ ಹೊರಟೆ. ನನ್ನ ಮಾತಿಗೆ ಒಂದು ಸಣ್ಣ ನಗೆಯಲ್ಲೇ ಉತ್ತರಿಸಿಬಿಟ್ಟ ಆ ಮಗು ತನ್ನ ತಂದೆಯ ಬಳಿ ನಿಧಾನವಾಗಿ ನಡೆದು ಹೋಗಿ ಕೂತಳು. ಇದು ಇದ್ದೇ ಇರತ್ತಲ್ಲ ಕೆಲ ಮಕ್ಕಳಿಗೆ ಹೊಸತರ/ಹೊಸಬರ ಸ್ಟಾರ್ಟಿಂಗ್ ಪ್ರಾಬ್ಲಮ್ಮು ಎಂದು ಸುಮ್ಮನಾದೆ. ನನ್ನ ಸ್ಥಳಕ್ಕೆ ಮರಳಿ ಕೂತು ಒಮ್ಮೆ ಬಗ್ಗಿ ಅತ್ತ ನೋಡಿದರೆ ಆ ಹುಡುಗಿ ನನ್ನಕಡೆಗೇ ನೋಡುತ್ತಿದ್ದಳು. ದೂರದಿಂದಲೇ ಬಗ್ಗಿ ನೋಡುತ್ತಾ ಕೂತಿದ್ದಳು. ನಾನು ಕೈ ಸನ್ನೆ ಮಾಡಿ ಕರೆದೆ, ಬಹುಬೇಗ ಮಗ್ಗುಲು ಬದಲಾಯಿಸಿ ಕೂತುಬಿಟ್ಟಳು.
ನನ್ನ ನೋಟ ಗಮನಿಸಿ, “ಆ ಹುಡುಗೀನಾ, ಬಿಡೇ, ಅದು ಒಂಥರಾ”…. ಎಂದು ನನ್ನ ಸಹೋದ್ಯೋಗಿ ನನ್ನ ಬೆನ್ನು ತಟ್ಟಿ ಹೊರಟೇ ಬಿಟ್ಟಳು. ಈಗ ನನಗೆ ಆ ಹುಡುಗಿಯ ಬಗ್ಗೆ ಕುತೂಹಲ ಮೂಡಿತು. ಅತ್ತ ನೋಡಿದರೆ ಆ ಹುಡುಗಿ ಮತ್ತೆ ನನ್ನನೇ ನೋಡುತ್ತಿದ್ದಳು. ಈ ಬಾರಿ ಅವಳನ್ನು ಮಾತನಾಡಿಸಿಯೇ ಬಿಡುವೆ ಎಂದು ನಿರ್ಧರಿಸಿ ಅವಳತ್ತ ಹೆಜ್ಜೆ ಹಾಕಿದೆ. ಇದ್ದಕ್ಕಿದ್ದಂತೆ ಆ ಹುಡುಗಿಯ ಮುಖದಲ್ಲಿ ತುಂಬಾ ಗಾಬರಿ ಕಾಣಿಸಿತು. ತುಂಬಾ ಬೆವರಲು ಪ್ರಾರಂಭಿಸಿದಳು. ಅವಳ ತಂದೆಯ ಶರ್ಟ್ ಪಟ್ಟಿ ಭದ್ರ ಹಿಡಿದಿದ್ದದ್ದು ಕಂಡಿತು. ಏನೋ ವ್ಯತ್ಯಾಸ ಕಂಡು ನಾನು ಅವಳನ್ನು ಗಮನಿಸದ ಹಾಗೆ ಅವಳ ತಂದೆಯ ಬಳಿ ಮಾತನಾಡಿಸುತ್ತಾ ಅವಳ ಚಲನವಲನಗಳನ್ನು ಗಮನಿಸುತ್ತಿದ್ದೆ. ತುಂಬಾ ವಿಚಿತ್ರವಾಗಿದ್ದ ಅವಳ ವರ್ತನೆ ನನ್ನನ್ನು ದಂಗಾಗಿಸಿತ್ತು. ಸಾಧಾರಣವಾದ ಮಕ್ಕಳ ಯಾವ ವರ್ತನೆಯೂ ಇವಳಲ್ಲಿ ಕಂಡು ಬರಲಿಲ್ಲ, ಬದಲಾಗಿ ಬರೀ ಭಯ, ಆತಂಕ, ತೀವ್ರ ನಾಚಿಕೆ ಇತ್ಯಾದಿ ಕಂಡುಬಂತು. ಆಕೆಯ ತಂದೆ, ತನ್ನ ಮಗಳ ಈ ವರ್ತನೆಯ ಬಗ್ಗೆ ಸ್ವಲ್ಪವೂ ಸುಳಿವೇ ಇಲ್ಲ ಎನ್ನುವಂತೆ ಆರಾಮವಾಗಿಯೇ ಇದ್ದ. ದಿನ ಪೂರ್ತಿ ಆ ಹುಡುಗಿಯನ್ನು ದೂರದಿಂದಲೇ ಸ್ಟಡಿ ಮಾಡಲು ಪ್ರಯತ್ನಿಸಿದೆ.
 
ಕೊನೆಗೆ ತಿಳಿದು ಬಂದದ್ದು ಇಷ್ಟು, ಆಕೆಯನ್ನು ಯಾರೂ ಮಾತನಾಡಿಸದೆ ಇದ್ದರೆ, ತನ್ನ ಪಾಡಿಗೆ ತನ್ನನ್ನು ಬಿಟ್ಟುಬಿಟ್ಟರೆ, ಆಕೆ ತನ್ನ ಪ್ರಪಂಚದಲ್ಲಿ ಮುಳುಗಿ ಬಿಡುತ್ತಾಳೆ. ಅವಳು ಅಧ್ಬುತವಾಗಿ ಚಿತ್ರ ಬಿಡಿಸುತ್ತಾಳೆ, ಕಷ್ಟವೆನಿಸುವ ಲೆಕ್ಕಗಳನ್ನೂ ಬಿಡಿಸುತ್ತಾಳೆ, ಜಾಣೆ. ಆದರೆ ಯಾರಾದರೂ ಆಕೆಯತ್ತ ಗಮನ ಹರಿಸುವುದು ಗೊತ್ತಾದರೆ ಸಾಕು ಆಕೆ ಭಯದ ಮಡುವಿಗೆ ತುತ್ತಾಗುತ್ತಾಳೆ. ಹಣೆ ಬೆವರುತ್ತದೆ, ತುಟಿಯಲ್ಲಿ ಸಣ್ಣ ನಡುಕ, ಕೈ ಕಾಲ ಕಂಪನ! ಮನೋವಿಜ್ಞಾನದ ವಿದ್ಯಾರ್ಥಿಯಾದ್ದರಿಂದ ನನಗೆ ಇಂತಹ ಕೆಲವು ಸೂಕ್ಷ್ಮಗಳ ಬಗ್ಗೆ ಕುತೂಹಲ.
ಇನ್ನು ಕೇಳಬೇಕೆ, ಅಂದಿನ ಲಂಚ್ ಆಕೆಯ ತಂದೆಯೊಟ್ಟಿಗೆ ನಡೆಯಿತು. ಸಂವಾದದಲ್ಲಿ ತಿಳಿದು ಬಂದ ವಿಚಾರ. ಆಕೆಯ ತಂದೆಗೆ ಅವಳ ಈ ರೀತಿಯ ವರ್ತನೆಯ ಬಗ್ಗೆ ಕೊಂಚವೂ ಅರಿವಿಲ್ಲ. ಎಷ್ಟು ಹೊತ್ತಾದರೂ, “ಅವಳು ಎಲ್ಲದರಲ್ಲೂ ಬೆಸ್ಟ್ ಆಗಬೇಕು, ಅದಕ್ಕೆ ಅವಳನ್ನು ರಜೆಯಲ್ಲೂ ಕೂತು ಓದಿಸುತ್ತೇನೆ. ಅವಳು ಐ ಐ ಟಿ ಯಲ್ಲಿ ಮೊದಲ ಸ್ಥಾನ ಗಳಿಸಬೇಕೆಂಬುದು ನನ್ನ ಹಂಬಲ, ಅವಳು ಸ್ಪರ್ಧಾತ್ಮಕವಾಗಿ ಬೆಳೆಯಬೇಕು…” ಇತ್ಯಾದಿ ಅನೇಕ (ಆತನ ಭಾಷೆಯ) ಮಹತ್ವಾಕಾಂಕ್ಷೆಗಳನ್ನೂ (ನನ್ನ ಭಾಷೆಯ) “ಪ್ರಾಡಕ್ಟ್ ಸೆಲ್ಲಿಂಗ್” ಸೂತ್ರಗಳನ್ನೂ ಹಂಚಿಕೊಳ್ಳುತ್ತಿದ್ದರೆ, ನನಗೆ ಒಂದು ಕಡೆ ನಗು ಮತ್ತೊಂದು ಕಡೆ ಆ ಮಗುವಿನ ಬಗ್ಗೆ ಮರುಕ!
ಕಾರ್ಪೊರೇಟ್ ಜಗತ್ತಿನ ಗೆಲುವುಗಳಲ್ಲಿ, ಜಯದ, ಸ್ಪರ್ಧೆಯ ಬೆನ್ನಟ್ಟಿ ಹೊರಟ ಅನೇಕರ ಜೀವನದ ಮೊದಲ ಸೋಲು ಎಂದರೆ, ಜೀವನವನ್ನು ಸವಿಯುವ, ಅದರ ಮುಗ್ಧ ಸುಖಗಳನ್ನು ಆಸ್ವಾದಿಸುವ ಸಾಮರ್ಥ್ಯ ಕಳೆದುಕೊಳ್ಳುವುದು, ಎಂಬ ನನ್ನ ಅನಿಸಿಕೆ ಬಹುಪಾಲು ನಿಜ ಎನಿಸುವುದು ಈ ರೀತಿಯ ಜನರನ್ನು ಕಂಡಾಗಲೇ. ಅಷ್ಟು ಸಾಲದು ಎಂಬಂತೆ, ಕೆಲವೊಮ್ಮೆ ನಮ್ಮ ಮಕ್ಕಳ ಬೆಳವಣಿಗೆ, ಅವರ ಮಾನಸಿಕ ತುಮುಲಗಳು, ಗೊಂದಲಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರುವಂತೆ ಮಾಡುತ್ತದೆ, ನಮ್ಮ ಸ್ಪರ್ಧಾತ್ಮಕ ಮನಸ್ಥಿತಿ.
ಮರುದಿನ ಮತ್ತೆ ಆ ಹುಡುಗಿಯನ್ನು ಆಫೀಸಿನಲ್ಲಿ ಕಂಡು ಖುಷಿಯಾಯಿತು. ಹೇಗಾದರೂ ಆಗಲಿ ಎಂದು ಮನೆ ಹೊರಡುವಾಗಲೇ ಒಂದು ಚಾಕೊಲೇಟ್ ಕೈಲಿ ಹಿಡಿದು ಹೊರಟದ್ದು ಒಳ್ಳೆಯದಾಯಿತು ಎಂದು ಬಗೆದು, ಆ ಹುಡುಗಿಗೆ ಅದನ್ನು ಕೊಟ್ಟು ನಕ್ಕೆ, ಆಕೆ ನನಗಾಗಿಯೇ ಬಾಗಿಲಲ್ಲಿ ಕಾದಿದ್ದಂತೆ ಇದ್ದು, ಚಾಕೊಲೇಟ್ ತೆಗೆದುಕೊಂಡು ಪುನಃ ನಿಧಾನವಾಗಿ ನಡೆದು ಮರೆಯಾಗಿ, ದೂರದಿಂದ ಬಗ್ಗಿ ನೋಡುತ್ತಿದ್ದಳು. ಹೋಗಿ ಮಾತನಾಡಿಸಿ, ನನ್ನೆಲ್ಲಾ ಕಲೆಗಳನ್ನೂ ಬಳಸಿ ಕೊನೆಗೂ ಆಕೆಯ ಸ್ನೇಹ ಪಡೆಯುವಲ್ಲಿ ಯಶಸ್ವಿಯಾದೆ. ಅವಳೊಟ್ಟಿಗೆ ಮಾತನಾಡಿದ ಕೆಲವಾರು ನಿಮಿಷಗಳು, ನಮ್ಮ ಹಿರಿಯರ ಆಲೋಚನೆಗಳ ಬಗ್ಗೆ, ಕೆಲವು ಆಕರ್ಷಣೆಗಳಿಗೆ ಒಳಗಾಗಿ ನಮ್ಮನ್ನು ನಾವು ಮಾರಿಕೊಳ್ಳುವ ಪರಿಸ್ಥಿತಿಗಳ ಬಗ್ಗೆ, ಒಟ್ಟಾರೆ ನಮ್ಮೆಲ್ಲ ವ್ಯವಸ್ಥೆಗಳ ಬಗ್ಗೆ ಒಂದು ಬಗೆಯ ಜಿಗುಪ್ಸೆ ಹುಟ್ಟಿದ್ದು ಸುಳ್ಳಲ್ಲ.
ನನ್ನ ಉಸಿರುಗಟ್ಟಿಸಿ, ದಂಗಾಗಿಸಿದ ಅವಳ ಮಾತುಗಳು ಹೀಗಿದ್ದವು: “ನನಗೂ ಎಲ್ಲರಂತೆ ಆಟವಾಡಲು ಇಷ್ಟ, ಆದರೆ ಭಯ. ಡ್ಯಾಡಿ ಓದು ಓದು ಅಂತಾರೆ, ತುಂಬಾ ಓದ್ತೀನಿ. ಆದರೆ ನಂಗೆ ಚಿತ್ರ ಬರೆಯಕ್ಕೆ ಇಷ್ಟ. ನನಗೆ ಯಾರನ್ನು ಕಂಡರೂ ಭಯ. ಡ್ಯಾಡಿ, ಮಮ್ಮಿ ದಿನಾ ಜಗಳ ಆಡ್ತಾರೆ, ಮನೇಲೆ ಇರಲ್ಲ, ನನಗೆ ಅವರಜೊತೆ ಇರಕ್ಕೆ ಆಗಲ್ಲ, ನನಗ್ಯಾರೂ ಫ್ರೆಂಡ್ಸ್ ಇಲ್ಲ, ಎಲ್ಲಾ ನನ್ನ ರೇಗಿಸ್ತಾರೆ, ಅದಕ್ಕೆ ನಾನು ಡ್ಯಾಡಿ ಜೊತೆ ಆಫೀಸಿಗೆ ಬರ್ತೀನಿ…..” ಹೀಗೆ ಮಾತನಾಡುತ್ತಾ ತಿಳಿದ ಇನ್ನೂ ಕೆಲವು ಆಘಾತಕಾರೀ ವಿಷಯ ಎಂದರೆ, ಕೆಲವು ವರ್ಷಗಳ ಹಿಂದೆ ಅವಳ ಹುಟ್ಟು ಹಬ್ಬದ ಸಮಾರಂಭದಲ್ಲಿ ಕೇಕ್ ಕಟ್ ಮಾಡಿ ಕೈ ತೊಳಿಯಲು ಹೊರಟ ಅವಳನ್ನು ಯಾರೋ “ಅಂಕಲ್” ಒಬ್ಬರು ಶೋಷಣೆಗೆ ಒಳಪಡಿಸಿದ್ದಾರೆ. ಆ ವಿಚಾರವನ್ನು ಅವಳು ತನ್ನ ಪೋಷಕರಿಗೂ ತಿಳಿಸಿಲ್ಲ, ತಿಳಿಸುವಷ್ಟು ಸಲಿಗೆ ಅವರು ಕೊಟ್ಟಿಲ್ಲ, ಇದರಿಂದ ತುಂಬಾ ಹೆದರಿದ ಅವಳ ಜೀವ, ತನ್ನೊಳಗೇ ಉರಿದು ಉರಿದು, ಬೇಸತ್ತಿದೆ. ಯಾರನ್ನು ಕಂಡರೂ, ಏನು ಮಾಡುತ್ತಾರೋ ಎಂಬ ಭಯ, ಆತಂಕ ಅವಳಿಗೆ. ಅವಳ ತಂದೆ ತಾಯಿಯಿಂದ ಬರುವ ಒಂದೇ ಮಾತು “ಚೆನ್ನಾಗಿ ಓದು, ಮೊದಲ ಅಂಕ ಗಳಿಸು”… ಅಷ್ಟೇ!
ಈ ರೀತಿ ಕಥೆಗಳು, ಚಲನಚಿತ್ರಗಳಲ್ಲಿ ಓದಿದ್ದು ನೋಡಿದ್ದು ಜರುಗಿದ್ದರೂ, ಇದು ನಮ್ಮ ಸುತ್ತಲ ಪರಿಸರದಲ್ಲಿ ನಡೆಯುತ್ತಿರುವ ನೈಜತೆ ಎಂಬ ಬೆಂಕಿಯ ಬಿಸಿ ನನಗೆ ಇಲ್ಲಿವರೆಗೂ ತಟ್ಟಿರಲಿಲ್ಲ. ನಾವು ನಮ್ಮ ಮಕ್ಕಳನ್ನು ಇಷ್ಟು ನಿರ್ಲಕ್ಷಿಸುತ್ತಿದ್ದೆವೆಯೇ? ಅವರ ಕುಸುಮ ಕೋಮಲ ಮನಸ್ಸು ಮಾಸಿ, ನಲುಗಿ ಹೋಗುತ್ತಿದೆ ಎಂಬ ಅರಿವೂ ನಮಗಾಗದಂತಹ ಪರಿಸ್ಥಿತಿಯನ್ನು ನಾವಿಂದು ತಲುಪಿದ್ದೇವೆ! ನಮ್ಮ ಕೆಲಸ, ಹಣ, ಸ್ಪರ್ಧೆ, “ಜೀವನದಲ್ಲಿ ಮುಂದುವರಿಯುವುದು” ಎಂಬಿತ್ಯಾದಿ ಸುಳ್ಳು ಭರವಸೆಗಳಲ್ಲಿ ನಾವು ಮುಳುಗಿ, ಕೊಚ್ಚಿ ಹೋಗುತ್ತಿದ್ದೇವೆ ಎಂಬುದಕ್ಕೆ ಮೂಕ ಸಾಕ್ಷಿ ಎಂಬಂತೆ ಈ ಹುಡುಗಿ ನನ್ನನ್ನು ಹೆದರಿಸಿದ್ದು ಹೌದು.
ಈ ರೀತಿ ಕತ್ತಲ ಗವಿಯಲ್ಲಿ, ತಮ್ಮೊಳಗೆ ತಾವಾಗಿ, ಅಂತರ್ಮುಖಿಯಾಗಿ, ಜೀವನೋತ್ಸಾಹ ಚಿಗುರಿ ಚಿಮ್ಮುವ ವಯಸ್ಸಿನಲ್ಲಿ ಯಾವುದೋ ಒಂದು ನಿರ್ಲಿಪ್ತ ಭಾವ ತುಂಬಿ ಮುರುಟಿಹೋಗುತ್ತಿರುವ ಮುಗ್ಧ ಮನಸ್ಸುಗಳೆಷ್ಟೋ!! ಆ ಕ್ಷಣ ಭಯದ ಜೊತೆಗೆ ಒಂದು ಅಸಹಾಯಕತೆ ಮೂಡಿ ನನ್ನಲ್ಲೂ ಆ ಹುಡುಗಿಯ ತಂದೆ ತಾಯಿಯ ಛಾಯೆ ಕಂಡುಬಂದಿತ್ತು. ತಕ್ಷಣ ನನಗೆ ಅನಿಸಿದ್ದು, ಆ ಹುಡುಗಿಯನ್ನು ಒಬ್ಬ ಮನೋವೈದ್ಯನ ಬಳಿ ಕರೆದುಕೊಂಡು ಹೋಗಬೇಕೆಂದು, ಅಥವಾ ಅವಳ ತಂದೆ ತಾಯಿಯನ್ನೋ ?! ಇಷ್ಟಕ್ಕೆಲ್ಲಾ ಹೊಣೆ ಯಾರು…? ಹೆದರಿ ಕಮರಿದ್ದ ಆ ಮುಗ್ಧ ಜೀವವಾ, ಅವಳ ಆ ಶೂನ್ಯ ಸ್ಥಿತಿಗೆ ಕಾರಣವಾಗಿರುವ ಅದ್ಯಾವುದೋ ಕಾಮುಕ ಪ್ರಾಣಿಯಾ? “ಅದು ಒಂದು ಥರಾ” ಎಂದು ಆ ಮಗುವನ್ನು ಸದಾ ಭಿನ್ನವಾಗಿ ದಿಟ್ಟಿಸುವ ಸುತ್ತಲಿನ ಪರಿಸರವಾ? ಯಾವುದೋ ಒಂದು ಮಾಯಾಜಿಂಕೆಯ ಮೊರೆ ಹೋಗುವ ಗುಂಗಿನಲ್ಲಿ ಅವಳನ್ನು ಕಡೆಗಣಿಸುತ್ತಿರುವ ಅವಳ ಪೋಷಕರಾ? ಅವರ ಅಥವಾ ಅವರಂತಹ ಅನೇಕರ ಮನೋಭಾವವನ್ನು ಕಾರ್ಖಾನೆಯ ಉತ್ಪನ್ನವಾಗಿಸುತ್ತಿರುವ ಬಿಗಿ ವ್ಯವಸ್ಥೆಯಾ? ಅಥವಾ ಈ ವ್ಯವಸ್ಥೆಯನ್ನು ಅಪ್ಪುತ್ತಿರುವ ನಮ್ಮ ಸಮಾಜವಾ? ಅಂತೂ ಆ ಮಗು ನನ್ನಲ್ಲಿನ (ಬಹುಷಃ ಇದುವರೆವಿಗೂ ಮರೆಯಾಗಿದ್ದ) ಒಂದು ಮಾನವೀಯ ಜಾಗೃತಿಯನ್ನು ಮೂಡಿಸಿದ್ದಂತೂ ನಿಜ.

‍ಲೇಖಕರು avadhi

April 19, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Radhika

    Nice writeup. I’ve seen many such parents who ignore the problems their child may be facing. Why is it so? Isn’t it the parents who should be the first to notice any change in the behavior of the child?

    ಪ್ರತಿಕ್ರಿಯೆ
  2. ಜಿ.ಎನ್ ನಾಗರಾಜ್

    ಸೊಂಪಾಗಿ ತಮ್ಮ ನಿಸರ್ಗದತ್ತ ಸ್ವಾಭಾವಿಕ ಎತ್ತರ-ಬಿತ್ತರದೊಂದಿಗೆ ಎಲ್ಲರ ಮನಸೂರೆಗೊಳ್ಳುವಂತೆ ಬೆಳೆಯ ಬೇಕಾದ ಮರಗಳನ್ನು ವಿದ್ಯುತ್,ಟೆಲಿಫೋನ್ ತಂತಿಗಳಿಗೆ,ವಾಹನ ಸಂಚಾರಕ್ಕೆ,ಮನೆಗಳಿಗೆ ಅಡ್ಡವಾಗುತ್ತವೆಂದು ಯದ್ವಾ ತದ್ವಾ ಕತ್ತರಿಸಿದರೆ ಹೇಗೆ ವಕ್ರ,ವಕ್ರವಾಗಿ ಬೆಳೆಯುತ್ತವೆಯೊ ಹಾಗೆ ಈ ನಮಗೇ ಗೊತ್ತಿಲ್ಲದೆ ನಮ್ಮ ಚಿಂತನೆಯನ್ನು ನಿರೂಪಿಸಿ, ನಿರ್ದೇಶಿಸುತ್ತಿರುವ ವ್ಯವಸ್ಥೆ ಮಕ್ಕಳ ಹಾಗೇಯೇ ಎಲ್ಲರ ವ್ಯಕ್ತಿತ್ವವನ್ನೂ ವಿಕಾರವಾಗಿಸುತ್ತಾ ನಡೆದಿದೆ. ಪ್ರಜ್ಞಾಪೂರ್ವಕವಾಗಿ ತಲೆ ಕೊಡಹಿ ಮಲೆತು ನಿಂತಲ್ಲದೇ ಬೇರೆ ದಾರಿಯಿಲ್ಲ.ಕುಂವೀ ಯವರು ಇತ್ತೀಚೆಗೆ ಬಣ್ಣಿಸಿದ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಗುಳೇ ಬಂದ ಕೂಲಿಕಾರರ ಮಕ್ಕಳನ್ನು ಈ ಹೊತ್ತಿನಲ್ಲೊಮ್ಮೆ ನೆನಪಿಸಿಕೊಳ್ಳೋಣ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: