ಸಂಧ್ಯಾರಾಣಿ ಕಾಲಂ : ’ಅಲ್ಲಿರುವುದು ನಮ್ಮ ಮನೆ’ ಎಂದರೂ…


ಯಾಕೋ ನನಗೆ ಈ ಮೇಲಿನ ಸಾಲುಗಳೊಂದಿಗೆ ಸಮನ್ವಯಿಸಿಕೊಳ್ಳಲು ಸಾಧ್ಯವಾಗೇ ಇಲ್ಲ… ಅಲ್ಲೆಲ್ಲೋ ಇರಬಹುದಾದ ಅಥವಾ ಇಲ್ಲದೆಯೂ ಇರಬಹುದಾದ ಮನೆಗಿಂತಾ ನನಗೆ ನನ್ನ ಸ್ಪರ್ಶಕ್ಕೆ ನಿಲುಕುವ ಮನೆಯ ಬಗ್ಗೆಯೇ ಮೋಹ, ವ್ಯಾಮೋಹ, ಪ್ರೇಮ ಎಲ್ಲಾ. ಸುನಿತಾ ದೇಶಪಾಂಡೆ ಅವರು ಬರೆದ ಆತ್ಮಚರಿತ್ರೆಯ ಕನ್ನಡ ಅನುವಾದ ’ಬಾಳು ಸೊಗಸಾದರೂ…’ ಓದುತ್ತಿದ್ದೆ. ಸುಮಾರು ೭೦ ವರ್ಷಗಳ ಹಿಂದೆ ಸಹ ಒಂದು ಹೆಣ್ಣು ಎಷ್ಟು ಅದ್ಭುತವಾಗಿ ನಿರ್ಭಿಡೆಯಿಂದ ಯೋಚಿಸುತ್ತಿದ್ದಳು ಎನ್ನುವುದೇ ನನಗೆ ಒಂದು ಅಚ್ಚರಿ. ಈ ವಾರ ಆ ಪುಸ್ತಕದ ಬಗ್ಗೆಯೇ ಬರೆಯಬೇಕೆಂದಿದ್ದೆ, ಆದರೆ ಆ ಪುಸ್ತಕ ಇನ್ನೂ ನನ್ನ ಮನಸ್ಸಿನಾಳಕ್ಕೆ ಇಳಿದು ನನ್ನದಾಗುವ ಮೊದಲೇ ಆ ಪುಸ್ತಕದಲ್ಲಿ ನನ್ನನ್ನೂ, ಆಕೆಯನ್ನೂ ಬಂಧಿಸುವ ಒಂದು ತಂತು ಹಠಾತ್ತಾಗಿ ನನ್ನ ಅರಿವಿಗೆ ಬಂದು ಆಕೆ ಇನ್ನಷ್ಟು ನನಗೆ ಆಪ್ತವಾದರು. ಪುಸ್ತಕದ ಬಗ್ಗೆ ಮುಂದಿನ ವಾರ ಬರೆದೇನು, ಆದರೆ ಈಗ ಬರೆಯಬೇಕೆಂದಿರುವುದು ಒಂದು ಮನೆಗೆ ಸಹ ಹೇಗೆ ಒಂದು ವ್ಯಕ್ತಿತ್ವ ಇರುತ್ತದೆ ಮತ್ತು ನಮ್ಮ ಮತ್ತು ಮನೆಯ ವ್ಯಕ್ತಿತ್ವ ಎರಡೂ ಹೇಗೆ ನಮ್ಮ ಮತ್ತು ನಮ್ಮ ಮನೆಯಲ್ಲಿ ಪ್ರತಿಬಿಂಬಿತವಾಗುತ್ತದೆ ಎನ್ನುವುದರ ಬಗ್ಗೆ.
ಆ ಪುಸ್ತಕದಲ್ಲಿ ಸುನಿತಾ ಅವರ ಎಲ್ಲಾ ನೆನಪುಗಳು, ಪತಿ, ಮರಾಠಿಯ ಪ್ರಸಿದ್ಧ ಲೇಖಕ, ನಾಟಕಕಾರ, ಸಂಗೀತಕಾರ ಪು ಲ ದೇಶಪಾಂಡೆ ಅವರೊಡನೆ ಹಂಚಿಕೊಂಡ ಬಾಳಿನ ಏರಿಳಿತಗಳು, ನಗು – ನೋವು, ಚುಚ್ಚುವ ಒಂಟಿತನ, ಹಂಚಿಕೊಂಡ ಬೆಳದಿಂಗಳು, ಭೀಮಸೇನ ಜೋಷಿಯವರ ಸಂಗೀತ, ಕುಮಾರ ಗಂಧರ್ವ ಅವರ ಹಾಡುಗಾರಿಕೆಗೆ ಸಾಥ್ ನೀಡಿದ ಜಾಜಿ ಬಳ್ಳಿ ಎಲ್ಲದರ ಜೊತೆಯೂ ಹಾಸುಹೊಕ್ಕಾಗಿರುವುದು ಆ ಘಟನೆ ನಡೆದಾಗ ಅವರಿದ್ದ ಮನೆಯ ಅಸ್ತಿತ್ವ. ಇಲ್ಲೆಲ್ಲೂ ಮನೆ ಅವರಿಗೆ ಒಂದು ವಸ್ತುವಾಗಿ ಕಂಡೇ ಇಲ್ಲ, ಮನೆ ಅವರ ಮಟ್ಟಿಗೆ ಆ ಎಲ್ಲಾ ಘಟನೆಗಳಲ್ಲೂ ಅವರ ಜೊತೆಗಿದ್ದ ಸಂಗಾತಿ. ಓದುತ್ತಾ ಓದುತ್ತಾ ಯಾಕೋ ನನಗೆ ನಾನು ಬಿಟ್ಟು ಬಂದ ಎಲ್ಲಾ ಮನೆಗಳೂ ನೆನಪಾದವು …
ಅಪ್ಪನ ಕೆಲಸದಲ್ಲಿ ಟ್ರಾನ್ಸ್ ಫರ್ ಮತ್ತು ಕ್ವಾರ್ಟರ್ಸ್ ಗಳು ಅವಿಭಾಜ್ಯ ಅಂಗ. ನನ್ನ ನೆನಪು ಮೊದಲು ತೆರೆದುಕೊಳ್ಳುವುದು ಕೆಜಿಎಫ್ ನ ಕಾಲನಿಗೆ. ಮನೆ, ಮನೆ ಮುಂದಿದ್ದ ಜಾಗ, ಅಲ್ಲಿ ಬೆಳೆಯುತ್ತಿದ್ದ ತರಕಾರಿಗಳು, ಮನೆಯಲ್ಲಿದ್ದ ಎರಡು ಸೀಬೆ ಮರ, ಅಮ್ಮ ಮಲಗಿದ್ದಾಗ ಕದ್ದು ಸೀಬೆಹಣ್ಣು ತಿನ್ನಲು ಮರ ಹತ್ತಿ ಬಿದ್ದು ಕೈ ಮುರಿದುಕೊಂಡಿದ್ದು, ಹಟದಿಂದ ಮತ್ತೆ ಅದೇ ಮರ ಹತ್ತಿದ್ದು.. ಎಲ್ಲಾ. ಆಗ ತಾನೆ ತಂಗಿ ಹುಟ್ಟಿದ್ದಳು, ಸಹಜವಾಗಿಯೇ ಅಮ್ಮನ ಗಮನ ಅವಳ ಮೇಲೆ, ನನ್ನ ಒಡನಾಟ ಜಾಸ್ತಿ ಅಪ್ಪನ ಜೊತೆಯೇ. ಅಪ್ಪ ಒಮ್ಮೆ ಬೆಳಗ್ಗೆಯೇ ಕೆಲಸಕ್ಕೆ ಹೋಗಿದ್ದರು, ಅಮ್ಮ ಏನೋ ಬೈದರು ಅಂತ ೬-೭ ವರ್ಷಗಳ ಹುಡುಗಿ ನಾನು ಅಪ್ಪನ ಆಫೀಸು ಹುಡುಕುತ್ತಾ ರೈಲ್ವೆ ಹಳಿಗುಂಟ ನಡೆದು ಹೋಗಿದ್ದು, ಮನೆಯಲ್ಲಿ ನಾನು ಕಾಣದೆ ಅಮ್ಮ ಅಪ್ಪನಿಗೆ ಸುದ್ದಿ ಮುಟ್ಟಿಸಿ, ಅಪ್ಪ ನನ್ನನ್ನು ಹುಡುಕಿ …. ಈಗಲೂ ಕನಸಲ್ಲಿ ಏನನ್ನೋ ಹುಡುಕುತ್ತಾ ನಾನು ರೈಲ್ವೇ ಹಳಿಗುಂಟ ನಡೆದು ಹೋಗುವುದು ನಿಂತಿಲ್ಲಾ… ಹಾಗೆ ಅಪ್ಪ ನನ್ನನ್ನು ಹುಡುಕಿ ಮತ್ತೆ ಅದೇ ಮನೆಗೆ ಕರೆದುಕೊಂಡು ಹೋಗುವುದು ಕೂಡ!
ಆಮೇಲೆ ಕಾಲಕಾಲಕ್ಕೆ ಊರು ಬದಲಾಗುತ್ತಿತ್ತು, ಮನೆ ಬದಲಾಗುತ್ತಿತ್ತು. ಆದರೆ ಪ್ರತಿ ಸಲ ಮನೆ ಬಿಡುವಾಗಲೂ, ಮನೆಯ ಸಾಮಾನುಗಳನ್ನೆಲ್ಲಾ ಗಾಡಿಗೆ ತುಂಬಿದ ಮೇಲೆ ನಾನು ಮನೆಯ ಪ್ರತಿ ಕೋಣೆಗೂ ಹೋಗಿ ಸ್ವಲ್ಪ ಹೊತ್ತು ಕೂತಿದ್ದು, ಅದಕ್ಕೆ ಬಾಯ್ ಹೇಳಿ ಬರುತ್ತಿದ್ದೆ! ಈ ವಯಸ್ಸಿನಲ್ಲೂ ನನಗೆ ಅದು ಹುಚ್ಚುತನವಾಗಿ ಕಾಣುವುದಿಲ್ಲ ಅಂದರೆ ನಂಬಬೇಕು ನೀವು!
ನಾನು ಬೆಳೆಯುತ್ತಾ ಹೋದ ಹಾಗೆ ಮನೆಯ ಬಗ್ಗೆ ನನ್ನ ಭಾವನೆ, ಕಲ್ಪನೆಗಳೂ ಬೆಳೆಯುತ್ತಾ ಹೋದವು, ಮನೆ ಅಂದರೆ ಹೀಗಿರಬೇಕು ಅನ್ನುವ ಆಸೆ, ಉತ್ಸಾಹ. ಅದನ್ನು ಚಂದಗೊಳಿಸುವ, ಚಂದ ಇರಿಸುವ ಉಮೇದು. ಈ ಖುರ್ಚಿಯನ್ನು ಆ ಕಡೆ ಸರಿಸಬೇಕು, ಈ ಕಿಟಕಿಗೆ ತೆಳು ಬಣ್ಣದ ಪರದೆ ಹಾಕಬೇಕು, ಬೀರುವಿನ ಮೇಲೆ ಸೂಟ್ ಕೇಸ್ ಬೇಡ, ಅಪರೂಪಕ್ಕೆ ಉಪಯೋಗಿಸುವುದು ಅಟ್ಟ ಹತ್ತಿ ಬಿಡಲಿ…. ಹೀಗೆ ಮನೆಯೆಂಬ ಪ್ರಪಂಚದಲ್ಲಿ ನನ್ನ ನೂರೆಂಟು ಯೋಜನೆಗಳು. ಆದರೆ ನನ್ನ ಈ ಎಲ್ಲಾ ಬದಲಾವಣೆಗಳೂ ಅಮ್ಮನಲ್ಲಿ ಒಂದು ಸಣ್ಣ ಅಸಹನೆಯನ್ನು ಮೂಡಿಸುತ್ತಿದ್ದವು. ಮನೆ ಆಕೆಯ ಪ್ರಪಂಚ, ಅಲ್ಲಿನ ಬದಲಾವಣೆಯಲ್ಲಿ ಅಮ್ಮನ ಕೈ ಇಲ್ಲದಿರುವುದು, ಅಭಿಪ್ರಾಯ ಕೇಳದಿರುವುದು ಎಲ್ಲೋ ಆಕೆಯ ಅಸ್ತಿತ್ವವನ್ನು ಪ್ರಶ್ನಿಸಿದಂತಾಗಿತ್ತು. ಆ ವಯಸ್ಸಿನಲ್ಲಿ ಅದು ನನಗೆ ಅರ್ಥವಾಗಿರಲೇ ಇಲ್ಲ.. ’ನೋಡು ಮನೇಲಿ ಯಾವಾಗಲೂ ಇರುವವಳು ನಾನು, ಎಲ್ಲೆಲ್ಲಿ ಯಾವ ಸಾಮಾನಿದ್ದರೆ ಅನುಕೂಲ ಅನ್ನೋದು ನನಗೆ ಗೊತ್ತಿರುತ್ತೆ, ಮುಂದೆ ನಿನ್ನ ಮನೇಲಿ ನಿನಗಿಷ್ಟ ಬಂದ ಹಾಗೆ ನೀನು ಜೋಡಿಸ್ಕೋ’ ಅಂತ ಒಮ್ಮೆ ಅಮ್ಮ ತಾಳ್ಮೆಗೆಟ್ಟು ಅಂದಿದ್ದರು. ಯಾಕೋ ಆ ಘಳಿಗೆಯಿಂದಲೇ ಹಠಾತ್ ವೈರಾಗ್ಯ ಬಂದಂತೆ ನಾನು ನನ್ನೆಲ್ಲಾ ಚಟುವಟಿಗಳನ್ನೂ ನನ್ನ ಓದುವ ಮೇಜಿಗೆ ಸೀಮಿತಗೊಳಿಸಿಕೊಂಡು ಬಿಟ್ಟಿದ್ದೆ!
ನಿನ್ನೆ ಹಿರಿಯರೊಬ್ಬರೊಡನೆ ಮಾತಾಡುತ್ತಿದ್ದಾಗ ಅವರು ಒಂದು ಆಸಕ್ತಿದಾಯಕ ವಿಷಯದ ಬಗ್ಗೆ ಗಮನ ಸೆಳೆದಿದ್ದರು, ’ತೌರೂರ ತಿಟ್ಟತ್ತಿ ತಿರುಗಿ ನೋಡ್ಯಾಳು’, ’ ಪಂಚಮಿ ಹಬ್ಬ ಉಳಿದಾವ ದಿನ ನಾಕ, ಅಣ್ಣ ಬರಲಿಲ್ಲ ಯಾಕೋ ಕರಿಯಾಕ’ ಇಂತಹ ಹಾಡುಗಳು ಈಗ ಎಷ್ಟು ಕಡಿಮೆ ಆಗಿದ್ದಾವೆ ನೋಡಿ. ಮೊದಲಿನ ಹಾಗೆ ತಾಯಿಯ ಸೆಂಟಿಮೆಂಟ್ ಈಗ ಸಾಹಿತ್ಯದಲ್ಲಿ, ಸಿನಿಮಾಗಳಲ್ಲಿ ಅಷ್ಟು ಚಲಾವಣೆಯಲ್ಲಿಲ್ಲ, ಮದುವೆ ಆಗಿ ಹೋಗುವಾಗ ಹೆಣ್ಣು ಸಹ ಮೊದಲಿನಷ್ಟು ಅಳೋದಿಲ್ಲ ಗಮನಿಸಿದ್ದೀರಾ ಅಂದಾಗ, ಅರೆ ಹೌದಲ್ಲ ಅನ್ನಿಸಿತ್ತು. ಅವರೇ ಮುಂದುವರೆದು ಹೇಳಿದರು, ಮೊದಲು ಸಾಧಾರಣವಾಗಿ ಹೆಣ್ಣು ಮದುವೆಯಾದಾಗ ’ಅಮ್ಮ’ನ ಮನೆಯಿಂದ ’ಅತ್ತೆ’ ಮನೆಗೆ ಹೋಗ್ತಾ ಇದ್ದಳು. ಎಷ್ಟೇ ಸೀಮಿತವಾಗಿದ್ದರೂ ಅತ್ತೆ ಮನೆಗಿಂತ ಅಮ್ಮನ ಮನೆಯಲ್ಲಿ ಆಕೆಗೆ ಸ್ವಾತಂತ್ರ್ಯ ಹೆಚ್ಚು, ಆದರೆ ಈಗ ಬಹು ಪಾಲು ಹೆಣ್ಣು ಮದುವೆಯಾಗಿ ’ಅಮ್ಮ’ನ ಮನೆಯಿಂದ ಹೋಗುವುದು ’ತನ್ನ’ ಮನೆಗೆ, ಅಲ್ಲಿ ಆಕೆ ಕಟ್ಟಿಕೊಳ್ಳುವುದು ತನ್ನ ಬದುಕನ್ನು, ಹೀಗಾಗಿ ಇದು ಅವಳ ಮಟ್ಟಿಗೆ ಮುಂದುವರೆದ ಹೆಜ್ಜೆಯೇ ಹೊರತು ಸ್ಥಿತ್ಯಂತರ’ವಲ್ಲ ಅಂದರು.

ತನ್ನ ಮನೆ ಅನ್ನುವುದು ಹೆಣ್ಣಿಗೆ ಎಷ್ಟು ಮುಖ್ಯ ಅಲ್ಲವಾ ಅನ್ನಿಸಿತು. ತನ್ನ ಮನೆಗೆ ಹೋಗುತ್ತಿದ್ದೇನೆ ಅನ್ನುವ ಭಾವನೆಯೇ ತವರು ಬಿಡುವ ಹೆಣ್ಣಿನ ಮನಸ್ಸಿಗೆ ಒಂದು ಮಟ್ಟದ ಭರವಸೆ ಹುಟ್ಟಿಸುತ್ತದಾ? ಅದಿರಲಿ ಹೆಣ್ಣಿಗೆ ಮನೆಯ ಮೇಲಿನ ಈ ಪ್ರೀತಿಗೆ ಕಾರಣವೇನು? ತಾನು ಮನೆಯಲ್ಲಿ ಅಷ್ಟು ಹೊತ್ತು ಕಳೆಯುತ್ತಾಳೆಂದಾ? ಇಲ್ಲ ಅನ್ನಿಸುತ್ತೆ, ನಾನು ಕೆಲಸಕ್ಕಾಗಿ ದಿನಕ್ಕೆ ೧೨ ಗಂಟೆ ಮನೆ ಹೊರಗೆ ಆಫೀಸಿನಲ್ಲಿ ಕಳೆಯುತ್ತಿದ್ದರೂ, ಉಳಿದ ಸಮಯದಲ್ಲಿ ೭-೮ ಗಂಟೆ ಮನೆಯಲ್ಲಿ ಮಲಗಿ, ನಿದ್ದೆ ಮಾಡಿ ಕಳೆಯುತ್ತಿದ್ದರೂ ಮನೆ ಅಂದರೆ ನನಗೆ ಇದೇ ಪ್ರೀತಿ, ಅದು ಹೀಗೇ ಇರಬೇಕೆನ್ನುವ ತುಡಿತ. ಅಥವಾ ಯಾವುದರ ಮೇಲೂ ಸ್ವಾಮ್ಯ ಹೊಂದದ ಸಾಮಾಜಿಕ ಪರಿಸ್ಥಿತಿ ಇದ್ದಾಗ ಹೆಣ್ಣು ತನ್ನ ಪಾಲಿನ ’ತನ್ನದು’ ಎನ್ನುವ ಕಾರಣಕ್ಕಾಗೇ ಮನೆಯನ್ನು ಅಷ್ಟು ಪೊಸೆಸ್ಸಿವ್ ಆಗಿ ನೋಡುತ್ತಾಳಾ? ಆಮೇಲೆ ಅನ್ನಿಸಿದ್ದು ಬದಲಾದ ಸಾಮಾಜಿಕ ಪರಿಸ್ಥಿತಿಯಲ್ಲಿ ಮನೆ ಈಗ ಕೇವಲ ಹೆಣ್ಣಿನ ಪ್ರಪಂಚವಾಗಿ ಉಳಿದಿಲ್ಲ, ಗಂಡಿಗೂ ಅದು ಗೂಡೇ. ಮನೆಯ ಪ್ರೀತಿಯ ಮಟ್ಟಿಗೆ ಹೇಳುವುದಾದರೆ ಅದಕ್ಕೆ ಗಂಡು – ಹೆಣ್ಣು ಅನ್ನುವ ಜೆನರಲೈಸೇಶನ್ ಮಾಡುವುದೇ ತಪ್ಪು. ಅದು ಗಂಡು – ಹೆಣ್ಣು ಅನ್ನುವುದಕ್ಕಿಂತ ಹೆಚ್ಚಾಗಿ ವ್ಯಕ್ತಿಗತ ಮಟ್ಟದ ಅಭಿರುಚಿಗೆ ಸಂಬಂಧಿಸಿದ್ದು.
ನನಗೊಬ್ಬ ಸ್ನೇಹಿತನಿದ್ದ, ಅವನ ಹೆಂಡತಿ ಮಕ್ಕಳೊಂದಿಗೆ ಮದ್ರಾಸಿನಲ್ಲಿದ್ದಳು, ಈತ ಇಲ್ಲಿ. ಆದರೆ ಅವನು ಮನೆಯನ್ನು ಇಟ್ಟುಕೊಂಡಿದ್ದ ಚಂದ ನೋಡಬೇಕಿತ್ತು. ಆಗಾಗ ಮನೆಯಲ್ಲಿನ ವಸ್ತುಗಳ ಸ್ಥಳ ಬದಲಿಸುತ್ತಿರಬೇಕು, ಇಲ್ಲದಿದ್ದರೆ ಅವುಗಳ ಇರುವಿಕೆಯನ್ನೇ ಅಲಕ್ಷಿಸಿಬಿಡುತ್ತೇವೆ ಅಂತ ಒಂದು ಸಲಹೆಯನ್ನೂ ಕೊಟ್ಟಿದ್ದ. ನನ್ನ ಇನ್ನೊಬ್ಬ ಗೆಳೆಯನಿಗೆ ಮನೆಯ ಅಚ್ಚುಕಟ್ಟುತನ ಅವನ ವೈಯಕ್ತಿಕ ಶಿಸ್ತಿನಷ್ಟೇ ಮುಖ್ಯ! ಪುಸ್ತಕದ ಕಪಾಟನ್ನು ಸಹ ಆಗೀಗ ಬೇರೆ ರೀತಿ ಜೋಡಿಸುತ್ತಾನೆ! ಮನೆಯಲ್ಲಿ ಒಂದು ಪ್ಲಾಸ್ಟಿಕ್ ಕವರ್ ಹರಡಿಕೊಂಡಿದ್ದರೂ ಅದನ್ನು ಕೈಗೆತ್ತಿಕೊಂಡು ನೀಟಾಗಿ ಮಡಿಸಿಟ್ಟೇ ಮುಂದಿನ ಮಾತು! ಇಲ್ಲ, ಮನೆಯ ಬಗೆಗಿನ ಪ್ರೀತಿಗೆ ಲಿಂಗಭೇದವಿಲ್ಲ…
ಮನೆ ನಮಗೆ ಇಷ್ಟವಾಗುವುದು ಅದು ನಮ್ಮ ಖಾಸಗಿ ಜಗತ್ತು ಎನ್ನುವ ಕಾರಣದಿಂದ, ಅದರ ಖಾಸಗಿತನದಿಂದ, ಅಚ್ಚುಕಟ್ಟಿನಿಂದ, ಮಟ್ಟಸದಿಂದ. ಆದರೆ ತೀರಾ ವೈಭವೋಪಿತವಾದ ಮನೆಗಳು ಯಾಕೋ ನನಗೆ ಹೆದರಿಕೆ ಹುಟ್ಟಿಸಿಬಿಡುತ್ತವೆ … ಅಲ್ಲಿನ ಸೌಂದರ್ಯ ತನ್ನ ವೈಭವದಿಂದಲೇ ಶೀತಲ ಅನ್ನಿಸಿಬಿಡುತ್ತದೆ. ಮನೆ ಎಂದರೆ ಅದಕ್ಕೊಂದು ವ್ಯಕ್ತಿತ್ವ, ವಾಸವಿದ್ದ ಲಕ್ಷಣ ಇರಬೇಕು. ಬಣ್ಣ ಬಳೆಯುತ್ತಿದ್ದ ತುಂಟನ ಪುಟ್ಟ ಕೈಗಳ ಆ ಎರಡು ಬೆರಳ ಗುರುತು, ಬಚ್ಚಲ ಮನೆಯ ಕನ್ನಡಿಯಲ್ಲಿ ಬಿಸಿ ಆವಿ ಕವಿದಾಗ ಕೈ ಬೆರಳಿಂದ ಮೂಡಿಸಿದ ಆ ಹೆಸರ ಮೊದಲ ಅಕ್ಷರ, ತಲೆದಿಂಬಿನಲ್ಲಿ ಸದ್ದಿಲ್ಲದೆ ಇಳಿದ ಕಂಬನಿ ಗುರುತು, ಮನೆ ಮಂದಿಯೆಲ್ಲಾ ಒಟ್ಟಾಗಿ ಕೂತು ಊಟ ಮಾಡಿದಾಗ, ಹರಟೆ ಹೊಡೆದಾಗ ಚಿಮ್ಮಿದ ನಗೆಯ ಪ್ರತಿಧ್ವನಿ,.. ಈ ಎಲ್ಲಾ ಇದ್ದಾಗ ಅದು ನಮ್ಮದಾಗುತ್ತದೆ. ಅದಕ್ಕೊಂದು ಆಯಾಮ, ಅಸ್ತಿತ್ವ ಲಭಿಸಿಬಿಡುತ್ತದೆ.
ಮನೆ ಅನ್ನುವ ಕಲ್ಪನೆಯೇ ತೀರಾ ವೈಯಕ್ತಿಕ, ಅದಕ್ಕೊಂದು ಸಿದ್ಧ ಮಾದರಿ ಇಲ್ಲವೇ ಇಲ್ಲ. ಒಬ್ಬರಿಗೆ ಅದ್ಭುತವಾಗಿ ಕಂಡ ಮನೆಯ ವಿನ್ಯಾಸ ಇನ್ನೊಬ್ಬರಿಗೆ ಕಾಂಪ್ಲಿಕೇಟೆಡ್ ಅನ್ನಿಸಿಬಿಡಬಹುದು. ಒಬ್ಬ ಕವಿಮಿತ್ರರ ಮನೆಗೆ ಹೋಗಿ ಬಂದ ಮೇಲೆ ಮನೆಯಲ್ಲಿ ಕೂತು ಅವರ ಮನೆಯ ವಿನ್ಯಾಸ ನೆನಪಿಸಿಕೊಳ್ಳುತ್ತಾ ಬರೆದಿದ್ದೆ..
ನಿಮ್ಮ ಮನೆ ನಿಮ್ಮ
ಕವಿತೆಗಳ ಹಾಗೆ
ಬೇರೆ ಬೇರೆ ಲೋಕದ,
ಭಾವದ, ಅನುಭಾವದ
ಎಳೆಗಳನ್ನು ಆರಿಸಿ, ಜೋಡಿಸಿ,
ಮಥಿಸಿ, ನೇಯ್ದು ಹೊಸದಾದದ್ದೇನನ್ನೋ
ಉಟ್ಟ ಹಾಗೆ.
ಇಲ್ಲಿ ಕಂಡಷ್ಟೇ ಆಕಾಶವಲ್ಲ
ಕಾಣದ ಊರಿಗೆ ಕಿಟಕಿಯೂ
ಕಂಡೀತು..
ಭಾರತೀಯ ಹೆಣ್ಣು ಸೀರೆ
ಉಟ್ಟಹಾಗೆ,
ಇರುವುದೆಲ್ಲ ಸ್ಪಷ್ಟವಲ್ಲ
ಹಾಗೇ ಅಸ್ಪಷ್ಟವೂ ಅಲ್ಲ
ಬದುಕು ನೇರ ಗೆರೆಯಷ್ಟು
ಸರಳವಲ್ಲ.
ಕವನ ಓದುತ್ತಿದ್ದಷ್ಟೂ ಹೊತ್ತು
ಕಣ್ಣ ಮುಂದಿನ ಕನಸು,
ಆಮೇಲೆ ಸಾಲುಗಳು
ನೆನಪಾದರೆ ನನ್ನಾಣೆ!
ಓದಿ ಮುಗಿಸಿದ ಮೇಲೂ
ಮತ್ತೇನೋ ಉಳಿದಂತೆ
ಮತ್ತೊಮ್ಮೆ ಓದಬೇಕು
ಅನಿಸುವಂತೆ…
ಅದಕ್ಕೇ ಹೇಳುವುದು
ನಿಮ್ಮ ಮನೆ ಥೇಟ್
ನಿಮ್ಮ ಕವನಗಳಂತೆ!
 
ಮನೆಗೂ ಒಂದು ವ್ಯಕ್ತಿತ್ವ ಉಂಟು, ಒಂದು ಮೂಡ್ ಉಂಟು, ಒಂದು ಖಾಸಗಿತನ ಉಂಟು, ಇನ್ನೊಬ್ಬರ ಮನೆಗೆ ಹೋದಾಗ ಅದನ್ನು ಗುರ್ತಿಸಬೇಕು, ಗೌರವಿಸಬೇಕು.
ಮಾತು ಎಲ್ಲೆಲ್ಲಿಗೋ ಹೋಯಿತು… ಅಮ್ಮ ಹೇಳಿದಂತೆ ನನ್ನ ಮನೆಯನ್ನು ಕಟ್ಟಿಕೊಳ್ಳಲು ಹೋದಾಗ ಅರಿವಾದದ್ದು .. ಅದು ಅಷ್ಟು ಸುಲಭವಲ್ಲ, ಒಂದು ಮನೆಯನ್ನು ನಮ್ಮದಾಗಿಸಿಕೊಳ್ಳುವುದು, ನಮ್ಮ ಬದುಕನ್ನು ನಮ್ಮದಾಗಿಸಿಕೊಳ್ಳುವಷ್ಟೇ ಕಸರತ್ತಿನ ಕೆಲಸ ಅಂತ. ಅದು ಒಬ್ಬ ವ್ಯಕ್ತಿಯನ್ನು ನಮ್ಮದಾಗಿಸಿಕೊಂಡ ಹಾಗೆ, ಅದಕ್ಕೆ ತಾಳ್ಮೆ ಬೇಕು, Houses can be built, but homes are to be made …. Daily … continuously…. ಮನೆಯನ್ನು ಮನೆಯಾಗಿಸಿಕೊಳ್ಳುವುದೆಂದರೆ ಅದು ಪ್ರತಿ ದಿನದ ಸಹಬಾಳ್ವೆ, ಪ್ರತಿದಿನದ ಸ್ನಾನ – ನೇಮ. ಹಾಗೆ ಸಹಬಾಳ್ವೆಗೆ ನೀವು ಸಿದ್ಧರಿದ್ದಾಗ, ಆಗ ನೋಡಿ ಮನೆ ನಿಮ್ಮ ಒಡನಾಡಿ ಆಗುತ್ತದೆ, ನಿಮ್ಮ ಖುಷಿ ಕಣ್ಣೀರು ಎರಡನ್ನೂ ಹಂಚಿಕೊಳ್ಳುತ್ತದೆ.
ಆಮೇಲೆ ಒಂದು ಮನೆಯನ್ನು ನನ್ನದಾಗಿಸಿಕೊಂಡು, ಅಲ್ಲಿನ ಅಣು ರೇಣು ತೃಣ ಕಾಷ್ಠಗಳನ್ನೂ ನನ್ನದಾಗಿಸಿಕೊಂಡ ಮೇಲೆ ಒಂದು ದಿನ ಒಂದು ಕಪಾಟನ್ನು ನಾನು ಇಟ್ಟಿದ್ದ ಸ್ಥಳದಿಂದ ನನ್ನ ಮಗ ಜರುಗಿಸಿದಾಗ ನಾನು ಥಟ್ ಅಂತ ದನಿ ಏರಿಸಿದ್ದೆ, ಥೇಟ್ ಅಮ್ಮನಂತೆಯೇ! ’ನೋಡು ಈ ಮನೇಲಿ ಯಾವುದು ಹೇಗೆ ಇರಬೇಕು ಅಂತ ಯೋಚನೆ ಮಾಡಿಯೇ ಇಟ್ಟಿದ್ದೇನೆ, ಅದು ಅಲ್ಲಿಯೇ ಇರಬೇಕು’ ಅಂತ…. ಯಾಕೋ ಆ ಘಳಿಗೆಯಲ್ಲಿ ಅಮ್ಮ ನನಗೆ ಜಾಸ್ತಿ ಅರ್ಥವಾದಳು. ಆಗ ಅರ್ಥವಾಯಿತು ಅಂದು ಮೊಟಕಾದದ್ದು ನನ್ನ ಸ್ವಾತಂತ್ರ್ಯ ಅಲ್ಲ, ಅಮ್ಮನದ್ದು …. ಆಗ ಅಮ್ಮನ ಸ್ಥಳದಲ್ಲಿ ಅತಿಕ್ರಮಣ ಪ್ರವೇಶ ಮಾಡಿದ್ದು ನಾನು ಅಂತ!
ಹೇಳಿ ಇಂತಹ ನನ್ನ ಅನುಗಾಲದ ಸಂಗಾತಿಯನ್ನು ಅವಗಣಿಸಿ, ’ಅಲ್ಲಿರುವುದು ನನ್ನ ಮನೆ, ಇಲ್ಲಿ ಬಂದೆ ಸುಮ್ಮನೆ’ ಎಂದು ಹೇಗೆ ಹೇಳಲಿ?
 
 

‍ಲೇಖಕರು G

November 7, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

16 ಪ್ರತಿಕ್ರಿಯೆಗಳು

  1. Sarala

    namma mane alliddaru, allige hogovaregu illiruva maneyannu preethiyinda nodkobekalva? Nice article Sandhya

    ಪ್ರತಿಕ್ರಿಯೆ
  2. chalam

    ನಿಮ್ಮ ಮನೆ ಥೇಟ್
    ನಿಮ್ಮ ಕವನಗಳಂತೆ…………nice.

    ಪ್ರತಿಕ್ರಿಯೆ
  3. ಶಮ, ನಂದಿಬೆಟ್ಟ

    ಒಪ್ಪಿ ಅಪ್ಪಿದೆ ನಿನ್ನ…
    ನಿನ್ನ ಅಷ್ಟೂ ಸಾಲುಗಳನ್ನ…

    ಪ್ರತಿಕ್ರಿಯೆ
  4. Anonymous

    ಮನೆಯ ಬಗ್ಗೆ ಮನತಟ್ಟುವ ಮನಮೋಹಕ ಬರಹ -ಇಷ್ಟವಾಯಿತು

    ಪ್ರತಿಕ್ರಿಯೆ
  5. ಮಂಜುಳಾ

    ಕುಪ್ಪಳ್ಳಿಯಲ್ಲಿ ಕುವೆಂಪು ಅವರ ಮನೆಗೆ ಭೇಟಿ ನೀಡಿದಾಗ ಅವರು ಬರೆದ ’ಮನೆ, ಮನೆ ನನ್ನ ಮನೆ’ ಹಾಡಿನ ಫಲಕ ನನ್ನದೇ ಅನಿಸಿಬಿಟ್ಟಿತ್ತು.. ಆಗಿನ್ನೂ ಸ್ವಂತ ಮನೆ ಮಾಡಿದ ಹೊಸತು.. ಇಂದಿಗೂ ನನ್ನ ಮನೆ ನನಗೆ ಹೊಸತೇ.. ಹೊಸ ಕನಸುಗಳು ಶುರುವಾಗಿ, ಬೆಳೆಯುತಿರುವ ಆಲಯ ಅದು.. ಎಂದಿನಂತೆ ನಮ್ಮಂಥವರ ಮನೆ-ಮನ ಹೊಕ್ಕು ಬಿಡುತ್ತೆ ನಿಮ್ಮ ಬರಹ 🙂

    ಪ್ರತಿಕ್ರಿಯೆ
  6. ಜಿ.ಎನ್ ನಾಗರಾಜ್

    ಮನೆಯನ್ನು ಹಲವು ಆಯಾಮಗಳಿಂದ ವಿಶ್ಲೇಷಿಸಿರುವ ಗಿರೀಶ್ ಕಾಸರವಳ್ಳಿಯವರ ಸಿನೆಮಾ “ಮನೆ” ನಿಮ್ಮ ಲೇಖನದ ಸಂದರ್ಭಕ್ಕೆ ಬಹಳ ಪ್ರಸ್ತುತ.

    ಪ್ರತಿಕ್ರಿಯೆ
  7. ಸತೀಶ್ ನಾಯ್ಕ್

    ಮನೆ ಮನೆ ನಮ್ಮ ಮನೆ.. 🙂
    ಮೂರನೇ ಕ್ಲಾಸಿನಲ್ಲಿಯೇ ಈ ಪದ್ಯ ಪ್ರಾಣಪ್ರಿಯವಾಗಿತ್ತು. ಕಾರಣ ಅದರೊಳಗಿನ ವಸ್ತು.. ಮನೆ. ಹೌದು ಅದೊಂದೇ ಜಾಗದಲ್ಲಿ ನಮಗೆ ಪೂರ್ಣ ಸಮಾಧಾನ ಸಿಗೋದು.. ನಮ್ಮವರು ಅನ್ನಿಸಿಕೊಂಡೋರು ಸಿಗೋದು. ವ್ಯಾವಹಾರಿಕ ಜಗತ್ತಿನೊಳಗೆ ಮನುಷ್ಯ ಅನವರತ.. ಅದೆಲ್ಲಿಂದ ಅದೆಲ್ಲಿಗೆ ಕ್ಷಣ ಕ್ಷಣಕ್ಕೂ ಬದಲಾಗುತ್ತಿದ್ದರೂ ಕಡೆಗೆ ಅವನ ಯಾತ್ರೆಯ ಸಮಾಪ್ತಿ ಮನೆಯಲ್ಲಿಯೇ. ಆದಿಯೂ ಅದೇ.. ಅಂತ್ಯವೂ ಅದೇ.. ಪ್ರಪಂಚ ಅರ್ಥವಾಗುವುದು ಅಲ್ಲಿಂದಲೇ.. ನಮ್ಮದೂ ಎನ್ನುವ ಪ್ರಪಂಚ ಹುಟ್ಟಿಕೊಳ್ಳುವುದು ಕೂಡಾ ಅಲ್ಲಿಯೇ. ಎಲ್ಲಿ ನಮ್ಮತನದ ಜೊತೆ ನಾವು ಸಂತೋಷದಿಂದ ಬದುಕಲು ಸಾಧ್ಯವೋ ಅದಷ್ಟೇ ನಮ್ಮನೆ. ಅದು ಯಾರದ್ದೋ ಬಾಡಿಗೆ ಮನೆಯಾದರೂ ಸರಿಯೇ. ಮನೆಯ ಪ್ರತಿ ಕಣ ಕಣವು ಮನಸಿಗೆ ನೇರ ಸಂಬಂಧ ಪಡುವಂತಿರುತ್ತದಲ್ಲ ಅದೇ ನಮ್ಮನೆ.
    ನನಗೂ ಮನೆಯ ಮೇಲೆ ವಿಪರೀತ ಮೋಹ. ಪ್ರತಿಯೊಂದು ಜೀವಿಗೂ ಗೂಡೇ ಪ್ರತಿ ನಿತ್ಯದ ಪ್ರಿಯವಾದ ಸ್ಥಳ. ಮತ್ತು ಯಾವ ಸ್ಥಳ ಅದಕ್ಕೆ ಪ್ರಿಯವಾಗಿ ಬಿಡುತ್ತದೋ ಅದು ಮಾತ್ರವೇ ಅದರ ಮನೆಯಾಗುವುದಕ್ಕೆ ಯೋಗ್ಯ. ಬಾಕಿಯದ್ದೆಲ್ಲ ಒಂದು ಅನಸರಿಸಿಕೊಳ್ಳುವಿಕೆಯಷ್ಟೇ.
    ಬಹಳ ಸುಂದರ ಲೇಖನ ಮೇಡಂ.. ತುಂಬಾ ಹತ್ತಿರ ಅನ್ನಿಸ್ತು. 🙂

    ಪ್ರತಿಕ್ರಿಯೆ
  8. lakshmishankarjoshi.

    alliruvadu nammane illella summane anta hege helali?really nice write up.

    ಪ್ರತಿಕ್ರಿಯೆ
  9. Anil Talikoti

    ಸುಲಿದ ಬಾಳೆ , ತೊಳೆದ ಹಲಸಿನ ಹೊಳೆ ನಿಮ್ಮ ಬರಹ. ನನಗೇನೋ ಹೆಣ್ಣಿಗೆ ಮನೆಯ ಮೇಲಿರುವಷ್ಟು ಭಾವಾಪ್ತತೆ ಗಂಡಿಗಿಂತ ಜಾಸ್ತಿಯೇ ಅನಿಸುತ್ತದೆ. ‘ಮದುವೆ ಆಗಿ ಹೋಗುವಾಗ ಹೆಣ್ಣು ಸಹ ಮೊದಲಿನಷ್ಟು ಅಳೋದಿಲ್ಲ’ ನಿಜವೋ ನಿಜ -ನನ್ನ ನೆಚ್ಚಿನ ಗೀತೆ ‘ಬಾಬುಲ ಕೀ ದುವಾಯಿ ಲೇತಿ ಜಾ’ ದಲ್ಲಿನ ನಾಟಕೀಯತೆ(?) ಮೀರಿಯೂ ಅದನ್ನು ಸಾವಿರ ಸಾರಿಯಾದರೂ ನೋಡಿದ್ದೇನೆ. ಹೆಣ್ಣು ಆ ಪರಕೀಯತೆಯ ಭಾವ ದಾಟಿ ಸಾಕಷ್ಟು ಮುಂದೆ ಬಂದಿರುವದು ಸಣ್ಣ ಸಾಧನೆ ಏನಲ್ಲ. ನೀವು ಹೇಳಿದ ಸಹಬಾಳ್ವೆಗೊಂದು ಸಲಾಮು – ಖುಶಿ ಪಡಲು ಇದಕ್ಕಿಂತ ಒಳ್ಳೆಯದನ್ನು ಮನುಶ್ಯರಿನ್ನೂ ಹುಡುಕಿಲ್ಲ -ಹುಡುಕುವ ಅಗತ್ಯವೂ ಇಲ್ಲ.
    ~ಅನಿಲ

    ಪ್ರತಿಕ್ರಿಯೆ
  10. C. N. Ramachandran

    ಪ್ರಿಯ ಸಂಧ್ಯಾರಾಣಿ ಅವರಿಗೆ:
    ’ಮನೆ’ಯನ್ನು ಕುರಿತ ನಿಮ್ಮ ಲೇಖನ ತುಂಬಾ ಅರ್ಥಪೂರ್ಣವಾಗಿದೆ. ಇಲ್ಲಿ ’ಮನೆ’ (ವಾಸಸ್ಥಳವಲ್ಲ; ಇಂಗ್ಲೀಷ್‍ನಲ್ಲಿ ಹೇಳುವಂತೆ ’ಹೋಮ್,’ ’ಹೌಸ್’ ಅಲ್ಲ) ಕಟ್ಟಿಕೊಳ್ಳುವುದು ನಿಜವಾಗಿಯೂ ಸುಮ್ಮನೆ ಅಲ್ಲ; ಅದು ನಮ್ಮ ಜೀವಂತಿಕೆಯ ಸಂಕೇತ. ಅಲ್ಲಿ ಏನಿದೆಯೋ ಗೊತ್ತಿಲ್ಲ; ಆದರೆ ಇಲ್ಲಿರುವುದು ನಾವು ಕಟ್ಟಿಕೊಳ್ಳುವ/ ಕಟ್ಟಿಕೊಳ್ಳಲಾಗದ ನಮ್ಮ ವ್ಯಕ್ತಿತ್ವದ ಸಂಕೇತ. ಒಳ್ಳೆಯ ಪ್ರಬಂಧ; ಹಾರ್ದಿಕ ಅಭಿನಂದನೆಗಳು.
    ಸಿ. ಎನ್. ರಾಮಚಂದ್ರನ್

    ಪ್ರತಿಕ್ರಿಯೆ
  11. Raghav

    ಮನೆ ಮೊದಲು ನಮ್ಮನ್ನು ಕಟ್ಟಿಕೊಡುತ್ತದೆ….. ಆಮೇಲೆ ನಾವು ನಮ್ಮ ಮನೆ ಕಟ್ಟಿಕೊಳ್ಳುತ್ತೇವೆ?

    ಪ್ರತಿಕ್ರಿಯೆ
    • G

      ಅರೆ, ಹೌದಲ್ಲಾ? ಮನೆ ಎಂದರೆ ಏನೆಲ್ಲಾ? ಮನೆ ಎಂದರೆ ಬಾಲ್ಯ, ಬಾಲ್ಯ ಎಂದರೆ ರಕ್ಷಣೆ, ಮನೆ ಎಂದರೆ ’ನಮ್ಮ’ದು, ಮನೆ ಎಂದರೆ ಸಂಬಂಧ…

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: