ಹಕ್ಕಿ ನೋಡಲು ಹೋಗಿ ಕಣಜದ ಕೈಲಿ ಕಚ್ಚಿಸಿಕೊಂಡಿದ್ದು

ಪರಮೇಶ್ವರ್ ಗುರುಸ್ವಾಮಿ

ಸಿರ್ಸಿ ಸರಣಿ – 02

(ಇಲ್ಲಿಯವರೆಗೆ)



ತಿಂಡಿ ತಿಂದು ಅವರೆಲ್ಲ ತರಬೇತಿ ಹಾಲ್ ಗೆ ತೆರಳಿದ ಮೇಲೆ ಸ್ನಾನ ಮಾಡಿಕೊಂಡು ಹೊರಡುವ ವೇಳೆಗೆ 11.30 ಆಗಿತ್ತು. ಬೆಳಿಗ್ಗೆ ಟೀ ಅಂಗಡಿಯ ಬಳಿಯ ಮಾತುಕತೆಯಲ್ಲಿ ಮೊದಲಿಗೆ ಅತ್ತಿವೇರಿ ಪಕ್ಷಿಧಾಮ ಅಲ್ಲಿಂದ ಸುಮಾರು 40 ಕಿಲೋ ಮೀಟರ್ ಎಂಬ ಅಂದಾಜಿನಿಂದ ಶುರುವಾಗಿ ತರಬೇತಿ ಕೇಂದ್ರದಲ್ಲಿ ಸ್ಥಳೀಯ ಶಿಬಿರಾರ್ಥಿಗಳ ಪ್ರಕಾರ ಹಾವೇರಿಗೆ ಹೋಗುವ ರಸ್ತೆಯಲ್ಲಿ ಮೊದಲು ಮುಂಡಗೋಡ ಸಿಗುತ್ತದೆ, ಅದು ಸುಮಾರು 45 ಕಿ.ಮೀ. ಅಲ್ಲಿಂದ ಮುಂದೆ 7 ಕಿ.ಮೀ ಎಂದಾಯಿತು. ಅಲ್ಲಿಗೆ ಕನಿಷ್ಟ 60 ಕಿ.ಮೀ ದೂರ ಎಂದು ನಾನು ಲೆಕ್ಕ ಹಾಕಿದೆ. ನನ್ನ ಅನುಭವದಲ್ಲಿ ಸ್ಥಳೀಯರಿಗೆ ಅವರ ಸುತ್ತಮುತ್ತಿನ ಸ್ಥಳಗಳು ಯಾವಾಗಲೂ ಹತ್ತಿರ ಎನಿಸುತ್ತವೆ. ವಾಸ್ತವವಾಗಿ ಹೆಚ್ಚಿರುತ್ತದೆ. ಕೆಲವು ಸಾರಿ ಅವರು ಹೇಳಿದ್ದಕ್ಕಿಂತ ಎರಡರಷ್ಟಿರುತ್ತದೆ. ಇಷ್ಟು ದೂರ ಆಗುತ್ತದೆ ಎಂದವರ ಸ್ವಭಾವ, ಪಯಣದ ಅನುಭವ ಮತ್ತಿತರ ಅಂಶಗಳನ್ನು ನಾನು ಲೆಕ್ಕ ಹಾಕಿಕೊಂಡು ಅವರು ನಿಖರತೆಯಿಂದ ಎಷ್ಟು ಕಡಿಮೆ ದೂರದಲ್ಲಿದ್ದಾರೆ ಎಂದು ಒಂದು ಅಂದಾಜು ಮಾಡಿಕೊಳ್ಳುತ್ತೇನೆ. ಬಹಳ ಅಪರೂಪಕ್ಕೆ ಕೆಲವರು ಕರಾರುವಾಕ್ಕಾದ ಮಾಹಿತಿ ನೀಡುತ್ತಾರೆ.

ಅದೇ ಮಾರ್ಗವಾಗಿ ಬೆಳಿಗ್ಗೆ ಸಿಕ್ಕಾಪಟ್ಟೆ ಕುಲುಕಾಡಿಕೊಂಡು ಬಸ್ಸು ಬಂದಿತ್ತು, ನಾನು ಸವಾರಿ ಮಾಡಲಿರುವುದು ಬೇರೆಯವರ ಬೈಕ್ ಆದ್ದರಿಂದ fast and rash riding ಮಾಡುವ ಹಾಗಿಲ್ಲ. ಎಲ್ಲೂ ನಿಲ್ಲದೆ ಮೊದಲು ಅತ್ತಿವೇರಿ ಪಕ್ಷಿಧಾಮ ತಲುಪಿ 4 ಘಂಟೆಯವರೆಗೆ ಅಲ್ಲಿದ್ದು ವಾಪಸ್ಸು ದಾರಿಯುದ್ದಕ್ಕೂ ಅಲ್ಲಲ್ಲಿ ನಿಂತು ಬರುವುದು ಎಂದುಕೊಂಡೆ. ಹೋಗುವುದಕ್ಕೆ ಒಂದುವರೆ ಘಂಟೆ, ಕತ್ತಲಾಗುವುದರೊಳಗೆ ಕೇಂದ್ರ ತಲುಪಿಕೊಳ್ಳಬೇಕು. ಕತ್ತಲಾದರೆ ಎದುರುವಾಹನಗಳ ಬೆಳಕು ನನ್ನನ್ನು ಅಧೀರನನ್ನಾಗಿಸುತ್ತದೆ. ಎಡಗಡೆ ಯಾವುದಾದರೂ ಹಳ್ಳಕ್ಕೆ ಬೀಳಬಹುದೆಂಬ ಭಯ, ಎದುರು ವಾಹನದ ಕಡೆಗೆ ದೀಪದ ಕಡೆಗೆ ಪತಂಗ ಹಾರುವಂತೆ ನಿಯಂತ್ರಣ ಮೀರಿ ನನ್ನ ವಾಹನ ನುಗ್ಗುತ್ತದೆ.
ಬೆಳಿಗ್ಗೆ ಟೀ ಕುಡಿದ ಅಂಗಡಿಯಲ್ಲಿ ಪುನಃ ಟೀ ಕುಡಿದು ಮತ್ತಷ್ಟು ಮಾಹಿತಿ ಪಡೆದು ಬೇಯಿಸಿದ ಎರಡು ಮೊಟ್ಟೆ ತಿಂದು ಎರಡು ಮೊಟ್ಟೆ ಕಟ್ಟಿಸಿಕೊಂಡು ಹೊರಡುವಾಗ 11.50. ಉದ್ದಕ್ಕೂ ರಸ್ತೆ ಕೆಟ್ಟಿರುವಲ್ಲಿ 30 ರಿಂದ 50, ಚೆನ್ನಾಗಿರುವ strechಗಳಲ್ಲಿ 70ರ ವೇಗದಲ್ಲಿ ಸಾಗಿ ಮಧ್ಯೆ ಮಧ್ಯೆ ಸರಿದಾರಿಯಲ್ಲಿದ್ದೀನ ಅಂತ ವಿಚಾರಿಸಿಕೊಂಡು ಅತ್ತಿವೇರಿ ಪಕ್ಷಿಧಾಮ ತಲುಪಿದಾಗ 1.35. ದಾರಿಯಲ್ಲಿ ಎದುರು ದಿಕ್ಕಿನಿಂದ ಬರುತ್ತಿದ್ದ ಅಲೆಮಾರಿ ಗುಂಪುಗಳು ಕಂಡುವು. ತಮ್ಮ ಸಾಮಾನುಗಳನ್ನು ನಮ್ಮ ಮೈಸೂರು ಕಡೆ ‘ಪೊಟ್ರ’ ಎಂದು ಕರೆಯುವ ಕತ್ತೆಗಳಿಗಿಂತ ಸ್ವಲ್ಪ ದೊಡ್ಡ ಕುದುರೆಗಳ ಮೇಲೆ ಹಾಕಿ ತಾವು ನಡೆದುಕೊಂಡು ಸಾಗುತ್ತಿದ್ದರು. ಒಂದು ಪೊಟ್ರದ ಮೇಲೆ ಪುಟ್ಟ ನಾಯಿಯೊಂದು ಮಗುವಿನ ಹಾಗೆ ಕುಳಿತು ಸಮತೋಲನ ಸಾಧಿಸುತ್ತ ಪಯಣಿಸುತ್ತಿತ್ತು. ಕೆಲವು ಕುರಿ ಮಂದೆಗಳು ಎದುರಾದುವು. ಮಳಗಿ ಎಂಬ ಊರು ಕೆಲವು ಕಿ.ಮೀ ದೂರವಿದೆ ಎಂಬ ಮೈಲಿಗಲ್ಲನ್ನು ನೋಡಿದ ನಂತರ ಕಾಡಿನಂಥ ಪ್ರದೇಶದಲ್ಲಿ ರಸ್ತೆಯ ಎಡ ಬದಿಯಲ್ಲಿ ಮೊರಗಳನ್ನು ಸಾಲಾಗಿಟ್ಟುಕೊಂಡು ಕೃಶಕಾಯದ ಅಜ್ಜಿಯೊಂದು ಕುಳಿತಿದ್ದು ಕಾಣಿಸಿತು. ಈ ಕಾಡಿನ ಮಧ್ಯೆ ಈ ಮುದುಕಿ ಯಾರಿಗೆ ಮಾರಲೆಂದು ಮೊರಗಳನ್ನಿಟ್ಟುಕೊಂಡು ಕುಳಿತಿದ್ದಾಳೆ ಅಂದುಕೊಳ್ಳುವಷ್ಟರಲ್ಲಿ ಅವಳ ಬಳಿ ಬಂದಿದ್ದೆ. ನೋಡಿದರೆ ಅದೊಂದು ಮರದ ಗೊಂಬೆ! ಆಕರ್ಷಿಸಿತು. ಕುತೂಹಲವೂ ಆಯಿತು. ಇದು ಯಾವುದೋ ritual ಇರಬೇಕು, ವಾಪಸ್ಸು ಬರುವಾಗ ನೋಡುವ ಎಂದುಕೊಂಡು ಮುಂದೆ ಸಾಗಿದೆ. ದಾರಿ ಸಾಗಿದ ಹಾಗೆ ಇನ್ನೂ ಒಂದಷ್ಟು ಗೊಂಬೆಗಳು ಕಂಡಿದ್ದುವು.

ಪಕ್ಷಿಧಾಮದಲ್ಲಿ ನೀರಿನ ಮೇಲೆ ಸುಮಾರು ಅರ್ಧ ಕಿ.ಮೀ ಉದ್ದ ಡೊಂಕಾದ ಕಾಂಕ್ರೀಟ್ ramp ಕಟ್ಟಿದ್ದಾರೆ. ಕೊನೆಯಲ್ಲಿ ವೃತ್ತಾಕಾರದ ವೇದಿಕೆಯಿದೆ. ಅದೇ ವೀಕ್ಷಣಾ ಟವರ್. ಅಲ್ಲಿಂದ ನೋಡಿದರೆ ಎಡಕ್ಕೆ ಮರಗಳ ಸಾಲೊಂದು ಕಾಣಿಸತ್ತದೆ. ಸ್ವಲ್ಪ ಬಲಕ್ಕೆ ನಡುಗಡ್ಡೆಗಳಿವೆ. ಹತ್ತಿರದ ನಡುಗಡ್ಡೆಯಲ್ಲಿ ಒಂದು ನೀರುಕಾಗೆ ರೆಕ್ಕೆ ಹರಡಿಕೊಂಡು ಬಿಸಿಲು ಕಾಯುತ್ತ ಕುಳಿತಿತ್ತು. ದೂರದ ನಡುಗಡ್ಡೆಯಲ್ಲಿ ಮರಗಿಡಗಳ ಮೇಲೆ ಒಂದಷ್ಟು ಕೊಕ್ಕರೆಗಳು ಕಂಡುವು. ಬಹಳ ಬೇಸರವಾಯಿತು. ಇಷ್ಟಕ್ಕಾಗಿ ಇಲ್ಲಿಯವರೆಗೆ ಬರಬೇಕಾಯಿತ ಎಂದು. ಸರಿ. ಆ ನೀರುಕಾಗೆಯನ್ನೇ ಒಂದೆರಡು ಕ್ಲಿಕ್ಕಿಸಿದೆ. ಮರಸಾಲನ್ನೂ ಕ್ಲಿಕ್ಕಿಸಿಕೊಂಡೆ. ಇನ್ನೇನಾದರು ಹಿಡಿಯುವ ಅಂತ ramp ಮೇಲೆ ಹಿಂದಿರುಗುತ್ತ ಇರುವಾಗ ಆ ನಡೆಸೇತುವೆಯ ಕಂಬಕ್ಕೆ ಸೇತುವೆಯ ತಳಕ್ಕೆ ಅಪ್ಪಳಿಸುತ್ತಿದ್ದ ನೀರಿನ ಅಲೆಗಳು ಶಬ್ದ ಮಾಡುತ್ತ ಒಂದು ತಾವರೆ ಎಲೆಯನ್ನು ದೊನ್ನೆಯ ಹಾಗಿ ಮಡಚಿ ಹಾಳೆಯ ಹಾಗೆ ಬಿಡುತ್ತಿದ್ದುವು. ಯಾರೋ ನೀರೊಳಗೆ ಅವಿತುಕೊಂಡು ಈ ಕೆಲಸ ಮಾಡುತ್ತಿದ್ದಾರೆ ಅನಿಸುತ್ತಿತ್ತು. ಒಂದು ಷಾಟ್ ತೆಗೆದೆ. ಅದ ಪೂರ್ತಿ cone ಆಕಾರ ಪಡೆದಾಗ ಸೆರೆ ಹಿಡಿಯಬೇಕೆಂದು ತದೇಕಚಿತ್ತನಾಗಿದ್ದಾಗ ಎಡ ಕುತ್ತಿಗೆ ಮೇಲೆ ಒಂದು ಕಣಜ ಹೊಡೆಯಿತು. ಅಕ್ಷರಶಃ ನನ್ನನ್ನು ಅಲ್ಲಿಂದ ಅಟ್ಟಿಸಿಕೊಂಡು ಓಡಿಸಿತು. ಪ್ರೌಢ ಶಾಲೆಯಲ್ಲಿದ್ದಾಗ ಹೆಜ್ಜೇನು ಸಮೂಹದ ದಾಳಿಗೆ ತುತ್ತಾಗಿದ್ದವನು ನಾನು. ಸತ್ತೆನೊ ಕೆಟ್ಟೆನೊ ಎಂದು ಅಲ್ಲಿಂದ ಓಡಿದೆ. ಕ್ಯಾಮೆರಾ ಬ್ಯಾಗನ್ನು ಓಡುತ್ತಲೇ ಟವೆಲ್ಲಿನಂತೆ ಬೀಸಿ ಸುತ್ತಿದಾಗಲೇ ಆ ಕಣಜ ನನ್ನನ್ನು ಬಿಟ್ಟು ಹಿಂದಕ್ಕೆ ಹೋಗಿದ್ದು. ಈಗಲೂ ಅದು ಹೊಡೆದ ಜಾಗದಲ್ಲಿ ಸಣ್ಣದೊಂದು ಗಂಟು ಕುತ್ತಿಗೆಯಲ್ಲಿದೆ.

ವಾಪಸ್ಸು ಬರುವಾಗ ಪ್ರವೇಶದ ಬಳಿಯಿರುವ ಕ್ಯಾಂಟೀನ್ ನಲ್ಲಿ ಸಪ್ಪೆ ಟೀ ಮಾಡಲು ಹೇಳಿ ಕಾಯುವಾಗ ರಸ್ತೆಯ ಎದುರುಗಡೆ ಒಂದು ಬೆಳ್ಳಕ್ಕಿ ಕಾಣಿಸಿತು. ವಾಪಸ್ಸು ಮುಖ್ಯರಸ್ತೆಗೆ ಬಂದಾಗ ಅಕ್ಕ ಪಕ್ಕದ ಹೊಲಗಳಲ್ಲಿ ಯಾವುದಾದರೂ ಹಕ್ಕಿ ಸಿಕ್ಕೀತೇ ಎಂದು ನಿಂತು ಅವಲೋಕಿಸುತ್ತಿದ್ದಾಗ ಪಕ್ಕದ ಹೊಲದಿಂದ ತೇಜಸ್ವಿಯವರನ್ನು ನೆನಪಿಸುವಂಥ ಒಬ್ಬ ವ್ಯಕ್ತಿ ಹಳ್ಳ ಇಳಿದು ರಸ್ತೆಗೆ ಹತ್ತಿದರು. ವಿಚಾರಿಸಿದಾಗ ಅವರ ಹೆಸರು ಮುದುಕಪ್ಪ ಎಂದರು. ಬರುವಾಗ ರಸ್ತೆ ಬದಿಲ್ಲಿದ್ದ ಗೊಂಬೆಗಳು ಕಂಡಿದ್ದುವಲ್ಲ ಅದರ ಬಗ್ಗೆ ಕೇಳಿದೆ. “ಮೊರಗಳನ್ನ ಇಟ್ಟಿದ್ದರಲ್ಲ. ಅದಾ” ಎಂದರು. ಹೌದೆಂದೆ. …
(ಮುಂದುವರಿಯುವುದು…)

‍ಲೇಖಕರು G

November 7, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: