ಸಂಧ್ಯಾರಾಣಿ ಕಾಲಂ : ಮಾತನಾಡಿಸಿ, ನಿಮಗೂ ಒಂದು ಸ್ನೇಹ ಸಿಕ್ಕೇ ಬಿಡಬಹುದು..

’ಜಯನಗರ ಫೋರ್ತ್ ಬ್ಲಾಕ್’ – ಹಳ್ಳಿ ನಡುವಿನ ಅರಳಿಕಟ್ಟೆ, ಸಿಹಿ ನೀರ ಬಾವಿ, ಜಾತ್ರೆಯ ಬಯಲು, ಬೈ ಟೂ ಕಾಫಿ, ಸುಟ್ಟ ಜೋಳ, ಸಂಜೆ ಆಯಿತು ಎಂದರೆ, ಅಜ್ಜ ಅಜ್ಜಿ ಇಬ್ಬರು ಕಮ್ಮಗೆ ಎಣ್ಣೆ ಹಾಕಿ, ಸುಮ್ಮಗೆ ಜಗಳ ಆಡುತ್ತಾ, ಚಕ್ಕೋತ, ಬಸಳೆ, ಹೊನಗೊನೆ, ದಂಟು, ಸಬ್ಬಕ್ಕಿ, ಮೆಂತೆ, ಮೊದಲೇ ಹೇಳಿಟ್ಟಿದ್ದರೆ ತರುವ ಬೇವು, ಬಾಣಂತಿ ಸೊಪ್ಪಿನ ಹಸಿರು, ಅಯಂಗಾರ್ ಬೇಕರಿ ಎದುರಿನ ಹೂ ಮಾರೋ ಅಜ್ಜಿಯ ಮರದ ಬುಟ್ಟಿಯಲ್ಲಿ ನಗುವ ಹೂವು, ಕಾರಂಜಿ ಪಕ್ಕದಲ್ಲಿಟ್ಟ ವ್ಯಾನಿಟಿ ಬ್ಯಾಗು, ಅದರಾಚೆಗಿನ ಬಳೆ ಅಂಗಡಿ, ಅಲ್ಲೇ ಪ್ಲಾಸ್ಟಿಕ್ ಕವರ್ ಮೇಲೆ ಹರಡಿದ ಬಟ್ಟೆ ಕ್ಲಿಪ್ಪು, ಉಡದಾರ-ಲಾಡಿ ದಾರದ ಉಂಡೆ, ಕನ್ನಡಿ, ಬಾಚಣಿಗೆ, ಜಿರಳೆ ದೂರ ಇಡುವ ನೆಫ್ತಲಾನ್ ಉಂಡೆ, ಟೀ ಸೋಸುವ ಜರಡಿ, ಅಲ್ಲೇ ಮಾರ್ಕೆಟ್ ಒಳಗೆ ಹೆಜ್ಜೆ ಇಟ್ಟರೆ ವರ್ಷದುದ್ದಕ್ಕೂ ಸಿಕ್ಕುವ ಮಾವಿನ ಹಣ್ಣು, ಅವರೆ ಕಾಳು, ಘಮ್ ಎನ್ನುವ ಗಂಧಿಗೆ ಅಂಗಡಿ, ಕರುವಿನ ಕಣ್ಣಿನ ಹಾಗಿನ ಕವಡೆಗಳ ಬುಟ್ಟಿ, ಹಸಿರು ರೇಶ್ಮೆ ಸೀರೆಯಲ್ಲಿನ ನೆರಿಗೆಯ ಹಾಗೆ ಒತ್ತೊತ್ತಾಗಿ, ನೀಟಾಗಿ ಜೋಡಿಸಿಟ್ಟ ವೀಳ್ಯೆದೆಲೆ, ಪೇರಿಸಿಟ್ಟ ತರಕಾರಿ, ಮೆಟ್ಟಿಲು ಹತ್ತಿ ಮೇಲೆ ಹೋದರೆ ಪುಸ್ತಕ ಮತ್ತು ಥರೇವಾರಿ ಕಾಗದಗಳ ಅಂಗಡಿ, ಇಳಿದು ಬಂದು ಹೊರಗೆ ಹೆಜ್ಜೆ ಇಟ್ಟರೆ ಐಸ್ಕ್ರೀಂ ಅಂಗಡಿ, ಕವರಿನಲ್ಲಿ ಸಾಲಾಗಿ ಕೂತು, ಇನ್ನಿಲ್ಲದ ತಾಳ್ಮೆಯಲಿ ಕಾಯುವ ಕಾಟನ್ ಕ್ಯಾಂಡಿ, ಕೈ ಬೀಸಿ ಕರೆಯುವ ನಾಗಶ್ರೀ ಪುಸ್ತಕದಂಗಡಿ, ಒಳಗೆ ಅಡಿಯಿಟ್ಟರೆ ಕೆನ್ನೆ, ಮುಖದ ತುಂಬಾ ನಗು ತುಂಬಿಕೊಂಡು ’ಆವತ್ತು ನೀವು ಈ ಪುಸ್ತಕ ಕೇಳಿದ್ರಲ್ಲ’ ಎಂದು ಆರು ತಿಂಗಳ ಹಿಂದೆ ನೀವು ಕೇಳಿದ ಪುಸ್ತಕ ಮತ್ತು ನಿಮ್ಮನ್ನು ಮರೆಯದ ಆ ನಾಗಶ್ರೀ ಅಂಕಲ್, ಪಕ್ಕದ ಸಿ.ಡಿ. ಅಂಗಡಿ……. ದೇವರೆ, ಬರೆಯುತ್ತಾ ಹೋದಷ್ಟೂ ಹಸೀ ದಾರದ ಉಂಡೆಯನ್ನು ಯಾರೋ ಉರುಳಿಸಿ ಬಿಟ್ಟ ಹಾಗೆ ನೆನಪುಗಳು ಹೊರಗೆ ಬರುತ್ತಲೇ ಇವೆ.
ನಾನು ಬೆರಗುಗಣ್ಣುಗಳನ್ನು ಅರಳಿಸಿಕೊಂಡು ಬೆಂಗಳೂರಿಗೆ ಬಂದದ್ದು ೧೯೯೦ ರಲ್ಲಿ. ಆಗಿನಿಂದ ಈ ಫೋರ್ತ್ ಬ್ಲಾಕ್ ಇಲ್ಲಿನ ನನ್ನೆಲ್ಲಾ ನೆನಪುಗಳನ್ನು ಕೂಡಿಸಿಡುವ ಕೊಂಡಿ. ಆಗ ಫೋರ್ತ್ ಬ್ಲಾಕ್ ಎಂದರೆ ಹಚ್ಚನೆಯ ತರಕಾರಿ, ನಮ್ಮ ಪಾಲಿಗೆ ವಾಲ್ ಮಾರ್ಟ್ ನಷ್ಟು ಅಚ್ಚರಿ ಹುಟ್ಟಿಸಿದ ಜನತಾ ಬಜಾರು, ಸೆಕೆಂಡ್ ಶೋ ನೋಡಿ ಮನೆಗೆ ನಡೆದು ಬರುವಷ್ಟರಷ್ಟು ಹತ್ತಿರದ ’ಪುಟ್ಟಣ್ಣ ಟಾಕೀಸು’, ಪವಿತ್ರಾ ಹೋಟೆಲ್ಲು. ಇಲ್ಲ ಆಗಿನ್ನೂ ಕೂಲ್ ಜಾಯಿಂಟ್ ಗುರುತು ಜಾಗ ಆಗಿರಲಿಲ್ಲ. ಗಣೇಶ್ ದರ್ಶನ್ ದೋಸೆ, ಸುಖ ಸಾಗರ್ ಫ್ರೂಟ್ ಸಲಾಡು, ಪವಿತ್ರಾ ಕಾಫಿ, ವಿಜಯಾ ಬೇಕರಿ ಪಫ್ಫು, ಖಾರಾ ಬನ್ನು. ಈ ಫೋರ್ತ್ ಬ್ಲಾಕ್ ಹೊರಗಿನಿಂದ ಬಂದ ನಮಗೆ ಎಮ್ ಜಿ ರೋಡಿನಷ್ಟು ಹೆದರಿಕೆ, ಮೆಜೆಸ್ಟಿಕ್ಕಿನಷ್ಟು ಗಾಬರಿ ಎರಡೂ ಹುಟ್ಟಿಸದೆ ಸಲೀಸಾಗಿ ನಮ್ಮನ್ನು ಒಳಗೆ ಕರೆದುಕೊಂಡಿತು. ಜಯನಗರದ ಸುತ್ತ ಮುತ್ತ ಈಗ ಹತ್ತು ಹಲವು ಮಾಲ್ ಗಳು ಗಾಜು ಗ್ಲಾಮರಿನಲ್ಲಿ ಕಣ್ಣು ಮಿಟುಕಿಸಿದರೂ ಫೋರ್ತ್ ಬ್ಲಾಕು ಮಾತ್ರ ಇಂದಿಗೂ ಮನೆಯ ಅಂಗಳದಂತೆ. ಅದರಲ್ಲೂ ಕಾಂಪ್ಲೆಕ್ಸಿನ ಪೂರ್ವ ಭಾಗದ ಸಾಲು ಬೆಂಚುಗಳು ಥೇಟ್ ಅಜ್ಜಿಯ ಊರಿನ ಜಗಲಿಗಳಂತೆ.
ಸಂಜೆ ಆದರೆ ಗಿಜಿ ಗಿಜಿ ಗುಟ್ಟುವ ಈ ಬೆಂಚುಗಳು ಬೆಳಗಿನ ಹೊತ್ತು, ಅದರಲ್ಲೂ ನವೆಂಬರ್-ಡಿಸೆಂಬರ್ ಸಮಯದಲ್ಲಿ ಅಕ್ಕ ಪಕ್ಕದ ಮರಗಳು ಉದುರಿಸಿದ ದಪ್ಪ ಕಾರ್ಪೆಟ್ಟಿನಂತಹ ತೆಳುಗುಲಾಬಿ ಹೂಗಳನ್ನು ಹೊದ್ದು ಮಲಗಿರುವುದನ್ನು ಕಂಡರೆ ಇಡೀ ಮನೆಯನ್ನು ಅಲ್ಲೋಲ ಕಲ್ಲೋಲ ಮಾಡುವ ಮಗುವೊಂದು ಸ್ನಾನ ಮಾಡಿ, ರಗ್ಗು ಹೊದ್ದು, ದೇವರಂತೆ ಮಲಗಿದ ಹಾಗೆ. ಸಂಜೆ ಆಯಿತೆಂದರೆ ಇಲ್ಲಿ ಬಿಚ್ಚಿಕೊಳ್ಳುವ ಜಗತ್ತೇ ಬೇರೆ. ಮನೆಯಲ್ಲಿ ಕೂತು ಬೇಜಾರಾದ ನಿವೃತ್ತರು ಬಂದು ಕೂತು ಮಾತಿಗೆ ತೊಡಗುತ್ತಾರೆ, ಅಲ್ಲೇ ಯಾರೋ ಹುಡುಗ ಇನ್ನೂ ಬರದ ತನ್ನ ಹುಡುಗಿಗಾಗಿ ಕಾಯುತ್ತಿರುತ್ತಾನೆ, ಪಕ್ಕದಲ್ಲಿ ಹುಡುಗಿ ಮುನಿಸಿಕೊಂಡಿದ್ದರೆ ಅವನ್ಯಾರೋ ಇನ್ನಿಲ್ಲದ ತಾಳ್ಮೆಯಿಂದ ಸಮಾಧಾನ ಮಾಡುತ್ತಿರುತ್ತಾನೆ, ಹೊಸದಾಗಿ ಮದುವೆ ಆಗಿರುವವರು ಕೈ ತುಂಬಾ ಬಳ ತೊಟ್ಟು, ಜನಗಳ ನುಗ್ಗಾಟಕ್ಕೆ ಸಿಗದ ಹಾಗೆ ಎನ್ನುವಂತೆ ಗಂಡನಿಗೆ ಅಂಟಿಕೊಂಡು, ಸಣ್ಣದಾಗಿ ನಗುತ್ತಾ ನಡೆಯುತ್ತಿರುತ್ತಾರೆ, ಮತ್ಯಾವುದೋ ಅಪ್ಪ, ಏನೋ ಬೇಕು ಎಂದು ಹಠ ಮಾಡುವ ಮಗನನ್ನು ದರ ದರ ಎಂದು ಎಳೆದುಕೊಂಡು ಹೋಗುತ್ತಾ, ಒಗ್ಗರಣೆ ಹಾಕಿದಂತೆ ಹೆಂಡತಿಯನ್ನು ಬೈಯುತ್ತಿರುತ್ತಾನೆ. ಮತ್ತೊಬ್ಬ ಹುಡುಗಿ ಪರ್ಸಿನಲಿ ಒತ್ತಿಟ್ಟ ನೋಟುಗಳನ್ನು ಕಣ್ಣಲ್ಲೇ ಎಣಿಸುತ್ತಾ, ಹರಡಿರುವ ಚಪ್ಪಲಿ ವ್ಯಾಪಾರ ಮಾಡುತ್ತಾ, ಎದುರಿನ ಗಾಜಿನಂಗಡಿಯ ಆಚೆಗಿನ ಮಕಮಲ್ಲಿನಂತಹ ಚಪ್ಪಲಿಗಳನ್ನು ನೋಡಿ ಸಣ್ಣದಾಗಿ ನಿಟ್ಟುಸಿರಿಡುತ್ತಿರುತ್ತಾಳೆ, ಇಲ್ಲಿರುವವರಿಗೆ ಇಲ್ಲಿನ ಅಪರಿಚತೆಯೇ ಒಂದು ಆವರಣ ನಿರ್ಮಿಸಿಕೊಟ್ಟಂತೆ, ಸಂತೆಯಲ್ಲೂ ಸಣ್ಣ ಸಣ್ಣ ಅಂಗಳಗಳು. ಖಾಲಿ ಮನೆಗೆ ವಾಪಸ್ಸಾಗಲು ಹಿಂಜರೆಯುವ ಹೆಜ್ಜೆಗಳಿಗೆ ಮನೆಗೆ ಹೋಗುವ ಮೊದಲೊಂದು ಬಿಸಿ ಬಿಸಿ ಕಾಫಿ ಕೊಡುವ ಅಡಿಗೆ ಮನೆ, ಖಾಲಿ ಮನೆಯ ನೀರವತೆಗೆ ಮೊದಲೊಂದು ನೆಮ್ಮದಿಯ ಕಲರವ. ಈ ಫೋರ್ತ್ ಬ್ಲಾಕ್ ನನಗೆ ಮಾತ್ರ ಹೀಗಿರಬಹುದು ಎಂದುಕೊಂಡಿದ್ದೆ, ’ಜಯನಗರ ಫೋರ್ತ್ ಬ್ಲಾಕ್’ ಎನ್ನುವ ಕಿರುಚಿತ್ರ ನೋಡುವವರೆಗೆ.
ಈಗಾಗಲೆ ಸಾಮಾಜಿಕ ತಾಣಗಳ ಮೂಲಕ ಎಲ್ಲರಿಗೂ ಆತ್ಮೀಯವಾಗಿರುವ ಚಿತ್ರ ಇದು. ಜಯನಗರ ಫೋರ್ತ್ ಬ್ಲಾಕ್ ನಲ್ಲಿ ಹಳ್ಳಿಗಳ ಅತಿ ಪರಿಚಯವೂ ಇಲ್ಲ, ಮೆಟ್ರೋಗಳ ಅಪರಿಚತೆಯೂ ಇಲ್ಲ. ಇಲ್ಲಿರುವುದು ಒಂದು ಬೆಚ್ಚನೆಯ ಸೆಲೆ. ಈ ಚಿತ್ರದಲ್ಲಿ ಒಬ್ಬ ಅಜ್ಜ ಇದ್ದಾನೆ, ಮಗ ಅಮೇರಿಕದಲ್ಲಿ, ಬೇಸರ ಕಳೆಯಲು ಫೋರ್ತ್ ಬ್ಲಾಕ್ ನ ಕಲ್ಲು ಬೆಂಚಿನಲ್ಲಿ ಕೂರುವ ಅಜ್ಜನಿಗೆ ಅಲ್ಲೊಂದು ಬೆಚ್ಚನೆಯ ಸ್ನೇಹ ಇದೆ. ಅದು ಹೂ ಮಾರುವ ಹುಡುಗಿ ರಾಣಿ. ಆಕೆ ಪುಟ್ಟ ಹುಡುಗಿಯಾಗಿದ್ದಾಗಿನಿಂದ ಅಜ್ಜ ವೆಂಕಿ ಅವಳನ್ನು ನೋಡಿದ್ದಾನೆ, ಈಗ ಸಂಜೆ ಕಾಂಪ್ಲೆಕ್ಸಿನಲ್ಲಿ ಹೂ ಮಾರಿ, ಬೆಳಗ್ಗೆ ಶಾಲೆಗೆ ಹೋಗುವ ಈ ರಾಣಿ ವೆಂಕಿಯ ಬೆಸ್ಟ್ ಫ್ರೆಂಡ್, ಅಲ್ಲೇ ಅಜ್ಜನಿಗೆ ತನ್ನ ವಯಸ್ಸಿನ ಗೆಳೆಯರೂ ಇದ್ದಾರೆ. ಆದರೂ ಅಜ್ಜನ ಬೆಸ್ಟ್ ಫ್ರೆಂಡ್ ಮಾತ್ರ ಈ ರಾಣಿಯೇ! ಅವಳು ಮಗ್ಗಿ ಸರಿಯಾಗಿ ಹೇಳಿದರೆ, ಟೆಸ್ಟಿನಲ್ಲಿ ಮಾರ್ಕ್ ಸರಿಯಾಗಿ ತೆಗೆದರೆ, ರಾಣಿ ಹತ್ತಿರ ಅಜ್ಜ ಹೂ ತಗೋಬೇಕು ಮತ್ತು ತನ್ನ ಮೊಬೈಲ್ ನಲ್ಲಿ ಆಕೆಗೆ ಒಂದು ಆಟ ಆಡಲು ಬಿಡಬೇಕು. ಇದು ಅವರಿಬ್ಬರ ನಡುವಿನ ಒಪ್ಪಂದ.

ಅದೇ ಫೋರ್ತ್ ಬ್ಲಾಕಿಗೆ ಇನ್ನೊಬ್ಬ ಬರುತ್ತಾನೆ. ಸಿನಿಮಾದಲ್ಲಿ ಹೀರೋ ಆಗುವ ಕನಸು ಹೊತ್ತು ಬಂದ ಹುಡುಗ. ಕನಸು ಕೈಗೂಡುತ್ತಿಲ್ಲ, ಕೈಲಿದ್ದ ಕಾಸು ಮುಗಿಯುತ್ತಾ ಬಂದಿದೆ, ತಾನು ಆಸೆ ಪಟ್ಟಿದ್ದು ನಡೆಯುತ್ತದಾ ಎನ್ನುವ ಸಂದೇಹ, ಅಭದ್ರತೆ. ಅದಕ್ಕಿಂತ ಹೆಚ್ಚಾಗಿ ಅವನ ಮನದಲ್ಲಿ ’ಎಷ್ಟೊಂದ್ ಜನ ಇಲ್ಲಿ ಯಾರು ನಮ್ಮೋರು…’ ಎನ್ನುವ ನಿರಂತರ ಹುಡುಕಾಟ. ಒಂಟಿತನದ ತೊಳಲಾಟದಲ್ಲಿ ಕೈಗೆ ಸಿಕ್ಕಿದ ಒಂದು ಎಳೆ ಭರವಸೆಯನ್ನು ಅವನು ಹೇಗೆ ತನ್ನದಾಗಿ ಬಾಚಿಕೊಳ್ಳುತ್ತಾನೆ ಎನ್ನುವುದನ್ನು ನಿರ್ದೇಶಕ ಸತ್ಯ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಇವನು ಕೂತಿರುವಲ್ಲಿಗೆ ಬಂದ ಮಂಗಳಮುಖಿ ಒಬ್ಬಳು, ದುಡ್ಡಿಗಾಗಿ ಪೀಡಿಸಿದಾಗ, ಅವನು ಆಕೆಯ ಕಾಟ ತಡೆಯಲಾಗದೆ ತನ್ನಲ್ಲಿದ್ದ ಕಡೆಯ ಹದಿನೈದು ರೂಗಳನ್ನು ಸಿಡುಕುತ್ತಾ ಕೊಡುತ್ತಾನೆ. ಆಕೆ ಅದನ್ನು ಹಣೆಗೆ ಮುಟ್ಟಿಸಿ, ಹಲ್ಲಿನಿಂಡ ಕಚ್ಚಿ, ಒಳ್ಳೆಯದಾಗಲಿ ಎಂದು ಇವನಿಗೇ ವಾಪಸ್ಸು ಕೊಟ್ಟು, ’ಹೀರೋ’ ಎಂದು ಕರೆಯುತ್ತಾಳೆ. ಹತಾಶೆಯಲ್ಲಿ ಮುಳುಗುತ್ತಿದ್ದ ಇವನಿಗೆ ಅದೇ ಆಸರೆ, ಮುಂದೆ ಸಾಗುತ್ತಿದ್ದವಳ ಕೈಯನ್ನು ಪಟ್ಟನೆ ಹಿಡಿದುಕೊಳ್ಳುತ್ತಾನೆ, ಒಂದು ಕ್ಷಣ ಆಕೆಗೂ ಗಲಿಬಿಲಿ, ನಿಂತು ಹಿಂದಿರುಗಿ ನೋಡಿದವಳನ್ನು ಇವನು ಕೇಳುವುದು ಒಂದೇ ಪ್ರಶ್ನೆ ’ನಿಜವಾಗ್ಲೂ ಹೀರೋ ಥರಾ ಕಾಣ್ತೀನ?’ ಆ ಒಂದು ಘಳಿಗೆಯಲ್ಲಿ ಇವನಿಗೆ ಅವಳೊಬ್ಬಳ ಆ ಅನುಮೋದನೆಯ ಮೇಲೆಯೇ ಅವನ ಇಡೀ ಜಗತ್ತು ನಿಂತಿರುತ್ತದೆ.
ಅಂತಹುದೇ ಇನ್ನೊಂದು ಸಂದರ್ಭ : ವೆಂಕಿ ಮತ್ತು ರಾಣಿಯ ಪ್ರಪಂಚಕ್ಕೆ ಇವ ಈಗ ತಾನೆ ಅಡಿ ಇಟ್ಟಿದ್ದಾನೆ. ರಾಣಿ ಮಗ್ಗಿ ಹೇಳಲು ತಡವರಿಸಿದಾಗ ಹೇಳಿಕೊಡುತ್ತಾನೆ, ಸೋಲಲು ಒಪ್ಪದ ರಾಣಿ ಹೊರಟುಹೋಗಿಬಿಡುತ್ತಾಳೆ. ಅದುವರೆಗೂ ಏನೂ ಅಲ್ಲದ ವೆಂಕಿ ಎದುರು, ಅದುವರೆಗೂ ಯಾರೂ ಇಲ್ಲದ ಈ ಹುಡುಗ ತನ್ನ ಕಥೆ ಹೇಳತೊಡಗುತ್ತಾನೆ. ಸೋತಿದ್ದೇನೆ, ಊರಿಗೆ ವಾಪಸ್ಸು ಹೋಗಿ ಬಿಡುತ್ತೇನೆ ಎಂದು ಹತಾಶನಾದವನ ಮುಂದೆ ಮತ್ತೆ ಬಂದ ರಾಣಿ, ಪಟ ಪಟನೆ ಹದಿನೈದರ ಮಗ್ಗಿ ಹೇಳಿ ಆಟದಲ್ಲಿ ಸೋಲಬಾರದು ಎನ್ನುವ ಛಲ ಇವನಲ್ಲಿ ಹುಟ್ಟಿಸುತ್ತಾಳೆ. ಕೈಯಲ್ಲಿ ಒಂದು ಪೈಸೆ ಇಲ್ಲದ ಈ ಹುಡುಗ ಅಜ್ಜನಲ್ಲಿ ನೂರು ರೂ ಸಾಲ ಕೇಳುತ್ತಾನೆ, ಮೊದಲು ನಗುವ ಆ ಅಜ್ಜ, ಒಮ್ಮೆ ಇವನನ್ನು ನಿಟ್ಟಿಸಿ ನೋಡಿ, ನೂರರ ನೋಟು ಕೈಗಿಡುತ್ತಾನೆ. ಆ ಕ್ಷಣದಲ್ಲಿ ಈ ಹುಡುಗನಿಗೆ ಫೋರ್ತ್ ಬ್ಲಾಕಿನಲ್ಲಿ ಮನೆ ಒಂದು ಸಿಕ್ಕಿಬಿಡುತ್ತದೆ. ಹುಡುಗ ಇಲ್ಲೇ ನಿಲ್ಲುತ್ತಾನೆ, ಗೆಲ್ಲುತ್ತಾನೆ. ಯಾವ ಆಧಾರವೂ ಇಲ್ಲದೆ ಭೂಮಿ ತಿರುಗುವುದು ಇಂತಹ ನಂಬಿಕೆಯ ಮೇಲೆಯೇ ಎನ್ನುವ ಇವನ ಜಗತ್ತೂ ಸಹ ಅಜ್ಜನ ನಂಬಿಕೆಯ ಮೇಲೆ ತಿರುಗತೊಡಗುತ್ತದೆ. ರಾಣಿ, ವೆಂಕಿ ಮತ್ತು ಈ ಹುಡುಗ ಮೂವರ ಜಗತ್ತೂ ಪರಸ್ಪರ ನಂಬಿಕೆಯ ಮೇಲೆ ಸುತ್ತತೊಡಗುತ್ತದೆ.
ಈ ಚಿತ್ರ ನೋಡಿ ಸುಮಾರು ತಿಂಗಳುಗಳೇ ಆಗಿರಬಹುದು, ಆದರೂ ಆ ಚಿತ್ರ ನಮ್ಮೊಳಗೆ ಹುಟ್ಟಿಸುವ ಮಾನವೀಯ ಸಂಬಂಧಗಳ ಬಗೆಗಿನ ವಿಶ್ವಾಸವನ್ನು ಮರೆಯಲೇ ಆಗಿಲ್ಲ. ಬದುಕಿನ ಒಂದು ಹಂತ ದಾಟಿದ ಮೇಲೆ, ಇಲ್ಲ ಇನ್ನು ನಮ್ಮಿಂದ ಹೊಸ ಸ್ನೇಹ ಸಾಧ್ಯವಿಲ್ಲ, ಹೊಸ ಸಂಬಂಧ ಸಾಧ್ಯವಿಲ್ಲ ಎಂದು ನಮಗೆ ನಾವೇ ತೀರ್ಮಾನಿಸಿ ಮನಸ್ಸಿನ ಕದಗಳನ್ನು ಮುಚ್ಚಿ, ಒಳಗಿನಿಂದ ಚಿಲಕ ಹಾಕಿಕೊಂಡು ಬಿಟ್ಟಿರುತ್ತೇವೆ. ಆದರೆ ಹಾಗೆ ಮುಚ್ಚಿದ ಬಾಗಿಲ ಆಚೆಯಿಂದಲೂ ಸ್ನೇಹ ಸಂಬಂಧಗಳು ಕೈ ಚಾಚಿ ಬಿಡುತ್ತವೆ. ಆ ಚಿತ್ರದ ನಾಯಕ ಹೇಳುವ ಹಾಗೆ, ’ಅಪರಿಚಿತರನ್ನು ಮಾತನಾಡಿಸಬಾರದು ಎಂದು ಸುಮ್ಮನಾಗಿ ಬಿಡಬೇಡಿ, ಮಾತನಾಡಿಸಿ, ನಿಮಗೂ ಒಂದು ಸ್ನೇಹ ಸಿಕ್ಕೇ ಬಿಡಬಹುದು’.
 

‍ಲೇಖಕರು G

August 22, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. ಲಕ್ಷ್ಮೀಕಾಂತ ಇಟ್ನಾಳ

    ‘ಅಪರಿಚಿತರನ್ನು ಮಾತನಾಡಿಸಬಾರದು ಎಂದು ಸುಮ್ಮನಾಗಿ ಬಿಡಬೇಡಿ, ಮಾತನಾಡಿಸಿ, ನಿಮಗೂ ಒಂದು ಸ್ನೇಹ ಸಿಕ್ಕೇ ಬಿಡಬಹುದು’. ಹೌದು ಈ ರೀತಿ ಬಹಳ ಕಳೆದುಕೊಂಡಿದ್ದೇನೆ. ಆ ಐಸ್ ಬ್ರೇಕ್ಕೆ ಆಗುವುದಿಲ್ಲ ಎಷ್ಟೋ ಸಾರಿ. …, ಮೊನ್ನೆ ಧಾರವಾಡದಲ್ಲಿ ಸಾಹಿತ್ಯ ಪರಿಷತ್ ನ ಶತಮಾನೋತ್ಸವ ಸಮಾರಂಭದಲ್ಲಿ ನಾಡಿನ ಬಹುತೇಕ ಸಾಹಿತಿಗಳು, ಬರಹಗಾರರು, ಫೇ.ಬು ಗೆಳೆಯರು ಬಂದಿದ್ದರು ಅವರ ಹತ್ತಿರ ಹೋಗಿ ನಾನು ನಾನೇರೀ, ಎಂದು ಪರಿಚಯಿಸಿಕೊಳ್ಳಲಾಗಲೇ ಇಲ್ಲ! ಅದೆಷ್ಟು ಹಿಡಿದು ಜಗ್ಗಿತೆಂದೆರೆ, ಐಸ್ ಬ್ರೇಕ್ ಆಗಲೇ ಇಲ್ಲ!…..ಸಂಧ್ಯಾ ಜಿ. . ಎಂದಿನಂತೆ ಜಯನಗರ ಫೋರ್ಥ ಬ್ಲಾಕ್ ತಿರುಗಾಟ ತುಂಬ ಚನ್ನಾಗಿತ್ತು, ಸ್ವತ: ನೋಡಿ ಅನುಭವಿಸಿದಂತಾಯ್ತು. ಅದನ್ನು ಈಗಾಗಲೇ ನೋಡಿದವರಿಗೆ, ಇದ್ದವರಿಗಂತೂ ಇದು ಅದೆಷ್ಟು ಆನಂದವನ್ನು ಕೊಡುತ್ತದದೆಂದರೆ……

    ಪ್ರತಿಕ್ರಿಯೆ
  2. malini guruprasanna

    nanagoo ashte. 4th block complex pakkadalle iruva nanna anubhavagaloo ditto ditto. adaroo pakkadalle iruvudarindale naanu adadnnu sampoornavaagi enjoy maaduttillaveno emba gumaani ommomme huttuttade. Monne ondu function nalli Bharathi BV sikkiddaru. Aparichitalemba bhavaneye baradante matanaadidavara dhvaniyalli adeshtu preeti …..snehakke vayasseke manassirabekashte.

    ಪ್ರತಿಕ್ರಿಯೆ
  3. ಅಪರ್ಣ ರಾವ್

    poonam theater aagidda kaala..teenage saahasadalli ondaagidda.maneyalli helade kelade film ge karesikonda kaala..masaala dose jaamoonu adu pavitraa hotelnalle tinnabekandukoLLuva kaala..4o rs ge colour colour chappali banda kaala..hege mareyodu? namma avibaajya angave aagidda 4th block innoo aaptavenisuva haage barediddeera Sandya. 🙂 film bagge hechchu gottilla.. eega 4th block badalaagtide.. beledu doora aagtide annisutte.

    ಪ್ರತಿಕ್ರಿಯೆ
  4. suvarna

    Forth blacknalli ondu suthhuhakidanthe basavayithu aprichithrannu parichitharannagi madikolluvudu nanna haabi

    ಪ್ರತಿಕ್ರಿಯೆ
  5. sangeetha raviraj

    Nanu B.ed odiddu BES college 4th blocknallide. . Thumba manasige hidisithu baraha

    ಪ್ರತಿಕ್ರಿಯೆ
  6. Geetha B U

    4th block suthi banda anubhava..aithu….venki, raani aa hero…namma badukina abivaajya anga….aaptha baraha sandhya….

    ಪ್ರತಿಕ್ರಿಯೆ
  7. Anil Talikoti

    ಓಹ್, ‘ಯಾವ ಆಧಾರವೂ ಇಲ್ಲದೆ ಭೂಮಿ ತಿರುಗುವುದು ಇಂತಹ ನಂಬಿಕೆಯ ಮೇಲೆಯೇ’ ಎಷ್ಟೊಂದು ಆಪ್ತವಾದ ಬರಹ. ಚಿಲಕ ತೆಗೆಯುತ್ತಲೆ ಇರುವದರಲ್ಲಿ ಜೀವನದ ಚಿನ್ಮಯತೆ ಇದೆ ಎಂಬ ಸುಂದರ ಸತ್ಯ. ಅಂದ ಹಾಗೆ ಇ ಕಿರುಚಿತ್ರ ಎಲ್ಲಿ ನೋಡಬಹುದು ತಿಳಿಸಬಹುದೆ? ಧನ್ಯವಾದಗಳು.
    ~ಅನಿಲ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: