’ಸ್ವರಗಳು ಮತ್ತು ರಾಗಗಳು’ – ಎಸ್ ದಿವಾಕರ್

ರಾಗ ವಿಲಾಸ

ಎಸ್ ದಿವಾಕರ್

ಪ್ರಖ್ಯಾತ ಹಿಂದುಸ್ತಾನಿ ಗಾಯಕ ಉಸ್ತಾದ್ ಬಡೆ ಗುಲಾಂ ಅಲಿ ಖಾನ್ ಒಮ್ಮೆ ತುಲಸೀದಾಸ್ ಶರ್ಮ ಅವರ ಜೊತೆ ಮಾತನಾಡುತ್ತಾ ಭಾರತದ ಪ್ರತಿಯೊಂದು ಕುಟುಂಬದಲ್ಲಿ ಒಬ್ಬರಿಗಾದರೂ ಶಾಸ್ತ್ರೀಯ ಸಂಗೀತ ಕಲಿಸಿದ್ದಿದ್ದರೆ ಈ ದೇಶ ಎಂದಿಗೂ ವಿಭಜನೆಗೊಳ್ಳುತ್ತಿರಲಿಲ್ಲ ಎಂದು ಹೇಳಿದ್ದುಂಟು. ಅವರ ದೃಷ್ಟಿಯಲ್ಲಿ ನಮ್ಮ ಶಾಸ್ತ್ರೀಯ ಸಂಗೀತದ ರಾಗ ಜನರು ತಮ್ಮ ಕಣ್ಣಿಗೆ ಕಾಣದ್ದೆನ್ನುವ, ಉಕ್ಕನ್ನು ಆವಿಯಾಗಿ ಕರಗಿಸುವುದೆಂದು ಭಾವಿಸುವ ಒಂದು ವಿಶೇಷ ಧಾತುವಾಗಿತ್ತು.
ಭಾರತದಲ್ಲಿ ಅದೆಷ್ಟೋ ಅನಾಹುತಗಳು, ದೌರ್ಜನ್ಯಗಳು ನಡೆದಿದ್ದರೂ ರಾಗ ಮಾತ್ರ ಸಾವಿರಾರು ವರ್ಷಗಳಿಂದ ಮೊದಲಿದ್ದಂತೆಯೇ ಉಳಿದುಕೊಂಡು ಬಂದಿದೆ. ರಾಗದ ಸಾರರೂಪವುಳ್ಳ ರಚನೆ ತೀರ ಸರಳ. ಅದಕ್ಕೆ ಐದು ಸ್ವರಗಳಷ್ಟೇ ಸಾಕು. ಇನ್ನೂ ಕೆಲವನ್ನು ಸೇರಿಸಿಕೊಳ್ಳಬಹುದು. ಆದರೆ ಅವುಗಳನ್ನು ರಾಗದ ನುಡಿಗಟ್ಟುಗಳು ಹೇಗೆ ಪಯಣಿಸುತ್ತವೆಯೋ ಹಾಗೆ ಅವುಗಳಿಗೆ ಪೋಷಕವಾಗುವಂತೆ ಪೋಣಿಸಬೇಕಾಗುತ್ತದೆ.
ಸಂಗೀತಜ್ಞ ರಾಘವ ಮೆನನ್ ಅವರ ಪ್ರಕಾರ ಪಾಶ್ಚಾತ್ಯ ಸಂಗೀತದಲ್ಲಿ ಒಂದು ನೋಟ್, ಅದು ಎಲ್ಲೇ ಬಳಸಲ್ಪಡಲಿ, ಅದಾಗಿಯೇ ಉಳಿದಿರುತ್ತದೆ. ಒಂದು ‘ಸಿ’ ಅಥವಾ ‘ಡಿ’ ಫ್ಲ್ಯಾಟ್ ಅಥವಾ ಬೇರೆ ಇನ್ನಾವುದೇ ನೋಟ್ ಕಾಗದದ ಮೇಲೆ ಮೂಡಿದಾಗ ಅಥವಾ ವಾದ್ಯದಲ್ಲಿ ನುಡಿಸಿದಾಗ ಯಾವುದೇ ಸಂದರ್ಭದಲ್ಲೂ ಬದಲಾಗದೆ ಒಂದೇ ರೀತಿಯಲ್ಲಿ ಧ್ವನಿಸುತ್ತದೆ. ಆದರೆ ಭಾರತೀಯ ಸಂಗೀತದಲ್ಲಿ ‘ಈ’ ಫ್ಲ್ಯಾಟ್ ಅಥವಾ ಕೋಮಲ ಗಾಂಧಾರ ಕಾಫಿ ರಾಗದಲ್ಲಿ ಒಂದು ರೀತಿ ಕೇಳಿಸಿದರೆ ದಬರ್ಾರಿಯಲ್ಲಿ ಇನ್ನೊಂದು ರೀತಿ, ಬಾಗೇಶ್ರೀಯಲ್ಲಿ ಮತ್ತೊಂದು ರೀತಿ ಕೇಳಿಸುವುದುಂಟು. ಯಾಕೆಂದರೆ ಅವು ಸ್ವರಗಳು; ಎರಡು ಬಾರಿ ಒಂದೇ ರೀತಿ ಕೇಳಿಸದ ಸ್ವರಗಳು. ಅವು ಸ್ವರಗಳಾಗಿರುವುದರಿಂದಲೇ, ಬೇರೆ ಬೇರೆ ರಾಗಗಳಲ್ಲಿ ಒಂದೇ ರೀತಿ ಕೇಳಿಸದಿರುವುದರಿಂದಲೇ ಅವುಗಳ ಸ್ವಭಾವವನ್ನು ಕಾಗದದ ಮೇಲೆ ಸಂಪೂರ್ಣವಾಗಿ ಪಡಿಮೂಡಿಸಲಾಗುವುದಿಲ್ಲ.

ರಾಗ ಸ್ವರವನ್ನು ಉಡದ ಹಾಗೆ ಹಿಡಿದುಕೊಂಡು ಬೇರೆ ಯಾವುದೇ ಮೋಹಕಾಂಶಗಳಿಗೆ ಮನಸೋಲದೆ ಸ್ವತಃ ಬೆಳೆಯುತ್ತ ಹೋಗುವುದರಲ್ಲೇ ಅದರ ಶಕ್ತಿಯಿದೆ, ತಾಳಿಕೆಯ ಗುಣವಿದೆ. ಅದು ಏಕಾಂಗಿಯಾಗಿ ಆವಿರ್ಭವಿಸುವುದಕ್ಕೆ ಕಾರಣ ಅದರ ಸ್ವಭಾವ.
ಮನುಷ್ಯ ದೇಹವನ್ನು ತೆಗೆದುಕೊಳ್ಳಿ. ಅದರಲ್ಲಿ ಕೆಲವು ಅಂಗಗಳು ಹೊರಗಿವೆ, ಇನ್ನು ಕೆಲವು ಒಳಗಿವೆ ಎಂದು ಹೇಳಲಾದೀತೆ? ದೇಹದ ಭಾಗಗಳು ಒಂದರ ನಂತರ ಇನ್ನೊಂದರಂತೆ ಸೃಷ್ಟಿಗೊಂಡವುಗಳಲ್ಲ; ದೇಹ ಮೊದಲು ಸೃಷ್ಟಿಯಾಗಿ ಅದರೊಳಗೆ ಉಳಿದ ಅಂಗಗಳನ್ನು ಸೇರಿಸಲಾಯಿತೆಂದು ಹೇಳುವಂತಿಲ್ಲ. ಆದ್ದರಿಂದಲೇ ಅನೇಕ ಮಂದಿ ಸಂಗೀತಗಾರರು ರಾಗಕ್ಕೆ ಅದರದೇ ಆದ ಜೀವವಿದೆಯೆಂದು ನಂಬಿರುವುದು. ಮತ್ತೆ ರಾಗವೆನ್ನುವುದು ಕೇವಲ ಸ್ವರಗಳ ಒಂದು ಗುಚ್ಛವಲ್ಲ. ಸಂಗೀತದ ‘ಮೇಳಕರ್ತ’ ಇದೆಯಲ್ಲ, ಅದು ರಾಗದ ಸಂಪೂರ್ಣ ಸ್ವರೂಪವಲ್ಲ. ‘ಮೇಳಕರ್ತ’ಗಳು ರಾಗವನ್ನು ರೂಪಿಸಬಲ್ಲ ಸ್ವರಗಳಷ್ಟೆ.
ಹಾರ್ಮೋನಿಯಂನಲ್ಲೋ ಪಿಯಾನೋದಲ್ಲೋ ರಾಗವನ್ನು ನುಡಿಸುವುದೇಕೆ ಕಷ್ಟ? ಯಾಕೆಂದರೆ ನಿರ್ದಿಷ್ಟ ‘ನೋಟ್’ಗಳಿಗಷ್ಟೇ ಸೀಮಿತವಾದ ಅಂಥ ವಾದ್ಯ ಸ್ವರವನ್ನು ಸಮರ್ಪಕವಾಗಿ ಹೊರಡಿಸಲಾರದು, ಹಾಗಾಗಿ ರಾಗವನ್ನೂ ಹೊಮ್ಮಿಸಲಾರದು. ಅಂಥ ವಾದ್ಯಗಳು ಹೆಚ್ಚೆಂದರೆ ‘ನೋಟ್’ಗಳನ್ನು ಅಥವಾ ರಾಗವೊಂದರ ಸ್ವರಗಳನ್ನು ನುಡಿಸಬಹುದಷ್ಟೆ. ಹಾಗೆ ನುಡಿಸಿದ್ದು ರಾಗವನ್ನು ಸೂಚಿಸಬಹುದಷ್ಟೇ ಹೊರತು ಸ್ವತಃ ರಾಗವೇ ಆಗಲಾರದು.
ಸ್ವರಗಳಿಗೆ ಏನೇನು ಲಕ್ಷಣಗಳಿವೆಯೋ ಅವೆಲ್ಲ ರಾಗಗಳಿಗೂ ಇವೆ. ಆದರೆ ರಾಗಗಳು ಮಾತ್ರ ಇನ್ನೂ ಕೆಲವು ಸಂಕೀರ್ಣಾಂಶಗಳನ್ನು ಒಳಗೊಂಡಿರುತ್ತವೆ. ರಾಗವನ್ನು ಆಗಮಾಡಿಸುವುದಕ್ಕೆ ಕೆಲವು ನಿಯಮಗಳೂ ಉಂಟು: ಐದು, ಆರು ಅಥವಾ ಏಳು ಸ್ವರಗಳು, ನಿರ್ದಿಷ್ಟ ಆರೋಹಣ, ಅವರೋಹಣ, ಕೆಲವು ಪ್ರಮುಖ ಸ್ವರಗಳು, ಸ್ವರಗುಚ್ಛಗಳು, ಹೀಗೆ. ಇವು ನಿಯಮಗಳು, ಹೌದು. ಆದರೆ ಇವುಗಳನ್ನು ಅರಿತುಕೊಳ್ಳುವುದರಿಂದ, ಕೇಳಿ ಕೇಳಿ ಗುರುತುಹಿಡಿಯುವುದರಿಂದ ರಾಗರಹಸ್ಯವನ್ನು ಬಗೆದು ನೋಡಿದಂತಾಗದು. ಅವು ಏನಿದ್ದರೂ ರಾಗಗಳ ಸ್ವಭಾವವನ್ನು ಗುರುತಿಸಬಲ್ಲ ಸಾಧನಗಳಷ್ಟೆ. ಚಾರ್ಲಿ ಚಾಪ್ಲಿನ್ನನ ನಡಿಗೆಯ ಶೈಲಿಯಿಂದ ಅವನ ನಟನಕೌಶಲವನ್ನು ಊಹಿಸಬಹುದಾದಂತೆ.
ರಾಗದ ನಿಮಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಮೂಲಕ ರಾಗವನ್ನು ಸೃಷ್ಟಿಸಲಾಗದೇಕೆ? ಯಾಕೆಂದರೆ ರಾಗವೆನ್ನುವುದು ಆ ಕ್ಷಣದ ಸೃಷ್ಟಿ. ಅದೊಂದು ಜೀವಂತ ಸಂಗತಿಯಾಗಿರುವುದರಿಂದ ಅದರ ಲಕ್ಷಣ ಕೇವಲ ಆಕೃತಿಯಷ್ಟೇ ಅಲ್ಲ. ಅದಕ್ಕೆ ನೆನಪುಗಳ ಹಂಗಿಲ್ಲ, ಕಳೆದ ಕಾಲದ ಹಳಹಳಿಕೆಯಿಲ್ಲ; ಅದರಲ್ಲಿ ಭವಿಷ್ಯದ ಮುನ್ಸೂಚನೆಯ ಮಿಡಿತವಿಲ್ಲ. ಆದ್ದರಿಂದಲೇ ಶ್ರೋತೃವಾದವನು ಮೈಯೆಲ್ಲ ಕಿವಿಯಾಗಿರಬೇಕು. ಅವನು ಒಂದು ಕ್ಷಣದಷ್ಟು ಏಕಾಗ್ರತೆಯನ್ನು ಕಳೆದುಕೊಂಡರೂ ಸಂಗೀತಾನುಭವದ ಕಿಂಚಿತ್ ದಿವ್ಯದರ್ಶನವನ್ನು ಕಳೆದುಕೊಳ್ಳಲಿಕ್ಕೆ ಸಾಕು.
ರಾಗದಲ್ಲಿ ಪರಿಪೂರ್ಣತೆ ಎಂಬುದಿಲ್ಲ. ಅದು ವಾಸ್ತವ ಜೀವನದಲ್ಲಿಯಂತೆ ಸದಾ ಸಂಭವಿಸಲಿರುವ ಸ್ಥಿತಿಯಲ್ಲಿರುವಂಥದು; ಈ ಕ್ಷಣ ಹುಟ್ಟಿ ಈ ಕ್ಷಣದಲ್ಲೇ ಉಳಿಯುವಂಥದು. ಅದರ ಭೂತಕಾಲದಲ್ಲಿ ಏನೂ ಇಲ್ಲ. ಅದು ಹೇಗೆ ಆಗಮಿಸಿತೋ ಹಾಗೆಯೇ ಮತ್ತೆ ಆಗಮಿಸಲಾರದು. ಅದನ್ನು ಒಂದು ಚಿತ್ರದಂತೆ ಅಥವಾ ಶಿಲ್ಪದಂತೆ ಗೋಡೆಗೆ ತೂಗುಹಾಕಲಾಗದು, ಒಂದು ಬುನಾದಿಯ ಮೇಲೆ ನಿಲ್ಲಿಸಲಾಗದು. ತಂಬೂರಿಯ ಶ್ರುತಿಯೊಡನೆ ತತ್ಕ್ಷಣ ಸಂಭವಿಸುವ ಅದು ತಂಬೂರಿಯ ಅನುರಣನದಂತೆಯೇ ಅದಿ, ಅಂತ್ಯಗಳಿಲ್ಲದ್ದು.
ಆದ್ದರಿಂದಲೇ ರಾಗವನ್ನು ಸೃಷ್ಟಿಸಲಾಗದು ಅಥವಾ ಕಂಡುಹಿಡಿಯಲಾಗದು. ಅದನ್ನು ಹುಡುಕಿಕೊಳ್ಳಬೇಕಷ್ಟೆ. ಯಾಕೆಂದರೆ ಸಂಗೀತಜ್ಞರು ಹೇಳುವಂತೆ ರಾಗಗಳು ಮನುಕುಲದ ಸುಪ್ತಪ್ರಜ್ಞೆಯಲ್ಲಿ ಮಲಗಿದ್ದು ಸ್ವರಗಳ ಧಾತುವನ್ನು ಮತ್ತು ಸತ್ವವನ್ನು ಬಲ್ಲ ಸೃಜನಶೀಲ ಸಂಗೀತಗಾರನೊಬ್ಬ ಬಳಿಗೆ ಬಂದು ಎಬ್ಬಿಸುವುದಕ್ಕಾಗಿ ಕಾಯುತ್ತಿರುತ್ತವೆ.
ಡಿ.ವಿ.ಜಿ. ‘ನಮ್ಮ ಸಂಗೀತ’ ಎಂಬ ಲೇಖನದಲ್ಲಿ ಬರೆದಿರುವುದನ್ನು ನೋಡಿ: ಒಂದೊಂದು ರಾಗದಲ್ಲೂ ನೂರು ಬಗೆಯ ಸ್ವರಯೋಜನೆ ಸಾಧ್ಯವಿರಬಹುದು. ಆದರೆ ಆ ನೂರೂ ಮೇಲ್ಮಟ್ಟದ ಸೊಗಸಲ್ಲ. ಸೊಗಸು ಕೆಲವು ಸ್ವರ ಕಲ್ಪನೆಗಳಲ್ಲಿ ಹೆಚ್ಚು, ಕೆಲವದರಲ್ಲಿ ಕಡಮೆ; ಕೆಲವದರಲ್ಲಿ ಇರಲೇ ಇರದು…. ರಾಗವು ರಂಜಕವಾಗಿರಬೇಕು. ಈ ರಂಜನಶಕ್ತಿ ಎಲ್ಲ ರಾಗಗಳಲ್ಲಿಯೂ ಒಂದೇ ಪರಿಣಾಮದಲ್ಲಿಲ್ಲ. ಎಷ್ಟೋ ರಾಗಗಳು ರಚನೆಯಲ್ಲಿ ರಾಗಗಳಾಗಿ, ಪರಿಣಾಮದಲ್ಲಿ ರಾಗಶಕ್ತಿವಿಹೀನವಾಗಿರುತ್ತವೆ. ರಂಜಕ ಗುಣವನ್ನು ನೋಡಿ ರಾಗವನ್ನು ಚುನಾಯಿಸಬೇಕು.
ನೀವು ಪ್ರಯೋಗಶೀಲರಾದರೆ, ಹೊಸ ಆವಿಷ್ಕಾರವನ್ನು ಬಯಸುವವರಾದರೆ ಒಂದು ರಾಗಕ್ಕೆ ಇನ್ನೊಂದು ಸ್ವರವನ್ನು ಸೇರಿಸುವುದರಿಂದ ಅಥವಾ ಒಂದು ರಾಗಕ್ಕೆ ಇನ್ನೊಂದು ರಾಗವನ್ನು ಕಸಿಮಾಡುವುದರಿಂದ ಹೊಸದೊಂದು ರಾಗವನ್ನು ಸೃಷ್ಟಿಸಬಹುದಷ್ಟೆ. ಆದರೆ ನಿಮ್ಮ ಬುದ್ಧಿಮತ್ತೆಯ ಕಿರುದಾರಿಯಲ್ಲಿ ಬಹು ದೂರ ಸಾಗಲಾರದ ಆ ರಾಗ ನಿಮ್ಮ ತುಟಿಯ ಮೇಲೆಯೇ ಅಸುನೀಗಿದರೆ ಆಶ್ಚರ್ಯವಿಲ್ಲ. ರಾಗ ಜೀವ ಪಡೆದುಕೊಳ್ಳುವುದು ಸಂಗೀತಗಾರನಿಂದ. ಅದು ಒಳಗೊಳ್ಳ್ಳಬಯಸುವುದು ಸಂಗೀತಗಾರನ ಬದುಕನ್ನು. ತ್ಯಾಗರಾಜ, ತಾನ್ಸೇನ್ ಮೊದಲಾದವರು ಸ್ವರಸಮುದ್ರದಲ್ಲೇ ಮುಳುಗಿಹೋಗಿದ್ದವರು. ಅವರ ಸಂಗೀತ ಕೃತಿಗಳು ಇನ್ನೂ ಉಳಿದಿರುವುದಕ್ಕೆ ಆ ಕೃತಿಗಳ ಅರ್ಥವಷ್ಟೇ ಕಾರಣವಲ್ಲ; ಆ ಕೃತಿಗಳು ಯಾವ ರಾಗಗಳಲ್ಲಿ ರಚಿತವಾಗಿವೆಯೋ ಆ ರಾಗಗಳಲ್ಲಿ ಮಿಡಿಯುತ್ತಿರುವ ಜೀವನಾಡಿಯೂ ಕಾರಣವೇ.
ರಾಗವನ್ನು ಕಲಿಯುವುದು ಹೇಗೆ? ಕಲಿಯಬಯಸುವ ವಿದ್ಯಾಥರ್ಿಗಳು ತಮ್ಮ ಗುರುವಿನ ಗುಲಾಮರಾಗಿ ಅವರನ್ನು ಅನುಕರಿಸಬೇಕು; ಮೊದಮೊದಲು ತಮ್ಮ ಗುರುವನ್ನು ಸ್ವರ ಸ್ವರಗಳಿಂದ, ನುಡಿಗಟ್ಟು ನುಡಿಗಟ್ಟುಗಳಿಂದ ಅನುಸರಿಸುತ್ತ ಒಂದು ಹೊತ್ತಿಗೆ ರಾಗದ ಒಂದು ತುಣುಕನ್ನಷ್ಟೆ ಕಲಿಯಬೇಕು; ದಿನಗಟ್ಟಲೆ ತೀವ್ರ ಏಕಾಗ್ರತೆಯಿಂದ ರಾಗದ ಆಳ ಅಗಲಗಳಲ್ಲಿ ಸಂಚರಿಸುತ್ತ ಅದರ ಜೀವಜಲದಲ್ಲಿ ಮುಳುಗೇಳಬೇಕು. ಇದು ಸಾಧ್ಯವಾಗುವುದು ಸ್ವರಗಳ ಅಭ್ಯಾಸದಿಂದ.
ಪಂಡಿತ್ ಭೀಮಸೇನ ಜೋಶಿಯವರು ಒಂದೆಡೆ ಬರೆದಿರುವಂತೆ ಸವಾಯಿ ಗಂಧರ್ವರು ಒಂದು ರಾಗವನ್ನು ಪ್ರಾರಂಭ ಮಾಡಿದರೆ ಪ್ರತಿ ಸ್ವರವನ್ನು ಹಿಂಡಿ ಹಿಪ್ಪೆ ಮಾಡಿ, ಅದರ ರಸವನ್ನು ಸ್ವತಃ ಪಾನಮಾಡಿ, ಕೇಳುವವರಿಗೂ ಕುಡಿಸುತ್ತಿದ್ದರು. ಅವರು ಕಲೆಯಲ್ಲಿ ಎಷ್ಟು ಶ್ರೀಮಂತರೋ ಸ್ವರಗಳ ಬಳಕೆಯಲ್ಲಿ ಅಷ್ಟೇ ಜಿಪುಣರು…. ಆಲಾಪನೆ ಮಾಡುವಾಗ, ಚೆಂಡಿನ ಆಟದಲ್ಲಿ ಒಂದು ಸಲ ಬಂದ ಹಾಗೆ ಚೆಂಡು ಇನ್ನೊಂದು ಸಲ ಹೇಗೆ ಬರುವುದಿಲ್ಲವೋ ಹಾಗೆ ಅವರ ಸ್ವರಗಳ ಆಟ ನಡೆಯುತ್ತಿತ್ತು. ಅಂತೇ ಅವರು ಮೂರು ನಾಲ್ಕೇ ಸ್ವರಗಳಲ್ಲಿ ಅರ್ಧ ಗಂಟೆಯವರೆಗೆ ಕೇಳುವವರಿಗೆ ಆಶ್ಚರ್ಯವಾಗುವಂತೆ, ಬೇಸರ ಬಾರದಂತೆ ಆಲಾಪನೆ ಮಾಡುತ್ತಿದ್ದರು.
ನೀವು ಪ್ರಸ್ತುತಪಡಿಸುವ ರಾಗದಲ್ಲಿ ಜೀವವಿಲ್ಲದಿದ್ದರೆ ನಿಮಗೆ ಸ್ವರದಲ್ಲಿರುವ ನೋವಾಗಲೀ ಅತಂಕವಾಗಲೀ ಗೊತ್ತಿಲ್ಲವೆಂದೇ ಅರ್ಥ. ಆದ್ದರಿಂದಲೇ ನಿಮ್ಮ ರಾಗದಲ್ಲಿ ಮೈನವಿರೇಳಿಸುವ ಶಕ್ತಿಯಾಗಲೀ, ಸಾಂದ್ರವಾದ ಉಲ್ಲಾಸವಾಗಲೀ ಇರುವುದಿಲ್ಲ. ಶಾಸ್ತ್ರನಿಯಮಗಳಿಗೆ ಬದ್ಧವಾಗಿರಬಹುದಾದ ನಿಮ್ಮ ರಾಗದಲ್ಲಿ ವಾದಿ ಸಂವಾದಿ ಸ್ವರಗಳಿರಬಹುದು; ದಾಂಗುಡಿಯಿಡುವ ಮೂರ್ಛನಗಳಿರಬಹುದು. ಆದರೆ ಜೀವವಂತೂ ಇರುವುದಿಲ್ಲ.
ರಾಗವೆನ್ನುವುದು ಆನೆ, ನವಿಲು, ಜಿಂಕೆ ಮೊದಲಾದ ಪ್ರಾಣಿಗಳನ್ನು, ಹೂಬಳ್ಳಿಗಳ ಕಮಾನುಗಳನ್ನು ಸುಂದರವಾಗಿ ಕೆತ್ತಿರುವ ಒಂದು ಮರದ ಬಾಗಿಲಿದ್ದಂತೆ. ಸ್ವತಃ ಸುಂದರವಾಗಿರುವ, ಮನಮೋಹಕವಾಗಿರುವ ಆ ಬಾಗಿಲು ಒಬ್ಬ ಪ್ರತಿಭಾವಂತ ಸಂಗೀತಗಾರನ ಮೂಲಕ ತೆರೆದುಕೊಂಡಾಗ ಒಳಗೆ ಕಾಣಿಸುವುದು ನಮಗೆ ಬೇರಾವ ಕಲೆಯಲ್ಲೂ ದಕ್ಕದ ಒಂದು ಅನುಭವ ವಿಶೇಷ. ಅದು ಅನಿರ್ವಚನೀಯವಾದದ್ದು.

‍ಲೇಖಕರು G

June 26, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. vijayaraghavan R

    ಎಸ್ ದಿವಾಕರ್ ಅವರ ಲೇಖನ ಸುಂದರವಾಗಿದೆ. ನಂಬಿಯಾರ್ ಅವರ ಆಲೋಚನೆಯೂ. ಭಾರತೀಯ ಸಂಗೀತದಂತೆಯೇ ಅದಕ್ಕೆ ಮಹತ್ತರ ಕೊಡುಗೆ ಕೊಟ್ಟವರನ್ನು ಈ ಶೈಲಿಯಲ್ಲಿ ಪರಿಚಯಿಸಿದರೆ ಚೆನ್ನ.
    ಭಾರತೀಯ ಸಂಗೀತಕ್ಕೆ ಮುಘಲರ ಕೊಡುಗೆ ಬಹಳವಾದದ್ದು. ಅಕ್ಬರನ ಆಡಳಿತ ಕಾಲದಲ್ಲಿ ದೃಪದ್ ಶೈಲಿಯ ಸಂಗೀತಗಾರರಿಗೆ ದೊರೆತ ಮಾನ್ಯತೆಯಿಂದಾಗಿ ಸಂಗೀತರಸ ಹರಿದು ಕಡಲಂತೆ ಉಕ್ಕಿತು. ಅಂದಿನ ಸಂಗೀತಗಾರರಲ್ಲಿ ಮುಖ್ಯನಾದವ ತಾನ್‌ಸೇನ್. ಅವನು ಧೃವಪಾದ ಸಂಗೀತದ ಗಮಕ, ಮೀಂಡ್‌ಗಳ ಒಳಕ್ಕೆ ಪರ್ಷಿಯನ್ ಸಂಗೀತದ ಉತ್ಕೃಷ್ಟ ಅಂಶಗಳನ್ನು ಬೆಸೆದವನು, ಹೊಸರೂಪದ ಸೃಷ್ಟಿಗೆ ಕಾರಣನಾದವನು ಎನ್ನುತ್ತಾರೆ. ರುದ್ರ ವೀಣೆಂiiನ್ನು ಕಂಡುಹಿಡಿದವನು, ದರ್ಬಾರೀ ಕಾನಡ, ದರ್ಬಾರೀ ತೋಡಿ, ಮಿಯಾ ಕಿ ಮಲ್ಹಾರ್ ಮುಂತಾದ ಸುಂದರ ರಾಗಗಳನ್ನು ಭಾರತೀಯ ಸಂಗೀತಕ್ಕೆ ಕೊಟ್ಟವನೂ ಅವನೆ. ಅಕ್ಬರ್, ಷಹಜಹಾನರ ಬಳಿಕ ನಮಗೆ ಕೇಳಿಬರುವ ಇನ್ನೊಂದು ಹೆಸರು ಕೊನೆಯ ಕೊಂಡಿಯಾಗಿದ್ದ ಬಹಾದ್ದೂರ್ ಷಾಹ್ ಜ಼ಫರ್‌ನದು. ಅವನ ಕಾಲ ೧೮೩೭-೧೮೫೭.
    ಬದುಕಿನಲ್ಲಿ ಬೇಕಾಗುವ ಮಾನಸಿಕ ಆಸರೆಗಳು ಮತ್ತು ಅವನ್ನು ಮೀರಿಸುವ ದೃಢತೆಯನ್ನು ಆತ್ಮಸ್ಥೈರ‍್ಯವನ್ನು ಗುರು ತಂದುಕೊಡಬಲ್ಲ. ಹಾಗಾಗಿ ಗುರು ತಾನು ಅತ್ಯಂತ ಅಗತ್ಯವೂ, ಅಗತ್ಯವೆನ್ನುವುದು ತಾನೇ ಆಗಿಬಿಡಬಾರದು ಎಂಬ ಎರಡು ದ್ರುವಗಳನ್ನು ಒಂದು ಬಿಂದುವಿನಲ್ಲಿ ಕೂಡಿಸಬಲ್ಲ ಮಹಾನ್ ಶಕ್ತಿಯಾಗಿರುತ್ತಾನೆ. ತನ್ನನ್ನು ತಾನು ಕೊಟ್ಟುಕೊಳ್ಳುತ್ತಲೇ ತಾನು ಮೇಲುಮೇಲಕ್ಕೆ ಸಾಗುತ್ತಿರುತ್ತಾನೆ. ಅರಿಯಲು ಶಿಷ್ಯನಿಗೆ ಏನನ್ನೋ ಉಳಿಸಿಡುತ್ತಲೇ ತಾನು ಕಡೆಯಂಚಿಗೆ ಸರಿದು ದಾರಿ ಬದಿಯ ಮೈಲಿಗಲ್ಲಾಗುತ್ತಾನೆ. ತನ್ನ ತೋರಲಲ್ಲ, ನಾ ಹಿಡಿದ ದಾರಿಯ ಹಿಡಿದು ನಡೆ, ನನಗಿಂತ ದೂರ. ಕಾಣಲಿ ನಾ ಕಾಣದ ನೋಟ ನಿನಗೆ ಎಂದು ಹರಸಿ ಮುಂದಕ್ಕೆ ಕಳಿಸಲು. ಕರೆದೊಯ್ಯಲಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: