ಸಂಧ್ಯಾರಾಣಿ ಕಾಲಂ : ಕಾಳಿದಾಸ,ಮಲ್ಲಿಕಾ ಮತ್ತು ವಿಲೋಮ ಎನ್ನುವ ಆಷಾಡದ ಮೋಡಗಳು


ಆಷಾಡದ ಮೋಡಗಳಿಗೂ, ಶ್ರಾವಣದ ಮೋಡಗಳಿಗೂ ವ್ಯತ್ಯಾಸವಿದೆ. ಶ್ರಾವಣದ ಮೋಡಗಳು ಮಳೆಗರೆದರೆ ಭೂಮಿ ನಗುತ್ತಾಳೆ, ಹಸಿರಾಗುತ್ತಾಳೆ, ಹಾಡಾಗುತ್ತಾಳೆ, ಹೆಣ್ಣಾಗುತ್ತಾಳೆ, ತಾಯಾಗುತ್ತಾಳೆ. ಶ್ರಾವಣದ ಮೋಡಗಳು ಮನೆಯಲ್ಲಿ ಒಲೆ ಹಚ್ಚಲು, ನಗು ಅರಳಿಸಲು, ತೊಟ್ಟಿಲು ತೂಗಲು ಮಳೆಗರೆಯುತ್ತವೆ. ಆದರೆ ಆಷಾಡದ ಮೋಡಗಳು ಹಾಗಲ್ಲ… ಅವು ಮಳೆಯ ಹಾಡುಗಳಲ್ಲ, ಗುಡುಗಿನ ತಾಳಗಳು, ಗಾಳಿಗೆ ಸಿಲುಕುವ ಹಾಯಿ ಇಲ್ಲದ ದೋಣಿಗಳು. ಮಳೆಗೆರೆಯುವ ತೇವವಿದ್ದೂ ಏನೂ ಆಗದೆ ಉಳಿದ ನಿರ್ಭಾಗ್ಯ ಮೋಡಗಳು. ಅವುಗಳನ್ನು ಹಿಡಿಯುವ ಯಾವುದೇ ಸೂತ್ರ ಇರುವುದಿಲ್ಲ, ಗಾಳಿಯ ಮುಲಾಜಿನಲ್ಲಿ ಅವುಗಳ ಪಯಣ, ಅವುಗಳಿಗೆ ಬಂಧ, ಬಂಧನ, ಅನುಬಂಧ ಯಾವುದೂ ದಕ್ಕುವುದಿಲ್ಲ.. ಹಾಗೆ ಎದುರಾದ ಆಷಾಡದ ಮೋಡಗಳು ಕಾಳಿದಾಸ, ಮಲ್ಲಿಕೆ ಮತ್ತು ವಿಲೋಮ. ಈ ಮೋಡಗಳು ಎದುರಾದಾಗ ಇವುಗಳ ಭಾಷೆ ನನಗೆ ಗೊತ್ತಿರಲಿಲ್ಲ.
ಭಾಷೆಯ ಹಂಗಿಲ್ಲದೆ ಭಾವ ನಮ್ಮದಾಗಬಹುದೆ?
ಹಾಡುಗಳು ನನ್ನೊಳಗನ್ನು ತಾಕುತ್ತಿದ್ದಿದ್ದು ಅವುಗಳ ಸಾಹಿತ್ಯದ ಮೂಲಕ, ನಾಟಕ ನನ್ನನ್ನು ಆವರಿಸುತ್ತಿದ್ದದ್ದು ಸಂಭಾಷಣೆಗಳ ಮೂಲಕ. ಆದರೆ ಹಾಡಿನ ಹಾದಿಯಲ್ಲಿ ಹೆಜ್ಜೆ ಹಾಕುತ್ತಾ, ಹಾಕುತ್ತಾ ಸಾಹಿತ್ಯಕ್ಕೂ ಮೀರಿ ಹಾಡಿನ ದನಿ ನನ್ನನ್ನು ಮೀಟುತ್ತಿತ್ತು. ಆದರೆ ಹಾಗೆ ಭಾಷೆ ಅರ್ಥವಾಗದೆಯೂ ನಾಟಕ ನನ್ನದಾಗಬಹುದು ಎನ್ನುವ ಯಾವ ಸುಳಿವೂ ಇಲ್ಲದ ದಿನಗಳಲ್ಲಿ ಆಷಾಡದ ಒಂದು ಸಂಜೆ ನನ್ನನ್ನು ಸಂಪೂರ್ಣವಾಗಿ ತನ್ನೊಳಗೆ ಎಳೆದುಕೊಂಡಿತ್ತು. ಗೆಳತಿ ದಾಕ್ಷಾಯಣಿ ರಂಗಭೂಮಿ ದಿನಾಚರಣೆಯ ಅಂಗವಾಗಿ ನಡೆದ ದೃಶ್ಯ ನಾಟಕೋತ್ಸವ ಮತ್ತು ತುಳು ನಾಟಕ ’ಆಟಿ ತಿಂಗೊಳ್ದ ಒಂಜಿ ದಿನ’ಕ್ಕೆ ಕರೆದಾಗ, ತುಳು ಭಾಷೆಯ ಒಂದು ಪದ ಅರ್ಥವಾಗದಿದ್ದರೂ ಹೋಗಿದ್ದೆ. . ಆದರೆ ನಾಟಕ ನೋಡುತ್ತಾ, ನೋಡುತ್ತಾ ಭಾಷೆಯ ಹಂಗೇ ಇಲ್ಲದೆ ನಾಟಕ ನನ್ನೊಳಗೆ, ನಾನು ನಾಟಕದೊಳಗೆ ಸೇರಿ ಹೋದೆವು.
ನಾಟಕ ಮುಗಿದಾಗ ನನಗೆ ನಾಟಕ ಅರ್ಥವಾಗಿತ್ತು, ಆದರೆ ಕಾಳಿದಾಸ, ಮಲ್ಲಿಕಾ, ವಿಲೋಮರ ಜೊತೆ ನನ್ನ ಮಾತುಕತೆ ಇನ್ನೂ ಮುಗಿದಿರಲಿಲ್ಲ. ಹಾಗೆಂದೇ ಪುಸ್ತಕಗಳ ನಡುವೆ ಇದ್ದ ಮೋಹನ್ ರಾಕೇಶರ ’ಆಷಾಡದ ಒಂದು ದಿನ’ ಪುಸ್ತಕ ಹುಡುಕಿ ತೆಗೆದೆ. ಸಿದ್ದಲಿಂಗ ಪಟ್ಟಣಶೆಟ್ಟಿಯವರು ಇದನ್ನು ಅತ್ಯಂತ ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ. ಪುಸ್ತಕ ಕೈಲಿ ಹಿಡಿದು ನಡುರಾತ್ರಿಯವರೆಗೆ ಅವರ ಲೋಕದಲ್ಲಿ ಕಳೆದೆ. ಓದಿದ ಕಥೆ, ನೋಡಿದ ನಾಟಕದ ಅನುಸಂಧಾನದ ಮೂಲಕ ನನ್ನಲ್ಲಿ ಅವರೆಲ್ಲಾ ಹರಳುಗಟ್ಟುತ್ತಾ ಹೋದರು..
ನಾಟಕದ ಕಥೆಯಿರುವುದು ಕಾಶ್ಮೀರದ ಗುಡ್ಡ ಪ್ರಾಂತ್ಯದಲ್ಲಿ ಹುಟ್ಟಿದ ಕಾಳಿದಾಸ ಕವಿಯಾಗುವುದರಲ್ಲಿ, ಪ್ರೇಮವನ್ನು ಅದ್ಭುತವಾಗಿ ಕಟ್ಟಿಕೊಟ್ಟ ಕವಿ ಕಣ್ಣೆದಿರಿನ ಪ್ರೇಮವನ್ನು ಕೈಗೆತ್ತಿಕೊಳ್ಳಲಾರದೆ ಸೋಲುವುದರಲ್ಲಿ, ಒಂದಕ್ಷರ ಬರೆಯದೆ ದುರಂತ ಪ್ರೇಮಕಾವ್ಯವಾಗುವ ಮಲ್ಲಿಕೆಯಲ್ಲಿ, ಏನೆಲ್ಲಾ ಆಗುವ ಸಾಧ್ಯತೆಯಿದ್ದೂ ನೋಡುವ ನೋಟವಿದ್ದೂ, ಆಷಾಡದ ಮೋಡವಾಗಿಯೇ ಖಾಲಿಯಾದ ವಿಲೋಮನಲ್ಲಿ.
ಕಾಳಿದಾಸನನ್ನು ರಾಜಧಾನಿಗೆ ಕರೆದುಕೊಂಡು ಹೋಗಲು ರಾಜನ ಸಂದೇಶಕರು ಬರುವುದರೊಂದಿಗೆ ಶುರುವಾದ ನಾಟಕ, ಹಳ್ಳಿಬಿಟ್ಟು ಹೋದ ಕಾಳಿದಾಸ ಖಾಲಿಯಾಗಿ ಹಳ್ಳಿಗೆ ಮರಳಿ ಸೋಲುವುದರಲ್ಲಿ ಮುಗಿಯುತ್ತದೆ. ಕಾಳಿದಾಸ ಋತುಸಂಹಾರ, ರಘುವಂಶ, ವಿಕ್ರಮೋರ್ವಶೀಯ, ಅಭಿಜ್ಞಾನ ಶಾಕುಂತಲ, ಮೇಘದೂತ ಇತ್ಯಾದಿ ಮಹಾಕಾವ್ಯಗಳನ್ನು ಬರೆದನೆಂದು ಉಲ್ಲೇಖವಿದೆ, ಆದರೆ ಎಲ್ಲೂ ದಾಖಲಾಗದ ಕಾಳಿದಾಸ, ಮಲ್ಲಿಕೆ, ವಿಲೋಮರ ಕತೆ ಇವೆಲ್ಲಕ್ಕೂ ಮೀರಿದ ಒಂದು ದುರಂತ ಪ್ರೇಮಗಾಥೆ ಎಂದು ನನಗನ್ನಿಸುತ್ತದೆ. ಆ ಭಾವನೆ ದಟ್ಟವಾಗುವಂತೆ ನಾಟಕ ನಮ್ಮೆದಿರು ತೆರೆದುಕೊಳ್ಳುತ್ತದೆ.
ಬಹುಶಃ ಮಲ್ಲಿಕೆ ’ಪ್ರೇಮಿ’ಯಲ್ಲಿ ಪ್ರೇಮಿಗಿಂತಾ ಹೆಚ್ಚಾಗಿ ಪ್ರೇಮವನ್ನೇ ಕಂಡವಳು. ತನ್ನ ಮನಸ್ಸಿನಲ್ಲಿಯ ಪ್ರೇಮದ ವ್ಯಾಖ್ಯೆಗೆ ಒಂದು ಸ್ವರೂಪ ಕೊಟ್ಟರೆ ಅದು ತನ್ನ ಕಾಳಿದಾಸ ಎಂದು ಭಾವಿಸಿದವಳು. ದೌರ್ಬಲ್ಯ, ದೋಷ ಪ್ರೇಮಿಯಲ್ಲಿ ಇರಬಹುದು, ಆದರೆ ಅವಳ ಪ್ರೇಮದ ಕಲ್ಪನೆಯಲ್ಲಿ ಇರಲು ಸಾಧ್ಯವಿಲ್ಲ. ಕಾಳಿದಾಸನನ್ನು ಅವನು ಏನಾಗಿದ್ದಾನೋ ಹಾಗೆ ಭಾವಿಸದೆ, ಏನಾಗಬೇಕು ಎಂದು ಬಯಸಿದ್ದಳೋ ಹಾಗೆ ಭಾವಿಸಿಕೊಂಡೇ ಬಂದವಳು ಅವಳು. ಅವಳ ಮನಸ್ಸಿನಲ್ಲಿರುವ ಕಾಳಿದಾಸನ ಮೂರ್ತಿ ಕಣ್ಣೆದುರಿನದಲ್ಲ, ಅವಳ ಕಲ್ಪನೆಯದು, ಹಾಗೆಂದೇ ಕಾಳಿದಾಸನನ್ನು ಅವನ ವಾಸ್ತವದ ತಳಹದಿಯ ಮೇಲೆ ಗುರುತಿಸಲು ಅವಳಿಗೆ ಆಗುವುದೇ ಇಲ್ಲ. ಅದು ಅವಳ ಮಿತಿ ಮತ್ತು ದೌರ್ಬಲ್ಯ. ಅವಳು ಮನಸ್ಸಿನಲ್ಲೇ ’ಒಂದು ಭಾವನೆಯನ್ನು ವರಿಸಿದ ನತದೃಷ್ಟೆ’.
ಆದರೆ ಅಂಬಿಕೆಯದು ’ತಾಯಿಯ ಜೀವನ ಒಂದು ಭಾವನೆಯಲ್ಲ, ಕರ್ಮ’ ಎನ್ನುವ ತಿಳಿವು. ಇಲ್ಲಿ ಕರ್ಮ ಎಂದರೆ ಕರ್ತವ್ಯ. ತಾನು ತಾಯಿಯಾದಾಗ ಮಲ್ಲಿಕೆಗೆ ಈ ಮಾತಿನ ಅರಿವಾಗುತ್ತದೆ. ಮನೆ ಬಾಗಿಲನ್ನು ದಾಟಿ ಹೋದ ಕಾಳಿದಾಸನ ಹಿಂದೆ ಓಡದಂತೆ ಅವಳನ್ನು ತಡೆಯುವುದು ತನ್ನ ತಾಯ್ತನ. ಇಲ್ಲಿ ಅಂಬಿಕೆಯ ಪಾತ್ರ ಏನೂ ಮಾತಾಡದೆ ನನ್ನನ್ನು ಕಾಡುತ್ತದೆ. ಹಿಂದೊಮ್ಮೆ ಹೀಗೆ ರಾಜಧಾನಿಯಿಂದ ಸೈನಿಕರು ಬಂದಿದ್ದಾಗ ಮಲ್ಲಿಕೆಯ ತಂದೆ ತೀರಿಹೋಗಿದ್ದರು ಎನ್ನುವ ಒಂದು ಉಲ್ಲೇಖ ಬರುತ್ತದೆಯಾದರೂ ಮಲ್ಲಿಕಾಳ ತಂದೆಯ ಬಗ್ಗೆ ಎಲ್ಲೂ ಬೇರೆ ವಿವರಗಳು ಸಿಗುವುದಿಲ್ಲ. ಆದರೆ ಕಾಳಿದಾಸನನ್ನು ಅಂಬಿಕೆ ಅರ್ಥಮಾಡಿಕೊಳ್ಳುವ ರೀತಿ, ಮಲ್ಲಿಕಾಳ ಭವಿಷ್ಯವನ್ನು ಅವಳು ನೋಡುವ ರೀತಿ ನೋಡಿದರೆ ಅಂಬಿಕೆಗೆ ಮಲ್ಲಿಕಾಳಲ್ಲಿ ’ನಿನ್ನೆಯ ಅಂಬಿಕಾ’ ಕಾಣುತ್ತಿದ್ದಾಳೇನೋ ಅನ್ನಿಸಿಬಿಡುತ್ತದೆ. ಹಾಗೆ ಮಗಳು ಹುಟ್ಟಿದ ಮೇಲೆ ಮಲ್ಲಿಕಾಳ ಸ್ವಗತ ನೋಡುವಾಗ ಮಲ್ಲಿಕಾಳಲ್ಲಿ ಅಂಬಿಕೆ ಕಂಡುಬಿಡುತ್ತಾಳೆ. ಅಂಬಿಕೆ ಬದುಕಿನ ಶಾಲೆಯಲ್ಲಿ ಕಲಿತ ಹೆಣ್ಣು. ಕಾಳಿದಾಸ ಅವಳಿಗೆ ತನ್ನೆಲ್ಲಾ ದೌರ್ಬಲ್ಯದ ಜೊತೆ ಜೊತೆಯಲ್ಲಿಯೇ ಕಾಣುತ್ತಾನೆ. ಅವನನ್ನು ಆಕೆ ಸರಿಯಾಗೇ ಅರ್ಥ ಮಾಡಿಕೊಂಡಿರುತ್ತಾಳೆ. ಅವಳ ಆತಂಕಕ್ಕೆ ಅದೇ ಕಾರಣ. ’ಅವನು ಆತ್ಮ ಸೀಮಿತ, ಅವನಿಗೆ ತನ್ನದೇ ಯೋಚನೆ, ಮೋಹ. ಜಗತ್ತಿನಲ್ಲಿ ಬೇರೆ ಯಾರ ಬಗೆಗೂ ಅವನಿಗೆ ಆಸಕ್ತಿ ಇಲ್ಲ’ ಎನ್ನುವ ಮಾತುಗಳಲ್ಲಿ ಅಂಬಿಕೆ ಕಾಳಿದಾಸನನ್ನು ಕಟ್ಟಿಕೊಡುತ್ತಾಳೆ.

ರಾಮಗೋಪಾಲ ವರ್ಮನ ಬಗ್ಗೆ ಅವನ ಹೆಂಡತಿ ಒಂದು ಮಾತು ಹೇಳುತ್ತಾಳೆ,’ಅವರಲ್ಲಿ ತುಂಬಾ ಬುದ್ಧಿವಂತ ಮಗು, ತುಂಬಾ ಅಮಾಯಕನಾದ ಬೆಳೆದ ಮಗು ಜೊತೆಯಾಗಿದ್ದಾರೆ’ ಎಂದು. ಮೇಲ್ನೋಟಕ್ಕೆ ಸರಳವಾಗಿ ಕಂಡರೂ, ಇದೊಂದು ಬಸಿರನ್ನು ಹೊತ್ತ ವಾಕ್ಯ. ಅಮಾಯಕವಾಗಿ ಕಾಣುತ್ತಲೇ, ಅಮಾಯಕತೆಯಿಂದ ತನ್ನೆಲ್ಲಾ ಕೆಲಸಗಳಿಗೂ ಕ್ಷಮೆ ಸಿಗುತ್ತದೆ ಎಂದು ತಿಳಿದ ’ಜಾಣಮಗು’ ವನ್ನು ಈ ಸಾಲು ಕಟ್ಟಿಕೊಡುತ್ತದೆ. ನನಗೆ ಈ ವಾಕ್ಯ ಮತ್ತೆ ನೆನಪಾಗಿದ್ದು ಇಲ್ಲಿ ಕಾಳಿದಾಸನನ್ನು ಕಂಡಾಗ. ಕಾಳಿದಾಸ ಸಹ ಅಂತಹ ಒಂದು ’ಜಾಣ ಮಗು’. ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭಗಳಲ್ಲೆಲ್ಲಾ ಆತ ಅಮಾಯಕ ಮಗುವಿನಂತಾಗಿ ಬಿಡುತ್ತಾನೆ, ತನ್ನ ಪರವಾಗಿ, ತನಗೆ ಬೇಕಾದ ನಿರ್ಣಯಗಳನ್ನು ಬೇರೆಯವರು ತೆಗೆದುಕೊಳ್ಳಲು ಬಿಡುವುದರಲ್ಲಿ ಅವನ ಜಾಣತನ ಇರುತ್ತದೆ. ಅವನನ್ನು ರಾಜಧಾನಿಗೆ ಕರೆದೊಯ್ಯಲು ರಾಜನ ಸಂದೇಶ ಹೊತ್ತು ಬಂದವರೆದುರು ಆತ ಬರುವುದಿಲ್ಲ ಎಂದು ಗಟ್ಟಿಯಾಗಿ ನಿರಾಕರಿಸುವುದೇ ಇಲ್ಲ, ಅದಕ್ಕೆ ಬದಲಾಗಿ ಮೌನಿಯಾಗಿದ್ದುಕೊಂಡು ಮಲ್ಲಿಕೆ ತನ್ನನ್ನು ಬಲವಂತ ಪಡಿಸಲು ಅನುವು ಮಾಡಿಕೊಡುತ್ತಾನೆ. ಆ ಮೂಲಕ ಆ ನಿರ್ಧಾರ ಮತ್ತು ಅದರ ಪರಿಣಾಮದ ಹೊಣೆಗಾರಿಕೆ ಎರಡರಿಂದಲೂ ಆತ ತಪ್ಪಿಸಿಕೊಳ್ಳುತ್ತಾನೆ. ಕೊನೆಗೆ ಹೊರಡುವುದಕ್ಕೆ ಮೊದಲು ನಿನ್ನ ಹೆಸರಿನೊಂದಿಗೆ ಬೆರೆತು ಜನರ ಬಾಯಿಗೆ ಸಿಲುಕಿರುವ ಮಲ್ಲಿಕಾಳನ್ನು ಮದುವೆಯಾಗಿ, ಜೊತೆಗೆ ಕರೆದುಕೊಂಡು ಹೋಗುತ್ತೀಯಾ ಎನ್ನುವ ವಿಲೋಮನ ನೇರ ಪ್ರಶ್ನೆಗೂ ಉತ್ತರ ಹೇಳದೆ, ಮಲ್ಲಿಕಾಳೇ ಮಧ್ಯ ಪ್ರವೇಶಿಸುವಂತೆ ಮಾಡಿ, ಆ ಜವಾಬ್ದಾರಿಯಿಂದಲೂ ತಪ್ಪಿಸಿಕೊಳ್ಳುತ್ತಾನೆ. ಹೌದು ಅವನೊಬ್ಬ ’ಜಾಣ ಮುಗ್ಧ’..
’ಅಮ್ಮ ಸಿಟ್ಟಗಿದ್ದಾಳೆ, ನನ್ನ ನಿನ್ನ ನಡುವಿನ ಸಂಬಂಧದ ಸ್ವರೂಪದ ಬಗ್ಗೆ ಕೇಳುತ್ತಿದ್ದಾಳೆ ಎಂದು ಮಲ್ಲಿಕಾ ಕೇಳಿದಾಗಲೂ ಅವನಿಗೆ ಕಾಣುವುದು ಗಾಯಗೊಂಡ ಜಿಂಕೆ ಮಾತ್ರ, ತನ್ನಿಂದಲೇ ಗಾಯಗೊಂಡ, ಗಾಯಗೊಳ್ಳುತ್ತಿರುವ ಮಲ್ಲಿಕೆ ಅವನ ಗಮನಕ್ಕೇ ಬೀಳುವುದಿಲ್ಲ.
ಕಾಳಿದಾಸ ಅದ್ಭುತ ಪ್ರತಿಭಾವಂತ, ಮಾಂತ್ರಿಕ ಕವಿ, ನಾಟಕಕಾರ. ಆದರೆ ಅವನ ಪ್ರಪಂಚ ಅವನಿಂದ ಶುರುವಾಗಿ, ಅವನಲ್ಲೇ ಮುಗಿದುಬಿಡುತ್ತದೆ. ಅವನು ಅಲ್ಲಿನ ’ಬಿಸಿಲಿನಲ್ಲಿ ತನ್ನನ್ನೇ ತಾನು ಚಿತ್ರಿಸಿ ಸಂಭ್ರಮ ಪಟ್ಟುಕೊಳ್ಳುವ’ ಚಿತ್ರಕಾರ. ಅವನ ಕಣ್ಣೆದುರಲ್ಲಿ ವ್ಯಕ್ತಿಗಳು ಸ್ವತಂತ್ರ ವ್ಯಕ್ತಿತ್ವಗಳಿಗಿಂತಾ ಹೆಚ್ಚಾಗಿ ತನ್ನ ವ್ಯಕ್ತಿತ್ವದ ಬಿಡಿ ಬಿಡಿ ನೆಲೆಗಳಾಗಿ ಕಾಣುತ್ತಿರುತ್ತಾರೆ. ಅವನಿಗೆ ತನಗೆ ಏನು ಬೇಕು ಎನ್ನುವುದರ ಬಗ್ಗೆ ಒಂದು ಅಂದಾಜಿರುತ್ತದೆ, ಆದರೆ ಅದು ಬೇಕು ಎಂದ ಕೂಡಲೇ ಅದರ ಜೊತೆ ಜೊತೆಯಲ್ಲಿಯೇ ಬರುವ ಹೊಣೆಗಾರಿಕೆ ಅವನನ್ನು ಹೆದರಿಸುತ್ತದೆ. ಪ್ರೀತಿ ಪಡೆದುಕೊಳ್ಳುವುದರ ಜೊತೆಜೊತೆಯಲ್ಲಿಯೇ ಕೊಡುವುದೂ ಹೌದು ಎನ್ನುವುದನ್ನು ಅವನು ಮೌನವಾಗಿರುವುದರ ಮೂಲಕ ನಿರ್ಲಕ್ಷಿಸಿಬಿಡುತ್ತಾರೆ. ಮಾತನಾಡಲೇಬೇಕಾಗಿ ಬರುವ ಸಂದರ್ಭಗಳಲ್ಲೆಲ್ಲಾ ಅವನು ಮೌನವಾಗೇ ಉಳಿದುಬಿಡುತ್ತಾನೆ. ಇಲ್ಲಿ ಕಾಳಿದಾಸನಿಗೆ ಮಲ್ಲಿಕಾ ತನ್ನ ಇರುವಿಕೆಯ ಮೂಲದ್ರವ್ಯ ಎಂದು ಅರಿವಿರುತ್ತದೆ, ಆದರೆ ಆತ ಮಲ್ಲಿಕಾಳನ್ನು ವರಿಸಲಾರ, ಆದರೆ ಹಾಗೆಂದು ಒಂಟಿಯಾಗಿ ಉಳಿಯುತ್ತಾನಾ? ಅದೂ ಇಲ್ಲ, ಪ್ರಿಯಾಂಗುಮಣಿಯನ್ನು, ಆ ಮೂಲಕ ರಾಜತ್ವವನ್ನು ಮದುವೆಯಾಗುತ್ತಾನೆ, ಆಸ್ಥಾನ ಕವಿ ಆಗುತ್ತಾನೆ, ಶಾಸಕನಾಗುತ್ತಾನೆ, ವಾರಾಂಗನೆಯರಿಂದ ಸ್ಪೂರ್ತಿಯನ್ನು ಬಸಿದುಕೊಳ್ಳುತ್ತಾನೆ, ಇದೆಲ್ಲದರ ಜೊತೆ ಜೊತೆಯಲ್ಲಿಯೇ ತನ್ನ ಕಾವ್ಯಸೆಲೆಗೆ ಜೀವಧಾತು ಮಲ್ಲಿಕಾ ಮತ್ತು ಅವಳು ಯಾವಾಗಲೂ ತನ್ನವಳಾಗೇ ಇರಬೇಕು ಎಂದು ಬಯಸುತ್ತಾನೆ. ಪ್ರೇಯಸಿಯಲ್ಲಿ ನಿರಂತರವಾಗಿ ತಾಯಿಯನ್ನು ಹುಡುಕುವ ಗಂಡು, ಅವಳಲ್ಲಿ ತಾಯಿ ಸಿಕ್ಕಾಗ ಮತ್ತೆ ಪ್ರೇಯಸಿಯರನ್ನು ಹುಡುಕಲು ತೊಡಗುವುದು ಇಲ್ಲಿನ ದುರಂತ. ’ತಾಯಿಯಂತೆ ಪ್ರೀತಿಸುವ’ ಎನ್ನುವುದರ ಆಳದಲ್ಲೆಲ್ಲೋ ತಾನು ಏನೇ ಮಾಡಿದರೂ ಕ್ಷಮಿಸುವ, ತನಗಾಗಿ ಮತ್ತು ತನಗಾಗಿ ಮಾತ್ರ ಮೀಸಲಾಗಿ ಉಳಿಯುವ ಹೆಣ್ಣಿನ ಹುಡುಕಾಟ ಇರುತ್ತದೆಯೇ? ಮಲ್ಲಿಕಾಳ ಒಂದು ಅಂಶ ಕಾಳಿದಾಸನಿಗೆ ಬೇಕು, ಹಾಗೆ ಪ್ರಿಯಾಂಗು ಮಣಿಯದೂ, ಹಾಗೆ ಅವನ ವಾರಾಂಗನೆ ಗೆಳತಿಯರದೂ. ಆದರೆ ಅವನ ಆ ಒಂದು ಅಂಶದ ಪೂರೈಕೆಗಾಗಿ ಅವರು ಇಡಿಯಾಗಿ ತಮ್ಮನ್ನು ತಾವು ಕಳೆದುಕೊಳ್ಳಬೇಕಾಗುತ್ತದೆ. ಕವಿಯ ಕ್ರೌರ್ಯ ಇರುವುದು ಇಲ್ಲಿ.
ಇನ್ನು ವಿಲೋಮ. ಕಾಳಿದಾಸನ ಪ್ರತಿಭೆಯ ಬಗ್ಗೆ ಒಂದು ಸಣ್ಣ ಅಸೂಯೆ, ಕಾಳಿದಾಸನ ಬಗೆಗಿರುವ ಮಲ್ಲಿಕಾಳ ಪ್ರೇಮ ಮತ್ತು ಅವಳೆಡೆಗಿನ ಆತನ ನಿರ್ಲಕ್ಷ್ಯ ಕಂಡು ಇನ್ನಿಲ್ಲದ ಅಸಹನೆ, ಅದನ್ನು ನೇರವಾಗಿ ಅವನಿಗೇ ಹೇಳುವ ನೇರವಂತಿಕೆ ಎರಡೂ ಅವನಿಗಿದೆ. ಇವನ ಮನಸ್ಸಿನ ಕಾಳಜಿಗೆ ರಂಗು ರಂಗಾದ ಪದಗಳ ಉಡುಗೆ ತೊಡುವುದು ಗೊತ್ತಿಲ್ಲ. ಕಾಳಿದಾಸನಿಗೆ ತನ್ನ ತೋಳುಗಳಲ್ಲಿಯ ಜಿಂಕೆಮರಿಯ ಕಣ್ಣುಗಳ ಸೌಂದರ್ಯ ಮಾತ್ರ ಕಾಣುತ್ತದೆ, ಇವನಿಗೆ ಅದೇ ಸಮಯದಲ್ಲಿ ಮನೆಯಲ್ಲಿ ಆವರಿಸಿರುವ ಕತ್ತಲೂ ಕಾಣುತ್ತದೆ. ಕಂದೀಲಿನಿಂದ ಮನೆಯ ದೀಪಗಳಿಗೆ ವಿಲೋಮ ಬೆಳಕು ಮುಡಿಸುತ್ತಾನೆ. ಅವನು ಜಿಂಕೆಯ ಕಣ್ಣುಗಳ ಬಗ್ಗೆ ಕವಿತೆ ಬರೆಯಲಾರ, ಆದರೆ ಜಿಂಕೆಗೆ ಕವಿತೆಯಾಚೆಗೂ ಬದುಕಿದೆ ಎಂದು ನೋಡಬಲ್ಲ. ಕಾಳಿದಾಸನಿಗೆ ಇವನ ಕಣ್ಣುಗಳಲ್ಲಿ ಪ್ರಶ್ನೆ ಕಾಣುತ್ತದೆ, ಇವನ ಕೈಗಳಲ್ಲಿ ಕನ್ನಡಿ ಕಾಣುತ್ತದೆ, ಅದಕ್ಕೇ ಇವನನ್ನು ಕಂಡರೆ ಕಾಳಿದಾಸನಿಗೆ ಆಗುವುದಿಲ್ಲ. ಕಾಳಿದಾಸ ರಾಜಧಾನಿಗೆ ಹೊರಟುಬಿಟ್ಟರೆ ಮಲ್ಲಿಕಾಳ ಮುಂದಿನ ಜೀವನದ ಗತಿಯೇನು ಎಂದು ಇವನು ಚಿಂತಿಸುತ್ತಾನೆ, ಅಂಬಿಕಾಳ ಜಡ್ಡಿಗೆ ತುಪ್ಪ ಕಳಿಸಲೇ ಎಂದು ಕೇಳುತ್ತಾನೆ, ಒಂಟಿಯಾಗಿ ಉಳಿದ ಮಲ್ಲಿಕಾಳಿಗೆ ಜೊತೆಯಾಗುತ್ತಾನೆ, ಆದರೆ ಅವನೇ ಹೇಳುವ ಹಾಗೆ ಅವನು ಯಾವಾಗ ಬಂದರೂ ಮಲ್ಲಿಕಾಳ ಮನೆಯ ಬಾಗಿಲು, ’ಯಾವಾಗಲೂ ಮುಚ್ಚಿಯೇ ಇರ್ತದೆ, ಮುಚ್ಚಿಯೇ ಇರ್ತದೆ…’. ಆ ಬಾಗಿಲು ತಟ್ಟುತ್ತಲೇ ಬದುಕನ್ನು ವ್ಯರ್ಥಗೊಳಿಸಿಕೊಂಡವನು ವಿಲೋಮ.
ಮಲ್ಲಿಕಾಳೇ ವಿರೋಧಿಸಿದರೂ ಕಾಳಿದಾಸನ ಬಳಿ ಅವಳಿಗಾಗಿ ವಾದ ಮಾದುತ್ತಾನೆ. ಕಡೆಯಲ್ಲಿ ತನ್ನ ಮನೆಯಿಂದಲೇ ಹೊರಹೋಗುವಂತೆ ಕಾಳಿದಾಸ ಆಜ್ಞಾಪಿಸಿದರೂ ಅವರಿಬ್ಬರೂ ಮತ್ತೆ ಹೊಸದಾಗಿ ಜೀವನ ಪ್ರಾರಂಭಿಸುವ ನಿರ್ಧಾರ ಕೈಗೊಂಡರೂ ಕೈಗೊಳ್ಳಲಿ ಎನ್ನುವಂತೆ ಅವರಿಬ್ಬರನ್ನೇ ಬಿಟ್ಟು ಮನೆಯಿಂದ ಹೊರಹೋಗುತ್ತಾನೆ. ಅವನದೂ ಮಲ್ಲಿಕಾಳಂತೆಯೇ ಖಾಲಿ ಉಳಿದ ಹಾಳೆಗಳ ದುರಂತ ಪ್ರೇಮ.
ರಾಕೇಶರು ಈ ನಾಟಕದಲ್ಲಿ ಕಾಳಿದಾಸನಲ್ಲಿ ತಮ್ಮನ್ನು ಕಂಡುಕೊಂಡಿದ್ದಾರೆ ಎನ್ನುವ ಒಂದು ಮಾತಿದೆ. ಇರಬಹುದು… ತಾನೆಲ್ಲೇ ಸುತ್ತಿ ಬಂದರೂ, ಏನೇ ಆಗಿ ಬಂದರೂ, ಮರೆತರೂ ತಾಯಿಯಂತೆ ಪೊರೆಯುವ, ಯಾವುದೇ ಶರತ್ತಿಲ್ಲದೆ ಪ್ರೇಮಿಸುವ, ಪ್ರೇಮಿಸುತ್ತಲೇ ಇರುವ ಒಂದು ಸಂಬಂಧ ಬಹುಶಃ ಎಲ್ಲಾ ಕಾಳಿದಾಸರ ಮನಸ್ಸಿನಾಳದ ಕನಸು. ಆದರೆ ಅವರ ಈ ಆಸೆಯ ನಡುವೆಯೂ ಅವರು ಮಲ್ಲಿಕಾಳನ್ನು, ವಿಲೋಮನನ್ನೂ ಎಷ್ಟು ಸಮರ್ಥವಾಗಿ ಕಟ್ಟಿಕೊಡುತ್ತಾರೆ ಎಂದರೆ, ಕಾಳಿದಾಸನನ್ನು ಅವನು ಇರುವ ಹಾಗೆ ನಾವು ನೋಡಬಹುದು. ಅವನ ನೆರವಿಗೆ ರಾಕೇಶರು ನಿಲ್ಲುವುದಿಲ್ಲ. ನಾಟಕಕಾರನಾಗಿ ರಾಕೇಶರು ಗೆಲ್ಲುವುದು ಅಲ್ಲಿ.
ಸಂಭಾಷಣೆಯೇ ಪ್ರಧಾನವಾಗಿರುವ ಈ ನಾಟಕದಲ್ಲಿ ಮಾತುಗಳಾಚೆಗೂ ಭಾವವನ್ನು ದಾಟಿಸುವ ಸವಾಲನ್ನು ಮುಂಬೈನ ಕಲಾಭಾರತಿ ತಂಡ ಯಶಸ್ವಿಯಾಗಿ ಸ್ವೀಕರಿಸಿತು. ಡಾ ಭರತ್ ಕುಮಾರ್ ಪೊಲಿಪು ಅವರ ಬಿಗಿ ನಿರ್ದೇಶನ ನಾಟಕ್ಕೊಂದು ಶಿಸ್ತು ಮತ್ತು ಗಟ್ಟಿ ತಳಹದಿ ಎರಡನ್ನೂ ಒದಗಿಸಿತು. ನಾಟಕದ ಎಲ್ಲಾ ಕಲಾವಿದರು ನಾಟಕವನ್ನು ಅನುಭವಿಸಿ ಅಭಿನಯಿಸುತ್ತಿದ್ದ ರೀತಿಗೆ ಅದು ಅಭಿನಯ ಎಂದೆನ್ನಿಸದೆ ಪ್ರತಿಯೊಂದು ಪಾತ್ರವೂ ನಾಟಕದಾಚೆಗೂ ಬೆಳೆಯುತ್ತಾ ಹೋಗುತ್ತಿತ್ತು. ಕಾಳಿದಾಸನಾಗಿ ಮೋಹನ್ ಮಾರ್ನಾಡು ಕಾಳಿದಾಸನ ವ್ಯಕ್ತಿತ್ವದ ಎಲ್ಲಾ ಮಜಲುಗಳನ್ನೂ ಕಟ್ಟಿಕೊಡುತ್ತಾರೆ. ಅವನ ಪ್ರತಿಭೆ, ದೌರ್ಬಲ್ಯ ಎರಡೂ ನಮ್ಮ ಕಣ್ಣೆದಿರಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಮಲ್ಲಿಕಾಳ ಪಾತ್ರದಲ್ಲಿ ಸುಧಾ ಶೆಟ್ಟಿ, ಅಂಬಿಕೆಯ ಪಾತ್ರದಲ್ಲಿ ಶೈಲಿನಿ ರಾವ್ ಅವರದು ಹದವರಿತ ಅಭಿನಯ. ತುಳು ಭಾಷೆ ಬರದಿದ್ದರೂ ವಿಲೋಮನ ಪಾತ್ರದಲ್ಲಿ ಮೈದಳೆದ ಅವಿನಾಶ್ ಕಾಮತ್, ಸಂಭಾಷಣೆಯನ್ನೇ ಅಲ್ಲದೆ, ಸಂಭಾಷಣೆಯ ಏರಿಳಿತಗಳನ್ನೂ, ಪದಗಳಿಗೆ ತಕ್ಕ ಮುಖಭಾವವನ್ನೂ ಕಟ್ಟಿಕೊಡುತ್ತಾ ನಟನಾಗಿ ಗೆಲ್ಲುತ್ತಾ ಹೋಗುತ್ತಾರೆ. ವಿಲೋಮನ ದುರಂತವನ್ನು ಅವರು ಯಾವುದೇ ಸ್ವಮರುಕವಿಲ್ಲದೆ ಕಟ್ಟಿಕೊಡುತ್ತಾರೆ.
ವಸ್ತ್ರವಿನ್ಯಾಸ ದಾಕ್ಷಾಯಿಣಿ ಭಟ್ ಅವರದು. ಕಣ್ಣಿಗೆ ತಂಪೆನಿಸುತ್ತದೆ. ಮಲ್ಲಿಕಾಳ ಸರಳತೆ, ಪ್ರಿಯಾಂಗುಮಣಿಯ ಠೀವಿ ಎಲ್ಲವೂ ಉಡುಗೆ ತೊಡುಗೆಗಳಲ್ಲಿ ವ್ಯಕ್ತವಾಗುತ್ತದೆ. ಇಲ್ಲಿ ಒಂದು ಮಾತು ಹೇಳಬೇಕು. ಕಥೆಯಲ್ಲಿರುವುದು ಕೆಲವೇ ದೃಶ್ಯಗಳಾದರೂ ಕಾಲದ ಮಟ್ಟಿಗೆ ಅಲ್ಲಿ ಒಂದು ದೊಡ್ಡ ಅಂತರವಿದೆ. ಕಳೆದು ಹೋದ ಆ ಕಾಲವನ್ನೂ, ಆ ಕಾಲದಲ್ಲಿ ಆದ ಸ್ಥಿತ್ಯಂತರವನ್ನೂ, ಬಡತನವನ್ನೂ ಮಲ್ಲಿಕಾಳ ಉಡುಗೆಗಳ ಬಡತನದಲ್ಲಿ ಮತ್ತು ಮನೆಯ ಹೊರಸ್ವರೂಪದಲ್ಲಿ ತೋರಿಸಿದ್ದರೆ ಆ ಕಾಲದ ಪ್ರಯಾಣವನ್ನು ತೋರಿಸಬಹುದಿತ್ತು ಅನ್ನಿಸುತ್ತದೆ. ಸಂಗೀತ ರಾಮಚಂದ್ರ ಹಡಪದ್ ಅವರದು. ಅವರ ದನಿಯಲ್ಲಿ, ಸಂಗೀತದಲ್ಲಿ ನೋವು ತೊಟ್ಟಿಕ್ಕುತ್ತಿರುತ್ತದೆ. ವಿಷಾದ ಅವರ ಕಂಠದಲ್ಲಿ ಮೈದಳೆಯುತ್ತದೆ. ಹಾಗಾಗಿ ಈ ನಾಟಕಕ್ಕೆ ಸಂಗೀತ ಪೂರಕವಾಗಿತ್ತು. ಆದರೆ ಕೆಲವು ಕಡೆ ಮಾತುಗಳು ಮತ್ತು ಸ್ವರಗಳು ಡಿಕ್ಕಿ ಹೊಡೆಯುತ್ತಿದ್ದಿದ್ದರಿಂದ ಸಂಭಾಷಣೆ ಕೇಳುವಾಗ ಅಡೆತಡೆ ಆಗುತ್ತಿತ್ತು.
“ವಿಲೋಮ ಯಾರು? ಒಬ್ಬ ಅಯಶಸ್ವಿ ಕಾಳಿದಾಸ….
ಕಾಳಿದಾಸ ಯಾರು? ಒಬ್ಬ ಯಶಸ್ವೀ ವಿಲೋಮ!”
ಇದೇ ನಾಟಕದಲ್ಲಿನ ಸಾಲು ಇದು, ಆದರೆ ನಾಟಕ ಮುಗಿದಾಗ ನನಗನ್ನಿಸಿದ್ದು ಕಾಳಿದಾಸನಿಗೆ ತನ್ನ ಯಶಸ್ಸು ಅರ್ಥವಾಗಿತ್ತು ಆದರೆ ಅಯಶಸ್ಸು ಅರ್ಥವಾಗಲಿಲ್ಲ, ವಿಲೋಮನಿಗೆ ತನ್ನ ಅಯಶಸ್ಸು ಅರ್ಥವಾಗಿತ್ತು, ಆದರೆ ಯಶಸ್ಸು ಅರ್ಥವಾಗಲಿಲ್ಲ, ಮಲ್ಲಿಕಾಳಿಗೆ ಪಾಪ ತನ್ನ ಯಶಸ್ಸು, ಅಯಶಸ್ಸು ಎರಡೂ ಅರ್ಥವಾಗಲಿಲ್ಲ. ಕಾಳಿದಾಸ ಒಬ್ಬ ಯಶಸ್ವೀ ಕವಿ, ವಿಲೋಮ ಒಬ್ಬ ಯಶಸ್ವೀ ಅಂತಃಕರಣಿ ಮತ್ತು ಮಲ್ಲಿಕ…… ಮಲ್ಲಿಕಾ ಒಬ್ಬ ಹೆಣ್ಣು.. ಸಮೀಪದೃಷ್ಟಿ ದೋಷ ಇರುವವರು ಹತ್ತಿರವಾದದ್ದನ್ನು ಸರಿಯಾಗಿ ನೋಡಲಾರರಂತೆ, ದೂರದೃಷ್ಟಿ ದೋಷ ಇರುವವರು ದೂರವಾದದ್ದನ್ನು ಸರಿಯಾಗಿ ನೋಡಲಾರರಂತೆ. ಮಲ್ಲಿಕಾ ಹತ್ತಿರ ಇದ್ದ ಕಾಳಿದಾಸನನ್ನೂ, ದೂರ ಇದ್ದ ವಿಲೋಮನನ್ನೂ ನೋಡಲಾಗದ, ಗುರುತಿಸಲಾರದ ಅಯಶಸ್ವಿ ಹೆಣ್ಣು.

‍ಲೇಖಕರು G

April 24, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Anil Talikoti

    ಮತ್ತೆ ಮತ್ತೆ ಮೆಲುಕುಹಾಕಿದ ಸಾಲುಗಳಿವು -‘ಭಾಷೆಯ ಹಂಗಿಲ್ಲದೆ ಭಾವ ನಮ್ಮದಾಗಬಹುದೆ?’, ’ಅವನು ಆತ್ಮ ಸೀಮಿತ, ಅವನಿಗೆ ತನ್ನದೇ ಯೋಚನೆ, ಮೋಹ. ಜಗತ್ತಿನಲ್ಲಿ ಬೇರೆ ಯಾರ ಬಗೆಗೂ ಅವನಿಗೆ ಆಸಕ್ತಿ ಇಲ್ಲ’ ,ಅವನೊಬ್ಬ ’ಜಾಣ ಮುಗ್ಧ’,’ಅವನ ಆ ಒಂದು ಅಂಶದ ಪೂರೈಕೆಗಾಗಿ ಅವರು ಇಡಿಯಾಗಿ ತಮ್ಮನ್ನು ತಾವು ಕಳೆದುಕೊಳ್ಳಬೇಕಾಗುತ್ತದೆ’, ‘ಅವನು ಜಿಂಕೆಯ ಕಣ್ಣುಗಳ ಬಗ್ಗೆ ಕವಿತೆ ಬರೆಯಲಾರ, ಆದರೆ ಜಿಂಕೆಗೆ ಕವಿತೆಯಾಚೆಗೂ ಬದುಕಿದೆ ಎಂದು ನೋಡಬಲ್ಲ’ ಅಬ್ಬಾ, ಬರಹ ಹರಳುಗಟ್ಟಿ ಕಾವ್ಯದ ಓಘಕ್ಕೆ ಮೈ ಮನ ಒಡ್ಡಿಕೊಳ್ಳುತ್ತದೆ, ಸುಂದರ ಬರಹಕ್ಕೊಂದು ಸಲಾಮು
    ~ಅನಿಲ

    ಪ್ರತಿಕ್ರಿಯೆ
  2. Jayashree b kadri

    How effectively you write Madam. Hats off to your skill with words, moving style and deft rendering of poignant emotions.

    ಪ್ರತಿಕ್ರಿಯೆ
  3. ಲಕ್ಷ್ಮೀಕಾಂತ ಇಟ್ನಾಳ

    ಕಾಳಿದಾಸ, ಮಲ್ಲಿಕಾ,ವಿಲೋಮ ಎಂಬ ಆಷಾಡದ ಮೋಡಗಳು: ಜಾದೂಗಾರನೊಬ್ಬ ಕಾಗದದ ಸುರುಳಿಯೊಂದನ್ನು ತನ್ನ ಕೈಗಳಿಂದ ಬಿಚ್ಚುತ್ತಲೇ ಹೋಗುವುದನ್ನು ಬೆರಗುಗಣ್ಣಿಂದ ನೋಡುವ ಮಗುವಿನಂತಾಗಿದ್ದೆ ವಿಶ್ಲೇಷಣೆಯನ್ನು ಓದುತ್ತಿದ್ದಾಗ: ಈ ಸಂಧ್ಯಾರಾಣಿಜೀ ಯವರ ನಾಟಕದ ಗೀಳು ನಮಗೆಲ್ಲ ಎಂತೆಂತಹ ನಾಟಕಗಳ, ಪಾತ್ರಗಳ ಪರಿಚಯದ ಸ್ವಾದಿಷ್ಟ ಅಡುಗೆ ಮಾಡಿ ಬಡಿಸುತ್ತಿದೆಯಲ್ಲ! ಅವರ ಈ ಹುಚ್ಚು ಹೀಗೆಯೇ ಇದ್ದರೆ, ನಾವೂ ಇನ್ನೊಂದಿಷ್ಟು ನಾಟಕಗಳೊಂದಿಗೆ ಕಲೆಯ ಹೂವು ಅರಳುವ ಶಬ್ದಗಳನ್ನು, ಕಣ್ನ ಸಂಭಾಷಣೆಗಳನ್ನು, ಒಳಹರಿವುಗಳ ಭಾವ ಪ್ರವಾಹಗಳ ಎದೆಯ ಹಾಡುಗಳ ಸಂಗೀತ ಕಚೇರಿಗಳನ್ನು ಇನ್ನಷ್ಟು ಆಲಿಸುತ್ತ ಧನ್ಯತೆ ಪಡೆಯಬಹುದು. ಕಾಳಿದಾಸ,ಮಲ್ಲಿಕಾ, ವಿಲೋಮರ ವ್ಯಕ್ತಿ ವಿಶೇಷಗಳು, ಭಾವಚೌಕಟ್ಟುಗಳಲ್ಲಿ ದ್ವಂದ್ವಗಳ ಕಣ್ಣುಮುಚ್ಚಾಲೆಗಳಲ್ಲಿ ಪ್ರೇಮಿ, ಪ್ರೇಮ ಹೇಗೆ ಬಲಿಯಾಗುತ್ತವೆ ಸಮಯದ ವಿವಿಧ ಪದರುಗಳಲ್ಲಿ, ಒಂದು ರೀತಿಯ ಪಲಾಯಣವಾದಿಯಾಗಿ ಕಾಳಿದಾಸ ಕಂಡರೆ, ನಿಜರಾಧೆಯಾಗಿ ಮಲ್ಲಿಕಾ, ತುಮುಲಗಳ ಪರಿವೆಗಳಲ್ಲಿ ಅದ್ದಿಕೊಂಡ ಅಂಬಿಕೆ, ….ಬಣ್ಣಿಸಲು ಪದಗಳು ಸೋಲುತ್ತಿವೆ. ಧನ್ಯವಾದ ಸಂಧ್ಯಾ ಜಿ.

    ಪ್ರತಿಕ್ರಿಯೆ
  4. ಅವಿನಾಶ್ ಕಾಮತ್

    ಪ್ರಿಯ ಸಂಧ್ಯಾರಾಣಿ ಮೇಡಂ
    <>
    ಇಷ್ಟೇ ಸಾಲುಗಳಲ್ಲಿ ಇಡೀ ನಾಟಕವನ್ನೇ ಕಟ್ಟಿಕೊಟ್ಟಿರಿ!! ಸರಿಯಾಗಿ ಹದಿನೈದು ವರ್ಷಗಳ ಹಿಂದೆ ಈ ನಾಟಕದಲ್ಲಿ ಅನುನಾಸಿಕನ ಪಾತ್ರ ಮಾಡಿದ್ದೆ. ಅಂದಿನಿಂದಲೇ ಯಾವ ಪರಿ ಈ ನಾಟಕ (ವಿಶೇಷವಾಗಿ ವಿಲೋಮನ ಪಾತ್ರ) ನನ್ನನ್ನು ಆವರಿಸಿಕೊಂಡುಬಿಟ್ಟಿತ್ತು ಎಂದರೆ ಸುಮಾರು ಐವತ್ತು ಸಲವಾದ್ರೂ ಈ ನಾಟಕವನ್ನು ಓದಿದೆ.. ಶ್ರೇಷ್ಠ ನಾಟಕಗಳ ಒಂದು ಮಹತ್ವಪೂರ್ಣ ಗುಣವೆಂದರೆ ಪ್ರತಿ ಸಲ ಓದಿದಾಗಲೂ/ನೋಡಿದಾಗಲೂ ಓದುಗನಿಗೆ/ಪ್ರೇಕ್ಷಕನಿಗೆ ಹೊಸತೊಂದು ಆಯಾಮದ ದರ್ಶನ ಮಾಡಿಸುವುದು. ನಿಮ್ಮ ಈ ಲೇಖನ ನನಗೆ ಆಷಾಢದ ಒಂದು ದಿನದ ಮತ್ತು ನಾಟಕದ ಪಾತ್ರಗಳ ವಿಭಿನ್ನ ಆಯಾಮವನ್ನು ತೋರಿಸಿವೆ. ಇಂಥದ್ದೊಂದು ಲೇಖನವು, ನಾವು ನಾಟಕದ ತಾಲೀಮು ಪ್ರಾರಂಭಿಸುವಾಗಲೇ ಸಿಕ್ಕಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!!
    ವಿಲೋಮ ಒಬ್ಬ ಯಶಸ್ವಿ ಅಂತಃಕರಣಿ ಎನ್ನುವ ನಿಮ್ಮ ಮಾತನ್ನೋದಿಯೇ ಬಹಳ ಖುಷಿಯಾಗುತ್ತಿದೆ!! ಬಹಳಷ್ಟು ಜನರು ಆ ಪಾತ್ರವನ್ನು ಈ ದೃಷ್ಟಿಯಲ್ಲಿ ನೋಡುವುದೇ ಇಲ್ಲ! ಬಹಳಷ್ಟು ಜನರ ಪ್ರಕಾರ ವಿಲೋಮನಲ್ಲಿ ಮಲ್ಲಿಕೆಯ ಕುರಿತು ಕಾಮಭಾವನೆ ಇದೆ. ಕೆಲವರು ’ವಿಲೋಮ ಮಲ್ಲಿಕೆಯನ್ನು ಪ್ರೀತಿಸುತ್ತಾನೆ’ ಎಂದೂ ವಿಶ್ಲೇಷಿಸಿದ್ದಾರೆ. ಇರಲೂಬಹುದು. ಆದರೆ ನನಗೆಲ್ಲೂ ಆತ ಮಲ್ಲಿಕೆಯ ಪ್ರೀತಿಯಲ್ಲಿ ಮುಳುಗಿದ ವ್ಯಕ್ತಿ ಎಂದು ಅನ್ನಿಸಲೇ ಇಲ್ಲ. ನಾಟಕದಲ್ಲಿ ಎಲ್ಲಿಯೂ ವಿಲೋಮ ಮಲ್ಲಿಕೆಯನ್ನು ಪ್ರೀತಿಸುತ್ತಿದ್ದ ಎಂಬುದನ್ನು ಸಾಬೀತುಪಡಿಸುವ ಮಾತುಗಳೂ ಇಲ್ಲ. ಆತ ನಿಜಕ್ಕೂ ಒಬ್ಬ ಅಂತಃಕರಣಿ. ಆತನಿಗೆ ಮಲ್ಲಿಕಾ-ಅಂಬಿಕಾಳ ಕುರಿತು ಕಾಳಜಿ ಇದೆ. ಅದೇ ಕಾಳಜಿಯಿಂದಾಗಿ ಆತ ಕಾಳಿದಾಸನನ್ನು ಹೆಜ್ಜೆ-ಹೆಜ್ಜೆಗೂ ಪ್ರಶ್ನಿಸುತ್ತಾನೆ.
    ಕೊನೆಯ ದೃಶ್ಯದಲ್ಲಿ ಆತ ನಶೆಯಲ್ಲಿ ಮನೆಗೆ ಮರಳಿದಾಗ, ತನ್ನ ಹೆಂಡತಿಯ ಪ್ರಿಯಕರ ಮನೆಯಲ್ಲೇ ಇರುವುದನ್ನು ಕಂಡಾಗಲೂ ಸಿಟ್ಟಿಗೇಳುವುದಿಲ್ಲ. ಅವನನ್ನು ಆತ್ಮೀಯವಾಗಿ ಸ್ವಾಗತಿಸುವ ಪ್ರಯತ್ನವನ್ನೇ ಮಾಡುತ್ತಾನೆ. ಕೊನೆಗೆ ಅವರಿಬ್ಬರನ್ನು ಅವರ ಪಾಡಿಗೆ ಬಿಟ್ಟು ಹೊರಟುಬಿಡುತ್ತಾನೆ!! ಇದು ಅವನ ಹೃದಯವೈಶಾಲ್ಯವಲ್ಲದೇ ಮತ್ತೇನಾಗಿರಲು ಸಾಧ್ಯ?!! ಇಂಥ ವಿಲೋಮನನ್ನು ನೀವು ಗ್ರಹಿಸಿದ ಪರಿ ನನಗಂತೂ ಬಹಳ ಖುಷಿ ಕೊಟ್ಟಿದೆ ಏಕೆಂದರೆ ನಾನೂ ಆತನನ್ನು ಗ್ರಹಿಸಿದ್ದು ಹಾಗೆಯೇ!!
    ಒಂದು ಅತ್ಯುತ್ತಮ ಲೇಖನಕ್ಕಾಗಿ ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆ!! From bottoms of my heart- Thank you! 🙂

    ಪ್ರತಿಕ್ರಿಯೆ
  5. Hema Sadanand Amin

    e natkada vimarshe bahalastu oddiddhe. adare e pari ananda innyava vimarsheyallu kondilla. nijavagiyu bhaseya hangillade nimma manasannu spandisi adara kaavu namagu talupithu.
    Hema

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: