ಸಂಧ್ಯಾರಾಣಿ ಕಾಲಂ : ಖಡ್ಗಗಳ ಮೇಲೆ ಶಾಂತಿ ಮಂತ್ರಗಳನ್ನು ಕೆತ್ತಿರುವ ದಿನಗಳು…


ಅಗಸ್ಟ್ ೨೦, ೨೦೧೩, ದೇಶ ರಕ್ಷಾಬಂಧನಕ್ಕಾಗಿ ಅಣಿಯಾಗುತ್ತಿತ್ತು. ಸಮಯ ಬೆಳಗ್ಗೆ ೭.೨೦. ಪುಣೆಯ ಓಂಕಾರೇಶ್ವರ ದೇವಸ್ಥಾನದ ಸೇತುವೆಯ ಮೇಲೆ ಸುಮಾರು ೬೭ ವಯಸ್ಸಿನ ಒಬ್ಬ ವೃದ್ಧರು ಬೆಳಗಿನ ವಾಕಿಂಗ್ ಗೆ ಹೊರಟಿದ್ದರು. ಒಂದು ಬೈಕು, ಇಬ್ಬರು ಹಂತಕರು. ಪಾಯಿಂಟ್ ಬ್ಲಾಂಕ್ ರೇಂಜಿನಲ್ಲಿ ಹಾರಿದ ಗುಂಡುಗಳು, ಎರಡು ಅವರ ತಲೆಯ ಹಿಂಭಾಗವನ್ನು, ಎದೆಯನ್ನು ಸೀಳಿ ಆ ವೃದ್ಧರು ತಮ್ಮದೇ ರಕ್ತದ ಕೆಂಪಿನ ನಡುವೆ ಕಥೆಯಾಗಿ ಹೋದರು. ಹತ್ಯೆ ನಡೆದ ಸ್ಥಳದಲ್ಲಿ, ಪೋಲೀಸರ ವಿಚಾರಣೆ ನಡುವೆ, ಸುತ್ತ ಮುತ್ತಲಿದ್ದ ಜನಗಳ ನೂಕು ನುಗ್ಗಲಿನ ನಡುವೆ, ಟಿವಿ ಕ್ಯಾಮೆರಾ, ಮೈಕುಗಳ ನಡುವೆ, ವರದಿಗಾರರ ಮಾತುಗಳ ನಡುವೆ ಒಂದು ಜೊತೆ ಚಪ್ಪಲಿಗಳು ಮಾತ್ರ ಮತ್ತೆಂದೂ ಹಿಂದಿರುಗದ ತಮ್ಮ ಸಖನಿಗಾಗಿ ಕಾಯುತ್ತಲೇ ಇದ್ದವು…
ಇಲ್ಲ ಆ ವೃದ್ಧರು ಯಾವ ಮಾಫಿಯಾಕ್ಕೂ ಸೇರಿದವರಾಗಿರಲಿಲ್ಲ, ಇಲ್ಲ ಅವರು ಯಾವ ನೆಲ ಖರೀದಿಯ ದುಡ್ಡಿನ ಲೇವಾದೇವಿಯಲ್ಲಿರಲಿಲ್ಲ, ಅವರಿಗಾಗಿ ಯಾವ ಪೋಲೀಸರೂ ಹುಡುಕುತ್ತಿರಲಿಲ್ಲ ….. ಅವರು ಒಬ್ಬ ವೈದ್ಯರಾಗಿದ್ದರು, ೧೫ ವರ್ಷ ಒಂದು ಪತ್ರಿಕೆಯ ಸಂಪಾದಕರಾಗಿದ್ದರು. ಹಾಗಾದರೆ ಅವರು ಮಾಡಿದ ಯಾವ ತಪ್ಪಿಗಾಗಿ ಅವರತ್ತ ಗುಂಡು ಹಾರಿಸಲಾಯಿತು? ಇಷ್ಟಕ್ಕೂ ಅವರು ಯಾರು??
ಅವರ ಹೆಸರು ನರೇಂದ್ರ ದಾಭೋಲ್ಕರ್, ಡಾ ನರೇಂದ್ರ ದಾಭೋಲ್ಕರ್, ಅವರು ಹಂಚಲು ಹೊರಟಿದ್ದು ಬೆಳಕನ್ನು. ಅವರ ಹೋರಾಟ ಇದ್ದದ್ದು ಮೂಢನಂಬಿಕೆಗಳ ವಿರುದ್ಧ, ಮೂಢ ಆಚರಣೆಗಳ ವಿರುದ್ಧ. ಈ ಬಗ್ಗೆ ಸರಕಾರ ಒಂದು ಮಸೂದೆ ಮಂಡಿಸಬೇಕು. ಮೂಢ ನಂಬಿಕೆಗಳನ್ನು ಪ್ರಚೋದಿಸುವುದನ್ನು, ಹೇರುವುದನ್ನು ಶಿಕ್ಷಾರ್ಹ ಅಪರಾಧ ಎಂದು ಸರಕಾರ ಪರಿಗಣಿಸಬೇಕು ಎಂದು ಅವರು ಹೋರಾಟ ಮಾಡುತ್ತಿದ್ದರು. ಇದು ಅವರ ಅಪರಾಧ. ಯಾವುದೇ ವಿಚಾರಣೆ ಇಲ್ಲದೆ, ನೇರವಾಗಿ ಶಿಕ್ಷೆ ಜಾರಿ. ಮುಂಜಾವಿನಲ್ಲಿ ಪುಣೆಯಲ್ಲಿ ಹಾರಿದ ಆ ಗುಂಡುಗಳು ಹಾಗೆ ಒಂದು ಜೀವವನ್ನು ಬಲಿ ತೆಗೆದುಕೊಂಡಿದ್ದವು.
ಮರು ದಿನ ಸನಾತನ ಪ್ರಭಾತ್ ಎನ್ನುವ ದೈನಿಕ ತನ್ನ ಸಂಪಾದಕೀಯದಲ್ಲಿ ಬರೆಯುತ್ತದೆ, one gets what he deserves, ಅಥವಾ ಕನ್ನಡದಲ್ಲಿ ಹೇಳುವುದಾದರೆ, ಮಾಡಿದ್ದುಣ್ಣೋ ಮಹಾರಾಯ … ಯಾಕೋ ಕರುಳಲ್ಲಿ ಸಂಕಟ ಆಗುತ್ತಿತ್ತು. ಎಲ್ಲೋ ಪುಣೆಯಲ್ಲಿ ಆದ ಸಾವು ಇದು ಅಂತ ಅನ್ನಿಸುತ್ತಿರಲಿಲ್ಲ, ನನ್ನ ಮನೆಯ ಸಾವಿನಂತೆ, ಅನ್ಯಾಯವಾಗಿ ಆದ ಕೊಲೆಯಂತೆ ಮನಸ್ಸಿಗೆ ಮಂಕು, ಮೂಕ ಆಕ್ರೋಶ… ಬೆಳ್ಳಂಬೆಳಗ್ಗೆ ಹಾಗೆ ತನ್ನ ವೈಚಾರಿಕತೆಯೇ ಅಪರಾಧವಾಗಿ ಹತ್ಯೆಗೊಳಗಾದವರನ್ನು ಕಂಡು ಸಂಕಟ ಪಡಲೋ ಅಥವಾ ಆ ಕೊಲೆಯನ್ನು ಒಂದು ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಹೀಗೆ ಸಮರ್ಥಿಸಿಕೊಂಡದ್ದನ್ನು ಕಂಡು ಆಘಾತಗೊಳ್ಳಲೋ?
ಒಂದು ಕಾಲದಲ್ಲಿ ಮಾಟ ಮಂತ್ರ ಮಾಡುವವರನ್ನು, ವಾಮಾಚಾರ ಮಾಡುವವರನ್ನು ಹಿಡಿದು ಊರ ಜನ ಅಂತವರ ಹಲ್ಲು ಮುರೀತಾ ಇದ್ದರಂತೆ, ಮಂತ್ರಗಳು ಸ್ಫುಟವಾಗಿ ಬಾರದಿದ್ದರೆ ವಾಮಾಚಾರ ಫಲಿಸುವುದಿಲ್ಲ ಅಂತ. ಮಾಟಗಾತಿಯರನ್ನು ಕೊಲ್ಲುತ್ತಿದ್ದರಂತೆ. ಈ ವೈರುಧ್ಯ ನೋಡಿ, ವಿಜ್ಞಾನ ಇಷ್ಟು ಅಭಿವೃದ್ಧಿ ಆದ ಮೇಲೆ, ಜಗತ್ತೆಲ್ಲಾ ನಮ್ಮ ನಮ್ಮ ಮನೆಯ ಕಿಟಕಿಯಲ್ಲಿ ಕೂತ ಮೇಲೆ, ವಸುಧೈಕ ಕುಟುಂಬಂ ಎನ್ನುವಂತೆ ಸಮೂಹ ಮಾಧ್ಯಮಗಳು ಬೆಳೆದ ಮೇಲೆ, ಇಷ್ಟು ಸೋ ಕಾಲ್ಡ್ ಮುನ್ನಡೆಯ ನಂತರ ನಾವು ಏನು ಮಾಡುತ್ತಿದ್ದೇವೆ??? ದಿನದ ಬೆಳಕಿನಲ್ಲಿ, ಮೂಢನಂಬಿಕೆಯನ್ನು ವಿರೋಧಿಸಿದವರನ್ನು ಗುಂಡಿಟ್ಟು ಕೊಲ್ಲುತ್ತಿದ್ದೇವೆ.
’ಗಾಂಧಿಯನ್ನು ಕೊಂದವರೇ ನರೇಂದ್ರರನ್ನು ಕೊಂದರು’ ಎಂದರು ಮಹಾರಾಷ್ಟ್ರದ ಮುಖ್ಯಮಂತ್ರಿ. ಹೌದು ಗಾಂಧೀಜಿಯನ್ನು ಕೊಂದವನನ್ನೇ ಸಮರ್ಥಿಸಿಕೊಂಡವರಿರುವಾಗ ದಾಭೋಲ್ಕರ್ ಸಾಬ್ ನೀವ್ಯಾವ ಲೆಕ್ಕ ನಮಗೆ??

ಅವರು ಒಂದು ಕಾಲದಲ್ಲಿ ರಾಷ್ಟ್ರೀಯ ಟೀಮಿನಲ್ಲಿ ಕಬಡ್ಡಿ ಚಾಂಪಿಯನ್, ನಂತರ ವೈದ್ಯ ಪದವಿ, ಸುಮಾರು ೧೫ ವರ್ಷ ವೈದ್ಯಕೀಯ ಸೇವೆ, ಆಮೇಲೆ ಸಾಮಾಜಿಕ ಹೋರಾಟಗಳು, ಬಾಬ ಆಧವ್ ಅವರ ನೇತೃತ್ವದಲ್ಲಿ ’ಒಂದು ಹಳ್ಳಿ, ಒಂದು ಭಾವಿ’ ಚಳುವಳಿಯಿಂದ ಜನರ ನಡುವೆ ಬಂದ ದಾಭೋಲ್ಕರರದು ಅಂಧಶೃದ್ಧೆಯ ವಿರುದ್ಧದ ಎರಡು ದಶಕಗಳ ಹೋರಾಟ. ಇವರು ’ಸಾಧನಾ’ದ ಸಂಪಾದಕರು, ಅಂಧಶೃದ್ಧಾ ನಿರ್ಮೂಲನಾ ಸಮಿತಿಯ ಸ್ಥಾಪಕರು. ಇವರ ಚಳುವಳಿಗಳ ಮೂಲ ಧಾತು ಎಂದರೆ ’ಎಲ್ಲಾ ಅಂಧವಿಶ್ವಾಸಗಳೂ, ಆಚರಣೆಗಳೂ ಬಡವರನ್ನು ಮತ್ತಷ್ಟು ಬಡವರನ್ನಾಗಿಸುತ್ತದೆ, ಮತ್ತಷ್ಟೂ ಸಾಲ ಮಾಡುವಂತೆ, ಮತ್ತಷ್ಟು ಕೆಳಗೆ ತಳ್ಳುವಂತೆ ಮಾಡುತ್ತಿವೆ, ಅವನ್ನು ಎದುರಿಸೋಣ. ಸರಕಾರಗಳು ಜನರ ತೆರಿಗೆಯ ಹಣವನ್ನು ಮಂದಿರ, ಮಸೀದಿ, ಚರ್ಚುಗಳ ಉದ್ಧಾರಕ್ಕೆ, ಜೀರ್ಣೋದ್ಧಾರಕ್ಕೆ ಬಳಸುವ ಬದಲು ಜನರ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಿ ಎನ್ನುವುದನ್ನು ಹೇಳುತ್ತಿತ್ತು.
ದಭೋಲ್ಕರ್ ಅವರು ಯಾವುದೇ ಸುಗ್ರೀವಾಜ್ಞೆ ಹೊರಡಿಸಲು ಕೇಳಿರಲಿಲ್ಲ, ತುರ್ತು ಪರಿಸ್ಥಿತಿ ಜಾರಿ ಆಗಲಿ ಎಂದು ಒತ್ತಾಯಿಸಿರಲಿಲ್ಲ, ಧರ್ಮವನ್ನು, ಧರ್ಮದ ಬಗೆಗಿನ ನಂಬಿಕೆಯನ್ನು ಪ್ರಶ್ನಿಸಿರಲಿಲ್ಲ. ಯಾವುದೇ ಧರ್ಮದ ವಿರುದ್ಧ ಅವರ ಹೋರಾಟ ಇರಲಿಲ್ಲ. ಧಾರ್ಮಿಕ ನಂಬಿಕೆಗಳ ಅವಹೇಳನ ಮಾಡಲಿಲ್ಲ. ಅವರು ಕೇಳಿದ್ದೆಲ್ಲಾ ಮೂಢನಂಬಿಕೆಗಳನ್ನು ವಿರೋಧಿಸಿ ಒಂದು ಮಸೂದೆ ಹೊರಡಿಸಿ ಎಂದಷ್ಟೇ. ಅವರ ಹೋರಾಟ ಇದ್ದದ್ದು ಮೂಢ ಆಚರಣೆಗಳ ವಿರುದ್ಧ, ಸೋ ಕಾಲ್ಡ್ ದೇವ ಮಾನವರ ವಿರುದ್ಧ, ಡೋಂಗಿ ಬಾಬಾಗಳ ವಿರುದ್ಧ, ಅಸಾರಾಂ, ನಿರ್ಮಲಾನಂದ ಇಂತಹ ವಿಕೃತ ಸ್ವಾಮಿಗಳ ವಿರುದ್ಧ … ಇದು ಯಾವಾಗ ಅಧರ್ಮ ಆಯಿತು?
ಹಾಗೆ ಧರ್ಮದ ಮೂಢ ಆಚರಣೆಗಳನ್ನು ಪ್ರಶ್ನಿಸುವುದೇ ತಪ್ಪು ಅಂತಿದ್ದರೆ ಇಂದಿಗೂ ಗಂಡ ಸತ್ತ ಮೇಲೆ ಹೆಣ್ಣು ಮಕ್ಕಳು ಸತಿ ಹೋಗುತ್ತಲೇ ಇರುತ್ತಿದ್ದರು, ಇಂದಿಗೂ ವಿದ್ಯೆ, ಕೆಲಸ ಎಲ್ಲವೂ ಜಾತಿ ಅಧಾರಿತವಾಗಿ ನಡೆಯುತ್ತಲೇ ಇತ್ತು, ಇಂದಿಗೂ ಹೆಣ್ಣು ಮಕ್ಕಳು ಹೊಸಿಲ ಒಳಗೆ ಬೇಯುತ್ತಲೇ ಒರುತ್ತಿದ್ದರು, ಇಂದಿಗೂ ಅಸಾರಾಂ ಬಾಪುಗಳು ಜೈಲಿಗೆ ಹೋಗುವ ಬದಲು ಆ ಹೆಣ್ಣು ಮಗುವನ್ನು ದೇವದಾಸಿ ಮಾಡಿ ಅವಳ ಜೀವನವನ್ನು ಮಣ್ಣುಗೂಡಿಸುತ್ತಿದ್ದರು.
ದಾಭೋಲ್ಕರ್ ಒಬ್ಬ ಅಹಿಂಸಾವಾದಿ. ಆದರೆ ಅವರ ವಾದಸರಣಿಯ ಸ್ಪಷ್ಟತೆ ಮತ್ತು ತೀಕ್ಷ್ಣತೆ ಅವರ ವಿರೋಧಿಗಳನ್ನು ಕಂಗೆಡಿಸುತ್ತಿತ್ತು. ಮೇಲೆ ಹೇಳಿದ ಸನಾತನ ಪ್ರಭಾತ್ ಎನ್ನುವ ಪತ್ರಿಕೆ ಅವರ ವಿರುದ್ಧ ವ್ಯವಸ್ಥಿತವಾಗಿ ಕೆಂಡ ಕಾರಿದ್ದಲ್ಲದೇ ಮುಖಪುಟದಲ್ಲಿ ಅವರ ಫೋಟೋ ಪ್ರಕಟಿಸಿ, ಕೆಂಪು ಮಸಿಯಲ್ಲಿ ಅದರ ಮೇಲೆ X ಮಾರ್ಕ್ ಎಳೆದು ಪ್ರಕಟಿಸಿತ್ತು. ಇವರ ವಿಚಾರವಾದ ಕೇವಲ ಬೌದ್ಧಿಕ ಮಟ್ಟದ್ದಾಗಿರಲಿಲ್ಲ. ಅವರು ನೆಲಮಟ್ಟಕ್ಕಿಳಿದು ಅಲ್ಲಿಂದ ಒಂದು ಆಂದೋಲನ ಕಟ್ಟಿದವರು. ಜನಗಳ ಜೊತೆ ಅವರ ಸಂಪರ್ಕ ಮತ್ತು ಅವರ ಪ್ರಭಾವ ಅವರ ವಿರೋಧಿಗಳ ಪಾಲಿಗೆ ಅವರನ್ನು ಬೇರೆ ವಿಚಾರವಾದಿಗಳಿಗಿಂತ ಹೆಚ್ಚು ಅಪಾಯಕಾರಿಯನ್ನಾಗಿ ಮಾಡಿರಬೇಕು.
ಮನುಷ್ಯರಿಗೆ ತಮ್ಮ ತಮ್ಮ ಧರ್ಮದ ಮೇಲೆ, ದೇವರ ಮೇಲೆ ನಂಬಿಕೆ ಹೋಗಿ, ಅವುಗಳಿಗಿಂತ ನಾವು ದೊಡ್ಡವರು ಎಂದು, ಅದನ್ನು ಕಾಯುವುದು ನಮ್ಮಿಂದ ಮಾತ್ರ ಸಾಧ್ಯ ಎಂದು ಕತ್ತಿ, ಬಂದೂಕು ಹಿಡಿದು ನಿಂತಾಗ ಬಹುಶಃ ಹೀಗಾಗುತ್ತೆ. ಉಸಿರಾಡುವ ಜೀವಕ್ಕಿಂತಾ ಯಾವುದೋ ಕಾಲದ, ಯಾವುದೋ ಶಾಸ್ತ್ರವೇ ದೊಡ್ಡದು ಎಂದುಕೊಂಡಾಗ ಹೀಗಾಗುತ್ತೆ. ವೈಯಕ್ತಿಕವಾಗಿರುವಾಗ ಸೌಮ್ಯವಾಗಿರುವ, ಬೆಳಕಾಗಿರುವ ಧರ್ಮ ಒಂದು ಸಾಂಸ್ಥಿಕ ರೂಪ ಪಡೆದು, ಸಾಂಘಿಕ ಶಕ್ತಿ ಪಡೆದು, ಒಂದು ಮಾಫಿಯಾದಂತೆ ವರ್ತಿಸುತ್ತಾ, ಪ್ರಶ್ನೆಗಳನ್ನು ಕೊಲ್ಲುತ್ತಾ ಹೋದಾಗ ಬಹುಶಃ ಹೀಗಾಗುತ್ತದೆ.
ವಿಚಾರಗಳನ್ನು ವಿಚಾರಗಳಿಂದ ಖಂಡಿಸುವುದನ್ನು ಬಿಟ್ಟು ಪುಸ್ತಕ ಬರೆದವರನ್ನು ಜೈಲಿಗೆ ಹಾಕಿ, ಪುಸ್ತಕ ನಿಷೇಧಿಸಿ, ಪ್ರಶ್ನೆ ಕೇಳುವವರನ್ನು ಗುಂಡು ಹಾಕಿ ಸುಡಿ ಎಂದಾದಾಗ, ಊರು ಊರಿನಲ್ಲಿಯೂ ಆಯತುಲ್ಲಾ ಖೊಮೇನಿಗಳು ಹುಟ್ಟಿಕೊಳ್ಳುತ್ತಾರೆ. ಮುತಾಲಿಕ್ ಗಳು ನಮ್ಮ ಕೋಡ್ ಆಫ್ ಕಾಂಡಾಕ್ಟ್ ಬರೆಯುತ್ತಾರೆ, ಸಾವಿರ ವರ್ಷಗಳ ಹಿಂದೆ ಬರೆದ ಗ್ರಂಥಗಳಲ್ಲಿನ ಬರಹಗಳಿಗಾಗಿ ಕೊಲೆ ಮಾಡಲೂ ಹೇಸದ ಜನ ನಮ್ಮ ಕಣ್ಣೆದುರಿಗೆ ಬರೆದ ಸಂವಿಧಾನಕ್ಕೆ ಯಾಕೆ ಗೌರವ ಕೊಡುವುದಿಲ್ಲ?
ಅಭಿವ್ಯಕ್ತಿ ಸ್ವಾತಂತ್ರ್ಯ ಇಂದು ಅಪಾಯದಲ್ಲಿದೆ.  ಇಲ್ಲಿ ನನ್ನ ನೆಲದಲ್ಲಿ ಒಂದು ಪುಸ್ತಕದ ವಿರುದ್ಧ ಶಕ್ತಿಗಳು ಕ್ರೋಢೀಕರಣಗೊಳ್ಳುತ್ತಿರುವ ರೀತಿ ನನಗೆ ಹೆದರಿಕೆ ಹುಟ್ಟಿಸುತ್ತದೆ. ಇಲ್ಲ ಆ ಪುಸ್ತಕದ, ಅದರಲ್ಲಿರಬಹುದಾದ ವಿವರಗಳ, ವಿಚಾರಗಳ ಹೆದರಿಕೆ ಇಲ್ಲ ನನಗೆ. ಪುಸ್ತಕದ ವಿಚಾರದಲ್ಲಿ ಉಳಿಯುವ ತಾಕತ್ತಿದ್ದರೆ ಅದು ಇರುತ್ತದೆ, ಇಲ್ಲದಿದ್ದರೆ ತನ್ನ ಸ್ವಾಭಾವಿಕ ಸಾವನ್ನು ಪಡೆಯುತ್ತದೆ. ಒಂದು ಪುಸ್ತಕಕ್ಕೆ ಹಾಗೆ ಮನುಷ್ಯರ ವಿಚಾರಗಳನ್ನೇ ಬದಲಿಸುವ ಶಕ್ತಿ ಇದ್ದಿದ್ದರೆ ಸದಾ ಸಹಿಷ್ಣುತೆಯನ್ನೇ ಬೋಧಿಸುವ ಧರ್ಮದ ಅನುಯಾಯಿಗಳು ಹೀಗೆ ವಿಚಾರವನ್ನು ಬಂದೂಕಿನಿಂದ ಎದಿರುಸುತ್ತಿರಲಿಲ್ಲ. ಹಾಗೆ ನಮ್ಮ ವೈಯಕ್ತಿಕ ನಂಬಿಕೆಯಾದ, ನೆಮ್ಮದಿ ಕೊಡಬೇಕಾದ ಧರ್ಮ ಸರ್ವಾಧಿಕಾರಿಯ ಯೂನಿಫಾರ್ಮ್ ಧರಿಸಿ, ಬಂದೂಕು ಹಿಡಿಯುತ್ತದೆ ಎಂದಾಗ ಅದರ ಹೆದರಿಕೆ ಇದೆ ನನಗೆ. ’ಪುಸ್ತಕ ನಿಷೇಧಿಸಿ, ಬರೆದವರನ್ನು ಜೈಲಿಗೆ ಹಾಕಿ’ ಎನ್ನುವ ಈ ಕೂಗು ನಾಳೆ ಅಭಿಪ್ರಾಯ ಭೇದ ವ್ಯಕ್ತಪಡಿಸಿದವರ ಫೋಟೋವನ್ನು ಪೇಪರಿನಲ್ಲಿ ಹಾಕಿ ಅದರ ಮೇಲೆ X ಮಾರ್ಕನ್ನು ಎಳೆಯುವ ಮನೋಭಾವವಾಗಿ ಬದಲಾಗಬಹುದು ಅನ್ನುವ ಹೆದರಿಕೆ ಇದೆ ನನಗೆ.
ಜನರ ವಿಚಾರ ಶಕ್ತಿಯ ಮೇಲೆ, ಬುದ್ಧಿ ಮತ್ತೆಯ ಮೇಲೆ ಯಾಕೆ ಇವರಿಗೆ ಇಷ್ಟು ಅಪನಂಬಿಕೆ? ಜನ ದಡ್ಡರಲ್ಲ, ಅವರನ್ನು ಓದಲು ಬಿಡಿ, ಕೇಳಲು ಬಿಡಿ, ನಿರ್ಣಯ ತೆಗೆದುಕೊಳ್ಳಲು ಬಿಡಿ. ಗಟ್ಟಿ ಉಳಿಯುತ್ತದೆ, ಜೊಳ್ಳು ಹಾರುತ್ತದೆ. ಸಾವಿರಾರು ವರ್ಷಗಳಿಂದ, ನೂರಾರು ಸವಾಲುಗಳನ್ನೆದುರಿಸಿ, ಪಕ್ವಗೊಂಡ ಒಂದು ಧರ್ಮ, ಒಂದು ಸಂಸ್ಕೃತಿ ಒಂದು ಪುಸ್ತಕದಿಂದ ವಿಕೃತಗೊಳ್ಳುತ್ತದೆ ಎಂದರೆ ಏನೆನ್ನಲಿ?
ಒಂದು ವಿಡಂಬನೆ ಎಂದರೆ, ಒಂದು ಪುಸ್ಕಕಕ್ಕೆ ಇಷ್ಟು ಪ್ರಚಾರ ಆ ಲೇಖಕರು, ಪ್ರಕಾಶಕರು ಎಷ್ಟು ದುಡ್ಡು ಸುರಿದರೂ ಸಿಕ್ಕುತ್ತಿರಲಿಲ್ಲ. ಆ ಪುಸ್ತಕದ ವಿರೋಧಿಗಳು ತಾವೇ ನಿಂತು, ತಮ್ಮದೇ ಪ್ರಯತ್ನದಿಂದ ಆ ಪುಸ್ತಕದ, ಲೇಖಕರ ಹೆಸರನ್ನು ಮನೆ ಮನೆಗೆ ತಲುಪಿಸಿದ ಕೀರ್ತಿ ಪಡೆದಿದ್ದಾರೆ.
ತಮ್ಮ ತಮ್ಮ ಧರ್ಮ, ಸಂಸ್ಕೃತಿಗಳಿಂದ ಭೌಗೋಳಿಕವಾಗಿ ದೂರವಾಗಿರುವವರು ತಮ್ಮ ದೇಶವಾಸಿಗಳಿಗಿಂತಾ ಹೆಚ್ಚಾಗಿ ತಮ್ಮ ಜಾತಿ, ಧರ್ಮಕ್ಕೆ ಅಂಟಿಕೊಳ್ಳುವುದನ್ನು ನಾವು ಕಾಣುತ್ತೇವೆ. ಬೇರೆಯವರಿಗಿಂತ ಹೆಚ್ಚಾಗಿ, ಹೆಚ್ಚು ನಿಷ್ಠೆಯಿಂದ ಅವರು ತಮ್ಮ ಧರ್ಮದ ಆಚರಣೆಗಳನ್ನು ಮಾಡುತ್ತಾರೆ. ಹಾಗೆ, ಮಾನವ ಹೆಚ್ಚು ಹೆಚ್ಚು ಆಧುನಿಕಗೊಂಡಷ್ಟೂ, ಹೆಚ್ಚು ಹೆಚ್ಚು ಸವಲತ್ತುಗಳನ್ನು ಪಡೆದಷ್ಟೂ ತನ್ನ ಆಚರಣೆಯಲ್ಲಿ, ವಿಚಾರಗಳಲ್ಲಿ ಬೇರುಗಳಿಗೆ ಮತ್ತು ಅದರ ಖಟ್ಟರ್ ಪಂಥಕ್ಕೆ ಅಂಟಿಕೊಳ್ಳುತ್ತಾ ಹೋಗುತ್ತಾನಾ? ಐಷಾರಾಮದ ಹಪಾಹಪಿಯ ಗಿಲ್ಟ್ ಅನ್ನು ಹೀಗೆ ತೊಳೆದುಕೊಳ್ಳಲು ಪ್ರಯತ್ನಿಸುತ್ತಾನಾ? ಆಧುನೀಕರಣಗೊಂಡಷ್ಟೂ ಮನುಷ್ಯ ತನ್ನ ಬೇರುಗಳಿಗೆ ಅತಿ ನಿಷ್ಠೆ ತೋರಿಸುವ ಭರದಲ್ಲಿ ಹೆಚ್ಚು ಹೆಚ್ಚು ರಿಜಿಡ್ ಆಗುತ್ತಿದ್ದಾನಾ?
ನಿಜ ಹೇಳಬೇಕೆಂದರೆ ಬುರ್ಖಾ ಹಾಕದೆ ಹೆಣ್ಣು ಹೊರಗೆ ಬಂದರೆ ಕೊರಡೆ ಏಟಿನ ಶಿಕ್ಷೆ ಕೊಟ್ಟವರಿಗೂ, ಮಂಗಳೂರಿನ ಆ ಹುಡುಗಿಯರನ್ನು ಎಳೆದಾಡಿದವರಿಗೂ ಅವರು ಧರಿಸಿರುವ ಬಟ್ಟೆಗಳ ಬಣ್ಣದ ಹೊರತು ಇನ್ಯಾವ ವ್ಯತ್ಯಾಸವೂ ಕಾಣುತ್ತಿಲ್ಲ ನನಗೆ. ಇಬ್ಬರ ಒಳಗಿನ ಅಹಂ ಅದೇ, ಇಬ್ಬರ ಒಳಗಿನ ಪಾಳೇಗಾರಿ ಮನೋಭಾವ ಅದೇ, ಇಬ್ಬರ ಒಳಗಿನ ’ಇವಳನ್ನು ನಾನು ನಿಯಂತ್ರಿಸಬೇಕು’ ಅನ್ನುವ ಧೋರಣೆ ಅದೇ. ಹೌದು ಅಂತಹವರು ಮಾತ್ರ ಬಂದೂಕು ಹಿಡಿದು ವಿಚಾರಗಳನ್ನು ಕೊಲ್ಲಬಲ್ಲರು.
ಇಲ್ಲಿ ಮತಬೇಧ ಬಂದ ತಕ್ಷಣ, ಪ್ರಶ್ನೆಗಳು ಕೇಳಲು ಪ್ರಾರಂಬಿಸಿದ ತಕ್ಷಣ ಹಾಗೆ ಪ್ರಶ್ನೆ ಕೇಳುವವರು ನಕ್ಸಲೈಟ್ ಗಳಾಗುತ್ತಾರೆ, ಕಮ್ಯೂನಿಸ್ಟರಾಗುತ್ತಾರೆ, ಮೊದಲು ಅವರನ್ನು ಅಮೇರಿಕಾದ ಏಜೆಂಟುಗಳೂ ಎಂದೂ ಕರೆಯುತ್ತಿದ್ದರು. ಪ್ರಶ್ನೆಗಳಿಗೆ ಈ ಹಣೆಪಟ್ಟಿ ಅಂಟಿಸಿ, ಅವನ್ನು ಒಂದು ಫೈಲಿನೊಳಕ್ಕೆ ಹಾಕಿ, ಕತ್ತಲೆಗೆ ನೂಕಿಬಿಡುತ್ತಾರೆ. ಅಲ್ಲಿಗೂ ಸುಮ್ಮನಾಗದಿದ್ದರೆ ಇದ್ದೇ ಇದೆ,’ ಮಾಡಿದ್ದುಣ್ಣೋ ಮಹಾರಾಯ’…
ವಿಚಾರ ಬೇಧ ಬಂದಾಗ ಚರ್ಚೆ ಮಾಡುವುದು ಬಿಟ್ಟು, ಅವರನ್ನು ದಂಡಿಸಿಯೇ ಸಿದ್ಧ ಎಂದು ನಿಲ್ಲಲು ಒಂದು ಗುಂಪಿಗೆ ಇರುವ ಅರ್ಹತೆಯಾದರೂ ಏನು? ಚಾರ್ವಕನನ್ನು ಕೊಂದ ಹಾಗೆ ದಾಭೋಲ್ಕರರನ್ನು ಕೊಲ್ಲುತ್ತಾ ಹೋಗುವುದೇ ಧರ್ಮವಾದರೆ, ಕೆಲವೇ ಜನ ಧರ್ಮದ ಗುತ್ತಿಗೆ ಹಿಡಿದು ಉಳಿದವರನ್ನು ಆಳುತ್ತೇವೆ ಎಂದು ನಿಂತರೆ ಆ ಧರ್ಮ ನನ್ನದಲ್ಲ.
ಮೊನ್ನೆ ಓದಿದ ಈ ಸಾಲುಗಳು ಯಾಕೋ ನನ್ನಲ್ಲಿ ತಲ್ಲಣ ಹುಟ್ಟಿಸುತ್ತಿವೆ. ’ಇವು ಕತ್ತಲ ದಿನಗಳು, ಜನರನ್ನು ಕೊಂದ ಖಡ್ಗಗಳ ಮೇಲೆ ಶಾಂತಿ ಮಂತ್ರಗಳನ್ನು ಕೆತ್ತಿರುವ ದಿನಗಳು, ಎದೆ ಎದೆಗಳ ನಡುವೆ ಇರುವ ಸೇತುವೆಗಳು ಮುರಿದಿರುವ ದಿನಗಳು. ಮುಖ ಮುಖವೂ ಮುಖವಾಡಗಳನ್ನು ಹೊತ್ತು ನಿಂತಿರುವ ಕಾಲ….’.
 

‍ಲೇಖಕರು avadhi

September 6, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

  1. bharathi

    ಸಾವಿರ ವರ್ಷಗಳ ಹಿಂದೆ ಬರೆದ ಗ್ರಂಥಗಳಲ್ಲಿನ ಬರಹಗಳಿಗಾಗಿ ಕೊಲೆ ಮಾಡಲೂ ಹೇಸದ ಜನ ನಮ್ಮ ಕಣ್ಣೆದುರಿಗೆ ಬರೆದ ಸಂವಿಧಾನಕ್ಕೆ ಯಾಕೆ ಗೌರವ ಕೊಡುವುದಿಲ್ಲ? … adbhutha chinthane mattu sakaalika baraha

    ಪ್ರತಿಕ್ರಿಯೆ
  2. ಹನುಮಂತ ಹಾಲಿಗೇರಿ

    ಮನ ಕಲಕುವ ಚಿಂತನೆಗೆ ಹಚ್ಚುವ ಬರಹ ಸಂಧ್ಯಕ್ಕ

    ಪ್ರತಿಕ್ರಿಯೆ
  3. Soory Hardalli

    Blind belief and deity of religion are entirely different. You have mixed both.

    ಪ್ರತಿಕ್ರಿಯೆ
  4. Ananda Prasad

    ಮೊತ್ತ ಮೊದಲನೆಯದಾಗಿ ಈ ಬರಹ ಬರೆದದ್ದಕ್ಕಾಗಿ ನಿಮಗೆ ಅಭಿನಂದನೆಗಳು. ಜನಸಂಖ್ಯೆಯ 50% ಇರುವ ಮಹಿಳೆಯರು ನಮ್ಮ ದೇಶದಲ್ಲಿ ವೈಚಾರಿಕ ವಿಷಯಗಳ ಬಗ್ಗೆ ಬರೆಯುವುದಾಗಲೀ, ಜನಜಾಗೃತಿ ಮೂಡಿಸುವುದಾಗಲೀ ಕಡಿಮೆ. ವೈಚಾರಿಕ ಜಾಗೃತಿ ಮೂಡಿಸುವಲ್ಲಿ ಇಂದಿಗೂ ನಮ್ಮ ದೇಶದಲ್ಲಿ ಪುರುಷರೇ ಹೆಣಗುತ್ತಿದ್ದಾರೆ. ಮಹಿಳೆಯರು ಇದಕ್ಕೆ ಸಮರ್ಪಕ ಪ್ರೋತ್ಸಾಹ ಕೊಡುತ್ತಿಲ್ಲ. ಮಹಿಳೆಯರು ಹೆಚ್ಚಾಗಿ ಭಾವನಾತ್ಮಕ ವಿಚಾರಗಳ ಬಗ್ಗೆ ಮಾತ್ರ ಬರೆಯುತ್ತಿರುತ್ತಾರೆ ಅಥವಾ ಮಾತನಾಡುತ್ತಿರುತ್ತಾರೆ. ಹೀಗಾಗಿ ಬಹುತೇಕ ಮಹಿಳೆಯರಿಗೆ ನಮ್ಮ ದೇಶದಲ್ಲಿ ವೈಚಾರಿಕತೆ ಬೆಳೆಸಬೇಕಾದ ಅಗತ್ಯದ ಬಗ್ಗೆ ಅರಿವಿಲ್ಲ. ಮಹಿಳೆಯರೇ ಮಹಿಳೆಯರಿಗೆ ವೈಚಾರಿಕ ವಿಷಯಗಳ ಬಗ್ಗೆ ಮನದಟ್ಟು ಮಾಡಿದರೆ ಉತ್ತಮ ಏಕೆಂದರೆ ಪುರುಷರ ಮಾತಿಗಿಂತ ಮಹಿಳೆಯರ ಮಾತಿಗೆ ಮಹಿಳೆಯರು ಬೆಲೆ ಕೊಡುತ್ತಾರೆ.
    ನಮ್ಮ ದೇಶದಲ್ಲಿ ಮೂಲಭೂತವಾದ ಬೆಳೆಯದಂತೆ ತಡೆಯುವಲ್ಲಿ ಜನಸಂಖ್ಯೆಯ 50% ಇರುವ ಮಹಿಳೆಯರ ಪಾತ್ರ ತುಂಬಾ ಮುಖ್ಯವಾದದ್ದು. ದೇವರು, ಧರ್ಮ, ನಂಬಿಕೆ, ಸನಾತನ ಮೌಲ್ಯಗಳು, ಆಚರಣೆಗಳ ಹೆಸರಿನಲ್ಲಿ ಮಹಿಳೆಯರನ್ನು ಸುಲಭದಲ್ಲಿ ಮೋಡಿ ಮಾಡಿ ಪ್ರತಿಗಾಮಿ ವಿಚಾರಗಳನ್ನು ಅವರ ತಲೆಯಲ್ಲಿ ತುಂಬಿ ಧಾರ್ಮಿಕ ಮೂಲಭೂತವಾದಿಗಳು ಮೇಲುಗೈ ಸಾಧಿಸಲು ನಿರಂತರ ಪ್ರಯತ್ನಿಸುತ್ತಿರುತ್ತಾರೆ. ನಮ್ಮ ದೇಶದಲ್ಲಿ ಮೂಲಭೂತವಾದ ಬೆಳೆಯಬಾರದು ಎಂದಿದ್ದರೆ ದೇವರು, ಧರ್ಮ, ದನ, ಮಂದಿರ ಇವುಗಳ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ಜನ ಬೆಂಬಲ ಕೊಡಬಾರದು. ಈ ವಿಚಾರದಲ್ಲಿ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಮಹಿಳೆಯರೇ ಮುಂದಾಗಬೇಕಾದ ಅಗತ್ಯ ಇದೆ.

    ಪ್ರತಿಕ್ರಿಯೆ
    • ಸೋಮಲಿಂಗ ಜಿ

      ಒಂದು ಸಣ್ಣ ಅವಕಾಶ ಸಿಕ್ಕರೆ ಸಾಕು, ಶ್ರೀಮಾನ ಆನಂದ ಪ್ರಸಾದರು ತಮಟೆ,ತುತ್ತೂರಿ ಗಳೊಡನೆ ಪ್ರತ್ಯಕ್ಷ!. ಹಾಡಿದ್ದೇ ಹಾಡು, ಬೇರೆ ಬೇರೆ ರಾಗದಲ್ಲಿ 🙂

      ಪ್ರತಿಕ್ರಿಯೆ
      • Ananda Prasad

        ಹೌದು, ನಾನು ಸಣ್ಣ ಅವಕಾಶ ಸಿಕ್ಕರೂ ತಮಟೆ ಹಾಗೂ ತುತ್ತೂರಿ ತೆಗೆದುಕೊಂಡು ಬಾರಿಸುವುದು ಅನಿವಾರ್ಯ. ಇದನ್ನು ನಾನು ದೇಶದ ಹಿತದೃಷ್ಟಿಯಿಂದ ಮಾಡುತ್ತಿದ್ದೇನೆಯೇ ಹೊರತು ಇದರಿಂದ ನನಗೆ ಮೂರು ಕಾಸಿನ ಪ್ರಯೋಜನವೂ ಇಲ್ಲ. ಮೂಲಭೂತವಾದ ಹಾಗೂ ಅದನ್ನು ಹಬ್ಬಿಸುವ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತವೆ ಹಾಗೂ ಅಂತಿಮವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಗೊಳಿಸಿ ಧಾರ್ಮಿಕ ಊಳಿಗಮಾನ್ಯ ವ್ಯವಸ್ಥೆಯನ್ನು ಪುನಃ ಸ್ಥಾಪಿಸುತ್ತವೆ. ಹೀಗಾಗಿ ಸಂದರ್ಭ ಸಿಕ್ಕಾಗಲೆಲ್ಲ ಇದರ ವಿರುದ್ಧ ತಮಟೆ ಬಾರಿಸುವುದು ಅನಿವಾರ್ಯ. ಈ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕಳೆದುಕೊಳ್ಳ ಬೇಕಾದೀತು, ಹೀಗಾಗಿ ನಾವು ಸದಾ ಎಚ್ಚರದಿಂದಿರಬೇಕು.
        ದಾಬೋಲಕರ್ ಕೊಲೆಯ ವಿಚಾರದಲ್ಲಿ ಹೇಳುವುದಾದರೆ ಕೊಲೆ ನಡೆದು ಹಲವಾರು ದಿನಗಳು ಕಳೆದರೂ ಇದನ್ನು ನಡೆಸಿದವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಈ ಕೊಲೆ ದಾಬೋಲಕರ್ ಅವರ ವಿಚಾರಗಳ ವಿರುದ್ಧವಾಗಿಯೇ ನಡೆದದ್ದು ಎಂಬುದು 100% ಗ್ಯಾರಂಟಿ ಹೇಳಬಹುದು. ಪೊಲೀಸರಿಗೆ ಯಾವುದೇ ಸುಳಿವು ಕೂಡ ಸಿಕ್ಕಿಲ್ಲ. ಹೀಗಾಗಿ ಈ ಕೊಲೆಯ ಅಪರಾಧಿಗಳು ಸಿಕ್ಕುವ ಸಾಧ್ಯತೆ ತುಂಬಾ ಕಡಿಮೆ. ಸಿಕ್ಕಿದರೂ ಅವರಿಗೆ ಶಿಕ್ಷೆಯಾಗುವ ಸಂಭವ 100% ಇಲ್ಲವೆಂದೇ ಹೇಳಬಹುದು ಏಕೆಂದರೆ ಸಾಕ್ಷ್ಯಗಳನ್ನು ಆಧರಿಸಿದ ನ್ಯಾಯ ವ್ಯವಸ್ಥೆಯಲ್ಲಿ ಈ ಕೊಲೆಯನ್ನು ನೋಡಿದವರು ಅಥವಾ ಬೇರಾವುದೇ ನ್ಯಾಯಾಲಯದಲ್ಲಿ ನಿಲ್ಲಬಲ್ಲ ಸಾಕ್ಷ್ಯಗಳು ಸಿಗುವ ಸಂಭವ ಇಲ್ಲ.

        ಪ್ರತಿಕ್ರಿಯೆ
  5. Raghunandan K

    Superb article,
    ನಾವು ನಿಜವಾಗಲೂ ಹೆದರಬೇಕಾದ್ದು ಯಾವುದಕ್ಕೆ ಎನ್ನುವುದನ್ನು ಸ್ಪಷ್ಟವಾಗಿ, ಸಮರ್ಥವಾಗಿ ವ್ಯಕ್ತಪಡಿಸಿದ್ದೀರಿ.

    ಪ್ರತಿಕ್ರಿಯೆ
  6. ರಂಗಸ್ವಾಮಿ ಮೂಕನಹಳ್ಳಿ

    ಮುಕ್ಕಾಲು ಪಾಲು ಜನ ಬರಿತಾರೆ , ಮುಂದೆ ನಿಂತು ತಮ್ಮ ತತ್ವದ ಆಚರಣೆಯಾಗುವಂತೆ ಮಾಡುವುದಿರಲಿ ಸ್ವತಹ ತಾವೇ ಪಾಲಿಸುವುದಿಲ್ಲ , ಇತರರಿಗೂ ದಾಭೊಲ್ಕರ್ರಿಗೂ ಇರುವ ವ್ಯತ್ಯಾಸ ಇದೆ.
    ಬರಿತಾ ಹೋಗಿ ಯಾರೂ ನಿಮ್ಮನು ಪ್ರಶ್ನಿಸುವದಿಲ್ಲ , ಎಷ್ಟು ಜನ ತಾನೆ ಓದಿಯಾರೂ ? ಎಂಬ ಧೋರಣೆ , ಅದೇ ಬೇರು ಮಟ್ಟಕಿಳಿದು ಬದಲಾವಣೆಗೆ ಪ್ರಯತ್ನಿಸಿದರೆ ದಾಭೊಲ್ಕರ್ ಘಟನೆ ಮರುಕುಳಿಸುತ್ತದೆ .
    ಕೆಲವರು ಬರೆದು ದೇಶ ಸುತ್ತ ಬಹುದು , ಖಜಾನೆ , ಖಜ್ಜಾಯ ಎಲ್ಲಾ ಸಿಕ್ಕುತ್ತೆ , ದಾಬ್ಹೊಲ್ಕರರಾದರೆ ಸಿಕ್ಕುವುದು ಆಕಾಲಿಕ ಸಾವು .
    ಥೂ ನಮ್ಮ ಜನ್ಮ , ಹೇಸಿಕೆ ಬರುತ್ತದೆ , ನಮ್ಮ ಸಮಾಜ , ನಮ್ಮ ವ್ಯವಸ್ತೆ ನೆನೆಪಿಸಿಕೊಂಡರೆ , ಸಾಮಾನ್ಯ ಜನರನ್ನು ನಾನು ದೂಷಿಸುವುದಿಲ್ಲ , ಅವರು ನಿನ್ನೆಯೂ ಲೆಕ್ಕದಲ್ಲಿ ಇರಲಿಲ್ಲ , ಮುಂದೆಯೂ ಇರುವುದಿಲ್ಲ , ಮುರೋತ್ತು ಊಟ , ನಿದ್ದೆ, ತಲೆ ಮೇಲೆ ಸೂರು ಸಿಕ್ಕರೆ ಆಯ್ತು , ಹೇಸಿಕೆ ಬರುವುದು ಇವಿಷ್ಟನ್ನೂ ಕಷ್ಟ ಪಡದೆ ಪಡೆದು , ಬರೆದು ಬರೆದು , ಹೆಸರು ಹಣ ಮಾಡಿದ ಮಂದಿಗೆ ಕನಿಷ್ಟ , ಇಂತಹ ವ್ಯಕ್ತಿ ಸತ್ತ ಮೇಲಾದರೂ ಹತ್ತು ಮಂದಿ ಸೇರಿಸಿ ಈ ಘಟನೆ ಖಂಡಿಸುವ ವ್ಯವಧಾನ ಇಲ್ಲದಿರುವುದು .
    ದಾಭೊಲ್ಕರ್ ಸಾವಿನ ನಂತರ ಹಲವು ಸಲ ಆತನ ವ್ಯಕ್ತಿತ್ವ , ಆತನ ಸಾವು ನನ್ನನ್ನು ಬಹಳವಾಗಿ ಕಾಡಿದೆ . ದರೋಡೆಕೋರರು , ದಲ್ಲಾಳಿಗಳು ಮಾತ್ರ ಆರಾಮಾಗಿ ಬದುಕಲು ಸಾಧ್ಯ ಎಂದಾದರೆ ಅಲ್ಲಿ ವ್ಯಕ್ತಿ ಸ್ವತಂತ್ರಕ್ಕೆ ಬೆಲೆ ಎಲ್ಲಿ ?
    ನಮ್ಮ ಮುಂದಿನ ಜನಾಂಗ ದಾಭೊಲ್ಕರ್ ರವರನ್ನು ಖಂಡಿತ ಅನುಕರಿಸುವುದಿಲ್ಲ , ಪೆಪ್ಸಿಯಂತ ಹೀನ ಪಾನೀಯದ ರಾಯಬಾರಿಗಳು ಅವರ ಮನೆ/ಮನದ ದೈವ. ಇಷ್ಟಕ್ಕೂ ಬೀದಿಯಲ್ಲಿ ಶವವಾಗುವುದನ್ನು ಯಾರು ತಾನೆ ಬಯಸುತ್ತಾರೆ ?
    ಮೊದಲೇ ಕದಡಿದ ಮನಸನ್ನು ಮತ್ತಷ್ಟು ರಾಡಿ ಎಬ್ಬಿಸಿತು ನಿಮ್ಮ ಲೇಖನ .

    ಪ್ರತಿಕ್ರಿಯೆ
  7. Sridhar Pai

    Has it been established that Dhabholkar was killed by people who were against his activism? What is known is that he was killed by unknown assailants. Media linked his killing with his activism but didn’t provide corroborating evidence.

    ಪ್ರತಿಕ್ರಿಯೆ
  8. Jayateerth Joshi

    By killing a person one cant kill the spirit. This is quite in the history

    ಪ್ರತಿಕ್ರಿಯೆ
  9. harsha

    ಅತ್ಯಮೂಲ್ಯ ಬರಹ… ಸಾಯಿಸಲು ಸಾಧ್ಯವಿಲ್ಲದ ದಾಬೋಲ್ಕರ್ ಅವರ ಗಟ್ಟಿ ಚಿಂತನೆಗಳನ್ನು ಮುಂದಕ್ಕೆ ಕೊಂಡೊಯ್ಯುವ ಹೊಣೆ ನಮ್ಮೆಲ್ಲರ ಮೇಲಿದೆ…

    ಪ್ರತಿಕ್ರಿಯೆ
  10. sunil

    Whatta irony..
    People’s craziness have got just a cadre or limitations.
    Limited just to themselves…
    We reap what we sow…
    I have fear about future that where would we reach…

    ಪ್ರತಿಕ್ರಿಯೆ
  11. ಶಮ, ನಂದಿಬೆಟ್ಟ

    ಹೀಗೊಬ್ಬರು ಮಹಾನುಭಾವರು ಇದ್ದರು ಎಂಬುದೇ ಗೊತ್ತಿರಲಿಲ್ಲ ಸಂಧ್ಯಾ… ಧನ್ಯವಾದ ಬರಹಕ್ಕೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: