ಸಂಧ್ಯಾರಾಣಿ ಕಾಲಂ : ’ಅವನು ನನ್ನ ನಗುವನ್ನು ದ್ವೇಷಿಸುತ್ತಿದ್ದ…’


’ಇದನ್ನು ಬಿಡುವಾದಾಗ ಓದು’ ಎಂದು ಅವಳು ನನ್ನ ಕೈಯಲ್ಲಿ ಆ ಹಾಳೆಗಳನ್ನಿಟ್ಟಿದ್ದಳು. ಮಸುಕಾದ, ಕಾಗದ ಮಣ್ಣಿನ ಬಣ್ಣಕ್ಕೆ ತಿರುಗಿದ, ಸವೆದು ತೆಳುವಾದ ಹಾಳೆಗಳು. ಅಲ್ಲಲ್ಲಿ ಅಕ್ಷರ ಕದಡಿದಂತೆ… ಏನೆಂಬಂತೆ ಅವಳತ್ತ ನೋಡಿದೆ. ಯಾವಾಗಲೂ ತುಟಿಗೆ ನಗುವಿನ ಲಿಪ್ ಸ್ಟಿಕ್ ಸವರಿಕೊಂಡಂತೆ ನಗುತ್ತಿದ್ದವಳು. ಇಂದೂ ನಗುತ್ತಲೇ ಇದ್ದಳು, ಆದರೆ ಇಂದೂ ಸಹ ನಗು ಹಾಗೆ … ಲಿಪ್ ಸ್ಟಿಕ್ ಸವರಿದಂತೆ. ಓದು ಎಂದವಳು ಮೌನವಾಗಿ ಕೂತಳು. ಕಾಫೀ ಡೇ ಯಲ್ಲಿ ಬೀಸುತ್ತಿದ್ದ ಗಾಳಿಗೂ ಅವಸರದ ಓಟ ಇರಲಿಲ್ಲ. ಕೈಯಲ್ಲಿ ಕಾಫೀ ಕಪ್ ಹಿಡಿದು ಹಾಳೆಗಳನ್ನು ಕೈಗೆತ್ತಿಕೊಂಡೆ.

***

“ರಾತ್ರಿ..೧೨ ಆಗಿದೆಯಾ ಅಥವಾ ೧ ಆಯಿತಾ? ಗೆಜ್ಜೆ ’ಘಲ್ ಘಲ್’ ಅ೦ದ೦ತೆ ಕಿಟಕಿಯ ಹೊರಗೆಲ್ಲೋ ಕೀಟದ ಸದ್ದು, ಭೋರ್ ಎಂದು ಸುರಿವ ಮಳೆ, ಮನೆಯಿಂದ ಎರಡು ಕಿಲೋಮೀಟರ್ ಆಚೆ ಇದ್ದ ಸಮುದ್ರ ಮೊರೆವ ಸದ್ದು ಇಲ್ಲೇ ಕಿವಿ ಪಕ್ಕದಲ್ಲಿ ಇರುವಂತೆ, ಕಿಟಕಿ ಪಕ್ಕದ ಲೈಟುಕಂಬದಲ್ಲಿ ಬೆಳಕು ಸ್ವಲ್ಪ ಅತ್ತಂತೆ, ಸ್ವಲ್ಪ ಸತ್ತಂತೆ. ಹೊಟ್ಟೆಗೆ ಮೊಣಕಾಲು ಒತ್ತಿ, ಕಣ್ಣು ಗಟ್ಟಿಯಾಗಿ ಮುಚ್ಚಿಕೊಂಡು ಮಲಗಿದ್ದೇನೆ. ಕಣ್ಣು ಬಿಡಬೇಕೆ? ಬಿಡಬೇಕೆ೦ದರೆ ಏನೋ ಕಳವಳ, ಹೆದರಿಕೆ…
ಹೊರಕೋಣೆಯಿ೦ದ ವ್ಯಾನಿಟಿ ಬ್ಯಾಗ್ ಜಿಪ್ ಎಳೆದ ಸದ್ದು…ಚರ್..ರ್..ರ್. ಈಗ ಬ್ಯಾಗ್ ನ ತಪಾಸಣೆ ನಡೆಯುತ್ತಿದೆ.. ಏನೇನಿಟ್ಟಿದ್ದೇನೆ ಅದರಲ್ಲಿ.. ಅಮ್ಮ ಬರೆದ ಪತ್ರ..ಏನಿತ್ತು ಅದರಲ್ಲಿ, ಇವರ ಬಗ್ಗೆ ಏನಾದರು ಬರೆದಿದ್ದಳಾ ಅಮ್ಮ? ಚಿಲ್ಲರೆ ೪೮ ರೂ ಇದ್ದರೆ ಅವರ ಲೆಕ್ಕ ಸರಿ, ಎಷ್ಟಿದೆ… ಅಪ್ಪ ಕಳೆದ ಸಾರಿ ಬ೦ದಾಗ, ಬಾಗಿನದಲ್ಲಿಟ್ಟು ಕೊಟ್ಟಿದ್ದ ೨೦೦ ರೂ, ನಿನ್ನೆ ಡಬ್ಬದಿ೦ದ ತೆಗೆದದ್ದು ಮತ್ತೆ ಎತ್ತಿಡಲು ಮರೆತೆ, ದೇವರೆ ಅದರ ಲೆಕ್ಕ ಏನು ಹೇಳಲಿ ನಾನು… ಮೊನ್ನೆ ತ೦ದ ಕಾಡಿಗೆಯ ಡಬ್ಬಿ… ’ಹೀಗೆ ಅಲ೦ಕಾರ ಮಾಡಿಕೊ೦ಡು ತಿರುಗುವ ಹೆ೦ಗಸರು ಯಾರಾದರು ಮೆಚ್ಚಲಿ ಅ೦ತಾನೆ ಕಾಯ್ತಾ ಇರ್ತಾರೆ’, ಬಿಟ್ಟುಬಿಡಲೆ ಕಣ್ಣಿಗೆ ಕಾಡಿಗೆ ಹಚ್ಚುವುದಾ? ’ನಿನ್ನ ಕಣ್ಣುಗಳು ಎಷ್ಟು ವಿಶಾಲವಾಗಿದೆ… ಕಾಡಿಗೆ ಹಚ್ಚಿದರೆ ಕಣ್ಣಿನಲ್ಲಿ ಮುಳುಗಿ ಹೋಗಿ, ಜೀವ ಬಿಟ್ಟುಬಿಡೋಣ ಅನ್ನಿಸುತ್ತದೆ!’ ಕಾಲೇಜ್ ಡೇ ದಿವಸ ಕ್ಲಾಸ್ ಮೇಟ್ ಪಿಸುಗುಟ್ಟಿದ ಮಾತು ನೆನಪು…
ಇವರು ಕಣ್ಣಿಗೆ ಯಾಕೆ ನಾನು ಒಮ್ಮೆಯಾದರೂ ಚ೦ದ ಕಾಣಿಸೋಲ್ಲ, ನನ್ನಲ್ಲಿ ಹೆಣ್ತನವೇ ಇಲ್ಲವೆ? ಅವರನ್ನೆ೦ದೂ ಬಳಿ ಸೆಳೆಯಲಾಗದ ಸೋಲು ನನ್ನದಾ, ಗ೦ಡನಾಗಲಾರದ ಅವರದಾ? ಬೇಡ ದೇವರೆ, ಅದೇನೂ ಬೇಡ …., ನಾನು ಉಸಿರೆತ್ತದೆ ಉಳಿಯುತ್ತೇನೆ, ಇವರ ಕಣ್ಣುಗಳು ನನ್ನನ್ನು ಕೈದಿಯನ್ನು ಹಿ೦ಬಾಲಿಸುವ ಪೋಲೀಸನ ಕಣ್ಣಿನ೦ತೆ ಹಿ೦ಬಾಲಿಸದಿದ್ದರೆ ಸಾಕು, ನನ್ನ ಆಫೀಸ್ ಮುಗಿದ ಬಳಿಕ ಎದುರಿನ ಹೋಟೆಲ್ ಪಕ್ಕದ ಸ೦ದಿಯಲ್ಲಿ ನಿ೦ತು ಇಣುಕುತ್ತಾ ನಾನು ಬಸ್ ಹತ್ತುವವರೆಗೂ ಕಣ್ಣಿನಲ್ಲಿ ಸ೦ಕೋಲೆ ಕಟ್ಟದಿದ್ದರೆ ಸಾಕು. ನನ್ನ ಮದುವೆ ಫ಼ೋಟೋ ನೋಡಿದ ಆಫೀಸ್ ಸಹೊದ್ಯೋಗಿಯೊಬ್ಬ, ’ಅರೆ ಇವರನ್ನು ನಾನು ಈ ರೋಡ್ ನಲ್ಲೇ ಸುಮಾರು ಸಲ ನೋಡಿದ್ದೇನೆ’ ಎ೦ಬ ಮಾತು ಉದ್ಗಾರವಾಗಿ ಶುರುವಾಗಿ, ಅನುಕ೦ಪದ೦ತೆ ತೋರಿ, ಅನುಮಾನದಲ್ಲಿ ನಿ೦ತಾಗ ನಡುರಸ್ತೆಯಲ್ಲಿ ಬೆತ್ತಲಾದ ಅವಮಾನ. ಅಳಲಾರೆನೆ೦ಬ ಹಟ..
ರಾತ್ರಿ ಒ೦ದೂವರೆಯಾಯಿತು. ನನ್ನ ವ್ಯಾನಿಟಿ ಬ್ಯಾಗಿನಲ್ಲಿ ಇನ್ನೇನು ಹುಡುಕುತ್ತಿರಬಹುದು ಈತ? ರಾತ್ರಿಗಳೆ೦ದರೆ ಹೆದರಿಕೆ, ಕಣ್ಣು ಮುಚ್ಚಿ ಮಲಗಲಾಗದ ಕಳವಳ..”

***

ಕೈಲಿದ್ದ ಕಾಫೀ ಕಪ್ ಕೆಳಗಿಟ್ಟೆ. ಯಾಕೋ ಥಣ್ಣನೆ ಗಾಳಿಯಲ್ಲೂ ಬೆವರುತ್ತಿದ್ದೆ. ಕಣ್ಣೆತ್ತಿ ಅವಳನ್ನು ನೋಡಿದೆ. ತನಗೂ, ಈ ಲೋಕಕ್ಕೂ ಸಂಬಂಧವೇ ಇಲ್ಲವೇನೋ ಎನ್ನುವಂತೆ ಅವಳು ಅಸ್ತಿತ್ವವೇ ಇಲ್ಲದ ಆಕಾರ ಯಾವುದರೆಡೆಗೋ ಕಣ್ಣು ನೆಟ್ಟು ಕೂತಿದ್ದಳು… ಕೈಲಿದ್ದ ಹಾಳೆ ಸುಡುತ್ತಿತ್ತು. ಅದು ಓದದ ಹೊರತು ಮಾತೇ ಇಲ್ಲ ಎನ್ನುವಂತೆ ಅವಳು ಮೌನವಾಗಿದ್ದಳು. ಏನೂ ಮಾಡಲು ತೋಚದೆ ನಾನು ಮುಂದಿನ ಪುಟ ಕೈಗೆತ್ತಿಕೊಂಡೆ…

***

“ಮಲಗಿ ಆಗಿನ್ನು ರೆಪ್ಪೆ ಮುಚ್ಚಿದ್ದಷ್ಟೆ, ಮೈಮೇಲೆಲ್ಲಾ ತಣ್ಣನೆ ಹಲ್ಲಿ ಸರಿದಾಡಿದ೦ತೆ.. ಹೇಸಿಗೆ, ಹೆದರಿಕೆ, ಫ಼್ಯಾನ್ ಗಾಳಿಯಲ್ಲೂ ಬೆವರುತ್ತಿದ್ದ ಮುಖ… ಬೆಚ್ಚಿ ಕಣ್ಣು ಬಿಟ್ಟಾಗ ಎರಡಡಿ ದೂರದಲ್ಲಿ ಗೋಡೆಗೊರಗಿ ಕುಳಿತು ಮುಖವನ್ನೇ ದಿಟ್ಟಿಸುತ್ತಿದ್ದ ಎರಡು ಕಣ್ಣುಗಳು. ದೀಪ ಆರಿಸಿದ ರೂಮಿನಲ್ಲಿ, ಸಿಗರೇಟಿನ ತುದಿ ಕೆ೦ಡದ ಮಿಣುಕು ಬೆಳಕಲ್ಲಿ ತಣ್ಣನೆಯ ಕ್ರೌರ್ಯ. ಅಸಹನೆ ತು೦ಬಿಕೊ೦ಡು, ಜಿಗುಪ್ಸೆ ತರುವ ಸ್ಪರ್ಶದ ಕಣ್ಣುಗಳು. ’ಕೆಲವು ಗ೦ಡಸರು ಹೆ೦ಡತಿಯರನ್ನು ಕೊಲೆ ಮಾಡಿಬಿಡುತ್ತಾರೆ, ಯಾರಿಗೂ ಗೊತ್ತಾಗುವುದೇ ಇಲ್ಲ.’ ’ಯಾಕೆ ಹೆದರಿಕೆ ಆಗ್ತಿದೆಯಾ?’, ಅಲ್ಯುಮಿನಿಯ೦ ತಟ್ಟೆಯಲ್ಲಿ ಮರಳು ಹಾಕಿ ಆಡಿಸಿದ೦ತೆ ಬರುವ ಗೊಗ್ಗರು ದನಿ, ಕಣ್ಣಿನಲ್ಲಿ ಸ್ಯಾಡಿಸ್ಟ್ ಹೊಳಪು, ತುಟಿಯಲ್ಲಿ ಹುಟ್ಟಿ ಅಲ್ಲೇ ಸಾಯುವ, ಕೆನ್ನೆ ಕಣ್ಣುಗಳನ್ನು ಎಂದೂ ಸೋಕದ ಅದೇ ನಗು, ನಗೆ ಕೊ೦ದ೦ತೆ ಹಗೆ ಕೊಲ್ಲಲಾರದು ಎನ್ನುವ ನಗು ಇದೇನಾ? ಅಲ್ಲ, ಇದೆಲ್ಲ ನರಕದಿ೦ದ ಸಾವು ನನ್ನನ್ನು ತಪ್ಪಿಸಬಲ್ಲದಾ?! ಹಾಗೆ ತಪ್ಪಿಸುವುದಾದರೆ ಆ ಸಾವಿಗೆ ಹೆದರಬೇಕು ಯಾಕೆ?
ಮೂರು ವಾರಗಳಿ೦ದ ಮನೆಗೆ ದಿನಸಿ ತ೦ದಿಲ್ಲ, ನನ್ನ ಸ೦ಬಳದ ಹಣವೆಲ್ಲಾ ಮುಗಿದಿದೆ, ಮನೆ ಸಾಮಾನಿನ ಪಟ್ಟಿ ಕೊಡಹೋದರೆ, ಕಣ್ಣೆತ್ತಿ ನೋಡದೆ ಹೊರಗೆ ಹೋಗುತ್ತಾರೆ, ಹೊರಗಡೆ ಊಟ ಮಾಡ್ತಾ ಇದ್ದಾರ? ನಿನ್ನೆ ಚಿತ್ರಾನ್ನ ಪಾರ್ಸಲ್ ತ೦ದು ಮನೇಲೆ ಒಬ್ಬರೆ ತಿ೦ದರು. ಊಟ ಮಾಡದಿದ್ದರೆ ಸಾಯುವೆನಾ ನಾನು?? ಹಾಗಾದರೆ ಈಗ ಬದುಕಿರುವೆನಾ? ಉಪೇಕ್ಷೆಗಿ೦ತ ವಿಷ ಬೇಕ ಹೆ೦ಡತಿ ಸಾಯಲು? ದೇವರೆ ಬೇಗ ಬೆಳಗಾಗಲಿ, ಎದ್ದುಬಿಡುತ್ತೇನೆ…”

***

ಇನ್ನು ಮುಂದೆ ಒಂದು ಪದವನ್ನೂ ಓದಲಾಗಲಿಲ್ಲ ನನಗೆ …. ಡೈರಿಯ ಹರಿದ ಪುಟಗಳಂತಿದ್ದ ಆ ಪತ್ರವನ್ನು ಹಾಗೇ ಮುಚ್ಚಿಟ್ಟೆ. ದಾಂಪತ್ಯದೊಳಗಿರುವ ಕ್ರೌರ್ಯ ನನ್ನನ್ನು ಬೆಚ್ಚಿಬೀಳಿಸುತ್ತದೆ. ಏಕೆಂದರೆ ಇಲ್ಲಿ ತನ್ನ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಜೀವವನ್ನು ದಿನಬೆಳಗಾದರೆ ನೋಡಬೇಕು, ಉಕ್ಕುಕ್ಕಿ ಬರುವ ದ್ವೇಷ, ಅಸಹ್ಯ, ಸಿಟ್ಟು ಇವೆಲ್ಲದರ ನಡುವೆಯೇ ಆ ಜೀವದೊಡನೆ ಬದುಕಬೇಕು. ಇಲ್ಲಿ ಆ ವ್ಯಕ್ತಿಯ ಕ್ರೌರ್ಯಕ್ಕಿಂತ ದೊಡ್ಡ ಕ್ರೌರ್ಯವೆಂದರೆ ಬದುಕಿನದ್ದು …. ಆ ಜೀವದೊಡನೆಯೇ ಬದುಕಬೇಕಾದ ಅನಿವಾರ್ಯತೆ ಸೃಷ್ಟಿಸುವ ಪರಿಸ್ಥಿತಿಯದ್ದು. ಇದು ನಿಜಕ್ಕೂ staying and sleeping with the Enemy ಯ ಕಥೆ.
ಇಲ್ಲಿ ನಾನು ಪ್ರಜ್ಞಾಪೂರ್ವಕವಾಗಿ ’ದಾಂಪತ್ಯದೊಳಗಿನ ಕ್ರೌರ್ಯ’ ಎನ್ನುತ್ತಿದ್ದೇನೆ. ಇದು ಕೇವಲ ’ಗಂಡನ ಕ್ರೌರ್ಯ’ ಅಥವಾ ’ಹೆಂಡತಿಯ ಕ್ರೌರ್ಯ’ ಅಲ್ಲ. ಇದು ಒಂದು ಸಂಬಂಧದಲ್ಲಿರಬಹುದಾದ ಕ್ರೌರ್ಯ.
ಕ್ರೌರ್ಯಕ್ಕೆ ಲಿಂಗಬೇಧವಿಲ್ಲ.
ನಾನು ಕಂಡಂತೆ ಒಬ್ಬಾತ ತನ್ನ ಹೆಂಡತಿಯನ್ನು ಮನೆಯಲ್ಲಿ ಬಿಟ್ಟು ಬಾಗಿಲಿಗೆ ಬೀಗ ತಗಿಲಿಸಿ ಹೋಗುತ್ತಿದ್ದ. ಅವಳು ತನ್ನ ಸಂಬಂಧಿಕರೊಡನೆ ಮಾತನಾಡಿದರೆ ಇರಲಿ, ಅವಳನ್ನು ಯಾರಾದರೂ ಹೊಗಳಿದರೂ ವ್ಯಗ್ರನಾಗಿ ತನ್ನೆಲ್ಲಾ ವ್ಯಗ್ರತೆಯಿಂದ ಅವಳ ಮೇಲೆ ಧಾಳಿ ಮಾಡುತ್ತಿದ್ದ.
ಅಷ್ಟೇ ಸತ್ಯ ಎಂದರೆ ಇನ್ನೊಬ್ಬ ಹೆಂಗಸು ತನ್ನ ಮೇಲೆ ಒಂದಿಷ್ಟೂ ತಪ್ಪು ಬರದಂತೆ, ತನ್ನ ಧ್ವನಿ ಒಂದಿಷ್ಟೂ ಏರಿಸದಂತೆ, ಅವಳು ಹಚ್ಚಿಕೊಳ್ಳುತ್ತಿದ್ದ ಕುಂಕುಮದ ಪುಡಿ ಒಂದಿಷ್ಟೂ ಅಲುಗದಂತೆ ಮಾನಸಿಕವಾಗಿ ತನ್ನ ಗಂಡನನ್ನು ಯಾವ ಪರಿ ಹಿಂಡಿ ಹಿಪ್ಪೆ ಮಾಡಿದ್ದಳು ಎಂದರೆ ಮದುವೆಯಾದ ಕೆಲವು ವರ್ಷಗಳಲ್ಲೇ ಆತ ತನ್ನವರನ್ನೆಲ್ಲಾ ದೂರ ಮಾಡಿಕೊಂಡು, ತನ್ನ ಆತ್ಮ ವಿಶ್ವಾಸ ಕಳೆದುಕೊಂಡು, ಒಂದು ಬೆದರು ಬೊಂಬೆಯಂತಾಗಿ ಹೋಗಿದ್ದ. ಅವನ ವೃತ್ತಿ ಜೀವನವೂ ಕುಸಿಯುತ್ತಾ ಹೋಯಿತು.
ನಿಜ ಕ್ರೌರ್ಯಕ್ಕೆ ಲಿಂಗಬೇಧವಿಲ್ಲ.
ಹಾಗಾದರೆ ದಾಂಪತ್ಯದೊಳಗಣ ಕ್ರೌರ್ಯಕ್ಕೆ ಮುಖಗಳೆಷ್ಟು? ಮೌನ ಬಂಗಾರ, ನಿಜ. ಆದರೆ ಒಂದು ಸಂಬಂಧವನ್ನು ಕೇವಲ ಮೌನ ಆಳುವಂತಾದರೆ? ಅದೂ ಸಹ ಕ್ರೌರ್ಯ ಎನ್ನುತ್ತದೆ ಸುಪ್ರೀಂ ಕೋರ್ಟ್. ಗಂಡ ಆಗಲಿ, ಹೆಂಡತಿಯಾಗಲಿ ವರ್ಷಾನುಗಟ್ಟಲೆ ದೈಹಿಕ ಮಿಲನವನ್ನು ನಿರಾಕರಿಸಿದರೆ, ಅದೂ ಕ್ರೌರ್ಯದ ಒಂದು ಮುಖವೇ ಎನ್ನುತ್ತದೆ ಕೋರ್ಟ್. ಅಂದರೆ ಕ್ರೌರ್ಯ ಎಂದರೆ ಕೇವಲ ಬೈಗುಳವಲ್ಲ, ಹೊಡೆತವಲ್ಲ, ಇನ್ನೊಬ್ಬ ವ್ಯಕ್ತಿಯ ಮೈ ಮುಟ್ಟದೆ ಆ ಜೀವವನ್ನು ನೀವು ಘಾಸಿಗೊಳಿಸಬಲ್ಲುದಾದರೆ ಅದೂ ಕ್ರೌರ್ಯವೇ. ಯಾವ ಕಲೆಯನ್ನೂ ಉಳಿಸದ ಈ ಗಾಯಗಳು ಮಾಯುವುದೇ ಇಲ್ಲ.
ಒಂದು ಸಂಬಂಧದಲ್ಲಿ ಈ ಕ್ರೌರ್ಯ ಇದೆ ಎಂತಾದರೆ ಅಲ್ಲಿ ಎರಡು ವ್ಯಕ್ತಿಗಳಿರುವಂತೆಯೇ ಎರಡು ವ್ಯಕ್ತಿತ್ವಗಳೂ ಇರುತ್ತದೆ. ಸಾಧಾರಣವಾಗಿ ಒಂದು ಡಾಮಿನೇಟಿಂಗ್ ವ್ಯಕ್ತಿತ್ವ ಇದ್ದರೆ ಮತ್ತೊಂದು ಪ್ರತಿಭಟಿಸದ ಅಥವಾ ಪ್ರತಿಭಟಿಸಲಾಗದ ವ್ಯಕ್ತಿತ್ವ. ಡಾಮಿನೇಟಿಂಗ್ ವ್ಯಕ್ತಿತ್ವ ಸನ್ನಿವೇಶಗಳನ್ನು ತನ್ನ ಮನಸ್ಸಿಗೆ ಬಂದಂತೆ ಕಂಟ್ರೋಲ್ ಮಾಡುತ್ತಾ, ನಿರ್ದೇಶಿಸುತ್ತಾ ತನ್ನ ವ್ಯಕ್ತಿತ್ವವನ್ನು ಇನ್ನೊಬ್ಬ ವ್ಯಕ್ತಿಯ ಮೇಲೆ ಹೇರುತ್ತಾ ಹೋಗುತ್ತದೆ.
ಮೊದ ಮೊದಲಿಗೆ ಇವೆಲ್ಲ ತುಂಬಾ ಸಹಜವಾಗಿ ನಡೆಯುತ್ತದೆ. ಅದರೆ ಮೊದಲ ಹೆಜ್ಜೆ ಎಂದರೆ ತನ್ನ ಸಂಗಾತಿಯನ್ನು ಎಲ್ಲಾ ಸಂಬಂಧಿಕರಿಂದ, ಗೆಳೆತನದಿಂದ ಪ್ರತ್ಯೇಕಿಸುವುದು. ಆ ವ್ಯಕ್ತಿಯನ್ನು ಒಂಟಿಯಾಗಿಸುತ್ತಾ ಹೋಗಿ, ತನ್ನ ಬಿಟ್ಟರೆ ಆ ಜೀವಕ್ಕೆ ಇನ್ನೊಂದು ಆಸರೆಯಿಲ್ಲ, ನಂಬಿಕೆಯಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಮಾಡುವುದು. ಅದು ಆಯಿತೆಂದರೆ ಅರ್ಧ ಯುದ್ಧ ಗೆದ್ದಂತೆ. ಅದೊಂದು ಬೆಕ್ಕು ಇಲಿಯಾಟ.
ಆ ಸೋತ ಜೀವ ಒಂದಿಷ್ಟು ಆತ್ಮವಿಶ್ವಾಸ ಜೋಡಿಸಿಟ್ಟುಕೊಂಡಿತೆಂದರೆ ಒಂದು ಕುತ್ಸಿತ ಮಾತು, ಒಂದು ಮೂದಲಿಕೆ, ಎಲ್ಲರೆದುರಲ್ಲಿ ಒಂದು ಅವಮಾನದ ನುಡಿ, ಸಾಕಲ್ಲ ವ್ಯಕ್ತಿ ಮತ್ತೆ ಸೋತು ಕೂರಲಿಕ್ಕೆ? ದುರ್ಬಲ ವ್ಯಕ್ತಿತ್ವದವರು ಹೀಗೆ ವರ್ಷಾನುಗಟ್ಟಲೆ ಧಾಳಿ ಎದುರಿಸಿ ಎದುರಿಸಿ ತಮ್ಮ ವ್ಯಕ್ತಿತ್ವವನ್ನೇ ಕಳೆದುಕೊಂಡುಬಿಡುತ್ತಾರೆ.
ಆದರೆ ಆ ಇನ್ನೊಬ್ಬ ವ್ಯಕ್ತಿ ದುರ್ಬಲ ವ್ಯಕ್ತಿತ್ವ ಹೊಂದಿಲ್ಲದಿದ್ದರೆ?? ಆಗ ಅವರು ಪ್ರತಿಭಟಿಸುತ್ತಾರೆ ಮತ್ತು ಪ್ರತಿ ದಿನ ಪ್ರತಿಭಟನೆಯೊಂದಿಗೇ ಬದುಕಬೇಕಾಗುತ್ತದೆ. ಒಮ್ಮೆ ಯೋಚಿಸಿ, ನಾವು ಇಡೀ ಜಗತ್ತಿನೊಡನೆ ಯುದ್ಧ ಮಾಡುತ್ತೇವೆ, ಕೆಲಸದಲ್ಲಿ, ಸಮಾಜದಲ್ಲಿ, ಬದುಕಿನ ಏಣಿಯನ್ನು ಹತ್ತುವಲ್ಲಿ… ಎಲ್ಲೆಲ್ಲೂ ನಾವು ಹೋರಾಡುತ್ತಲೇ ಇರುತ್ತೇವೆ. ನಮ್ಮನ್ನು ಜಡ್ಜ್ ಮಾಡದೆ ಒಪ್ಪಿಕೊಳ್ಳುವ ಒಂದು ತಾಣವೆಂದರೆ ಮನೆ. ಆದರೆ ಮನೆಯಲ್ಲೂ ನೀವು ನಿರಾಳವಾಗಿರಲು ಸಾಧ್ಯವಿಲ್ಲ ಎಂದರೆ, ಮನೆಯಲ್ಲೂ ಪ್ರತಿಘಳಿಗೆ ಮುಂದಿನ ಧಾಳಿ ಏನಿರಬಹುದು ಎನ್ನುವ ಆತಂಕದಲ್ಲೇ ಬದುಕಬೇಕಾಗಿ ಬಂದರೆ ….. ಹೇಳಿ ಇದಕ್ಕಿಂತ ನರಕವಿರಬಹುದಾ?
ವರ್ಷಾನುಗಟ್ಟಲೆ ಇಂತಹುದೊಂದು ಧಾಳಿಗೆ ಒಳಗಾದ ಮನಸ್ಸಿನ ಪರಿಸ್ಥಿತಿ ಏನಾಗಬಹುದು? ಒಮ್ಮೊಮ್ಮೆ ಗಂಡ ಹೆಂಡತಿಯ ನಡುವೆ ಮಾತುಕತೆಯಾಗುವಾಗ ನೋಡುವ ಮೂರನೆಯವರಿಗೆ ಅವರ ಉತ್ತರಗಳು ಶಾಕ್ ಕೊಡುತ್ತವೆ. ಅರೆ ಇಷ್ಟು ಸಣ್ಣ ವಿಷಯಕ್ಕೆ ಇವರ್ಯಾಕೆ ಹೀಗೆ ತೀವ್ರವಾಗಿ ರಿಯಾಕ್ಟ್ ಮಾಡುತ್ತಿದ್ದಾರೆ ಅನ್ನಿಸಿಬಿಡುತ್ತದೆ. ಆದರೆ ನಾವು ಗಮನಿಸಬೇಕಾದ್ದು ಆ ಉತ್ತರದ ಹಿಂದಿರುವ ವರ್ಷಗಳ ನೋವು, ಅವಮಾನ, ಅನಾದರ. ಮೂರನೆಯವರ ಕಣ್ಣಿಗೆ ಅವರ ಪ್ರತಿಕ್ರಿಯೆ ಕೇವಲ ಒಂದು ಘಟನೆ ಮಾತ್ರ, ಆದರೆ ಅದರಲ್ಲಿ ಭಾಗಿಯಾದವರಿಗೆ ಅದು ಒಂದು ನಿರಂತರ ಪ್ರಕ್ರಿಯೆ.. ಅವರ ಆಗಿನ ನಡವಳಿಕೆ ಆ ಪ್ರಕ್ರಿಯೆಗೆ ಪ್ರತಿಕ್ರಿಯೆ.
ನಾನು ಯೋಚಿಸುತ್ತಲೇ ಇದ್ದೆ, ಮತ್ತೆ ಗಮನ ಆ ಡೈರಿಯ ಪುಟಗಳತ್ತ ಹೋಯಿತು. ಆಕೆ ನನ್ನ ಗೆಳತಿ. ಅವಳು ಒಂಟಿಯಾಗಿ ಬದುಕುತ್ತಿದ್ದಾಳೆ ಎಂದು ಗೊತ್ತಿತ್ತು, ಆದರೆ ಕಾರಣ ಗೊತ್ತಿರಲಿಲ್ಲ. ಆಮೇಲೆ ಅವಳು ಹೇಳಿದ್ದು ಒಂದೇ ಮಾತು, ’He used to hate my smile and now I never stop smiling…’. ಆ ಮಾತುಗಳ ಹಿಂದಿನ ಮೌನ, ನೋವು, ಆತ್ಮವಿಶ್ವಾಸ ಎಲ್ಲಾ ನನಗೆ ಅರ್ಥವಾಗಿತ್ತು. ಅವಳ ಆ ನಗು ಸಹ….
 

‍ಲೇಖಕರು G

May 22, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

21 ಪ್ರತಿಕ್ರಿಯೆಗಳು

  1. sunil rao

    Beautiful…
    Badukina ele elegalannu artha maadikondavara kaili maatra…baraha ishtu chanda saadhya

    ಪ್ರತಿಕ್ರಿಯೆ
  2. vanamala

    ತುಂಬಾ ಚೆನ್ನಾಗಿ ಬರೆದಿದೀರಿ. ಎಳೆ ಎಳೆಯಾಗಿ ಬಿಡಿಸಿರೋದು ತುಂಬಾ ಚೆನ್ನಾಗಿದೆ.
    ಹೌದು… ಇನ್ನೆರಡು ಸಲ ಓದಬೇಕು ಅನ್ನಿಸ್ತಾ ಇದೆ.

    ಪ್ರತಿಕ್ರಿಯೆ
  3. asha viswanath

    Karulu kivuchitu. Thanks sandhya rani. Chandada abhivyaktige. Mookalaade.

    ಪ್ರತಿಕ್ರಿಯೆ
  4. ಶಮ, ನಂದಿಬೆಟ್ಟ

    Beautiful ಎಂದರೆ ಸ್ಯಾಂಡಿಸಂ ಎನಿಸೀತೇ ಸಂಧ್ಯಾ ? ಪ್ರತಿ ಎಳೆಯೂ ನವಿರು ನೇಯ್ಗೆಯಂತೆ

    ಪ್ರತಿಕ್ರಿಯೆ
  5. Renuka Nidagundi

    ಚೆಂದದ ಬರಹ ಸಂಧ್ಯಾ. ಒಂದು ಮುಗುಳ್ನಗುವಿನ ಹಿಂದೆ ನೂರು ಅಭಿವ್ಯಕ್ತಿಸಲಾಗದ ನೋವು,ಭಾವಗಳಿರುತ್ತವೆ. ಅವೆಲ್ಲವನ್ನೂ ಒಂದೆಡೆ ಹೆಣೆದು ಮತ್ತೆ ಬಿಡಿಸಿದ ಪರಿ ಇಷ್ತವಾಯಿತು..

    ಪ್ರತಿಕ್ರಿಯೆ
  6. shadakshari.Tarabenahalli

    ’He used to hate my smile and now I never stop smiling…’.
    ಆ ಮಾತುಗಳ ಹಿಂದಿನ ಮೌನ, ನೋವು, ಆತ್ಮವಿಶ್ವಾಸ ಎಲ್ಲಾ ನನಗೆ ಅರ್ಥವಾಗಿತ್ತು.
    ಅವಳ ಆ ನಗು ಸಹ…
    ತುಂಬಾ ಹಿಡಿಸಿದ ಸಾಲುಗಳು…

    ಪ್ರತಿಕ್ರಿಯೆ
  7. y k sandhya sharma

    dampatyadllina krourya naa naa bage. hidita sadhisuvudondadare,neglect madi hinduvudondu bage…dina dina sayuva badalu dhairya madi avnanannu oddu hora baruvudu melu. novina padaragalu chennagi anaavaranagondive.

    ಪ್ರತಿಕ್ರಿಯೆ
  8. Anil Talikoti

    ಬರಹ. ಭಾವ, ಅಭಿವ್ಯಕ್ತಿ ಎಲ್ಲಾ ಚೆನ್ನಾಗಿವೆ – ಡೌಟೇ ಇಲ್ಲಾ. ಡೌಟು ಬರುವದು ಇಲ್ಲಿಯ ಪಾತ್ರಗಳ ಬಗ್ಗೆ, ಘಟನೆಗಳ ಬಗ್ಗೆ ಮಾತ್ರ. ಈ ತಣ್ಣಗಿನ ಏಕಮುಖಿ ಕ್ರೌರ್ಯದ (ಲಿಂಗಬೇಧವಿಲ್ಲದ್ದು) ultimate ಉದ್ದೇಶ ಈ ಕಾಲದಲ್ಲಿ ಏನು ಅಂಬುವದೆ ಅರ್ಥ ಆಗುವದಿಲ್ಲ (ಪೂರ್ತಿ ಸ್ಯಾಡಿಸ್ಟ ಆಗಿರುವವರ ಮಾತು ಬೇರೆ -ಅವರ ಸಂಖ್ಯೆ ಕಮ್ಮಿ ಎಂದುಕೊಂಡರೆ). “ಕೆಲವು ಗ೦ಡಸರು ಹೆ೦ಡತಿಯರನ್ನು ಕೊಲೆ ಮಾಡಿಬಿಡುತ್ತಾರೆ, ಯಾರಿಗೂ ಗೊತ್ತಾಗುವುದೇ ಇಲ್ಲ” ಎನ್ನುವ ಡೈಲಾಗ ಹಾಸಿಗೆಯಲ್ಲಿ ಹೊಡೆಯುವ ಗಬ್ಬರಗಳಿಗೆ ಅದರ ಪರಿಣಾಮದರಿವು ಇರುವದಿಲ್ಲ, ಇದ್ದರೂ ಕ್ಯಾರೆ ಮಾಡುವದಿಲ್ಲ – ಎನ್ನುವದಕ್ಕೆ ಯಾಕೋ ಮನ ಒಪ್ಪುತ್ತಿಲ್ಲ. ಇದು ಮೇನಸ್ಟ್ರಿಮ ಆಗಿರೂವದಂತೂ ಸಾಧ್ಯವೆ ಇಲ್ಲಾ. offcourse, statistically speaking ಎಲ್ಲೊ ಯಾರೋ – ಚುಂಬಿಸುವದರಿಂದ ಮಕ್ಕಳಾಗುತ್ತಾರೆ ಎಂದು ನಂಬಿರುವವರು ಇರುತ್ತಾರೆ ಎಂದೂ ಅದ್ಭುತವಾಗಿ ಬರೆಯಬಹುದೋ ಏನೊ? ತಪ್ಪು ತೀಳಿಯಬೇಡಿ – ಇಲ್ಲಿಯ ನನ್ನ ಸಂದಿಗ್ಧತೆ ಏನೆಂದರೆ ಇಷ್ಟೊಂದು ತಣ್ಣಗಿನ ಕ್ರೌರ್ಯದ ಬಣ್ಣನೆ ನಮ್ಮನ್ನು desensitize ಮಾಡಿ ನಿಜವಾಗಿಯೂ ದಾಂಪತ್ಯದೊಳಗಣ ಕ್ರೌರ್ಯವನ್ನು ಕಮ್ಮಿಯಾಗಿಸುವಲ್ಲಿ ಸೋಲುತ್ತದೆ ಏನೋ ಎಂಬ ಕಳವಳ.
    -Anil Talikoti

    ಪ್ರತಿಕ್ರಿಯೆ
  9. Raj

    It is not:
    Beautiful,
    entertaining,
    wonderful writing, etc.
    nothing, it is just REAL. Which is what makes it so good.
    I have see around me a few examples which can prove it beyond a trace of doubt.

    ಪ್ರತಿಕ್ರಿಯೆ
  10. Sushma

    ಮನ ಕಲಕಿತು. ತುಂಬಾ ಭಾವನಾತ್ಮಕವಾಗಿ , ಮನ ಮುಟ್ಟುವಂತಿದೆ ನಿಮ್ಮ ಬರಹ. very nice.

    ಪ್ರತಿಕ್ರಿಯೆ
  11. ಸತೀಶ್ ನಾಯ್ಕ್

    ಅದೊಂದು ಕ್ರೌರ್ಯವೇ ಅಂತ ನಮಗಾರಿಗೂ ಅರಿವಿಗೆ ಬಾರದೆ ಇದ್ದರೂ ಹೀಗೆಲ್ಲ ನಡೆದು ಕೊಳ್ಳುವ ಅದೆಷ್ಟು ಸಂಸಾರಗಳನ್ನು ನಾನು ನೋಡಿಲ್ಲ. ಯಾರೇಕೇ ಅಪ್ಪ ಅಮ್ಮನೇ ಹೀಗೊಂದು ನಿಲುವನ್ನ ತಳೆದು ಅದೆಷ್ಟು ಕಾಲ ಬದುಕಿಲ್ಲ. ಈಗಲೂ ಆಗಾಗ ಹೀಗೆಲ್ಲ ಅದೆಷ್ಟು ಸಾರಿ ಬದುಕುತ್ತಿಲ್ಲ. ಮಕ್ಕಳಾದ ನಾವು ಅದೆಷ್ಟು ಬಾರಿ ಅವರ ಪರಸ್ಪರ ಮಾತುಗಳ ವ್ಯವಹಾರಕ್ಕೆ ಮಧ್ಯವರ್ತಿಗಳಾಗಿಲ್ಲ. ಅಸಲು ತಮ್ಮನ್ನೇ ನಂಬಿ ಕೊಂಡವರೆದುರು.. ತಮ್ಮವರೇ ಆದವರೆದುರು, ತಾವು ಪ್ರೀತಿಸುವವರೇ ಅಥವಾ ಪ್ರೀತಿಸ ಬೇಕಾದವರೇ ಆದವರೆದುರು ಹೀಗೊಂದು ಕ್ರೌರ್ಯ ಅನಿವಾರ್ಯವೇ ಉತ್ತರದ ಸುಳಿವಿಲ್ಲ. ಅಸಲು ಮನುಷ್ಯ ಯಾಕಿಷ್ಟು ಕ್ರೂರಿಯಾಗುತ್ತಾನೆ..?? ಅದರಲ್ಲೂ ಕೇವಲ ತನ್ನವರ ಎದುರಷ್ಟೇ ಯಾಕೆ ಹಾಗೆ..?? ಸಮಾಜಮುಖಿ ಮನುಷ್ಯನೇ ಬೇರೆ. ಅವನ ಅಂತರ್ಮುಖವೆ ಬೇರೆ. ಮನುಷ್ಯನ ಅಂತ ಮಾರ್ಪಾಡುಗಳಿಗೆ ಕಾರಣವೂ ಉತ್ತರವೂ ತಿಳಿದಿಲ್ಲ.
    ಇದನ್ನೋದುವ ಅಂತ ಪ್ರತೀ ಕ್ರೂರಿಯೂ ಇಂಥ ವರ್ತನೆಗಳ ಕುರಿತಾಗಿ ಪಶ್ಚಾತಾಪ ಪಡುವುದು ನಿಜ. ಆ ಪಶ್ಚಾತಾಪ ಅವನನ್ನ ಬದಲಿಸಿದರೆ ಸಾರ್ಥಕ. ಪ್ರೀತಿಗಿಂತಲೂ ದೊಡ್ಡ ಸರಕಿಲ್ಲ ಬದುಕೊಳಗೆ ನೆಮ್ಮದಿಯಿಂದ ಬದುಕೋಕೆ. ಅದರ ಸಾಕ್ಷಾತ್ಕಾರವಾಗಬೇಕಷ್ಟೇ. ಅದು ಆಗಲಷ್ಟೆ.
    ಕದಡುವ ಲೇಖನ. ಕಾಡುವ ಲೇಖನ.

    ಪ್ರತಿಕ್ರಿಯೆ
  12. ಅಕ್ಕಿಮಂಗಲ ಮಂಜುನಾಥ

    ಬದುಕಿನೊಳಗಿನ ಕ್ರೌರ್ಯಗಳನ್ನು ಎಳೆ ಎಳೆಯಾಗಿ ತೋರಿಸಿದ್ದೀರಿ. ಒಂದಲ್ಲಾ ಒಂದು ರೀತಿಯಲ್ಲಿ ನಾನು, ನೀವು, ಅವರು, ಇವರು ಎನ್ನದೆ ಪ್ರತಿಯೊಬ್ಬರೂ ಪ್ರತ್ಯಕ್ಷವಾಗಿ ಅಥವ ಪರೋಕ್ಷವಾಗಿ ಈ ಕ್ರೌರ್ಯದ ಮುಖಗಳೇ ಆಗಿರುತ್ತೀವೆಂಬುದು, ನಮ್ಮನ್ನು ನಾವು ಆತ್ಮದ ಒಳಗೆ ಇಣುಕಿ ನೋಡಿಕೊಂಡರೆ ಮಾತ್ರ ಕಂಡೀತು.
    ಲೇಖನ ತುಂಬಾ ಚೆನ್ನಾಗಿದೆ. ಅಭಿನಂದನೆಗಳು.

    ಪ್ರತಿಕ್ರಿಯೆ
  13. ಮಲ್ಲಪ್ಪ

    ಮನುಷ್ಯ ಯಾಕಿಷ್ಟು ಕ್ರೂರಿಯಾಗುತ್ತಾನೆ?
    ಮಾನಸ ಶಾಸ್ತ್ರಜ್ಞರು ಉತ್ತರಿಸಬೇಕಾದ ಪ್ರಶ್ನೆ ಇದು.ದಾಂಪತ್ಯ ಕ್ರೌರ್ಯ ಕ್ರೂರಿ ಮಾನವನ ಒಂದು ಮುಖ.ಈ ಪ್ರಕ್ರಿಯೆಯಲ್ಲಿ ಒಬ್ಬರು ಆಕ್ರಮಣಕಾರಿ ಆದರೆ ಇನ್ನೊಬ್ಬ ಆಕ್ರಮಣಕ್ಕೋಳಗಾದವರು ಲಿಂಗ ಭೇದವಿಲ್ಲದೆ.ನನಗೆ ತಿಳಿದಂತೆ ಇದಕ್ಕೆ 2ಕಾರಣಗಳು.
    1) ವಂಶಪಾರಂಪರ್ಯ (ಹೆರಿಡಿಟಿ)ಸಂಶಯ ಪಿಶಾಚಿಯಂತೆ ವರ್ತಿಸುವುದು
    2) ಮನಸ್ಸಿನ ಮೇಲಾದ ಆಘಾತಕಾರಿ ಆಘಾತದಿಂದ ತನ್ನ ನಡತೆಗೆ ತನಗೆ ನಿಯಂತ್ರಣವಿಲ್ಲದಾಗಿ ಬಯಸಿದ್ದರೂ ಬದಲಾಗದ ಸ್ಥಿತಿ ಆಕ್ರಮಣಕಾರಿಯದಾಗಿರುತ್ತದೆ.ಉದಾಹರಣೆಗೆ ಒಂದು ದಾಂಪತ್ಯದಲ್ಲಿ ಗಂಡು ಹೆಣ್ಣು ಸಾಮಾಜಿಕವಾಗಿ ಚನ್ನಾಗಿಯೆ ಇದ್ದು ದೈಹಿಕ ಸಂಬಂಧ ಬಂದಾಗ ಹೆಣ್ಣು ಮಂಜುಗಡ್ಡೆಯಾಗುತಿದ್ದಳು.ಗಂಡಿನ ಯಾವುದೇ ಚಾತುರ್ಯಕ್ಕೆ ಸೊಪ್ಪು ಹಾಕುತ್ತಿರಲಿಲ್ಲ.ನಯ,ವಿನಯ,ಒಲುಮೆಯ ಮಾತು,ಕಡೆಗೆ ಹಿರಿಯರಿಂದ ಹೇಳಿಸುವುದು,ಜಗಳ,ಬೈದಾಟ ಕೂಗಾಟ ಕಡೆಗೆ ವಿಚ್ಛೇದನೆಯವರೆಗೂ ಹೋಯಿತು.ಹಿರಿಯರು ಗಂಡಿಗೇನೆ ಅನುಸರಿಸಬೇಕು ಎಂದು ಹೇಳಿದರು.ಆದರೆ ಗಂಡು ದೇಹ ಸಂಪರ್ಕದ ಕೊರತೆಯನ್ನು ಹೇಗೆ ನೀಗಿಸಿಯಾನು?ಅವಳು ಕ್ರೂರವಾಗಿ ಏಕೆ ನಡೆದುಕೊಂಡಳು? ಉತ್ತರ ಅವಳು ಸತ್ತ ಮೇಲೆ ತಿಳಿಯಿತು.ಅದು ಅವಳು ಚಿಕ್ಕವಳಿದ್ದಾಗ ಯಾವುದೋ ಒಬ್ಬರಿಂದ ದೈಹಿಕವಾಗಿ ಆಘಾತಕಾರಿಯಾಗಿ ಬಳಿಸಲ್ಪಟ್ಟು,ಮುಂದೆ ದೈಹಿಕ ಸಂಪರ್ಕ ಬಂದಾಗಲೆಲ್ಲ ಮಾನಸಿಕವಾಗಿ ಬಿಗಿದು ದೈಹಿಕವಾಗಿ ಕಲ್ಲಾಗುತಿದ್ದಳು.
    ಇನ್ನೊಂದು ಘಟನೆಯಲ್ಲಿ ಗಂಡು ಹೆಂಡತಿಯನ್ನು ಮರೆಯಲ್ಲಿ ಇದ್ದು follow ಮಾಡುತಿದ್ದದು ಆತನ ಅಕ್ಕ ಅವರೆಲ್ಲರಿಗೂ ಆಘಾತಮಾಡಿ ಓಡಿ ಹೋದದ್ದು.
    ಹೀಗೆ ಆಕ್ರಮಣಕಾರಯ ಹಿನ್ನೆಲೆ ಜೀವನದಲ್ಲಿ ಆಟವಾಡುತ್ತದೆ

    ಪ್ರತಿಕ್ರಿಯೆ
  14. Anonymous

    ಸಂಧ್ಯಾ ಆ ಕುಂಕುಮದ ಹುಡಿ ಹೆಂಗಸಿನಂತಹವರನ್ನ ನೋಡಿರುವೆ. ಬಹು ಅಪಾಯದ ಪಾತಿವ್ರತ್ಯ ಇದು.

    ಪ್ರತಿಕ್ರಿಯೆ
  15. Rohini Satya

    ಹೌದು ! ಉಪೇಕ್ಷೆಗಿಂತ ವಿಷವಿಲ್ಲ. ನೀವು ಹೇಳಿದಹಾಗೆ ದಾಂಪತ್ಯ ಕ್ರೌರ್ಯದಲ್ಲಿ ಬಲಹೀನ ವ್ಯಕ್ತಿತ್ವವೇ ಸೋಲುವುದು. ಹಾಗೆಯೇ ಈ ಕ್ರೌರ್ಯಕ್ಕೆ ಲಿಂಗ ಭೇದವಿಲ್ಲ ಹೌದು.
    ಆ ಆತ್ಮವಿಶ್ವಾಸದ , ಉಪೆಕ್ಷೆಯ ವಿಷಕ್ಕೆ ಸಡ್ಡು ಹೊಡೆಯುವ ಅವಳ ಆ ನಗು ಮಾಸದಿರಲಿ. ಮನ ಮಿಡಿಯುವ ಲೇಖನ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: