ಸಂಧ್ಯಾರಾಣಿ ಕಾಲಂ : ಮತ್ತೆ ಮಳೆ ಹೊಯ್ಯುತಿದೆ…


’ಮತ್ತೆ ಮಳೆ ಹೊಯ್ಯುತಿದೆ
ಎಲ್ಲ ನೆನಪಾಗುತಿದೆ.’
ಕೆ ಸದಾಶಿವರ ಒಂದು ಕಥೆ, ಅವರ ಸುಮಾರು ಕಥೆಗಳ ಹಾಗೆ ಮಾತುಗಳನ್ನೆಲ್ಲಾ ಗೋಡೆಯಾಗಿಸಿ, ಬಾಗಿಲು ಮುಚ್ಚಿ, ಬೀಗ ಹಾಕಿ, ಬೀಗದ ಕೈ ಕಿಟಕಿಯೊಳಗಿಂದ ಮನೆಗೆ ಎಸೆದು ಬಾಗಿಲ ಬಳಿ ಕಾದು ಕುಳಿತಂತ ಏಕಾಂತದ ಭಾಷೆ.. ’ಅನುಭವದ ಸುಳಿಯಲ್ಲಿ ಸಿಕ್ಕಾಗ ವಿವೇಕವಿರುವುದಿಲ್ಲ, ವಿವೇಕ ಪಡೆಯುವ ಹೊತ್ತಿಗೆ ಅನುಭವಿಸುವ ಶಕ್ತಿಯನ್ನೇ ಕಳೆದುಕೊಳ್ಳುತ್ತೇವೆಯೋ ಏನೋ ಅಲ್ಲವೆ’ ಎಂದು ತನ್ನ ಇಳಿವಯಸ್ಸಿನಲ್ಲಿ ಕೊರಗುವ ಪ್ರೊಫೆಸರ್ ನೆನಪಾದರು. ಮತ್ತೊಮ್ಮೆ ಓದಲೆಂದು ಅವರ ಪುಸ್ತಕ ಹುಡುಕಿ ತೆಗೆದಿಟ್ಟುಕೊಂಡೆ. ಯಾಕೋ ಬಿಟ್ಟೂ ಬಿಡದಂತೆ ಈ ಮಳೆ ಸುರಿಯುತಿರುವಾಗ ದೇಹ ತಂಪಾದರೂ ಮನಸ್ಸಿನಲ್ಲಿ ನಿಲ್ಲದ ತಳಮಳ …
’ಯಾಕೋ ಇನ್ನಿಲ್ಲದ ಡಿಪ್ರೆಷನ್’ ಅಂದ ಸ್ನೇಹಿತನಿಗೆ, ’ಅಯ್ಯೋ ಮಾರಾಯ ಇಲ್ಲೂ ಅದೇ ರಾಗ, ಅದೇ ಹಾಡು’ ಅಂತ ಹೇಳಿದ್ದೆ. ಆಫೀಸಿನಲ್ಲಿ ನೆಲ ಒರೆಸುತ್ತಿದ್ದ ಹೆಣ್ಣು ತಲೆ ಎತ್ತಿ, ’ತಂಪಾಗಿದ್ದು ಒಳ್ಳೇದೆ ಮೇಡಮ್ಮೋರೆ, ಆದರೆ ಹಿಂಗೆ ಇದ್ದಕ್ಕಿದ್ದಂತೆ ಮಳೆ ಬಂದ್ರೆ ಬೇಜಾರು ಅಲ್ಲವ್ರಾ’ ಅಂದಾಗ ’ಹೌದವ್ವ’ ಅಂತ ತಲೆ ಆಡಿಸಿದ್ದೆ.
ನೀರೆಂದರೆ, ನದಿಯೆಂದರೆ, ಕಡಲೆಂದರೆ, ಮಳೆಯೆಂದರೆ ಹಾರಿ ಕುಣಿವ ಮನಸ್ಸಿಗೆ ಯಾಕೋ ಮೋಡ ಕವಿದ ವಾತಾವರಣ. ಬಿಸಿಲಿಗೆ ಬಸವಳಿದು ಬೆಂಡಾಗಿದ್ದ ಇಳೆಗೆ ಮಳೆ ತಂಪನ್ನೇನೋ ತಂದಿತು. ಆದರೆ ಈ ಮೋಡಗಳು ಯಾಕೋ ಮುಗಿಯದ ದುಗುಡವನ್ನು ಸುರಿಸಿ ಹೋದ ಹಾಗೆ ಭಾಸವಾಗುತ್ತಿದೆ. ಕಾರಣವೇ ಇಲ್ಲದೆ ಮನಸ್ಸು ರೆಕ್ಕೆ ಮುಚ್ಚಿ, ಮುದುರಿ ಕೂತಂತೆ. ಇಡೀ ಊರೆಂಬ ಊರಿಗೆ ಯಾರೋ ಉದಾಸೀನತೆಯ ಕಂಬಳಿ ಹೊದಿಸಿದ ಹಾಗೆ…
ಮಳೆ ಎಂದರೆ ಬಿಡುಗಡೆ, ಮಳೆ ಎಂದರೆ ಮುಕ್ತಿ, ಮಳೆ ಎಂದರೆ ನಿರಾಳ, ಮಳೆ ಎಂದರೆ ಹೊಸ ಹುಟ್ಟು, ಮಳೆ ಎಂದರೆ ಹೊಸ ಸಾಧ್ಯತೆ. ಇಲ್ಲ ಇಲ್ಲಿ ನಾನು ಭೂಮಿಗೆ ಮಳೆ ಏನು ಎಂದು ಹೇಳುತ್ತಿಲ್ಲ, ಆಕಾಶಕ್ಕೆ ಮಳೆ ಏನು ಎಂದು ಹೇಳುತ್ತಿದ್ದೇನೆ.
ಭೂಮಿಗೆ ಮಳೆ ತಂಪು, ಭೂಮಿಗೆ ಮಳೆ ಅಪ್ಪುಗೆ, ಭೂಮಿಗೆ ಮಳೆ ಆಹಾರ, ಭೂಮಿಗೆ ಮಳೆ ಅಗತ್ಯ, ಭೂಮಿಗೆ ಮಳೆ ಜೀವನಾಡಿ. ಆದರೆ ಆಕಾಶಕ್ಕೆ? ಆಕಾಶಕ್ಕೆ ಮಳೆ ಎಂದರೆ ಒಂದು ಬಿಡುಗಡೆ, ಧೀರ್ಘ ಕಾಲದ ಕಾಯುವಿಕೆಯಿಂದ ಮುಕ್ತಿ, ಮೂಕ ಸಂಕಟದ ನಾಲಿಗೆಯ ಸ್ವರ, ಗಂಟೆಯ ಕೊರಳ ಹಾಡು. ಒಂದೊಂದೆ, ಒಂದೊಂದೆ ನೋವಿನ ರಾಗಗಳನ್ನು, ಚುಚ್ಚುವ ನುಡಿಗಳನ್ನು, ಹೊಸ ಹೊಸ ವಂಚನೆಗಳನ್ನು, ಹೊಸ ಹೊಸ ಸುಳ್ಳುಗಳನ್ನು ಭರಿಸಿ, ಭಾರ ಹೊತ್ತು, ಆಡಲಾಗದ ಮಾತು ಉಬ್ಬಸವಾಗಿ, ಗಂಟಲಲ್ಲೇ ಅಡಗಿದ್ದು ಗುಡು ಗುಡು ದನಿಯಾಗಿ, ಕಂಪನವಾಗಿ, ಇದ್ದ ಜಾಗದಲ್ಲೇ ಅಲ್ಲೋಲ ಕಲ್ಲೋಲವಾದ ಮನಸ್ಸು ದನಿ ತೆಗೆದು ಭೋರ್ಗರೆದಂತೆ ಆಗಸಕ್ಕೆ ಮಳೆ ಒಂದು ಬಿಡುಗಡೆ. ಮನದಣಿಯೆ ಅತ್ತು, ಕಣ್ಣೊರೆಸಿಕೊಂಡು, ಮುಖ ತೊಳೆದುಕೊಂಡಾಗ ಕಣ್ಣು ಉರಿಯುತ್ತಿದ್ದರೂ ಮುಖ ಕೆನ್ನೆ ತಂಪಾದ, ಮೃದುವಾದ ಆರ್ದ್ರತೆ.
ನೀನು ಮುಗಿಲು, ನಾನು ನೆಲ
ನಿನ್ನ ಒಲವೆ ನನ್ನ ಬಲ
….
ನಾನು ಎಳೆವೆ, ನೀನು ಮಣಿವೆ
ನಾನು ಕರೆವೆ, ನೀನು ಸುರಿವೆ
ನಾನಚಲದ ತುಟಿ ಎತ್ತುವೆ
ನೀ ಮಳೆಯೊಲು ಮುತ್ತನಿಡುವೆ..
ಎನ್ನುವ ಕವನ ಆಕಾಶವನ್ನು ಗಂಡಾಗಿಸಿ, ಭೂಮಿಯನ್ನು ಹೆಣ್ಣಾಗಿಸಿ ಬಣ್ಣಿಸುತ್ತದೆ. ಆದರೆ ಯಾಕೋ ತಕರಾರು ತೆಗೀಬೇಕು ಅನ್ನಿಸುತ್ತಿದೆ. ಹೆಣ್ಣಿನೆದೆಯಲ್ಲಿ ಒಂದು ಬಾನು, ಗಂಡಿನ ಮನದಲ್ಲಿ ಒಂದು ಭೂಮಿ ಇರಬಾರದ್ಯಾಕೆ? ಒಮ್ಮೊಮ್ಮೆ ಅದಮ್ಯ ಕಾತರತೆಯ ಮೌನ ನಿರೀಕ್ಷೆ ಗಂಡಿನಲ್ಲಿ, ತೀವ್ರವಾಗಿ ಬಸಿದು ಪ್ರೇಮಿಸುವ ಪ್ರೀತಿ ಹೆಣ್ಣಲ್ಲಿ ಇರುವಂತೆ, ಗಂಡಿನ ಕಣ್ಣಲ್ಲಿ ಒಂದು ಹನಿ ಕಣ್ಣೀರು, ಹೆಣ್ಣಿನ ಕೊರಳಲ್ಲಿ ಒಂದು ದ್ರವಿಸದ ಬಿಕ್ಕಳಿಕೆ ಇರಬಾರದು ಯಾಕೆ? ಯಾಕೆ ಹೆಣ್ಣಿನೆದೆಯಲ್ಲೂ ಬಾನು ಭೋರ್ಗರೆದು ದನಿ ಎತ್ತಬಾರದು? ಭೂಮಿ ಆಕಾಶ ಎರಡೂ ಆ ಮಟ್ಟಿಗೆ ಹೆಣ್ಣಾಗಲೀ ಗಂಡಾಗಲಿ ಅಲ್ಲ, ಅದು ಕೇವಲ ಆ ಕ್ಷಣದ ರಿಲೆಟಿವ್ ಭಾವ ಅಲ್ಲವಾ? ಇರಬಹುದೆ ಬಾನಿನಲ್ಲಿ ಒಂದು ಹೆಣ್ಣು, ಭೂಮಿಯಲ್ಲಿ ಒಂದು ಗಂಡು? ಖಾಲಿ ಕೂತ ಮನಸ್ಸಿಗೆ ಬರೀ ಇಂತಹದೇ ಯೋಚನೆಗಳು.
ಮಳೆ ಬಿಡುಗಡೆ ಆದರೆ ಮೋಡ ದುಗುಡ, ’ಮೇಘ ಛಾಯೆ ಆಧೀ ರಾತ್, ಬೈರನ್ ಬನ್ ಗಯೆ ನಿಂದಿಯಾ, ಬತಾದೆ ಮೆ ಕ್ಯಾ ಕರು?’ – ಅರ್ಧ ರಾತ್ರಿಯಲ್ಲಿ ಮೋಡ ಮುಸುಕಿ ದಂಡೆತ್ತಿ ಬಂದ ಬಾನು, ನಿದ್ರೆ ನನ್ನ ವಿರುದ್ಧ ಸೆಡ್ಡುಹೊಡೆದು ನಿಂತು ನನ್ನ ಶತೃವಾಗಿ ಬಿಟ್ಟಿದೆ. ಹೇಳು ನಾನೇನು ಮಾಡಲಿ?

ಆಷಾಡ ಮಾಸದ ಆಗಸದಲ್ಲಿ ಅಲೆವ ಹನಿಯದ ಬರಡು ಮೋಡವನ್ನು ಕುರಿತು ಹಾಡುತ್ತಾ, ನನ್ನವಳಿಗೆ ಈ ಮೇಘಸಂದೇಶ ತಲುಪಿಸು ಎಂದು ಗೋಗರೆಯುವ ತೆಲುಗು ಹಾಡೊಂದು ನೆನಪಾಯ್ತು.
ಅಕಾಸ ದೇಸಾನ, ಆಶಾಡ ಮಾಸಾನ
ಮೆರಿಸೇಟಿ ಓ ಮೇಘಮ,
ವಿರಹಮೊ, ದಾಹಮೊ, ವಿಡಲೇನಿ ಮೋಹಮೋ..
ವಿನಿಪಿಂಚು ನಾ ಚೆಲಿಕಿ ಮೇಘಸಂದೇಶಂ..
’ಆಕಾಶದ ದೇಶದಲ್ಲಿ, ಈ ಆಷಾಡ ಮಾಸದಲ್ಲಿ ಸುಮ್ಮನೆ ಹುಸಿ ಮಾತುಗಳ ಜೊತೆ ಓಡಾಡುತ್ತಿರುವ ಮೋಡವೆ, ವಿರಹವೋ, ದಾಹವೋ, ಬಿಡಲಾಗದ ಮೋಹವೋ ಹೇಳಲಾಗದ ಈ ಯಾತನೆಯಲ್ಲಿ ನರಳುತ್ತಿದ್ದೆನೆ, ಹೋಗು ನನ್ನ ಪ್ರಿಯೆಗೆ ಹೇಳು ಇದನ್ನ’ ಎಂದು ದನಿ ತೆಗೆದು ಹಾಡಿದ ಯಕ್ಷನ ನೋವನ್ನೆಲ್ಲಾ ತುಂಬಿಕೊಂಡ ಮೇಘ ಆಗಿಂದ ಈವರೆಗೂ ಆ ನೋವಿನಿಂದ ಮುಕ್ತಿ ಪಡೆದೇ ಇಲ್ಲವೇನೋ, ವರ್ಷ ವರ್ಷ ಕಣ್ಣೀರು ಹರಿಸಿಯೂ.
ಈಗ ತಾನೆ ಓದಿದ ಲೀಲಾ ಅಪ್ಪಾಜಿಯವರ
’ಮಳೆಗೆ ಇದೆ ನಿಲುಗಡೆ
ಕಣ್ಣಿಗಿದೆಯೆ ನಿಲುಗಡೆ’
ಎನ್ನುವ ಸಾಲು ಕೂಡ ಅದನ್ನೇ ಹೇಳುತ್ತಿದೆ ಅನ್ನಿಸಿಬಿಟ್ಟಿತು.
ಹೌದು ಮಳೆ ಇಳೆಯನ್ನು ತಾಕಿದರೆ ’ನಾನಚಲದ ತುಟಿ ಎತ್ತುವೆ, ನೀ ಮಳೆಯೊಲು ಮುತ್ತನಿಡುವೆ’, ಅದೇ ಮಳೆ ತೊಯ್ದಾಡುವ, ತಹತಹಿಸುವ ಕಡಲಿಗೆ ಸುರಿದರೆ…?
ಒಂದು ದುಗುಡ ಇನ್ನೊಂದು ಮಡಿಲನ್ನು, ಒಂದು ಕಂಬನಿ ಇನ್ನೊಂದು ಹೆಗಲನ್ನು ಸೇರಿದರೆ ನೆಮ್ಮದಿ, ಸಮಾಧಾನ. ಒಂದು ದುಗುಡ ಇನ್ನೊಂದು ದುಗುಡವನ್ನಪ್ಪಿಕೊಂಡರೆ, ಒಂದು ನೊಂದ ಹೃದಯ ಇನ್ನೊಂದು ನೊಂದ ಹೃದಯವನ್ನು ನೋಯಿಸಿದರೆ, ಒಂದು ಕಳವಳ, ಇನ್ನೊಂದು ಕಳವಳವನ್ನು ಅಪ್ಪಿಕೊಂಡರೆ ಆಗ…? ಜ್ವಾಲಾಮುಖಿ ಬೆಂಕಿಯನ್ನೇ ಸುರಿಸಬೇಕಿಲ್ಲ, ಮಳೆಯನ್ನೂ ಎರೆಯಬಹುದು.
ಯಾವುದೋ ವಸಂತ ರಾತ್ರಿಯಲಿ
ಹೊಳೆದ ತಾರೆ ನೆನಪಾಗುತಿದೆ
ಮಸುಕು ನೆನಪುಗಳ ಮಳೆಯಲ್ಲಿ
ಮನಸು ಒಂದೇ ಸಮ ತೋಯುತಿದೆ…
ಅಂತಹ ಸಂದರ್ಭದಲ್ಲೇ ಯಾಕೋ ಒಂದು ಅಪರಿಚತತೆಯನ್ನು ಹುಡುಕಿ ಹೋಗಿ ಬಿಡೋಣ ಅನ್ನಿಸುತ್ತೆ. ಹೆಸರು ಹಿಡಿದು ಕೂಗದ, ಕಣ್ಣಿಗೆ ಕಣ್ಣು ಬೆರೆಸದ, ಮುಖ ನೋಡಿ ಕೈ ಬೀಸದ, ಪ್ರೀತಿಸುವವರಿರಲಿ, ಪರಿಚಿತರೂ ಇಲ್ಲದ ಅನಾಮಿಕ ಬದುಕೊಂದು ಸಿಕ್ಕರೆ ಹೆಕ್ಕಿಕೊಂಡು ಬರಬೇಕು. ’ಚಲೋ ಇಕ್ ಬಾರ್ ಫಿರ್ ಸೆ ಅಜ್ನಭಿ ಬನ್ ಜಾಯೆ ಹಮ್ ದೋನೋ’ ಎಂದು ಜಗತ್ತಿಗೇ ಹೇಳಿಬಿಡಬೇಕು ಎನ್ನುವ ಹುಚ್ಚು ಯೋಚನೆ.
’ಮ್ಯಾಲೆ ಕವ್ಕೊಂಡ ಮುಂಗಾರು ಮೋಡ’ …. ಮೂಡಿ ಬರ್ಬೋದ ಚಂದ್ರಾಮ ನೋಡ..
ಮಳೆ ಬರಲಿ, ಜೊತೆಗೆ ಆಗಾಗ ಸೂರ್ಯನೂ ಇಣುಕಲಿ. ಮೌನದ ನಡುವೆ, ಸಿಡಿಮಿಡಿಯ ನಡುವೆ ಒಂದು ಬೆಚ್ಚನೆಯ ಸ್ಪರ್ಶ ಬಿಸುಪು ತುಂಬುವಂತೆ..
ಕಾಡು ಕಡಲು ಬಾನು
ಏನಿದ್ದೂ ಏನು,
ಮೈಯೆಲ್ಲಿದೆ ಇಡಿ ಭುವಿಗೆ ಕಾಣಿಸದಿರೆ ನೀನು?
ಬಾ ಬಾ ಓ ಬೆಳಕೆ..
 

‍ಲೇಖಕರು G

April 17, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

18 ಪ್ರತಿಕ್ರಿಯೆಗಳು

  1. VidyaShankar

    ನಾನೊಮ್ಮೆ ದೊಡ್ಡ ಲೇಖಕರನ್ನ ಅಂಕಣದಲ್ಲಿ ಕತೆ ಬರಿಬೋದಾ ಸಾರ್ ಎಂದಿದ್ದೆ… ಇಲ್ಲಿ ನೋಡಿದರೆ ಕವಿತೆನೇ ಬರೆದಿದ್ದೀರಿ 🙂

    ಪ್ರತಿಕ್ರಿಯೆ
  2. Anonymous

    ತುಂಬಾ ತುಂಬಾ ಇಷ್ಟವಾಯಿತು – ಮಳೆಯಂತೆ, ಮಣ್ಣ ಘಮದಂತೆ…

    ಪ್ರತಿಕ್ರಿಯೆ
  3. ಗುಡ್ಡಪ್ಪ

    ಎಲ್ಲೆಲ್ಲಿದೋ ಹಾಡು, ಎಲ್ಲೆಲ್ಲಿದೋ ಮಾತು ಒಂದು ಮನಸಿನ ನವಿರು ಭಾವನೆಗಳಿಗೆ ಪೂರಕವಾಗಿ ಸಾಲು ಹಚ್ಚೋದನ್ನು ಓದೋದು ಭಾಳ ಖುಷಿ

    ಪ್ರತಿಕ್ರಿಯೆ
  4. Anuradha.B.Rao

    ಈ ಮೋಡ ಕವಿದ ವಾತಾವರಣದಲ್ಲಿ ಆಗಸದಲ್ಲಿ ರವಿ ಮೂಡಿಬಂದಂತೆ .. ತುಂಬಾ ಇಷ್ಟವಾಯಿತು ಸಂಧ್ಯಾ . ಅಭಿನಂದನೆಗಳು .

    ಪ್ರತಿಕ್ರಿಯೆ
  5. Anil Talikoti

    ಒಂದು ಬಿರುಸಾದ ಮಳೆ ಬಂದು ಹೋದ ಅನುಭವ.
    ಮಳೆ-‘ಮೇಲಿಂದ ಜಾರಿದೆ -ಅಯ್ಯೊ ನಾನೆಷ್ಟು ಪಾಪಿ- ಕೆಳಗೊಂದು ಇರುವೆ’ ಅನ್ನುಕೊಳ್ಳುವದಕ್ಕಿಂತ
    ‘ಮೇಲಿಂದ ಜಾರಿದೆ- ಅಬ್ಬಾ ಸಾರ್ಥಕ ಜನ್ಮ- ಕೆಳಗೊಬ್ಬ ಪೋರ’ ಎಂದುಕೊಳ್ಳುವದೆ ಸಾರ್ಥಕತೆ.
    ವಿಷಾದದ ಅಂಚು ಮನಸಿಗಿಳಿಯಿತು ಒಂದಿಂಚು.
    ಇದೇ ಮನಸೆ ಅಲ್ಲವೆ ಹಿಂ(ಮುಂ)ದೊಮ್ಮೆ ಮುದ ನೀಡಿದ್ದು-ಸೊಮ್ಮುಗೊಳಿಸಿದ್ದು.
    ~ಅನಿಲ

    ಪ್ರತಿಕ್ರಿಯೆ
  6. ಪ್ರಮೋದ್

    ಮು೦ಗಾರಿನ ಮಳೆ ಗೆ ಇನ್ನೊ೦ದು ತಿ೦ಗಳು ಕಾಯಬೇಕು. ಈ ಬರಹದ ಮೂಲಕ ನಾವೀಗಲೇ ರೆಡಿ ಆಗಿದ್ದೇವೆ 🙂

    ಪ್ರತಿಕ್ರಿಯೆ
  7. Hema Sadanand Amin

    maleyu taruva tampu, kampu hanigala sumadhura sparsha nimma e lekhanadalli jinuguthidhe. awsome!

    ಪ್ರತಿಕ್ರಿಯೆ
  8. Ravi Kulkarni

    ಹೆಣ್ಣಿನೆದೆಯಲ್ಲಿ ಒಂದು ಬಾನು, ಗಂಡಿನ ಮನದಲ್ಲಿ ಒಂದು ಭೂಮಿ ಇರಬಾರದ್ಯಾಕೆ?
    ಗಂಡಿನ ಕಣ್ಣಲ್ಲಿ ಒಂದು ಹನಿ ಕಣ್ಣೀರು, ಹೆಣ್ಣಿನ ಕೊರಳಲ್ಲಿ ಒಂದು ದ್ರವಿಸದ ಬಿಕ್ಕಳಿಕೆ ಇರಬಾರದು ಯಾಕೆ?
    ಸಂಧ್ಯಕ್ಕಾ… ಭಾಳ ಚಂದ ಆದ ನಿಮ್ಮ ಮಳೆ ಅನುಭವ..!!

    ಪ್ರತಿಕ್ರಿಯೆ
  9. ಲಕ್ಷ್ಮೀಕಾಂತ ಇಟ್ನಾಳ

    ಸಂಧ್ಯಾ ಜಿ, ನಮಸ್ತೆ, ಮತ್ತೊಮ್ಮೆ ಒಂದೊಳ್ಳೆಯ ಥೀಮ್. ನೀ ಮಳೆ,ನಾ ಇಳೆ,… ಬಾನು ನೀ ನಕ್ಕರೆ, ಅದೆ ಸಕ್ಕರೆ, ಅದರೆ ಎಲ್ಲ ಕಾಲಕೂ ಇದಲ್ಲ, ಅದಕ್ಕೂ ಹದ ಬೇಕು, ‘ಪಲಕೋಂ ಪರ್ ಇಕ್ ಬೂಂದ ಸಜಾಯೆ, ಬೈಠೀ ಹೂಂ ಸಾವನ್ ಲೇ ಜಾವೆ, ಜಾಯೆ ಪೀ ದೆ ದೇಸ್ ಮೇಂ ಬರಸೆ’ ಅದಕ್ಕೆ ಶ್ರಾವಣದಂಥ ಮಾಹೋಲ್, ಮೌಸಮ್ ಬೇಕು, ಮನಸಿಗೂ ಹಾಗೆ, ಎಲ್ಲ ಕಾಲಕ್ಕು ಮೋಡ, ಬಾನುಗಳು ತಂಪನೆರೆಯಲಾರವು…ಒಂದೊಳ್ಳೆಯ ಬರಹ. ಎಂದಿನಂತೆ ಸಂಧ್ಯಾಜಿ.

    ಪ್ರತಿಕ್ರಿಯೆ
  10. ಆರತಿ ಘಟಿಕಾರ್

    ಮಳೆ ಎಂದರೆ ಬಿಡುಗಡೆ, ಮಳೆ ಎಂದರೆ ಮುಕ್ತಿ, ಮಳೆ ಎಂದರೆ ನಿರಾಳ, ಮಳೆ ಎಂದರೆ ಹೊಸ ಹುಟ್ಟು, ಮಳೆ ಎಂದರೆ ಹೊಸ ಸಾಧ್ಯತೆ. ಇಲ್ಲ ಇಲ್ಲಿ ನಾನು ಭೂಮಿಗೆ ಮಳೆ ಏನು ಎಂದು ಹೇಳುತ್ತಿಲ್ಲ, ಆಕಾಶಕ್ಕೆ ಮಳೆ ಏನು ಎಂದು ಹೇಳುತ್ತಿದ್ದೇನೆ. ಇಂಥ ಬೆರಗಿನ ಕೌತುಕದ ಪ್ರಶ್ನೆಗಳನ್ನು ನಮ್ಮಲ್ಲೂ ಹುಟ್ಟು ಹಾಕಿ ನಾವೂ ಆಗಸದೆಡೆ ಸವಾಲೆಸೆಯುವಂತೆ ಮಾಡಿದ್ದೀರಿ ! …ನಿಮ್ಮ ಅನನ್ಯ ಭಾವ ಲಹರಿಯಲ್ಲಿ ನಾವು ಮಿಂದೆವು !ತುಂಬಾ ಇಷ್ಟವಾಯಿತು ಬರಹ 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: