ಸಂಘಮಿತ್ರೆ ನಾಗರಘಟ್ಟ
ಶೂ ಸ್ಟ್ಯಾಂಡ್ ನಲ್ಲಿ
ಸುಮಾರು ಚಪ್ಪಲಿಗಳು ..
ಒಂದು ಜೊತೆ ಮಾತ್ರ
ಕಣ್ಣು ಕುಕ್ಕುವಂತ ನೆನಪು
ಕಾಲುಗಳ ಅಳತೆಗಿಂತ
ಚಿಕ್ಕದಾದ ಅದು
ನನ್ನನ್ನು ಹಲವು ಬಾರಿ
ನೆಲಕ್ಕೆ ಉರುಳಿಸಿದೆ
ಸೈಕಲ್ ಪೆಡಲ್ ತುಳಿಸಿದೆ
ಅಪ್ಪನ ಹಿಂದೆ ಓಡಿಸಿದೆ
ಅಮ್ಮನ ಹೆಜ್ಜೆಗೆ ಸಾಥಿಯಾಗಿದೆ
ಇಳಿ ಸಂಜೆ ಶಾಲೆಯ
ಕಪ್ಪು ರಸ್ತೆಯ ಮೇಲೆ
ನಡೆಯುವಾಗ ಲೈಟ್ ಕಂಬದ
ಬೆಳಕಿಗೆ ಬಿಳುಪಾಗಿ ಕಂಡಿವೆ
ಆ ಚಪ್ಪಲಿಗಳು ಜಾದು
ಚಪ್ಪಲಿಯಾಗಲಿಕ್ಕೆ ಬಾಕಿ
ಏನು ಉಳಿದಿರಲಿಲ್ಲವೆನ್ನುವುದರೊಳಗೆ
ಅವು ಕಿತ್ತುಹೋದವು

ಅಂತಹ ಎಷ್ಟೋ ಜೊತೆಗಳು
ಈಗ ಇವೆಯಾದರೂ
ಯಾವೂ ನನ್ನ ಬೀಳಿಸುವುದಿಲ್ಲ
ಅಪ್ಪನಿಂದೆ ಓಡಲೂ ಮುಂದಾಗುವುದಿಲ್ಲ
ಅಮ್ಮನ ಸಮನಾಗಿ ನಡೆಯಾಲಾಗುವುದಿಲ್ಲ
ಅವನೆತ್ತರಕ್ಕೆ ನಿಲ್ಲಲಾಗುವುದಿಲ್ಲ
ಫ್ಲಾಶ್ ಲೈಟ್ ನಲ್ಲೂ
ನನ್ನ ಪಾದಗಳು
ಅಂದವಾಗಿ ಕಾಣುವುದಿಲ್ಲ
ಆದರೂ ಕಣ್ಣಿಗೆ ಬೀಳುವುದು
ಮಾತ್ರ ಬಿರುಕು ಬಿದ್ದ
ಊರ ಮನೆಯ ಹಳೆಯ
ಪೆಂಟ್ ಡಬ್ಬದೊಳಗೆ ಸೇಫ್
ಆಗಿರುವ ಅಮ್ಮ ಕೊಡಿಸಿದ
ಫ್ಯಾರಗಾನ್ ಚಪ್ಪಲಿ…






0 Comments