ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’-ಗಾಂಧೀಜಿಯನ್ನು ನೋಡುವ ಆಕಸ್ಮಿಕ ಯೋಗ…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.

ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.

12

ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕೆಂಬ ಹೋರಾಟದ ಕಾಲದಲ್ಲಿ ಗಾಂಧೀಜಿ ಪ್ರಥಮಬಾರಿ ಮಂಗಳೂರಿಗೆ ಆಗಮಿಸಿದ್ದರು. ಆ ಸಮಯ ಉಡುಪಿ ಸಮೀಪದ ಹಳ್ಳಿಯಲ್ಲಿದ್ದ ತನ್ನ ಅಕ್ಕನ ಮನೆಗೆ ಎರಡು ದಿನಕ್ಕೆ ಬಂದಿದ್ದಳು ಅಮ್ಮಮ್ಮ. ಅಕ್ಕನ ಗಂಡ ಅನಂತಯ್ಯ ಕಟ್ಟಾ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ. ಹಿಂದೂ ಸಂಘಟನೆಯ ಪ್ರಮುಖ ವ್ಯಕ್ತಿ. ಗಾಂಧೀಜಿಯವರ ಕಾರ್ಯಕ್ರಮಕ್ಕೆ ಈ ಭಾವಅಕ್ಕನ ಜೊತೆ ಅಮ್ಮಮ್ಮನೂ ಹೋಗಿದ್ದಳು. ಇದೊಂದು ಗಾಂಧೀಜಿಯನ್ನು ನೋಡುವ ಆಕಸ್ಮಿಕ ಯೋಗ.

ಉಡುಪಿಯ ಸೀತಾ ನದಿ ದಾಟಿ, ಇನ್ನೂ ಕಿರು ಹೊಳೆಗಳನ್ನು ದೋಣಿಯಲ್ಲಿ ದಾಟಿ ಮಂಗಳೂರಿಗೆ ಬಂದದ್ದು, ಅಲ್ಲಿ ವಿಶಾಲ ಬಯಲಿನಲ್ಲಿ ಗಾಂಧೀಜಿಯವರನ್ನು ತೀರ ಸಮೀಪದಿಂದ ನೋಡಿದ್ದು,ಅವರು ದೇಶದ ದಾಸ್ಯತ್ವ, ಸ್ವತಂತ್ರ ಭಾರತದ ಕಲ್ಪನೆ ಕೊಟ್ಟದ್ದು, ಜನರಲ್ಲಿ ದೇಶ ಪ್ರೇಮ ಹೆಚ್ಚುವಂತೆ ಮಾತನಾಡಿದ್ದು ಅಮ್ಮಮ್ಮನನ್ನು ಪ್ರಭಾವಿಸಿಬಿಟ್ಟವು. ರಾಷ್ಟ್ರೀಯ ಸ್ವಾತಂತ್ರ್ಯ ನಿಧಿಗೆ ಧನ ಸಹಾಯ ಹರಿದು ಬಂದಿತು.

ಹಾಗೇ ಅನೇಕ ಹೆಂಗಸರು ಚಿನ್ನಾಭರಣ ಸಮರ್ಪಿಸಿದರು. ಆ ಗಳಿಗೆ ಅಮ್ಮಮ್ಮ ಭಾವುಕಳಾಗಿ ತನ್ನ ಕೈಯ್ಯಲ್ಲಿದ್ದ ದಪ್ಪದ ಚಿನ್ನದ ಕಡಗತೆಗೆದು ಸಹಾಯ ನಿಧಿಗೆ ಅರ್ಪಿಸುವಾಗ ಏನು ಧನ್ಯತೆಯ ಭಾವ! ದೇಶದ ಬಗ್ಗೆ ಸ್ವಲ್ಪ ಅರಿವು ಸಿಕ್ಕಿದ್ದು ಆಗಲೇ. ಯಾಕೆಂದರೆ ಚಕ್ರೀ ಮನೆಗೆ ಪತ್ರಿಕೆ ಬರುತ್ತಿರಲಿಲ್ಲ. ನಾರ್ಣಪ್ಪನಿಗೆ ಓದುವ ಆಸಕ್ತಿ ಇಲ್ಲ, ಅಮ್ಮಮ್ಮ ಅನಕ್ಷರಸ್ಥೆ.

ಉಡುಪಿಗೆ ಬಂದ ನಂತರ ಅನಂತಯ್ಯ ಅಸಮಾಧಾನದಲ್ಲಿ, ‘ಇಂತಹ ಸಭೆಯಲ್ಲಿ ನೀನು ಕೊಟ್ಟ ಆಭರಣದ ಮೌಲ್ಯ ಫಂಡ್‌ಗೆ ಹೋದರೆ ಸೈ. ಇಲ್ಲವಾದರೆ ಯಾರು ಗುಳುಂ ಮಾಡ್ತಾರೋ ದೇವರೇ ಬಲ್ಲ’ ಎನ್ನಬೇಕೇ?
‘ನಿನ್ನ ಅಜ್ಜನೂ ಮೂರುಕಾಸಿನ ಬೆಲೆ ಗೊತ್ತಿಲ್ಲದವಳೇ, ಅದೇನು ನಿನ್ನ ಅಪ್ಪನ ಮನೆ ಗಂಟಾ ಕೈಯ್ಯಿಂದ ಕಳಚಿ ಕೊಡೂಕೆ? ಚಿನ್ನ ಕಲ್ಲಿನ ತುಂಡು ಅಂತ ತಿಳಕಂಡ್ಯಾ?. ಹೇಳಿ ನನ್ನನ್ನು ಕೆಟ್ಟದಾಗಿ ಬೈದು ಬಿಟ್ಟರು. ಯಾರು ಎಂತ ಹೇಳ್ಲಿ. ಒಮ್ಮೆ ಕೊಟ್ಟ ಮೇಲೆ ಪಶ್ಚಾತ್ತಾಪ ಮಾಡೂ ಜಾಯಮಾನ ನನ್ನದಲ್ಲ. ನನ್ನ ವಸ್ತು ಕೊಟ್ಟೆ, ಶುದ್ಧ ಮನಸ್ಸಿಂದ ಕೊಟ್ಟೆ. ಅಹಂಕಾರ ಇಲ್ದೇ ಕೊಟ್ಟೆ. ಇನ್ನೆಂತರ ಬೈಯ್ಯಲಿ ನಂಗೆಂತ?’

‘ಆಮೇಲೆ ನೀ ಗಾಂಧೀಜಿಯನ್ನು ಕಾಣಲೇ ಇಲ್ವ?’ ಗೌರಿಯ ಪ್ರಶ್ನೆ.

ಇಲ್ಲ, ವಿದೇಶಿ ವಸ್ತುಗಳನ್ನು ಸುಟ್ಟು ಹಾಕಬೇಕೆಂದು ಬಸ್ರೂರಲ್ಲಿ ದೊಡ್ಡ ಸಭೆ ಗಲಾಟೆ, ದೊಂಬಿ ಎಲ್ಲಾ ಆಯ್ತಂತೆ. ನಮ್ಮ ಅನಂತಯ್ಯ ಆ ಸಭೆಗೆ ಹೋಗುವವನು ನಮ್ಮಲ್ಲಿಗೂ ಬಂದಿದ್ದ, ನನಗೆ ಅವನ ಸಂಗಡ ಹೋಪ ಮನಸ್ಸಿತ್ತು, ಆದರೆ ನಿನ್ನ ಅಜ್ಜಯ್ಯ ಬಿಟ್ಟರಲ್ಲವೇ? ಹೆಂಗಸರ ಜಾಗ ಹೊಸ್ತಿಲು ಒಳಗಂತೆ. ‘ಕಾಲು ಹೊರಗೆ ಹಾಕೀರೆ ಕಾಣು, ಎಂತ ಮಾಡ್ತೆ.’ ಥೇಟ ದೂರ್ವಾಸಮುನಿ.

ಅನಂತಯ್ಯನ ಎದುರು ಉತ್ತರ ಕೊಡಲಿಲ್ಲ ನಾನು. ಅವನೂ ಬಾಯ್ಮುಚ್ಚಕಂಡ ಹೋದ. ಅಲ್ಲ ಗೌರಿ, ನಂಗೊಂದು ತಿಳೀದು, ಮಂಗಳೂರು ಕಾರ್ಯಕ್ರಮಕ್ಕೆ ಎಷ್ಟು ಹೆಮ್ಮಕ್ಕಳು! ನನ್ನ ಹಾಗೆ ಹದಿನೆಂಟು ಮೊಳ ಸೀರೆ ಉಟ್ಟವರು, ಸೆರಗುತಲೆಗೆ ಹೊದ್ದವರು, ತಲೆ ಬೋಳಿಸಿಕೊಂಡವರುಬಂದ್ರಲ್ಲ. ಅವರೆಲ್ಲ ಹೊಸಿಲು ದಾಟಿ ಬಂದ ಹೆಂಗಸರೇ ಅಲ್ವಾ? ಮಕ್ಕಳು ಮರಿ ಇದ್ದವರೇ ಅಲ್ಲದಾ? ನಮಗ್ಯಾಕೆ ಈ ಕಟ್ಟು ಪಾಡು? ಕಾಲಿಗೆಂತಕ್ಕೆ ಸರಪಣಿ? ಬಸಿರು ಬಾಂಣತನ, ಬರೀ ಒಲೆ ಮುಂದೆ ಬೇಯ್ಸು, ಕಲ್ಲಲ್ಲಿ ಅರಿ, ಮಡಿಕೆ ತಿಕ್ಕು, ಸಾರಿಸು, ಮೂರು ಹೊತ್ತು ಇದೊಂದೆಯಾ?’

ಕಣ್ಣೀರು ತುಂಬುತ್ತಿತ್ತುಪ್ರತಿಬಾರಿ ಈ ವಿಷಯ ಹೇಳುವಾಗ. ಯಾವುದೋ ಅತೃಪ್ತ ಭಾವ ಹೊಗೆ ಆಡುತ್ತಿತ್ತು ಒಳಗಿನಿಂದ. ಆದರೂ ಈ ಅಮ್ಮಮ್ಮ ಗಟ್ಟಿಗಿತ್ತಿ. ಈಜುವುದರ ಜೊತೆಗೆಮರ ಹತ್ತುವುದು ಅವಳ ಪ್ರಿಯ ಕೆಲಸ. ತನಗೆ ಬೇಕಾದ ನುಗ್ಗೆ ಕೋಡು ಕುಯ್ಯುವುದು, ಹುಣಿಸೆ ಮರ ಹತ್ತಿ ಹುಳಿಕೋಡು ಬೀಳಿಸುವುದು, ಮಾವು, ಪೇರಲೆಕಾಯಿ ಮಾತ್ರವಲ್ಲ ಕೆಲಸದವ ಸಿಗದಿದ್ದರೆ ಸಣ್ಣ ಮರಗಳಿಂದ ಹಲಸಿನ ಕಾಯಿ ಕುಯ್ದು ತರುವುದು ಅವಳೇ.

ಕೊಡಲಿಯಿಂದ ದೊಡ್ಡ ಹಲಸಿನ ಕಾಯಿ ಭಾಗ ಮಾಡಿ ಕತ್ತಿಯಿಂದ ಚಕ ಚಕ ಕತ್ತರಿಸಿ! ಹಾಂ, ತೆಂಗಿನ ಮರಕ್ಕೆ ಒಮ್ಮೆ ಅರ್ಧ ಹತ್ತಿ ಇಳಿದಿದ್ದಳಂತೆ. ಮತ್ತೆ ಆ ಸಾಹಸ ಮಾಡಲಿಲ್ಲ. ಒಟ್ಟಾರೆ ಯಾರನ್ನೂ ಯಾವ ಹೊತ್ತಿಗೂ ಕಾಯುವವಳಲ್ಲ. ಅಬ್ಬಬ್ಬ, ಒಂದು ಗಂಡಾಳಿನ ಶಕ್ತಿಯುತ ಹೆಣ್ಣು. ‘ನೀನೊಬ್ಬಳು ಗಂಡುಬೀರಿ!’ ನಾರ್ಣಜ್ಜನ ಕೆಣಕು ಮಾತಿಗೆ ಲೆಕ್ಕವಿಲ್ಲ’

‘ಹೌದು, ನೀವು ಬಳೆತೊಟ್ಟ ಹೆಣ್ಣಾದರೆ ನಾನು ಗಂಡುಬೀರಿ. ಏನೀಗ?’ ಝಾಡಿಸಿ ಉತ್ತರಿಸುವ ಅಮ್ಮಮ್ಮ ಮತ್ತು ನಾರ್ಣಜ್ಜನ ಮಧ್ಯೆ ಒಂದು ಚೆನ್ನೆಮಣೆ ಆಟ ಕೊನೆತನಕ ಅವರ ವೈಮನಸ್ಸಿಗೆ ಕಾರಣವಾಗಿ ಛೇ, ಆ ನೆನಪು ಬಂದರೆ ಸಾಕು, ಕಹಿ ಗುಳಿಗೆ ಚಪ್ಪರಿಸಿದಂತೆ. ಅಮ್ಮಮ್ಮನ ಮಡಿಲಲ್ಲಿ ತಲೆ ಇಟ್ಟ ಗೌರಿಗೆ ನೆನಪುಗಳದೇ ಮಂಪರು.

ಕತ್ತಲೆ ಇಣುಕುವಾಗ ಬಾಳೆಹಣ್ಣು ರಸಾಯನ, ನೀರು ಮಾವಿನಕಾಯಿ ಖಾರದಗೊಜ್ಜು ಮಾಡಿಯಾಗಿತ್ತು. ಬೇಯಿಸಿದ ಅಕ್ಕಿಹಿಟ್ಟಿನ ಉಂಡೆಯನ್ನು ಶ್ಯಾಮಿಗೆ ಮುಟ್ಟಿನಲ್ಲಿ ಒತ್ತುವುದು ಬಾಕಿ. ಸುಶೀಲಚಿಕ್ಕಿ ಮುಟ್ಟು. ಅಟ್ಟದಿಂದ ಇಳಿದಿರಲೇ ಇಲ್ಲ. ಶ್ಯಾಮಿಗೆ ಒತ್ತಲು ಸುಬ್ಬಪ್ಪಯ್ಯ ಮತ್ತು ಕಮಲತ್ತೆ. ತಮ್ಮ ಎಂಬತ್ತೆರಡರ ಪ್ರಾಯದಲ್ಲೂ ಸುಬ್ಬಪ್ಪಯ್ಯ ಶ್ಯಾಮಿಗೆ ಒತ್ತಲು ಗಟ್ಟಿ ಜನವೇ. ಶ್ಯಾಮಿಗೆ ಮೆಲ್ಲಲು ಇನ್ನೂ ಹುಷಾರು.

ಒತ್ತಿ ಬೀಳುವ ಎಳೆ ಎಳೆ ಶ್ಯಾಮಿಗೆಯನ್ನು ಅಡಿಯಲ್ಲಿ ಅಡಿಕೆ ಹಾಳೆಗೆ ಹಾಕಿ ತೆಗೆಯಲು ಆಯಿ. ನಾಳೆ ಹೊರಡಲಿರುವ ಅಮ್ಮಮ್ಮನ ಚೀಲ ಹುಗ್ಗಿಸಿಟ್ಟು ಗೌರಿ, ನಾಣಿ ‘ಅಮ್ಮಮ್ಮ ಹೋಪದು ನಾಡಿದ್ದೇ. ಇಬ್ಬರೂ ಹಠ ಮಾಡ್ವ’ ಎನ್ನುತ್ತ ತಮ್ಮ ಕೋಣೆಗೆ ಬಂದರು. ಅಪ್ಪಯ್ಯ ಇಲ್ಲದ ದಿನ. ಆಯಿ ಬದಿಯಲ್ಲಿ ಅವಳಿಗೂ ಚಾಪೆ ಹಾಸಿದರು. ಬೂರಲು ಹತ್ತಿಯ ಹಾಸಿಗೆ ಇದ್ದರೂ ಅಮ್ಮಮ್ಮನಿಗೆ ಚಾಪೆಯೇ ಬೇಕು. ಕೋಣೆ ಪರದೆ ಈಚೆ ಸರಿಸಿ ತಮ್ಮ ಹಾಸಿಗೆ ಎಳೆದು ತಂದಿಟ್ಟರು. ‘ಅಮ್ಮಮ್ಮ ಇಲ್ಲೇ ಉಳಿದರೆ ಗಮ್ಮತ್ತು ಅಲ್ಲದಾ?’ ಹೇಳಿಕೊಂಡರು.

ರಾತ್ರೆ ಗಡದ್ದಾದ ಶ್ಯಾಮಿಗೆ ಊಟ. ಅಮ್ಮಮ್ಮ ಮಾವಿನಕಾಯಿ ಗೊಜ್ಜಿಗೆ ಎರಡು ಸಂಡಿಗೆ ಮೆಣ್ಸು ನುರಿದು ನೆಕ್ಕಿ ತಿಂದು ತೃಪ್ತಿಯಿಂದ ಎಲ್ಲರ ಮುಖ ನೋಡಿದಳು. ಸುಬ್ಬಪ್ಪಯ್ಯ ಒಬ್ಬರು ‘ಗದ್ದೆ ಹೂಟೆ ಮಾಡಿ ಆತಾ? ಮೊನ್ನೆ ಮಳೆಗೆ ನೇಜಿ ನೆಟ್ಟಾತಾ? ಈ ಸಲ ಉದ್ದಿನ ಧಾರಣೆ ಏರಿದ್ದು ಅಲ್ಲದಾ? ದನ ಎಷ್ಟಿದ್ದು ಕರೆವಲೆ?’ ವ್ಯವಹಾರಿಕ ಮಾತು. ಆಯಿ ಬಿಮ್ಮನೆ ಇದ್ದಳು. ಯಾವಾಗಲೂ ಪಟಪಟ ಹರಟುವ ಅಜ್ಜಮ್ಮ, ಶಾರದೆ ಬಾಯಿ ಬೀಗ ಹಾಕಿದ್ದು ಯಾಕೋ. ತಾನು ಬಂದ ಹೊತ್ತು ಸರಿಯಿಲ್ಲವೇ? ಇದಕ್ಕೆಲ್ಲ ಉತ್ತರ ಸಿಕ್ಕಿದ್ದು ರಾತ್ರೆ ಆಯಿ ಮನೆಕೆಲಸ ಮುಗಿಸಿ ಮಲಗಲು ಬಂದಾಗಲೇ.

ತಮ್ಮ ಹಾಸಿಗೆಗೆ ಒತ್ತಿಮಲಗಿದ್ದ ಮಕ್ಕಳಿಗೆ ನಿದ್ರೆ ಬಂದಿದೆ ಎಂದು ಖಚಿತ ಪಡಿಸಿಯೇ ಆಯಿ ಮೊನ್ನೆ ಬಂದ ಹುಡುಗನ ವಿಷಯ ಎತ್ತಿದಳು. ಆದರೆ ಮುಸುಕು ಹೊದ್ದು ನಿದ್ದೆ ಬಂದಂತೆ ನಟಿಸಲುಗೌರಿ ಹುಷಾರು. ಅದರಲ್ಲೂ ತನ್ನ ಮದುವೆ ವಿಷಯ, ಅಮ್ಮಮ್ಮನ ಅಭಿಪ್ರಾಯ ಆದೀತೇ? ಇಲ್ಲವೇ? ತಿಳಿಯುವ ಕುತೂಹಲ. ಎಚ್ಚರವಿದ್ದೂ ನಿದ್ದೆಯ ನಾಟಕ!.

ಆಯಿ ಸಣ್ಣ ಸ್ವರದಲ್ಲಿ ಹುಡುಗ ಶಾರದೆಯನ್ನು ಬಿಟ್ಟು ಗೌರಿಯನ್ನು ಒಪ್ಪಿದ್ದು, ಅತ್ತೆ, ಮಾವ ತಾನು ಎಲ್ಲರೂ ಗೌರಿಗೆ ಬಾಸಿಂಗ್ ಬಲ ಬಂತೆಂದು ಖುಷಿ ಪಟ್ಟದ್ದು ಹೇಳುತ್ತ, ‘ಅವಳ ಅಪ್ಪನಿಗೆ ಈಗ ಮದ್ವೆ ಮಾಡೂಕೆ ಮನಸ್ಸಿಲ್ಲೆ. ನೀ ಎಂತ ಹೇಳ್ತೆ? ಬಂದ ಸಂಬಂಧ ಕಾಲಲ್ಲಿ ಒದ್ದು ಕೂತರೆ ನಾಳೆ ಇಂತಾದ್ದೆ ಎಲ್ಲಿ ಸಿಕ್ಕಗು’

‘ಅದಿನ್ನೂ ಸಣ್ಣಮಗು. ನಾ ಎಂತ ಹೇಳ್ಲಿ?’

‘ಸಣ್ಣ ಮಗು? ಬುದ್ದಿ ಬೆಳೆದಿತ್ತು ಬಿಡು. ಮದುವೆ, ಮಕ್ಕಳು ವಿಚಾರದಲ್ಲಿ ತಲೆ ಚುರುಕು.’

ಗೌರಿ ಮುಸುಕಿನಲ್ಲೇ ಅರ್ಧ ಕಣ್ಣು ತೆರೆದಳು. ಆಯಿ ಮಾತಿನ ಹಿಂದೆ ಆವತ್ತು ತಾನು ಕೇಳಿದ ಪ್ರಶ್ನೆಯೇ ಕಾರಣವೇ? ಇರಬೇಕು.

| ಇನ್ನು ನಾಳೆಗೆ |

‍ಲೇಖಕರು Admin

July 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಲಲಿತ ಎ.ಪಿ.

    ಎಂಥಾ ಸುಂದರ ನಿರೂಪಣೆ!
    ಒತ್ತು ಶ್ಯಾವಿಗೆ, ನೀರು ಮಾವಿನಕಾಯಿ ಗೊಜ್ಜು, ಬಾಳಕ ಮೆಣಸು… ಆಹಾ!

    ಆ ಕಾಲದ ಬದುಕು ಕಣ್ಣೆದುರು ಕಟ್ಟಿಕೊಡುವ ಸಂಚಿಕೆಗಳು…

    ಪ್ರತಿಕ್ರಿಯೆ
    • ಜಯಲಕ್ಷ್ಮಿ

      ಬಹಳ ಚೆನ್ನಾಗಿತ್ತು ಅಮ್ಮಮ್ಮನ ಸಾಹಸಕಥನ

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: