'ಹೂವೆಲ್ಲಾ ಹೆಣ್ಣೇ ಆಗಬೇಕೇ?…' – ಹೇಮಲತಾ

ಹೇಮಲತಾ

ಆ ನೀಲಿಮರದ ತಿರುವು ರಸ್ತೆಗೆ ಈಗ ಹತ್ತಿರಹತ್ತಿರ ಮೂರುವರ್ಷದ ಪರಿಚಯ. ನನ್ನ ಪಾಡಿಗೆ ನಾನು ತಲೆತಗ್ಗಿಸಿಕೊಂಡು ಹೋಗುತ್ತಿದ್ದವಳು ಅಂದು ಅಚಾನಕ್ ಆಗಿ ದೂರದಿಂದ ನೋಡಿದ್ದೆ ,ನೀಲಿನೀಲಿ ಹೂವರಳಿಸಿಕೊಂಡ ಅಪರಿಚಿತ ಮರ ಅಯಸ್ಕಾಂತದ ತುಂಡಂತೆ ಒಂದೇ ಸಮನೆ ಸೆಳೆಯುತ್ತಿತ್ತು . ವರ್ಷಪೂರ್ತಿ ಹೇಳಹೆಸರಿರದಂತೆ ತನ್ನಪಾಡಿಗೆ ತಾನಿದ್ದುಕೊಂಡಿದ್ದ ಮರ ಹೀಗೆ ವಸಂತನ ಕಾಲಕ್ಕೆ ಸತ್ಯಭಾಮೆ ಬಯಸಿದ ಪಾರಿಜಾತದಂತೆ ಸ್ವಪ್ನ ಮೋಹಕ್ಕೆ ಕೆಟ್ಟುಕೆಡವಿತು..
ನೀಲಿ ಹೂ ಇದೆಯಾ ಎನ್ನುವಿರಾ ? ಹೌದು. ನೀಲಿ ಎಂದರೆ ಬೊಕೆಗಳ ಮಧ್ಯೆ ದುಬಾರಿ ಇಣುಕುವ ನೀಲಿ ಆರ್ಕಿಡ್ ಅಲ್ಲಾ, ಬಣ್ಣ ಕಟ್ಟಿದ ಬಿಳಿ ರೋಜಾ ಹೂ ನೀಲಿಯಾಗಿ ಯಾಮಾರಿಸಿದ್ದಲ್ಲ … ಬಣ್ಣ ಬಿಡುವುದೆಂದು ಗೊತ್ತಿದ್ದೂ ಗೊತ್ತಿದ್ದೂ ಮರುಳಾಗುತ್ತಿದ್ದ ಕಾಲವೂ ಇತ್ತು ..ಹೂವಿಗಿಂತ ಬಣ್ಣದ ಮೇಲೆ ಇರಬಾರದಂತಹ ಮೋಹ . ಆ ನೀಲಿ ಕಡಲು , ನೀಲಾ ಆಕಾಶ , ಕತ್ತಲರಾತ್ರಿ ಕಂಡ ವಂಚನೆ ಕಾಣದ ಆ ನೀಲ ಜೋಡಿಕಣ್ಣುಗಳು…

ನೀಲಿ ನೈಲ್ ಪಾಲಿಶ್ , ನೀಲಿ ಕಾಡಿಗೆ … ಅಪರೂಪವೆನಿಸೋದು ಅಮೂಲ್ಯವಂತಲೂ ಅನಿಸಿಬಿಡುತ್ತದೆ . ಅದರಂತೆ ಈ ನೀಲಿ ಹೂವು …ನೀಲಿ ಚಾಪು ನೀಲಿಯೆ ನನ್ನ ಪಾಲಿಗೆ. ನೇರಳೆಗೆ ನೀಲಿ ಬೆರೆಸಿದಂತೆ ಅರಳಿಕೊಂಡು ಮರ ನಿಲ್ಲೋದು ಎಂದರೆ ಸ್ವರ್ಗದ ಬಾಗಿಲೆ ತೆರೆದಿಟ್ಟಂತೆ.ಪೋಣಿಸಿದ ದಿಂಡುಮಲ್ಲಿಗೆ ಮುಡಿ ತುಂಬಾ ಮುಡಿದ ಚೆಲುವೆಗೆ, ಕಾಂಡದ ಬೊಡ್ಡೆ ರೆಂಬೆಕೊಂಬೆಗಳು ಮಾತ್ರ ಎಲೆಗಳೊಂದು ಕಾಣುತ್ತಿಲ್ಲ
ಹುಡುಗಿಯರು ಕೆಂಪು, ಗುಲಾಬಿ, ಅರಿಶಿನ ,ಬಿಳಿಗಳನ್ನೇ ಮೆಚ್ಚಬೇಕು ಅವರಿವರು ಹೇಳೋದು ಉಂಟು .ಆಯ್ಕೆಗಳಲ್ಲೇ ಬಿನ್ನತೆಯಿದೆ, ಮಿಕ್ಕಹುಡುಗಿಯರಂತಲ್ಲ ದೂರಿದ್ದು ಇತ್ತು.
ಹೂವನ್ನು ಗಮನಿಸಿದೆ ,ಬಿಡಿಬಿಡಿ ಹೂವಲ್ಲೇನು ಅಂತ ಸಮ್ಮೋಹನ ಚೆಲುವಿಲ್ಲ .ರೂಪು, ವಿನ್ಯಾಸ ಸಾಧಾರಣ .. ಬೆಳ್ಳಗೊಂದು ಇದ್ದುಬಿಟ್ಟರೆ ಸ್ಪುಟವಾಗಿಯೂ ಕಂಡುಬಿಡುತ್ತಾರೆ ಕೊಂಕುನುಡಿ.ಬಹುಷ್ಯ ವೈಷಿಷ್ಟ್ಯ ಇದ್ದದ್ದು ಬಣ್ಣದಲ್ಲಿಯೆ…ನೀಲಿಬಣ್ಣ ಇಷ್ಟಪಡುವವರು ಸ್ವಭಾವದಲ್ಲಿ ರೊಮ್ಯಾಂಟಿಕ್ ಎಂದು ವಿಶ್ಲೇಷಣೆ ಮಾಡಿದ್ದ ಪತ್ರಿಕೆಯ ಮೊದಲಸಾಲು ಓದುತ್ತಲೇ ಭಯದಲ್ಲಿ,ಸಂಕೋಚದಲ್ಲಿ ಮೊಗಚಿಹಾಕಿದ್ದೆ ಅಂದು.
ಮರದ ಕೆಳಗಿನ ಸುತ್ತಳತೆಯಲ್ಲಿ ಉದುರಿಬಿದ್ದು ಚದುರಿದ ಹೂಗಳು. ಕಪ್ಪು ಡಾಂಬರು ರಸ್ತೆಯ ಮೇಲೆ ಹಾರಿಬಂದು ಇಳಿದ ಸಾವಿರಸಾವಿರ ನೀಲಿಅಪ್ಸರೆಯರು.ಅಲ್ಲಲ್ಲಿ ಕಾಲತುಳಿತಕ್ಕೆ ಅಪ್ಪಚ್ಚಿಯಾದ ಶಾಪಗ್ರಸ್ಥ ಕಿನ್ನರಿಯರು ನಲುಗಿಹೋಗಿ ಇಂಕು ಚೆಲ್ಲಿದಂತೆ ನೆಲಸಮವಾಗಿದ್ದರು . ಯವ್ವನವ ಪಡೆದು ರೆಕ್ಕೆಕಟ್ಟಿಕೊಂಡು ನಾಜೂಕಾಗಿ ಹಾರುತ್ತ ಈಗಷ್ಟೇ ಕಾಲೂರಿದ ಚೆಲುವೆಯರು ಇದ್ದರು . ನೆಲಸ್ಪರ್ಷವಾದಮೇಲೆ ತುಳಿತವೇ ಅಲ್ಲವೇ ಸತ್ಯ ತಿಳಿದಿದೆಯ ಅವಕ್ಕೆ? ಕನಲುತ್ತೇನೆ ನಾನೂ ಒಳಗೊಳಗೆ .
ಯಾವುದೋ ಕನಸಿನ ಭಾಗ್ಯ ಹುಡುಕಿಕೊಂಡು ಇಳಿಯುತ್ತಿರುವ ಹೊಸ ಹೂವಿಗೆ ,ಬೊಗಸೆತೆರೆದು ಸ್ವಾಗತಿಸಲು ಮನಸಾಗುತ್ತಿದೆ , ನೆಲತಲುಪಿದರೆ ಪೊಜೆಗೆ ಯೋಗ್ಯವಲ್ಲ ಮೈಲಿಗೆ… ತಲೆಕೆಟ್ಟಮಂದಿ ಪ್ರಕೃತಿನಿಯಮ ತಿರುಚಿ ಅರ್ಹತೆ ಮಾನದಂಡ ಮಾಡಿಟ್ಟಿದ್ದಾರೆ .ಹೆಜ್ಜೆ ಊರುವಾಗ ಅಗತ್ಯಕ್ಕಿಂತ ಎಚ್ಚರವಹಿಸುತ್ತೇನೆ ಕಾಲಕೆಳಗಡೆ ಹೂವಿಲ್ಲ ತಾನೇ ? .
ಹಾದಿಹುಡುಗಿಯ ಆಗಮನಕ್ಕೆ ಹೂ ಹಾಸಿ ರಾಜಕುಮರಿಯೋರ್ವಳೆ ಬಂದಳೆಂದು ಸಂಭ್ರಮಸಿ ಸಡಗರಿಸುವುದಕ್ಕೆ ಮೆಚ್ಚಿದವರು ಯಾರೋ ಏರ್ಪಾಟು ಮಾಡಿದಂತಿದೆ . ನಾ ಕೂಡ ಅಲ್ಪಾವಧಿಯ ರಾಜಕುಮಾರಿ ಈಗ. ಗೊತ್ತು ದಾರಿ ಮುಗಿದಮೇಲೆ ರೋಮಾಂಚನವೂ ಮುಗಿದು ಎಲ್ಲಾ ಮೊದಲಿನಂತೆ.ಬಯಸಿದವರು ಮರದ ಕೆಳಗೆ ನಿಂತು ನಿವೇದಿಸಿದರೆ, ಸಿಟ್ಟಾಗದೆ ಕರಗುವ ಭಯವೂ ಇದೆ
ಹಾಗೆಲ್ಲಾ ಹಾಡುಹಗಲು ಎಚ್ಚರದಪ್ಪಬಾರದು, ನಿಷೇದವಿತ್ತು ಈ ಮೊದಲು.ಖಾಲಿಮರ ವರ್ಷಪೂರ್ತಿ ಬೋಳುಬೋಳು, ಅರಳಿದಾಗ ಅರಳು , ನಕ್ಕಾಗ ನಗು ಪುಸಲಾಯಿಸುತ್ತಾರೆ ಕೆಲವರು.
ನೀಲಿ ಮಾಣಿಕ್ಯದ ಹರಳುಗಳನ್ನು ರಸ್ತೆ ಮೇಲೆ ಯಾರೋ ಮರೆತು ಚೆಲ್ಲಿದಂತೆ ,ನಕ್ಷತ್ರ ಸಮೇತ ಆಕಾಶ ಉದುರಿ ಶೇಕರವಾದಂತೆ ,ಕಡಲು ಹೆಪ್ಪುಗಟ್ಟಿ ಉಪ್ಪಾಗಿ ಬಣ್ಣಸಹಿತ ಸುರಿದಂತೆ…ಯಾರ್ಯಾರ ಮೋಹ ಯಾವ್ಯಾವುದರಲ್ಲೋ.ನಾನಂತೂ ರಸ್ತೆಬದಿಯ ಮರಕ್ಕೆ ಮನಸೋತ್ತಿದ್ದೇನೆ. .ವೃಕ್ಷಕೂಡ ನಳನಳಿಸುತ್ತದೆ ಕಾಲಕಾಲಕ್ಕೆ ,ನಾ ಮಾತ್ರ …ಹೆಜ್ಜೆ ತಡವರಿಸುತ್ತದೆ,ಒಳಗೆ ತಳಮಳಿಸುತ್ತದೆ . ಇನ್ನೆಂದು ಈ ತಿರುವು ರಸ್ತೆ ಗೆ ಹೊರಳಬಾರದು,ಬದುಕು ತುಂಬಾ comparisionಗಳೇ.,,
ಹೂವೆಲ್ಲಾ ಹೆಣ್ಣೇ ಆಗಬೇಕೇ? ಬದಲಿಸಬೇಕು ಆಲೋಚನೆ ಮೊದಲು , ಸರಿಯಾಗಿ ನೋಡು ನೋಟಬದಲಿಸು. ಹೌದಲ್ಲವೇ ,ನನ್ನ ನೀಲಮೇಘಶಾಮ ಕಾಣುತ್ತಿದ್ದಾನೆ . ಕೊಳಲಿನ ಹಾಡು ಒಂದೂಂದೆ ಕಳಚಿ ಸುರಳಿಸುರಳಿ ತೇಲಿಬರುತ್ತಿದೆ. ನಾ ಕ್ಷಣ ಮೈಮರೆತ ರಾಧೆ ,ಹೆಜ್ಜೆ ಕದಲಿಸಲಾಗದೆ ಗಾನಗಂಧದ ಜೊತೆ ಬೆರೆತು ಮತಿಭ್ರಮೆಗೊಳಗಾದಂತೆ ಪರಿತಪಿಸುತ್ತೇನೆ. ಹಿಂದಿನಿಂದ ಬಂದ ವಾಹನದ ಹಾರ್ನ್ ಕಿರ್ರೆನ್ನುತ್ತದೆ, ಹಾಡುಹರಟೆಗೆ ಕೂತ ಹೆಂಗಸರು ತಿರುಗಿನೋಡುತ್ತಾರೆ,ಆಟದ ಮಕ್ಕಳು ದಾರಿ ಬರಿದಾಗುವುದಕ್ಕೆ ಕಾದಿದ್ದಾರೆ.ನನ್ನ ಜೊತೆಗೆ ನಡೆದು ಬಾರದ ಕೃಷ್ಣ ಹೆಜ್ಜೆಕೀಳದೆ ಇದ್ದಲ್ಲೇ ಬೇರುಬಿಟ್ಟು ಎಲ್ಲಾಬಲ್ಲವನಂತೆ ಬರಿದೆ ನಗುತ್ತಿದ್ದಾನೆ . ರಾಧೆಯರಿಗೆಲ್ಲ ವಿರಹದ ನೆರಳು ಹಾದಿತುಂಬಾ ಹಾಸಿದೇ ! ಮತ್ತವೆ ನೀಲಿ ಕಣ್ಣುಗಳು ತಣ್ಣಗೆ ನಗುತ್ತವೆ .ಹಾಲಹಲಕೂಡ ನೀಲಿ ಬಣ್ಣವೇ ವಿಷದ ಮಾತೊಂದು ತೇಲಿಬರುತ್ತದೆ. ಛೇ ಈ ಮಾಯೆಗಳಿಂದ ಸುಖವಿಲ್ಲಾ, ರಸ್ತೆ ಬದಲಾಯಿಸಬೇಕು ,ತಿರುವು ರಸ್ತೆಯಿಂದ ಬಿಡಿಸಿಕೊಂಡಂತೆ ಹೊರಳುತ್ತೇನೆ. ನೀಲಿ ಹೂ ಜಾಲ ಹರಡುತ್ತಲೇ ಇರುತ್ತದೆ,ಮೋಹ ಕಳೆದುಕೊಳ್ಳಲಾಗದೆ ನಾ ತಿರುತಿರುಗಿ ನೋಡುತ್ತಲೇ ಮುಂದೆ ನಡೆಯುತ್ತೇನೆ ..
 

‍ಲೇಖಕರು G

May 8, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: