ಸಂತೋಷ್ ಅನಂತಪುರ ನೆನಪಿನಲ್ಲಿ ಸಿಸ್ಟರ್ ತೆರೆಜ ಮಿನೇಜಸ್

ಸಂತೋಷ್ ಅನಂತಪುರ

ಬಹು ಸಂಸ್ಕೃತಿಯನ್ನು ಹೊಂದಿದ ಜಿಲ್ಲೆ ಕಾಸರಗೋಡು. ಮೂಲ ಮಣ್ಣಿನ ವಾಸನೆ ಕನ್ನಡವಾದರೂ ಎಲ್ಲೆಡೆ ‘ಮಲಯಾಳಂ’ ಹರಡಿಕೊಂಡಿರುವ ಪ್ರದೇಶ. ಬಂಟರ ತುಳು, ಭಟ್ಟರ ತುಳು, ಹವ್ಯಕ, ಕೋಟೆ, ಕರಾಡ, ಕೊಂಕಣಿ, ಮಲೆಯಾಳ ಮನೆಮಾತಿನ ಕನ್ನಡಿಗರು, ಬ್ಯಾರಿ ಹಾಗೂ ಹಿಂದುಳಿದವರ ಭಾಷೆ-ಸಂಸ್ಕೃತಿಗಳೆಲ್ಲವೂ ಕೂಡಿ ಅನೇಕತೆಯಲ್ಲಿ ಏಕತೆಯಿರುವ ನೆಲ.

ಭಿನ್ನ ಯೋಚನೆ, ಜೀವನ ಶೈಲಿ, ಸಂಸ್ಕೃತಿ, ಪರಂಪರೆಯನ್ನು ಹೊಂದಿದ ಇಲ್ಲಿನ ಮಂದಿ ಪರಸ್ಪರರ ಬದುಕಲ್ಲಿ ಹಾಸು ಹೊಕ್ಕಿದ್ದಾರೆ. ಎಷ್ಟೇ ಇಲ್ಲವೆಂದರೂ ನಿತ್ಯದ ದಟ್ಟಣೆಯಲ್ಲಿ ಒಮ್ಮೆಯಾದರೂ ಪರಸ್ಪರ ಕಂಡು ಮುಟ್ಟಿ ಮಾತನಾಡುವಷ್ಟು ಭಾವಗಳು ಇನ್ನೂ ಇವೆ. ಅಂತಹ ಪ್ರಾದೇಶಿಕ ಪರಿಸರದಲ್ಲಿ ಹುಟ್ಟಿ ಬೆಳೆದವನಿಗೆ ಭಿನ್ನ ಸಂಸ್ಕೃತಿಗಳ ಪರಿಚಯ, ಅನುಭವಗಳು ಒದಗಿ ಬಂದಿರುವುದು ಸಹಜವಷ್ಟೆ. ನಿಬಿಡ ವಿಷಯಗಳ ನಡುವೆ ಅರಳುವ ಹೂವುಗಳನ್ನು ಗುರುತಿಸುವ ಕಣ್ಣು ಮತ್ತು ಹೃದಯವಿರಬೇಕಾದುದು ಕಾಲದ ಅಗತ್ಯ.

ಒಂದೊಮ್ಮೆ ಚಂದ್ರಗಿರಿ ನದಿಯ ತಟದವರೆಗೂ ಕನ್ನಡ ಕಸ್ತೂರಿಯ ಕಂಪು ಪಸರಿಕೊಂಡಿತ್ತು.   ಕೇರಳದ ಕಾಸರಗೋಡು ಜಿಲ್ಲೆಯೊಳಗೆ ಸದ್ದಿಲ್ಲದೆ ಹರಿಯುವ ಈ ನದಿಯಂತೆಯೇ ಇಲ್ಲಿನ ಕನ್ನಡಿಗರೂ. ಭಾಷಾಭಿಮಾನದ ಹೊಳೆಯು ಉಕ್ಕಿ ಹರಿಯುತ್ತಿದ್ದಾಗಲೆಲ್ಲ ಕನ್ನಡದ ಮಕ್ಕಳು, ವಯಸ್ಕರು ಎಲ್ಲರೂ ಒಕ್ಕೊರಲಿಂದ ಭುವನೇಶ್ವರಿಗೆ ಜಯಕಾರ ಮೊಳಗಿಸಿ ಕನ್ನಡ ಸ್ವಾಭಿಮಾನದ ಕಿಚ್ಚನ್ನು ಹೆಚ್ಚಿಸಿದ್ದರು. ಕಿಚ್ಚು ಹೆಚ್ಚುತ್ತಲೇ ಹೋಯಿತು.

ಕನ್ನಡದ ಕಾವನ್ನು ಕಾಪಿಡುವ ನಾಯಕ ಗಣವೂ ಅಂದಿದ್ದಿತ್ತು. ‘ಉಗ್ರ ಹೋರಾಟ ಮಾಡಬೇಕು ಮಾರಾಯ’ ಎಂದು ಹೇಳಿದ ಕಂಠಗಳು ರಾಜಕೀಯ ಪ್ರವೇಶಿಸಿ ಗೆದ್ದದ್ದೂ ಆಯಿತು. ಒಂದಷ್ಟು ಅನುಕೂಲಗಳು ಗಡಿನಾಡ ಕನ್ನಡಿಗರಿಗೆ ಒದಗಿಯೂ ಬಂತೆನ್ನಿ. ಗಡಿನಾಡ ಕನ್ನಡ ಮನಸ್ಸಿನ ದೇವರುಗಳು ಅಷ್ಟಕ್ಕೇ ಸಮಾಧಾನಿತರಾಗಿ ಬಿಟ್ಟರಲ್ಲ! ಮುಂದೆ ಸರಿಯಾದ ನಾಯಕ ಗಣವೂ ಇಲ್ಲದೆ ಕನ್ನಡದ ಅಸ್ಮಿತೆ ಬಣಗುಟ್ಟ ತೊಡಗಿತು. ಹಾಗೆ ಮುದುರಿ ಮಲಗಿದ ಕನ್ನಡದ ಕಾವು ಮತ್ತೆ ತಲೆ ಎತ್ತಲೇ ಇಲ್ಲ. ಬೇಕೆಂದಾಗ ಒಂದಷ್ಟು ಘೋಷವಾಕ್ಯಗಳು ಈಗಲೂ ಮೊಳಗುವುದಿದೆ. ಆದರೆ ಕೇಳುವ ಕಿವಿಗಳಿಗೆ  ಆ ಧ್ವನಿ ಕೇಳುತ್ತಿಲ್ಲವಷ್ಟೆ. ಉಗ್ರ ಹೋರಾಟವು ನಿಂತು ಹೋಯಿತು.

ಇದೀಗ ವರ್ಷ೦ಪ್ರತಿ ನವೆಂಬರ್ ತಿಂಗಳ ಕನ್ನಡಿಗರಾಗಿ ಸಂಭ್ರಮಿಸುತ್ತಾ, ಅಳಿದುಳಿದ ಕನ್ನಡ ಮನಸ್ಸುಗಳ ಕೃಪಾಕಟಾಕ್ಷದಿಂದ ಕವಿಗೋಷ್ಠಿ, ಸಾಹಿತ್ಯ ಸಂಭ್ರಮ, ಲಲಿತಗಾನ ಸುಧೆಯನ್ನು ಹರಿಸುತ್ತಾ ಕನ್ನಡದ ಅಸ್ಮಿತೆಯನ್ನು ಆಗಾಗ ಬೆಳಗುವವರಿದ್ದಾರೆ. ಅಷ್ಟಕ್ಕೇ ನಮ್ಮದು ಎನ್ನುವಂತದ್ದು ಇಷ್ಟಾದರೂ ಇದೆಯಲ್ಲ ಎನ್ನುವ ಸಮಾಧಾನವು ಗಡಿನಾಡ ಕನ್ನಡಿಗರಿಗೆ ತುಸು ನಿರಾಳತೆಯನ್ನು ನೀಡಿದೆ.

*

ಅದೊಂದು ವರ್ಷದ ಶಾರದಾ ಪೂಜೆಯಂದು ದೊಡ್ಡಪ್ಪ ಎ.ಈಶ್ವರಯ್ಯ ರಿಂದ ಅಕ್ಷರಾಭ್ಯಾಸವಾಯಿತು. ಬಾಲವಾಡಿಯಲ್ಲಿ ಶಶಿಕಲಾ ಟೀಚರ್‌ ರಿಂದ ಆರಂಭಗೊಂಡ ಪಾಠವು ಶಿಕ್ಷಣಕ್ಕೆ ಬೇಕಾದ ಹಾದಿಯನ್ನು ಕಡಿಯುವಲ್ಲಿ ಸಹಕರಿಸಿತು. ದೇವರ ನಾಡಿನ ಬಾಲವಾಡಿಯಲ್ಲಿ ಕೊಡ ಮಾಡುತ್ತಿದ್ದ ಹಾಲು-ಉಪ್ಪಿಟ್ಟನ್ನು ಒಂದಿಷ್ಟು ಸೇವಿಸಿ ಮತ್ತೊಂದಿಷ್ಟನ್ನು ಉಳಿಸಿ ನನ್ನ ಪ್ರೀತಿಯ ‘ಟೋಮಿ’ಗೆಂದು ಬುತ್ತಿಯಲ್ಲಿ ಕಟ್ಟಿಕೊಂಡು ತರುತ್ತಿದ್ದೆ.

‘ಹೋಲಿ ಫ್ಯಾಮಿಲಿ ಹಿರಿಯ ಬುನಾದಿ ಶಾಲೆ-ಕುಂಬಳೆ’ಯಲ್ಲಿ ನನ್ನ ಪ್ರಾಥಮಿಕ ಶಾಲಾ ದಿನಗಳನ್ನು ಅನುಭವಿಸಿ ಸವಿದೆ. ನನ್ನೊಳಗಿನ ಪ್ರತಿಭೆಯನ್ನು ಗುರುತಿಸಿ ಬೆಳಕಿಗೆ ತಂದ ಅಧ್ಯಾಪಕರು, ಅದನ್ನು ತಿದ್ದಿ, ತೀಡಿ ಪೋಷಿಸಿ ಬೆಳೆಸಿದ್ದರು. ನನಗರಿಯದೆ ಹೊರಚಿಮ್ಮಿದ ನನ್ನೊಳಗಿನ ಕೌಶಲಗಳಿಗೆ ಅನೇಕ ಉಪಜಿಲ್ಲಾ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳು ವೇದಿಕೆಯನ್ನು ಕಲ್ಪಿಸಿಕೊಟ್ಟವು.

ನನ್ನ ಅಸಾಧ್ಯ ತುಂಟತನವನ್ನು ಸಹಿಸಿಕೊಂಡ ಶಿಕ್ಷಕವೃಂದ, ಒಂದರಿಂದ ಏಳನೇ ತರಗತಿಯವರೆಗೂ ಜೊತೆಯಿದ್ದು ಜಗಳವಾಡುತ್ತಲೇ ಪ್ರೀತಿಯನ್ನು ತೋರುತ್ತಿದ್ದ ನೆಚ್ಚಿನ ಸಹಪಾಠಿಗಳು, ಜೂನಿಯರ್ಸ್.. ಒಂದೋ ಎರಡೋ… ಹೇಳಿ ಮುಗಿಸಲಾಗದಷ್ಟು ಕಥನಗಳಿವೆ. ಈ ನೆನಪುಗಳಿವೆ ನೋಡಿ ಅವು ಎಷ್ಟೇ ಬೇಡವೆಂದರೂ ಮತ್ತೆಮತ್ತೆ ಕಾಡುತ್ತಿರುತ್ತವೆ. ಅಂತಹ ಕಾಡುವಿಕೆಯು ಅತಿಯಾಗಿ ಮುತ್ತಿಕೊಂಡಿತೆಂದರೆ ಅವುಗಳು ಮುಕ್ತಿಯನ್ನು ಬಯಸುತ್ತವೆ ಎಂದರ್ಥ.

ಈಗ ನಿಮ್ಮನ್ನು ಬರೋಬ್ಬರಿ ಮೂವತ್ತಮೂರು ವರ್ಷಗಳ ಹಿಂದಕ್ಕೆ ಕರೆದುಕೊಂಡು ಹೋಗುತ್ತೇನೆ- ಅದು ೧೯೮೭-೮೮ರ ಕಾಲಘಟ್ಟ. ಏಳನೇ ತರಗತಿಗೆ ಬಂದಿದ್ದೆವು. ಕೆಲವು ಸ್ನೇಹಿತರು ಶಬರಿಯಂತೆ ನಮಗಾಗಿಯೇ ಏಳರಲ್ಲಿ ಕಾಯುತ್ತಿದ್ದರು. ಅಂತಹವರನ್ನು ಜೊತೆಯಾಗಿಸಿಕೊಂಡು ನನ್ನ ಬದುಕಿನ ಸುವರ್ಣ ಘಟ್ಟಕ್ಕೆ ಮಳೆಗಾಲದ ಆ ಒಂದು ದಿನ ಶಾಲೆಯತ್ತ ಹೆಜ್ಜೆ ಹಾಕಿದೆ.

ಒಂದರಿಂದ ಐದರವರೆಗೆ ಓದಿನಲ್ಲೂ ಇತರ ಚಟುವಟಿಗಳಲ್ಲೂ ಮುಂದಿದ್ದ ನಾನು ಆರನೇ ತರಗತಿಯಿಂದ ಆಯಾ ತರಗತಿಗನುಸಾರವಾಗಿ ರ‍್ಯಾಂಕ್ ಅನ್ನು ಪಡೆದುಕೊಂಡೆ. ಆದರೆ ಇತರ ಚಟುವಟಿಕೆಗಳಲ್ಲಿ ಮಾತ್ರ ಸದಾ ಮುಂದಿರುತ್ತಿದ್ದೆ. ಏಳನೇ ತರಗತಿಗೆ ಬಂದಾಗ ‘ಸ್ಕೂಲ್ ಪೀಪಲ್ ಲೀಡರ್’ ಚುನಾವಣೆಯು ಹತ್ತಿರ ಬಂದಿತ್ತು. ಏಳನೇ ‘ಎ’ ತರಗತಿಯಿಂದ ಸಹಪಾಠಿ ‘ಸುದರ್ಶನ್’ ಅಭ್ಯರ್ಥಿಯಾಗಿ ನಿಂತ. ಏಳನೇ `ಬಿ’ ತರಗತಿಯಲ್ಲಿ ಇದ್ದ ನಾನು, ಸ್ನೇಹಿತ ‘ಚಂದ್ರಕಾಂತ’ನನ್ನು ನನ್ನ ತರಗತಿಯಿಂದ ಅಭ್ಯರ್ಥಿಯಾಗಿ ಸೂಚಿಸಿದ್ದೆ. ಆದರೆ ಕಾರಣಾಂತರಗಳಿಂದ ಆತ ಹಿಂದೆ ಸರಿಯಬೇಕಾಯಿತು.

ಆಗ ಅಂದಿನ ಶಾಲಾ ಮುಖ್ಯೋಪಾಧ್ಯಾಯರು ಅವರ ಕೊಠಡಿಗೆ  ನನ್ನನ್ನು ಕರೆದು ಚುನಾವಣೆಗೆ  ನಿಲ್ಲುವಂತೆ ಸೂಚಿಸಿದರು. ಆದರೆ ಚುನಾವಣೆ ಅಂದ ಕೂಡಲೇ ಪಪ್ಪನ ಕಟ್ಟಾಜ್ಞೆ ಇತ್ತಲ್ಲ.. ಮೀರಲಾಗದೆ ಒಲ್ಲೆನೆಂದೆ. ಕೊನೆಗೂ ಮುಖ್ಯೋಪಾಧ್ಯಾಯರ ಹಠವೇ ಗೆದ್ದಿತ್ತು. ಪಪ್ಪನ ಒಪ್ಪಿಗೆಯನ್ನು ಪಡೆದ ಅವರು ಸ್ನೇಹಿತರ ಮತ್ತಿತರರ ಒತ್ತಾಸೆಯ ಮೇರೆಗೆ ಚುನಾವಣೆಗೆ ನಿಂತು ಉತ್ತಮ ಅಂತರದಿಂದಲೇ ಗೆದ್ದು ಬೀಗಿದ್ದೆ.

ಶಾಲಾ ವಿದ್ಯಾರ್ಥಿಗಳ ಮುಖಂಡನಾಗಿ ಶಾಲೆಯಲ್ಲಿ ಶಿಸ್ತು, ಶುಚಿತ್ವವನ್ನು ಕಾಪಾಡಿಕೊಳ್ಳುವುದಲ್ಲದೆ ವಿದ್ಯಾರ್ಥಿಗಳ ನಡುವೆ ಸಾಮರಸ್ಯವನ್ನೂ ಬೆಸೆಯಬೇಕಿತ್ತು. ಮಧ್ಯಾಹ್ನದ ಊಟದ ನಂತರ ಎಲ್ಲಾ ತರಗತಿಗಳಿಗೆ ಭೇಟಿ ನೀಡಿ ಆಯಾ ತರಗತಿಯ ನಾಯಕರ ಜೊತೆ ಮಾತನಾಡಿ ಸಮಸ್ಯೆಗಳಿದ್ದರೆ ಅದನ್ನು ಅಲ್ಲಿಯೇ ಪರಿಹರಿಸುತ್ತಿದ್ದೆ. ತರಗತಿಯ ನಾಯಕನ ಮಾತನ್ನು ಕೇಳದೆ ಚೇಷ್ಟೆ ಮಾಡುತ್ತಿದ್ದವರನ್ನು ಬೆಂಡೆತ್ತುತ್ತಲೂ ಇದ್ದೆ. ನಂತರ ಮುಖ್ಯೋಪಾಧ್ಯಾಯರಿಗೆ ವರದಿಯನ್ನೂ ಸಲ್ಲಿಸುತ್ತಿದ್ದೆ.

ಮಧ್ಯಾಹ್ನ ಊಟದ ತಯಾರಿಯನ್ನು ನಿರ್ವಹಿಸುತ್ತಿದ್ದ ‘ಅಚ್ಚು ಅಣ್ಣ’ ಏನಾದರು ಬಾರದೆ ಇದ್ದಲ್ಲಿ ಶಾಲಾ ವಿದ್ಯಾರ್ಥಿ ನಾಯಕನಾಗಿ ನನಗೆ ವಿಷಯ ತಿಳಿಯುತ್ತಿತ್ತು. ಕೂಡಲೇ ನನ್ನ ಸಹಪಾಠಿಯಾದ ಸದಾನಂದ ಶೆಟ್ಟಿ ಮತ್ತು ಅಮಾವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಶಾಲೆಗೆ ಬರುತ್ತಿದ್ದ ಆಪ್ತ ಗೆಳೆಯ ಅಬ್ದುಲ್ ಲತೀಫ್‌ ನನ್ನು ಕರೆದುಕೊಂಡು ಹೋಗಿ ಮಧ್ಯಾಹ್ನದ ಊಟದ ಗಂಜಿ ಮತ್ತು ಹೆಸರು ಕಾಳಿನ ಪದಾರ್ಥವನ್ನು ತಯಾರಿಸಿ, ಹಸಿದ ನನ್ನ ವಿದ್ಯಾರ್ಥಿ ಮಿತ್ರರಿಗೆ ಬಡಿಸಿ ಕೊನೆಗೆ ನಾವು ಉಣ್ಣುತ್ತಿದ್ದೆವು.

ಒಂದು ದಿನ ಶಾಲೆಗೆ ತಡವಾಗಿ ಬಂದ ಲತೀಫ್‌ನನ್ನು ‘ಜಯಂತಿ ಟೀಚರ್’ ಹೊರಗಡೆಯೇ ನಿಲ್ಲಿಸಿದ್ದರು. ಅಲ್ಲಿ ನಿಲ್ಲುವ ಬದಲು ಆತ ನೇರವಾಗಿ ಗಂಜಿ ಬೇಯಿಸುತ್ತಿದ್ದ ನಮಗೆ ಜೊತೆಯಾಗಲು  ಬರುವಾಗ  ಶಾಲೆ ಮತ್ತು ಕಾನ್ವೆಂಟ್ ಅನ್ನು ಕಾಯುತ್ತಿದ್ದ ಜರ್ಮನ್ ಶೆಪೆರ್ಡ್ ನಾಯಿಯು ಆಳಿನ ಕೈಯಿಂದ ಬಿಡಿಸಿಕೊಂಡು ನಡೆದುಕೊಂಡು ಬರುತ್ತಿದ್ದ ಲತೀಫ್‌ನ ಬೆನ್ನು ಹತ್ತಿತು. ಹೆದರಿದ ಗೆಳೆಯ ಸೀದಾ ಓಡಿಹೋಗಿ ಹತ್ತಿದ್ದು ಬಿಂಬಿಳಿಕಾಯಿಯ ಮರವನ್ನು. ಆದರೂ ‘ಜರ್ಮನ್ ಶೆಪೆರ್ಡ್’ ಎತ್ತರಕ್ಕೆ ಹಾರಿ ಲತೀಫ್‌ನಿಗೆ ಮುತ್ತಿಕ್ಕಲು ಹವಣಿಸುತ್ತಿತ್ತು. ಅದು ಹೇಗೋ ಮಾಡಿ ಅದರಿಂದ ಆತ ತಪ್ಪಿಸಿಕೊಂಡ ಕತೆಯು ಅಂದಿಗೂ ಇಂದಿಗೂ ನಮ್ಮ ಗೆಳೆಯರ ಬಳಗಕ್ಕೆ ಮನರಂಜನೆಯ ವಸ್ತುವಾಗಿದೆ.

*

ನಮ್ಮ ಬ್ಯಾಚಿನಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ತಂಡವಿತ್ತು. ಒಂದನೇ ತರಗತಿಯಿಂದ ಒಟ್ಟಾಗಿ ಬಂದ ನಾವು ಏಳನೇ ತರಗತಿಯಲ್ಲಿ ಇತಿಹಾಸವನ್ನು ನಿರ್ಮಿಸಿದ್ದೆವು. ಇಡೀ ಶಾಲೆಯಲ್ಲಿ ನಮ್ಮ ತಂಡವು ನೋಟೆಡ್ ಆಗಿತ್ತು. ನಮ್ಮ ಜೊತೆಗೆ ಪ್ರತಿಭಾವಂತ ಕಿರಿಯ ಗೆಳೆಯ-ಗೆಳತಿಯರೂ ಇದ್ದರು.

ನಾವೆಲ್ಲಾ ಸೇರಿ ಉಪ ಜಿಲ್ಲಾ ಕ್ರೀಡೋತ್ಸವ, ಬಾಲ ಕಲೋತ್ಸವ, ವಿಜ್ಞಾನ ಮೇಳ, ಜಿಲ್ಲಾ ಕ್ರೀಡೋತ್ಸವ, ಬಾಲ ಕಲೋತ್ಸವ, ವಿಜ್ಞಾನ ಮೇಳ ಹಾಗೂ ರಾಜ್ಯಮಟ್ಟದ ಕ್ರೀಡೋತ್ಸವ, ಬಾಲ ಕಲೋತ್ಸವ, ವಿಜ್ಞಾನ ಮೇಳದಲ್ಲಿ ಭಾಗವಹಿಸಿ ಆ ವರ್ಷದ `ಚಾಂಪಿಯನ್ಷಿಪ್’ ಅನ್ನು ಪಡೆದುಕೊಂಡಿದ್ದು ಶಾಲೆಗೆ, ಮುಖ್ಯೋಪಾದ್ಯಾಯರಿಗೆ, ಸಂಬಂಧಿತ ಟೀಚರುಗಳಿಗೆ, ತಂಡಕ್ಕೆ, ಮಿಗಿಲಾಗಿ ನನಗೂ ಹೆಮ್ಮೆ ಮತ್ತು ಅಭಿಮಾನದ ವಿಷಯವಾಗಿತ್ತು. ಶಾಲಾ ವಿದ್ಯಾರ್ಥಿ ನಾಯಕನಾಗಿ ನನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದೆ ಎನ್ನುವ ಖುಷಿ ಇಂದಿಗೂ ಇದೆ.

ಅಂದು ಅದೇ ಖುಷಿಯಲ್ಲಿ ತೆರೆದ ವಾಹನದಲ್ಲಿ ನನ್ನನ್ನೂ ಸೇರಿದಂತೆ ವಿಜೇತರಿಗೆ ಹಾರಹಾಕಿ ಕುಂಬಳೆಯ ಪೇಟೆಯಲ್ಲಿ ಮೆರವಣಿಗೆ ನಡೆಸಲಾಯಿತು. ಶಾಲಾ ಆವರಣದಿಂದ ಹೊರಟ ಘೋಷ ಯಾತ್ರೆಯಲ್ಲಿ ನನ್ನನ್ನು ಹೆಗಲ ಮೇಲೆ ಕುಳ್ಳಿರಿಸಿಕೊಂಡು ತೆರೆದ ವಾಹನದವರೆಗೆ ಹೊತ್ತೊಯ್ದ ಮಿತ್ರ ರಾಜೇಶ್ ಭಂಡಾರಿಯ ಪ್ರೀತಿಯನ್ನು ಮರೆಯುವುದುಂಟೆ?! ನಮ್ಮ ವಿಜಯಘೋಷ ಯಾತ್ರೆಯು ಕುಂಬಳೆ ಪೇಟೆಯ ವಿವೇಕಾನಂದ ವೃತ್ತಕ್ಕೆ ಸುತ್ತು ಹಾಕುತ್ತಿರುವಾಗ ಕೈ ಬೀಸುತ್ತ ಕಣ್ಣೆತ್ತಿ ಮೇಲಕ್ಕೆ ನೋಡಿದರೆ, ‘ಸಂತೋಷ ಸಾಹಿತ್ಯ ಸದನ’ದ ಹೊರಕ್ಕೆ ಬಂದು ಮಗನ ವೀರಗಾಥೆಯನ್ನು ನೋಡಿ, ಕಣ್ಣಲ್ಲೇ ಮೆಚ್ಚಿಗೆಯನ್ನು ಸೂಚಿಸಿ ಕೈಬೀಸಿ ಹರಸಿದ ಪಪ್ಪನ ಮುಖಭಾವವು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.

ಹೀಗಿರಲು ಒಂದು ದಿನ ನನಗೆ ಅಂದಿನ ಶಾಲಾ ಮುಖ್ಯೋಪಾಧ್ಯಾಯರು ನೆನಪಾದರು. ಅವರೊಡನೆ ಮಾತನಾಡಬೇಕೆಂಬ ಹಂಬಲದ ತುಡಿತ ಹೆಚ್ಚಾಯಿತು. ಆದರೆ ಅವರ ಸಂಪರ್ಕ ಹೇಗೆ? ಆಗ ನೆನಪಿಗೆ ಬಂದವರು ಅವರ ಜೊತೆಗೆ ಸಂಪರ್ಕದಲ್ಲಿದ್ದ ಸೆವ್ರಿನ್ ಟೀಚರ್’. ಅವರಿಗೆ ಮೊರೆ ಹೋಗಿ, ಫೋನ್ ನಂಬರನ್ನು ಪಡೆದು ಅಂದಿನ ಶಾಲಾ ಮುಖ್ಯೋಪಾಧ್ಯಾಯರ ಬಳಿ ಮಾತನಾಡಿದ್ದೆ. ಬೆಂಗಳೂರಿನಲ್ಲಿ ಅವರಿರುವಾಗ ಅವರನ್ನು ಭೇಟಿಯಾಗಲಾಗಲಿಲ್ಲ. ಅದೇ ರೀತಿ ಮಂಗಳೂರಿನಲ್ಲಿರುವಾಗಲೂ ಸಹ. ಆಮೇಲೆ ಅವರ ದೂರವಾಣಿ ಸಂಖ್ಯೆಯನ್ನು ಕಳೆದುಕೊಂಡು ಮತ್ತೆ ಸೆವ್ರಿನ್ ಟೀಚರ’ ಬಳಿ ಯಾಚಿಸಿ ಪಡಕೊಂಡ ಸಂಖ್ಯೆಗೆ ಫೋನಾಯಿಸಲು ರಿಂಗ್ ಆಗುತ್ತಿತ್ತೇ ವಿನಃ ಯಾರೂ ಎತ್ತುತ್ತಿರಲಿಲ್ಲ.

ಕೊನೆಗೆ ಇನ್ನೇನು ಕರೆಯನ್ನು ತುಂಡರಿಸಬೇಕೆಂದುಕೊಂಡಾಗ ಟಪ್ಪನೆ ಕರೆಯನ್ನು ಸ್ವೀಕರಿಸಿದ ಕಂಠ, ‘ಹಲೋ…’ ಎಂದಿತು.

ನಾನು, ‘ಹಲೋ, ಸಿಸ್ಟರ್ ತೆರೆಜ ಮಿನೇಜಸ್ ಬಳಿ ಮಾತನಾಡಬಹುದೇ?’ ಎಂದು ಕೇಳಿದೆ.

‘ನಾನೇ ಮಾತನಾಡುತ್ತಿರುವುದು’ ಎಂದು ಹೇಳಿ, ಮುಂದುವರಿದು, ‘ಯಾರು? ಏನು? ಎತ್ತ? ಎಂದೆಲ್ಲ ತಿಳಿದ ಮೇಲಂತೂ ಅವರಿಗೆ ಖುಷಿಯೋ ಖುಷಿ. ಕೂಡಲೇ ಪರಸ್ಪರರ ಮೊಬೈಲ್ ಸಂಖ್ಯೆಯನ್ನು ವಿನಿಮಯ ಮಾಡಿಕೊಂಡೆವು. ನಾನು ಅತ್ತ ಬರುವುದಾಗಿಯೂ, ಅವರು ಬೆಂಗಳೂರಿನತ್ತ ಬಂದರೆ ನನಗೆ ತಿಳಿಸುವುದಾಗಿಯೂ ಹೇಳಿ, ಒಂದೆರಡು ವಾರಗಳ ಮಟ್ಟಿಗೆ ಮಂಗಳೂರಿಗೆ ಹೋಗುತ್ತಿದ್ದೇನೆಂದೂ ಬಂದ ಬಳಿಕ ನನಗೆ ಫೋನಾಯಿಸುತ್ತೇನೆಂದು ಹೇಳಿ ಅಂದಿನ ಮಾತುಕತೆಯನ್ನು ಮುಗಿಸಿದ್ದೆವು.

ದಿನಗಳು ಉರುಳಿದವು. ಈ ನಡುವೆ ಯಾಕೋ ಒಂದು ದಿನ ಅವರೊಡನೆ ಮಾತನಾಡುವ ಮನಸ್ಸಾಯಿತು. ಫೋನಾಯಿಸಿದೆ. ಕರೆಯನ್ನು ಸ್ವೀಕರಿಸಿದ ಅವರು, ‘ಅರೆ! ಸಂತೋಷ್, ನಿನ್ನೆ ನಿನಗೆ ಫೋನ್ ಮಾಡಬೇಕೆಂದುಕೊಂಡಿದ್ದೆ. ರಾತ್ರಿಯಾಗಿತ್ತು ಬೇರೆ, ನೀನು ಟ್ರಾವೆಲಿಂಗ್‌ನಲ್ಲಿ ಇರುತ್ತೀಯೋ ಏನೋ.. ಅಂದುಕೊಂಡು ಫೋನ್ ಮಾಡಲಿಲ್ಲ. ಇದೀಗ ನೋಡಿದರೆ ನೀನೇ ಕರೆ ಮಾಡಿರುವೆ’ ಎಂದು ತಮ್ಮ ಟೆಲಿಪತಿಯ ಅಚ್ಚರಿಯನ್ನು ಬಿಡಿಸಿಟ್ಟರು. ‘ಮಂಗಳೂರಿಗೆ ಹೋಗಿದ್ದ ತಮಗೆ ಜ್ವರ ಬಂದು ಹೇಳಿದ ಸಮಯಕ್ಕೆ ತಿರುಗಿ ಬರಲಾಗಲಿಲ್ಲವೆಂದೂ, ಫೋನ್ ಮಾಡುತ್ತೇನೆಂದು ಹೇಳಿದ್ದೆ ನೋಡು, ಮಾಡಲಾಗದಿದ್ದುದು ನನ್ನನ್ನು ತುಂಬಾ ಕೊರೆಯುತ್ತಿತ್ತು…’ ಎಂದೆಲ್ಲ ತಮ್ಮ ಭಾವನೆಯನ್ನು ಪ್ರಕಟಿಸಿದರು. ಸಂಬಂಧ ಎನ್ನುವುದಿದೆಯಲ್ಲಾ ಅದು ಯಾರ ಸೊತ್ತೂ ಅಲ್ಲ. ಹೇಳಿ ಕೇಳಿ ಪಡೆದುಕೊಳ್ಳುವುದಂತೂ ಅಲ್ಲವೇ ಅಲ್ಲ. ಅದು ನಮ್ಮೊಳಗೇ ಮೊಳೆತು ಬೆಳೆಯುವಂತದ್ದು.

‘ಈ ಸಲವಾದರೂ ನನ್ನನ್ನು ನೋಡಲು ಬರುತ್ತೀಯೇನು?’ ಎಂದು ಅಕ್ಕರೆಯಿಂದಲೇ ಕೇಳಿದ್ದರು. ಖಂಡಿತಾ ಬರುವುದಾಗಿಯೂ ಹೇಳಿದ್ದೆ. ಯಾಕೋ ಏನೋ ಮನಸ್ಸಿಗೆ ಕೂಡಲೇ ಅವರನ್ನು ಭೇಟಿಯಾಗಬೇಕೆಂದೆನಿಸಿತು. ಇನ್ಯಾಕೆ ತಡ ಎಂದವನೇ ಬೆಂಗಳೂರಿನಿಂದ ಸುಮಾರು ನಾಲ್ಕು ತಾಸುಗಳ ಪ್ರಯಾಣವನ್ನು ಬೆಳೆಸಿ ಅವರಿದ್ದ ಸ್ಥಳಕ್ಕೆ ಹೋದೆ. ಹೋದವನೇ, ‘ಸಿಸ್ಟರ್ ತೆರೆಸಾ ಮಿನೇಜಸ್ ಇದ್ದಾರೆಯೇ?’ ಎಂದು ಕೇಳಿದೆ. ವಿಷಯವರಿತು ಒಳಕ್ಕೆ ಹೋಗಲು ಅಣಿಯಾಗುವಷ್ಟರಲ್ಲಿ ಖುದ್ದು ಅವರೇ ಬಂದು ಯಾರೆಂದು ಮುಖವನ್ನು ನೋಡಿ ಯಾವೊಂದು ಭಾವನೆಯನ್ನೂ ಅಭಿವ್ಯಕ್ತಿಸದೆ, ‘ಬನ್ನಿ ಕುಳಿತುಕೊಳ್ಳಿ’ ಎಂದು ಅಲ್ಲಿಯ ತನಕ ಆಗುಂತಕನಾಗಿದ್ದ ನನ್ನನ್ನು ಕೇಳಿಕೊಂಡರು.

ಈಗ ಬರುತ್ತೇನೆಂದು ಹೇಳಿ ಒಳಕ್ಕೆ ಹೋಗುವ ಮೊದಲು, ‘ಯಾರು ನೀವು?’ ಎಂದು ಸಿಸ್ಟರ್ ಕೇಳಿದರು. ‘ನಿಮ್ಮ ಹಳೆಯ ವಿದ್ಯಾರ್ಥಿ’ ಎಂದಷ್ಟೇ ಹೇಳಿದೆ. ‘ಪರಿಚಯವಾಗಲಿಲ್ಲವೇ?’ ಎಂದು ಮತ್ತೆ ಕೇಳಿದೆ. ಮುಖವನ್ನೇ ದಿಟ್ಟಿಸಿ ನೋಡಿದರು. ನನಗೆ ನಗು ತಡೆಯಲಾಗಲಿಲ್ಲ. ಬಾಯಿ ತುಂಬಾ ನಕ್ಕುಬಿಟ್ಟೆ. ಅಷ್ಟಕ್ಕೇ, ‘ಸಂತೋಷ್…?’ ಎಂದು ಹುಬ್ಬೇರಿಸಿ ಪ್ರಶ್ನಿಸಿದರು. ಹೌದೆಂದು ತಲೆಯಾಡಿಸಿದೆ. ಅಷ್ಟಕ್ಕೇ ಸಂಭ್ರಮವನ್ನು ತಡೆಯಲಾಗದೆ, ‘ನಿನ್ನೆ ಫೋನಾಯಿಸಿದ್ದೆ ಇಂದು ಇಲ್ಲಿ! ನೀನು ಬರುವುದಾಗಿಯೂ ಹೇಳಲಿಲ್ಲ’ ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ನನ್ನ ಭೇಟಿ ಅಚ್ಚರಿಯದ್ದಾಗಿರಲಿ ಎಂಬ ಕಾರಣಕ್ಕೆ ಹೇಳಿರಲಿಲ್ಲ ಎಂದು ತಿಳಿಸಿದೆ.

ಅವರಿಗಾಗಿಯೇ ಕೊಂಡುಹೋಗಿದ್ದ ಹಣ್ಣಿನ ಬುಟ್ಟಿಯನ್ನು ನೀಡಿ, ನನ್ನೊಳಗಿನ ಪ್ರತಿಭೆಗಳನ್ನು ಗುರುತಿಸಿ ಬೆಳೆಸಿದ ನನ್ನಿಷ್ಟದ ಜೀವವನ್ನೊಮ್ಮೆ ಮೃದುವಾಗಿ ಅಪ್ಪಿಕೊಂಡೆ. ಅವರಿಗೆ ಸಡಗರ ಹೆಚ್ಚಾಗಲು ಅಲ್ಲಿರುವ ಎಲ್ಲರಿಗೂ, ‘ಈತ ನನ್ನ ವಿದ್ಯಾರ್ಥಿ, ಮೂವತ್ತೆರಡು ವರ್ಷಗಳ ಬಳಿಕ ನನ್ನನ್ನು ಭೇಟಿಯಾಗಲು ಬಂದಿದ್ದಾನೆ’ ಎಂದು ಖುಷಿಯಿಂದ ಹೇಳುತ್ತಾ ಪರಿಚಯಿಸಿ, ತಮ್ಮ ನಿವಾಸದ ಸುತ್ತಲೂ ಕರೆದುಕೊಂಡು ಹೋದರು. ಡೈನಿಂಗ್ ರೂಮಿನೊಳಗೆ ಕರೆದು ಚಹಾ, ಹಣ್ಣು, ಸಿಹಿಯನ್ನು ನೀಡಿದಾಗ ನನ್ನ ಮನಸ್ಸು ಓಡಿದ್ದು ಮತ್ತೆ 32 ವರ್ಷಗಳ ಕೆಳಗೆ.

*

ಅಂದು ಕನೆಕ್ಟಿವಿಟಿ ಅಷ್ಟೇನೂ ಚೆನ್ನಾಗಿರದ ದಿನಗಳು. ಶಾಲಾ ಪ್ರವಾಸಕ್ಕೆ ಹೋದರೆ ಅಂದು ರಾತ್ರಿ ಮನೆಗೆ ಬರಲಾಗುತ್ತಿರಲಿಲ್ಲ. ಶಾಲೆಯಿಂದ ಐದಾರು ಕಿಲೋಮೀಟರ್ ದೂರದಲ್ಲಿ ನನ್ನ ಮನೆಯಿದ್ದಿತ್ತು. ಹಾದಿಯೂ ದುರ್ಗಮವಾಗಿತ್ತು. ಹಾಗಾಗಿ ನಾನು ಮತ್ತು ನನ್ನಂಥ ಹಲವರು ಶಾಲೆಯಲ್ಲಿಯೇ ಆ ರಾತ್ರಿ ಮಲಗಿ ಮರುದಿನ ಬೆಳಗ್ಗೆ ಬಸ್ಸು ಹತ್ತಿ ಮನೆಗೆ ಹೋಗುತ್ತಿದ್ದದ್ದು ಮಾಮೂಲಾಗಿತ್ತು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಮರಳಿ ಬರುವಾಗಲೂ ಸಹ ಅದೇ ಕಥೆ. ಕತ್ತಲು ಮತ್ತೆ ನನ್ನನ್ನು ಮನೆಯತ್ತ ಹೋಗದಂತೆ ಮಾಡುತ್ತಿತ್ತು. ಆವಾಗಲೆಲ್ಲ ಕಾನ್ವೆಂಟ್ ನಲ್ಲಿ ರಾತ್ರಿ ಕಳೆಯಲು ವ್ಯವಸ್ಥೆಯನ್ನು ಮಾಡುತ್ತಿದ್ದರಲ್ಲದೆ ಊಟದ ಏರ್ಪಾಡನ್ನೂ ಮುಖ್ಯೋಪಾಧ್ಯಾಯರು ಮಾಡುತ್ತಿದ್ದರು. ಪಿಂಗಾಣಿ ಬಟ್ಟಲಲ್ಲಿ ಕೊಚ್ಚಿಗಕ್ಕಿ ಗಂಜಿಯ ಜೊತೆಗೆ ನೆಂಜಲು ಪಲ್ಯ, ಉಪ್ಪಿನಕಾಯಿಯನ್ನು ನೀಡುತ್ತಿದ್ದುದು ನೆನಪಾಗಿ ಅದನ್ನವರ ಬಳಿ ಹಂಚಿಕೊಂಡೆ.

‘ನಿನಗೆ ಎಷ್ಟೆಲ್ಲಾ ನೆನಪಿದೆಯಲ್ಲ…’ ಎಂದು ಅಭಿಮಾನದಿಂದ ನನ್ನತ್ತ ನೋಡಿದರು. ಕೊನೆಗೂ ಹೊರಡುವ ಸಮಯ ಬರಲು ಕಾಲಿಗೆರಗಿ ಆಶೀರ್ವಾದವನ್ನು ಪಡೆದೆ. ಜೊತೆಗೊಂದಿಷ್ಟು ಫೋಟೋಗಳನ್ನೂ ಕ್ಲಿಕ್ಕಿಸಿಕೊಂಡೆ. ಹಾವ-ಭಾವದಲ್ಲಿ, ನೋಟ-ಕಾರುಣ್ಯದಲ್ಲಿ, ಪ್ರೀತಿ-ಕಾಳಜಿಯಲ್ಲಿ, ಅಕ್ಕರೆ-ಮಮಕಾರದಲ್ಲಿ ಎಂಭತ್ತೆರಡರ ಹರೆಯದ ‘ಸಿಸ್ಟರ್ ತೆರೆಸಾ ಮಿನೇಜಸ್’ ಒಂದಿನಿತೂ ಬದಲಾಗಲಿಲ್ಲ. ಇಂದಿಗೂ ಅಂದಿನಂತೆಯೇ ಇದ್ದಾರೆಂದೆನಿಸಿ ದಾರಿಯುದ್ದಕ್ಕೂ ಅವರ ಜೊತೆಗಿನ ನನ್ನ ಫೋಟೋಗಳನ್ನು ನೋಡಿದಾಗ, ನಾನೊಂದಿಷ್ಟು ಬಲಿತು ಮಾಗಿರುವಂತೆನಿಸಿತು. ಆದರೆ ನಗುವಿನಲ್ಲಿ ಇನ್ನೂ ಆ ತುಂಟತನವಿದೆಯೆನ್ನಿಸಿ ಖುಷಿಯೂ ಆಯಿತು.

ಅವರ ಜೊತೆಗಿನ ಅಷ್ಟೂ ಫೋಟೋಗಳನ್ನು ಅವರ ಬಂಧುವೊಬ್ಬರ ವಾಟ್ಸಪ್ ಗೆ ಕಳುಹಿಸಿ ಕೊಡಲು ಹೇಳಿದಂತೆ ಕಳುಹಿಸಿಯೂ ಕೊಟ್ಟಿದ್ದೆ. ಒಂದು ಮಟಮಟ ಮಧ್ಯಾಹ್ನ ಕೆಲಸದ ಒತ್ತಡದಲ್ಲಿ ಪ್ರವಾಸದಲ್ಲಿದ್ದ ನಾನು ಊಟ ಮುಗಿಸಿ ಹೊರಡುತ್ತಿದ್ದಂತೆಯೇ, ನನ್ನ ವಾಟ್ಸಪ್ಪ್ಗೆಟಕಟಕನೆ ಒಂದಷ್ಟು ಬಾಲ್ಯದ ಪಟಗಳು ಬಂದು ಬಿದ್ದವು. ‘ಅರೆ, ಇದು ಎಲ್ಲಿಂದ ಬಂದವು? ಯಾರು ಕಳುಹಿಸಿದ್ದು?’ ಎಂದು ಚಕಿತನಾಗಿರುವಾಗಲೇ ಅತ್ತಲಿಂದ ಸಿಸ್ಟರ್ ಫೋನಾಯಿಸಿದರು. ಅದೇ ಕಾಳಜಿಯ ಮಾತು, ‘ಗಂಟೆ ಎರಡಾಯಿತು… ಊಟ ಮಾಡಿದ್ಯೇನು?’ ಕೇಳಿದರು. ‘ಹಾಂ… ಸಿಸ್ಟರ್’ ಎಂದೆ.  ‘ಹೇಳಿದಂತೆ ಈ ಎಲ್ಲ ಪಟಗಳು ಎಲ್ಲಿಂದ?’ ಕೇಳಿದ್ದಕ್ಕೆ ಉತ್ತರವಾಗಿ, ‘ನನ್ನ ವಿದ್ಯಾರ್ಥಿಗಳನ್ನು, ಅವರ ಸಾಧನೆಗಳನ್ನು ಮರೆಯುವುದುಂಟೇನು? ಅದರಲ್ಲೂ ತುಂಟ ಪೋರ ಸಂತೋಷನನ್ನು!’ ಎಂದು ಬಲು ಸಂತೋಷದಿಂದಲೇ ಹೇಳಿದಾಗ, ಬದುಕು ಅರೆಗಳಿಗೆ ಧನ್ಯವೆನಿಸಿಬಿಟ್ಟಿತು.

‘ನಿಜವಾದ ಶಿಕ್ಷಕಿ ಎಂದರೆ ಇವರೇ’ ಎಂದು ರುಜು ಹಾಕಿಯೇ ಬಿಟ್ಟೆ. ‘ಖುಷಿಯಾಗಿರು.. ಫೋನಾಯಿಸುತ್ತಿರು’ ಎಂದು ಹರಸಿ ಫೋನಿಟ್ಟರು. ಬಹುದೊಡ್ಡ ನೆನಪಿಗೆ ಮತ್ತದು ಕಾಡುತ್ತಿದ್ದ ರೀತಿಗೆ ಮುಕ್ತಿ ದೊರಕಿಸಿದ್ದಕ್ಕಾಗಿ ನನ್ನ ಇನ್ನೋರ್ವ ನೆಚ್ಚಿನ ಶಿಕ್ಷಕಿ ‘ಸೆವ್ರಿನ್ ಟೀಚರ್’ಗೆ ದಿಲ್ ಸೆ ಸಲಾಂ. ಮಂಗಳೂರಿಗೆ ಹೋದನೆಂದರೆ ಸೋಮೇಶ್ವರದತ್ತ ಹೋಗಿ ಕಡಲಿಗೆ ಮುಖಾಮುಖಿಯಾಗಿ ದೇಹ-ಮನಸ್ಸನ್ನು ಶಾಂತಗೊಳಿಸಿ ಸಿಸ್ಟೆರ್ ತೆರೆಜ ಮಿನೇಜಸ್ ಅವರನ್ನು ಭೇಟಿಯಾಗಿ ನಮಸ್ಕರಿಸಿ ಬರುವುದು ಇದೀಗ ವಾಡಿಕೆಯಾಗಿದೆ.

ಶತಮಾನವೊಂದು ಮಾಸಿ ಹೋಗುವುದರ ಜೊತೆ ಜೊತೆಗೆ ಒಂದಷ್ಟು ನೆನಪುಗಳನ್ನೂ ಅಂದು ಬಿಟ್ಟು ಹೋಗಿತ್ತು. ಎಲ್ಲರಿಗೂ ಅವರಿಷ್ಟದ ಉಡುಗೊರೆಯನ್ನು ದೇವರು  ಹೊತ್ತು ತರಲಿ ಎನ್ನುವ ಹಾರೈಕೆ ಯಾವತ್ತೂ. ದುರಿತ ಕಾಲದೊಳಗಿನ ಬದುಕು ಕಹಿಯನ್ನು ಮರೆಸಿ ಸಿಹಿಯನ್ನು ಉಕ್ಕಿಸಿ, ಇನ್ನಷ್ಟು ಮನುಷ್ಯತ್ವವನ್ನು ಉಳಿಸಿ ಬೆಳಸಲಿ ಎನ್ನುವುದೊಂದೇ ಅರಿಕೆ. ಚದುರಿಹೋದ ಬಾಲ್ಯದ ಮರೆಯಲಾಗದ ಘಟನೆಗಳ ನೆನಪುಗಳನ್ನು ಅರಸುವವರಿಗಾಗಿ ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದೇನಷ್ಟೇ.

‍ಲೇಖಕರು Admin

July 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: