ಸಂತೆಬೆನ್ನೂರು ಫೈಜ್ನಟ್ರಾಜ್
ಯಾವ ದನಿಯ ಕೇಳಿಸಿಕೊಳ್ಳಲಿ…
ಮಳೆ, ಹದನೆಲ, ಅಗೆದಷ್ಟೂ ಆಳ ಗುದ್ದಲಿಯ ಮುಖಮೂತಿ
ಒಳಕಾವಿಗೆ ಕೆಂಪು; ಎದುರು ಸಿಕ್ಕ ಹಳೆಯ ಗೆಳತಿ
ಯ ಕಣ್ಣ ಮೌನದಷ್ಟೇ ಬಿಸುಪು ದನಿ ಇಲ್ಲವೇ ಇಲ್ಲ!
ತೆಂಗು ಬಾಳೆ, ಕರಿಬೇವು, ಸಪೋಟ, ಪೇರಲೆ ಗಿಡಗಳು
ಮತ್ತು ಹೆಸರಿಲ್ಲದ ಹೂ ಬಳ್ಳಿಗಳು, ಬೆಳಕು ಬರುವ ಮುನ್ನವೇ
ಬಂದು ನನ್ನದಿಷ್ಟು, ನಿನ್ನದಿಷ್ಟು
ಅದು ನಂದು
ಇದು ನಿಂದು
ಎನ್ನುತ್ತಾ ರಂಬೆ-ಕೊಂಬೆಗಳ ಪಾಲು ಮಾಡಿಕೊಂಡು
ಕೂತ ಹಕ್ಕಿ ಗುಂಪಿನ ಸದ್ದು
ಯಾವುದೋ ಹಾಡುಗಳ ರಿಯಾಜಿಗೆ
ನಮ್ಮ ಹಿತ್ತಲ ಜಾಗ ಪಕ್ಕ!

ನೂರು ದನಿಯಲ್ಲಿ ಒಂದು ದನಿ ಎದೆಗಿಳಿದೀತೇ?
ಮಣ್ಣಲ್ಲಿ ಮಣ್ಣಾಗೋ
ಎದೆಯ ಹಾಡು ಕೊರಳ ತುದಿ ಹಿಡಿದು ಕೊಡವಿದರೆ
ಬೆವರ ಹನಿಗಳು ಫಸಲಿನಲಿ ನಕ್ಕ ದನಿ ಕೇಳೀತಾ?
ಯಾವ ದನಿಯ ಕೇಳಿಸಿಕೊಳ್ಳಲಿ…
ಅಗಣ ತ ಅಕ್ಷರಗಳ ಹೊತ್ತ ಕವಿತೆ
ರಾಗವಾಗಿ ಎದೆಗಳಿಗೆ ಮುಟ್ಟುವಲ್ಲಿ
ಸೋಲು;
ಜೊತೆಯಿದ್ದ ಮಾತ್ರಕ್ಕೆ ಜತೆಯೆಂದುಕೊಂಡ ಭಾವದ ದನಿ
ಕೇಳಿಸುತ್ತಿಲ್ಲ! ಎಷ್ಟೊಂದು ಶಬ್ಧಗಳು ಒಂದೊಂದು ಒಂದೊಂದಕೆ
ಇರುವೆ ಹಜ್ಜೆಯೂ ನಾಗಾಲೋಟದ ಸದ್ದಿಗೆ ಸವಾಲು ಎದೆಗೊರಗಿದ ಕಿವಿಗೆ
ಹೃದಯಸ್ಥಂಬನದ ಶಬುದ ಶ್ರವ್ಯವಾಗುತ್ತಿಲ್ಲ
ಯಾವ ದನಿಯ ಕೇಳಿಸಿಕೊಳ್ಳಲಿ…
ಗದ್ದೆ ಸಾಲ ಹೊಳೆ, ಮೊಟ್ಟೆ ಮರಿಯ ಹುಡುಕುವ ಕೋಗಿಲೆ
ತೆಂಗಿನ ಗರಿ ತುದಿಗೆ ಕಾಲು ಚಾಚಿ ಬಿದ್ದ ಕಳ್ಳ ಬಿಸಿಲು
ತಂತಿಗಳ ಮೇಲೆ ತಲೆಕೆಳಗಾಗಿ ನೇತಾಡೊ ಒಳ ಉಡುಪುಗಳು
ಮತ್ತು
ಬಾಯಿ ಬಿಡದೇ ಹಾಡಿಕೊಳ್ಳುತ್ತಿರುವ ಆ ಹುಡುಗಿಯ ವಿರಹ ಗೀತೆ
ಊಹ್ಞುಂ
ಎಲ್ಲಾ……ಗುಂ…..ಗು ಗಾನ ಅಷ್ಟೇ

ಯಾವ ದನಿಯ ಕೇಳಿಸಿಕೊಳ್ಳಲಿ..
ಚಣ ಚಣಕೂ ಸಾವಿನ ಸದ್ದು ಕಿವಿ ತುಂಬುತಿದೆ
ಸತ್ತ ಜೀವಗಳ ಮಸಣದ ಹಾಡಾದರೂ ಮೂಕ ಮೂಕ!
ಮಣ್ಣ ಅಣು ಅಣುವೂ ಸದ್ದೇ,
ಎದೆಯ ದನಿಗೂ ಮಿಗಿಲಿಲ್ಲವೆಂಬ ಹಿರಿಯರ ನುಡಿಯದು ಸದಾ ಅಣುರಣನ!
ಯಾವ ದನಿಯ ಕೇಳಿಸಿಕೊಳ್ಳಲೆಂದೇ ಮನ ನೀರ ಬಿಟ್ಟ ಮೀನಾಗಿದೆ
ದನಿ ಎದೆಯೊಡೆಯದಿರೆ ಧನ್ಯವೀ ಬದುಕು!






Tumba channagide.