'ಢುಂಡಿ' ಕೃತಿ ಕುರಿತ ಪ್ರತಿಕ್ರಿಯೆಗೆ ಇಲ್ಲಿದೆ ಸಿಎನ್ನಾರ್ ಉತ್ತರ

ಢುಂಡಿ ಲೇಖನ: ಪ್ರತಿಕ್ರಿಯೆ

ಪ್ರೊ ಸಿ. ಎನ್. ರಾಮಚಂದ್ರನ್

ಢುಂಡಿ ಕಾದಂಬರಿಯನ್ನು ಕುರಿತ ನನ್ನ ಲೇಖನಕ್ಕೆ ನನ್ನ ನಿರೀಕ್ಷೆಯನ್ನು ಮೀರಿ ಬಂದಿರುವ ಪ್ರತಿಕ್ರಿಯೆಗಳು ಮತ್ತು ಹೆಚ್ಚಿನ ಪ್ರತಿಕ್ರಿಯೆಗಳು ಧನಾತ್ಮಕವಾಗಿರುವುದು ನನಗೆ ತುಂಬಾ ಸಂತೋಷವನ್ನು ಕೊಟ್ಟಿವೆ; ಹಾಗೂ ಕನ್ನಡ ಪ್ರಜ್ಞಾಲೋಕದ ಬಗ್ಗೆ ನನಗಿರುವ ಗೌರವವನ್ನು ಹೆಚ್ಚಿಸಿವೆ. ಲೇಖನವನ್ನು ಓದಿರುವ, ಅದಕ್ಕೆ ಪ್ರತಿಕ್ರಿಯಿಸಿರುವ, ಅದನ್ನು ತಮ್ಮ ಸ್ನೇಹಿತರೊಡನೆ ಹಂಚಿಕೊಂಡಿರುವ, ಮತ್ತು ದೂರವಾಣಿ ಮೂಲಕ ತಮ್ಮ ಮೆಚ್ಚುಗೆಯನ್ನು ಸೂಚಿಸಿರುವ ಎಲ್ಲಾ ಓದುಗ ಮಿತ್ರರಿಗೂ ನಾನು ಕೃತಜ್ಞನಾಗಿದ್ದೇನೆ.
ಪ್ರತಿಕ್ರಿಯೆಗಳಲ್ಲಿ ಎದ್ದು ಕಾಣುವ ಒಂದು ಪ್ರಶ್ನೆಗೆ (ಆ ಪ್ರಶ್ನೆ ಇತರ ಸಂದರ್ಭಗಳಲ್ಲೂ ಮತ್ತು ಇತರ ವೇದಿಕೆಗಳಲ್ಲೂ ಪ್ರಮುಖವಾಗಿ ಕೇಳಿಬರುತ್ತಿರುವುದರಿಂದ) ಉತ್ತರಿಸಲು ಪ್ರಯತ್ನಿಸುತ್ತೇನೆ. ಆ ಪ್ರಶ್ನೆಯೆಂದರೆ ಹಿಂದು ಧರ್ಮ, ಅದರ ದೇವ-ದೇವತೆಗಳು ಮತ್ತು ಆಚರಣೆಗಳು ಮಾತ್ರ ಯಾಕೆ ಮತ್ತೆ ಮತ್ತೆ ಟೀಕೆಗೆ ಒಳಗಾಗುತ್ತವೆ? ಇತರ ಧರ್ಮಗಳ ಬಗ್ಗೆ ಏಕೆ ನಮ್ಮ ಲೇಖಕರು-ಬುದ್ಧಿಜೀವಿಗಳು ಮಾತನಾಡುವುದಿಲ್ಲ? ಹಿಂದು ಧರ್ಮ ಅತ್ಯಂತ ಸಹನಶೀಲವಾಗಿರುವುದೇ ಅದರ ದೌರ್ಬಲ್ಯವೆ? ನನ್ನ ವಿನಯಪೂರ್ವಕ ಉತ್ತರ ಹೀಗಿದೆ:
ಅ) ಒಂದು ಧರ್ಮ, ಅದರ ನಂಬಿಕೆಗಳು ಹಾಗೂ ಆಚರಣೆಗಳು ಮತ್ತು ದೇವ-ದೇವತೆಗಳು ಇವನ್ನು ಕುರಿತು ಆಯಾಯಾ ಧರ್ಮಗಳ ಅನುಯಾಯಿಗಳು ಹೇಳಿದರೆ ಮಾತ್ರ ಅದು ವಿಶ್ವಸನೀಯವಾಗುತ್ತದೆ; ಇತರರು ಏನಾದರೂ ಹೇಳಿದರೆ ಅದಕ್ಕೆ ‘ಮತೀಯ ದ್ವೇಷ/ಅಸಹನೆ’ ಎಂಬ ಬಣ್ಣ ಬರುತ್ತದೆ.

ನನ್ನ ನೆನಪು ಸರಿಯಿದ್ದರೆ, ಇದೇ ಕಾರಣವನ್ನು ಕೊಟ್ಟು ಸ್ವಾತಂತ್ರ್ಯ ಬಂದಕೂಡಲೇ ನೆಹರೂ ಹಿಂದು ಧರ್ಮದ ಸುಧಾರಣೆಗಾಗಿ ‘ಹಿಂದು ಮ್ಯಾರಿಜ್ ಆಕ್ಟ್,’ ‘ಹಿಂದು ಸಕ್ಷೆಶನ್ ಆಕ್ಟ್’ ಇತ್ಯಾದಿ ಕ್ರಾಂತಿಕಾರಕ ಶಾಸನಗಳನ್ನು ಜಾರಿಗೆ ತಂದರು. ಇದೇ ಬಗೆಯಲ್ಲಿ ನಮ್ಮ ದೇಶದಲ್ಲಿರುವ ಇತರ ಧಾರ್ಮಿಕ ಸಮುದಾಯಗಳ ಬಗ್ಗೆಯೂ ಈ ಸುಧಾರಣೆಗಳನ್ನು ಏಕೆ ಮಾಡುವುದಿಲ್ಲ? ಎಂದು ಅವರನ್ನು ಕೇಳಿದಾಗ, ಅವರು ಕೊಟ್ಟ ಉತ್ತರ ಆಯಾಯಾ ಧಾರ್ಮಿಕ ಸಮುದಾಯಗಳಿಂದ ಒಂದು ಸಾಮುದಾಯಿಕ ಒತ್ತಡ-ಅಪೇಕ್ಷೆಗಳು ಬಂದಾಗ ಮಾತ್ರ ಅಂತಹ ಸುಧಾರಣೆಗಳನ್ನು ಕೈಗೊಳ್ಳುವುದು ಪ್ರಜಾಪ್ರಭುತ್ವದ ಲಕ್ಷಣ ಎಂದು ಪಾರ್ಲಿಮೆಂಟ್ನಲ್ಲಿ ಉತ್ತರಿಸಿದ್ದರು. ಈ ನಿಲುವು ಯೋಗ್ಯ ಎಂದು ಇಂದಿಗೂ ನನಗೆ ಕಾಣುತ್ತದೆ.
ಆ) ಎರಡನೆಯದಾಗಿ, ಇತರ ಧಾರ್ಮಿಕ ಸಮುದಾಯಗಳಿಂದಲೂ ಅವರವರ ಧಾರ್ಮಿಕ ಸಂಸ್ಥೆಗಳ ಬಗ್ಗೆ, ಆಚರಣೆಗಳ ಬಗ್ಗೆ, ನಂಬಿಕೆಗಳ ಬಗ್ಗೆ, ಶತ-ಶತಮಾನಗಳಿಂದಲೂ ಟೀಕೆ-ವಿಮರ್ಶೆ-ಸುಧಾರಣೆಗಾಗಿ ಒತ್ತಡಗಳು ಬಂದಿವೆ, ಬರುತ್ತಿವೆ. 15ನೆಯ ಶತಮಾನದ ಮಾರ್ಟಿನ್ ಲೂಥರ್ನಿಂದ ಪ್ರಾರಂಭಿಸಿ, ಸ್ವಿಫ್ಟ್ನಿಂದ ಲಾರೆನ್ಸ್ ವರೆಗೂ ಅಪಾರ ಲೇಖಕರು ಹಾಗೂ ಚಿಂತಕರು ಕ್ರಿಶ್ಚಿಯನ್ ಧಾರ್ಮಿಕ ನಂಬಿಕೆ-ಆಚರಣೆಗಳನ್ನು ಪ್ರಶ್ನಿಸುತ್ತಿದ್ದಾರೆ, ಟೀಕಿಸುತ್ತಿದ್ದಾರೆ. ಈ ಬಗೆಯ ಟೀಕೆ-ಲೇವಡಿಗಳು ಎಷ್ಟು ತೀವ್ರವಾಗಿರುತ್ತವೆ ಎಂಬುದಕ್ಕೆ ನನ್ನ ಅನುಭವಕ್ಕೆ ಬಂದ ಒಂದು ಘಟನೆಯನ್ನು ಮಾತ್ರ ಇಲ್ಲಿ ನಿರೂಪಿಸುತ್ತೇನೆ.
ನಾನು 1977-83 ಈ ಅವಧಿಯಲ್ಲಿ ಅಮೆರಿಕಾದ ಒಹಾಯೋ ಪ್ರಾಂತ್ಯದಲ್ಲಿರುವ ಮಯಾಮಿ ವಿವಿಯಲ್ಲಿ ಓದುತ್ತಿದ್ದಾಗ ಒಮ್ಮೆ, ‘ರಿನೇಸನ್ಸ್ ರಿಫಾರ್ಮೇಶನ್’ ಕಾಲದ ಸಾಹಿತ್ಯದ ವಿಶೇಷಜ್ಞರಾದ ಡಾ. ರೊಮಾನೋ ಅವರೊಡನೆ ಜೀಸಸ್ ಕ್ರೈಸ್ಟ್: ಸೂಪರ್ ಸ್ಟಾರ್ ಎಂಬ, ಮೆಲ್ ಗಿಬ್ಸನ್ ನಿರ್ಮಿಸಿ ನಿರ್ದೇಶಿಸಿದ್ದ, ಪ್ರಸಿದ್ಧ ಸಿನೆಮಾ ನೋಡಲು ಸಿನ್ಸಿನಾಟಿಗೆ ಹೋಗಿದ್ದೆವು. ಆ ಚಿತ್ರ ಕ್ರೈಸ್ಟ್ನ ಬದುಕನ್ನು ತುಂಬಾ ಲೇವಡಿ ಮಾಡುತ್ತದೆ. ಕ್ರಿಸ್ತನನ್ನು ಶಿಲುಬೆಗೇರಿಸಿ, ಅವನು ನರಳುತ್ತಿರುವಾಗಲೇ ಆ ನಗರದ ವ್ಯಾಪ್ತಿಯಲ್ಲಿ ಬರುವ ಪುರಸಭೆಯ ಸದಸ್ಯರು ಮೂವರು ಓಡುತ್ತಾ ಅಲ್ಲಿಗೆ ಬಂದು, ತಮ್ಮ ‘ಅಭಿನಂದನಾ ಪತ್ರ’ವನ್ನು ಓದಲು ತೊಡಗುತ್ತಾರೆ. ಅರ್ಧ ಓದಿಯಾದನಂತರ ಅವರಿಗೆ ತಾವು ತಪ್ಪು ಶಿಲುಬೆಯ ಬಳಿ ನಿಂತದ್ದೆಂದು ಗೊತ್ತಾಗಿ (ಏಕೆಂದರೆ ಕ್ರಿಸ್ತನೊಡನೆ ಮತ್ತಿಬ್ಬರನ್ನೂ ಅದೇ ಸ್ಥಳದಲ್ಲಿ ಶಿಲುಬೆಗೇರಿಸಿದ್ದರು), ಮತ್ತೊಂದು ಶಿಲುಬೆಯಡಿ ನಿಂತು ತಮ್ಮ ಪತ್ರವನ್ನು ಓದುತ್ತಾರೆ; ಅದು ಮುಗಿದ ಕೂಡಲೇ ತಲೆಯಿತ್ತಿ ನೋಡದೆ ಅಲ್ಲಿಂದ ಓಡುತ್ತಾರೆ-‘ಓ ಇನ್ನೂ ಎಷ್ಟು ಕೆಲಸಗಳು ಬಾಕಿ ಇವೆ!’ ಎಂದು ಹೇಳುತ್ತಾ. ಈ ದೃಶ್ಯವನ್ನು ನೋಡುತ್ತಿದ್ದ ರೊಮಾನೋ ಎಷ್ಟು ಕ್ಷೋಭೆಗೊಳಗಾದರೆಂದರೆ ಅವರು ಗದ್ಗದಿತರಾಗಿ ಹೇಳಿದರು: “Crucifixion is too serious to be joked at.”. ಆದರೆ ಅವರಾಗಲೀ ಅಲ್ಲಿಯ ಪತ್ರಿಕೆಗಳಾಗಲಿ ಸಂಸ್ಥೆ-ಸರಕಾಗಳಾಗಲಿ ಈ ಚಿತ್ರವನ್ನು ನಿಷೇಧಿಸಬೇಕೆಂದಾಗಲಿ ಇದು ಧರ್ಮವಿರುದ್ಧವೆಂದಾಗಲಿ ಪ್ರತಿಭಟಿಸಲಿಲ್ಲ. ಹಾಗೆ ನೋಡಿದರೆ, ಕ್ರಿಶ್ಚಿಯನ್ ಧರ್ಮದ ಅಡಿಪಾಯವಾದ ಕ್ರಿಸ್ತನ ‘ಪುನರಾಗಮನ’ (ರೆಸರೆಕ್ಷನ್)ವನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಕ್ರಿಸ್ತನು ಶಿಲುಬೆಗೇರಿ ಸಾಯಲಿಲ್ಲವೆಂದು, ಅವನು ದೇಶವಿದೇಶಗಳನ್ನು ಸುತ್ತುತ್ತಾ ಕೊನೆಗೆ ಈಜಿಪ್ಟ್ಗೆ ಬಂದು ಅಲ್ಲಿಯ ಪೇಗನ್ ದೇವತೆ ಐಸಿಸ್ಳನ್ನು ಕೂಡುವಂತೆ ಡಿ. ಎಚ್. ಲಾರೆನ್ಸ್ ತನ್ನ ದ ವೂಂಡಿಡ್ ಮ್ಯಾನ್ ಎಂಬ ಪ್ರಸಿದ್ಧ ಕಥೆಯಲ್ಲಿ ನಿರೂಪಿಸುತ್ತಾನೆ. ಅದನ್ನು ನಿಷೇಧಿಸಬೇಕೆಂದು ಯಾರೂ ಒತ್ತಾಯಿಸಲಿಲ್ಲ.
ಇನ್ನು ಇಸ್ಲಾಂ ಧರ್ಮಕ್ಕೆ ಬಂದರೆ, ಇಸ್ಲಾಂ ಧಮರ್ಾನುಯಾಯಿಗಳಿಂದಲೇ ಆ ಧರ್ಮದ ಸುಧಾರಣೆಗಾಗಿ ಅನೇಕ ಪ್ರಯತ್ನಗಳು 19ನೆಯ ಶತಮಾನದಿಂದಲೇ ನಡೆಯುತ್ತಿವೆ; ಆ ಕಾರಣದಿಂದಲೇ ಕಳೆದ ಶತಮಾನದ ಆರಂಭಿಕ ದಶಕಗಳಲ್ಲಿ ಕಮಾಲ್ ಪಾಶಾ (?) ಟರ್ಕಿಯನ್ನು ಸಂಪೂರ್ಣವಾಗಿ ಆಧುನೀಕರಣಕೊಳಪಡಿಸಿ, ಅದನ್ನು ‘ಸೆಕ್ಯುಲರ್ ರಾಷ್ಟ್ರ’ವೆಂದು ಘೋಷಿಸಿದನು. ಇಸ್ಲಾಂ ಧರ್ಮವನ್ನು ಒಪ್ಪಿಕೊಂಡಿರುವ ಇಂಡೋನೇಷ್ಯಾದಲ್ಲಿ ಇಂದಿಗೂ ಪ್ರಾಚೀನ ಹಿಂದು ಸಂಸ್ಕೃತಿಯ ದಟ್ಟ ಪ್ರಭಾವ-ಕುರುಹುಗಳಿವೆ.
ಕರ್ನಾಟಕಕ್ಕೇ ಬರುವುದಾದರೆ, ಕಳೆದ ಶತಮಾನದ ಎರಡನೆಯ ಘಟ್ಟದಲ್ಲಿ ಸಾರಾ ಅಬುಬಕ್ಕರ್, ಬೋಳುವಾರು, ಫಕೀರ್ ಕಟ್ಪಾಡಿ, ಬಾನು ಮುಷ್ತಾಕ್, ಮುಂತಾದ ಲೇಖಕ-ಲೇಖಕಿಯರು ತಮ್ಮ ಕಥೆ-ಕಾದಂಬರಿ-ಲೇಖನಗಳ ಮೂಲಕ ಮುಸ್ಲಿಂ ಸಂಪ್ರದಾಯವಾದಿಗಳನ್ನು ಟೀಕಿಸುತ್ತಾ, ಆ ಧರ್ಮದಲ್ಲಿರುವ ‘ತಲಾಖ್,’ ‘ಇದ್ದತ್’ ಮುಂತಾದ ಆಚರಣೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ನಾನೇ ಕಂಡಂತೆ, 1988ರಲ್ಲಿ ಪುತ್ತೂರಿನಲ್ಲಿ, ಒಂದು ಸಾರ್ವಜನಿಕ ಸಭೆಯಲ್ಲಿ ಸಾರಾ ಮಾತನಾಡಲು ಪ್ರಾರಂಭಿಸಿದಾಗ ಸಭೆಯಲ್ಲಿದ್ದ ಕೆಲವು ಮುಸ್ಲಿಂ ಸಂಪ್ರದಾಯವಾದಿಗಳು ಅವರತ್ತ ಕಲ್ಲು ಎಸೆಯಲು ಶುರುಮಾಡಿದರು ಮತ್ತು ಮಾತನಾಡಲು ಬಿಡುವುದಿಲ್ಲ ಎಂದು ಘೋಷಿಸಿದರು. ಆಗ ವಿವೇಕ ರೈ ಅವರು ಕೂಡಲೇ ಸಾರ ಅವರ ಮುಂದೆ ಬಂದು ಅವರಿಗೆ ಮಾತನಾಡುವ ಹಕ್ಕಿದೆ ಎಂದು ಅವರ ರಕ್ಷಣೆಗೆ ನಿಂತರು. ಇಂತಹ ಅನೇಕ ನಿದರ್ಶನಗಳನ್ನು ಕೇರಳದ ಸಿರಿಯನ್ ಕ್ರಿಶ್ಚಿಯನ್ ಲೇಖಕ-ಲೇಖಕಿಯರ ಬಗ್ಗೆ, ಕೊಂಕಣಿ ಲೇಖಕ-ಲೇಖಕಿಯರ ಬಗ್ಗೆ ಕೊಡಬಹುದು.
ಮುಕ್ತ ಚಿಂತನೆಗೆ ಅಥವಾ ಸಾಂಪ್ರದಾಯಿಕತೆಗೆ ಜಾತಿ-ಮತ-ಧರ್ಮ-ಪಂಥಗಳ ಎಲ್ಲೆಯಿಲ್ಲ. ನಮಸ್ಕಾರ.

‍ಲೇಖಕರು G

September 6, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

  1. ಅಶೋಕವರ್ಧನ

    ಮಂಗಳೂರಿನ ಖ್ಯಾತ ವಿದ್ವಾಂಸ, ಪಾದ್ರಿಯಾಗಿಯೇ ಬೆಳೆದು ಬಂದ (ಇಂದಿಗೂ ಗುರುತಿಸುವವರಿಗೆ ಗೌರವಪೂರ್ವಕವಾಗಿ ಹಾಗೇ ಉಳಿದಿದಿರುವ) ಡಾ| ವಿಲ್ಲಿ ದ ಸಿಲ್ವಾ ಅವರು ರೋಮನ್ ಕ್ಯಾಥೊಲಿಕ್ ಹೆಸರಿನಲ್ಲಿ ಇಲ್ಲಿನ ಮತಾಚಾರಿಗಳು (ಇಗರ್ಜಿ ಮತ್ತು ಬಹುತೇಕ ಪುರೋಹಿತಶಾಹಿ) ಅನುಸರಿಸುವ ತಪ್ಪುಗಳು ಅಸಹನೀಯವಾಯ್ತು; ಖಂಡಿಸಲು ಹೋಗಲಿಲ್ಲ. ಐತಿಹಾಸಿಕ ಮೂಲಗಳನ್ನು ಆಧರಿಸಿ, ತಮ್ಮ ಧರ್ಮದ ಮೂಲ ಆಶಯಗಳ ಉದಾತ್ತತೆಯನ್ನು ಪ್ರತಿನಿಧಿಸುವ ಬೈಬಲ್ಲನ್ನು ಅಪ್ಪಟ ಪ್ರಾದೇಶಿಕ ಮಾತೃಭಾಷೆಯಾದ – ಕನ್ನಡ ಲಿಪಿಯ ಕ್ರಿಶ್ಚಿಯನ್ ಕೊಂಕಣಿಯಲ್ಲಿ, ಬರೆದು, ಸ್ವಂತ ಲಕ್ಷಾಂತರ ರೂಪಾಯಿ ಹೂಡಿ ಮುದ್ರಿಸಿ, ಪ್ರಕಟಿಸಿದರು. ಎರಡು ಸಾವಿರ ಪುಟಗಳಿಗೂ ಮಿಕ್ಕ ಗ್ರಂಥವನ್ನು ಸಾಮಾನ್ಯರ ಎಟುಕಿಗೆ ಹೊರೆಯಾಗದ ಬೆಲೆಯಲ್ಲಿ ಸ್ವತಃ ತಾವೇ ಮಾರಾಟಕ್ಕೆ ಹೊರಟರು. ಫಲಿತಾಂಶ : ಇಗರ್ಜಿ ಸಮೂಹ ಅದನ್ನು ನಿಷೇಧಿಸಿದೆ. ಇಂದಿಗೂ ಸಾವಿರಕ್ಕೂ ಮಿಕ್ಕು ಪ್ರತಿಗಳು ವಿಲ್ಲಿ ದ ಸಿಲ್ವಾರಿಗೆ ಆರ್ಥಿಕವಾಗಿಯೂ ಮಾನಸಿಕವಾಗಿಯೂ ಹೊರೆಯಾಗಿ ಉಳಿದಿವೆ.

    ಪ್ರತಿಕ್ರಿಯೆ
  2. Prabhakar Nimbargi

    Very enlightening & thought provoking article. This must be read in essence by the fundamentalists. Thinking process being suppressed and oppressed leads to stagnation and ultimately to stinking, as has been the case now with most of the religious fundamentalists. Sir, many a thanks!

    ಪ್ರತಿಕ್ರಿಯೆ
  3. bharathi b v

    Sir vandane …. Here dharmada aacharane bagge levadi irutte … Aadre Hindu dharmada devara baggeye levadi barutte. As lekkakke bandare namma dharmadallina aacharanegala baggeyoo antha maathugalu saamanya. Aadre namma devare levadigolagagthane …idara bagge maahithi enadroo ideya sir?

    ಪ್ರತಿಕ್ರಿಯೆ
  4. ತುರಂಗ

    ಸಾಲ್ಮನ್ ರಶ್ದಿಯವರ ಸಟಾನಿಕ್ ವರ್ಸೆಸ್ ಬಗ್ಗೆ ಉಂಟಾದ ಪ್ರತಿಕ್ರಿಯೆ, ಢುಂಡಿಗೆ ತೋರಿರುವ ಪ್ರತಿಕ್ರಿಯೆಯನ್ನು ಹೋಲುತ್ತದೆ. ಆದು ಇನ್ನಷ್ಟು ತೀವ್ರವಾಗಿತ್ತಷ್ಟೇ. ಪ್ರತಿಕ್ರಯಿಸಿದವರಿಗೆ ಈ ಹೋಲಿಕೆ ರುಚಿಸಲಾರದು.

    ಪ್ರತಿಕ್ರಿಯೆ
  5. Arkalgud Jayakumar

    ಸಿಎನ್ ಆರ್ ತುಂಬಾ ಪ್ರಜ್ಞಾಪೂರ್ವಕವಾಗಿ ಹಾಗು ಸಾಂದರ್ಬಿಕವಾಗಿ ಪ್ರತಿಕ್ರಿಯಿಸಿದ್ದಾರೆ ಧನ್ಯವಾದ. ಯಾವುದೇ ಸಂಸ್ಕೃತಿ ಹಾಗೂ ಆಚರಣೆ , ನಂಬಿಕೆಗಳು ಪ್ರಶ್ನಾತೀತವಲ್ಲ, ಪ್ರಶ್ನೆಗಳಿಂದ ಮತ್ತು ವಿಶ್ಲೇಷಣೆಗಳಿಂದ ಹೊರತಾದ ನಂಬಿಕೆಗಳು ನಂಬಿಕೆಗಳೇ ಅಲ್ಲ. ಯಾವ ಧರ್ಮದ ದೇವರುಗಳ ಮೂಲ ಕೆದುಕಿದರೂ ಅಲ್ಲಿನ ವಾಸ್ತವ ಭ್ರಮನಿರಸನಕ್ಕೆ ಅವಕಾಶ ಮಾಡುತ್ತವೆ ಮತ್ತು ಆ ಕುರುತು ಹೆಣೆದ ಪುರಾಣದ ಕಂತೆಯ ಜೊಳ್ಳು ಅರಿವಿಗೆ ನಿಲುಕುತ್ತದೆ. ದಾರ್ಮಿಕ ಹಿತಾಸಕ್ತಿಗಳ ದಾರ್ಷ್ಟ್ಯಕ್ಕೆ ಒಳಗಾಗಿ ಜಾಗೃತಗೊಳ್ಳುವ ಮೂಲಭೂತವಾದಿ ಮನಸ್ಸುಗಳು ವಾಸ್ತವದ ಅರಿವಿಗೆ ಅವಕಾಶ ಮಾಡದೆ ವಿನಾಕಾರಣ ಸಮಾಜದ ಅಶಾಂತಿಗೆ ಹುಯಿಲೆಬ್ಬಿಸುತ್ತವೆ ಈ ಕುರಿತು ಜನ ಜಾಗೃತರಾಗಬೇಕಿದೆ. ಒಂದಂತೂ ಸತ್ಯ ದೇವರು ಧರ್ಮ ಕುರಿತು ಸತ್ಯ ಅನಾವರಣವಾದರೂ ಮೌಡ್ಯದ ಅಲೆಯಿಂದ ಜನ ಹೊರಬರಲಾರರು, ಏಕೆಂದರೆ ಧರ್ಮ ಮತ್ತು ದೇವರ ಹೆಸರಿನಲ್ಲಿ ಹೊಟ್ಟೆ ಹೊರೆದು ಕೊಂಡು ಬದುಕುವ ಉಪಜೀವನ ಇರುವವರೆಗೆ ಜಾಗೃತ ಸ್ಥಿತಿಗೆ ಕಷ್ಟ ಕಷ್ಟ.

    ಪ್ರತಿಕ್ರಿಯೆ
  6. Neela

    Ramachandra Sir, Thanks
    naadina janatege prabhudha lekhana oduva avakaash kalpisidiri… koodi badukuv culture nammadu.. odeyuvudakke jana biduvudilla… prashne mattu kutoohalave hosa hosa aavishkaarada haadi. e haadiyindale manushyara payana saagide… idannu tadeyalu saadyavilla. tadeyuva mattu pragatiyedege, jeevaparateyedege nadeyuva; everadara naduvina sangharsha nirantara…

    ಪ್ರತಿಕ್ರಿಯೆ
  7. savitha

    nange Bharati B.V.’yavru heLiddu sari ansatte.. keTTa dharmika AcharaNegalannu Khandisuvudakkooo… devaranne tegaLuvudakkoo tumbaa…….vyatyasa ide ansutte…

    ಪ್ರತಿಕ್ರಿಯೆ
  8. Kiran

    “ಇದೇ ಕಾರಣವನ್ನು ಕೊಟ್ಟು ಸ್ವಾತಂತ್ರ್ಯ ಬಂದಕೂಡಲೇ ನೆಹರೂ ಹಿಂದು ಧರ್ಮದ ಸುಧಾರಣೆಗಾಗಿ ‘ಹಿಂದು ಮ್ಯಾರಿಜ್ ಆಕ್ಟ್,’ ‘ಹಿಂದು ಸಕ್ಷೆಶನ್ ಆಕ್ಟ್’ ಇತ್ಯಾದಿ ಕ್ರಾಂತಿಕಾರಕ ಶಾಸನಗಳನ್ನು ಜಾರಿಗೆ ತಂದರು. ಇದೇ ಬಗೆಯಲ್ಲಿ ನಮ್ಮ ದೇಶದಲ್ಲಿರುವ ಇತರ ಧಾರ್ಮಿಕ ಸಮುದಾಯಗಳ ಬಗ್ಗೆಯೂ ಈ ಸುಧಾರಣೆಗಳನ್ನು ಏಕೆ ಮಾಡುವುದಿಲ್ಲ? ಎಂದು ಅವರನ್ನು ಕೇಳಿದಾಗ, ಅವರು ಕೊಟ್ಟ ಉತ್ತರ ಆಯಾಯಾ ಧಾರ್ಮಿಕ ಸಮುದಾಯಗಳಿಂದ ಒಂದು ಸಾಮುದಾಯಿಕ ಒತ್ತಡ-ಅಪೇಕ್ಷೆಗಳು ಬಂದಾಗ ಮಾತ್ರ ಅಂತಹ ಸುಧಾರಣೆಗಳನ್ನು ಕೈಗೊಳ್ಳುವುದು ಪ್ರಜಾಪ್ರಭುತ್ವದ ಲಕ್ಷಣ ಎಂದು ಪಾರ್ಲಿಮೆಂಟ್ನಲ್ಲಿ ಉತ್ತರಿಸಿದ್ದರು. ಈ ನಿಲುವು ಯೋಗ್ಯ ಎಂದು ಇಂದಿಗೂ ನನಗೆ ಕಾಣುತ್ತದೆ.” How can a person incharge of the entire country take such a myopic and stratified stand on a national issue? Isn’t he disrespecting the constitution by discriminating on the basis of caste and religion? If some selected people of some community decides to keep the entire community backward, should the national leader encourage that? Isn’t it the responsibility of leaders to think for the nation as a whole rather than as discrete communities? I dont think your logic quoting Nehru is acceptable. However, the first statement, “ಒಂದು ಧರ್ಮ, ಅದರ ನಂಬಿಕೆಗಳು ಹಾಗೂ ಆಚರಣೆಗಳು ಮತ್ತು ದೇವ-ದೇವತೆಗಳು ಇವನ್ನು ಕುರಿತು ಆಯಾಯಾ ಧರ್ಮಗಳ ಅನುಯಾಯಿಗಳು ಹೇಳಿದರೆ ಮಾತ್ರ ಅದು ವಿಶ್ವಸನೀಯವಾಗುತ್ತದೆ; ಇತರರು ಏನಾದರೂ ಹೇಳಿದರೆ ಅದಕ್ಕೆ ‘ಮತೀಯ ದ್ವೇಷ/ಅಸಹನೆ’ ಎಂಬ ಬಣ್ಣ ಬರುತ್ತದೆ” makes more sense.

    ಪ್ರತಿಕ್ರಿಯೆ
  9. yash

    ಧರ್ಮ ಮತ್ತು ದೇವರ ಹೆಸರಿನಲ್ಲಿ ಹೊಟ್ಟೆ ಹೊರೆದು ಕೊಂಡು ಬದುಕುವ ಉಪಜೀವನ ಇರುವವರೆಗೆ ಜಾಗೃತ ಸ್ಥಿತಿಗೆ ಕಷ್ಟ ಕಷ್ಟ.
    -ಸತ್ಯವಾದ ವಿಚಾರ.

    ಪ್ರತಿಕ್ರಿಯೆ
  10. v n laxminarayana

    ಪ್ರಿಯ ರಾಮಚಂದ್ರನ್,ನಿಮ್ಮ ನಿಲುವು ಸರ್ವಥಾ ಸರಿ.
    ಯಾವುದೇ ಅಭಿಪ್ರಾಯಕ್ಕೆ ಭಾವನೆಗಳಿಂದ ಚೋದಿತವಲ್ಲದ ಸಮ್ಮತಿ- ಅಸಮ್ಮತಿಗಳು ವೈಚಾರಿಕ ಮನಸ್ಥಿತಿಯಾದ ವಯಸ್ಕದ ಅಹಂ ಸ್ಥಿತಿಯಲ್ಲಿ ಮಾತ್ರ ಸಾಧ್ಯ. ಆದರೆ ಅಸಮ್ಮತಿ ತೋರಿಸುವ ಬದಲು ಅಭಿಪ್ರಾಯವನ್ನೇ ಹತ್ತಿಕ್ಕಬೇಕೆಂಬುದು ಸ್ವತಂತ್ರ ಮನಸ್ಥಿತಿಯ ನಿಲುವಲ್ಲ. ತೊಂದರೆ ಎಲ್ಲಿದೆಯೆಂದರೆ ತಮಗೆ ಸಮ್ಮತವಲ್ಲದ ಅಭಿಪ್ರಾಯವನ್ನು ಹತ್ತಿಕ್ಕಬೇಕೆನ್ನುವವರು ಫ್ರಾಯ್ಡ್ ಹೇಳುವ ಸೂಪರ ಈಗೊ, ಅಥವಾ ಎರಿಕ್ ಬರ್ನ್ ಹೇಳುವ ಪೇರೆಂಟ್ ಈಗೋ ದಿಂದ ನಿರ್ಬಂಧಕ್ಕೊಳಗಾಗಿ ಪ್ರತಿಕ್ರಿಯಿಸುವುದರಿಂದ ಮೇಲು ನೋಟಕ್ಕೆ ಅದು ವೈಚಾರಿಕವಾಗಿದ್ದಂತೆ ಕಂಡರೂ ಭಾವನಾತ್ಮಕವಾಗಿ ಸ್ವತಂತ್ರವಲ್ಲ. ಈ ಕಷ್ಟದಿಂದ ಬಿಡಿಸಿಕೊಳ್ಳದವರಿಗೆ ತಮಗೆ ಸಮ್ಮತವಲ್ಲದ ಅಭಿಪ್ರಾಯದಿಂದ, ವಯಸ್ಸಿನ ನಿರ್ಬಂಧವಿಲ್ಲದೆ, ಕಿರಿಕಿರಿಯಾಗುತ್ತದೆ. ಧಾರ್ಮಿಕ ನಿಲುವುಗಳು ತುಂಬಾ ಎಳೆಯ ವಯಸ್ಸಿನಲ್ಲಿಯೇ ಪೋಷಕ, ಅದರಲ್ಲೂ ತಂದೆಯಿಂದ ಮಗುವಿನ ತಲೆಯಲ್ಲಿ ಸ್ಥಾಪಿತವಾಗುವುದರಿಂದ ಧಾರ್ಮಿಕ ವಿಷಯದ ಅಭಿಪ್ರಾಯ ಅಸಮ್ಮತವಾದಾಗ ವಿರೋಧ ತೀವ್ರವಾಗಿರುತ್ತದೆ. ಈ ಕಾರಣಗಳಿಂದಾಗಿ, ಇಂಥ ಜನರು ತಮಗೆ ಅಸಮ್ಮತ ಅಭಿಪ್ರಾಯಗಳನ್ನು ಕಂಡಾಗ ನೋವಾಯಿತೆಂದು ಹೇಳುತ್ತಾರೆ. ಕೋಪಗೊಳ್ಳುತ್ತಾರೆ, ವ್ಯಗ್ರರಾಗುತ್ತಾರೆ, ದುರ್ಭಾಷೆ ಬಳಸುತ್ತಾರೆ, ಅಭಿಪ್ರಾಯ ವ್ಯಕ್ತಪಡಿಸುವವರನ್ನು ದೈಹಿಕವಾಗಿ ಶಿಕ್ಷಿಸಲು ಮುಂದಾಗುತ್ತಾರೆ. ಆದ್ದರಿಂದ ಎಲ್ಲಾ ಮತೀಯ-ಧಾರ್ಮಿಕ ವಿವಾದಗಳಲ್ಲಿ ಪಾಲ್ಗೊಳ್ಳುವ ಮನಸ್ಥಿತಿ ವಯಸ್ಕ ಅಹಂನ ನೆಲೆಯಾದ ವೈಚಾರಿಕ ಅಸಮ್ಮತಿಯಾಗಿದ್ದರೆ ತೊಂದರೆ ಇಲ್ಲ. ಭಾವನಾತ್ಮಕವಾಗಿದ್ದರೆ ತೊಂದರೆ, ಏಕೆಂದರೆ ಅದರ ಹಿಂದೆ ಅಸಂತೋಷದ ಮಗುವಿನ ಅಹಂ ಇಲ್ಲವೆ ಹಟಮಾರಿಯಾದ ಪೋಷಕ ಅಹಂ ಇರುತ್ತದೆ.ಈ ಅಂಶವನ್ನು ಮನಗಂಡರೆ ಅಭಿಪ್ರಾಯಗಳನ್ನೇ ಹತ್ತಿಕ್ಕಬೇಕೆನ್ನುವ ವಾಂಛೆ ಕಡಿಮೆಯಾಗುತ್ತದೆ. ಪ್ರಜಾತಾಂತ್ರಿಕ ಸಹಿಷ್ಣುತೆ, ಎಂದರೂ ಇದೇ.
    I like you because you are not like me ಎನ್ನುವುದು ಪ್ರಜಾತಾಂತ್ರಿಕ ನಿಲುವು. ಗಟ್ಟಿ ಸ್ನೇಹ-ಪ್ರೀತಿಯ ತಳಪಾಯ.
    I like you only if you are like me ಎನ್ನುವುದು ಷರತ್ತಿನ, ಭಂಗುರದ ಸ್ನೇಹ-ಪ್ರೀತಿ.
    you must be like me or else you have no right to exist ಎನ್ನುವುದು ಫ್ಯಾಸಿಸ್ಟ್ ನಿಲುವು. ಕಿರಿಕಿರಿ -ಅಭದ್ರತೆಯ ಶಿಶುವಿನ, ಶಿಕ್ಷಿಸಲು ಮುಂದಾಗುವ ಹಟಮಾರಿಯಾದ ಪೋಷಕದ ನಿಲುವು.

    ಪ್ರತಿಕ್ರಿಯೆ
  11. Mahesh

    ಢುಂಡಿ ಕಾದಂಬರಿಯನ್ನು ವಿರೋಧಿಸುವುದೆಂದರೆ ಅದನ್ನು ನಿಷೇಧಿಸುವದಲ್ಲ. ಅದರ ಬದಲು ಆರ್ಯರನ್ನು ಸೋಲಿಸಿದ ಅನಾರ್ಯರು ತಮ್ಮನ್ನು, ತಮ್ಮ ದೇವರ ಪೂಜೆಯನ್ನು ಆರ್ಯರ ಮೇಲೆ ಹೇರಿದರು ಎಂಬರ್ಥ ಬರುವ ಹೊಸ ಕಾದಂಬರಿಯನ್ನು ಬರೆಯುವುದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: