ಸಂಧ್ಯಾರಾಣಿ ಕಾಲಂ : ಅವನು ವಿರಕ್ತಿಯ ದಾರಿಯಲ್ಲಿ ಅನುರಕ್ತಿಯ ಮಾತನಾಡಿದವ


ಆ ನಾಟಕದ ಹೆಸರು ಯೋಗಿ ವೇಮನನೆಂದೋ, ಮಹಾಯೋಗಿ ವೇಮನನೆಂದೋ, ಜ್ಞಾನಿ ವೇಮನನೆಂದೋ ಇದ್ದಿದ್ದರೆ ಬಹುಶಃ ಅದು ಎತ್ತರದಲ್ಲಿರುತ್ತಿತ್ತು, ಆದರೆ ಇಷ್ಟು ಹತ್ತಿರವಾಗುತ್ತಿರಲಿಲ್ಲ. ನಾಟಕದ ಹೆಸರು ’ವಿನುರಾ ವೇಮ’. ಕೋಲಾರ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ನನಗೆ ವೇಮನ ಪರಿಚಿತ ಹೆಸರು, ’ವಿಶ್ವದಾಭಿರಾಮ, ವಿನುರಾ ವೇಮ’, ನನಗೆ ’ಚನ್ನ ಮಲ್ಲಿಕಾರ್ಜುನ’ನಷ್ಟೇ ಹತ್ತಿರ, ಸರ್ವಜ್ಞನಷ್ಟೇ ಪರಿಚಿತ.
ವೇಮನನ ಬಗ್ಗೆ ಹಲವಾರು ಕಥೆಗಳಿವೆ. ಅವನೊಬ್ಬ ಸಮೃದ್ಧಿಯ ನಡುವಿನಲ್ಲಿದ್ದು ಎಲ್ಲವನ್ನೂ ಬಿಟ್ಟವನು. ತನ್ನ ಮೋಹದ ನಾಗಸಾನಿ ಕೇಳಿದಳೆಂದು ಅಮ್ಮನ ಪ್ರೀತಿ ಸುರಿಸಿದ ಅತ್ತಿಗೆಯ ಮೂಗುತಿ ಕೇಳಿದವನು. ಹೌದು, ಮೂಗುತಿ. ಮೂಗುತಿ ಕೇವಲ ಒಂದು ಒಡವೆಯಲ್ಲ. ಅನೇಕ ಸಲ ಮೂಗುತಿ ಹೆಣ್ತನಕ್ಕೆ ಸಂಕೇತ, ವಿವಾಹಿತೆಯ ಶುಭಸಂಕೇತ ಎಂದೇ ಬಳಕೆಯಾಗಿದೆ. ಅಲಮೇಲಮ್ಮನ ಮೂಗುತಿಯನ್ನು ಮೈಸೂರು ಮಹಾರಾಣಿ ಆಸೆಪಟ್ಟಿದ್ದರಿಂದ ನಡೆದ ಯುದ್ಧ ತಲಕಾಡನ್ನು ಮರಳಾಗಿಸಿತು, ಮೈಸೂರು ಅರಮನೆಯನ್ನು ಮಕ್ಕಳ ಜೋಗುಳದಿಂದ ಕಿವುಡಾಗಿಸಿತು ಎನ್ನುವ ಕಥೆ ಇದೆ. ಅಂತಹ ಮೂಗುತಿಯನ್ನು, ಅದೂ ತನ್ನ ಅತ್ತಿಗೆ ಧರಿಸಿದ್ದ ಮೂಗುತಿಯನ್ನು ನಾಗಸಾನಿಗೆ ಕೇಳುವುದೆಂದರೆ ಅದು ತಮಾಶೆಯಲ್ಲ. ಆದರೆ ಅಮ್ಮನಂತಹ ಅತ್ತಿಗೆಯಲ್ಲಿ ನೇರವಾಗಿ ಹೋಗಿ ಪ್ರಿಯತಮೆಗಾಗಿ ಮೂಗುತಿ ಕೇಳಿದವನು ವೇಮನ.
ಯೋಗಿ ವೇಮನ ಮತ್ತು ವೇಮನನಿಗೆ ಇರುವುದು ಎತ್ತರ ಮತ್ತು ಹತ್ತಿರಕ್ಕಿರುವ ವ್ಯತ್ಯಾಸ. ಎತ್ತರವನ್ನು ಗೌರವಿಸುತ್ತೇವೆ, ಆದರೆ ಪ್ರೀತಿಸಲು ಅದಷ್ಟೇ ಸಾಲದು, ಅವರು ಹತ್ತಿರವೂ ಆಗಿರಬೇಕು. ಮಾತನಾಡುವಾಗ, ಸಿಂಹಾಸನ ಹಾಕಿಕೊಂಡು ಕೂರದೆ, ಜೊತೆಯಲ್ಲಿ ಕಟ್ಟೆಯ ಮೇಲೆ ಕೂತು ಮಾತನಾಡುವವರನ್ನು ನಾವು ಪ್ರೀತಿಸಲು ಸಾಧ್ಯ. ರಾಗ, ಧ್ವೇಷ, ಮೋಹ, ಪ್ರೀತಿ, ಕಣ್ಣೀರು, ನಿಟ್ಟುಸಿರು ಎಲ್ಲಾ ಇದ್ದವ ವೇಮನ. ಎಲ್ಲದರ ನಡುವಿನಲ್ಲೇ ಇದ್ದು ಮೋಕ್ಷಗಾಮಿಯಾದವ. ಹಾಗಾಗಿ ವೇಮನನ ಕಥೆ ಎಂದರೆ ಒಂದು ಆತ್ಮೀಯತೆಯ ಕುತೂಹಲದಿಂದಲೇ ಹೋಗಿದ್ದೆ.
ನಾಟಕವನ್ನು ಕಾವ್ಯದ ಮೂಲಕವೇ ಕಟ್ಟುವ, ನಾಟಕಕ್ಕೆ ಹಾಡಿನ ಲಯವನ್ನೂ, ಲಾಲಿತ್ಯವನ್ನು ಅನಾಯಾಸವಾಗಿ ಕಲ್ಪಿಸಿಕೊಡುವ ಕೆ ವೈ ನಾರಾಯಣಸ್ವಾಮಿಯವರ ನಾಟಕ, ಬಸವಲಿಂಗಯ್ಯನವರ ನಿರ್ದೇಶನ ಎಂದ ಮೇಲೆ ಆ ನಾಟಕದ ಬಗ್ಗೆ ನಿರೀಕ್ಷೆಗಳೇನು ಕಡಿಮೆ ಇರಲಿಲ್ಲ. ಕಲಾಗ್ರಾಮದ ಬಯಲು ರಂಗಮಂದಿರದಲ್ಲಿ ಆಗಬೇಕಿದ್ದ ನಾಟಕ. ಅಂದು ಬೆಂಗಳೂರಿನಲ್ಲಿ ಇನ್ನಿಲ್ಲದ ಮಳೆ. ಕಡೆಗೆ ನಾಟಕದ ಸ್ಥಳ ಒಳಾಂಗಣಕ್ಕೆ ಬದಲಾಯಿತು. ಬಯಲು ರಂಗಮಂದಿರದಲ್ಲೇ ಆಗಿದ್ದಿದ್ದರೆ ನಾಟಕಕ್ಕೆ ಇನ್ನೂ ಹೆಚ್ಚಿನ ಆಯಾಮಗಳು ದಕ್ಕುತ್ತಿದ್ದವೇನೋ ಆದರೆ ಇಲ್ಲೂ ನಾಟಕ ಚೆನ್ನಾಗಿಯೇ ತೆರೆದುಕೊಂಡಿತು.
ಕೆವೈಎನ್ ಅವರ ಸುಮಾರು ನಾಟಕಗಳಂತೆ ಇಲ್ಲಿಯೂ ಕಥೆ ಇಂದಿನಿಂದ ಶುರುವಾಗಿ, ನಿನ್ನೆಗಳನ್ನು ಮುಖಾಮುಖಿಯಾಗಿಸಿಕೊಂಡು, ಇಂದು ನೆನ್ನೆಗಳ ಸಂಗಮದಲ್ಲಿ ಬೆಳೆಯುತ್ತಾ ಹೋಗುತ್ತದೆ. ರೆಡ್ಡಿಗಳ ಮನೆಯಲ್ಲಿ ಜನಿಸಿದ ವೇಮನ ರಾಗಿಯಾಗಿ, ಅನುರಾಗಿಯಾಗಿ ಮೋಕ್ಷಗಾಮಿಯಾಗುವ ಕಥೆ ಇದು. ಇಂದಿನ ದಿನಮಾನದಲ್ಲಿ ಸಹ, ಕುವೆಂಪು ’ರಾಮಾಯಣ ದರ್ಶನಂ’ ಬರೆದರು ಎನ್ನುವುದನ್ನೇ ಒಪ್ಪಿಕೊಳ್ಳದ, ವ್ಯಂಗ್ಯವಾಡಿದ, ನಿರಾಕರಿಸಿದ ಹಲವಾರು ಉದಾಹರಣೆಗಳನ್ನು ನೋಡಿದ ನಮಗೆ ಇನ್ನು ಆಗಿನ ಕಾಲಗಟ್ಟದಲ್ಲಿ ಪಂಡಿತ ವರ್ಗ ವೇಮನನ ಬಗ್ಗೆ, ಅವನ ಜೀವನದ ಬಗ್ಗೆ, ಅವನ ರಚನೆಗಳ ಬಗ್ಗೆ ಹೇಗೆಲ್ಲಾ ಕುಹಕವಾಡಿರಬಹುದು, ಕಥೆ ಕಟ್ಟಿರಬಹುದು ಎಂದು ಊಹಿಸಲು ಸಾಧ್ಯವಾಗುತ್ತದೆ. ಬಹುಶಃ ಸಿ ಪಿ ಬ್ರೌನ್ ಪ್ರಯತ್ನ ಇಲ್ಲದಿದ್ದರೆ ಅನೇಕಾನೇಕ ವಚನಗಳ ರೀತಿ, ಅನೇಕ ಕಥೆಗಳ ರೀತಿ, ಕಾರಣಿಕಗಳ ರೀತಿ ವೇಮನನ ಪದಗಳೂ ಸಹ ಭೂತಕಾಲದಲ್ಲಿ ಸೇರಿಹೋಗುತ್ತಿದ್ದವೋ ಏನೋ. ಅಕ್ಷರ ಬಲ್ಲವರ ಉಪೇಕ್ಷೆಗೆ ಒಳಗಾಗಿದ್ದ ವೇಮನನ ಪದಗಳನ್ನು ಅಕ್ಷರಶಃ ಎದೆಯಲ್ಲಿಟ್ಟುಕೊಂಡು ಪೊರೆದವರು ಅಕ್ಷರದ ಪರಿಚಯವೇ ಇಲ್ಲದ ಸಾಮಾನ್ಯ ಜನ. ಕೇವಲ ಅವರ ಪ್ರೀತಿಯಿಂದಲೇ ನಾಳೆಗಳಿಗೆ ದಕ್ಕಿದವನು ವೇಮನ. ಅವನನ್ನು ಜಾನಪದ ಪರಂಪರೆಯ ಬುರ್ರಕಥಾದವರ ಮೂಲಕ ಬ್ರೌನ್ ಗೆ ಪರಿಚಯಿಸುವ ದೃಶ್ಯ, ಅಲ್ಲಿ ಹಾಡುಗಾರರ ಬಾಯಲ್ಲಿ ಬರುವ ಭೂತದ ಕಥೆ ನಾಟಕೀಯತೆಯಿಂದ ಸೆಳೆಯುತ್ತದೆ.
ಮೊದಲೇ ಹೇಳಿದ ಹಾಗೆ ವೇಮನ ಅನುರಾಗಿ. ಎಲ್ಲವನ್ನೂ ಅದಮ್ಯ ಪ್ರೀತಿಯಲಿ, ಉತ್ಕಟತೆಯಲಿ ಮಾಡುವ ತೀವ್ರ ವ್ಯಾಮೋಹಿ. ಅಪ್ಪ-ಅಮ್ಮ, ಅಣ್ಣಂದಿರೆಲ್ಲಾ ಅವನ ಆಸೆ ಬಿಟ್ಟಿರುತ್ತಾರೆ, ಅವನನ್ನು ಪೊರೆಯುವವಳು ಅಮ್ಮನಂತಹ ಅತ್ತಿಗೆ ನರಸಾಂಬೆ. ಆಕೆಯೇ ಹೆಣ್ಣನ್ನು ಹುಡುಕಿ ಮದುವೆ ಮಾಡಿರುತ್ತಾಳೆ. ಆದರೆ ವೇಮನನಿಗೆ ನಾಗಸಾನಿಯಲ್ಲಿ ಉತ್ಕಟ ಪ್ರೇಮ. ಅವಳು ಬೇಕೆಂದರೆ ಅತ್ತಿಗೆಯ ಮೂಗುತಿಯನ್ನೇ ಕೇಳುವಷ್ಟು ಪ್ರೀತಿ. ಮೂಗುತಿ ಕೊಟ್ಟ ಅತ್ತಿಗೆ ಒಂದು ಶರತ್ತು ಹಾಕುತ್ತಾಳೆ. ಆ ಮೂಗುತಿಯನ್ನು ನಾಗಸಾನಿ ನಗ್ನವಾಗಿ ಧರಿಸಬೇಕು ಎನ್ನುವುದೇ ಆ ಶರತ್ತು. ಹೆಣ್ಣಿನ ನಗ್ನತೆ, ಅದರಲ್ಲೂ ಆಕೆ ಬಾಗಿ ಮೂಗುತಿ ತೊಡುವಾಗ ಕಂಡು ಬರುವ ಆಕೆಯ ನಗ್ನತೆ, ಕಾಮದ ಬಗೆಗೆ ಅವನಲ್ಲಿ ಒಂದು ಜಿಗುಪ್ಸೆ ಮೂಡಿಸಬಹುದು ಎನ್ನುವುದು ಅವಳ ಉದ್ದೇಶ ಆಗಿರುತ್ತದೆ. ಯಾಕೋ ಈ ಮಾತು ನನ್ನನ್ನು ಕಾಡುತ್ತಲೇ ಇದೆ. ಏಕೆಂದರೆ ನಗ್ನತೆ ಈ ನಾಟಕದುದ್ದಕ್ಕೂ ಒಂದು ರೂಪಕವಾಗಿ, ಒಂದು ಪಾತ್ರವಾಗಿ ಬಂದಿದೆ. ಇಲ್ಲಿ ಬತ್ತಲು ವ್ಯಾಮೋಹವಾಗುತ್ತದೆ, ಬತ್ತಲು ಜಿಗುಪ್ಸೆಯಾಗುತ್ತದೆ, ಬತ್ತಲು ಪಾಪವಾಗುತ್ತದೆ, ಬತ್ತಲು ಸಾಂತ್ವನ ಹೇಳುತ್ತದೆ, ಬತ್ತಲು ಪ್ರಾಯಶ್ಚಿತ್ತವೂ ಆಗುತ್ತದೆ. ನಾಟಕದಲ್ಲಿ ಅಕ್ಕ ಹೇಳುವ ಹಾಗೆ ’ಬತ್ತಲೆಂದರೆ ದೀಪವನ್ನು ರಮಿಸಲು ಪತಂಗ ಕ್ರಮಿಸುವ ದಾರಿ…’ ರಮಿಸಬೇಕೆಂದರೆ ದೀಪವೂ ಉರಿಯುತ್ತಿರುತ್ತದೆ, ಪತಂಗವೂ… ಇರಲಿ, ನರಸಾಂಬೆ ಬಯಸಿದಂತೆ ನಾಗಸಾನಿಯ ಬತ್ತಲು ವೇಮನನಲ್ಲಿ ಅಸಹ್ಯವನ್ನು ತುಂಬುವುದಿಲ್ಲ. ಹೆಣ್ಣನ್ನು ದೇಹದಾಚೆಗೂ, ದೇಹದೊಂದಿಗೂ ಪ್ರೀತಿಸಬಲ್ಲವನು ವೇಮನ.

ಮದುವೆಯಾಗಿದ್ದರೂ, ಅರಮನೆಯಲ್ಲಿದ್ದರೂ ಒಂಟಿತನದಲ್ಲಿ ನರಳುವ ದೌರ್ಭಾಗ್ಯ ಅವನ ಹೆಂಡತಿಯದು. ’ಅಚ್ಚಿಗೆ ಹೊಯ್ದ ಹುಣ್ಣಿಮೆಯ ಪಾಕ’ ದಂತಹ ರಾಣಿ, ’ಕಾದು ಕಾದು ಕೆಂಡವಾಗಿ, ನೊಂದು ನೊಂದು ಗಾಯವಾಗಿ, ನಿಂದೆ ಬಂದರೆ ಬರಲಿ ಎಂದು’ ನಾಗಸಾನಿಯ ಮನೆಗೆ ಗಂಡನನ್ನು ಹುಡುಕಿ ಬರುತ್ತಾಳೆ. ಒಬ್ಬಳಿಗೆ ಅವನು ಅಧಿಕಾರ ದತ್ತವಾಗಿ ಸಿಕ್ಕವನು, ಇನ್ನೊಬ್ಬಳಿಗೆ ಅವನು ಪ್ರೇಮಕ್ಕೆ ದಕ್ಕಿದವನು. ಇಬ್ಬರಿಗೂ ಅವನು ಬೇಕು, ’ಬೇಕಾದಷ್ಟು ಹಣ ಕೊಡುತ್ತೇನೆ, ಬಿಟ್ಟು ಕೊಡು ನನ್ನ ಗಂಡನನ್ನು’ ಎನ್ನುವ ಹೆಂಡತಿಯ ಮಾತು ನಾಗಸಾನಿಯ ಎದೆಗೆ ನಾಟುತ್ತದೆ. ತನ್ನ ಪ್ರೇಮದ ಬಗ್ಗೆ ಅವಳಿಗೆಂತಹ ಆತ್ಮವಿಶ್ವಾಸವೆಂದರೆ, ಸಾಧ್ಯವಾದರೆ ನಿನ್ನ ಗಂಡನಿಂದ ಒಂದು ಮಲ್ಲಿಗೆ ಎಸಳು ಸಂಪಾದಿಸಿಕೋ, ನಿನ್ನ ತೂಕದ ಚಿನ್ನ ನಾನು ಚೆಲ್ಲುತ್ತೇನೆ, ಅದೂ ನಾನೇ ದುಡಿದು ಗಳಿಸಿದ ಹಣ ಅನ್ನುತ್ತಾಳೆ. ಹೆಂಡತಿಯನ್ನು ಆ ಮಾತು ಇನ್ನಿಲ್ಲದಂತೆ ಅಪಮಾನ ಗೊಳಿಸುತ್ತದೆ. ಮನೆಗೆ ಹಿಂದಿರುಗಿದವಳೇ ಬಲವಂತದಿಂದ ಮದುವೆ ಮಾಡಿದ ನರಸಾಂಬೆಯ ಮೇಲೆ ಆರೋಪ ಹೊರಿಸಿ ಗೋಳಾಡುತ್ತಾಳೆ. ನರಸಾಂಬೆ ಈಗ ಸುಮ್ಮನಿರಲಾಗುವುದಿಲ್ಲ, ಮೈದುನನನ್ನು ಹುಡುಕಿಕೊಂಡು ನಾಗಸಾನಿಯ ಮನೆಗೆ ಬರುತ್ತಾಳೆ.
ಇಲ್ಲಿ ನಾಗಸಾನಿಯನ್ನು ನಡೆಸಿಕೊಂಡ ರೀತಿ ನನಗೆ ತುಂಬಾ ಇಷ್ಟವಾಯಿತು. ಸಾಧಾರಣವಾಗಿ ಇಂತಹ ಸಂದರ್ಭಗಳಲ್ಲಿ ಹೆಂಡತಿಯನ್ನು ಗೆಲ್ಲಿಸುವ ಭರದಲ್ಲಿ ನಾಗಸಾನಿಯನ್ನು ಸುಲಭವಾಗಿ ದುರಾಸೆಯ ಹೆಣ್ಣನ್ನಾಗಿ, ಕಾಮಿಯನ್ನಾಗಿ, ಅಪರಾಧಿಯನ್ನಾಗಿ ಮಾಡಿಬಿಡುವುದನ್ನೇ ನಾವು ನೋಡುತ್ತೇವೆ. ’ಇನ್ನೊಂದು ಹೆಣ್ಣು’ ಯಾವಾಗಲೂ ಅಪರಾಧಿಯೇ. ಹೆಂಡತಿ ಯಾವಾಗಲೂ ಸರಿಯೇ. ದೇವದಾಸನ ಪಾರುವನ್ನು ಪ್ರೀತಿಸುವವರೂ ಸಹ, ಚಂದ್ರಮುಖಿಯನ್ನು ’ಕೇವಲ’ ವೇಶ್ಯೆಯನ್ನಾಗಿ ಕಾಣುವಂತೆ. ಆದರೆ ಇಲ್ಲಿ ಅವಳನ್ನೂ ತುಂಬಾ ಪ್ರೀತಿಯಿಂದಲೇ ಕಾಣಲಾಗಿದೆ. ’ನೀನು ಕೊಟ್ಟರೆ ವಿಷವನ್ನಾದರೂ ಕುಡಿದು ಬಿಡುತ್ತೇನೆ’ ಎಂದು ತನ್ನ ಮಡಿಲಲ್ಲಿ ಮಲಗುವ ವೇಮನನ ನೆನಪು ಅವಳಿಗೆ ಮಾಂಗಲ್ಯವಾಗಿರುತ್ತದೆ. ಸಿಟ್ಟಿಗೆ ಬಿದ್ದು ವೇಮನನ ಹೆಂಡತಿಯನ್ನು ಬೈದು ಕಳಿಸಿದರೂ, ಆ ಬಗ್ಗೆ ಅವಳಿಗೆ ಒಂದು ಅಪರಾಧಿ ಭಾವನೆ ಇದೆ. ಕಡೆಗೆ ವೇಮನನ ಮನದ ವ್ಯಾಮೋಹವನ್ನು ಇದು ಹಿಡಿದಿಡುತ್ತದೆ ಎಂದು ತಾಯಿಕೊಟ್ಟ ಔಷಧಿಯನ್ನು ವೇಮನನಿಗೆ ಕುಡಿಸುತ್ತಾಳೆ, ಆದರೆ ಆ ಔಷಧಿ ಕಡೆಗೆ ಅವಳ ಬದುಕಿಗೇ ವಿಷವಾದದ್ದು ಅವಳ ದುರಾದೃಷ್ಟ.
ಅದೇ ದಿನ ಅವಳ ಮನೆಗೆ ನರಸಾಂಬೆ ಬರುತ್ತಾಳೆ. ಅವಳ ಮೂಗಿನ ನತ್ತನ್ನು ಕಂಡು, ಇದನ್ನು ವೇಮನನ ಹೆಂಡತಿಯೂ ಇಷ್ಟ ಪಟ್ಟಿದ್ದಳು, ಇರಲಿ ನಿನಗೂ ಚೆನ್ನಾಗಿಯೇ ಕಾಣುತ್ತದೆ ಎಂದು ಹೇಳುತ್ತಲೇ ಈ ಮನೆ ಆ ಮೂಗುತಿಯ ಮನೆಯಲ್ಲ ಎಂದು ಸೂಚ್ಯವಾಗಿ ಹೇಳುತ್ತಾಳೆ. ಇನ್ನು ಮುಂದೆ ನೀನು ಒಂಟಿತನವನ್ನು ಅಭ್ಯಾಸ ಮಾಡಿಕೋ, ಇಷ್ಟು ದಿನ ಅವಳು ಒಂಟಿಯಾಗಿದ್ದು ಸಾಕು ಎಂದೂ ಹೇಳುತ್ತಾಳೆ. ಆಗ ನಾಗಸಾನಿಯ ಉತ್ತರ ನನ್ನನ್ನು ಇಂದಿಗೂ ಕಾಡುತ್ತದೆ, ’ಈ ಮನೆಗೆ ಬರುವಾಗಲೇ ಅವರು ನನ್ನ ಅನುಮತಿ ಕೇಳಲಿಲ್ಲ, ಇನ್ನು ಹೋಗುವಾಗ ಕೇಳುತ್ತಾರೆಯೇ? ಒಂಟಿತನಕ್ಕಿಂತ ಬೇರೆ ಸಂಗಾತಿಯುಂಟೆ ನಾಗಸಾನಿಗೆ’ ಎನ್ನುವ ಆಕೆಯ ಮಾತಿನಲ್ಲಿ ಎಷ್ಟು ನಾಗಸಾನಿಯರ, ಚಂದ್ರಮುಖಿಯರ ನಿಟ್ಟುಸಿರು ಕೇಳುತ್ತದೆ ನನಗೆ…
ಯಾವುದೋ ನಾಗರಹಾವು ಕಚ್ಚಿ ಕಳುಹಿಸಿದ ಕಾಲ ಅದು. ಮೈದುನನನ್ನು ಎಬ್ಬಿಸಲು ನರಸಾಂಬೆ ಹೋಗುತ್ತಾಳೆ. ನಾಗಸಾನಿ ಕೊಟ್ಟ ಮದ್ದನ್ನು ಕುಡಿದ ವೇಮನನಲ್ಲೀಗ ಸರಿ ತಪ್ಪುಗಳ ವಿವೇಚನೆಯಿಲ್ಲ, ಎದುರಿಗಿರುವವರು ಯಾರು ಎಂದು ನೋಡುವ ಪರಿಜ್ಞಾನವಿಲ್ಲ, ಆಗಲೂ ಅವನಿಗೆ ಕನಸಿನಲ್ಲಿ ಕಂಡಂತೆ ಕಾಣುವವಳು ನಾಗಸಾನಿಯೇ. ಅವಳೇ ಎಂದುಕೊಂಡು ಅತ್ತಿಗೆಯ ಸೀರೆಯನ್ನೆಳೆಯುತ್ತನೆ, ಆಕೆಯನ್ನು ವಿವಸ್ತ್ರಗೊಳಿಸುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ನಾಗಸಾನಿ ವೇಮನನ ಕೆನ್ನೆಗೆ ಭಾರಿಸಿ, ತನ್ನದೇ ಸೀರೆಯೊಂದನ್ನು ಕೊಟ್ಟು ನರಸಾಂಬೆಯನ್ನು ಹಿಂಬಾಗಿಲ ಮೂಲಕ ಮನೆಗೆ ಕಳುಹಿಸಿಕೊಡುತ್ತಾಳೆ.
ಎಚ್ಚರಾದ ವೇಮನನಲ್ಲಿ ಯುದ್ಧ ಗೆದ್ದ ಸಂಭ್ರಮ, ಕೊರಳ ಸುತ್ತ ಸುತ್ತಿಕೊಂಡ ಸೀರೆ ಅವನಿಗೆ ನಾಗಸಾನಿಯದೇ ಅನಿಸಿ, ವಿಜಯದ ಮಾಲೆಯಂತೆ ಅದನ್ನು ಧರಿಸಿಕೊಂಡಿರುತ್ತಾನೆ. ಆದರೆ ನಾಗಸಾನಿ, ಅವನನ್ನು ಎದುರಿಸಿ ನಿಂತು ತನ್ನ ತಪ್ಪನ್ನು, ಅವನ ಅಪರಾಧವನ್ನೂ ಬಿಚ್ಚಿ ಹೇಳುತ್ತಾಳೆ. ಆ ಘಳಿಗೆಯಲ್ಲಿ ಕತ್ತನ್ನು ಸುತ್ತಿದ ಸೀರೆ ಅವನಿಗೆ ಹಾವಾಗುತ್ತದೆ. ಪಾಪಪ್ರಜ್ಞೆಯಲಿ ವೇಮನ ದಹಿಸಿಹೋಗುತ್ತಾನೆ. ಇಲ್ಲಿಂದ ಹೋದ ನರಸಾಂಬೆಗೂ ಅದು ಹೇಳಲಾಗದ, ನುಂಗಲಾಗದ ಅಪಮಾನ. ಆ ಉರಿ ತಾಳಲಾರದೆ ಆಕೆ ತನ್ನನ್ನೇ ಸುಟ್ಟುಕೊಂಡು ಸಾಯುತ್ತಾಳೆ. ವೇಮನ ತಾನು ಕಾಣದ ಬೆತ್ತಲಿನ ಕಲ್ಪನೆಯಲ್ಲಿ ಬೆಂದು ಹೋಗುತ್ತಾನೆ. ಹುಚ್ಚನಾಗಿ ಅಲೆಯುತ್ತಾ ಕಡೆಗೆ ಶ್ರೀಶೈಲ ಪರ್ವತ ತಲುಪುತ್ತಾನೆ. ಅವನ ಗುರಿ ಪರ್ವತದ ಎತ್ತರ ಶಿಖರದಿಂದ ಕೆಳಗಿನ ಪ್ರಪಾತಕ್ಕೆ ಬೀಳುವುದು. ಅಲ್ಲಿ ಆತನ ಆತ್ಮಕ್ಕೆ ಸಿಗುವ ತಂಪು ಅಕ್ಕ ಮಹಾದೇವಿ.
ಅತ್ತಿಗೆಯ ಬೆತ್ತಲು ಗಾಯಗೊಳಿಸಿದವನನ್ನು ಪೊರೆಯಲು ಮತ್ತೊಂದು ಬೆತ್ತಲು ಇಲ್ಲಿರುತ್ತದೆ. ಅವನ ಆತ್ಮದ ಉರಿಗೆ ಮುಲಾಮು ಹಚ್ಚಲು ಬಹುಶಃ ಅಕ್ಕನಿಂದ ಮಾತ್ರ ಸಾಧ್ಯವಿತ್ತು. ಅದು ಶ್ರೀಶೈಲದ ಬೆಟ್ಟ, ಅಲ್ಲಿ ಆಗ ಅಕ್ಕನನ್ನು ತಂದದ್ದು ಸುಂದರ ಕವಿಸಮಯ.
ಅತ್ತಿಗೆಯ ಬೆತ್ತಲಿಗೆ ಕಾರಣನಾದೆನೆಂಬ ಪಾಪಪ್ರಜ್ಞೆಯಿಂದ ಪ್ರತಿಘಳಿಗೆ ಬೇಯುತ್ತಿರುವ ಅವನಿಗೆ ಅಕ್ಕನ ಮಾತು ಕೇಳಿದ ಮೇಲೆ ಬೆತ್ತಲೆಯ ಪಾಪಕ್ಕೆ ಬೆತ್ತಲೆಯೇ ಪ್ರಾಯಶ್ಚಿತ್ತ ಎನ್ನುವ ಅರಿವಾಗುತ್ತದೆ. ಅತ್ತಿಗೆ ನಾಲ್ಕು ಕೋಣೆಯ ನಡುವೆ ಅನುಭವಿಸಿದ್ದನ್ನು ತಾನು ಇಡೀ ಜಗತ್ತಿನೆದುರು, ಜೀವನಪೂರ್ತಿ ಅನುಭವಿಸುವುದೇ ಪ್ರಾಯಶ್ಚಿತ್ತವಾಗಿ ವೇಮನ ಬಟ್ಟೆಯ ಹಂಗು ತೊರೆಯುತ್ತಾನೆ. ಈಗ ಅವನಿಗೆ ಬತ್ತಲೆಂದರೆ ’ಬೆಳಕೆಂಬ ಕತ್ತಲಿಂದ, ಕತ್ತಲೆಂಬ ಬೆಳಕಿಗೆ ಹೊರಳುವ ಕಾಲಸಂಧಿ’.
ಶ್ರೀಶೈಲದ ಬೆಟ್ಟ ಇಳಿಯುವ ವೇಮನ ನಡೆಯುವುದು ಅರಮನೆಗಲ್ಲ, ನೇರ ಜನರ ಮನಸ್ಸುಗಳಿಗೆ. ತಳಸಮುದಾಯದ, ಅಂಚಿಗೆ ಸರಿಸಲ್ಪಟ್ಟ ಜನಗಳ ಅಳಲಿಗೆ ಅವನು ದನಿಯಾಗುತ್ತಾನೆ. ಚೌಪತಿಗಳ ರಚನೆ ಮಾಡುತ್ತಾ, ತಪ್ಪನ್ನು ವ್ಯಂಗ್ಯವಾಡುತ್ತಾ, ನಿರ್ಲಕ್ಷಿತರ ಪರವಾಗಿ ಮಾತನಾಡುತ್ತಾ ನಡೆಯುತ್ತಾನೆ. ಅವನ ಎಲ್ಲಾ ಚೌಪತಿಗಳೂ ’ವಿಶ್ವದಾಭಿರಾಮ, ವಿನುರಾ ವೇಮ’ ಎಂದು ಕೊನೆಯಾಗುವುದರಿಂದ ಅವುಗಳಲ್ಲಿ ಉಪದೇಶವಿಲ್ಲ, ಸ್ವಗತಗಳಂತಿರುವುದರಿಂದ ಅತ್ಯಂತ ಪ್ರಾಮಾಣಿಕವಾಗಿ, ಸರಳವಾಗಿವೆ. ನಾಟಕದಲ್ಲಿ ಒಂದೆರಡು ಕಡೆ ಅದನ್ನು, ’ಕೇಳೋ ವೇಮ’ ಎಂದು ಅನುವಾದಿಸಿಕೊಂಡಿದ್ದರೂ ಸಹ ಬಹಳಷ್ಟು ಕಡೆ ಅದನ್ನು ’ವಿನುರಾ ವೇಮ’ ಎಂದೇ ಉಳಿಸಿಕೊಳ್ಳಲಾಗಿದೆ. ಅದು ಭಾವಕ್ಕೆ ಒಂದು ಲಾಲಿತ್ಯವನ್ನು ತಂದುಕೊಡುತ್ತದೆ.

ವೇಮನನ ಮಾತು, ಪದ್ಯ ಅಂದಿನ ಪುರೋಹಿತ ವರ್ಗದವರಲ್ಲಿ ಅಸಹನೆ ಮೂಡಿಸುತ್ತಾ ಇರುತ್ತದೆ. ಮೊದಲು ಅವನನ್ನು ನಿರ್ಲಕ್ಷಿಸುತ್ತಾರೆ, ಆಮೇಲೆ ಅವನ ವೈಯಕ್ತಿಕ ಬದುಕಿನ ಮೇಲೆ ಧಾಳಿ ಮಾಡುತ್ತಾರೆ, ಅವನ ಬತ್ತಲನ್ನು ಅಪಹಾಸ್ಯ ಮಾಡುತ್ತಾರೆ. ಕಡೆಗೆ ರಾಜನಿಗೆ ದೂರು ಕೊಟ್ಟು ವೇಮನನ ಬಂಧನಕ್ಕೆ ಆಜ್ಞೆಯನ್ನು ಹೊರಡಿಸುವಂತೆ ಮಾಡುತ್ತಾರೆ. ನಾಟಕದ ಈ ಹಂತದಲ್ಲಿ ಸರ್ವಜ್ಞನ ಪ್ರವೇಶ ಆಗುತ್ತದೆ. ಇದೊಂದು ಕುತೂಹಲಕಾರಿ ಸನ್ನಿವೇಶ. ನಾಟಕಕಾರರೇ ಹೇಳುವಂತೆ ಅದು ’ಕನ್ನಡಿಯೇ ಬಿಂಬವನ್ನು ಬೆನ್ನುಹತ್ತಿ ಬಂದಂತಹ’ ಕ್ಷಣ. ಅಲ್ಲಿ ವೇಮನನ ಚೌಪದಿಗಳನ್ನು ಸರ್ವಜ್ಞನ ಬಾಯಲ್ಲಿ, ಸರ್ವಜ್ಞನ ಮಾತುಗಳನ್ನು ವೇಮನನ ಬಾಯಲ್ಲಿ ಹೇಳಿಸುತ್ತಲೇ ಅವರಿಬ್ಬರ ಚಿಂತನೆಗಳಿಗೂ ನಾಟಕಕಾರರು ಏಕರೂಪ ಕಲ್ಪಿಸುತ್ತಾರೆ. ಅವರಿಬ್ಬರನ್ನು ಹಾಗೆ ಮುಖಾಮುಖಿಯಾಗಿಸುವ ಕಲ್ಪನೆಯೇ ಆಲೋಚನೆಗಳನ್ನು ಹುಟ್ಟಿಸುವಂತಿದೆ. ಯೋಚನೆಗಳಿಗೆ, ಮಿಡಿತಗಳಿಗೆ ಕಾಲ ದೇಶಗಳ ಹಂಗಿಲ್ಲನ್ನುವಂತೆ ಅಲ್ಲಿ ಸರ್ವಜ್ಞ, ವೇಮನ, ಅಕ್ಕ ಎಲ್ಲರೂ ಸಮಕಾಲೀನರೇ, ಎಲ್ಲರೂ ಎಲ್ಲಾ ಕಾಲಕ್ಕೂ ಸಲ್ಲುವವರೆ. ನಾಟಕದ ಒಳನೋಟ ಗೆಲ್ಲುವುದು ಅಲ್ಲಿ.
ನಾಟಕದಲ್ಲಿ ನೆನಪಿಗೆ ಉಳಿದ ಇನ್ನೊಂದು ಸನ್ನಿವೇಶವೆಂದರೆ ವೇಮನ ವಿರಾಗಿಯಾದ ಮೇಲೆ ಅವನ ಹೆಂಡತಿ ಅವನನ್ನು ಭೇಟಿಯಾಗುವುದು. ಅವಳ ನೋವನ್ನು, ಹತಾಶೆಯನ್ನು ವೇಮನ ಒಪ್ಪಿಕೊಂಡೇ ಹೇಳುತ್ತಾನೆ, ’ನಾನು ಗುರುತು ಮರೆತವನಲ್ಲ, ನೆನಪು ಸತ್ತವನು’ ಎಂದು. ಆ ಸನ್ನಿವೇಶ ಬುದ್ಧನನ್ನೂ, ಯಶೋಧರೆಯನ್ನೂ ಕಣ್ಣೆದಿರು ನಿಲ್ಲಿಸಿತ್ತು.
ವೇಮನನ ಬಂಧನ, ಜನಗಳಲ್ಲಿ ಅದು ಎಬ್ಬಿಸುವ ಪ್ರತಿರೋಧದ ಅಲೆ ಮತ್ತು ಸಮಸ್ಯೆಯನ್ನು ತಂದಿಟ್ಟ ಪುರೋಹಿತ ವರ್ಗವೇ ಅದರ ಪರಿಹಾರಕ್ಕೆ ಮತ್ತೊಂದು ಮಾರ್ಗವನ್ನೂ ಹುಡುಕುವುದು ಇಡೀ ವ್ಯವಸ್ಥೆಯ ವ್ಯಂಗ್ಯವನ್ನು ತೋರುತ್ತದೆ.
ನಾಟಕವನ್ನು ರಂಗದ ಮೇಲೆ ತರುವಾಗ, ನಾಟಕದ ಸಂಕೀರ್ಣತೆ, ಪದರಗಳು ಹೆಚ್ಚಾಗಿರುವಾಗ ಅಲ್ಲೆಲ್ಲಾ ಚಲನೆಯಲ್ಲಿ ಒಂದು ಸಣ್ಣ ಜರ್ಕ್ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಭೂತ ಮತ್ತು ಇತಿಹಾಸ ಮುಖಾಮುಖಿಯಾಗುವ ಸಂದರ್ಭದಲ್ಲಿ ಇಂತಹ ಜರ್ಕ್ ಇರುತ್ತದೆ. ಎರಡು ದೇಶಗಳ ನಡುವಿನ ’no man’s land’ ಇರುವಂತೆ ಎರಡು ಕಾಲಘಟ್ಟಗಳ ನಡುವೆಯೂ ಅಂತಹ ನಿರ್ವಾತ ಕ್ಷಣಗಳು ಕಾಣುವ ಅಪಾಯ ಹೆಚ್ಚಾಗಿರುತ್ತದೆ. ಅದು ನಿನ್ನೆ-ನಾಳೆಗಳ ಆಸರೆ ಇಲ್ಲದ ಕೆಲವು ಕ್ಷಣಗಳ ಜಾಗ. ಆದರೆ ಈ ನಾಟಕದಲ್ಲಿ ಅದು ಎಲ್ಲೂ ಕಾಣಿಸುವುದಿಲ್ಲ. ನಿರ್ದೇಶಕ ಬಸು ಅವರು ಈ ಪರಿವರ್ತನೆಯನ್ನು ನಿರಾಯಾಸವಾಗಿ ಕಟ್ಟಿಕೊಡುತ್ತಾರೆ. ಬುರ್ರ ಕಥೆ ಹೆಳುವವರು ರಂಗಮಂಚದ ಮುಂಭಾಗದಲ್ಲಿ ನಿಂತು ಕಥೆ ಹೇಳುತ್ತಿರುವಾಗಲೇ ಅದೇ ಸಮಯದಲ್ಲಿ ಒಂದು ಪರದೆಯ ಆಚೆಗೆ ಕಥೆ ಅನಾವರಣವಾಗುತ್ತಾ ಹೋಗುವುದರಿಂದ ಈ ಚಲನೆ ಸರಾಗವಾಗಿ ಬಂದಿದೆ ಅನ್ನಿಸುತ್ತದೆ.
ನಾಟಕದಲ್ಲಿ ಅಲ್ಲಲ್ಲಿ ತೆಲುಗು ಭಾಷೆಯನ್ನು ಹಾಗೆಯೇ ಉಳಿಸಿಕೊಂಡಿರುವುದೂ ಸಹ ನಾಟಕದ ಸೊಗಡನ್ನು ಹೆಚ್ಚಿಸುತ್ತದೆ. ಆದರೆ ಒಂದು ಕಡೆ ತೆಲುಗಿನ ಪದ್ಯವನ್ನು ಹೇಳುವಾಗ ತಪ್ಪು ಸ್ಥಳದಲ್ಲಿ ಪದ ವಿಭಾಗ ಮಾಡಿಕೊಂಡಿದ್ದು ಅರ್ಥವ್ಯತ್ಯಯವಾಗುವಂತೆ ಮಾಡಿತ್ತು. ಬಹುಶಃ ಅದು ಇನ್ನೊಂದು ಭಾಷೆಯಾಗಿರುವುದೂ ಸಹ ಅದಕ್ಕೆ ಕಾರಣವಾಗಿರಬಹುದು.
ಬೆಳಕು ಮತ್ತು ಸಂಗೀತವನ್ನು ನಾಟಕ ಅತ್ಯಂತ ಸಮರ್ಪಕವಾಗಿ ಬಳಸಿಕೊಂಡಿತ್ತು. ಬೆಳಕಿನ ಬಳಕೆ ರಂಗದ ಮೇಲೆ ಕಾಲದಾಚೆಗಿನ ಕಥೆಯನ್ನು ಕನಸೆಂಬಂತೆ ಕಟ್ಟಿಕೊಡುತ್ತಿತ್ತು. ವೇಮನನ ಪದಗಳನ್ನು ಅನುವಾದ ಮಾಡಿ ಬಳಸಿಕೊಂಡಿದ್ದರೂ, ಮಿಕ್ಕ ಹಾಡುಗಳನ್ನು ಜನಪದ ದಾಟಿಯಲ್ಲಿ ಕಟ್ಟಿದ್ದು ಸೊಗಸಾಗಿತ್ತು. ಅದರಲ್ಲೂ ’ಸಂತೆ ನಡೆದೈತೆ… ಆಸೆಗಳನ್ನು ಮಾರಬನ್ನಿರೋ, ಕನಸುಗಳನ್ನು ಕೊಳ್ಳಬನ್ನಿರೋ..’ ಎನ್ನುವಂತಹ ಹಲವಾರು ಹಾಡುಗಳು ನಾಟಕದ ಭಾಗವಾಗಿಯೂ, ನಾಟಕದ ಹೊರಗಡೆಯೂ ನೆನಪಿನಲ್ಲಿ ಉಳಿಯುವಂತಿದ್ದವು.
ಎಲ್ಲ ಮುಗಿದ ಮೇಲೆ ವೇಮನ ನಮ್ಮ ಎದೆಯಲ್ಲಿ ಉಳಿಯುವುದು ಆತ ’ಯೋಗಿ’ ಎನ್ನುವ ಕಾರಣಕ್ಕಲ್ಲ. ಆತ ನಮ್ಮಂಥವನೇ ಅನ್ನುವ ಕಾರಣಕ್ಕೆ. ಎಲ್ಲ ಮೋಹ ದಾಟಿದ ಮೇಲೆಯೂ ಅವನೆಂದೂ ಪ್ರೀತಿ ಮಾಯೆ ಎಂದು ಹೇಳದ ಕಾರಣಕ್ಕೆ,
ಕಾಮಿಯೈನವಾಡು ಕವಿಯೌವುನು,
ರವಿಯೌವುನು. ಕಾಮಿಗಾಕ ಮೋಕ್ಷಗಾಮಿಕಾಡು –
ಕಾಮಿಯಾದವನು ಕವಿಯಾಗಬಲ್ಲ,
ರವಿಯಾಗಬಲ್ಲ, ಕಾಮಿಯಾಗದೆ ಮೋಕ್ಷಗಾಮಿಯಾಗಲಾರ –
ಎಂದ ಕಾರಣಕ್ಕೆ…
 

‍ಲೇಖಕರು G

May 8, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

20 ಪ್ರತಿಕ್ರಿಯೆಗಳು

  1. ಅಕ್ಕಿಮಂಗಲ ಮಂಜುನಾಥ

    ಲೇಖನ ಓದಿದೆ.ತುಂಬಾ ಹಿಡಿಸಿತು. ಮೊದಲೊಮ್ಮೆ ವೇಮನನ ಚರಿತ್ರೆ ಓದಿದಾಗ ಕೇಳಿದಾಗ ಮತ್ತು ಸಿನೆಮಾ ನೋಡಿದಾಗ ಅವ ಇಷ್ಟೊಂದು ಆಪ್ತನಾಗಿ ಕಾಣಲಿಲ್ಲ. ಈ ಲೇಖನ ಓದಿದ ಮೇಲೆ ಅವ ದೈವಸಂಭೂತನಂತೆ ಕಾಣದೆ ಒಬ್ಬ ಆಪ್ತ ಸ್ನೇಹಿತ ಪಕ್ಕದಲ್ಲೇ ಕೂತಂತೇ ಅನುಭವವಾಗತೊಡಗಿತು.ಈತನನ್ನು ಮತ್ತೊಮ್ಮೆ ಓದಬೆಕೆನಿಸುತ್ತಿದೆ. ಲೇಖಕಿಗೆ ಅಭಿನಂದನೆಗಳು.

    ಪ್ರತಿಕ್ರಿಯೆ
  2. ಸ್ವರ್ಣಾ

    ಸ್ನೇಹ,ಪ್ರೇಮವನ್ನು ಒಂದು ಮಾಡಿದ ಶತಕದ ಕವಿಯ ಸುಂದರ ಅನಾವರಣ.
    ಚೆನ್ನಾಗಿದೆ.

    ಪ್ರತಿಕ್ರಿಯೆ
  3. ರಾಧಿಕಾ

    ನಾಟಕ ನೋಡಬೇಕು ಅನ್ನಿಸ್ತಾ ಇದೆ ಸಂಧ್ಯಾ!

    ಪ್ರತಿಕ್ರಿಯೆ
  4. ಸ್ವರ್ಣಾ

    ‘ವಿಶ್ವದಾಭಿರಾಮ ವಿನುರ ವೇಮ’ ಎಂಬಲ್ಲಿ ವಿಶ್ವದಾ ವೇಮನನ ಬದುಕಾದವಳಾದರೆ , ಅಭಿರಾಮ ಅವನ ಪ್ರಿಯ ಗೆಳೆಯ ಎಂದು ಕೇಳಿದ್ದೇನೆ.

    ಪ್ರತಿಕ್ರಿಯೆ
  5. Anonymous

    Apthavada baraha, Natakada bagege neevu nistaragi baredaddu olleya belavanige sandya.

    ಪ್ರತಿಕ್ರಿಯೆ
  6. shivaprakash

    ಒಂದು ನಾಟಕದ ಚಿತ್ರಣ ಇದಕ್ಕಿಂತ ಚೆನ್ನಾಗಿರೋಕೆ ಸಾಧ್ಯವಿಲ್ಲವೇನೋ……ಒಡೆಯದೆ, ಒದೆಯದೇ, ಓಡಿಸಿಕೊಂಡು ಹೋಗದೇ, ಓದಿಸಿಕೊಂಡ ಲೇಖನ ……. 🙂

    ಪ್ರತಿಕ್ರಿಯೆ
  7. Anil Talikoti

    ಒಂದೊಂದು ಸಾರಿ ನಾಟಕ ನೋಡುವದಕ್ಕಿಂತ, ಇಲ್ಲಿ ಕೂತು ನಾಟಕ ನೋಡಲಾಗಲಾರದ ಸಂಕಟ ಬದಿಗಿಟ್ಟು, ಅದರ ಬಗ್ಗೆ ಸಂಧ್ಯಾ ಅವರು ಬರೆದದ್ದನ್ನು ಓದುವದರಲ್ಲಿ ಹೆಚ್ಚಿನ ಗಳಿಕೆ ಇದೆ ಅನಿಸುತ್ತದೆ. ಇದೊಂತರಾ ಅಮೂರ ಅಥವಾ ಕುರ್ತುಕೋಟಿ ಅವರು ಬೇಂದ್ರೆ ಕಾವ್ಯದ ಒಳಗುಟ್ಟನ್ನು ಬಿಚ್ಚಿಟ್ಟಂತೆ- ಇಲ್ಲದಿದ್ದರೆ ನಮ್ಮಂತವರಿಗೆ ಅರ್ಥವಾದರೂ ಹೇಗಾದೀತು? ಸಂಧ್ಯಾ ತುಸ್ಸಿ ಗ್ರೇಟ್ ಹೋ!
    ~ಅನಿಲ

    ಪ್ರತಿಕ್ರಿಯೆ
  8. ಕಾ.ಹು.ಚಾನ್ ಪಾಷ. ಬಂಗಾರಪೇಟೆ.

    ಸಂಧ್ಯಾ ಮೇಡಂ ನಮಸ್ತೆ. ನಾಟಕ ವಿಮರ್ಶಾ ಲೇಖನ ತಂಬಾ ಚೆನ್ನಾಗಿದೆ. ಎತ್ತರಕ್ಕೆ ಏರಿಸದೆ ಹತ್ತಿರಕ್ಕೆ ತಂದು ಹೃದಯದಲ್ಲಿ ಉಳಿಯುವಂತೆ ಬರೆದಿದ್ದೀರಿ. ನಾಟಕ ನೋಡಬೇಕು ಅನ್ನಿಸುತ್ತಿದ್ದೆ.

    ಪ್ರತಿಕ್ರಿಯೆ
  9. ಲಕ್ಷ್ಮೀಕಾಂತ ಇಟ್ನಾಳ

    ಪದರು ಪದರುಗಳ ಮಾತುಗಳಾಚೆ ಇರುವ ಮಾನವ, ಮಾನವೀಯ, ಸಂಬಂಧಗಳನ್ನು ಮನನೀಯವಾಗುವಂತೆ ತಿಳಿಸುವ ರೀತಿ, ಆ ಭಾವ ನವಿರುಗಳು, ವಿಶ್ಲೇಷಣೆಯೊಂದಿಗೆ ಸಾಗುವ ಕಥಾಹಂದರ ಕಣ್ಣೆದುರೇ ಕಟ್ಟಿಕೊಂಡು ಅದರ ಒಳಹೂರಣಗಳನ್ನು ಪರಿಚಯಿಸುವ ಪರಿ ಅದ್ಭುತ. ‘ತೋಲ್ ಭೀ ಹೈ, ಮೋಲ್ ಭೀ ಹೈ, ಅಪನೇ ಆಪ್ ಅನಮೋಲ್ ಬನ್ ಗಯೀ ಹೈ’ ಇನ್ನಾರಿಗೆ ಬಂದೀತು ಈ ರೀತಿಯ ಬರಹ. ಸುಂದರಾತಿ ಸುಂದರ. ಧನ್ಯವಾದ ಸಂಧ್ಯಾ ಜಿ.

    ಪ್ರತಿಕ್ರಿಯೆ
  10. K.Nalla Tambi

    ಬಹಳವೇ ಸೊಗಸಾಗಿದೆ ನಿಮ್ಮ ಬರವಣೆಗೆ. ನಾಟಕವನ್ನು ಕಣ್ಣಮುಂದೆ ತತ್ರೂಪವಾಗಿ ತಂದು ನಿಲ್ಲಿಸಿತು. ವೇಮನ ನನಗೆ ಬಹಳವೇ ಹಿಡಿಸಿದ ಕವಿ, ವ್ಯಕ್ತಿತ್ವ. ಆತನ ಕವಿತೆಗಳ ಅನುವಾದ ಆಂಗ್ಲ ಅಥವಾ ಕನ್ನಡದಲ್ಲಿ ಹುಡುಕುತ್ತಿದ್ದೇನೆ.

    ಪ್ರತಿಕ್ರಿಯೆ
  11. ರೇಣುಕಾ ನಿಡಗುಂದಿ

    tumbaa cehnadavada baraha sandy….Nataka nodbeku anisutte

    ಪ್ರತಿಕ್ರಿಯೆ
  12. Anonymous

    oadida takshana KYN sir ge phone maadbeku annisthu… pustakada hudukaata nadedide…
    reader will try to search for the book the minute he completes reading your article.. thats the real strength of your views.. hats off…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: