ಸಂಧ್ಯಾರಾಣಿ ಕಾಲಂ : ನನ್ನನ್ನೂ ಕಾಡಿದ ಮೋಹಿನಿ


ಲಂಕೇಶ್ ಪತ್ರಿಕೆಯಲ್ಲಿ ಚಂದ್ರಶೇಖರ ಆಲೂರರು ಒಂದು ಪ್ರಬಂಧ ಬರೆದಿದ್ದರು, ’ನಿರಂತರ ಕಾಡುವ ಮೋಹಿನಿ’ ಅಂತ. ಆಗ ಪತ್ರಿಕೆಯಲ್ಲಿ ನಾನು ತಪ್ಪದೆ ಓದುತ್ತಿದ್ದ ಅಂಕಣ ’ಜಾಣ ಜಾಣೆಯರ ಪ್ರಬಂಧ’. ಅರೆ ಇದ್ಯಾರಪ್ಪ ಆಲೂರರನ್ನು ಕಾಡಿದ ಮೋಹಿನಿ ಎಂದು ಲೇಖನ ಓದಲು ಪ್ರಾರಂಭಿಸಿದ್ದೆ. ಪ್ರಬಂಧದಲ್ಲಿ ಆಲೂರರು ಬರೆದಿದ್ದು ನಮ್ಮಂತಹ ತಾಲೂಕು, ಜಿಲ್ಲಾ ಕೆಂದ್ರದಲ್ಲಿ ಓದಿದವರನ್ನು ನಿರಂತರ ಕಾಡುವ ಮೋಹಿನಿ ಇಂಗ್ಲಿಷಿನ ಬಗ್ಗೆ. ಈ ಭಾಷೆ ತನ್ನ ಕಣ್ಣ ಸನ್ನೆ, ಹೆಜ್ಜೆ ಸದ್ದನ್ನು ಅರ್ಥ ಮಾಡಿಕೊಳ್ಳದವರಲ್ಲಿ ಹೇಗೆ ಒಂದು ಕೀಳರಿಮೆ ಹುಟ್ಟಿಸಿಬಿಡುತ್ತದೆ ಎಂಬುವುದರ ಬಗ್ಗೆ… ’ಎಂಥ ದಟ್ಟ ಪ್ರತಿಭಾವಂತರನ್ನೂ, ಸಾಮರ್ಥ್ಯಶಾಲಿಗಳನ್ನೂ ಈ ದರಿದ್ರದ ಇಂಗ್ಲಿಷ್ ಭಾರತದಲ್ಲಿ ಕಾಡುವುದು ಹೀಗೆ, ಬೆಟ್ಟದಂತಹ ವ್ಯಕ್ತಿತ್ವವನ್ನು ಹಿಡಿಗಾತ್ರ ಮಾಡುವುದು ಈ ಇಂಗ್ಲಿಷ್’ ಎಂದು ಅವರು ಬರೆಯುತ್ತಾರೆ.
ತನ್ನ ’ಹರ್ಯಾಣ್ವಿ ಇಂಗ್ಲಿಷ್’ ನ ಕಾರಣಕ್ಕೆ, ಇಂಗ್ಲಿಷ್ನಲ್ಲಿ ಪ್ರಭುತ್ವ ಇಲ್ಲದ ಕಾರಣಕ್ಕೆ ಕಪಿಲ್ ದೇವ್ ಹೇಗೆ, ತಂಡದ ಎಲ್ಲರೆದುರು ’ಸನ್ನಿ’ ಗವಾಸ್ಕರನ ಕ್ಷಮೆ ಕೇಳಲು ಸಿದ್ಧರಾದರು, ನಮ್ಮೆಲ್ಲರ ಹೀರೋ ವಿಶಿ, ಜಿ ಆರ್ ವಿಶ್ವನಾಥ್ ಹೇಗೆ ಆಡಿದ ಮೊದಲ ಟೆಸ್ಟ್ ನಲ್ಲಿ ಸೆಂಚುರಿ ಭಾರಿಸಿದ್ದರೂ ಸಹ ಆಕಾಶವಾಣಿಯವರು ಸಂದರ್ಶನದಲ್ಲಿ ಇಂಗ್ಲಿಷ್ ನಲ್ಲಿ ಪ್ರಶ್ನೆ ಕೇಳಲು ಪ್ರಾರಂಭಿಸಿದ ಕೂಡಲೆ ಬೆವರಲು ಶುರು ಮಾಡಿದರು ಎಂದು ಅವರು ವಿವರಿಸಿದ್ದರು.
ಓದುತ್ತಿದ್ದ ನನಗೆ ಕಪಿಲ್ ಮತ್ತು ವಿಶ್ವನಾಥರ ಮೇಲೆ ಇನ್ನಿಲ್ಲದ ಮಮಕಾರ ಮತ್ತು ಅನುಕಂಪ ಬಂದುಬಿಟ್ಟಿತ್ತು. ಏಕೆಂದರೆ ಆ ಎಲ್ಲಾ ಅವಮಾನಗಳೂ ನನ್ನವೂ ಆಗಿದ್ದವು. ನನ್ನ ಕಣ್ಣಲ್ಲೂ ಇಂಗ್ಲಿಷ್ ಎಂಬ ನಿರ್ದಯಿ ಹೀಗೆ ಹನಿ ಮೂಡಿಸಿತ್ತು.
ಶಾಲೆಗೆ ಸೇರಿಸುವಾಗ ತಮ್ಮ ಎಲ್ಲಾ ಸಹೋದ್ಯೋಗಿಗಳು ತಮ್ಮ ತಮ್ಮ ಮಕ್ಕಳನ್ನು ಸೇರಿಸಿದ್ದ ಹಾಗೆ ಅಪ್ಪ ನನ್ನನ್ನೂ ಕಾನ್ವೆಂಟಿಗೇ ಸೇರಿಸಿದ್ದರು. ಅಪ್ಪ ಆಗ ಕೆಲಸದಲ್ಲಿದ್ದದ್ದು ಕೆಜಿಎಫ್ ನಲ್ಲಿ. ಹೇಳಿ ಕೇಳಿ ಅದು ಬ್ರಿಟಿಷರು ಇಲ್ಲಿದ್ದಾಗ ಅವರ ಭಾಷೆ, ಸಂಸ್ಕೃತಿಯನ್ನು ಹೀರಿಕೊಂಡು ಬೆಳೆದ ಊರು. ಅಲ್ಲಿದ್ದ ಚಿನ್ನದ ಗಣಿಯ ಕಾರಣದಿಂದ ಅಲ್ಲಿ ಗಣನೀಯ ಸಂಖ್ಯೆಯಲ್ಲಿ ಬ್ರಿಟಿಷರು ಹಲವಾರು ದಶಕಗಳಿಂದ ನೆಲಸಿದ್ದರು. ಬ್ರಿಟಿಷರು ಮತ್ತು ಭಾರತೀಯರ ಜಂಟಿ ಸಂಸ್ಕೃತಿಯ ಕುರುಹಾಗಿ ಸುಮಾರು ಜನ ಆಂಗ್ಲೋ ಇಂಡಿಯನ್ಸ್ ಇನ್ನೂ ಇದ್ದರು, ಅವರದೇ ಪ್ರತ್ಯೇಕ ಕಾಲನಿಗಳಿದ್ದವು, ತುಂಬಾ ಒಳ್ಳೆಯ ಕಾನ್ವೆಂಟುಗಳಿದ್ದವು.
ಪಕ್ಕಾ ಬ್ರಿಟಿಷ್ ಶೈಲಿಯ ಶಿಕ್ಷಣ, ವಾರಕ್ಕೊಮ್ಮೆ ಪಿಯಾನೋ ಕ್ಲಾಸು, ಡೈನಿಂಗ್ ಎಟಿಕೇಟು ಎಲ್ಲಾ ಕಲಿಸುತ್ತಿದ್ದ ಶಾಲೆ. ಅಷ್ಟರಲ್ಲಿ ಅಪ್ಪ ಕೆಲಸದಲ್ಲಿದ್ದ ವಿದ್ಯುಚ್ಛಕ್ತಿ ನಿಗಮ ತನ್ನ ಕೆಲಸದವರ ಮಕ್ಕಳಿಗೆಂದು ಕಾಲನಿಯಲ್ಲಿ ಒಂದು ಕನ್ನಡ ಮಾಧ್ಯಮ ಶಾಲೆ ಪ್ರಾರಂಭಿಸಿತು. ಇದು ಕೇವಲ ಲೈನ್ ಮನ್ ಗಳ, ಲೇಬರ್ ಗಳ ಮಕ್ಕಳಿಗಲ್ಲ, ಆಡಳಿತ ವರ್ಗದಲ್ಲಿರುವವರೂ ಸಹ ತಮ್ಮ ತಮ್ಮ ಮಕ್ಕಳನ್ನು ಇಲ್ಲೇ ಸೇರಿಸಿ, ಶಾಲೆಯನ್ನು ಬೆಳೆಸಬೇಕು ಎಂದು ಒಂದು ಸುತ್ತೋಲೆ ಸಹ ಹೊರಡಿಸಿತ್ತಂತೆ. ಇನ್ನೊಂದು ಯೋಚನೆ ಮಾಡದೆ ಅಪ್ಪ ನನ್ನನ್ನು ಕಾನ್ವೆಂಟಿನಿಂದ ಬಿಡಿಸಿ ಇಲ್ಲಿಗೆ ತಂದು ಸೇರಿಸಿದ್ದರು.
ಅಷ್ಟರಲ್ಲಾಗಲೇ ಶಾಲೆಯಲ್ಲಿರಬೇಕಾದಷ್ಟೂ ಹೊತ್ತು, ಆಡಬೇಕಾದ ಎಲ್ಲಾ ಮಾತುಗಳನ್ನೂ ತಲೆಯಿಂದ ಜಾರಿಸಿ, ತುಟಿಯಿಂದ ಹೊರದಾಟಿಸುವ ಮೊದಲೇ ಇಂಗ್ಲೀಷಿಗೆ ತರ್ಜುಮೆ ಮಾಡಲೇಬೇಕಾದ ನಿತ್ಯಸಂಕಟದಿಂದ ಪಾರಾದರೆ ಸಾಕು ಎಂದು ಒದ್ದಾಡುತ್ತಿದ್ದ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಕನ್ನಡ ಮಾತನಾಡಿದರೆ ಅಲ್ಲಿ ಫೈನ್ ಬೇರೆ ಕಟ್ಟಬೇಕಿತ್ತು. ನೆಮ್ಮದಿಯಾಗಿ ಕನ್ನಡ ಶಾಲೆಗೆ ಹೋಗಿ ಬರತೊಡಗಿದೆ. ಇದರಿಂದ ಆದ ಒಂದು ದೊಡ್ಡ ಉಪಕಾರವೆಂದರೆ ಮೂರನೇ ಕ್ಲಾಸಿಗೆ ಬರುವಷ್ಟರಲ್ಲಿ ನಾನು ಆರಾಮಾಗಿ ಬಾಲ ಮಿತ್ರ, ಚಂದಮಾಮ ಓದತೊಡಗಿದ್ದೆ. ಎಲ್ಲಾ ಚೆನ್ನಾಗಿಯೇ ಇತ್ತು, ನಾನು ಒಂದಾದ ಮೇಲೊಂದರಂತೆ ಪುಸ್ತಕ ಓದುತ್ತಾ, ಶಾಲೆಯ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುತ್ತಾ, ತೆರಪಿಲ್ಲದಂತೆ ಮಾತನಾಡುತ್ತಾ ಸುಖವಾಗಿ ದಿನಕಳೆಯುತ್ತಿದ್ದೆ.
ಆ ಸುಖ ಇದ್ದದ್ದು ನಾನು ಏಳನೇ ತರಗತಿ ಮುಗಿಸುವವರೆಗೆ ಮಾತ್ರ. ಹೈಸ್ಕೂಲಿಗೆ ಇಂಗ್ಲೀಷ್ ಮೀಡಿಯಂ ತೆಗೆದುಕೊಂಡಿದ್ದೆ. ಏಳನೇ ಕ್ಲಾಸಿನಲ್ಲಿ ೯೪ % ಅಂಕ ತೆಗೆದಿದ್ದ ನಾನು ಇಲ್ಲಿ ತಬ್ಬಲಿಯಾಗಿ ಹೋಗಿದ್ದೆ. ಕಾನ್ವೆಂಟಿನಿಂದ ಬಂದ ಹುಡುಗಿಯರು ರಾಗ ಎಳೆದಂತೆ ಇಂಗ್ಲಿಷ್ ಮಾತನಾಡುತ್ತಿದ್ದರೆ ನಾನು ಮೂಕಿಯಾಗಿ ಹೋಗಿದ್ದೆ. ಬಯಾಲಜಿ ಮೊದಲ ಟೆಸ್ಟ್ ನಲ್ಲಿ decay ಎಂದು ಬರೆಯಲು DK ಎಂದು ಬರೆದುಬಿಟ್ಟಿದ್ದೆ. ಮೇಡಂ ಹೇಳಿದ್ದ ನೋಟ್ಸ್ ಬರೆದುಕೊಳ್ಳುತ್ತಿದ್ದ ನಾನು, ಅ ಪದವನ್ನು ಹಾಗೇ ಬರೆದುಕೊಂಡಿದ್ದೆ. ತರಗತಿಯಲ್ಲೇ ಅದರ ಮೌಲ್ಯಮಾಪನ ಮಾಡುತ್ತಿದ್ದ ಮೇಡಂ ಜೋರಾಗಿ ಆ ಪದ ಓದಿ, ತಿರಸ್ಕಾರದ ನಗೆ ನಕ್ಕು, ‘these vernacular girls…’ ಅಂತ ಅಂದಾಗ, ಎಲ್ಲಿ ನನ್ನ ಹೆಸರು ಹೇಳಿಬಿಡುತ್ತಾರೋ ಎಂದು ಬೆವರುತ್ತಿದ್ದ ಅಂಗೈಯಲ್ಲಿ ಜೀವ ಹಿಡಿದುಕೊಂಡು ಕಾದಿದ್ದೆ.

ಸರಿ ಮತ್ತೆ ಶುರು ಆಯಿತು ನಿರಂತರ ಅನುವಾದ. ಓದುವ ಮೇಜಿನ ಮೇಲೆ ಒಂದು ನಿಘಂಟು, ತಲೆ ಒಳಗೆ ಮತ್ತೊಂದು. ಪದದಿಂದ ಪದಕ್ಕೆ, ವಾಕ್ಯದಿಂದ ವಾಕ್ಯಕ್ಕೆ, ಓದು, ಅನುವಾದ ಮಾಡಿಕೋ, ಅರ್ಥ ಮಾಡಿಕೋ. ಮನನ ಮಾಡಿಕೋ. ಮತ್ತೆ ಪರೀಕ್ಷೆ ಬರೆಯುವಾಗ ಈ ಕ್ರಿಯೆ ಸಂಪೂರ್ಣ ಉಲ್ಟ, ನೆನಪಿಸಿಕೋ, ಇಂಗ್ಲಿಷಿಗೆ ಅನುವಾದ ಮಾಡಿಕೋ, ಪುಸ್ತಕಕ್ಕಿಳಿಸು. ಎಂಟನೆ ತರಗತಿಯನ್ನು ಒದ್ದಾಡುತ್ತಲೇ ಮುಗಿಸಿದ್ದೆ. ಒಂಬತ್ತನೆಯ ತರಗತಿಗೆ ಹೋಗುವ ವೇಳೆಗೆ ಸ್ವಲ್ಪ ಸುಧಾರಿಸಿಕೊಂಡಿದ್ದೆ. ಒಂಬತ್ತನೆಯ ತರಗತಿ ಪರೀಕ್ಷೆ ಮುಗಿದು, ಫಲಿತಾಂಶ ಪ್ರಕಟ ಆಗಿತ್ತು, ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಎನ್ ಸಂಧ್ಯಾರಾಣಿ ಅನ್ನುವ ಹೆಸರಿತ್ತು. ಅದನ್ನು ನಾನು ಇನ್ನೂ ಪೂರ್ತಿ ನಂಬಿರಲಿಲ್ಲ, ಅಷ್ಟರಲ್ಲಿ ನಮ್ಮ ತರಗತಿಯಲ್ಲಿದ್ದ ಮತ್ತೊಬ್ಬ ’ಸಂಧ್ಯಾರಾಣಿ’ ಎನ್ನುವ ಹುಡುಗಿ, ಅದನ್ನು ನೋಡಿ, ನನ್ನನ್ನೊಮ್ಮೆ ನೋಡಿ, ಅನುಮಾನವೇ ಇಲ್ಲದ ದನಿಯಲ್ಲಿ, ’Oh they must have mixed up the initials.., ಇದು ನನ್ನ ಹೆಸರು, ತಪ್ಪಿ ನಿನ್ನ ಇನಿಶಿಯಲ್ ಬರೆದು ಬಿಟ್ಟಿದ್ದಾರೆ, ಬಾ ಹೋಗಿ ಕರೆಕ್ಶನ್ ಮಾಡಿಸೋಣ’ ಎಂದು ಆಜ್ಞಾಪಿಸಿದಾಗ ಪರಮ ದಡ್ಡಿಯ ಹಾಗೆ, ನನ್ನ ಮಾರ್ಕ್ಸ್ ಕಡಿಮೆ ಮಾಡಿಸಿಕೊಳ್ಳಲು ಅವಳ ಹಿಂದೆ ತಲೆತಗ್ಗಿಸಿ ಕುರಿಯಂತೆ ನಡೆದಿದ್ದೆ! ಅಲ್ಲಿ ಹೋದಮೇಲೆ ಅದು ನನ್ನದೇ ಹೆಸರು, ಅವು ನನ್ನವೇ ಅಂಕ ಎಂದು ಗೊತ್ತಾದ ಮೇಲೂ ನನ್ನ ಹಿಂಜರಿಕೆ ಕಡಿಮೆ ಆಗಿರಲಿಲ್ಲ…
ಹೈಸ್ಕೂಲು ಮುಗಿಯುವಷ್ಟರಲ್ಲಿ ಇಂಗ್ಲೀಷು ಸರಾಗವಲ್ಲದಿದ್ದರೂ ಅರ್ಥವಾಗುವಷ್ಟರ ಮಟ್ಟಿಗಂತೂ ಆಗಿತ್ತು. ಈ ಎಲ್ಲಾ ಅವಮಾನಗಳ ಹಿನ್ನಲೆ ಇದ್ದ ನನಗೆ ಕಪಿಲ್, ವಿಶ್ವನಾಥರ ಹಿಂಜರಿಕೆ, ಸಂಕಟ ಅರ್ಥ ಆಗದೆ ಇರಲು ಸಾಧ್ಯವೇ ಇರಲಿಲ್ಲ. ಪದವಿ ಆಯಿತು, ನನ್ನ ಇಂಗ್ಲೀಷ್ ತಕ್ಕ ಮಟ್ಟಿಗೆ ಚೆನ್ನಾಗೇ ಇದೆ ಅನ್ನೋ ಭಾವನೆ. ಆಮೇಲೆ ಮಾಸ್ಟರ್ಸ್ ಓದಿದೆ, ಅಯ್ಯೋ ಇನ್ನೇನು, ಪೋಸ್ಟ್ ಗ್ರಾಜುಯೇಶನ್ ಮಾಡಿದ್ದೀನಿ ನಾನು, ’ನಾವು ಯಾರ್ಗೂ ಕಮ್ಮಿ ಇಲ್ಲ’ ಅಂದ್ಕೊಂಡೆ ಒಂದು ಇಂಟರ್ವ್ಯೂ ಗೆ ಹೋಗಿದ್ದೆ, ಒಂದು ಪತ್ರ ಡ್ರಾಫ್ಟ್ ಮಾಡಲು ಹೇಳಿದರು, ಎರಡೇ ನಿಮಿಷಕ್ಕೆ, ಒಂದು ಅಲ್ಪ ವಿರಾಮ ಸಹ ಹೆಚ್ಚು ಕಡಿಮೆ ಆಗದಂತೆ ಮಾಡಿಕೊಟ್ಟೆ. ಮೊದಲ ಸಂಬಳ ಬಂದರೆ ಹೇಗೆ ಖರ್ಚು ಮಾಡೋದು ಅಂತ ಮನಸ್ಸಿನಲ್ಲೆ ಬಜೆಟ್ ಮಂಡಿಸುತ್ತಾ ಕೂತಿದ್ದೆ.. ಅಷ್ಟರಲ್ಲೇ ಇಂಗ್ಲೀಷಿನಲ್ಲಿ ಮಾತಾಡೋ ಇಂಟರ್ವ್ಯೂ ಶುರು ಆಯ್ತಲ್ಲ. ನಾನು ಮತ್ತೆ ಅದೇ ಹೈಸ್ಕೂಲಿನ ಕೊನೆಯ ಬೆಂಚಿನಲ್ಲಿ, ಬೆವರುತ್ತಿದ್ದ ಅಂಗೈಯಲ್ಲಿ, ನೀಲಿ ಲಂಗ ಅವಚಿ ಹಿಡಿದ ಹುಡುಗಿ ಆಗಿಹೋಗಿದ್ದೆ..

ಜಿ ಎನ್ ಮೋಹನ್ ಅವರು ಬರೆದ ಕವನದಂತೆ ಇಂಗ್ಲೀಷ್ ಎನ್ನುವ ಇಂಗ್ಲೀಷು, ’ಮದುವೆ ಆದೊಡನೆ ಹಳೆಯ ಪ್ರೇಯಸಿಯರೆಲ್ಲಾ ಕೈ ಕೊಟ್ಟು ಖಾಲಿ ಆದಂತೆ / ಒಂದು ಕ್ಷಣ ಇಲ್ಲಿದ್ದು ಇನ್ನೊಂದು ಕ್ಷಣ ಅಲ್ಲಿ ಕುಣಿದಾಡುವ ಬ್ರಿಗೇಡಿನ ಮಿನಿ ಲಂಗದ ಪಾತರಗಿತ್ತಿಯರಂತೆ / ಒಂದು ಕ್ಷಣ ವಿಶ್ವ ರೂಪವ ತೋರಿ ಮತ್ತೆ ಮರುಕ್ಷಣ ಮುಂದಿನ ವಾರಕ್ಕೆ ಮುಂದೂಡಿದ ಟಿವಿ ಮಹಾಭಾರತದಂತೆ / ಇದೀಗ ಇತ್ತು ಈ ಕ್ಷಣದ ಹಿಂದೆ ಕಂಠದಲಿ ಕುಣಿದಾಡಿ ಅಂತರ್ಗತ’ ಅನ್ನುವ ಹಾಗೆ ಮಾಯವಾಗಿಬಿಟ್ಟಿತ್ತು. ಅರೆ ಕಾಲೇಜಿನಲ್ಲಿ, ಪರೀಕ್ಷೆ ಬರೆಯುವಾಗ ಹೊತ್ತು ಹೊತ್ತಿಗೆ ಕರೆದಾಗ ಓಡಿ ಬರುತ್ತಿದ್ದ ಮುದ್ದು ಬೆಕ್ಕಿನಂತಹ ಇಂಗ್ಲೀಷು ಈಗ ಐನ್ ಹೊತ್ತಿನಲ್ಲಿ ಯಾಕಪ್ಪ ಕೈಕೊಡ್ತಾ ಇದೆ, ಒಂದು ಇಂಟರ್ವ್ಯೂ ಮುಗಿದರೆ ಸಾಕು ಅಂದುಕೊಳ್ಳುತ್ತಿದ್ದೆ. ನನ್ನ ಪುಣ್ಯ, ನನ್ನ ಆಗಿನ ಕೆಲಸಕ್ಕೆ ಮಾತು ಎಕ್ಸ್ಟ್ರಾ ಫಿಟ್ಟಿಂಗ್ ಆಗಿದ್ದರಿಂದ ನನಗೆ ಕೆಲಸ ಏನೋ ಸಿಕ್ಕಿಬಿಟ್ಟಿತ್ತು.
ಇಂಗ್ಲೀಷ್ ಕಲಿಯಬೇಕು ಎಂದು ಹೊರಟಾಗ ಒಬ್ಬ ಟೀಚರ್ ನೀನು ಯಾಕೆ ಇಂಗ್ಲೀಷ್ ಪುಸ್ತಕಗಳನ್ನು ಓದಬಾರದು ಎಂದು ಸಲಹೆ ಕೊಟ್ಟಾಗ, ತೂಕಡಿಸುವವಳಿಗೆ ಹಾಸಿಗೆ ಅಷ್ಟೇ ಅಲ್ಲ, ಹಾಸಿಗೆ ಹಾಸಿ, ರಜಾಯಿ ಹೊದ್ದಿಸಿ, ಕಿಟಕಿ ಪರದೆ ಎಳೆದು, ಫ್ಯಾನ್ ಹಾಕಿ ಮಲಗಿಸಿದ ಹಾಗೆ ಎನ್ನುವಂತೆ ನಾನು ಪುಸ್ತಕಗಳನ್ನು ಓದುತ್ತಾ ಹೋದೆ. ಆ ನಂತರದ ದಿನಗಳಲ್ಲಿ ನನಗೆ ಸ್ಪಷ್ಟವಾದದ್ದು ಇಂದು ಕಾಲೇಜು, ಯೂನಿವರ್ಸಿಟಿಗಳಲ್ಲಿ ಇಂಗ್ಲೀಷ್ ಪಾಠ ಮಾಡುವ, ಪ್ರಬಂಧ ಮಂಡಿಸುವ, ಡಾಕ್ಟರೇಟ್ ಪಡೆಯುವ ಮುಕ್ಕಾಲು ವಾಸಿ ಪ್ರಾದ್ಯಾಪಕರು ಓದಿರುವುದು ಕನ್ನಡ ಮಾಧ್ಯಮದಲ್ಲಿಯೇ.. ಮತ್ತು ಎಲ್ಲಾ ಭಾಷೆಗಳ ಹಾಗೆ ಇಂಗ್ಲೀಷ್ ಸಹ ಒಂದು ಭಾಷೆ ಅಷ್ಟೆ ಮತ್ತು ಅದನ್ನು ಹಾಗೆ ಪರಿಗಣಿಸಿದಾಗ ಮಾತ್ರ ಅದನ್ನು ಕಲಿಯುವುದು ಸುಲಭ ಅಂತ.
ನಾನು ಹೇಳಿದ ಚಂದ್ರಶೇಖರ ಆಲೂರರ ಪ್ರಬಂಧ ಬಂದದ್ದು ಸುಮಾರು ೮೭- ೮೮ ರಲ್ಲಿ. ಅಂದರೆ ಸುಮಾರು ೨೬ ವರ್ಷಗಳ ಹಿಂದೆ. ನನಗೆ ವಿಸ್ಮಯ ಆದದ್ದು ಈಗಲೂ ಆ ಪ್ರಬಂಧ ಸಕಾಲಿಕವೇ ಅನ್ನುವ ಕಾರಣಕ್ಕೆ. ರಾಜಧಾನಿಯಲ್ಲಿ, ಪಟ್ಟಣಗಳಲ್ಲಿ ಓದುವ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಬಿಡಿ. ಆದರೆ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಓದಿರುವ ವಿದ್ಯಾರ್ಥಿಗಳು ಇಂದಿಗೂ ನಗರಕ್ಕೆ ಬಂದಾಗ ಅವರನ್ನು ಮೊದಲು ಸವಾಲು ಹಾಕಿ, ಗೆರೆಯಾಚೆಗೆ ನಿಲ್ಲಿಸುವುದು ಇದೇ ಇಂಗ್ಲೀಷು. ಹಾಗೆಂದು ಅವರಿಗೆ ತಮ್ಮ ಕೆಲಸಕ್ಕೆ ಬೇಕಾದ ಇಂಗ್ಲೀಷು ಬರುವುದಿಲ್ಲ ಎಂತಲ್ಲ, ಬರುತ್ತದೆ, ಆದರೆ ರಾಷ್ಟ್ರಭಾಷೆ ಹಿಂದಿ ಬರುವುದಿಲ್ಲ ಎನ್ನುವಾಗ, ನೆರೆ ರಾಜ್ಯದ ತಮಿಳು, ತೆಲುಗು ಬರುವುದಿಲ್ಲ ಎಂದು ಹೇಳುವಾಗ ಕಾಡದ ಸಂಕೋಚ ಇಂಗ್ಲೀಷ್ ಸರಾಗವಾಗಿ ಮಾತನಾಡಲು ಬರುವುದಿಲ್ಲ ಎಂದಾಗ ಬಂದುಬಿಡುತ್ತದೆ.
ಹಾಗಿರುವಾಗ ಪ್ರಾಥಮಿಕ ಶಿಕ್ಷಣ ಯಾಕೆ ಮಾತೃ ಭಾಷೆಯಲ್ಲೆ ಆಗಬೇಕು ಎಂದು ಪಟ್ಟು ಹಿಡಿಯಬೇಕು? ಯಾಕೆ ಮಕ್ಕಳು ಇಂಗ್ಲೀಷಿನಲ್ಲೇ ಕಲಿಯಲಿ ಅಂತ ಬಿಟ್ಟುಬಿಡಬಾರದು? ನಮ್ಮ ರೋಮ್ಯಾಂಟಿಕ್ ಅಭಿಪ್ರಾಯಗಳಿಗೆ ಮಕ್ಕಳನ್ನು ಯಾಕೆ ಬಲಿಪಶು ಮಾಡಬೇಕು? ಈ ಪ್ರಶ್ನೆಗೆ ಉತ್ತರ ಕೊಟ್ಟಿದ್ದು ಒಂದು ಪುಟಾಣಿ. ಪಕ್ಕದ ಮನೆಯಲ್ಲಿ ಅಮ್ಮ ಮಗುವಿಗೆ Digestive System ಬಗ್ಗೆ ಪಾಠ ಮಾಡ್ತಾ ಇದ್ದಳು. Explain Digestive process ಎಂದಾಗ ಆ ಪುಟ್ಟಿ, when food enters mouth, it mixes with, mixes with … ಎಂದು ಹೆಣಗಾಡುತ್ತಿತ್ತು. ’ಅಲ್ಲಮ್ಮ, ನಿನಗೆ ಇಷ್ಟು ಸಲ ಹೇಳಿದರೂ ವಿಷಯಾನೆ ಅರ್ಥ ಆಗ್ತಾ ಇಲ್ಲವಲ್ಲ’ ಅಂದರೆ, ’ಅರ್ಥ ಆಯ್ತು ಮಾ’ ಅನ್ನೋದೇ ಉತ್ತರ. ಸರಿ ಹೇಳು ಅಂದೊಡನೆ, ಎಂಜಲು ನುಂಗಿ ಮಗು ಶುರು ಮಾಡಿತ್ತು, ’ಊಟ ಬಾಯಲ್ಲಿ ಹೋದ ಮೇಲೆ, ಟೀತ್ ಅದನ್ನು ಚನ್ನಾಗಿ ಪೀಸ್ ಪೀಸ್ ಮಾಡುತ್ತೆ, ಸಲೈವ ಜೊತೆ ಮಿಕ್ಸ್ ಆಗಿ, ಫುಡ್ ಪೈಪ್ ಇಂದ ಹೊಟ್ಟೆ ಸೇರಿ, ಅಲ್ಲಿ ಪೇಸ್ಟ್ ಥರ ನುಣ್ಣಗಾಗಿ, ಅಲ್ಲಿ ಡೈಜೆಸ್ಟಿವ್ ಜ್ಯೂಸ್ ಸೇರಿ…’ ಪಟ ಪಟ ಹೇಳುತ್ತ ಹೋದಳು. ಅರೆ ಹಾಗಾದರೆ ಕಾನ್ವೆಂಟಿನಲ್ಲಿ ಓದುವ ಮಗುವಿಗೂ ಸಹ ಈ ಅನುವಾದದ ಕಾಟ ತಪ್ಪಿಲ್ಲವಾ? ಮಗು ಅದನ್ನು ತನ್ನ ಮಾತೃಭಾಷೆಗೆ ಅನುವಾದ ಮಾಡ್ಕೊಂಡೇ ಅರ್ಥ ಮಾಡಿಕೊಳ್ತಾ ಇದೆ, ಅದೇ ಮಾತೃ ಭಾಷೆಯಲ್ಲಿ ಶಿಕ್ಷಣ ಅಂದರೆ ಪ್ರತಿ ಪಾಠದ ಕಲಿಕೆಯಿಂದಲೂ ಆ ಒಂದು ಹಂತ ಕಡಿಮೆ ಆಗಿಬಿಡುತ್ತದೆ ಅಂತ. ಅದು ನನ್ನ ಮಟ್ಟಿಗೆ ಒಂದು ಜ್ಞಾನೋದಯ.
ಹಾಗಾದರೆ ಪ್ರಾಥಮಿಕ ಶಿಕ್ಷಣ ಮಕ್ಕಳ ಮಾತೃಭಾಷೆಯಲ್ಲೇ ಆಗಿ, ಆ ಮೇಲೆ ಇಂಗ್ಲೀಷ್ ಅನ್ನು ಕೇವಲ ಒಂದು ಭಾಷೆಯನ್ನಾಗಿ ಯಾಕೆ ಕಲಿಸಬಾರದು? ಯಾವುದೇ ಭಾಷಾ ತಜ್ಞ ಹೀಗಂದ ತಕ್ಷಣ ಮತ್ತೊಂದು ಪ್ರಶ್ನೆ ಎದುರಾಗುತ್ತದೆ, ’ಹಾಗಾದರೆ ನಿಮ್ಮ ಮಕ್ಕಳನ್ನು ಯಾವ ಮಾಧ್ಯಮದ ಶಾಲೆಗೆ ಕಳುಹಿಸುತ್ತಿದ್ದೀರಿ?’. ಇಲ್ಲಿ ನಾವು ಮನ್ನಣೆ ಕೊಡಬೇಕಾದ್ದು, ವೈದ್ಯ ಹೇಳುವು ಪಥ್ಯಕ್ಕಾ ಅಥವಾ ಅಕಸ್ಮಾತ್ ಅದೇ ಖಾಯಿಲೆ ಇರುವಾಗ ಆ ವೈದ್ಯ ಅದನ್ನು ಪಾಲಿಸುತ್ತಿದ್ದಾನ ಅಥವಾ ಇಲ್ಲವಾ ಎಂಬುದಕ್ಕಾ? ಹೀಗೆ ಪ್ರಶ್ನೆಗಳು ಒಂದಾದರ ಹಿಂದೊಂದರಂತೆ ಬರುತ್ತಲೇ ಇರುತ್ತವೆ. ಇರಲಿ ಆ ಬಗ್ಗೆ ಮಾತನಾಡಲು ನಾನು ಭಾಷಾತಜ್ಞಳಲ್ಲ. ನನ್ನ ವಿಚಾರ ಇಷ್ಟೆ.
ಮೊದಲು ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದು ಇಂಗ್ಲೀಷ್ ಅಂದರೆ ಜ್ಞಾನವಲ್ಲ, ಒಂದು ಭಾಷೆ ಅಂತ. ಹಾಗೆ ಭಾಷೆಯಾಗಿ ಕಲಿಯ ಬಯಸಿದರೆ ಕೈ ಕೊಡವಿ ಹೋಗುವುದಿಲ್ಲ ಇಂಗ್ಲೀಷು. ಕನ್ನಡ ನನ್ನ ಅರಿವಿನ ಭಾಷೆಯಾಗಿ ನನ್ನ ಪ್ರಾಥಮಿಕ ಕಲಿಕೆಯನ್ನು, ಗ್ರಹಿಕೆಯನ್ನು ಆಳವಾಗಿಸಿಕೊಟ್ಟಿದೆ, ಆ ಬಲದ, ಅದು ಕೊಟ್ಟ ನನ್ನ ವಿಸ್ತಾರವಾದ ಭಾವ ಜಗತ್ತಿನ ತಳಹದಿಯ ಮೇಲೇ ನಾನು ಇಂಗ್ಲೀಷನ್ನು ಒಲಿಸಿಕೊಂಡು, ಬಳಸಿಕೊಂಡಿದ್ದೇನೆ. ನನ್ನ ವ್ಯಕ್ತಿತ್ವ ಬಂದಿರುವುದು ಕನ್ನಡದ ತಳಹದಿಯಿಂದ, ನನ್ನದೇ ಆದ ಭಾಷೆ ನನಗೆ ಕೊಟ್ಟ ಸಾಂಸ್ಕೃತಿಕ ತಳಹದಿಯಿಂದ ಮತ್ತು ಆಡುಭಾಷೆಯ ಪದಸಂಪತ್ತಿನಿಂದ. ಆ ಕಾರಣಕ್ಕಾಗೆ ನಾನು ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದ್ದರ ಬಗ್ಗೆ ನನಗೆ ಹೆಮ್ಮೆ, ಖುಷಿ ಎರಡೂ ಇದೆ. ಇಂಗ್ಲೀಷ್ ನನ್ನ ಮಟ್ಟಿಗೆ ಒಂದು ವ್ಯವಹಾರದ, ಸಂಪರ್ಕದ ಭಾಷೆ.
ಬೇರೆ ಭಾಷೆಗಿಲ್ಲದ ಒಂದು ಠೇಂಕಾರ ಇಂಗ್ಲೀಷಿಗಿದೆ ಅನ್ನಿಸುತ್ತೆ ಅಲ್ಲವಾ? ಭಾರತೀಯರಾದರೂ ಮೇಲು, ಪಾಕಿಸ್ತಾನಿ ಮತ್ತು ಬಾಂಗ್ಲಾ ದೇಶದ ಕ್ರಿಕೆಟ್ ಆಟಗಾರರ ಬಗ್ಗೆ ಒಂದು ಜೋಕ್ ಸಹ ಓಡಾಡುತ್ತದೆ. ಅವರು ಅಂತರ ರಾಷ್ಟ್ರೀಯ ಕ್ರಿಕೆಟ್ಟಿನಲ್ಲಿ ಸೋತರೆ ಅದಕ್ಕೆ ಒಂದು ಕಾರಣ ಅಂದರೆ, ಗೆದ್ದ ಮೇಲೆ ಕ್ಯಾಪ್ಟನ್ ಮಾಧ್ಯಮದವರೆದುರಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡಬೇಕಲ್ಲ ಅಂತ. ಯಾಕೋ ಇದನ್ನು ಕೇಳಿ ಎಂದೂ ನನಗೆ ನಗಲು ಸಾಧ್ಯವಾಗಿಲ್ಲ…
 

‍ಲೇಖಕರು G

November 1, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

21 ಪ್ರತಿಕ್ರಿಯೆಗಳು

  1. sunil rao

    Ha ha ha wonderful.
    English andre ellarigoo ondondu anubhava kattittidde.
    Alur avara prabandha nimage innoo nenapide andre…..!!!!!!!

    ಪ್ರತಿಕ್ರಿಯೆ
  2. ಅರುಣ್ ಜೋಳದಕೂಡ್ಲಿಗಿ

    ಈಗ ಇಂಗ್ಲೀಷ್ ದೇವಿ ಗುಡಿ ಕಟ್ಟಿ ಪೂಜೆ ಮಾಡಲಾಗುತ್ತಿದೆ. ಇದು ಕಾಡುವ ಮೋಹಿನಿಯ ಆತ್ಯಂತಿಕ ರೂಪವೇ ಇರಬೇಕು.

    ಪ್ರತಿಕ್ರಿಯೆ
  3. rajkumar

    ನನ್ನ ಗೆಳತಿಯೊಬ್ಬಳು ತುಂಬಾ ಅದ್ಭುತ ಇಂಗ್ಲಿಷ್ ಬಲ್ಲವಳು ಇಗಲೂ ನನಗೆ ಅಲ್ಲಲ್ಲಿ ತೊಡರಾಗೋ, ಕಾಲೋಡ್ಡಿ ಕೆಡವಿ ಬಿಲಿಸೋ ಇಂಗ್ಲಿಷ್ ಎದುರಾದಾಗ ನನಗೆ ಅವಳ ಸಹಾಯ ಶಕ್ತಿ ಇದೆ, ಅವಳು ಅಂಗವಿಕಳಲು ಅವಳು ತನ್ನ ವಿಕಲತೆ ಬಗ್ಗೆ ಮಾತಾಡಿದಾಗ ನಾನು ಎ ಬಿಡೆ ಗುಲ್ಡು ನಾನು ಆಂಗ್ಲ ವಿಕಲ ಅಂತೀನಿ ಇಬ್ರು ನಗ್ತಿವಿ.. ಇಂಗ್ಲಿಷ್ ಅಥವಾ ಅನ್ಯ ಭಾಷೆಗಳ ಕಡೆಗೆ ಒಂದು ಕುತೂಹಲ ನನ್ನಲ್ಲಿ ಹುಟ್ಟಿಸಿದ ಗುರು ನಿಜವಾಗಲು ಚಂದ್ರಶೇಖರ ಆಲೂರು.. ಅವರ ಲೇಖನಗಳೂ ಒಂದರ್ಥದಲ್ಲಿ ಸುರ-ಸುಂದರ ಮೋಹಿನಿ ಮಾಯಾ ಜಾಲವೇ…

    ಪ್ರತಿಕ್ರಿಯೆ
  4. ಅಪರ್ಣ ರಾವ್

    ಸಂಧ್ಯಾ..ನಿಮ್ಮ ಅನುಭವ ಬಹುಶಃ ಮುಕ್ಕಾಲು ಕನ್ನಡಿಗರ ಅನುಭವವೂ ಆಗಿದ್ದರೂ…ಇನ್ನು ಅದರ ಗುಲಾಮಗಿರಿಯಿಂದ ಮುಕ್ತರನ್ನಾಗಿಸಿಕೊಳ್ಳುವ ಪ್ರಯತ್ನ ಗಂಭೀರವಾಗಿ ಆಗುತ್ತಿಲ್ಲ ಎನ್ನುವ ಕೊರಗು ಇದ್ದೇ ಇದೆ… ವ್ಯಕ್ತಿಯ ವ್ಯಕ್ತಿತ್ವದ ಮತ್ತು ಸಾಮರ್ಥ್ಯದ ಅಳತೆ ಗೋಲು.. ಖಂಡಿತ ಇಂತಹ ಒಂದು ಪರಬಾಷೆ ಆಗಬಾರದು ಎನ್ನುವ ನಿಮ್ಮ ಅನಿಸಿಕೆಯೇ ನಮ್ಮೆಲ್ಲರ ಅನಿಸಿಕೆ ..

    ಪ್ರತಿಕ್ರಿಯೆ
  5. Anil Talikoti

    ಚೆನ್ನಾಗಿದೆ – Explain Digestive process ಗೊಂದು ನಗಲು ಸಾಧ್ಯವಾಗದ ಜೋಕ್ – ‘ಬಲಗೈಯಿಂದ ಆರಂಭಿಸಿ ಎಡಗೈಯಿಂದ ಮುಗಿಸುವ ಕ್ರಿಯೆ’
    -Anil Talikoti

    ಪ್ರತಿಕ್ರಿಯೆ
  6. sujathalokesh

    ಬಹಳಷ್ಟು ಮಂದಿಯದು ಇದೇ ಅನುಭವ 🙂 ನೀವು ಹೇಳಿದ್ದೀರ ಅಷ್ಟೇ.

    ಪ್ರತಿಕ್ರಿಯೆ
  7. ಸತೀಶ್ ನಾಯ್ಕ್

    ಭಾಷೆಯನ್ನ ಬಂಡವಾಳ ಮಾಡಿಕೊಳ್ಳದೆ ಆತ್ಮ ಬಂಧುವಾಗಿ ಮಾಡಿ ಕೊಲ್ಲಬಲ್ಲ ಯಾರಿಗಾದರೂ ಯಾವ ಭಾಷೆಯೂ ಸಲೀಸು. ನಾನು ಹೀಗೆ ಇಂಗ್ಲೀಷಿನ ಕಾರಣಕ್ಕಾಗಿ ಬೇಸತ್ತವನೆ. ಸರಿಯಾಗಿ ಇಂಗ್ಲೀಷು ಬಾರದೆ ಎರಡನೇ ಪೀಯೂಸಿ ಫೇಲ್ ಆದವನೇ. ನಿಮ್ಮೆಲ್ಲಾ ನೋವುಗಳಲ್ಲಿ ಬಹುಪಾಳುಗಳನ್ನು ನಾನೂ ಅನುಭವಿಸಿದವನೇ. ಆದರೆ ಇವತ್ತು ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿ ಏಳು ಭಾಷೆಗಳನ್ನ ಓದಿ ಬರೆದು ತಕ್ಕ ಮಟ್ಟಿಗೆ ಮಾತಾಡಿ ಸುಧಾರಿಸಿ ಕೊಳ್ಳುವಷ್ಟು ಬಲ್ಲೆ. ಭಾಷೆ ಕೆಲಿಯುವೆಡೆಗಿನ ಒಂದು ತುಡಿತ, ಒಂದು ಆಸಕ್ತಿ, ಒಂದು ಅಭಿರುಚಿ ಆ ಭಾಷೆಗಳು ನನ್ನೊಳಗೆ ಹರಿದಾಡಲು ಕಾರಣವಾಯ್ತು. “ಇಂಗ್ಲಿಷ್” ಶಿಕ್ಷಣ ಕಲಿಕೆಯ ಮತ್ತು ವ್ಯಾಪಾರಿ ಪ್ರಪಂಚದ ಯೋಗ್ಯತೆ ಮತ್ತು ಮಾನದಂಡ ಆಗಿರುವವರೆಗೂ ಅದನ್ನ ಭಾರತದಂಥ ದೇಶದಲ್ಲಿ ಅದನ್ನ ಭಾಷೆಯೆಂದು ಪರಿಗಣಿಸುವವರ ಹಾಗು ಹಾಗೆ ಚಿಂತಿಸುವವರ ಸಂಖ್ಯೆ ಬಹಳ ಕಮ್ಮಿ. ಸಕಾಲಿಕ ಲೇಖನ ಬಹಳ ಇಷ್ಟವಾಯ್ತು.

    ಪ್ರತಿಕ್ರಿಯೆ
  8. bharathi b v

    Hmm Sandhya nandoo ide case … mansalli translate madkollo Ade Kannada medium case ….

    ಪ್ರತಿಕ್ರಿಯೆ
  9. ಸುಮ ಸುಧಾಕಿರಣ್

    ಈ ಮೋಹಿನಿ ನನ್ನನ್ನೂ ಹೀಗೇ ಕಾಡಿದ್ದಾಳೆ. ಬರೆಯಲು , ಓದಲು ಸುಲಭವಾಗಿ ಬರುವ ಈ ಭಾಷೆಯನ್ನು ಮಾತನಾಡಲು ಪ್ರಯತ್ನಿಸಿದಾಗ ಮಾತ್ರ ಕೈಕೊಡುವುದೇಕೆಂದು ಅರ್ಥವೇ ಆಗುವುದಿಲ್ಲ.

    ಪ್ರತಿಕ್ರಿಯೆ
  10. Raj

    I too am proud of having studied in KANNADA medium until high school.
    You nailed the point right on its head! Most everyone in India is mixing ENGLISH with KNOWLEDGE. English must be just treated like a language and taught as such, probably from 2nd Class/Grade. Rest of the subject must be taught in Kannada, then we could compete with the rest of the world like Germans/Swedish/Japanese do.

    ಪ್ರತಿಕ್ರಿಯೆ
  11. ಗುಡ್ಡಪ್ಪ

    Lekhanadallli oMdu kade Hindi RashTRa bhaashe eNdu barediddIri. adu tappu… dayaviTTU saripaDisi…

    ಪ್ರತಿಕ್ರಿಯೆ
  12. Kiran

    Nice again, very apt. But objection on “ರಾಷ್ಟ್ರಭಾಷೆ ಹಿಂದಿ” ಹಿಂದಿ is not ರಾಷ್ಟ್ರಭಾಷೆ. It is equal to any other Indian language recognised by the constitution.

    ಪ್ರತಿಕ್ರಿಯೆ
  13. Mahesh

    ಬಹುಶಹ ಇಂಗ್ಲಿಷ್ ನ ಈ ಪ್ರಭುತ್ವ ಹೆಚ್ಚು ಅಂದರೆ ಮುಂದಿನ 10 ರಿಂದ 20 ವರ್ಷಗಳ ಕಾಲ ನಡೆಯಬಹುದು. ನಂತರದ ಕಾಲದಲ್ಲಿ ಭಾಷೆಗಳನ್ನು ಸಹಜವಾಗಿ ಭಾಷಾಂತರ ಮಾಡಬಲ್ಲ ಇಂಟೆಲಿಜೆಂಟ್ ಏಜೆಂಟ್ ಗಳು ಆಕ್ರಮಿಸಲಿವೆ. ನನ್ನ ಪ್ರಕಾರ ಮುಂದಿನ ತಲೆಮಾರಿನವರಿಗೆ ಭಾಷೆಯ ಹಂಗಿಲ್ಲ

    ಪ್ರತಿಕ್ರಿಯೆ
  14. ಸುಧಾ ಚಿದಾನಂದಗೌಡ

    ಹೇ ಬಿಡಿ..ದೊಡ್ಡದೊಡ್ಡವರೆಲ್ಲಾ ಹೀಗೆ ಅನಗತ್ಯ ಪೇಚಾಡಿಕೊಂಡೇ ಇಂಗ್ಲಿಷ್ ಗೆ ಜಂಭ ಬಂದ್ಬಿಟ್ಟಿದೆ.
    ಧೈರ್ಯವಾಗಿ, ಸಹಜವಾಗಿ ಮತಾಡೋಕೆ ಶುರು ಮಾಡಿದರೆ ತಾನಾಗೆ ತೆಪ್ಪಗಾಗಿ ಕೈವಶವಾಗಿ, ಹೇಳಿದಂಗೆ ಕೇಳಿಕೊಂಡಿರುತ್ತೆ-
    ಒಳ್ಳೆಯ, ಜಾಣ ಗಂಡನ ಹಾಗೆ..!
    ಸಂಧ್ಯಾ, ನಿಮ್ಮ ಭಾಷೆ ಸೊಗಸಾಗಿ ಓದಿಸಿಕೊಂಡು ಹೋಗುತ್ತೆ ಕಣ್ರೀ
    very nice.

    ಪ್ರತಿಕ್ರಿಯೆ
  15. ಶಮ, ನಂದಿಬೆಟ್ಟ

    ” ಕನ್ನಡ ನನ್ನ ಅರಿವಿನ ಭಾಷೆಯಾಗಿ ನನ್ನ ಪ್ರಾಥಮಿಕ ಕಲಿಕೆಯನ್ನು, ಗ್ರಹಿಕೆಯನ್ನು ಆಳವಾಗಿಸಿಕೊಟ್ಟಿದೆ, ಆ ಬಲದ, ಅದು ಕೊಟ್ಟ ನನ್ನ ವಿಸ್ತಾರವಾದ ಭಾವ ಜಗತ್ತಿನ ತಳಹದಿಯ ಮೇಲೇ ನಾನು ಇಂಗ್ಲೀಷನ್ನು ಒಲಿಸಿಕೊಂಡು, ಬಳಸಿಕೊಂಡಿದ್ದೇನೆ. ನನ್ನ ವ್ಯಕ್ತಿತ್ವ ಬಂದಿರುವುದು ಕನ್ನಡದ ತಳಹದಿಯಿಂದ, ನನ್ನದೇ ಆದ ಭಾಷೆ ನನಗೆ ಕೊಟ್ಟ ಸಾಂಸ್ಕೃತಿಕ ತಳಹದಿಯಿಂದ ಮತ್ತು ಆಡುಭಾಷೆಯ ಪದಸಂಪತ್ತಿನಿಂದ. ಆ ಕಾರಣಕ್ಕಾಗೆ ನಾನು ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದ್ದರ ಬಗ್ಗೆ ನನಗೆ ಹೆಮ್ಮೆ, ಖುಷಿ ಎರಡೂ ಇದೆ. ಇಂಗ್ಲೀಷ್ ನನ್ನ ಮಟ್ಟಿಗೆ ಒಂದು ವ್ಯವಹಾರದ, ಸಂಪರ್ಕದ ಭಾಷೆ.” ನನಗೂ ಅಷ್ಟೇ…
    Hats offfffffffffffff Sandhya…

    ಪ್ರತಿಕ್ರಿಯೆ
  16. Dr Vani Sundeep

    Nimma Ella Barahadante Edoo Tumba Estavayitu, Nanna Shaleye Dinagalu Nenepige Bandavu.

    ಪ್ರತಿಕ್ರಿಯೆ
  17. kirandesai

    NAANU SAHA HIGHSCOOLAGE BANDA NANTARA ENGLISH MEDIUMNALLI ODIDDU MUNDE COLLEGEGE HODAAGA KASHTA AAGABAARADENDU. HEEGAAGI ELLU SALLADAVARAAGIDDE YAAVUDE BHAASHE KALIYALU KASHTAVAALA . NAMMAALLI ADANNU LALIYUVA AASAKTI IRABEKU. NIMMA ANUBHAVA NAMMADOO SAHA LEKHANA CHENNAAGIDE

    ಪ್ರತಿಕ್ರಿಯೆ
  18. Chetan

    Very nice article, but would like to correct a fact. Hindi isn’t our national language. Please!

    ಪ್ರತಿಕ್ರಿಯೆ

Trackbacks/Pingbacks

  1. ಹಾದಿಮನಿ ಅವರ ಕುಂಚದಲ್ಲಿ ’ಸಂಧ್ಯಾರಾಣಿ ಕಾಲಂ’! « ಅವಧಿ / avadhi - [...] ಎನ್ ಸಂಧ್ಯಾರಾಣಿ ಬರೆದಿದ್ದ ’ನನ್ನನ್ನೂ ಕಾಡಿದ ಮೋಹಿನಿ’ [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: