ಸಂಧ್ಯಾರಾಣಿ ಕಾಲಂ : ಬೆನ್ನುಡಿಗಳ ಬೆನ್ನು ಹತ್ತಿ..


ನನ್ನ ಬೊಗಸೆಗೆ ಯಾರಾದರೂ ೩-೪ ಗಂಟೆಗಳ ಸಮಯ ಹಾಕಿ, ಹೋಗು ನಿನಗಿಷ್ಟ ಬಂದ ಹಾಗೆ ಇದನ್ನು ಖರ್ಚು ಮಾಡು ಎಂದರೆ ನಾನು ಧಾವಿಸುವ ಕೆಲವೇ ಸ್ಥಳಗಳ ಪೈಕಿ ಪುಸ್ತಕದಂಗಡಿ ಒಂದು, ಮತ್ತು ನನ್ನ ಪಟ್ಟಿಯಲ್ಲಿ ಬರುವ ಒಂದೇ ಒಂದು ಅಂಗಡಿಯೂ ಅದೇ! ಪುಸ್ತಕದಂಗಡಿಗೆ ಹೋದಾಗ ನಾನು ಹೋದಾಗ ಪುಸ್ತಕಗಳನ್ನು ಹುಡುಕುವ ರೀತಿಯೂ ನನ್ನ ಸಮಯಕ್ಕೆ ತಕ್ಕಂತೆ ಇರುತ್ತದೆ, ಸಮಯ ಕಡಿಮೆ ಇದ್ದರೆ ನಾನು ಪುಸ್ತಕಗಳನ್ನು ನೋಡುವ ರೀತಿಯೇ ಬೇರೆ, ಅದು ಟೂರಿಸ್ಟ್ ಬಸ್ ನಲ್ಲಿ ಕೂತು ನಗರ ಪ್ರದಕ್ಷಣೆ ಮಾಡಿದ ಹಾಗೆ. ವಿರಾಮದ ಸಮಯ ಇದ್ದರೆ ಕಾಲ್ನಡಿಗೆಯಲ್ಲಿ ಸುತ್ತುತ್ತಾ ಊರನ್ನು ಅದರ ಶಬ್ಧ, ವಾಸನೆ, ಸ್ಪರ್ಶಗಳ ಜೊತೆಯಲ್ಲಿ ಪರಿಚಯಿಸಿಕೊಂಡಂತೆ.
ನಿಧಾನವಾಗಿ ಸಾಲು ಸಾಲು ಪುಸ್ತಕಗಳನ್ನು ನೋಡುತ್ತಾ, ಕೈಗೆತ್ತಿಕೊಳ್ಳುತ್ತಾ, ಹೊಸ ಪುಸ್ತಕದ ಆ ಪರಿಮಳವನ್ನು ಒಮ್ಮೆ ಆಸ್ವಾದಿಸುತ್ತಾ ಆ ಪ್ರಪಂಚದಲ್ಲಿ ಕಳೆದುಹೋಗುವುದು. ಪುಸ್ತಕ ಕೈಗೆತ್ತಿಕೊಂಡ ತಕ್ಷಣ ನಾನು ನೋಡುವುದು ಆ ಪುಸ್ತಕವನ್ನು ಯಾರಿಗೆ ಅರ್ಪಿಸಲಾಗಿದೆ ಎಂದು. ಅದು ಲೇಖಕರ ಮನಸ್ಸಿಗೆ ಒಂದು ಕಿಟಕಿ ಆಗಿರುತ್ತದೆ. ಹಾಗೆ ನೋಡಿದಾಗ ಕಂಡದ್ದು ಗುಲ್ಜಾರ್ ತಮ್ಮ ಒಂದು ಪುಸ್ತಕವನ್ನು ಸೌರವ್ಯೂಹದಿಂದ ಅನಾಥನಂತೆ ಹೊರದೂಡಲ್ಪಟ್ಟ ’ಪ್ಲೂಟೋ’ ಗೆ ಅರ್ಪಿಸಿದ್ದರು. ಮತ್ತೊಂದು ಪುಸ್ತಕವನ್ನು ’To the longest short story of my life’ ಎಂದು ತಮ್ಮ ಪತ್ನಿ ರಾಖಿಗೆ ಅರ್ಪಿಸಿದ್ದರು! ಆ ದಿನ ಒಂದೇ ಸಮಯಕ್ಕೆ ಗುಲ್ಜಾರ್ ನನಗೆ ಅತ್ಯಂತ ಆರ್ದ್ರ ಮನಸ್ಸಿನ ಕವಿಯಾಗಿ ಮತ್ತು ಅತ್ಯಂತ ತುಂಟನಾಗಿ ಕಂಡಿದ್ದರು!!
ನಂತರ ನಾನು ಪುಸ್ತಕವನ್ನು ತಿರುಗಿಸುತ್ತೇನೆ, ಅದರ ಬೆನ್ನುಡಿಯ ಮೇಲೆ ಕಣ್ಣಾಡಿಸುತ್ತೇನೆ. ’ಅರ್ಪಣೆ’ ಲೇಖಕನ ಮನಸ್ಸಿಗೆ ಕನ್ನಡಿಯಾಗಿದ್ದರೆ, ಬೆನ್ನುಡಿ ಬಹಳಷ್ಟು ಸಲ ಪುಸ್ತಕದ ಆತ್ಮಕ್ಕೆ ಕನ್ನಡಿ ಆಗಿರುತ್ತದೆ. ಬೆನ್ನುಡಿಗಳ ಬಗ್ಗೆ ಯೋಚಿಸಿದಾಗೆಲ್ಲಾ ನನಗೆ ಯೂ ಆರ್ ಅನಂತಮೂರ್ತಿ ನೆನಪಾಗುತ್ತಾರೆ. ನನ್ನ ಗೆಳತಿ ಭಾರತಿ ಆಗಷ್ಟೆ ಕ್ಯಾನ್ಸರ್ ಅನ್ನು ಮುಖಾಮುಖಿಯಾಗಿ, ದಿಟ್ಟಿ ತಗ್ಗಿಸದೆ ಅದನ್ನು ದಾಟಿ ಬಂದಿದ್ದಳು. ಅವಳು ಅದನ್ನು ಎದುರಿಸಿದ ರೀತಿ ಅನನ್ಯ. ಆ ಎಲ್ಲಾ ನೆನಪುಗಳನ್ನೂ, ನೋವುಗಳನ್ನೂ, ಆ ದಿನಗಳಲ್ಲಿ ಅವಳನ್ನು ಮೆತ್ತಗಾಗಿಸಿದ, ಗಟ್ಟಿಯಾಗಿಸಿದ ಘಟನೆಗಳನ್ನೆಲ್ಲಾ ಅವಳು ಪುಸ್ತಕವಾಗಿಸಿದ್ದಳು. ಆ ಸಮಯದಲ್ಲಿ ಅದೇ ಹಾದಿಯ, ಅದೇ ಮೈಲಿಗಲ್ಲುಗಳನ್ನು ಕ್ರಮಿಸುತ್ತಿದ್ದ ಯೂ ಆರ್ ಅದನ್ನು ಒಮ್ಮೆ ಓದಲಿ ಎನ್ನುವುದು ಅವಳ ಆಸೆಯಾಗಿತ್ತು. ಅದನ್ನು ಓದಿದ ಯೂ ಆರ್ ಮಗುವಿನ ಮುಗ್ಧತೆಯಲ್ಲಿ ಅದಕ್ಕೆ ಏನಾದರೂ ಬರೆದುಕೊಡಬಹುದೆ ಎಂದು ಕೇಳಿ, ಅವರಾಗೇ ಆ ಬಗ್ಗೆ ನಾಲ್ಕು ಪ್ಯಾರ ಆಗುವಷ್ಟು ಹೇಳಿ, ಇವಳು ಅದನ್ನು ಬರೆದುಕೊಂಡ ಮೇಲೆ ಅದನ್ನು ಓದಿಸಿ, ಕೇಳಿ ಹಾರೈಸಿ, ಅದರ ಕೆಳಗೆ ತಮ್ಮ ಹಸ್ತಾಕ್ಷರ ಹಾಕಿ ಕಳಿಸಿದ್ದರು.
ಅಲ್ಲಿ ಅವರು ಪುಸ್ತಕದ ಬಗ್ಗೆ ’ಏಕಕಾಲದಲ್ಲಿ ಅಂತರಂಗದ ಅನಿಸಿಕೆಯ ಸತ್ಯಗಳನ್ನೂ, ಬಹಿರಂಗದಲ್ಲಿ ಓದುಗನಿಗಾಗಿ ಕೊಡಬೇಕಾದ ವಿವರಗಳನ್ನೂ ಒಟ್ಟಾಗಿ ಹಿಡಿದಿಡುವ ಗದ್ಯ’ ಎಂದು ಬರೆದಿದ್ದರು. ಇಂದಿಗೂ ಸಹ ಅವಳ ಪುಸ್ತಕಕ್ಕೆ ಬಂದ ಅತ್ಯುತ್ತಮ ವಿಮರ್ಶೆ ಎಂದರೆ ಆ ಬೆನ್ನುಡಿ ಎನ್ನುವುದು ನನ್ನ ಅಭಿಪ್ರಾಯ. ನಾಲ್ಕೇ ಪ್ಯಾರಾಗಳಲ್ಲಿ ಮೇಷ್ಟ್ರು ಆ ಪುಸ್ತಕದ ಅಂತಸ್ಸತ್ವವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದರು.
ಇಷ್ಟಕ್ಕೂ ಬೆನ್ನುಡಿ ಎಂದರೆ ಏನು? ಇಂಗ್ಲಿಷ್ ನಲ್ಲಿ ಬ್ಲರ್ಬ್ ಎನ್ನುವ ಕನ್ನಡದ ಈ ಬೆನ್ನುಡಿ ಪುಸ್ತಕದ ಕೊನೆಯ ಪುಟ ಮತ್ತು ಬಹಳಷ್ಟು ಓದುಗರು ಓದುವ ಮೊದಲ ಪುಟ. ಈ ಪದ ಮೊದಲು ಬಳಕೆಗೆ ಬಂದಿದ್ದು ೧೯೦೭ ರಲ್ಲಿ. ಅಮೇರಿಕಾದ ಜಿಲೆಟ್ ಬರ್ಗೆಸ್ ಬರೆದ ಕಿರು ಪುಸ್ತಕದ ಧೂಳುಕವಚದ ಹಿಂದಿನ ಪುಟದಲ್ಲಿ ಒಂದು ಹೆಣ್ಣಿನ ಚಿತ್ರ ಮುದ್ರಿಸಿ, ಅದರ ಮೇಲೆ ’ಹೌದು, ಇದು ಬ್ಲರ್ಬ್’ ಎಂದು ಬರೆಯಲಾಗಿತ್ತು. ಅದರ ಮೇಲಿದ್ದ ಹೆಣ್ಣಿನ ಚಿತ್ರದ ಹೆಸರು ಮಿಸ್ ಬೆಲಿಂದಾ ಬ್ಲರ್ಬ್. ಆಮೇಲೆ ನಂತರ ಬಂದ ಪುಸ್ತಕಗಳಲ್ಲಿ ಆ ಹೆಣ್ಣಿನ ಚಿತ್ರ ಬದಲಾಯಿತು, ನಂತರ ನಿಂತೂ ಹೋಯಿತು, ಆದರೆ ’ಇದು ಬ್ಲರ್ಬ್’ ಎನ್ನುವ ಮಾತು ಮಾತ್ರ ಹಾಗೇ ನಿಂತು ಹೋಯಿತು. ಆ ಪುಟದಲ್ಲಿ ಪುಸ್ತಕದ ಕಿರು ಪರಿಚಯ ಇರಬಹುದು, ಲೇಖಕರ ಬಗ್ಗೆ ಪರಿಚಯ ಇರಬಹುದು, ವಿಮರ್ಶೆಯ ಸಾಲುಗಳಿರಬಹುದು ಅಥವಾ ಪುಸ್ತಕವನ್ನು ಓದಲು, ಕೊಳ್ಳಲು ಪ್ರೋತ್ಸಾಹಿಸುವ ಯಾವುದೇ ಸಾಲುಗಳಿರಬಹುದು. ಅದು ಪುಸ್ತಕದ ಕಡೆಯ ಪುಟ ಆಗಿರಬಹುದು, ಕ್ಯಾಸೆಟ್ ನ ಅಥವಾ ಸಿಡಿ ಯ ಹೊದಿಕೆಯ ಹಿಂಬಾಗ ಸಹ ಆಗಿರಬಹುದು,
ಸಾಧಾರಣವಾಗಿ ಕಾದಂಬರಿಗಳ ಬೆನ್ನುಡಿಯಲ್ಲಿ ಕಥೆಯ ಕಿರು ಪರಿಚಯ ಇರುತ್ತದೆ, ಆದರೆ ಕಥೆಯ ಮುಕ್ತಾಯ ಅಥವಾ ಕಥೆಯ ಗುಣಾವಗುಣಗಳ ಚರ್ಚೆ ಇರುವುದಿಲ್ಲ. ಆದರೆ ಕವನ ಸಂಗ್ರಹದಲ್ಲಿ ಕವನಗಳ ಕೆಲವು ಸಾಲುಗಳು ಅಥವಾ ಕವಿಯ ಕೆಲವು ಸಾಲುಗಳು ಇರಬಹುದು. ಬೆನ್ನುಡಿಗೆ ಯಾವುದೇ ಸಿದ್ಧಮಾದರಿ ಇಲ್ಲ, ಅದು ಕವಿತೆಯ ಹಾಗೆ, ದಕ್ಕಿದಷ್ಟು, ದಕ್ಕಿಸಿಕೊಂಡಷ್ಟು.
ಪುಸ್ತಕದಲ್ಲಿಯ ಬರಹದ ಒಂದು ಭಾಗವಾಗದಿದ್ದರೂ ಬೆನ್ನುಡಿ ಪುಸ್ತಕದ ಒಂದು ಅವಿಭಾಜ್ಯ ಅಂಗವಿದ್ದಂತೆ. ಅದು ಪುಸ್ತಕದ ವಿಸಿಟಿಂಗ್ ಕಾರ್ಡ್ ಇದ್ದಂತೆ. ಹೊಸದಾಗಿ ಪುಸ್ತಕ ತರುತ್ತಿರುವ ಬರಹಗಾರರಿಗೆ ಒಮ್ಮೊಮ್ಮೆ ಅದು ತಾವು ಗೌರವಿಸುವವರು ಪ್ರೀತಿಯಿಂದ ಕೊಡುವ ಪರಿಚಯ ಪತ್ರವಿದ್ದಂತೆ. ಪುಸ್ತಕದ ಮನೆಗೊಂದು ಕಿಟಕಿ ಇದ್ದಂತೆ, ಸಿನಿಮಾಕ್ಕೆ ಹೋದಾಗ ಅಲ್ಲಿ ತೋರಿಸುವ ಬರಲಿರುವ ಸಿನಿಮಾಗಳ ಟ್ರೇಲರ್ ಇದ್ದಂತೆ.
ಬೆನ್ನುಡಿಗಳ ವಿಷಯಕ್ಕೆ ಬಂದರೆ ಪ್ರತಿಭಾ ನಂದಕುಮಾರ್ ಬರೆದದ್ದು ನೆನಪಾಗುತ್ತದೆ. ಒಮ್ಮೆ ಒಬ್ಬರು ಪ್ರಸಿದ್ಧ ಲೇಖಕರ ಹತ್ತಿರ ತಮ್ಮ ಪುಸ್ತಕಕ್ಕೆ ಬೆನ್ನುಡಿ ಬರೆಯಲು ಕೇಳಿದಾಗ, ಅವರು ನಾನು ಮಹಿಳೆಯರ ಪುಸ್ತಕಗಳಿಗೆ ಬೆನ್ನುಡಿ ಬರೆಯುವುದಿಲ್ಲ ಎಂದಿದ್ದರಂತೆ, ’ಹಾಗಾದರೆ ಮುನ್ನುಡಿ ಬೆರೆಯುತ್ತೀರಾ’ ಎಂದು ಕೇಳಿದ ಪ್ರತಿಭಾ ಅಲ್ಲಿಗೇ ನಿಲ್ಲಿಸದೆ ಆ ಬಗ್ಗೆ ಒಂದು ಸುಂದರ ಕವನವನ್ನೂ ಬರೆದಿದ್ದಾರೆ.
“ಅವರು ಹೇಳಿದರು
ನಾನು ಹೆಂಗಸರಿಗೆ ಬೆನ್ನುಡಿ ಬರೆಯುವುದಿಲ್ಲ
ಹೊಕ್ಕುಳೊಳಗಿಂದ ಒದ್ದುಕೊಂಡು ಬಂದ ಕಾತರವನ್ನು
ಮುಷ್ಟಿಯಲ್ಲಿಟ್ಟುಕೊಂಡು ನಾನು ಕೇಳಿದೆ
ಹಾಗಾದರೆ ಮುನ್ನುಡಿ ಬರೆಯುತ್ತೀರಾ?
ಅವರು ನಕ್ಕರು.’
ವೈದೇಹಿ ವಾಚಿಕೆಗೆ ಲಂಕೇಶ್ ವೈದೇಹಿಯವರ ಬರವಣಿಗೆಯ ಬಗ್ಗೆ ಬರೆದ ಸಾಲುಗಳನ್ನು ಬೆನ್ನುಡಿಯಾಗಿ ಬಳಸಿಕೊಳ್ಳಲಾಗಿದೆ, ಲಂಕೇಶ್ ಬರೆಯುತ್ತಾರೆ, ’ಸಮಕಾಲೀನ ಲೇಖಕರನ್ನು ಮೆಚ್ಚುವುದು ಕಷ್ಟ. ಬರೆಯುವ ನನ್ನಂಥವನಿಗೂ ಬೇರೆ ಬರಹಗಾರರಿಗೂ ನಡುವೆ ತಿಳುವಳಿಕೆ, ಸ್ನೇಹ ಇತ್ಯಾದಿಯೆಲ್ಲಾ ಇರಬಹುದು. ಅವೆಲ್ಲಕ್ಕಿಂತಾ ಹೆಚ್ಚಾಗಿ ಸ್ಪರ್ಧೆ, ಸವಾಲು ಇರುತ್ತವೆ. ಇವು ಅನೇಕ ಸಲ ಅಸೂಯೆಯ ಮಟ್ಟಕ್ಕಿಳಿಯುತ್ತವೆ. ಆದರೆ ನಾನು ನಿಜಕ್ಕೂ ಕಂಡ ನನ್ನ ಕಾಲದ ಒಳ್ಳೆಯ ಲೇಖಕರು ನನ್ನಲ್ಲಿ ಅಚ್ಚರಿ, ಹೊಸ ಗ್ರಹಿಕೆ ಹುಟ್ಟಿಸುತ್ತಾರೆ. ಬರೆಯುವ ಹೆಮ್ಮೆಯನ್ನು ಹೆಚ್ಚಿಸುತ್ತಾರೆ. ಅಂಥವರಲ್ಲಿ ವೈದೇಹಿ ಒಬ್ಬರು’. ಈಗ ಹೇಳಿ, ಇದನ್ನು ಓದಿದ ಮೇಲೆ ಪುಸ್ತಕವನ್ನು ಕೈಗೆತ್ತಿಕೊಳ್ಳದೆ ಇರುವುದು ಸಾಧ್ಯವೇ?

ಇದು ಪುಸ್ತಕದ ಬಗ್ಗೆ ಬೇರೆಯವರು ಬರೆಯುವ ಮಾತಾಯಿತು. ತಮ್ಮ ಸಾಹಿತ್ಯದ ಬಗ್ಗೆ ಬಂದ ಪುಸ್ತಕಕ್ಕೆ ಆ ಲೇಖಕರ ಮಾತುಗಳೇ ಬೆನ್ನುಡಿ ಆದ ಒಂದು ಉದಾಹರಣೆ ಕೊಟ್ಟು ಈ ಬರಹವನ್ನು ಮುಗಿಸುತ್ತೇನೆ. ದೇವನೂರು ಮಹಾದೇವ ಅವರ ಸಾಹಿತ್ಯ ಕುರಿತು ಅಭಿನವ ಪ್ರಕಾಶನ ಒಂದೊಳ್ಳೆ ಪುಸ್ತಕ ಹೊರ ತಂದಿತು. ’ಯಾರ ಜಪ್ತಿಗೂ ಸಿಗದ ನವಿಲುಗಳು’ ಪುಸ್ತಕದ ಹೆಸರು. ಅಭಿನವದ ಚಂದ್ರಿಕಾ ಅದನ್ನು ಸಂಪಾದಿಸಿದ್ದಾರೆ. ಆ ಪುಸ್ತಕದ ಬೆನ್ನುಡಿಯಲ್ಲಿ ಮಹಾದೇವ ತಮ್ಮ ಬರವಣಿಗೆಯ ಬಗ್ಗೆ ಹೇಳುತ್ತಾ ಒಂದು ಅದ್ಭುತವಾದ ಕಥೆ ಹೇಳುತ್ತಾರೆ. ಅದು ಒಂದು ಕೂದಲಿನ ಕಥೆ. ಆದಿನಾಥನೆಂಬ ಜೈನ ದೊರೆ ಒಂದು ದಿನ ಬೆಳಗ್ಗೆ ಎದ್ದು ನೋಡುತ್ತಾನೆ, ತಲೆಯ ಒಂದು ಕೂದಲು ನೆರೆತಿರುತ್ತದೆ. ತಕ್ಷಣವೇ ಅವನಿಗೆ ಬದುಕಿನ ಕ್ಷಣಿಕತೆಯ ದರ್ಶನವಾಗಿ ಅವನು ರಾಜ್ಯ, ಕೋಶ ಎಲ್ಲ ಬಿಟ್ಟು ತಪಸ್ಸು ಮಾಡಲು ಕಾಡಿಗೆ ಹೊರಟುಹೋಗುತ್ತಾನೆ. ಅಷ್ಟಕ್ಕೇ ನಿಲ್ಲಿಸದೆ ಮಾದೇವ ಇನ್ನೊಂದು ಕಥೆಯನ್ನೂ ಹೇಳುತ್ತಾರೆ.
’ಇನ್ನೊಂದು, ಸುಮಾರು ನನ್ನ ಥರದ ಮನುಷ್ಯನಿಗೆ ಸಂಬಂಧಿಸಿದ್ದು. ಅವನು ಒಂದು ದಿನ ನದಿಯೊಂದರಲ್ಲಿ ನೀರು ಕುಡಿಯುತ್ತಿದ್ದಾಗ ಅವನ ಬೊಗಸೆಯಲ್ಲಿ ಒಂದು ಉದ್ದನೆಯ ಕೂದಲು ಕಂಡಿತು. ತಕ್ಷಣ ಅವನ ಕಣ್ಮುಂದೆ ಒಂದು ಸುಂದರ ಹೆಣ್ಣಿನ ರೂಪ ಮೂಡಿತು. ಈ ಕೂದಲೇ ಇಷ್ಟು ಮೋಹಕವಾಗಿರುವಾಗ ಈ ಕೂದಲನ್ನು ಪಡೆದ ಹೆಣ್ಣು ಇನ್ನೆಷ್ಟು ಚೆಲುವೆಯಾಗಿರಬೇಕು ಎಂದು ಯೋಚಿಸಿದ. ಅವನು ಆ ಹೆಣ್ಣನ್ನು ಹುಡುಕಿ, ಅವಳ ಒಲವನ್ನು ಗಳಿಸಲು ಹೆಣಗತೊಡಗಿದ.
ನನ್ನ ಬರವಣಿಗೆ ಈ ಎರಡರ ಮಧ್ಯೆ ಇರುವಂತಹುದು.’
ಇಲ್ಲಿ ನಿರಾಕರಿಸುವ ಮತ್ತು ಹಂಬಲಿಸುವ ನಡುವಿನ ಸ್ಥಿತಿ ತಮ್ಮ ಬರವಣಿಗೆಯದು ಎಂದು ಮಹಾದೇವ ಹೇಳುತ್ತಾರೆ. ಈ ಪುಸ್ತಕದ ಬಗ್ಗೆ ಇನ್ಯಾರೇ ಆಗಲಿ ಇಷ್ಟು ಸುಂದರವಾಗಿ ಬೆನ್ನುಡಿ ಬರೆಯಲಾಗುತ್ತಿತ್ತೆ?!
ಅದಿರಲಿ, ನದಿಯ ನೀರನ್ನು ಬೊಗಸೆಯಲ್ಲಿ ಹಿಡಿದಾಗ ಕಂಡು ಬಂದ ಆ ನೀಳಗೂದಲು ನನಗೆ ಪುಸ್ತಕದ ಬೆನ್ನುಡಿಯ ಹಾಗೇ ಕಾಣಿಸಿತು! ನಿಮಗೂ ಹಾಗೇ ಅನ್ನಿಸಿತಾ?!
 

‍ಲೇಖಕರು G

June 5, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. rashmi

    ಬೆನ್ನುಡಿ ಅಂದ್ರೆ ಬ್ಲೌಸ್ ನ ಬ್ಯಾಕ್ ಡಿಸೈನ್ ತರ . ಕೆಲವೊಂದು ಡಿಸೈನ್ ಚೆನ್ನಾಗಿದ್ರೆ ಬೆನ್ನು ಚೆನ್ನಾಗಿರಲ್ಲ. ಕೆಲವೊಂದು ಪೂರ್ತಿ ಬೆನ್ನು ಮುಚ್ಚಿರುತ್ತೆ…ಆವಾಗಲೂ ಕುತೂಹಲ.. ಬೆನ್ನು ಯಾವುದೇ ಆಗಿದ್ದರೂ ಬ್ಲೌಸ್ ಡಿಸೈನ್ ಚೆನ್ನಾಗಿದ್ದರೆ ಅದರತ್ತ ಗಮನ ಹೋಗಿಯೇ ಇರುತ್ತೆ…:)

    ಪ್ರತಿಕ್ರಿಯೆ
    • ಜೆ.ವಿ.ಕಾರ್ಲೊ, ಹಾಸನ

      ಸರಿಯಾಗೇ ಹೇಳಿದ್ರಿ!

      ಪ್ರತಿಕ್ರಿಯೆ
  2. ಲಲಿತಾ ಸಿದ್ಧಬಸವಯ್ಯ

    ಒಹ್ಹ್ಹೂಊಒಹೋ ,,,, ರಶ್ಮಿ ಬೆನ್ನುಡಿಯೂ(!) ಲೇಖನದಷ್ಟೆ ಚೆಂದ (:

    ಪ್ರತಿಕ್ರಿಯೆ
  3. Raghav

    “ನದಿಯ ನೀರನ್ನು ಬೊಗಸೆಯಲ್ಲಿ ಹಿಡಿದಾಗ ಕಂಡು ಬಂದ ಆ ನೀಳಗೂದಲು ನನಗೆ ಬದುಕಿನ ಬೆನ್ನುಡಿಯ ಹಾಗೆ ಕಾಣಿಸಿತು!”

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: