ಸಂಧ್ಯಾರಾಣಿ ಕಾಲಂ : ಜಯಶ್ರೀ ಕಟ್ಟಿಕೊಟ್ಟ ’ಚಿತ್ರಪಟ ರಾಮಾಯಣ’


ಕೆಲವು ಸಾಲುಗಳು, ಕೆಲವು ಕವನಗಳು, ಕೆಲವು ಪಾತ್ರಗಳು, ಕೆಲವು ಚಿತ್ರಗಳು, ಕೆಲವು ರಾಗಗಳು… ಕೆಲವು ಕಣ್ಣುಗಳು ಮೈಮೇಲಿನ ಹಚ್ಚೆಯ ಹಾಗೆ, ಕಾಲ ಕಳೆದರೂ ಮಾಸುವುದಿಲ್ಲ, ಮಸುಕಾಗುವುದಿಲ್ಲ, ದೂರಾಗುವುದಿಲ್ಲ. ಮರೆತೆ ಎಂದುಕೊಂಡರೂ ’ಯಾವುದೋ ವಸಂತ ರಾತ್ರಿಯಲಿ ಹೊಳೆದ ತಾರೆ ನೆನಪಾಗುತಿದೆ, ಮಸುಕು ನೆನಪುಗಳ ಮಳೆಯಲ್ಲಿ ಮನಸು ಒಂದೇ ಸಮ ತೋಯುತಿದೆ..’ ಎನ್ನುವಂತೆ ಕಾಡುತ್ತಲೇ ಇರುತ್ತದೆ. ಹಾಗೆ ಕಾಡುತ್ತಲೇ ಇರುವ ನಾಟಕ ಚಿತ್ರಪಟ ರಾಮಾಯಣ.
ನಾನು ನೋಡಿದ ’ಚಿತ್ರಪಟ ರಾಮಾಯಣವ’ನ್ನು ರಂಗದ ಮೇಲೆ ತಂದವರು ಬಿ ಜಯಶ್ರೀಯವರ ಸ್ಪಂದನ ತಂಡದ ಕಲಾವಿದರು. ಜನಪದ ಕಥೆಯೊಂದಕ್ಕೆ ಎಚ್ ಎಸ್ ವಿಯವರು ಅದ್ಭುತವಾದ ರಂಗ ಆವರಣವನ್ನು ಕಟ್ಟಿದ್ದಾರೆ, ನಾಟಕದಷ್ಟೇ ಸೊಗಸು ನಾಟಕದ ಹಾಡುಗಳದು. ನಾಟಕ ಸೊಗಸಾಗಿದೆ ಎಂದು ಕೇಳಿದ್ದೆ. ಜೊತೆಗೆ ಜಯಶ್ರೀಯವರ ಸಿರಿಕಂಠದ ಆಕರ್ಷಣೆ ಬೇರೆ, ನಾಟಕದುದ್ದಕ್ಕೂ ಜೊತೆಯಾಗುವ ಚಿತ್ರಪಟಗಳು ಅಷ್ಟೇ ಆಕರ್ಷಣೀಯ.
ಯುದ್ಧ ಮುಗಿದಿದೆ, ರಾವಣ ಸತ್ತಿದ್ದಾನೆ, ರಾಮ – ಸೀತೆ ಅಯೋಧ್ಯೆಯಲ್ಲಿ. ಆದರೆ ಶೂರ್ಪನಖಿಯ ಯುದ್ಧ ಇನ್ನೂ ಮುಗಿದಿಲ್ಲ. ರಾಮ ಸೀತೆಯರನ್ನು ಬೇರೆ ಮಾಡಿ, ರಾಮನನ್ನು ಮದುವೆಯಾಗುವವರೆಗೂ ಅವಳ ಹಠ ತೀರುವುದಿಲ್ಲ. ಅದಕ್ಕಾಗಿ ಆಕೆ ವೇಷ ಮರೆಸಿಕೊಂಡು ಕೊರವಂಜಿಯಂತೆ ಅಯೋಧ್ಯೆಗೆ ಬರುತ್ತಾಳೆ.
ನಾಟಕದಲ್ಲಿ  ’ಬರೆದ ಚಿತ್ರಕ್ಕೆ ಕಣ್ಣು ಬಿಡಿಸಿದರೆ, ಆ ಚಿತ್ರಕ್ಕೆ ಜೀವ ಬರ್ತೈತಿ’ ಅಂತಾಳೆ ಸೀತೆ. ಒಂದು ಅಂಗ ಹೇಗೆ ಚಿತ್ರಕ್ಕೆ ಜೀವ ತುಂಬುತ್ತದೆಯೋ ಹಾಗೆ ಒಂದು ದೃಶ್ಯ ನಾಟಕದ ಆತ್ಮ ಎನ್ನುವುದಾದರೆ, ಅದು ಇಲ್ಲಿದೆ..
ಕೊರವಂಜಿ ವೇಷ ಹಾಕಿದ ಶೂರ್ಪನಖಿ ’ನಾನು ನಿನ್ನ ಬಾಲ್ಯದ ಗೆಳತಿ’ ಎಂದು ಹೇಳಿಕೊಂಡು ಸೀತೆಯ ಅಂತಃಪುರಕ್ಕೆ ಬರುತ್ತಾಳೆ. ಸೀತೆಯ ತವರಿನ ಮನೆಯ ಗುರುತು ಹೇಳುತ್ತಾ, ’ಆಚಿಗೆ ಸಾವಿರ ಕಂಬ, ಈಚಿಗೆ ಸಾವಿರ ಕಂಬ, ಪಾಗಾರದಾಗ ಪಾರಿಜಾತದ ಗಿಡ’ ಅಂತ ಸೀತೆಯ ಚಿತ್ತದೊಳಗೆ ಚಿತ್ರಕ್ಕಂಟಿದ ಮುಸುಕು ಸರಿಸುತ್ತಾ ಹೋಗುತ್ತಾಳೆ. ’ಪಾರಿಜಾತದ ಹೂ ಅದಾವೇನೆ’ ಎಂದು ಕೇಳುವ ಸೀತೆಯತ್ತ ತನ್ನ ಸಂಚಿಯಿಂದ ಹೂ ತೆಗೆದು ರೊಚ್ಚಿನಿಂದ ತೂರುತ್ತಾ ಹೋಗುತ್ತಾಳೆ. ’ಅಯ್ಯೋ ಹಿಂಗ ಹೂ ಚಲ್ಲಬೇಡವ್ವ, ನನ ಗಂಡ ಬಂದರೆ ಏನು ಹೇಳಲಿ’ ಎಂದು ಆತಂಕಗೊಳ್ಳುವ ಸೀತೆಯನ್ನು ಕೊರವಂಜಿ, ’ಈಗಲೂ ನಿನ್ನ ಗಂಡನಿಗೆ ಅನುಮಾನ ತೀರಿಲ್ಲವೇನೆ’ ಅಂದು ಕೇಳುತ್ತಾಳೆ. ’ಗಂಡಿನ ಮನಸ್ಸು ನೂರು ಕೋವೆಗಳ ಹುತ್ತ, ಒಮ್ಮೆ ಒಳ ಹೊಕ್ಕ ಅನುಮಾನದ ಹುಳ ಅಲ್ಲೇ ಗಿರಕಿ ಹೊಡೆಯುತ್ತದೆ….’, ಸೀತೆಯ ಸ್ವಗತ. ’ಆದ್ರ ನೀ ಅಗ್ನಿ ಹೊಕ್ಕು ಬಂದ ಪತಿವ್ರತೆ..’, ಕೊರವಂಜಿಯ ಪ್ರಶ್ನೆ.  ’ಅಗ್ನಿಯೂ ಪುರುಷ ಅಲ್ಲೇನ…? ಪರಪುರುಷನ ತೋಳು ತಾಕಿ ಬಂದೆ ಅಂತ ನನ್ನ ಗಂಡ ಕೇಳಲಿಲ್ಲ ಅನ್ನೋದು ನನ್ನ ಭಾಗ್ಯ ಅಂತಾಳೆ ಸೀತೆ. ಆ ಒಂದು ಮಾತಿನಲ್ಲಿನ ದನಿಯಲ್ಲಿ ಸೀತೆ, ರಾಮ ಇಬ್ಬರೂ ನಮ್ಮ ಅರಿವಿನಳವಿಗೆ ಸಿಕ್ಕಿಬಿಡುತ್ತಾರೆ. ಬೆಂಕಿ ಹಾದು ಬಂದ ಜಾನಕಿ ಈಗ ಗಂಡನೇ ದೇವರೆನ್ನುವ ಮುಗ್ಧೆಯಲ್ಲ, ಗಂಡನೂ ಮನುಷ್ಯ ಎಂದು ತಿಳಿದ ಪ್ರೌಢೆ..
ನಾಟಕದಲ್ಲಿ ಮೊದಲು ಮನಸ್ಸನ್ನು ಸೆಳೆದದ್ದು ಚಂದ್ರನಖಿಯ ಕಲ್ಪನೆ. ಹಾ ಇಲ್ಲಿ ಶೂರ್ಪನಖಿ ಕೇವಲ ಒಬ್ಬ ರಾಕ್ಷಸಿಯಲ್ಲ, ಅವಳಲ್ಲೇ ಒಬ್ಬ ಚಂದ್ರನಖಿಯೂ ಇದ್ದಾಳೆ. ಆಕೆ ಎರಡು ಹೆಣ್ಣುಗಳ ಸಾಂದ್ರ ರೂಪ. ಒಬ್ಬಾಕೆ ಸುಂದರಿ, ರಾಮನೇ ಬೆರಗಾಗುವ ತೇಜಸ್ವಿನಿ, ಕಣ್ಣು ಸೆಳೆವ ಚಂದ್ರನಖಿ. ಇನ್ನೊಬ್ಬಳು ಹೆಣ್ಣಿನ ಸಿಟ್ಟಿನ, ಛಲದ ಪ್ರತಿರೂಪ, ಶೂರ್ಪನಖಿ. ರಾಮನ ಪ್ರೇಮ ಬಯಸುವಾಗ ಆಕೆ ಚಂದ್ರನಖಿ, ರಾಮನ ನಿರಾಕರಣೆಯ ಆಘಾತದಿಂದ ಕಾಲಪ್ಪಳಿಸಿ ನಿಲ್ಲುವಾಗ ಆಕೆ ಶೂರ್ಪನಖಿ. ಈ ಕಲ್ಪನೆಯೇ ಅದ್ಭುತ ಅನ್ನಿಸಿತು. ಆಕೆಯ ಪ್ರೇಮ ಯಾಚನೆ, ಅದನ್ನು ನಿರಾಕರಿಸುವಾಗ ನಿರಾಕರಣೆಯ ನೈತಿಕತೆಯನ್ನು ಮರೆಸಿ ವಿಜೃಂಭಿಸುವ, ಲಕ್ಷ್ಮಣನನ್ನು ಕರೆದು ಆಕೆಯ ಮೂಗನ್ನು ಕತ್ತರಿಸಲು ಆಣತಿ ಕೊಡುವ ರಾಮನ ಕ್ರೌರ್ಯ.  ಪ್ರೇಮ ನಿವೇದಿಸಿಕೊಂಡವಳನ್ನು ಒಲ್ಲೆನೆಂದಿದ್ದರೆ ಸಾಕಿತ್ತು, ಅವಳ ಅಭಿಮಾನವನ್ನು ಕತ್ತರಿಸುಲು ಅವನನ್ನು ಪ್ರೇರೇಪಿಸುವುದಾದರೂ ಏನು?
ಹೆಣ್ಣಿನೆಡೆಗಿನ ರಾಮನ ಕ್ರೌರ್ಯಕ್ಕೆ ಎಷ್ಟೆಷ್ಟು ಮುಖಗಳು…ಕೈಕೇಯಿಯನ್ನೂ ಕ್ಷಮಿಸಿ ತಲೆಬಾಗುವ, ಮಂಥರೆಯ ನಡುವಳಿಕೆಗೂ ಸಮರ್ಥನೆ ಹುಡುಕುವ, ಶಬರಿಯ ಕಾಯುವಿಕೆಗೆ ಅರ್ಥ ಒದಗಿಸಿದ ರಾಮ ತನ್ನ ಸಂಗಾತಿಯಾಗಿರುವ, ಆಗಬಯಸುವ ಹೆಣ್ಣಿನೆಡೆಗೆ ಹೇಗೆ ಇಂತಹ ಕ್ರೌರ್ಯ ಬೆಳೆಸಿಕೊಂಡಿರುತ್ತಾನೆ? ಇಂದ್ರನ ಜೊತೆ ಸೇರಿದ ಗೌತಮನ ಹೆಂಡತಿಯನ್ನು ಕ್ಷಮಿಸುವಾಗ ಇರುವ ಉದಾರತೆ ತನ್ನ ಹೆಂಡತಿ ಕೇವಲ ಪರಪುರುಷನ ಮನೆಯಲ್ಲಿ ಇದ್ದಳು ಎಂದ ಮಾತ್ರಕ್ಕೆ ಎಲ್ಲಿ ಮರೆಯಾಗಿಬಿಡುತ್ತದೆ? ಅವಳನ್ನು ಬೆಂಕಿಗೆ ನೂಕುವ, ಶೂರ್ಪನಖಿಯ ಕಿವಿ ಮೂಗು ಕತ್ತರಿಸಲು ಆಜ್ಞಾಪಿಸುವ ಈ ಕ್ರೌರ್ಯದ ಮೂಲ ಎಲ್ಲಿಯದು? ಸೀತೆಯಾಗಲಿ, ಶೂರ್ಪನಖಿಯಾಗಲಿ ಒಲಿದು, ಒಲವಿಗೆ ಸೋತು ಬಂದ ಹೆಣ್ಣು ಇಷ್ಟು ಸಸಾರವ ರಾಮನಂಥ ರಾಮನಿಗೂ?

ನಾಟಕ ಮುಂದುವರಿಯುತ್ತದೆ…
ಕೊರವಂಜಿ ರಾವಣನನ್ನು ಹೊಗಳುತ್ತಾ, ಕೈಯಳೆತೆಯಲ್ಲಿ ಸೀತೆಯಂತ ಚಲುವಿ ಇದ್ದರೂ ಅವಳ ಮನಸ್ಸಿಗೆ ಬೆಲೆ ಕೊಟ್ಟು ದೂರವೇ ಉಳಿದ ರಾವಣ ಹೇಗೆ ರಾಮನಿಗಿಂತಾ ಉತ್ತಮ ಎಂದು ಹಾಡುತ್ತಾ ಸೀತೆಯನ್ನು ರಾವಣನ ಚಿತ್ರ ಬಿಡಿಸಲು ಪ್ರೇರೇಪಿಸುತ್ತಾಳೆ.  ಅಷ್ಟರಲ್ಲಿ ಜಗದ ರೀತಿ ನೀತಿ ಅರಿತ ಜಾನಕಿ, ತಾನು ಕಂಡದ್ದು ಆತನ ಉಂಗುಷ್ಟವನ್ನು ಮಾತ್ರ ಅನ್ನುತ್ತಾಳೆ! ಅದನ್ನೇ ಬಿಡಿಸು ನಾನು ಹೊರಟು ಹೋಗುತ್ತೇನೆ ಎಂದು ಕೊರವಂಜಿ ಹಠ ಹಿಡಿಯುತ್ತಾಳೆ. ವಿಧಿ ಇಲ್ಲದೆ ಸೀತೆ ಚಿತ್ರ ಬಿಡಿಸುತ್ತಾ ಹೋಗುತ್ತಾಳೆ, ನೆಲದ ಮೇಲೆ ಮೊದಲು ಮೂಡುವುದು ಉಂಗುಷ್ಠ, ಆಮೇಲೆ ಸೀತೆಯ ಮನದಲ್ಲಿ, ಸೀತೆಯ ಕೈಯಲ್ಲಿ ರಾವಣನ ಬಿಂಬ ಬೆಳೆಯುತ್ತಾ ಹೋಗುತ್ತದೆ.  ಉಂಗುಷ್ಠ, ಬೆರಳು, ಹರಡಿದ ಪಾದಗಳು, ಧೃಡವಾದ ಮೀನಖಂಡಗಳು, ತೊಡೆ, ಧೀರ ನಿಲುವು, ಬಲವಾದ ತೋಳುಗಳು, ತೇಜವನ್ನು ಹೊಮ್ಮಿಸುವ ಮುಖ…. ಆದರೆ ಕಣ್ಣುಗಳನ್ನು ಬರೆಯಲು ಮಾತ್ರ ಸೀತೆ ಒಪ್ಪುವುದಿಲ್ಲ, ’ಕಣ್ಣು ಬಂದರೆ ಚಿತ್ರಕ್ಕ ಜೀವ ಬರ್ತೈತಿ’ ಅಂತಾಳೆ, ನಿಜ ಕಣ್ಣುಗಳು ಬೆರೆತಾಗಲ್ಲವೇ ಸಂಬಂಧಗಳಿಗೂ ಜೀವ ಬರುವುದು?
ಈ ಸಂದರ್ಭದಲ್ಲಿ ನಾಟಕದಲ್ಲಿ ಒಂದು ಅದ್ಭುತವಾದ ಹಾಡಿದೆ. ರಾವಣನ ಚಿತ್ರ ಕಂಡು ಕೊರವಂಜಿ ಇಂತಹ ಸುಂದರನನ್ನು ಪತಿಯಾಗಿ ಪಡೆದ ಮಂಡೋದರಿಯ ಭಾಗ್ಯವೇ ಭಾಗ್ಯ ಎನ್ನುತ್ತಾ, ಹೇಗೆ ರಾವಣನ ಇಪ್ಪತ್ತು ಕೈ ಮಂಡೋದರೆಯನ್ನು ಪ್ರೀತಿ ಮಾಡುತ್ತದೆ ಎಂದು ಹಾಡುತ್ತಾ ಹೋಗುತ್ತಾಳೆ! ಈ ಹಾಡಿನ ಕಲ್ಪನೆ, ಹಾಡಿನ ರೀತಿ ಎರಡೂ ಸುಂದರ.
ಆಮೇಲೆ ತಾನು ಬಂದ ಉದ್ದೇಶ ನೆನಸಿಕೊಂಡ ಕೊರವಂಜಿ ಬಾಯಾರಿದೆ, ಸ್ವಲ್ಪ ಹಾಲು ಕೊಡೆ ಎಂದು ಕೇಳಿ ಸೀತೆಯನ್ನು ಒಳಗೆ ಕಳಿಸುತ್ತಾಳೆ.
ಸೀತೆ ಒಳಗೆ ಹೋದ ಮೇಲೆ ಶೂರ್ಪನಖಿ ರಾವಣನ ಪಟಕ್ಕೆ ಕಣ್ಣು ಬರೆಯುತ್ತಾಳೆ, ಪಟಕ್ಕೆ ಜೀವ ಬರುತ್ತದೆ. ಸೀತೆಯ ಎದೆಯಾಳದಲ್ಲಿ ಉಂಗುಷ್ಠದಷ್ಟಿದ್ದ ರಾವಣನ ನೆನಪು ಬೆಳೆಯುತ್ತಾ, ಬೆಳೆಯುತ್ತಾ ಜೀವ ತಳೆದು, ಸೀತೆಯ ಅಂತಃಪುರದಲ್ಲಿ ವಿಜೃಂಭಿಸತೊಡಗುತ್ತದೆ. ತನ್ನ ಮನದಲ್ಲಿ ಮೂಡಿದ ಅಂಗುಷ್ಟದ ಚಿತ್ರ ಹೀಗೆ ಮನಸ್ಸನ್ನು ಮೀರಿ, ಚಿತ್ರಪಟದ ಚೌಕಟ್ಟನ್ನು ದಾಟಿ ಪ್ರಕಟಗೊಳ್ಳುವುದನ್ನು ನೋಡಿದ ಸೀತೆ ಕಂಗಾಲಾಗಿ ತಳಮಳಗೊಳ್ಳುತ್ತಾ, ಮನಸ್ಸನ್ನು ಅಂಗೈಲಿ ಹಿಡಿದಿಡುತ್ತಾ ರಾವಣನ ಪಟವನ್ನು ಕಷ್ಟಪಟ್ಟು ಚೌಕಟ್ಟಿನಲ್ಲಿ ಬಂಧಿಸಿಡುವುದು ಎಷ್ಟು ಸಾಂಕೇತಿಕ…. ಪಟ ಚೌಕಟ್ಟನ್ನು ದಾಟಿದರೆ…
ಅಷ್ಟರಲ್ಲಿ ರಾಮನ ಹೆಜ್ಜೆ ಸಪ್ಪಳ ಕೇಳುತ್ತದೆ, ಸೀತೆ ಅವಸರವಸರವಾಗಿ ಪಟವನ್ನು ಪಲ್ಲಂಗದಡಿಯಲ್ಲಿ ಬಚ್ಚಿಡುತ್ತಾಳೆ. ಒಳಬಂದ ರಾಮನೆದೆಯಲ್ಲಿ ಅನುಮಾನದ ಹುಳು ಹೊರಳಾಡುತ್ತದೆ. ಕನ್ನಡಿಯಲ್ಲಿ ನಗೆಯ ಎಂಜಲು ಇಣುಕಿದಂತೆ, ನೆಲದಲಿ ಮತ್ಯಾವುದೋ ಹೆಜ್ಜೆಯ ಬಿಸುಪು ಉಳಿದಂತೆ, ಹಾಲಿನ ಗಿಂಡಿ ಕೆಳಗೆ ಬಿದ್ದಿದೆ, ಹಾಲು ನೆಲದ ಪಾಲಾಗಿದೆ, ಗಾಳಿ ತುಂಬಾ ಪಾರಿಜಾತದ ಗಂಧ. ಆಡಲಾರ, ಅನುಭವಿಸಲಾರ. ಅದು ಅಂತಃಪುರ, ಹೊರಗೆ ಕಾವಲು. ಯಾರು ಬಂದಾರು ಒಳಗೆ? ಆದರೆ ಮನಸ್ಸಿನ ಕಲಮಲ ನಿಲ್ಲುತ್ತಿಲ್ಲ. ಅದೇ ಅನುಮಾನದಲಿ ಸೀತೆಯನ್ನು ಕರೆದುಕೊಂಡು ಬಂದು ಪಲ್ಲಂಗದ ಮೇಲೆ ಕೂರುತ್ತಾನೆ. ಟೊಳ್ಳು ಬಿದ್ದ ಪಲ್ಲಂಗ ಕುಸಿಯುತ್ತದೆ! ರಾಮ ಕೊಂದ ರಾವಣ ಈಗ ಸೀತೆಯ ಮನದಲ್ಲಿ ಮೂಡಿ, ಚಿತ್ರ ಪಟವಾಗಿ, ಜೀವ ತುಂಬಿಕೊಂಡು ರಾಮನನ್ನು ಅಸಹಾಯಕನನ್ನಾಗಿಸುತ್ತದೆ.
ರಾಮನ ಸಿಟ್ಟು ಮೇರೆ ಮೀರುತ್ತದೆ.
ಅದು ತನ್ನ ಸೃಷ್ಟಿ, ಹಾಗಾಗಿ ತನ್ನ ಕರುಳ ಕುಡಿಯಂತೆ, ತಾಯಿ ಮಗನ ಸಂಬಂಧ ತಮ್ಮದು ಎನ್ನುತ್ತಾ, ಸೀತೆ ಚಿತ್ರ ಪಟವನ್ನು ಹರಿದೊಗೆಯುತ್ತಾಳೆ. ಇಲ್ಲಿ ಸೀತೆ ಸಮಾಜದ ರೀತಿ-ನೀತಿ ಅರಿತ ಹೆಣ್ಣು, ಮನಸ್ಸಿನೊಳಗಿನ ಪಟಕ್ಕೆ ಕಟ್ಟು ಹಾಕಿ, ಚೌಕಟ್ಟಿನೊಳಗೇ ಕೂರಿಸುವುದು ಅವಳಿಗೆ ಸಮಾಜ, ಬದುಕು ಕಲಿಸಿಕೊಟ್ಟಿದೆ.
ಭೂಮಿ ಸುತೆ ಸೀತೆ. ಆದರೆ ಆಕೆ ಅಯೋಧ್ಯೆಯ ಮಣ್ಣಿನಲ್ಲಿ ಹೆಜ್ಜೆ ಇಟ್ಟ ಮೇಲೆ ನಾಜೂಕಿನ ರೀತಿ ನೀತಿ, ಬದುಕುವ ಬಗೆ ತಿಳಿದವಳು.  ಬದುಕು ಸೀತೆಗೆ, ಸೀತೆಯರಿಗೆ ಎಲ್ಲವನ್ನೂ ಕಲಿಸಿಕೊಡುತ್ತದೆ, ಬದುಕುವುದನ್ನೂ…
 

‍ಲೇಖಕರು G

June 26, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

18 ಪ್ರತಿಕ್ರಿಯೆಗಳು

  1. Palahalli Vishwanath

    ನಾನು ಚಿಕ್ಕವನಿದ್ದಾಗ ನಮ್ಮ ತಾಯಿ ಒ೦ದು ಪೌರಾಣಿಕ ಸನ್ನಿವೇಶವನ್ನ್ ಹೇಳಿದ್ದರು. ರಾಮ ಅ೦ತ:ಪುರಕ್ಕೆ ಬರುತ್ತಾನೆ. ಬ೦ದು ನೋಡಿದರೆ ಸೀತೆ ಒ೦ದು ಚಿತ್ರವನ್ನು ಬಿಡಿಸುತ್ತಿದ್ದಾಳೆ. ಹತ್ತಿರ ಬ೦ದು ನೋದಿದರೆ ಅದು ರಾವಣನ ಚಿತ್ರ. ಈ ಪರ್ಯಾಯ ರಾಮಾಯಣಗಳು ಎ೦ದಿನಿ೦ದ ಇವೆಯೋ ಏನೋ !

    ಪ್ರತಿಕ್ರಿಯೆ
  2. Ahalya Ballal

    ಅದ್ಭುತ ಸೃಜನಶೀಲತೆಯ ನಾಟ್ಕ ಇದು! ತುಂಬ ಇಷ್ಟಪಟ್ಟು ನೋಡಿದ್ದೆ. ಮತ್ತೊಮ್ಮೆ ನೆನಪಿಸಿದಿರಿ,thank you!

    ಪ್ರತಿಕ್ರಿಯೆ
  3. ಅಕ್ಕಿಮಂಗಲ ಮಂಜುನಾಥ

    ತುಂಬಾ ಸುಂದರವಾದ ಬರಹ.ಬಹಳ ಖುಷಿಯಾಯಿತು.

    ಪ್ರತಿಕ್ರಿಯೆ
  4. mamatha

    beautiful.manassina patakke kattu haaki badukuvudu , hennannu palayanavaadakke prerepisuvudu yellavuu sankatave. baraha
    bahala chennagide

    ಪ್ರತಿಕ್ರಿಯೆ
  5. nalina

    you are correct madam. innasthu mathastu spastavagi nenapaguthale iruthade. kathe annodu summane. seetheyara thavaru I desha.

    ಪ್ರತಿಕ್ರಿಯೆ
  6. Hema Sadanand Amin /mumbai

    Sandyaravare, hage nanage nataka vendare, astu istavalla. adre tamma baraha aayaskanta vagutide. nanna hagu natakada madhye.
    vandane nimage

    ಪ್ರತಿಕ್ರಿಯೆ
  7. Uday Itagi

    ಸಂಧ್ಯಾ ಮೇಡಂ,
    ನಾಟಕದ ಬಗೆಗಿನ ನಿಮ್ಮ ಈ ವಿಶ್ಲೇಷಣೆ ತುಂಬಾ ಇಷ್ಟವಾಯಿತು. ಇದು ನಾಟಕವನ್ನು ನೊಡಲು ಪ್ರೇರಿಪಿಸುತ್ತದೆ. ಮುಂದಿನ ತಿಂಗಳಲ್ಲಿ ಬೆಂಗಳೂರಿಗೆ ಬಂದಾಗ ತಪ್ಪದೇ ಈ ನಾಟಕ ನೋಡುವೆ. ಇನ್ನು ನಿಮ್ಮ ಬರವಣಿಗೆ ಬಗ್ಗೆ ನಾನು ಹೇಳುವಂತದ್ದೇನಿದೆ? ಅದೇನಿದ್ದರೂ ಓದಿಯೇ ಅನುಭವಿಸಬೇಕು. Hats off to you! ನಾನು ಅತ್ಯಂತ ಪ್ರೀತಿಯಿಂದ ಓದುವ ಲೇಖಕಿ ನೀವು.
    ಪ್ರೀತಿಯಿಂದ
    ಉದಯ್ ಇಟಗಿ
    ಲಿಬಿಯಾ

    ಪ್ರತಿಕ್ರಿಯೆ
  8. Sirish c

    ಸಂಧ್ಯಾರಾಣಿ ಅವರ ಬರಹಗಳು ಎಂದರೆ ನನಗೆ ಯಾವಗಲೂ ನನಗೆ ತುಂಬಾ ಇಷ್ಟ. ಈ ಬರಹವೂ ಅಷ್ಟೆ! ಅತ್ಯಂತ ಸೂಕ್ಷ್ಮವಾಗಿ ಒಂದು ನಾಟಕದ, ರಂಗ ಕೃತಿಯ ವಿಮರ್ಷೆಯಿದೆ. ಸಂಧ್ಯಾರಾಣಿ ಯವರೇ, ಬರಹದ ಎಲ್ಲಾ ಅಂಶಗಳೂ ನಾಟಕದ ಅಂಶಗಳನ್ನು ಹೇಳುತ್ತವೆ. ಆದರೆ, ಬಿ ಜಯಶ್ರೀ ಅವರ ತಂಡ ‘ಸ್ಪಂದನ’. ಸಾಂಗತ್ಯ ಎಂದಲ್ಲ! ಬಹುಷಃ ನೀವು ಬಿ ಜಯಶ್ರೀ ಸಾಂಗತ್ಯದ ಸ್ಪಂದನ ತಂಡ ಎಂದು ಹೇಳಲು ಹೊರಟ್ಟಿದ್ದಿರೇನೋ. ದಯವಿಟ್ಟು ಅದನ್ನು ಸರಿಪಡಿಸಿ.
    ಸಿರೀಶ ಚಂದ್ರಶೇಖರ

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ನಿಮ್ಮ ಮಾಹಿತಿಗೆ ಧನ್ಯವಾದಗಳು ಸಿರೀಶ್ ಅವರೆ. ಕಣ್ಣ ತಪ್ಪಿನಿಂದಾದ ದೋಷ, ಸರಿಪಡಿಸುತ್ತೇನೆ

      ಪ್ರತಿಕ್ರಿಯೆ
  9. meena

    ‘baduku Seethege, Seetheyarige yellavannu kalisikoduttade, badukuvudannu’ thumba tattida salugalu. Natakada mahitige dhanyavadagalu madam.

    ಪ್ರತಿಕ್ರಿಯೆ
  10. ಲಕ್ಷ್ಮೀಕಾಂತ ಇಟ್ನಾಳ

    ಅದ್ಭುತವಾದ ಕಲ್ಪನೆಯೊಂದರ ಸುತ್ತ ಹೆಣೆದ ನಾಟಕವೊಂದರ ಒಳಾವರಣವೆಲ್ಲಾ ನಮ್ಮನ್ನು ತಿರುಗಿಸಿ, ಅದರೊಂದಿಗೆ ಅದರ ಸ್ವಾದವನ್ನೆಲ್ಲಾ ಉಣಬಡಿಸುವ ತುಂಬ ಆಪ್ತತೆ ತುಂಬಿ ಸೂಸುವ ಬರಹ. ಅದ್ಭುತ ಬರಹ. ಗಂಡಿನ ಭಾವನೆ, ಸೀತೆ, ಚಂದ್ರನಖಿ, ರಾವಣ ಉಂಗುಷ್ಠದಿಂದಲೇ ಚಿತ್ರ ಬೆಳೆಯುವ ಕಲ್ಪನೆ, ಕಣ್ಣು ಬಿಡಿಸಿದರೆ ಜೀವ ಬಂದು ಬಿಡುತ್ತದೆ ಎನ್ನುವ ವಿಚಾರಗಳೇ ನಿಜಕ್ಕೂ ಮನದಲ್ಲಿ ಆಂದೋಲನಗಳನ್ನೇ ಸೃಷ್ಟಿಸುತ್ತವೆ. ಹ್ಯಾಟ್ಸ್ ಆಫ್ ಸಂಧ್ಯಾ ಜಿ…

    ಪ್ರತಿಕ್ರಿಯೆ
  11. suguna mahesh

    ಅದ್ಭುತ ಕಥೆ ಈ ನಾಟಕ ನೋಡಲೇ ಬೇಕೆನಿಸಿದೆ.

    ಪ್ರತಿಕ್ರಿಯೆ
  12. ashok shettar

    ಒಂದು ಕಥಾನಕ ಮಾನವಸ್ವಭಾವವೈವಿಧ್ಯಗಳ ಚೌಕಟ್ಟಿನಲ್ಲಿ ಹೇಗೆಲ್ಲ ಬೇರೆಯದೇ ಆದ ಅರ್ಥ-ಆಯಾಮಗಳನ್ನು ಪಡೆಯಬಲ್ಲದು ಎಂಬುದರ ಒಂದು ನೋಟ ನಾಟಕದ ನಿಮ್ಮ ನಿರೂಪಣೆಯಲ್ಲಿ ನೋಡಸಿಗುತ್ತದೆ. ಚೆನ್ನಾಗಿದೆ.

    ಪ್ರತಿಕ್ರಿಯೆ
  13. renuka

    ಅದ್ಭುತವಾದ ವಿಶ್ಲೇಷಣೆ ಸಂಧ್ಯಾ..ಬೆಂಕಿ ಹಾದು ಬಂದ ಜಾನಕಿ ಈಗ ಗಂಡನೇ ದೇವರೆನ್ನುವ ಮುಗ್ಧೆಯಲ್ಲ, ಗಂಡನೂ ಮನುಷ್ಯ ಎಂದು ತಿಳಿದ ಪ್ರೌಢೆ..ಹೌದಲ್ಲವೇ ? ಅನಿಸಿತು. ಅಗ್ನಿಯೂ ಪುರುಷನೇ ಅಲ್ಲವಾ ? ಇದೂ ಕೂಡ ..ತಲೆಗೆ ಹೊಳೆದಿರಲೇ ಇಲ್ಲ್. ನಾಟಕ ಖಂಡಿತ ನೋಡಲೇ ಬೇಕೆನಿಸಿದೆ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: