ಒಂದು ಜಾಮೂನು ಪ್ರಸಂಗ…

-ಪ್ರಸನ್ನ ಆಡುವಳ್ಳಿ

ಏಪ್ರಿಲ್ತಿಂಗಳ ಬಿರುಬೇಸಿಗೆಯ ಒಂದು ಭಾನುವಾರ. ನನ್ನ ಸಹಾಯಕ ದಿನವೂ ಮಾಡಿಡುವ ರೋಟಿ-ಸಬ್ಜಿಯನ್ನು ತಿಂದು ಬೇಸತ್ತಿದ್ದರಿಂದ ಒಂದು ದಿನದ ಮಟ್ಟಿಗೆ ಅಭಿನವ ನಳಮಹರಾಜನಾಗಲು ನಿರ್ಧರಿಸಿದೆ. ಮೊದಲಿಗೆ ಸುಲಭವೂ ಸರಳವೂ ಆದ ಗುಲಾಬ್ಜಾಮೂನನ್ನು ಮಾಡುವುದೆಂದು ನಿರ್ಧರಿಸಿ ಎಂ.ಟಿ. ಆರ್ನ ಪ್ಯಾಕೆಟ್ವೊಂದನ್ನು ಖರೀದಿಸಿ ತರಲಾಯ್ತು. ಪರೀಕ್ಷೆಯ ಹಿಂದಿನ ರಾತ್ರಿ ಶ್ರದ್ದೆಯಿಂದ ಕುಳಿತು ಓದುವ ವಿದ್ಯಾರ್ಥಿಯಂತೆ ಅದರಲ್ಲಿದ್ದ ಜಾಮೂನು ಮಾಡುವ ವಿಧಾನವನ್ನು ಮನನ ಮಾಡಿಕೊಂಡು ಪ್ರಯೋಗಕ್ಕೆ ಅಗತ್ಯವಾದ ಸಲಕರಣೆ-ಪಾತ್ರೆಗಳನ್ನು ಒಂದೆಡೆ ಜೋಡಿಸಿಟ್ಟು ಕೊಂಡೆ.
ಹೊಟ್ಟೆ ಚುರುಗುಟ್ಟುವ ಶುಭಮುಹೂರ್ತದಲ್ಲಿ ನನ್ನ ಪಾಕಪ್ರಯೋಗವನ್ನು ಪ್ರಾರಂಭಿಸಿದೆ. ಮೊದಲಿಗೆ ಹಿಟ್ಟು ಹರಡಿ, ಅದಕ್ಕೆ ನಿಗದಿತ ಪ್ರಮಾಣದ ನೀರು ಸುರುವಿ, ಚೆನ್ನಾಗಿ ನಾದು, ಸಣ್ಣ ಉಂಡೆಗಳನ್ನಾಗಿ ಮಾಡಿ, ಗರಗರ ತಿರುಗಿಸಿ ಗೋಲಾಕಾರಕ್ಕೆ ತರುವ ವ್ಯರ್ಥಪ್ರಯತ್ನವನ್ನು ಮಾಡಲಾಯ್ತು. ಬಳಿಕ ಅದನ್ನು ಬಿಸಿಬಿಸಿ ಎಣ್ಣೆಯಲ್ಲಿ ಇಳಿಬಿಟ್ಟು ಹೊಂಬಣ್ಣ ಬರುವವರೆಗೆ ಕಾದು, ನಡುವಿನ ಬಿಡುವಲ್ಲಿ ಫೇಸ್ಬುಕ್ನಲ್ಲೊಂದು ಸ್ಟೇಟಸ್ ಅಪ್ಡೇಟ್ಮಾಡಿ, ಎಣ್ಣೆಯಿಂದೆತ್ತುವುದರೊಳಗಾಗಿ ಅಲ್ಲಲ್ಲಿ ಕರಿಬಣ್ಣ ಮೂಡಿದ್ದು ಕಂಡು ಬಂತು!
ಜಾಮೂನಿಗೆ ಸಿಹಿ ನೀಡಲು ಸಕ್ಕರೆ ಪಾಕದ ಅಗತ್ಯವಿದ್ದಿದ್ದರಿಂದ ಅದನ್ನು ತಯಾರಿಸುವ ವಿಧಾನಕ್ಕಾಗಿ ಪ್ಯಾಕೇಟನ್ನು ಮತ್ತೊಮ್ಮೆ ತಿರುವಿ ನೋಡಿ ನಿರಾಸೆಗೊಂಡೆ. ನನ್ನ ಅನುಮಾನಗಳಿಗೆಲ್ಲ ಅದರಲ್ಲಿ ಪರಿಹಾರ ಸಿಗದಿದ್ದರಿಂದ ನನ್ನ ಪಾಕ ಪ್ರವೀಣ ಗೆಳತಿ ಅಪರ್ಣೆಯನ್ನು ವಾಟ್ಸ್ಯಾಪಿನ ಮೂಲಕ ಸಂಪರ್ಕಿಸಲಾಯ್ತು. ಆಕೆ ಅಷ್ಟಕ್ಕಿಷ್ಟು ಸಕ್ಕರೆಗೆ ನೀರು ಸುರಿದು, ಒಂದಿಷ್ಟು ಏಲಕ್ಕಿಯನ್ನು ಪುಡಿ ಮಾಡಿ ಹಾಕಿ ಕುದಿಸುವಂತೆ ಸಲಹೆ ನೀಡಿ ಆಫ್ಲೈನ್ಹೋಗುವ ಮೂಲಕ ಅಂತರ್ಧಾನಳಾದಳು.

ಈ ಕಾಡಿನನಡುವಿನಲ್ಲಿ ಏಲಕ್ಕಿಯನ್ನು ಎಲ್ಲಿಂದ ಹುಡುಕಿ ತರಲಿ ಎಂದು ಗೊಣಗಿಕೊಳ್ಳುತ್ತಾ, ಅವಳ ಉಳಿದ ಸಲಹೆಯನ್ನು ಯಥಾವತ್ತು ಪಾಲಿಸಿ, ನೀರು-ಸಕ್ಕರೆ ಸೇರಿಸಿ, ಎಳೆಯೆಳೆಯಾಗುವವರೆಗೆ ಕುದಿಸಿ, ಅದರೊಳಕ್ಕೆ ಜಾಮೂನನ್ನು ಇಳಿಬಿಟ್ಟೆ. ಪಾಕವನ್ನೆಲ್ಲಾ ಹೀರಿಕೊಂಡು ಜಾಮೂನು ಸಿಹಿಯಾಗಲೆಂದು ಸ್ವಲ್ಪ ಸಮಯ ಅದರ ಪಾಡಿಗೆ ಬಿಟ್ಟು ನನ್ನ ಸ್ಟೇಟಸ್ಸಿಗೆ ಬಂದಿದ್ದ ಕಮೆಂಟುಗಳಿಗೆಲ್ಲ ಉತ್ತರಿಸುವ ಮಹಾಯಜ್ಞದಲ್ಲಿ ತೊಡಗಿಕೊಂಡೆ.
ನಾನು ಜೀವನದಲ್ಲೇ ಮೊದಲ ಬಾರಿಗೆ ಮಾಡಿದ್ದ ಜಾಮೂನನ್ನು ಸವಿಯುವ ಆಸೆ ಹೊತ್ತು ಕೆಲ ಕಾಲದ ಬಳಿಕ ಪಾತ್ರೆಯ ಮುಚ್ಚಳವನ್ನು ಸರಿಸಿ ನೋಡಿದೆ. ಸಕ್ಕರೆಯೆಲ್ಲಾ ಬಿಳಿಹರಳಿನಂತೆ ಗಟ್ಟಿಯಾಗಿ, ಜಾಮೂನುಗಳೆಲ್ಲಾ ಹಿಮಗಡ್ಡೆಯ ನಡುವೆ ಸಿಕ್ಕಿಕೊಂಡ ದೋಣಿಗಳಂತೆ ಕಾಣುತ್ತಿದ್ದವು!
ಆಗ ಹಿಂದೆಲ್ಲೋ ಓದಿದ್ದ ರಸಾಯನ ವಿಜ್ಞಾನ ನೆನಪಾಯ್ತು:
ಗ್ಲೂಕೋಸ್ಹಾಗೂಫ್ರಕ್ಟೋಸುಗಳೆಂಬ ಎರೆಡು ಸರಳ ಕಾರ್ಬೋಹೈಡ್ರೇಟುಗಳು (ಶರ್ಕರ ಪಿಷ್ಟ!) ಸೇರಿಕೊಂಡು ಆಗಿರುವುದೇ ಸುಕ್ರೋಸ್ ಅಥವಾ ಸಕ್ಕರೆ. ಸುಕ್ರೋಸ್ ಒಂದಕ್ಕೊಂದು ಅಂಟಿಕೊಂಡಿದ್ದಾಗ ಹರಳಿನ ರೂಪದಲ್ಲಿ ಕಾಣುತ್ತದೆ. ಅದಕ್ಕಿಷ್ಟು ನೀರು ಬೆರೆಸಿ ಬಿಸಿ ಮಾಡಿದರೆ ಸುಕ್ರೋಸುಗಳೆಲ್ಲಾ ಬೇರೆಬೇರೆಯಾಗಿ ಸಕ್ಕರೆ ನಿಧಾನವಾಗಿ ನೀರಿನೊಂದಿಗೆ ಸೇರಿ ಪಾಕವಾಗುತ್ತದೆ. ಬಿಸಿ ಹೆಚ್ಚಾದಷ್ಟೂ ಹೆಚ್ಚು ಪ್ರಮಾಣದ ಸಕ್ಕರೆ ಕರಗುತ್ತದೆ. ಆದರೆ ಇದು ತಣ್ಣಗಾಗುವಾಗ ಒಂದಿಷ್ಟು ಅಲುಗಿಸಿದರೂ ಸಾಕು, ಸುಕ್ರೋಸ್ಮತ್ತೆ ಒಂದಕ್ಕೊಂದು ಅಂಟಿ ಕೊಳ್ಳುತ್ತಾ ಹರಳಿನಂತಾಗಿ ಗಟ್ಟಿಯಾಗಿ ಬಿಡುತ್ತದೆ.
ಹಾಗಿದ್ದಲ್ಲಿ ಅಗತ್ಯಕ್ಕಿಂತಾ ಹೆಚ್ಚು ಕುದಿಸಿ, ಇನ್ನಷ್ಟು ಸಕ್ಕರೆಯನ್ನು ಸೇರಿಸಿದ್ದೇ ನನ್ನ ಅಧ್ವಾನಕ್ಕೆ ವೈಜ್ಞಾನಿಕ ಕಾರಣ ಎಂದಾಯ್ತು!
ಇಷ್ಟೆಲ್ಲಾ ಯೋಚಿಸುತ್ತಿರುವ ಹೊತ್ತಿನಲ್ಲೇ…
ಆಹಾರವನ್ನರಸಿ ನೆಲ ಮಾಳಿಗೆಯಿಂದ ಒಂದೊಂದೇ ಮೆಟ್ಟಿಲನ್ನು ನಿದಧಾನಕ್ಕೆ ಹತ್ತುತ್ತಾ ಮೊದಲ ಮಹಡಿಯಲ್ಲಿದ್ದ ನನ್ನ ರೂಮಿನ ಅಡುಗೆಮನೆಯತ್ತ ಇಣುಕಿ ನೋಡಿದ ಪುಟಾಣಿ ಸೈನಿಕ ಇರುವೆಯೊಂದು ತನ್ನ ಆಂಟೆನಾವನ್ನು ಏರಿಸಿ ಗ್ರಹಿಸಿದಾಗ ಅದಕ್ಕೆ ಸಕ್ಕರೆಯ ಸಿಹಿ ಸುವಾಸನೆಯ ಸಿಗ್ನಲ್ಸಿಕ್ಕಿತು. ಸಂಭ್ರಮದಿಂದ ಸಕ್ಕರೆ ಪಾಕದತ್ತ ಬಂದು ಒಂದಿಷ್ಟು ತಿಂದು ಖಚಿತಪಡಿಸಿಕೊಂಡು, ಮತ್ತೊಂದಿಷ್ಟನ್ನು ದಾರಿ ಮಧ್ಯ ಮೆಲ್ಲಲೆಂದು ಬಾಯಲ್ಲಿಟ್ಟುಕೊಂಡು ಗೂಡಿನತ್ತ ಬೀಸು ಹೆಜ್ಜೆ ಹಾಕುತ್ತಾ ಧಾವಿಸತೊಡಗಿತು. ನಡುವೆ ಸಿಕ್ಕ ಗೆಳೆಯರಿಗೆಲ್ಲಾ ಸಕ್ಕರೆಯೂರಿನ ಕಡೆಯಿಂದ ಬಂದ ತನ್ನ ಫೆರಮೋನಿನ ದಾರಿ ತೋರುತ್ತಾ ಗೂಡು ತಲುಪಿ, ತಾನು ಕಂಡ ಸಕ್ಕರೆಯ ಬೆಟ್ಟದ ಬಗ್ಗೆ ಸಹಚಾರಿಗಳಿಗೆಲ್ಲಾ ವಿವರಿಸಿ,ಸೈನ್ಯ ಸಮೇತ ಹಿಂತಿರುಗಿ ಬಂದು,ನನ್ನ ಜಾಮೂನು ಬಟ್ಟಲಿಗೇ ಧಾಳಿಯಿಟ್ಟು, ಹೊಟ್ಟೆ ತುಂಬುವಷ್ಟು ಅಲ್ಲೇತಿಂದು, ಉಳಿದದ್ದರಲ್ಲಿ ಸಾಧ್ಯವಾದಷ್ಟನ್ನು ತನ್ನ ತಲೆಯ ಮೇಲೆ ಹೊತ್ತು ಗೂಡಿನತ್ತ ಸಾಗಿಸತೊಡಗಿದವು….
….ಎಂಬಲ್ಲಿಗೆ ನನ್ನ ಮೊಟ್ಟ ಮೊದಲ ಜಾಮೂನು ಪಾಕಪ್ರಯೋಗವು ದುಃಖಾಂತ್ಯಕಂಡರೂ, ಈ ಬೇಸಗೆಯ ಆಹಾರ ಅಭಾವದ ದಿನಗಳಲ್ಲಿ ಇರುವೆಗಳ ಹೊಟ್ಟೆ ತುಂಬಿಸಿದ ಧನ್ಯತೆಯೊಂದಿಗೆ ಮುಕ್ತಾಯವಾಯಿತು!
 

‍ಲೇಖಕರು G

May 8, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

2 ಪ್ರತಿಕ್ರಿಯೆಗಳು

  1. ಆರತಿ ಘಟಿಕಾರ್

    nimma modala jaamoon praytna haasyamayavaaga kottiddeeri //jammoninaste sihi ithu 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: