ಎಸ್ ದಿವಾಕರ್ ಅನುವಾದಿಸಿದ ಗ್ಯುಂಥಾರ್ ಗ್ರಾಸ್ ಕವನ

ಎಸ್ ದಿವಾಕರ್

ಮೊನ್ನೆಯಷ್ಟೇತೀರಿಕೊಂಡ ಗ್ಯುಂಥರ್ ಗ್ರಾಸ್ 1959ರಷ್ಟು ಹಿಂದೆ ಪ್ರಕಟವಾದ ‘ದಟಿನ್ಡ್ರಮ್’ ಎಂಬ ಪ್ರಥಮಕಾದಂಬರಿಯಿಂದಲೇ ಪ್ರಖ್ಯಾತನಾದವನು.
‘ಡಾಗ್ ಇಯರ್ಸ್’, ‘ಕ್ಯಾಟ್ಅಂಡ್ ಮೌಸ್’, ‘ಫ್ರಮ್ ದ ಡೈರಿ ಆಫ್ ಎ ಸ್ನೇಲ್’, ‘ದ ಫ್ಲೌಂಡರ್’, ‘ದರ್ಯಾಟ್’, ‘ದಕಾಲ್ಆಫ್ದಟೋಡ್’, ‘ಮೈ ಸೆಂಚುರಿ’, ‘ಕ್ರಾಬ್ವಾಕ್’- ಇವು ಅವನ ಇತರ ಕಾದಂಬರಿಗಳು.

ಗ್ರಾಸ್ ಕಾದಂಬರಿಕಾರನಾಗಿ ಪ್ರಸಿದ್ಧನಾದವನು, ನಿಜ. ಆದರೆ ನಾಟಕ, ಕಾವ್ಯ, ಚಿತ್ರ ಮತ್ತು ಶಿಲ್ಪ ಕಲೆಗಳಲ್ಲೂ ಅವನದು ಗಣನೀಯ ಸಾಧನೆ. ವರ್ಷಗಳ ಹಿಂದೆ ನಾನು ಇಷ್ಟಪಟ್ಟು ಅನುವಾದಿಸಿದ ಅವನದೊಂದು ಕವನ ‘ಮೊಟ್ಟೆ’.
ಇದು 1998ರಲ್ಲಿ ಪ್ರಕಟವಾದ ‘ಆತ್ಮಚರಿತ್ರೆಯಕೊನೆಯ ಪುಟ’ ಎಂಬ ನನ್ನ ಕವನ ಸಂಕಲನದಲ್ಲಿದೆ.

ಮೊಟ್ಟೆ


ಸ್ವಾಮೀ, ನಾವಿರುವ ಈ ವಲಯವೊಂದು ಭಾರೀ ಮೊಟ್ಟೆ;
ಇದರಚಿಪ್ಪಿನ ಒಳಗೋಡೆಯ ಮೇಲೆಲ್ಲ
ಅಶ್ಲೀಲ ಚಿತ್ರಗಳ
ನಂನಮ್ಮ ಶತ್ರುಗಳ
ನಾಮಧೇಯಗಳನ್ನು ಗೀಚಿದ್ದೇವಲ್ಲ,
ನಮಗೆಂದೆ ಯಾರೋ ಕಾವು ಕೂತಿದ್ದಾರೆ ಪುಗಸಟ್ಟೆ.
 
ನಮಗೆಂದೆ ಕಾವು ಕೂತಿರುವವರು ಯಾರೋ
ಅವರೇ ಹೆರೆಯುತ್ತಿದ್ದಾರೆ ನಮ್ಮ ಪೆನ್ಸಿಲ್ಲನ್ನು.
ಒಂದು ದಿನ ಈ ಮೊಟ್ಟೆಯಿಂದ ಬಿಡುಗಡೆ ಹೊಂದಿ
ನಮಗೆಂದೆ ಕಾವು ಕೂತಿರುವವರು ಯಾರೋ
ಅವರದೇ ಚಿತ್ರ ಬಿಡಿಸುತ್ತೇವೆ, ತಕ್ಷಣವೆ.
 
ಹೌದು, ಕಾವು ಕೂತಿದ್ದಾರೆಂದು ನಂಬಿಕೊಂಡಿದ್ದೇವೆ.
ಉಪಕಾರಿಯಾದೊಂದು ಹುಂಜದ ಕನಸು ಕಾಣುತ್ತ
ಕಾವು ಕೂತಿರಬಲ್ಲ ಕೋಳಿಯ ಬಣ್ಣ, ಜಾತಿಗಳ
ಮೇಲೆ ಬರೆಯುತ್ತೇವೆ ಶಾಲಾ ಪ್ರಬಂಧಗಳ.
 
ಚಿಪ್ಪೊಡೆದು ಎಂದು ಹೊರಹೋದೇವು? ಯಾವಾಗ?
ಮೊಟ್ಟೆಯೊಳಗಿನ ನಮ್ಮ ಪಂಡಿತೋತ್ತಮರೇ
ಸ್ವಲ್ಪ ಸಂಬಳ ಪಡೆದು ವಾದಿಸುತ್ತಿದ್ದಾರೆ
ನಾವು ಕಾವು ಪಡೆಯ ಬೇಕಾದ ಕಾಲಾವಧಿಯ ಬಗ್ಗೆ.
ಅವರು ಸೂಚಿಸುತ್ತಿರುವ ದಿವಸದ ಹೆಸರು ‘ಘ’.
 
ಮೊಟ್ಟೆಯೊಳಗಡೆ ನಮ್ಮ ಸಂತಾನ ಹೇಗೆ?
ಇದೇ ಯೋಚನೆ ನಮಗೆ.
ಬೇಜಾರಿನಿಂದ, ಸಾಚಾ ದರದಿನಿಂದ
ಕಂಡು ಹಿಡಿದಿದ್ದೇವೊಂದು ಕಾವು ಪೆಟ್ಟಿಗೆ.
ನಮ್ಮ ಸ್ವಾಮ್ಯದ ಈ ಹೊಸ ತಯಾರಿಕೆಯನ್ನು
ಸಂತೋಷದಿಂದ ಶಿಫಾರಸು ಮಾಡುತ್ತೇವೆ
ನಮ್ಮ ಮೊಟ್ಟೆಗೆ ಕಾವು ಕೂತಿರಬಲ್ಲ ಕೋಳಿಗೆ.
 
ನಮ್ಮತಲೆ ಮೇಲೊಂದು ಸೂರುಂಟು, ಅದರಡಿಯಲ್ಲಿ
ಮುದಿಗೊಡ್ಡು ಮರಿಗಳು
ಬಹುಭಾಷಿ ಭ್ರೂಣಗಳು
ಹಗಲೆಲ್ಲ ಹರಟುತ್ತಿವೆ
ತಂತಮ್ಮ ಕನಸುಗಳ ಚರ್ಚಿಸುತ್ತಿವೆ.
 
ಒಂದು ವೇಳೆ ಯಾರೂ ನಮಗೆ ಕಾವು ಕೊಡದಿದ್ದರೆ?
ಈ ಮೊಟ್ಟೆಒಡೆದುಹೋಗದೆ ಹೀಗೆಯೇ ಇದ್ದರೆ?
ನಾವು ಗೀಚಿದ್ದಷ್ಟೆ ನಮ್ಮ ಕ್ಷಿತಿಜವಾದರೆ? ಹಾಗೇ ಇದ್ದು ಬಿಟ್ಟರೆ?
ಇಲ್ಲ, ನಮ್ಮ ನಂಬಿಕೆಯಚಲ: ಯಾರೋ ಕಾವು ಕೂತಿದ್ದಾರೆ.
 
ಕಾವು ಕೂರುವ ವಿಷಯ ಮಾತಾಡುತಿದ್ದರೂ
ಒಂದು ಭಯವಿದೆ ನಮಗೆ:
ಈ ಮೊಟ್ಟೆಯ ಹೊರಗಿರುವ ಯಾರಾದರೊಬ್ಬರಿಗೆ
ಹಸಿವೆನ್ನಿಸಿ
ಕಾದ ಕಾವಲಿಗೊಂದು ಚಿಟಿಕೆ ಉಪ್ಪು ಸುರಿಸಿ
ನಮ್ಮನ್ನೊಡೆದರೆ?
ಏನು ಮಾಡುವುದಾಗ ಹೇಳಿ, ಮೊಟ್ಟೆಯಲ್ಲಿರುವ
ನನ್ನೆಲ್ಲ ಸೋದರ ಸೋದರಿಯರೆ?
 
ಮೂಲ: ಗ್ಯುಂಥರ್ಗ್ರಾಸ್
ಅನುವಾದ: ಎಸ್  ದಿವಾಕರ್
 

‍ಲೇಖಕರು G

April 17, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    ಕನ್ನಡದ್ದೇ ಇರಬೇಕೇನೋ ಅನ್ನಿಸುವ ಹಾಗಿದೆ ಅನುವಾದ. ಬಹಳ ಅಪರೂಪಕ್ಕೆ ಇಂಥ ಅನುವಾದ ಓದೋಕೆ ಸಿಕ್ಕಾಗ ಖುಷಿಯಾಗುತ್ತೆ.

    ಪ್ರತಿಕ್ರಿಯೆ
  2. Anonymous

    ಕವಿತೆ ತುಂಬಾ ಅರ್ಥಪೂರ್ಣವಾಗಿ ಅನುವಾದವಾಗಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: