ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಸಂತಸವನ್ನು ಗುರುತಿಸಲು ಕಲಿಸುವ ಶಾಲೆಗಳು ಬೇಕಿತ್ತು!’

ಪ್ರಸಾದ್ ನಾಯ್ಕ್ 

ಪತ್ರಕರ್ತನೊಬ್ಬ ‘ದ ಆಲ್ಕೆಮಿಸ್ಟ್’ ಖ್ಯಾತಿಯ ವಿಶ್ವವಿಖ್ಯಾತ ಬ್ರೆಜಿಲಿಯನ್ ಲೇಖಕ ಪೌಲೋ ಕೊಯೆಲೋರನ್ನು ಕೇಳಿದನಂತೆ:

”ಮುಂದೊಂದು ದಿನ ನೀವು ಸತ್ತಾಗ ನಿಮ್ಮ ಸಮಾಧಿಯ ಮೇಲೆ ಏನನ್ನು ಬರೆಸಲಿಚ್ಛಿಸುವಿರಿ?”

ಪೌಲೋ ಈ ಪ್ರಶ್ನೆಗೆ ಹೀಗಂದಿದ್ದರು: ” ‘ಪೌಲೋ ಕೊಯೆಲೋ ಬದುಕಿದ್ದಾಗಲೇ ಸತ್ತ’ ಎಂದು ಬರೆಸಿ ಪ್ಲೀಸ್”

ಪೌಲೋ ಕೊಯೆಲೋ ಹೇಳಿದ್ದು ನಮ್ಮ ಕಾಲಮಾನಕ್ಕೆ ಸರಿಯಾಗಿಯೇ ಇದೆ ಎಂದನ್ನಿಸುತ್ತದೆ. ‘ಸಾಯುವುದು ಸುಲಭ, ಬದುಕುವುದೇ ಕಷ್ಟ’, ಎಂಬಂತಿನ ಕಾಲ ನಮ್ಮದು.

ಈಚೆಗೆ ನಾನು ಚಾಂದನೀ ಚೌಕ್ ಏರಿಯಾದಲ್ಲಿ ಸುಮ್ಮನೆ ಅಲೆದಾಡುತ್ತಿದ್ದೆ. ಕೆಂಪುಕೋಟೆಯಿಂದ ಹೊರಡಲಿದ್ದ ಹೊಸದೊಂದು ರಸ್ತೆಯ ಕಾಮಗಾರಿಗಾಗಿ ಈಗಿದ್ದ ರಸ್ತೆಯೊಂದನ್ನು ಮುಚ್ಚಿದ್ದರಿಂದಾಗಿ ಜನಜಂಗುಳಿಯು ಭಯಂಕರವೆನ್ನಿಸುವಷ್ಟಿತ್ತು. ಹಳೇದಿಲ್ಲಿಯೆಂಬುದು ಮೊದಲೇ ಇಕ್ಕಟ್ಟಾದ ಪ್ರದೇಶ. ಇಲ್ಲಿಯ ರಸ್ತೆಗಳಲ್ಲಿ ಮನುಷ್ಯರು, ಪ್ರಾಣಿಗಳು, ಅಂಗಡಿಗಳು, ಚಲಿಸುವ ಮತ್ತು ಪಾರ್ಕ್ ಮಾಡಿದ ವಾಹನಗಳು ಹೀಗೆ ಎಲ್ಲವೂ ಏಕಕಾಲದಲ್ಲಿ ಹಲವು ಅವತಾರಗಳಲ್ಲಿ ಸಿಗುತ್ತವೆ. ಈಗ ರಸ್ತೆ ಅಗೆತವೂ ಶುರುವಾಗಿದ್ದರಿಂದ ಗೊಂದಲವೆನ್ನುವುದು ಬೇರೆಯದೇ ಮಟ್ಟಿನಲ್ಲಿತ್ತು ಎಂದರೆ ಅತಿಶಯೋಕ್ತಿಯೇನಿಲ್ಲ.

ಆದರೆ ಇದ್ಯಾವುದೂ ದಿಲ್ಲಿಯ ನಿವಾಸಿಗಳಿಗೆ, ಹಳೇದಿಲ್ಲಿಯ ಬಗ್ಗೆ ತಿಳಿದಿರುವವರಿಗೆ ಹೊಸತಲ್ಲ. ರಸ್ತೆ ಅಗೆತ ಒಂದು ನೆಪವಾಗಿರಬಹುದು. ಇತರ ದಿನಗಳಲ್ಲೂ ಈ ಬೀದಿಗಳು ಬಹುತೇಕ ಇದೇ ರೀತಿ ಗಿಜಿಗುಡುತ್ತಿರುತ್ತವೆ. ಆದರೆ  ನಮ್ಮ ವಾಹನಗಳು ಆಕಾಶ ಹರಿಯುವಂತೆ ಅರಚಾಡುತ್ತಲೇ ಇವೆ. ಆಯ ತಪ್ಪಿ ಬಿದ್ದರೆ ಮಳೆಯ ಕೆಸರಿಗೇ ಸ್ವಾಹವಾಗುತ್ತೇವೆ ಎಂಬುದು ಗೊತ್ತಿದ್ದರೂ ದ್ವಿಚಕ್ರ ವಾಹನಗಳು ಮತ್ತು ಸೈಕಲ್ ರಿಕ್ಷಾಗಳು ಎಲ್ಲೆಂದರಲ್ಲಿ ನುಗ್ಗಿಸುತ್ತಲೇ ಇವೆ. ಜೋರಾಗಿ ಒಬ್ಬರನ್ನೊಬ್ಬರು ಬೈಯುತ್ತಾ, ಶಪಿಸುತ್ತಾ ಗೊಣಗುತ್ತಲೇ ಇವೆ. ಇವೆಲ್ಲದರಿಂದ ಯಾವ ಪ್ರಯೋಜನಗಳೂ ಇಲ್ಲವೆಂದೂ, ಕಾಯುವುದನ್ನು ಬಿಟ್ಟು ಬೇರೆ ಆಯ್ಕೆಗಳು ತಮಗಿಲ್ಲವೆಂಬ ಸತ್ಯವು ತಿಳಿದಿದ್ದರೂ ಕೂಡ. ಕೆಂಪುಕೋಟೆಯತ್ತಲೋ, ಜಾಮಾ ಮಸೀದಿಯತ್ತಲೋ ಹೊರಡುವವನಿಗೆ ಈ ಬೀದಿಯಿಂದ ಒಂದೆರಡು ಕಿಲೋಮೀಟರುಗಳ ದೂರವಷ್ಟೇ. ಆದರೆ ವಾರಾಂತ್ಯದ ಸಂತಸವನ್ನು ಅರಸಿಕೊಂಡು ಹೋಗುವವನಿಗೆ ಅಲ್ಲಿಯವರೆಗೆ ತಲುಪುವಷ್ಟೂ ತಾಳ್ಮೆಯಿಲ್ಲ. ಸಂದರ್ಭಗಳು ನಮ್ಮ ಹಿಡಿತದಲ್ಲಿಲ್ಲವೆಂದು ಗೊತ್ತಿದ್ದರೂ ಕೂಡ ನಾವು ಸಾವಧಾನವಾಗಿ ಕಾಯುವ ಬದಲು ಕೆಲವೊಮ್ಮೆ ವಿನಾಕಾರಣ ಕೈಕಾಲು ಬಡಿಯುತ್ತಲೇ ಇರುತ್ತೇವೆ. ಜಗತ್ತು ಗೊಂದಲಮಯ.

ಇಂಥಾ ದ್ವಂದ್ವಗಳೆಲ್ಲಾ ಮಹಾನಗರಗಳಲ್ಲಿ ಮಾತ್ರ ಇರುತ್ತದೋ ಅಥವಾ ಮಹಾನಗರಗಳಲ್ಲಿ ಮಾತ್ರ ಕಣ್ಣಿಗೆ ರಾಚುವಂತೆ ಎದ್ದುಕಾಣುವುದೋ ಎಂದು ಕೆಲವೊಮ್ಮೆ ಅಚ್ಚರಿಯಾಗುತ್ತದೆ. ಉದಾಹರಣೆಗೆ ಅವಕಾಶ, ಉದ್ಯೋಗಗಳನ್ನು ಅರಸುತ್ತಾ ಮಹಾನಗರಗಳತ್ತ ವಲಸೆ ಬರುವ ವಿದ್ಯಾವಂತ ಮಂದಿ ಅವಸರಕ್ಕೆ ಬಿದ್ದು ಸಿಕ್ಕ ಒಂದು ಉದ್ಯೋಗಕ್ಕೆ ಅಂಟಿಕೊಳ್ಳುತ್ತಾರೆ. ಕಾಲಕ್ರಮೇಣ ವೃತ್ತಿಯೆಂಬುದು ಗಾಣದೆತ್ತಿನಂತಾಗಿ ಬದುಕು ಯಾಂತ್ರಿಕವಾಗಿರುತ್ತದೆ. ಸಿಕ್ಕ ಸಂಬಳದ ಬದಲಾಗಿ ತಮ್ಮ ಸ್ವಂತದ ಕನಸುಗಳನ್ನು ಕಂಪೆನಿಗಳ ಚರಣಕಮಲಗಳಲ್ಲಿ ಇಟ್ಟಿರುತ್ತೇವೆ. ಇವೆಲ್ಲವನ್ನೂ ಬಿಟ್ಟು ನಮ್ಮೂರಿಗೇ ಮರಳಿ ಹೋಗೋಣವೆನ್ನಿಸುತ್ತದೆ. ಆದರೆ ಈಗ ಹೋಗೋ ಹಾಗಿಲ್ಲ. ಏಕೆಂದರೆ ತಲೆಯ ಮೇಲೆ ಕಾರ್ ಲೋನ್, ಹೌಸಿಂಗ್ ಲೋನುಗಳು ತೂಗುಗತ್ತಿಯಂತೆ ಹೆದರಿಸುತ್ತಿವೆ. ಮಾಸಿಕ ಕಂತಿನ ರೂಪದಲ್ಲಿ ಬರುವ, ಏನಿಲ್ಲವೆಂದರೂ ಹದಿನೈದು-ಇಪ್ಪತ್ತು ವರ್ಷಗಳ ಕಠಿಣ ಸಜೆ. ಹಳ್ಳಿಗೆ ಮರಳಿದರೆ ಇ.ಎಮ್.ಐ ಕಟ್ಟೋದಾದರೂ ಹೇಗೆ?

ಮಹಾನಗರಿಯಲ್ಲಿ ಮೆಟ್ರೋ ಇತ್ತು, ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಿದ್ದವು. ಆದರೆ ಯಾರದೋ ಮುಲಾಜಿಗೆ, ಸ್ಟೇಟಸ್ ಖಯಾಲಿಗೆ ಬಿದ್ದು ಕಾರು ಖರೀದಿಸಿದ್ದಾಯಿತು. ಈಗ ಶಹರದ ಮನೆಯಲ್ಲಾಗಲಿ, ಇತರ ಸಂಕೀರ್ಣಗಳಲ್ಲಾಗಲಿ ಚಲಿಸಬಲ್ಲ ಅಷ್ಟು ದೊಡ್ಡ ಲೋಹದ ಡಬ್ಬಿಯನ್ನು ಪಾರ್ಕ್ ಮಾಡಲು ಸ್ಥಳದ ಅಭಾವ. ಪೆಟ್ರೋಲು-ಡೀಸೆಲ್ ದರಗಳು ನಿರಂತರವಾಗಿ ಮೇಲಕ್ಕೇರುತ್ತಿವೆಯೇ ಹೊರತು ಇಳಿಮುಖವಾಗುವುದು ಕಾಣುತ್ತಿಲ್ಲ. ಟ್ರಾಫಿಕ್ ಜಾಮ್ ನಿತ್ಯದ ಗೋಳು. ವಾಹನದ ಮೈ ಮೇಲೆ ಚಿಕ್ಕದೊಂದು ಗೀರು ಬಿದ್ದರೂ ಎದೆ ಒಡೆಯುವಷ್ಟಿನ ಗಾಬರಿ. ಇನ್ನು ಮನೆ? ‘ಈ ಶಹರದಲ್ಲಿ ಇರುವಷ್ಟು ದಿನ’ ಎಂದು ಒಂದೋ ಎರಡೋ ಕೋಣೆಯಲ್ಲಿ ಸರಳವಾಗಿ ಬದುಕಬಹುದಿತ್ತು. ನಂತರ ‘ನೀನ್ಯಾಕೋ, ನಿನ್ನ ಹಂಗ್ಯಾಕೋ’ ಎಂದು ತಮ್ಮೂರಿಗೆ ಹೋಗಬಹುದಲ್ಲಾ! ಆದರೆ ಇಲ್ಲದ ಶೀರ್ಷಾಸನಗಳನ್ನು ಮಾಡಿ ಮಹಾನಗರಿಯಲ್ಲೊಂದು ದುಬಾರಿ ಫ್ಲ್ಯಾಟ್ ಖರೀದಿಸಿಯಾಗಿದೆ. ಊಹೂಂ… ಇನ್ನು ಅಷ್ಟು ಸುಲಭವಾಗಿ ಮರಳುವಂತಿಲ್ಲ.

ಸದಾ ಸಂತಸವನ್ನು ಅರಸುವ ನಮಗೆ ಬದುಕು ತಾನಿರುವಂತೆ ಕಾಣುವುದೇ ಇಲ್ಲ. ಏಕೆಂದರೆ ನಾವು ನಮ್ಮದೇ ಆದ ದೃಷ್ಟಿಕೋನಗಳ, ಕಲ್ಪನೆಗಳ, ಭ್ರಮೆಗಳ ಭೂತಗನ್ನಡಿಯಲ್ಲಿ ಬದುಕನ್ನು ನೋಡುತ್ತಿರುತ್ತೇವೆ. ಮಹಾನಗರಿಯಲ್ಲಿರುವ ಟೆಕ್ಕಿಯೊಬ್ಬ ಕಿರಾಣಿ ಅಂಗಡಿಯಿಟ್ಟಿರುವ ವ್ಯಾಪಾರಿಯೇ ಸುಖಿ ಎಂದು ಪಬ್ಬಿನ ಮಬ್ಬಿನಲ್ಲಿ ಪೆಗ್ಗು ಹೀರುತ್ತಾ ಕಲ್ಪಿಸಿಕೊಳ್ಳುತ್ತಿರುತ್ತಾನೆ. ಏಕೆಂದರೆ ಕಿರಾಣಿ ಅಂಗಡಿಗೆ ಮಾಲೀಕನೇ ಬಾಸ್. ಅಲ್ಲಿ ಬೇರೊಬ್ಬನ ಹಂಗಿಲ್ಲವೆಂದು ಟೆಕ್ಕಿಯ ಲೆಕ್ಕಾಚಾರ. ಕಿರಾಣಿ ಅಂಗಡಿಯನ್ನಿಟ್ಟುಕೊಂಡಾತ ಹವಾನಿಯಂತ್ರಿತ ಕೊಠಡಿಗಳಲ್ಲಿ ಕೆಲಸ ಮಾಡುವ ಟೆಕ್ಕಿಯ ಬದುಕೇ ಅದ್ಭುತ ಎಂಬ ಭ್ರಮೆಯಲ್ಲಿರುತ್ತಾನೆ. ಗಾಜಿನ ಚಾದರವನ್ನು ಹೊದ್ದಿರುವ ಆಫೀಸು ಕಟ್ಟಡ, ಕ್ಯಾಬ್ ವ್ಯವಸ್ಥೆ, ಸೂಟು-ಬೂಟು ಸಂಸ್ಕೃತಿಯ ಶೋಕಿಗಳು ಹೊರಜಗತ್ತಿಗೆ ನೋಡಲು ಹಾಯೆನಿಸುತ್ತವೆ. ಆದರೇನು ಮಾಡುವುದು? ಆನೆಯ ಕಷ್ಟ ಆನೆಗೆ, ಇರುವೆಯ ಕಷ್ಟ ಇರುವೆಗೆ.

ಹತ್ತು-ಹದಿನೈದು ವರ್ಷಗಳ ಹಿಂದೆ ಸಾರಾಯಿ ಅಂಗಡಿಗಳಿಗೆ ಹೋಗುವವರ ಸಂಖ್ಯೆಯು ಕಮ್ಮಿಯಿತ್ತು. ಮನೆಯ ಕೆಲ ಮಧ್ಯವಯಸ್ಕರಷ್ಟೇ ಬಾರಿಗೆ ಹೋಗಿ ಒಂದೆರಡು ಪೆಗ್ಗು ಇಳಿಸಿಕೊಂಡು ಬರುತ್ತಿದ್ದರು. ಇನ್ನು ಮನೆಗೆ ತರುವುದಾದರೆ ಜನಜಂಗುಳಿಯು ಆದಷ್ಟು ಕಮ್ಮಿಯಿರುವ ಹೊತ್ತಿನಲ್ಲಿ ಬಾರಿಗೆ ಹೋಗಿ ತೀರ್ಥದ ಬಾಟಲನ್ನು ಖರೀದಿಸಿ ತರುತ್ತಿದ್ದರು. ಊರಿನಲ್ಲಿ ಕುಡುಕನೆಂದು ಕರೆಸಿಕೊಳ್ಳುವುದು ಯಾರಿಗಾದರೂ ಬೇಕು ಎಂಬ ಆತಂಕವದು.

ಆದರೆ ಇಂದು ನಮ್ಮ ನಡುವೆ ಮದ್ಯವು ಕಾಫಿಯಷ್ಟೇ ಸಾಮಾನ್ಯವಾಗಿಬಿಟ್ಟಿದೆ. ಅದೊಂದು ಸ್ಟೇಟಸ್ ಸಿಂಬಲ್. ಒಂದು ಜೋಕ್ ಹೇಳುವಂತೆ ‘ಆರ್ಥಿಕವಾಗಿ ಕೆಳಮಟ್ಟಿನಲ್ಲಿರುವವರು ಕಂಠಪೂರ್ತಿ ಕುಡಿಯುತ್ತಾರೆ. ಮೇಲ್ಮಟ್ಟದಲ್ಲಿರುವವರು ಡ್ರಿಂಕ್ ಎಂಜಾಯ್ ಮಾಡುತ್ತಾರೆ’. ಅಷ್ಟೇ ವ್ಯತ್ಯಾಸವಂತೆ. ಕಳೆದ ಒಂದು ದಶಕದಲ್ಲಿ ನಮ್ಮ ದೇಶದಲ್ಲಿ ಮದ್ಯಸೇವನೆಯ ಪ್ರಮಾಣವು ಹಲವಾರು ಪಟ್ಟು ಏರಿದೆಯಂತೆ. ಇಂದು ಮದ್ಯಗಳಿಲ್ಲದ ಸಂತೋಷಕೂಟಗಳಿಗೆ, ಮದುವೆಗಳಿಗೆ ಓಬೀರಾಯನ ಹಣೆಪಟ್ಟಿ ಬಂದಾಗಿದೆ. ಮಹಾನಗರಿಗಳ ಪಬ್, ಡಿಸ್ಕೋಥೆಕ್ ಗಳಲ್ಲಿ ವಾರಾಂತ್ಯದ ಸಂಜೆಗಳು ಗಿಜಿಗಿಡುತ್ತವೆ. ಪರಸ್ಪರರ ಮಾತುಗಳನ್ನು ಕೇಳಿಸಿಕೊಳ್ಳಲೂ ಆಗದಷ್ಟಿನ ಗದ್ದಲದ ಸಂಗೀತದ ಮೂಲೆಗಳಲ್ಲಿ ಜಗತ್ತು ಸಂತಸವನ್ನು ಅರಸಿಕೊಂಡು ಹೋಗುತ್ತದೆ.

ಈಚೆಗೆ ಆಫ್ರಿಕಾದ ಒಂದು ಸುದ್ದಿಯು ಮತ್ತೊಮ್ಮೆ ಎಲ್ಲಾ ಕಡೆ ಸದ್ದು ಮಾಡಿತು. ಅದೇನೆಂದರೆ ಜಿಂಬಾವ್ವೆಯ ಹರೆಯದ ಮಕ್ಕಳು ಕಫ್ ಸಿರಪ್ ಕುಡಿಯುವ ವ್ಯಸನಕ್ಕೆ ಬಲಿಬಿದ್ದಿದ್ದರು. ಕಫ್ ಸಿರಪ್ ಗಳು ಸಿಗದ ಜಿಂಬಾವ್ವೆಯ ಮೂಲೆಗಳಲ್ಲಿ ಹರೆಯದ ಮಕ್ಕಳು, ಯುವಕ-ಯುವತಿಯರು ಅದನ್ನು ಗುಟ್ಟಾಗಿ ಕಾಳಸಂತೆಯಿಂದ ಖರೀದಿಸುವುದೂ ಇದೆಯಂತೆ. ಒಂದೆಡೆ ಈ ಕಫ್ ಸಿರಪ್ ಗಳಲ್ಲಿರುವ ಕಿಂಚಿತ್ತು ಆಲ್ಕೋಹಾಲ್ ಅಂಶವು ಇವರನ್ನು ಒಂದಷ್ಟು ಕ್ಷಣ ಅಮಲಿಗೆ ದೂಡಿ ಹಾಯೆನ್ನಿಸಿದರೆ, ಅದು ಮತ್ತಷ್ಟು ಬೇಕು ಎಂಬ ನಿಲ್ಲದ ವ್ಯಸನವು ಇನ್ನೊಂದೆಡೆ. ವಿದ್ಯಾಭ್ಯಾಸ, ಉದ್ಯೋಗಾವಕಾಶಗಳಿಲ್ಲದೆ ಏನು ಮಾಡಬೇಕೆಂದೇ ತೋಚದಿರುವ ಇಲ್ಲಿಯ ಮಂದಿಗೆ ಕಾಲಹರಣಕ್ಕೆ ಇದೊಂದು ಮಾರ್ಗ. ಇಂದು ಜಗತ್ತಿನ ಐವತ್ತು ಪ್ರತಿಶತಕ್ಕೂ ಹೆಚ್ಚು ಜನಸಮೂಹವು ತಮ್ಮ ಸಂತೋಷಕ್ಕಾಗಿ ಔಷಧಗಳ ಅಥವಾ ಚಟಗಳ ರೂಪದಲ್ಲಿ ರಾಸಾಯನಿಕಗಳನ್ನು ಅವಲಂಬಿಸಿದೆ. ದಿಲ್ಲಿ-ಮುಂಬೈಯ ಕ್ಲಬ್ಬಿಗೆ ದುಬಾರಿ ಕೊಕೇನ್ ಇದ್ದರೆ, ಜಿಂಬಾವ್ವೆಯ ಕೊಳಗೇರಿಗೆ ಅಗ್ಗದ ಕಫ್ ಸಿರಪ್. ಅಷ್ಟೇ ವ್ಯತ್ಯಾಸ.

ಗಣಿತ, ವಿಜ್ಞಾನ, ಸಮಾಜಶಾಸ್ತ್ರಗಳ ಜೊತೆಗೆ ‘ಸಂತೋಷವಾಗಿರುವುದು ಹೇಗೆ?’ ಎಂಬುದನ್ನೂ ನಮಗೆ ನಮ್ಮ ಶಾಲೆಗಳು ಕಲಿಸಿಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತೇನೋ. ಎಲ್ಲಾ ಇದ್ದರೂ, ಏನೂ ಇರದಿದ್ದರೂ ಬದುಕನ್ನು ಸಂತಸದಿಂದ ಕಳೆಯುವ ಬಗೆ. ಬದುಕನ್ನು ‘Survival Mode’ ನಲ್ಲಿ ಸದಾ ಆತಂಕ-ಅಭದ್ರತೆಗಳಲ್ಲೇ ಕಳೆಯುವ ಬದಲು, ‘Living Mode’ ನಲ್ಲಿ ಒಂದೊಂದು ಕ್ಷಣವನ್ನೂ ತನ್ನದಾಗಿಸಿಕೊಳ್ಳುವ ಬಗೆ. ‘ಕವಿತೆಯೊಂದನ್ನು ಓದುವುದರಿಂದ ಅಥವಾ ಬರೆಯುವುದರಿಂದ ಏನು ಸಿಗುತ್ತದೆ?’ ಎಂದು ಪ್ರತೀಬಾರಿ ವ್ಯವಹಾರದ ಸೋಗಿನಲ್ಲಿ ಕೇಳುವ ಬದಲು, ಬದುಕಿನ ಅನ್ಯ ಅಗೋಚರ ಪದರಗಳನ್ನು ಅನುಭೂತಿಯಂತೆ ನಮಗೆ ಕಾಣಿಸಬಲ್ಲ ಒಂದು ಮಾರ್ಗವಾಗಿ ಸಾಹಿತ್ಯವನ್ನು ಕಾಣುವ ಬಗೆ. ಉತ್ಕಟ ಪ್ರೇಮಿಯಾಗಿದ್ದರೂ ನಿರ್ಲಿಪ್ತ ಸಂತನಂತೆ ಬದುಕುವ ಬಗೆ.

ಬಲ್ಲವರು ಸರಿಯಾಗೇ ಹೇಳಿದ್ದಾರೆ. ಸಂತಸವು ಪರಿಣಾಮವೇ ಹೊರತು ತಲಾಶೆಯಲ್ಲ. ಪಯಣವು ಚೆನ್ನಾಗಿದ್ದರೆ ಸಂತಸವು ಸಿಕ್ಕೇ ಸಿಗುತ್ತದೆ. ಸಂತಸವೇ ಅಂತಿಮ ಗುರಿಯಾಗಿಬಿಟ್ಟರೆ ತಲಾಶೆಯ ಪಯಣದ ಒಂದೊಂದು ಕ್ಷಣಗಳೂ ಭಾರವೆನಿಸುವುದು ಸಹಜ.

‍ಲೇಖಕರು avadhi

26 August, 2019

4 Comments

  1. Lalitha Siddabasavaiah

    Amazing write up

  2. BhagyaChikkanna

    Reality … sakkath write up Prasad …

  3. Kusuma patel

    Very nice.

  4. Mamatha Arsikere

    ಅದ್ಭುತ ಲೇಖನ
    ನಮ್ಮ ಮಾತುಗಳನ್ನು ನೀವೇ ಬರೆದಂತಿದೆ
    ಬರಹದ ಸಾಂದರ್ಭಿಕತೆಗಾಗಿ ಅಭಿನಂದನೆ ನಿಮಗೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading