ಡೈಲಿಬುಕ್ : 'ಎಡವಿ ಬಿದ್ದ ದೇವರು'

– ಸಿರಾಜ್ ಬಿಸರಳ್ಳಿ

ಕೊಪ್ಪಳ

ಜನೇವರಿ 25 ರಂದು ಕೊಪ್ಪಳದಲ್ಲಿ ಕನ್ನಡದ ಖ್ಯಾತ ಕಥೆಗಾರ, ಕಾದಂಬರಿಕಾರರಾದ ಕುಂ.ವೀರಭದ್ರಪ್ಪನವರು ‘ಎಡವಿ ಬಿದ್ದ ದೇವರು’ ಕೃತಿ ಲೋಕಾರ್ಪಣೆ ಮಾಡಿ, ಈ ಕವನ ಸಂಕಲನ ಕಾವ್ಯ ಮಾದರಿಯ ಒಂದು ಪರಿಪೂರ್ಣ ಕೃತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
2007 ರಲ್ಲಿ ತಮ್ಮ 26 ನೇ ವಯಸ್ಸಿಗೇ ‘ಕಗ್ಗತ್ತಲು’ ಕವನ ಸಂಕಲನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಪಡೆದು, ಕಾವ್ಯ ಲೋಕದಲ್ಲಿ ಭರವಸೆ ಮೂಡಿಸಿದ್ದವರು ಮಹೇಶ ಬಳ್ಳಾರಿ. ತ್ವರಿಗತಗತಿಯಲ್ಲಿ ಮುಂದಿನ 3 ವರ್ಷಗಳಲ್ಲಿ ಮತ್ತೊಂದು ಕವನ ಸಂಕಲನ ಮತ್ತು ಮಕ್ಕಳ ಕಥಾ ಸಂಕಲನದ ನಂತರ ಐದಾರು ವರ್ಷಗಳ ಅಂತರ ಕಾಯ್ದುಕೊಂಡರು. ಮಹೇಶರ ಕಾವ್ಯ ವಿಸ್ತಾರಕ್ಕೆ ಈ ಅಂತರ ಬಹಳ ಉಪಯುಕ್ತವಾಯಿತು.

ಕಳೆದ ತಿಂಗಳು ಬಿಡುಗಡೆಯಾದ ‘ಎಡವಿ ಬಿದ್ದ ದೇವರು’ ಕವನ ಸಂಕಲನ ರಾಜ್ಯಮಟ್ಟದಲ್ಲಿ ಗಮನ ಸೆಳೆದಿರುವ/ಸೆಳೆಯುತ್ತಿರುವ ಕೃತಿಯಾಗಿದೆ. ಇವರ ತಂದೆ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕವಿ ಗವಿಸಿದ್ಧ ಎನ್. ಬಳ್ಳಾರಿಯವರ ಕಾವ್ಯದ ಮುಂದುವರಿದ ಭಾಗವಾಗಿ, ತಂದೆಯ ವಾರಸುದಾರನಾಗಿ ಕಾವ್ಯಲೋಕಕ್ಕೆ ಮರಳಿ ತಂದೆಯನ್ನು ನೆನಪಿಸುವಂತೆ ಮಾಡಿರುವ ಶಕ್ತಿಶಾಲಿ ಕವಿ ಮಹೇಶ ಬಳ್ಳಾರಿ.
ಮೈಸೂರು ದಸರಾ ಮತ್ತು ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ತಮ್ಮ ಪ್ರಭಾವ ಬೀರಿದ್ದಾರೆ. ಜಿಲ್ಲಾ ಮಟ್ಟದಲ್ಲಂತೂ ಇವರು ವಯಸ್ಸಿಗೆ ಮೀರಿದ ಹೆಸರು ಪಡೆದಿರುವ ಸದ್ದಿಲ್ಲದ ಕವಿ. ಆಂಗ್ಲಸಾಹಿತ್ಯದ ಪರಿಣಾಮ ನಿಚ್ಚಳವಾಗಿ ಇವರ ಮೇಲೆ ಬೀರಿದೆ ಎಂದರೆ ತಪ್ಪಾಗಲಾರದು.
ಕಾವ್ಯದ ಶೈಲಿ ದಕ್ಕಿಸಿಕೊಂಡಿರುವ ಇವರ ಕವಿತೆಗಳು ಅಕ್ಷರಗಳ ಸುಂದರ ಇಟ್ಟಿಗೆಗಳಂತಿವೆ. ಸಂಕಲನದ 50 ಕವಿತೆಗಳು ವಿವಿಧ ಸಮಸ್ಯೆಗಳು, ಸಮಾಜದ ಅಂಕುಡೊಂಕು, ಬದುಕು, ಜೀವನಪ್ರೀತಿ, ಜನಪ್ರೀತಿಗಳ ಸಮ್ಮಿಳನವಾಗಿವೆ.
ಗಮನ ಸೆಳೆದಿರುವ ಕೃತಿಯ ತಲೆಬರಹ ‘ಎಡವಿ ಬಿದ್ದ ದೇವರು’ ಮನುಷ್ಯ ದೇವರು, ದೇವರ ಅವತಾರಗಳನ್ನು ದುರ್ಬಳಕೆ ಮಾಡಿಕೊಂಡಿರುವ, ಸ್ವಾರ್ಥಕ್ಕೆ ದುರುಪಯೋಗಪಡಿಸಿಕೊಂಡಿರುವ ಉತ್ತಮ ಕವಿತೆ.
‘ಶಾಹಿ’ಗಳ ಬಾಯಿಯಾದ, ನಿಶ್ಚಲ ಕಾಯಿಯಾದ
ಕೈಗೊಂಬೆಯಾದ, ತೊಗಲು ಗೊಂಬೆಯಾದ
ಗಳಿಗೆಗೆ ತಪ್ಪುದಂಡವಾದ
ಗಳಿಕೆಗೆ ವಸೂಲಿದಾರನಾದ
ಜಾತಿಯಾದ, ಭೀತಿಯಾದ
ಎನ್ನುತ್ತ ಮುಂದುವರೆಯುವ ಕವನ ದೇವರ ಅವತಾರಗಳನ್ನು ಮನುಷ್ಯ ಸೃಷ್ಟಿಸಿದ್ದಾನೆಂಬ ಕಲ್ಪನೆಯತ್ತ ಕೊಂಡೊಯ್ಯುತ್ತದೆ.
ಪ್ರಚಲಿತ ಸಮಸ್ಯೆಗಳಿಗೆ ಅಕ್ಷರ ರೂಪ ಕೊಟ್ಟು, ಚಾಟಿ ಏಟು ಬೀಸುವದರಲ್ಲಿ ಇವರ ಕವಿತೆಗಳು ಬಹಳ ಗಮನ ಸೆಳೆಯುತ್ತವೆ. ಅಂತಹ ಮೂರ್ನಾಲ್ಕು ಕವಿತೆಗಳು ‘ಎಡವಿ ಬಿದ್ದ ದೇವರು’ ಸಂಕಲನದಲ್ಲಿದೆ.
ಎಲ್.ಕೆ. ಆಡ್ವಾಣಿಯವರ ಸ್ಥಿತಿಯನ್ನು ಚಿತ್ರಿಸಿದ ರೀತಿ ಮನಮೋಹಕವಾಗಿದೆ
ತಾನೇ ಸಾಕಿದ ಅರ್ಜುನ
ಮುಳುವಾದ, ಮುಳ್ಳಾದ, ಮುಳುಗಿಸಿಬಿಟ್ಟ
ಮರುಕಳಿಸುತ್ತದೆ ಭಾರತ ಯುದ್ಧದ ನೆನಪು
ಒಂದೇ ವ್ಯತ್ಯಾಸ
ಅಲ್ಲಿ ಭೀಷ್ಮಾರ್ಜುನರು ಬೇರೆ ಬೇರೆ ಕಡೆ
ಇಲ್ಲಿ ಒಂದೇ ಪಡೆ!

ಲೋಹದ ಮನುಷ್ಯನಿಗಿಂತ
ಲೋಕ ತಿರುಗಿಸುವ ಲೋಲಕದ ಮನುಷ್ಯ ಬೇಕಾಗಿದ್ದಾನೆ.
ರಾಜಕೀಯದ ಒಳ-ಹೊರಗು ಅಣಕಿಸುವ ‘ಸ್ವಚ್ಛ ಭಾರತ’ದಲ್ಲಿ :
ಕಸಬರಿಗೆಗಳಿಗೀಗ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ
ಹೌದು ಇದು ಕಸಬರಿಗೆಗಳ ಕಾಲ
ಕತ್ತೆಗೊಂದು ಕಾಲ, ಕಸಬರಿಗೆಗೊಂದು ಕಾಲ
ವ್ಯತ್ಯಾಸ ಒಂದೇ : ಕತ್ತೆಗೆ ಬಾಲ ಹಿಂದೆ, ಕಸಬರಿಗೆಗೆ ಮುಂದೆ
ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ಈ ಪ್ರತಿಮೆಗಳ ಮೂಲಕ ಅನಾವರಣಗೊಳಿಸಿದ್ದಾರೆ.
ಸಂಕೀರ್ಣವೆನ್ನಬಹುದಾದ, ಅರ್ಥಗಭರ್ಿತ ಮಹತ್ವದ ಕವನಗಳು ಕವಿಯ ಪ್ರಬುದ್ಧತೆಯನ್ನು ತೋರಿಸಿವೆ. ಆಯಾ ಆಯಾಮಗಳಿಗೆ ವಿವಿಧ ಅರ್ಥಕೊಡುವ ಕಾವ್ಯ ಗಾಂಭಿರ್ಯತೆಯನ್ನು ಇವು ಪ್ರದರ್ಶಿಸುತ್ತವೆ.
‘ಹಸಿ ಮಣ್ಣಿನೊಳಗಣ
ನೀರ ವಾಸ್ತವ್ಯ ಕಸಿವ ಹಕ್ಕು
ಸೂರ್ಯನಿಗುಂಟು’ (ಪರಸ್ಪರ)
 
ಒಂದು ಕೇಂದ್ರ ಪ್ರತೀಕ
ಅದರ ಸುತ್ತುವರಿಯೋ ಹಾವು-ಏಣಿ ಆಟ
ಕಾಯಿಗೆ – ಪ್ರತಿಕಾಯಿ
ಅಸ್ತಿತ್ವಕ್ಕೆ – ಸಾರ್ಥಕ್ಯಕ್ಕೆ (ಬಣ್ಣಗಳ ಪಯಣ)
 
ಒಂದು ನಿನ್ನೆಗೆ ಜೀವ ಕೊಟ್ಟರೆ
ಹತ್ತಾರು ನಾಳೆಗಳು ಅಡಿಯಿಡುತ್ತವೆ
ವಿವಿಧ ನೋಟಗಳು, ಓಘಗಳು
ಹಾಳೆಗಳಲ್ಲಿ ತುಂಬಿಕೊಳ್ಳುತ್ತವೆ (ಬುತ್ತಿಡಬ್ಬಿ)
 
ಹೋರಾಟದ ಹಾದಿ ಮತ್ತು ಹಾಡುಗಳು ಸಮಸ್ಯೆ ಮತ್ತು ಸಮಕಾಲೀನ ನೈಜತೆಗೆ ಹಿಡಿದ ಕನ್ನಡಿಯಾಗಿವೆ. ಕವಿಯೊಳಗಿನ ಮನಸ್ಸು ಬೆವರಿಗೆ ಇರುವ ಮಹತ್ವ ಮತ್ತು ಬೆವರಿಗೆ ದಕ್ಕುವ ಪ್ರತಿಫಲ ಕುರಿತು ಕಾಳಜಿ ವಹಿಸುತ್ತದೆ. ದುಡಿಯುವ ವರ್ಗದ, ಶೋಷಿತರ ಪರವಾದ ಆಶಯಗಳು ಮತ್ತು ದಮನಿತರ ವಿರೋಧಿ ಅಲೆಗಳು ಇವರ ಸಾಲುಗಳಲ್ಲಿವೆ. ‘ಬೆವರಿನ ಹೆಜ್ಜೆಗಳು’ ಕವಿತೆಯಲ್ಲಿ : ಮೆರವಣಿಗೆಯ ಹಾದಿಯಲ್ಲೆಲ್ಲ
ಸಾವಿರ ಮುಳ್ಳುಗಳ ನೆಡಬಹುದು ನೀವು
ಕೂಗುವ ಧಿಕ್ಕಾರಗಳ ಶಬ್ದ ಕೇಳದಿರೆಂಬ
ಸಾಲುಗಳು ಹೋರಾಟದ ಹಾದಿ ತುಂಬಿರುವ ಮುಳ್ಳುಗಳ ಹರಿತ ತಿಳಿಸುತ್ತವೆ. ಹೋರಾಟದ ಸಾಫಲ್ಯತೆ ಕಾಣುವ ಹಂಬಲ ವ್ಯಕ್ತಪಡಿಸಿರುವ ಕವಿ :
‘ಬೆಳಕು ಕಾಣಬೇಕು ನಾವು ಬೆಳಕು ಕೊಳ್ಳಬೇಕು
ಹಿಡಿಯಬೇಕು ರವಿಯ, ಪಡೆಯಬೇಕು ಸವಿಯ
ತಮದ ಪರದೆಯ ನೂಕಾಚೆ ದೂರ-ದೂರ’ ಎನ್ನುತ್ತ ಭರವಸೆಗಾಗಿ ಕಾಯುತ್ತಾನೆ. (ಬೇಕು ನಾವು ..)
 
ಬಹಳ ದೂರಿಲ್ಲ ಹೊಸ ಯುಗದ ಹುಟ್ಟು
ಸಡಿಲವಾಗಿವೆ ನಿಮ್ಮಬೇರುಗಳು
ಮಲಗಿದ್ದಾಗಲೂ ಎಚ್ಚರವಾಗಿವೆ ನಮ್ಮ ಕನಸುಗಳು ಎಂದು ‘ಪ್ರತಿರೋಧ’ ತೋರುತ್ತಾನೆ.
ಜಾತಿ-ಭೇದಗಳ ಗೋಡೆಗಳೊಳಗೆ ಬಂಧಿಯಾಗಿರುವ ಮನುಷ್ಯನ ಹುಡುಕಾಟದಲ್ಲಿರುವ ಕವಿ ಜಾಹೀರಾತಿನ ಮೊರೆ ಹೋಗಿದ್ದಾನೆ. ಮನುಷ್ಯ-ಮನುಷ್ಯರ ನಡುವಿನ ಸಂಬಂಧಗಳ ಕೊಂಡಿಯೇ ಮಾಯವಾಗಿರುವ ಈ ಸಂದರ್ಭದ ಬಹು ಉಪಯುಕ್ತ ವಸ್ತು ವಿಷಯವಿದು.
ಮನಸುಗಳ ಬೆಸೆಯುವ
ಪ್ರಬುದ್ಧತೆಯ ಪ್ರಭುತ್ವ
ಇನ್ನೂ ಮರೀಚಿಕೆಯಾಗಿದೆ
ಜಾಹೀರಾತು ಹಾಕಲಾಗಿದೆ ಎಲ್ಲ ಕಡೆ
‘ಮನುಷ್ಯರು ಬೇಕಾಗಿದ್ದಾರೆ’!
ವೈಯಕ್ತಿಕ ಜೀವನವನ್ನು ಕಾವ್ಯರೂಪಕ್ಕಿಳಿಸುವುದಲ್ಲಿಯೂ ಮಹೇಶ ಬಳ್ಳಾರಿ ಸಫಲತೆ ಹೊಂದಿದ್ದಾರೆ. ಇವರ ತಂದೆ ಗವಿಸಿದ್ಧ ಬಳ್ಳಾರಿ ಕಾವ್ಯಲೋಕದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ದೊಡ್ಡ ಹೆಸರು ಮಾಡಿದವರು. ತಂದೆಯೊಂದಿಗೆ ತನ್ನನ್ನು ಸಮೀಕರಿಸಿಕೊಂಡು ‘ಸೂರ್ಯನೊಂದಿಗೆ’ ಸಂವಾದದಲ್ಲಿ ತೊಡಗುತ್ತಾನೆ.
ಜಗಕೆಲ್ಲ ಬೆಳಕ ಹರಿಸಿದೆ ನಿಜ
ನನಗಿಲ್ಲ.
ನನಗಲ್ಲ – ನಮ್ಮಪ್ಪನಿಗೂ!
ಅದಕ್ಕಾಗಿ ‘ಕಪ್ಪುಸೂರ್ಯ’ನ ಬೆನ್ನು ಹತ್ತಿದ್ದ ಆತ
ತಡಕಾಡಿ ನೆಲೆಗಾಗಿ ನೆಲದ ತಳ ಸೇರಿದ
ಕಲ್ಲು-ಮುಳ್ಳಿನ ಹಾಡ ಹಾಡುತ್ತ ಬೆಟ್ಟ ಗುಡ್ಡಗಳ ಏರಿದ
ಸಿಗದ ‘ಸಂಜೀವಿನಿ’ಗಾಗಿ ಅಲೆದಾಡಿ, ನರಳಾಡಿದ
ಬದುಕ ತೇರಿನ ಹೆಜ್ಜೆ ಗುರುತುಗಳ ತುಂಬಾ
ರ(ಸ್ತೆ)ಕ್ತ – ಸಂಚಾರ ನಡೆಸಿದ
ನೀನು ಮಾತ್ರ ಬೆಳಕ ಕೊಡಲಿಲ್ಲ
ಎಂದು ಜರೆದಿದ್ದಾರೆ. ‘ಕಪ್ಪುಸೂರ್ಯ’ ಎಂಬ ಶಬ್ದಕ್ಕೆ ಗವಿಸಿದ್ಧ ಬಳ್ಳಾರಿಯವರು ಹೊಸ ಅರ್ಥ ಕೊಟ್ಟಂತಹ ಕವಿ. ಅವರನ್ನು ಸಮೀಪದಿಂದ ಬಲ್ಲವರೆಲ್ಲರೂ ‘ಕಪ್ಪುಸೂರ್ಯ’ನೆಂತಲೇ ಅವರನ್ನು ಕರೆಯುತ್ತಿದ್ದದ್ದು. ಇವರ ಪಾಲಿಗೆ ಬೆಳಕಿನ ಸೂರ್ಯ ಗ್ರಹಣ ರೂಪದಲ್ಲಿ ಕಾಡಿದ್ದ. ಇದನ್ನು ಸೂಚ್ಯವಾಗಿ ಕಾಣಿಸಿರುವ ಮಹೇಶ ಬಳ್ಳಾರಿ, ಕವಿತೆಯ ಕೊನೆಯಲ್ಲಿ ತನಗೂ ಸೂರ್ಯನ ಹಂಗಿನ ಅವಶ್ಯಕತೆ ಇಲ್ಲವೆಂದು ಸಾರುತ್ತಾರೆ.
ಸಮಾಜದ ಹೇಯ ಕೃತ್ಯಗಳಿಗೆ ಪ್ರತಿಭಟನಾತ್ಮಕವಾಗಿ ‘ಹೆಣಬರಹ’, ‘ಹುಚ್ಚ’ ಕವಿತೆಗಳು ನಿಲ್ಲುತ್ತವೆ. ಹೈ.ಕ. ಭಾಗದ ಕೊಪ್ಪಳದ ಟಾಂಗಾವಾಲಾಗಳ ನಿಜಸ್ಥಿತಿಯ ಕರುಣಾಮಯ ಸ್ಥಿತಿ ‘ಬದುಕು ಜಟಕಾ ಬಂಡಿ’ಯಲ್ಲಿ ಚಿತ್ರಿತವಾಗಿದೆ. ವಿಶಿಷ್ಟ ಮಾದರಿಯ ‘ಒಂದು ಪತ್ರ’ವಂತೂ ಸಂಕಲನದ ಅತ್ಯಂತ ಮಹತ್ವದ ಹಾಗೂ ಗಮನ ಸೆಳೆಯುವ ಕವಿತೆ.
ತಮ್ಮ ಓಣಿಯಲ್ಲಿರುವ ‘ಹುಂಚೀಗಿಡ’ ಕವಿಗೆ ಒಂದು ಜೀವಂತ ಶಾಸನವಾಗಿ ಪರಿಣಮಿಸಿದೆ.
ನಮ್ಮಪ್ಪ ಇದೇ ಮರದ ಕೆಳಗೆ
ಅಲಾಯಿ ಕುಣಿಯ ಸುತ್ತ ಓಡಾಡಿ
‘ಊದುಬತ್ತಿ ಬೇಕೆ?’
‘ಕಪರ್ೂರ ಬೇಕೆ?’ ಎಂದು ಕೂಗುತ್ತ
ಹೊಟ್ಟೆಗಾಗಿ – ಅಲೆದಾಡಿದ್ದನಂತೆ
ಎಂಥದೋ ಧೂಮಕೇತು ಬಡಿದಪ್ಪಳಿಸಿದಂತಾಗುತ್ತದೆ
ಎದೆಗೆ, ನೆನಪುಗಳ ಬೆನ್ನು ಹತ್ತಿದಾಗ.
 
ಕವಿತೆಗಳ ಜೊತೆಗೆ ಒಂದು ಗಜಲ್ ಮಾದರಿಗೂ ಕೈ ಹಾಕಿರುವ ಕವಿ
ಅಂಗೈಯೊಳಡಗಿದ ಭಯದ ಸ್ವರ್ಗ ಬೇಡ
ನರಕವೇ ಇರಲಿ, ಅಲ್ಲಿ ಶಾಂತಿಯಿದ್ದರೆ ಸಾಕು
ಎನ್ನುತ್ತ ಗಾಂಧೀಜಿಯ ತತ್ವ, ಶಾಂತಿ, ಅಹಿಂಸಾ ನೆಲೆಗಳನ್ನು ನೆನಪಿಸಿಕೊಳ್ಳುತ್ತಾನೆ. ಮೇಲಿಂದ ಮೇಲೆ ನಡೆಯುವ ಕೋಮುಗಲಭೆಗಳನ್ನು ವಿಡಂಬನೆಯ ಮೂಲಕ ‘ಒಂದು ಬೆಂಕಿನ ಸುತ್ತ’ ಕವನದಲ್ಲಿ ಕವಿ ಚಿತ್ರಿಸಿದ್ದಾನೆ.
ಬೆಂಕಿಬಿದ್ದ ಗುಡಿಯೊಳಗಿನ
ಈಶ್ವರನೇ ಸುಮ್ಮನಿದ್ದ
ದೂರದ ಮಸೀದಿಯ ಅಲ್ಲಾ ನಿಗೆ ಶುರುವಾಯ್ತು ಪ್ರಾಣಭಯ!
ಸರಳ ಸಾಲುಗಳು, ಜೀವನ ಪ್ರೀತಿಯ ಧ್ಯೋತಕವಾಗಿ ಗಮನ ಸೆಳೆಯುವ, ಓದುಗರ ಒರೆಗೆ ಹಚ್ಚುವ ಕೆಲವು ಸಾಲುಗಳಿವು :
ಬೀಳಿಸಬೇಕು
ಮತ್ತೆ ಜೋಡಿಸಬೇಕು
ಬದುಕು ಲಗೋರಿಯಾಟ (ಲಗೋರಿ)
 
ಒಂದು ಹಾರು ಹಕ್ಕಿಗೆ
ನೂರು ರೆಕ್ಕೆಗಳು
ಸಾವಿರ ದಾರಿಗಳು (ತುಮುಲ)
 
ಸಾಕು ‘ಶೆಟಿಗೆವ್ವ’ನ ನೆಪ
ಬರೆಯಬೇಕಿದೆ
ನವ ಮುನ್ನುಡಿ ಬದುಕಿನ ಭಾಷ್ಯಕ್ಕೆ (ನೆಮ್ಮದಿಯ ನಾಳೆಗಳಿಗಾಗಿ)
 
ನಮ್ಮೂರ ಬುದ್ಧ ನೀನು
ನೀ ನಡೆದ ಹೆಜ್ಜೆ-ಹೆಜ್ಜೆಯಲ್ಲೊಂದು ಬೋಧಿವೃಕ್ಷ
ಪ್ರತಿಧ್ವನಿಸುತ್ತಿದೆ ತಂಬೂರಿಯ ತಾಳ
ಅರಿತವರಿಗೆ ಮಾತ್ರ ಇದರ ಆಳ (ಶರೀಫರು)
 
ಮನೆಯ ಮೂರು ಬಾಗಿಲುಗಳಿಗೆ
ಒಂದೇ ಚಿಲಕ
ಚರಣಗಳು ಹತ್ತಾರು, ಒಂದೇ ಪಲ್ಲವಿ
ದಡಗಳ ನಡುವೆ ಕೊಂಡಿಯಾಗಿರುವ ಸೇತುವೆ (ತಾಯಿ)
 
ಐತಿಹಾಸಿಕ ಹಂಪಿಯಲ್ಲಿ ನಡೆದಾಡುವಾಗ ಇಡೀ ಸಾಮ್ರಾಜ್ಯ, ಸಾಮ್ರಾಜ್ಯ ಕಟ್ಟಿದವರೇ ಕಣ್ಣ ಮುಂದೆ ಭಾಸವಾದಂತಾಗುತ್ತದೆ ಕವಿಗೆ : ಅಕ್ಕ-ಪಕ್ಕ ಇಬ್ಬಿಬ್ಬರು ನಡೆದು ಬಂದಂತಾಯಿತು
ದೂರ ಸರಿದು ನಿಂತು ಬಾಗಿದವು ಗಿಡಮರಗಳು ಒಮ್ಮೆಲೇ
ಬಹುಪರಾಕ್ ಹೇಳುತ್ತ
 
ಆ ಕಡೆ ಅವರಿಬ್ಬರು : ಹಕ್ಕ-ಬುಕ್ಕರು
ಈ ಕಡೆ ಇವರಿಬ್ಬರು : ತುಂಗ-ಭದ್ರೆಯರು
ನಡುವೆ ನಾನು ಮೂಕಸಾಕ್ಷಿ
 
ಇದೇ ಅಲ್ಲವೇ ಇವರ ಸಮುದ್ರ ಸಾಮ್ರಾಜ್ಯ?
ಬೊಗಸೆ ಕಣ್ಣುಗಳಿಗೆ ಸಾಲದಾಯಿತು
ಕಣ್ತುಂಬಿಸಿಕೊಳ್ಳಲು (ಹಂಪಿಯಲ್ಲೊಂದು ದಿನ)
ಇಂತಹ ಸಾಲುಗಳು ಸಂಕಲನದ ಶಕ್ತಿಯಾಗಿವೆ. ಭಾವಗೀತೆಗಳ ಸಾಲಿಗೆ ಸೇರಬಹುದಾದ ರಾಗ ಸಂಯೋಜಿಸಬಹುದಾದ ‘ಪಂಜರದ ಹಕ್ಕಿ ಹಾಡುತ್ತಿದೆ’, ‘ಬೇಕು ನಾವು’, ‘ಗಜಲ್’ ಗಳು ಹಾಡಿನ ರೂಪ ತಾಳಬೇಕಾದ ಅವಶ್ಯಕತೆ ಇದೆ ಎಂಬ ರಂಗಕಮರ್ಿ ಹಾಲ್ಕುರಿಕೆ ಶಿವಶಂಕರ್ ಇವರ ಮಾತು ನಿಜವಾದದ್ದು.
ಒಟ್ಟಾರೆ 2015 ನೇ ವರ್ಷದ ಕಾವ್ಯ ವಲಯದಲ್ಲಿ ‘ಎಡವಿ ಬಿದ್ದ ದೇವರು’ ಸಂಚಲನ ಮೂಡಿಸಿದರೆ ಆಶ್ಚರ್ಯವಿಲ್ಲ. ಹಲವು ವಿಮರ್ಶಕರು, ಓದುಗರು ಕೃತಿ ಕುರಿತು ಮೆಚ್ಚುಗೆ ಮಾತುಗಳನ್ನೂ ಆಡಿದ್ದು ಕೃತಿಗೆ ಧನಾತ್ಮಕ ಕೊಡುಗೆ ನೀಡಿದಂತಾಗಿದೆ. ಕಾವ್ಯಾಸಕ್ತರು ಕೃತಿ ಕೊಂಡು ಓದಬೇಕೆನ್ನುವ ವಿನಂತಿ ನನ್ನದು.
 

‍ಲೇಖಕರು G

May 22, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: