'ಗುಡಿಸುವ ಮೊದಲು ಒಂದು ಮಾತು’ – ಜಯಶ್ರೀ ಹೇಳ್ತಾರೆ


ಜಯಶ್ರೀ ಭಟ್

ಸಿಂಗಪುರ

‘Every dog has its day’ ಎಂಬಂತೆ ಈಗ ಪೊರಕೆಗಳದ್ದೇ ಕಾಲ. ದಿನವೂ ಒಬ್ಬರಲ್ಲ ಒಬ್ಬ ಅತಿರಥ ಮಹಾರಥರು/ರತಿಯರು ಪೊರಕೆ ಹಿಡಿದು ಪೋಸ್ ಕೊಟ್ಟು ಸ್ವಚ್ಛ ಭಾರತ ಅಭಿಯಾನಕ್ಕೆ ಓಂ ಪ್ರಥಮ ಹಾಡುತ್ತಿದ್ದಾರೆ. ನನಗಂತೂ ಕಚಗುಳಿ ಇಡುವ ಕಾರ್ಟೂನ್ ಗಿಂತಲೂ ಇವು ತಮಾಷೆಯಾಗಿ ಕಾಣಿಸುತ್ತವೆ. ಇದೊಂದು ರೀತಿ ದುಃಖದ ನಗು! ( ಖುಶಿ ಹೆಚ್ಚಾಗಿ ಕಣ್ಣೀರು ಬಂದಂತೆ ದುಃಖಕ್ಕೂ ನಗು ಬರಬಹುದು ಅಲ್ವಾ?) ನಮ್ಮ ಪ್ರೀತಿಯ ಭರತ ಭೂಮಿಗೆ ಈಗಲಾದರೂ ಗುಡಿಸಿಕೊಳ್ಳುವ ಭಾಗ್ಯ ಬಂತಲ್ಲ ಎಂಬುದೇ ಒಂದು ಸಮಾಧಾನ. ತಡವಾಗಿದ್ದಂತೂ ಸುಳ್ಳಲ್ಲ. ಅರವತ್ತೆಂಟು ವರ್ಷ ಮೈಮೇಲೆ ನಾನಾ ರೀತಿಯ ಕೊಳೆ ಹೊತ್ತು ಮಳೆ ಬೆಳೆ ಕೊಡುತ್ತಿದ್ದ ಆ ಭೂತಾಯಿಯ ಸಹನೆ ಅಪಾರ. ಅವಳನ್ನು ಈಗಲಾದರೂ ಕೊಳೆ ಮುಕ್ತಗೊಳಿಸುತ್ತೇನೆಂದು ಒಬ್ಬ ವ್ಯಕ್ತಿ ಕೆಂಪು ಕೋಟೆಯ ಮೇಲೆ ನಿಂತು ಹೇಳಿದ್ದು ಹೊಸ ಸಂಚಲನ ಉಂಟು ಮಾಡಿದ್ದಂತೂ ಎಲ್ಲರೂ ಒಪ್ಪಬೇಕಾದ ಮಾತು.
ನನ್ನ ಭಾಷೆ, ನನ್ನ ತವರು, ನನ್ನ ಜನ, ನನ್ನ ದೇಶ…., ಹೀಗೆ ನಮಗೆ ಮಮಕಾರಗಳು ವಿಪರೀತ. ಅದರಲ್ಲೂ ಹೆಣ್ಣುಮಕ್ಕಳಾದ ನಮಗಂತೂ ಇನ್ನೂ ಜಾಸ್ತಿ. ಅದರಲ್ಲೂ ವಿದೇಶದಲ್ಲಿದ್ದರಂತೂ ಕೇಳುವುದೇ ಬೇಡ. ಹೀಗಿರುವಾಗ ಈಗ ಎಂಟೊಂಬತ್ತು ವರ್ಷಗಳ ಹಿಂದೆ ನಾನು ನನ್ನ ಅಮೆರಿಕನ್ ಸ್ನೇಹಿತೆಯೊಬ್ಬಳನ್ನು ಕರೆದುಕೊಂಡು ನನ್ನ ದೇಶ, ನನ್ನ ಊರು, ಮನೆ, ಜನ ಎಲ್ಲರನ್ನೂ ತೋರಿಸುತ್ತೇನೆಂದು ಅವಳನ್ನು ಬೆಂಗಳೂರಿಗೆ ಕರೆದುಕೊಂಡು ಬಂದೆ. ಈಗಾಗಲೇ ಆಫ್ರಿಕಾವನ್ನೂ ಸೇರಿ ಪ್ರಪಂಚದ ಮುಕ್ಕಾಲು ಭಾಗ ಓಡಾಡಿದ್ದ ಆಕೆ ಭಾರತವನ್ನು ಮಾತ್ರ ನೋಡಿರಲಿಲ್ಲ. ಬೆಂಗಳೂರಲ್ಲಿ ಅವಾಗಿನ್ನೂ ಹೊಸ ಏರ್ ಪೋರ್ಟ್ ಆಗಿರಲಿಲ್ಲ. ಅಲ್ಲಿನ ಕಿತ್ತುಹೋದ ರಸ್ತೆಯಲ್ಲಿ ನಾವಿಬ್ಬರೂ ನಮ್ಮ ನಮ್ಮ ಸೂಟ್ ಕೇಸ್ ಎಳೆಯುತ್ತಾ ಬರುತ್ತಿದ್ದಾಗ ’ನಮ್ ಕೈಲಾಗಲ್ಲ’ ಎಂದು ಆ ಪುಟ್ಟ ಪುಟ್ಟ ವೀಲ್ ಗಳು ಅಳತೊಡಗಿದ್ದವು. ಹೊರ ಬಂದು ಟ್ಯಾಕ್ಸಿ ಹತ್ತಿದರೆ ರಸ್ತೆಯಲ್ಲಿ ಕಿವಿ ಸಿಡಿದುಹೋಗುವಂತೆ ಕಿರುಚುತ್ತಿದ್ದ ಹಾರ್ನ್ ಗಳು, ’ನಮಗೆ ಮುಂದೆ ಹೋಗಲು ದಯವಿಟ್ಟು ದಾರಿ ಬಿಡಿ” ಎಂದು ಬೊಬ್ಬಿರಿಯುತ್ತಿದ್ದಂತೆ ಕೇಳಿಸುತ್ತಿದ್ದವು.

ಎಸಿ ಇಲ್ಲದ ಟ್ಯಾಕ್ಸಿಯಲ್ಲಿ ಕಿಟಕಿಯ ಗಾಜು ಕೆಳಗಿಳಿಸಿ ಕೂತ ನನ್ನ ಮೂಗಿಗೆ ದಟ್ಟ ಹೊಗೆಯ ಕಂಪು ತೂರಿ ಬಂತು. ಇದು ನಮ್ಮ ಬೆಂಗಳೂರಿನ ವಾಸನೆ ಎಂದು ನನ್ನ ಮನಸ್ಸು ಅರಳಿತು! ಆಚೀಚೆ ಹಾರಾಡುತ್ತಿದ್ದ ಪ್ಲಾಸ್ಟಿಕ್ ಚೀಲಗಳು ನನ್ನ ಮುಖಕ್ಕೇ ತಾಗಿ ಹೋದವು. ನನಗೇನೂ ವಿಶೇಷ ಅನ್ನಿಸಲಿಲ್ಲ. ಇನ್ನುಳಿದ ರಸ್ತೆ ಬದಿಯ ಕಸ ಕಡ್ಡಿಗಳು ನನ್ನ ಗಮನವನ್ನೂ ಸೆಳೆಯಲಿಲ್ಲ. ನನಗೆ ವರ್ಷಗಟ್ಟಲೆ ನೋಡದ ಬೆಂಗಳೂರಿನ ನೋಟವನ್ನು ಕಣ್ತುಂಬಿಕೊಳ್ಳುವ ಸಂಭ್ರಮ. ಸುಮಾರು ಅರ್ಧ ಪ್ರದಕ್ಷಿಣೆ ಹಾಕಿ ನಮ್ಮ ಜಾಗ ತಲುಪುತ್ತಿದ್ದಂತೆ ನನ್ನ ಚಿತ್ತ ಗೆಳತಿಯತ್ತ ಹೊರಳಿತು. ನಿಧಾನಕ್ಕೆ ಪಕ್ಕಕ್ಕೆ ಕುಳಿತ ಸ್ನೇಹಿತೆಯನ್ನು ಕೇಳಿದೆ ’ಹೇಗಿದೆ ಬೆಂಗಳೂರು?’ ಎಂದು. ಅವಳು ಭಾರತದ ಬಗ್ಗೆ ಬೇರೇನೋ ಕಲ್ಪಿಸಿಕೊಂಡಿರಬೇಕು. ಆದರೆ ಹಾಗಿಲ್ಲವೆಂಬ ವ್ಯಥೆಯಲ್ಲಿ ಹೇಳಿದಳು. ’ಆಫ್ರಿಕಾ ಇದ್ದಂತಿದೆ’ ಎಂದು! ನನಗೆ ಒಮ್ಮೆಲೆ ಯಾರೋ ಹಿಡಿದು ನೂಕಿದಂತೆನಿಸಿತು. ನಾವು ಸದಾ ಪಶ್ಚಿಮದತ್ತ ಮುಖ ಮಾಡಿ ನಾವು ಅವರಷ್ಟೇ, ಅಥವಾ ಅವರಂತೇ ಅಭಿವ್ರುದ್ಧಿ ಹೊಂದಿರುವ/ಹೊಂದುತ್ತಿರುವ ದೇಶ ಎಂಬ ಸುಳ್ಳಿನ ಸೋಗಿನಲ್ಲಿ ಬೆಚ್ಚಗೆ ಅವಿತು ಕುಳಿತವರು. ಈಗ ಅದ್ಯಾವ ಹಂಗೂ ಇಲ್ಲದೆ ಹೀಗೆ ಅವಳು ನಮ್ಮ ದೇಶದ ನಿಜ ಸ್ಥಿತಿಗೆ ಕನ್ನಡಿ ಹಿಡಿದಿದ್ದಳು.
ನಂತರ ಅವಳ ಜೊತೆ ರಾಜಸ್ತಾನ, ಗೋವಾ, ಸಾಗರದ ನಮ್ಮೂರಿನವರೆಗೆ ಓಡಾಡುವಾಗ ಎಲ್ಲಿಯೂ ಶೌಚಾಲಯವಿಲ್ಲದೆ ಬಯಲನ್ನೇ ಆಲಯ(ಶೌಚ)ವಾಗಿ ಮಾಡಿಕೊಂಡ ನಮ್ಮ ವ್ಯವಸ್ಥೆಯ ಬಗ್ಗೆ ಮೈಯೆಲ್ಲ ಹಿಡಿಯಾಗಿ ಅತ್ಯಂತ ನೋವಿನಿಂದ ಹೇಳಬೇಕಾಯಿತು. ಅಷ್ಟೇ ಅಲ್ಲ ಅವಳಿಗೂ ಟ್ರೈನಿಂಗ್ ಕೊಟ್ಟೆ. ಹೇಗೆ ದಾರಿಯಲ್ಲಿ ಮರ ಮಟ್ಟು ಕಂಡಾಗ, ಜನ ದಟ್ಟಣೆ ಇಲ್ಲದಾಗ ಒಂದು ಕ್ಷಣ ಕಣ್ಣು ಮುಚ್ಚಿ ಹೋಗಿ ಬಂದು ಬಿಡುವುದು, ಆಮೇಲೆ ಏನೂ ಆಗೇ ಇಲ್ಲವೆಂಬಂತೆ ’ಅದರ’ ಬಗ್ಗೆ ಮರೆತು ಬಿಡುವುದು. ಮತ್ತೆ ಮತ್ತೆ ನೀರು ಕುಡಿದು ಕಿಬ್ಬೊಟ್ಟೆ ಉಬ್ಬಿ, ಮತ್ತದೇ ನಿರ್ಜನ, ಮರಮಟ್ಟುಗಳಿರುವ ಜಾಗಕ್ಕಾಗಿ ಕಣ್ಣು ಚುರುಕಾಗುವವರೆಗೂ ನಮಗದರ ಚಿಂತೆ ಇಲ್ಲ. ಹೀಗೇ ನಾವು ಬದುಕುತ್ತಿದ್ದೇವೆ ಎಂದು ಹೇಳಬೇಕಾಯಿತು. ಅಷ್ಟೇ ಅಲ್ಲ ಎಲ್ಲಾದರೂ ಅಪ್ಪಿತಪ್ಪಿ ‘ಶೌಚಾಲಯ‘ ಅಂತೇನಾದ್ರೂ ಕಂಡರೂ ಅದರ ಆಸುಪಾಸಿನಲ್ಲೆಲ್ಲೂ ಹೋಗುವಂತಿಲ್ಲ ಎಂದೂ ಎಚ್ಚರಿಸಿದೆ. ಅಲ್ಲಿನ ರೌರವ ನರಕಕ್ಕೆ ಎಚ್ಚರತಪ್ಪಿ ಬೀಳಬೇಕಾಗುತ್ತದೆ ಎಂದೂ ಬಾಯಿಬಿಟ್ಟು ಹೇಳಬೇಕಾಯಿತು ಅವಳಿಗೆ.
ಅರವತ್ತು ವರ್ಷ ನಮ್ಮೆಲ್ಲ ಸಮಸ್ಯೆಗಳನ್ನೂ ತಟ್ಟಿ ಹಾರಿಸುತ್ತಾ ಪೊಳ್ಳು ವಾದ ಮಂಡಿಸುತ್ತಾ, ಕಸ ಗುಡಿಸಿದರೆ ಸಾಕೆ?, ಶೌಚಾಲಯ ಕಟ್ಟಿಸಿದರೆ ಸಾಕೆ? ಬರೀ ಪೊರಕೆ ಹಿಡಿದು ಪೋಸು ಕೊಟ್ಟರೆ ಸಾಕೆ? ಎನ್ನುತ್ತಾ ಸಮಸ್ಯೆಯ ಆಳ ಅಗಲಗಳನ್ನು ಅಳೆಯುತ್ತಾ, ಅಂಕಿ ಅಂಶಗಳನ್ನು ತೋರಿಸುತ್ತಾ, ಎಲ್ಲವನ್ನೂ ನಕಾರಾತ್ಮಕವಾಗಿ ಕಾಣುವ ಗುಣ ಬೆಳೆಸಿಕೊಳ್ಳುತ್ತಾ, ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಲೇ ಸಾಗುತ್ತಿದ್ದೇವೆ. ಈಗಲಾದರೂ ಮೈಕೊಡವಿ ನಿಂತು ‘ಪ್ರಜೆ‘ ಗಳಿಂದ ನಾಗರಿಕರಾಗುವತ್ತ ಸಾಗೋಣ ಎಂದು ಎಲ್ಲರಿಗೂ ಅನ್ನಿಸಿದರೆ ಸಾಕು. ನಾಗರಿಕ ಪ್ರಜ್ನೆ ಮೈದಳೆದರೆ ಮುಂದಿನ ದಾರಿ ಅಂಥಾ ಕಷ್ಟದ್ದೇನೂ ಅಲ್ಲ. ಅಷ್ಟಕ್ಕೂ ನಾವೆಲ್ಲರೂ ನಮ್ಮ ನಮ್ಮ ಮನೆ, ಅಂಗಳ ನಿತ್ಯವೂ ಗುಡಿಸಿ, ರಂಗೋಲಿ ಹಾಕುವ ಸಂಸ್ಕ್ರತಿಯುಳ್ಳವರೇ. ಇಲ್ಲಿ ಮೇಲು ಕೀಳು ಎಂಬ ಭೇದವೇನೂ ಇದ್ದಂತಿಲ್ಲ. ಎಲ್ಲರಿಗೂ ಸ್ವಚ್ಚತೆ ಪ್ರಿಯವೇ. ಮನೆಯೊಳಗಿನ ಸ್ವಚ್ಛತೆ ಹೊರಗೆ ರಸ್ತೆ, ಗಲ್ಲಿ, ಕಛೇರಿ, ಮಾರ್ಕೆಟ್ಟಿನವರೆಗೂ ಮುಟ್ಟಲಿ ಎಂಬುದೇ ನಮ್ಮೆಲ್ಲರ ಆಶಯವಾಗಲಿ. ಪೊರಕೆ ಸರ್ವಶಕ್ತವಾಗಲಿ.
ಆದರೂ ಗುಡಿಸುವ ಮುನ್ನ ಒಂದು ಮಾತು. ಅನೇಕ ಮುಂದುವರಿದ, ಸ್ವಚ್ಛ, ಸುಂದರ ದೇಶಗಳನ್ನು ಓಡಾಡಿದ್ದೇನೆ. ಅಂತಹದೇ ಒಂದು ದೇಶದಲ್ಲಿ ವಾಸವಾಗಿದ್ದೇನೆ. ಇಲ್ಲೆಲ್ಲ ಮಳೆ ಬಂದು ಹೋದರೆ ಕಾಲಿಗೆ ಕೆಸರು ಮೆತ್ತುವುದಿಲ್ಲ. ಹೆದ್ದಾರಿಗಳು ಅಂಗಳ ಸಾರಿಸಿಟ್ಟಂತೆ ಕಾಣುತ್ತವೆ. ಆದರೆ ಇಂತಹ ಕನ್ನಡಿಯಂತ ದೇಶದಲ್ಲೂ ಕಾಣದ ಆತ್ಮೀಯತೆ ಎಂಬ ಮುತ್ತು, ಮಾನವೀಯ ಸ್ಪಂದನೆ ಎಂಬ ರತ್ನ, ಹಮ್ಮು ಬಿಮ್ಮುಗಳಿಲ್ಲದೆ ಒಬ್ಬರಿಗೊಬ್ಬರು ತೆರೆದುಕೊಳ್ಳುವ ಸಲುಗೆ ಎಂಬ ವೈಢೂರ್ಯ ಇವೇ ಮುಂತಾದ ಅನೇಕ ಬೆಲೆಬಾಳುವ ಹರಳುಗಳು ನಮ್ಮ ದೇಶದ ಹಾದಿಬದಿಯ ಉದ್ದಗಲಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ನೀವೆಲ್ಲ ಕಸ ಗುಡಿಸುವ ಜೋಶಿನಲ್ಲಿ ಇವನ್ನೆಲ್ಲ ಗುಡಿಸಿ ಹಾಕಬಾರದು ಎಂಬುದೇ ನನ್ನ ಕಳಕಳಿಯ ಮನವಿ. ಗುಡಿಸುವ ಮುನ್ನ ನನ್ನ ಮಾತುಗಳು ನಿಮ್ಮ ಹ್ರುದಯ ತಟ್ಟುವುದೇ?
 

‍ಲೇಖಕರು G

June 5, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    ನಿಜ ನೀವು ಬರೆದಿರೋದು.

    ಪ್ರತಿಕ್ರಿಯೆ
  2. Gn Nagaraj

    ಕಸದ ಜೊತೆಗೇ ವಜ್ರ ವೈಡೂರ್ಯಗಳನ್ನು ಗುಡಿಸಿ ಹಾಕದಿರುವ ಯಾವುದಾದರೂ ನಿಮ್ಮ ಪ್ರವಾಸ , ವಿದೇಶೀ ವಾಸದಲ್ಲಿ ಕಂಡಿದ್ದೀರಾ ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: