ಸಂಚಾರಿ ವಿಜಯ್ ನಿಧನಕ್ಕೆ ಕಂಬನಿ

ಈಗ ಒಂದು ವಾರದ ಹಿಂದೆಯಷ್ಟೇ ನಮ್ಮ ಮನೆಯ ಬಳಿ ಬಂದು, ನನ್ನೊಂದಿಗೆ ಬಾಯಿ ತುಂಬಾ ಮಾತಾಡಿ, ನಮ್ಮ ಪ್ರದೇಶದಲ್ಲಿ ಅಗತ್ಯ ಇರುವವರಿಗೆ ಆಹಾರ ಕಿಟ್ಟುಗಳನ್ನು ಕೊಟ್ಟು ಹೋಗಿದ್ದರು ಸಂಚಾರಿ ವಿಜಯ್. ಚಲನಚಿತ್ರ ಕಾರ್ಮಿಕರು ಮತ್ತು ಸಹ ಕಲಾವಿದರು ಅನೇಕರಿಗೆ ಈ ಲಾಕ್ ಡೌನ್ ಸಮಯದಲ್ಲಿ ತಾನೇ ಹೋಗಿ ಕಿಟ್ಸ್ ವಿತರಿಸಿ ಬರುತ್ತಿದ್ದರು. ಪಡೆದವರು ಫೋಟೊ ತೆಗೆಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದರೂ ಅದಕ್ಕೆ ವಿಜಯ್ ಖಡಕ್ಕಾಗಿ ಬೇಡ ಎನ್ನುತ್ತಿದ್ದರು. ಫಂಡ್ಸ್ ಎಲ್ಲಾ ಹೆಂಗಪ್ಪ? ಎಂದು ಕೇಳಿದಾಗ ‘ಹೆಂಗೋ ನಡೀತಿದೆ ಸರ್’ ಎಂದಿದ್ದರು.

ಎರಡು ವರ್ಷಗಳ ಹಿಂದೆ ಕೊಡಗು ಜಿಲ್ಲೆಯಲ್ಲಿನ ಭೂಕುಸಿತದ ಸಮಯದಲ್ಲಿಯೂ ಅಲ್ಲಿಯ ಜನರ ಸೇವೆಯಲ್ಲಿ ತೊಡಗಿಕೊಂಡಿದ್ದರು.ಪ್ರತಿಭೆ, ತುಡಿಯುವ ಮನಸ್ಸು, ಸೇವೆಗಾಗಿ ಧುಮುಕುವ ಶಕ್ತಿ ಒಟ್ಟಿಗೇ ಬೆರೆಯುವುದು ತೀರ ಅಪರೂಪ. ಅಷ್ಟೇ ಬೇಗ ಕಳಚಿಯೂ ಹೋಯಿತು. ಸಾರಿ ವಿಜಯ್, ಮುಂದೆ ಏನೂ ಹೇಳಲು ತಿಳಿಯುತ್ತಿಲ್ಲ.

-ಕೇಸರಿ ಹರವೂ

ಕನ್ನಡ ನಾಡಿಗೆ ಎಂದೆಂದೂ ಕಾಣದಂಥ ಕೇಡುಗಾಲ ಬಂದು ಒಕ್ಕರಿಸಿದೆಯಾ? Kovid ಕಾರಣಕ್ಕೆ , ಆಕಸ್ಮಿಕ ಅಪಘಾತಕ್ಕೆ ಸಾಹಿತಿ, ಕಲಾವಿದರರು,, ಒಬ್ಬೊಬ್ಬರೇ ನಮ್ಮನ್ನು ಆಗಲಿ ಹೋಗುತ್ತಿದ್ದಾರೆ.. ಭೀಕರ ಅಪಘಾತಕ್ಕೆ ತುತ್ತಾಗಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಟ ,ರಂಗ ಕಲಾವಿದ ಸಂಚಾರಿ ವಿಜಯ್ ಚಿಕಿತ್ಸೆಯಿಂದ ಚೇತರಿಸಿಕೊಳ್ಳದೆ ನಮ್ಮನ್ನ ಅಗಲಿದ್ದಾರೆ.. ಸಾವು ಇಷ್ಟೊಂದು ಸೋವಿ ಹಾಗು ಕ್ರೂರವಾದರೆ..?

ಕನಸುಗಣ್ಣಿನ ತರುಣ ವಿಜಯ್ ತಮ್ಮ ಅಭಿನಯದ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದ. ವಯಸ್ಸಿಗೆ ಮೀರಿದ ಸಾಧನೆ ಮಾಡಿ ನಾಡಿನ ಜನರ ಮನ ಗೆದ್ದಿದ್ದ. ನೀನು ಕೊನೆಗೂ ಈ ಸಾವೆಂಬ ಮಾಯೆಯ ಗೆಲ್ಲಾಲಾರದೆ ಹೋದೆಯಲ್ಲ ವಿಜಯ್! ಲೋಕ ಸಂಚಾರವನು ಅವಸರದಲ್ಲಿ ಇಷ್ಟು ಬೇಗ ಮುಗಿಸಿ ಸಾಂಸ್ಕೃತಿಕ ಲೋಕಕ್ಕೆ ಶೂನ್ಯ ತುಂಬಿ.. ಕನ್ನಡ ನಾಡಿಗೆ ಅನ್ಯಾಯ ಮಾಡಿದೆ.. ಹೋಗಿ ಬಾ.. ನಮಗುಳಿದಿರುವು ನಿನಗಾಗಿ ಎರಡು ಹನಿ ಕಣ್ಣೀರು ದುಃಖವಷ್ಟೆ..ಭಾವಪೂರ್ಣ ಶ್ರದ್ಧಾಂಜಲಿ .. ನಮನಗಳು

-ಸಿ ಬಸವಲಿಂಗಯ್ಯ

ಬಿಪಿ,‌ ಪಲ್ಸ್ ಎಲ್ಲ ನಾರ್ಮಲ್ ಆಗಿದೆ, ಬೇಗ ಪ್ರಜ್ಞೆ ಬರಬೇಕಿದೆ ಎಂಬಂಥ ಸಮಾಧಾನದ ಸ್ಟೇಟಸ್ ಒಂದನ್ನು ನಿನ್ನೆ ಸಂಜೆ ಗೆಳೆಯ ಮಂಸೋರೆ‌ ಹಾಕಿದ್ದರು. ಶೇರ್ ಮಾಡಿ, ಆಶಾವಾದದಲ್ಲಿದ್ದೆ. ಸ್ವಲ್ಪ ಹೊತ್ತಿಗೆ ಮಂಸೋರೆ ಸ್ಟೇಟಸ್ ಡಿಲೀಟ್ ಮಾಡಿದ್ದರು. ಯಾಕೆ‌ ಸರ್ ಏನಾಗ್ತಿದೆ ಅಂತ ಆತಂಕದಿಂದ ಆಸ್ಪತ್ರೆಯಲ್ಲೇ ಇದ್ದ ಅವರಿಗೆ ಫೋನ್ ಮಾಡಿ ಕೇಳಿದೆ. ಮಂಸೋರೆ‌ ಧ್ವನಿಯೇ ಬಿಕ್ಕಳಿಸುತ್ತಿತ್ತು. ಬಿಪಿಯಲ್ಲಿ ಏರಿಳಿತವಿದೆ, ಆಸ್ಪತ್ರೆಯವರೇ ಹತ್ತು ಗಂಟೆಗೆ ಬುಲೆಟಿನ್ ಕೊಡ್ತಾರೆ. ಹೋಪಿಂಗ್ ಫಾರ್ ದ ಬೆಸ್ಟ್, ನಮ್ಮ ಕೈಯಲ್ಲಿ ಏನೂ‌‌ ಇಲ್ಲ ಎಂದಿದ್ದರು.

ಬೆಳಿಗ್ಗೆ ಆರುಗಂಟೆಗೆಲ್ಲ ಎದ್ದು ಮಂಸೋರೆ ಟೈಮ್ ಲೈನ್ ತಡಕಾಡಿದೆ, ಏನೂ ಇಲ್ಲ. ವಿಜಯ್ ಕಣ್ಣುಬಿಟ್ಟಿದ್ದಾರೆ, ಅವರಿಗೆ ಪ್ರಜ್ಞೆ ಬಂದಿದೆ ಎಂಬ ಒಂದು ಸಾಲು‌ ಬರೆದಿರಲಿ ಎಂಬ ಆಶೆ. ಪವಾಡವೊಂದು ನಡೆಯಲಿ ಎಂದು‌‌ ಕಾದೆವು, ನಿಜವಾಗಲಿಲ್ಲ. ಆಕ್ಟ್ 1978 ಪ್ರಿಮಿಯರ್ ಶೋ‌ ದಿನ ಎಷ್ಟೊಂದು ಪ್ರೀತಿಯಿಂದ ಮಾತಾಡಿದ್ದರು. ಅದೇ ಕೊನೆಯ ಭೇಟಿ.

ಹಂಪಿ ಕನ್ನಡ ವಿವಿ ಉಳಿಸಿ‌ ಅಭಿಯಾನಕ್ಕೆ ವಿಡಿಯೋ‌ ಮಾಡಿ‌ ಕಳಿಸಿದ್ದರು. ಕರೋನಾ ಕಾಲದಲ್ಲಿ ಮೆಸೇಜುಗಳಿಂದಲೇ ತುಂಬ ಹತ್ತಿರವಾಗಿದ್ದರು. ಹೊಸಪೇಟೆಯ ರವಿ ಅಂತ‌ ಸರ್,‌ ರಂಗಭೂಮಿ ಹುಡುಗ, ಮನೆಯಲ್ಲಿ ಐವರು. ಜೀವನ ನಿರ್ವಹಣೆ‌ ಕಷ್ಟವಾಗ್ತಿದೆ, ಒಂದಿಷ್ಟು ಸಹಾಯ‌ ಮಾಡಿಸಿ ಅಂತ ಮೆಸೇಜು ಮಾಡಿದ್ದರು. ಇಬ್ಬರೂ ಬರೀ ಇದೇ ಥರ ಮಾತಾಡಿದ್ದೆವು. ನಾನೊಂದು ಸಹಾಯ ಕೇಳಿದರೆ,‌ ಅವರೊಂದು ಕೇಳುತ್ತಿದ್ದರು. ಯಾರಿಗೋ ಬೆಡ್ ಸಿಗದೆ‌ ಒಂದು‌ ಸ್ಟೇಟಸ್ ಹಾಕಿದರೆ,‌ ತಕ್ಷಣ ನನ್ನ ಕೈಲಾಗಿದ್ದು ಮಾಡುತ್ತೇನೆ ಎಂದು ಮೆಸೇಜ್ ಮಾಡುತ್ತಿದ್ದರು. ಯಾರಿಗಾದರೂ ಆಕ್ಸಿಜನ್ ಬೇಕಿದ್ದರೆ ಹೇಳಿ ಸರ್, ಕಳುಹಿಸುವೆ ಎನ್ನುತ್ತಿದ್ದರು. ಕರೋನಾ ಲಾಕ್ ಡೌನ್ ಕಾಲವನ್ನು ಸಂಪೂರ್ಣವಾಗಿ ಅವರು ಜನರ ಸೇವೆಗೇ ಮೀಸಲಿಟ್ಟುಬಿಟ್ಟಿದ್ದರು.

ವಿಜಯ್ ಕನ್ನಡಕ್ಕೆ ಒಂದು ರಾಷ್ಟ್ರಪ್ರಶಸ್ತಿ ತಂದುಕೊಟ್ಟಿದ್ದರು ಎಂದು ಮಾತನಾಡುತ್ತೇವೆ. ಇನ್ನೆಷ್ಟು ತಂದುಕೊಡುವುದು ಬಾಕಿ ಇತ್ತು‌ ಎಂದು ಮಾತಾಡಬೇಕು. ಅಷ್ಟು ಪ್ರತಿಭಾವಂತ ನಟರು‌‌ ಸಿಗುವುದೇ ಕಷ್ಟ. ಅಂಥದ್ದರಲ್ಲಿ ಕಳೆದುಕೊಳ್ಳುವುದು ಎಷ್ಟು ದುಬಾರಿ‌‌ ನೋಡಿ.‌ವಿಜಯ್ ನೂರಾರು ಹೃದಯಗಳಿಗೆ ಹತ್ತಿರವಾಗಿದ್ದವರು. ಚಿತ್ರನಟ, ರಾಷ್ಟ್ರಪ್ರಶಸ್ತಿ ಇತ್ಯಾದಿಗಳ ಕೋಡು ಅವರಿಗಿರಲಿಲ್ಲ. ಎಲ್ಲರ‌ ಜತೆ ಎಷ್ಟು ಬೇಗನೇ ಬೆರೆತುಬಿಡುತ್ತಿದ್ದರು. ಎಷ್ಟೊಂದು ದೊಡ್ಡ ಆತ್ಮೀಯ ಬಳಗವಿತ್ತು ಅವರಿಗೆ?

ನನಗಾದರೋ ಅವರ ಪರಿಚಯ, ಸ್ನೇಹ‌ ಇತ್ತೀಚಿನದು. ಅವರ ಜೀವದ ಗೆಳೆಯರು? ಅವರು ಹೇಗೆ ತಡೆದುಕೊಳ್ಳುತ್ತಾರೋ? ಈಗಲೂ ಅವರು ದಿಢೀರನೆ ಎದ್ದು ಕುಳಿತುಬಿಡಲಿ ಎಂಬ ಆಶೆ.‌ ಆದರೆ‌ ಸ್ವಲ್ಪ ಹೊತ್ತಿನಲ್ಲೇ ಅವರ ದೇಹದ ವಿವಿಧ ಅಂಗಗಳು ಇನ್ಯಾರದೋ ದೇಹವನ್ನು ಸೇರಲು ಪ್ರತ್ಯೇಕಗೊಳ್ಳಲಿವೆ. ಆ ಮೂಲಕ‌ ಅವರ ದೇಹ ಬದುಕಲಿದೆ. ಆದರೆ ಜೀವ? ಎಂಥ ಅಮೂಲ್ಯ ಜೀವವನ್ನು ಕಳೆದುಕೊಂಡೇಬಿಟ್ಟೆವಲ್ಲವೇ?

-ಎಸ್ ಸಿ ದಿನೇಶ್ ಕುಮಾರ್

‍ಲೇಖಕರು avadhi

June 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: