ಶ್ರೀನಿವಾಸ ಪ್ರಭು ಅಂಕಣ- ಮತ್ತೊಂದು ತಲ್ಲಣಗೊಳಿಸುವ ಸಂಗತಿ ಎದುರಾಯಿತು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

92

90 ರ ದಶಕದ ಆದಿಯಲ್ಲಿಯೇ ಡಾ॥ ಶ್ರೀನಿವಾಸ ಕುಲಕರ್ಣಿಯವರು ಬೆಂಗಳೂರು ದೂರದರ್ಶನಕ್ಕೆ ಕಾರ್ಯಕ್ರಮ ನಿರ್ವಾಹಕರಾಗಿ ವರ್ಗವಾಗಿ ಬಂದಿದ್ದು ತುಸು ಸಮಯದಲ್ಲೇ ಸಹಾಯಕ ನಿರ್ದೇಶಕರಾಗಿಯೂ ಬಡ್ತಿ ಹೊಂದಿದ್ದರು. ಒಳ್ಳೆಯ ಕಥೆಗಾರರಾಗಿದ್ದ ಶ್ರೀನಿವಾಸ ಕುಲಕರ್ಣಿಯವರ ‘ಗೋಳಗುಮ್ಮಟ’ ಕಥೆಯನ್ನು ಆಧರಿಸಿಯೇ ಪುಟ್ಟಣ್ಣ ಕಣಗಾಲ್ ಅವರು ‘ಫಲಿತಾಂಶ’ ಚಿತ್ರವನ್ನು ನಿರ್ದೇಶಿಸಿದ್ದರು. ಚಲನಚಿತ್ರಮಾಧ್ಯಮದ ಬಗ್ಗೆ ವಿಶೇಷ ಆಸಕ್ತಿಯಿದ್ದ ಕುಲಕರ್ಣಿಯವರು ತಮ್ಮದೇ ಕಥೆಗಳನ್ನು ಆಧರಿಸಿದ ಕೆಲ ಕಿರುಚಿತ್ರಗಳನ್ನೂ ದೂರದರ್ಶನಕ್ಕಾಗಿ ನಿರ್ಮಿಸಿದರು. ಅವುಗಳಲ್ಲಿ ‘ಪೇಚು’ ಹಾಗೂ ‘ದಾಖಲೆ ಪತ್ರ’ ಎಂಬ ಎರಡು ಕಿರುಚಿತ್ರಗಳಲ್ಲಿ ನಾನು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದೆ. ‘ಪೇಚು’ ಪ್ರಹಸನದ ಮಾದರಿಯ’ ಹಾಸ್ಯ ಪ್ರಧಾನವಾದ ಕಿರುಚಿತ್ರ. ನನ್ನ ಜೊತೆಗೆ ಅಂಜಲಿ ಹಳಿಯಾಳ್ (ಪ್ರಸಿದ್ಧ ಗಾಯಕಿ), ಕೃಷ್ಣೇಗೌಡರು ಹಾಗೂ ಪೃಥ್ವೀರಾಜ್ ಅವರು ಅಭಿನಯಿಸಿದ್ದರು. ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಕಿರುಚಿತ್ರವಿದು. ‘ದಾಖಲೆಪತ್ರ’ ಕುಲಕರ್ಣಿಯವರ ಒಂದು ಅತ್ಯುತ್ತಮ ಸಣ್ಣಕತೆ. ಹೃದಯಾಘಾತಕ್ಕೆ ತುತ್ತಾಗಿ ಗತಿಸಿದ ತಂದೆಯ ಶರೀರವನ್ನು ಅಂತ್ಯಸಂಸ್ಕಾರಕ್ಕೆಂದು ತೆಗೆದುಕೊಂಡು ಹೊರಟಿರುತ್ತಾನೆ ಒಬ್ಬ ಯುವಕ. ದಾರಿಯಲ್ಲಿ ಎದುರಾಗುವ ಆಗಂತುಕನೊಬ್ಬ ಯುವಕನಿಗೆ ಸಹಾಯ ಮಾಡುವವನಂತೆ ನಟಿಸುತ್ತಾ ತಾನು ಕೊಲೆಗೈದಿರುವ ಮತ್ತೊಬ್ಬ ವ್ಯಕ್ತಿಯ ಶವದೊಂದಿಗೆ ಯುವಕನ ತಂದೆಯ ಶವವನ್ನು ಬದಲಿಸಿ ಯುವಕನ ಬಳಿ ಇರುವ ಡಾಕ್ಟರ್ ಸರ್ಟಿಫಿಕೇಟ್—ಮರಣ ದಾಖಲೆ ಪತ್ರದ ನೆರವಿನಿಂದ ಉಪಾಯವಾಗಿ ಯುವಕನಿಗೆ ಅನುಮಾನ ಬರದಂತೆ ತಾನು ಕೊಲೆಗೈದ ವ್ಯಕ್ತಿಯ ಶವಸಂಸ್ಕಾರವನ್ನು ಮಾಡಿ ಮುಗಿಸಿಬಿಡುತ್ತಾನೆ. ಮರಳಿ ಮನೆಗೆ ಹೊರಟ ಯುವಕನಿಗೆ ಹಾದಿಯಲ್ಲಿ ಪೊದೆಗಳ ಮರೆಯಲ್ಲಿ ಆಗಂತುಕ ಮರೆಸಿಟ್ಟಿದ್ದ ತನ್ನ ತಂದೆಯ ಶವ ಅಕಸ್ಮಾತ್ತಾಗಿ ಕಣ್ಣಿಗೆ ಬೀಳುತ್ತದೆ. ಆಘಾತದಿಂದ ಯುವಕ ಅಲ್ಲೇ ಕುಸಿದು ಬೀಳುತ್ತಾನೆ.

ಸಾವನ್ನೂ ಹೀಗೆ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುವ ಮನುಷ್ಯನ ಕ್ರೌರ್ಯ—ನೀಚತನದ ಕರಾಳ ಮುಖವನ್ನು ಅತ್ಯಂತ ಪರಿಣಾಮಕಾರಿಯಾಗಿ ಕುಲಕರ್ಣಿಯವರು ತಮ್ಮ ಕಥೆ—ಕಿರುಚಿತ್ರಗಳಲ್ಲಿ ಹೊರಗಾಣಿಸಿದ್ದರು. ನನ್ನ ಜತೆಗೆ ಈ ಕಿರುಚಿತ್ರದಲ್ಲಿ ಪ್ರಸಿದ್ಧ ನಟಿ—ನಿರೂಪಕಿ ಅಪರ್ಣಾ, ವಿಶ್ವನಾಥರಾವ್ ಹಾಗೂ ಕಲಾಗಂಗೋತ್ರಿ ಕಿಟ್ಟಿ ಅಭಿನಯಿಸಿದ್ದರು. ಚಿತ್ರದ ಅಂತ್ಯವಂತೂ ಬೆಚ್ಚಿ ಬೀಳಿಸುವಂತಿತ್ತು. ಈ ‘ದಾಖಲೆ ಪತ್ರ’ ಕಿರುಚಿತ್ರ ಅದಾವ ಪರಿಯಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿತೆಂದರೆ ಇದರ ಮರುಪ್ರಸಾರಗಳದ್ದೇ ಒಂದು ದಾಖಲೆಯಾಯಿತೆನ್ನಬಹುದು!ಉತ್ಪ್ರೇಕ್ಷೆಯ ಮಾತಲ್ಲ, ಈಗಲೂ, ಇಷ್ಟು ವರ್ಷಗಳ ನಂತರವೂ ಕೆಲವರು ‘ದಾಖಲೆ ಪತ್ರ’ವನ್ನು ನೆನೆಸಿಕೊಳ್ಳುವುದುಂಟು.

1991ರ ಮಧ್ಯಭಾಗದಲ್ಲಿ ಅನೀಸ್ ಉಲ್ ಹಕ್ ಅವರು ಬೆಂಗಳೂರು ದೂರದರ್ಶನಕ್ಕೆ ಮತ್ತೆ ನಿರ್ದೇಶಕರಾಗಿ ಆಗಮಿಸಿದರು. ಅದೇನು ಕಾರಣವೋ ಕಾಣೆ, ಅವರಿಲ್ಲಿದ್ದಷ್ಟು ದಿನವೂ ನನಗೂ ಅವರಿಗೂ ‘ವಾಸ್ತು’ ಹೊಂದಾಣಿಕೆ ಆಗಲೇ ಇಲ್ಲ! ಹಕ್ ಅವರು ಬರುತ್ತಿದ್ದಂತೆ ನನ್ನನ್ನು ಮತ್ತೆ ನಾಟಕ ವಿಭಾಗದಿಂದ ತೆಗೆದುಹಾಕಿ ಬಿಟ್ಟರು! ಮೊದಲೇ ಹೀಗಾಗಬಹುದೆಂಬ ಒಂದು ಸಣ್ಣ ಗುಮಾನಿ ಇದ್ದುದರಿಂದ ಬೇಸರವೇನೂ ಆಗಲಿಲ್ಲ. ಈ ಬಾರಿ ವರ್ಗಾವಣೆ ಆದದ್ದು ವಾರ್ತಾ ವಿಭಾಗಕ್ಕೆ! ಅಚ್ಯುತನ್, ಎಂ ಸಿ ಪಾಟೀಲ್ ರಂತಹ ಧುರೀಣರು ವಾರ್ತಾವಿಭಾಗದ ಚುಕ್ಕಾಣಿ ಹಿಡಿದದ್ದರಿಂದ ಅಲ್ಲಿಗೆ ಹೊಂದಿಕೊಳ್ಳುವುದು ನನಗೆ ಕಷ್ಟವೇನೂ ಆಗಲಿಲ್ಲ. ಆದರೂ ನಾಟಕ ವಿಭಾಗದ ಅಗಲಿಕೆಯ ನೋವು ಇರದೇ ಹೋದೀತೇ! ಹೇಗೋ ದಿನಗಳುರುಳುತ್ತಾ ಹೋದವು.

1992—ನನ್ನ ವೃತ್ತಿ ಜೀವನದಲ್ಲೂ ಹಾಗೆಯೇ ವೈಯಕ್ತಿಕ ಬದುಕಿನಲ್ಲೂ ಸಾಕಷ್ಟು ಪಲ್ಲಟಗಳನ್ನು ಕಂಡ ವರ್ಷ.. ಹಲವಾರು ಆತಂಕಗಳಿಗೆ ಗುರಿ ಮಾಡಿದ ವರ್ಷ.

92ರ ಆರಂಭದ ವೇಳೆಗೆ ಅಮೆರಿಕೆಯಲ್ಲಿ ತಂಗಿ ಪದ್ಮಿನಿಯ ಮನೆಗೆ ಹೋಗಿದ್ದ ಅಣ್ಣ—ಅಮ್ಮ ಮರಳಿ ಬಂದಾಗಿತ್ತು. ಅಮೆರಿಕೆಯ ಉದ್ಯಾನಗಳನ್ನೂ ಊರೊಳಗೇ ಕಂಗೊಳಿಸುತ್ತಿದ್ದ ಹಸಿರ ಸಿರಿಯನ್ನೂ ಹಾಡಿ ಹೊಗಳುತ್ತಿದ್ದ ಅಣ್ಣ, “ಈ ಪ್ರವಾಸ ನನಗೆ ಒಂದು ರೀತಿಯಲ್ಲಿ ವಾನಪ್ರಸ್ಥಾಶ್ರಮದ ಅನುಭವವನ್ನೇ ತಂದುಕೊಟ್ಟುಬಿಟ್ಟಿತು” ಎಂದು ಪದೇ ಪದೇ ಹೇಳುತ್ತಿದ್ದರು. ‘ಯಾಕೆ ಅಣ್ಣ ಹೀಗೆ ಹೇಳುತ್ತಿದ್ದಾರೆ? ಅವರ ಮಾತಿನ ಹಿಂದೆ ವಿಶೇಷ ಗೂಢಾರ್ಥವೇನಾದರೂ ಹುದುಗಿದೆಯೇ?’ ಎಂಬ ಅನುಮಾನ ನನ್ನ ಮನಸ್ಸಿನಲ್ಲಿ ಸುಳಿದುಹೋದರೂ ಆ ಬಗ್ಗೆ ಆಗ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಅಣ್ಣಯ್ಯ ಕುಟುಂಬ ಸಮೇತ ಬಾಂಬೆಯಲ್ಲಿಯೇ ಇದ್ದ ಸಮಯವದು. 1992 ಮಾರ್ಚ್ ತಿಂಗಳು 8—9 ನೆಯ ತಾರೀಖು ಇದ್ದಿರಬೇಕು; ಸಂಜೆಯ ಸಮಯ.ಅಣ್ಣ ತಮ್ಮದೊಂದು ಚೀಲವನ್ನು ಸಿದ್ಧ ಪಡಿಸಿಕೊಂಡು ಎಲ್ಲಿಗೋ ಹೊರಟು ನಿಂತಿದ್ದಾರೆ. “ಎಲ್ಲಿಗೆ ಹೊರಟಿದೀರಿ ಅಣ್ಣಾ?” ಎಂದು ನಾನು ಕುತೂಹಲದಿಂದ ವಿಚಾರಿಸಿದೆ. “ವರದಹಳ್ಳೀಲಿ ಒಂದು ಕಾರ್ಯಕ್ರಮ ಇದೆ; ಎರಡು—ಮೂರು ದಿವಸದ ಮಟ್ಟಿಗೆ ಹೋಗಿಬಿಟ್ಟು ಬರ್ತೀನಿ.. ನನ್ನನ್ನ ಸ್ವಲ್ಪ ಬಸ್ ಸ್ಟ್ಯಾಂಡಿಗೆ ಬಿಟ್ಟು ಬರ್ತೀಯೇನೋ ಮಗು?” ಎಂದರು ಅಣ್ಣ. ‘ಆಗಲಿ ಅಣ್ಣಾ, ಅದಕ್ಕೇನಂತೆ?’ ಎಂದು ನುಡಿದು ನಾನೇ ನನ್ನ ಬೈಕ್ ನಲ್ಲಿ ಅವರನ್ನು ಕರೆದುಕೊಂಡು ಹೋಗಿ ಬಸ್ ಹತ್ತಿಸಿ ಬಂದೆ.ಅಣ್ಣ ಹೊರಟ ಸಮಯದಲ್ಲಿ ರಾಧಿಕಾ ಮಲಗಿಬಿಟ್ಟಿದ್ದಳೋ ಅಥವಾ ಮನೆಯಲ್ಲಿರಲಿಲ್ಲವೋ, ಒಟ್ಟಿನಲ್ಲಿ ‘ಕಿಟ್ಟಜ್ಜ’ ಊರಿಗೆ ಹೊರಟ ವಿಷಯ ಅವಳ ಅರಿವಿಗೆ ಬಂದಿರಲಿಲ್ಲ. ಮರುದಿನ ಬೆಳಿಗ್ಗೆ ಅಜ್ಜ ಊರಿಗೆ ಹೊರಟ ವಿಷಯ ತಿಳಿದ ಕೂಡಲೇ ಒಂದು ಬಗೆಯ ಆವೇಶದಿಂದ ಅಜ್ಜಿಯ ಬಳಿ ಹೋದವಳೇ, “ಯಾಕಜ್ಜಿ ಕಿಟ್ಟಜ್ಜನ್ನ ಊರಿಗೆ ಕಳಿಸಿದಿರಿ? ನೀವು ತುಂಬಾ ಕೆಟ್ಟವರು.. ಅಜ್ಜನ್ನ ಕಳಿಸಬಾರದಾಗಿತ್ತು. ಇಲ್ಲಾ ನೀವೂ ಹೋಗಬೇಕಾಗಿತ್ತು” ಎಂದು ಅತ್ತು ಕರೆದು ರಂಪ ಮಾಡಿಬಿಟ್ಟಳಂತೆ! ಅವಳು ಚಿಕ್ಕಂದಿನಿಂದಲೂ ಹಾಗೆಯೇ.. ಕೆಲವೊಮ್ಮೆ ತುಂಬಾ ಗಹನವಾಗಿ, ಕೆಲವೊಮ್ಮೆ ಒಗಟಿನ ಹಾಗೆ ಮಾತಾಡಿಬಿಡುತ್ತಿದ್ದಳು.. ಒಮ್ಮೆಯಂತೂ ‘ಈ ನಮ್ಮ ಪ್ರಪಂಚ ದೇವರು ಕಂಡ ಕನಸಿರಬಹುದಲ್ಲವಾ’ ಎಂದು ಕೇಳಿ ನಮ್ಮನ್ನು ದಂಗುಬಡಿಸಿದ್ದಳು. ಅಂದು ಅಜ್ಜಿಯ ಜತೆ ಹಾಗೆ ಮಾತಾಡಿದಾಗ ಕೇವಲ ಐದು ವರ್ಷದ ಆ ಪುಟ್ಟ ಬಾಲೆಯ ಮನಸ್ಸಿನಲ್ಲಿ ಏನಿತ್ತೋ ಯಾರು ಬಲ್ಲರು? ಈ ಸಂಗತಿಯನ್ನೂ ಸಹಾ ನಂತರ ಅಮ್ಮನೇ ನಮಗೆ ಹೇಳಿದ್ದು.

ಅಣ್ಣ ವರದಹಳ್ಳಿಗೆ ಹೊರಟು ನಾಲ್ಕಾರು ದಿನಗಳಾಗಿತ್ತೋ ಏನೋ.. ಅವರಿಂದ ಏನೂ ಸುದ್ದಿ ಬಂದಿರಲಿಲ್ಲ. ಅಮ್ಮನಿಗೆ ಸಣ್ಣಗೆ ಆತಂಕ ಶುರುವಾಗಿತ್ತು. ಒಂದು ಸಂಜೆಯಂತೂ ನಾನು ಆಫೀಸಿನಿಂದ ಬರುವ ವೇಳೆಗೆ ತೀರಾ ಮಂಕಾಗಿ ಕೂತುಬಿಟ್ಟಿದ್ದರು. “ಯಾಕಮ್ಮಾ ಹೀಗಿದೀರಿ? ಏನಾಯ್ತು?” ಎಂದು ವಿಚಾರಿಸಿದರೆ ಏನೂ ಮಾತಾಡದೆ ಒಂದು ಪತ್ರವನ್ನು ನನ್ನ ಕೈಗಿತ್ತರು. ಅದು ಬ್ರಹ್ಮಾನಂದರೆಂಬ ಒಬ್ಬ ಸನ್ಯಾಸಿಗಳು ಅಣ್ಣನಿಗೆ ಬರೆದ ಪತ್ರವಾಗಿತ್ತು. ಈ ಬ್ರಹ್ಮಾನಂದರು ಅಣ್ಣನಿಗೆ ಬಹುಶಃ ವರದಹಳ್ಳಿಯಲ್ಲಿಯೇ ಯಾವಾಗಲೋ ಭೇಟಿಯಾಗಿದ್ದಿರಬೇಕು.. ಒಂದೆರಡು ಬಾರಿ ಮನೆಗೂ ಬಂದಿದ್ದರು. ಅವರ ಆ ಪತ್ರದ ಒಕ್ಕಣೆ ಈಗ ನನಗೆ ನೆನಪಿರುವ ಹಾಗೆ ಸರಿಸುಮಾರು ಹೀಗಿತ್ತು: “ಸಂಸಾರವೆನ್ನುವುದು ನಾಯಿ ಕಚ್ಚುತ್ತಿರುವ ಮೂಳೆಯ ಹಾಗೆ.. ಯಾವ ಸಾರವೂ ಇಲ್ಲದ ದುಃಖದ ಕೂಪ.. ಅದನ್ನು ಝಾಡಿಸಿ ಬಿಸುಟು ಹೊರಗೆದ್ದು ಬಂದಾಗಲೇ ಮುಕ್ತಿ ಮಾರ್ಗ ಗೋಚರವಾಗುವುದು” ಇತ್ಯಾದಿ ಇತ್ಯಾದಿ. ಪತ್ರವನ್ನೋದಿ ನನಗೂ ಆತಂಕ ಶುರುವಾಯಿತು. ಅಣ್ಣನಿಗೆ ಸನ್ಯಾಸಿಯಾಗಬೇಕೆಂಬ ಹಂಬಲ ಬಹಳ ವರ್ಷಗಳಿಂದಲೇ ಇದ್ದದ್ದು ಎಲ್ಲರಿಗೂ ತಿಳಿದಿದ್ದ ವಿಷಯವೇ. ಸಾಕಷ್ಟು ಹಿಂದೆಯೇ ಮನೆ ಬಿಟ್ಟು ಹೋದವರು ಶಿಶುಸ್ವಾಮಿಗಳ ಮಾರ್ಗದರ್ಶನದ ಕಾರಣವಾಗಿ ಹೊರಳಿ ಬಂದದ್ದನ್ನು ಹಿಂದಿನ ಪುಟಗಳಲ್ಲಿ ದಾಖಲಿಸಿದ್ದೇನೆ. ಅಣ್ಣನಈ ಸನ್ಯಾಸದ ಹಂಬಲ ಒಂದು ಮರೆತ ಅಧ್ಯಾಯ ಎಂಬುದು ನಮ್ಮ ಅದುವರೆಗಿನ ತಿಳುವಳಿಕೆಯಾಗಿತ್ತು. ಈಗಿನ ಸಂದರ್ಭವನ್ನೂ ಬ್ರಹ್ಮಾನಂದರ ಪತ್ರವನ್ನೂ ನೋಡಿದರೆ ನಮ್ಮದು ತಪ್ಪು ತಿಳುವಳಿಕೆ ಅನ್ನುವುದು ಖಚಿತವಾಗುತ್ತಿದೆ! ಹಾಗಾದರೆ ಒಳಗೊಳಗೇ ಪೋಷಿಸಿಕೊಂಡು ಬಂದ ತಮ್ಮ ಕನಸಿನ ಸಾಕ್ಷಾತ್ಕಾರಕ್ಕಾಗಿಯೇ ಅಣ್ಣ ಮನೆ ಬಿಟ್ಟು ಹೊರಟು ಬಿಟ್ಟಿದ್ದಾರೆಯೇ? ನನಗೂ ಏನೂ ತೋಚದಂತಾಗಿ ತಕ್ಷಣವೇ ಅಕ್ಕ—ಭಾವಂದಿರಿಗೂ ಬಾಂಬೆಯಲ್ಲಿದ್ದ ಕುಮಾರಣ್ಣಯ್ಯನಿಗೂ ವಿಷಯ ತಿಳಿಸಿದೆವು.

ಕುಮಾರಣ್ಣಯ್ಯ ಮರುದಿನವೇ ಹೊರಟು ಬಂದ. ನಾಗರಾಜ ಭಾವ ಹಾಗೂ ಕುಮಾರಣ್ಣಯ್ಯ, ವರದಹಳ್ಳಿಗೇ ಹೋಗಿ ನೋಡಿಕೊಂಡು ಬರುವುದೆಂದು ತೀರ್ಮಾನಿಸಿಕೊಂಡರು. ಹಾಗೆಯೇ ವರದಹಳ್ಳಿಗೆ ಮರುದಿನವೇ ಹೊರಟೂಬಿಟ್ಟರು. ಆದರೆ ಅಲ್ಲಿ ಅಣ್ಣ ಅವರಿಗೆ ಸಿಗಲಿಲ್ಲ. ‘ಕಳೆದವಾರ ಬಂದಿದ್ದರು; ಸ್ವಾಮಿ ಬ್ರಹ್ಮಾನಂದರ ಜತೆ ಹೋದರು’ ಎಂಬ ವರ್ತಮಾನವಷ್ಟೇ ಅವರಿಗೆ ದೊರೆತದ್ದು. ಬ್ರಹ್ಮಾನಂದರ ಆಶ್ರಮವೋ ಕುಟೀರವೋ ಇದ್ದುದು ವರದಹಳ್ಳಿಗೆ ತುಸು ದೂರದಲ್ಲಿಯೇ. ಅಲ್ಲಿಗೂ ಒಮ್ಮೆ ಹೋಗಿ ನೋಡಿಕೊಂಡು ಬರೋಣವೆಂದು ನಿರ್ಧರಿಸಿ ಭಾವ—ಅಣ್ಣಯ್ಯ ಅತ್ತ ಕಡೆಗೆ ಹೊರಟರು. ಅಲ್ಲಿ ಹೋಗಿ ನೋಡಿದರೆ ಕಾಷಾಯ ವಸ್ತ್ರವನ್ನುಟ್ಟುಕೊಂಡಿದ್ದ ಅಣ್ಣ ಧ್ಯಾನಸ್ಥ ಭಂಗಿಯಲ್ಲಿ ಕುಳಿತಿದ್ದಾರೆ.. ನುಣ್ಣಗೆ ಮುಂಡನ ಮಾಡಿಸಿಕೊಂಡಿದ್ದಾರೆ! ಅವರ ಆ ಸ್ವರೂಪವನ್ನು ನೋಡಿದೊಡನೆಯೇ ಅಣ್ಣಯ್ಯ ಹಾಗೂ ಭಾವನಿಗೆ ನಡೆದಿರುವುದೇನೆಂಬುದು ಅರ್ಥವಾಗಿಹೋಯಿತು. ಕಣ್ಣು ತೆರೆದ ಅಣ್ಣ ಎದುರಿನಲ್ಲಿ ಅಣ್ಣಯ್ಯ—ಭಾವ ಕುಳಿತಿರುವುದನ್ನು ನೋಡಿ ಒಂದು ಕ್ಷಣ ಹೌಹಾರಿಬಿಟ್ಟರಂತೆ. ಹಾಗೆ ಮನೆಯವರು ತಮ್ಮನ್ನು ಹುಡುಕಿಕೊಂಡು ಬರಬಹುದು ಎಂದು ಅಣ್ಣ ಕನಸಿನಲ್ಲೂ ಎಣಿಸಿರಲಿಲ್ಲವೆಂದು ತೋರುತ್ತದೆ… ನಂತರ ಹಾಗೇ ಸಾವರಿಸಿಕೊಂಡು,”ಸುಮ್ಮನೆ ಯಾಕೆ ಶ್ರಮ ಪಟ್ಟುಕೊಂಡು ಬರೋದಕ್ಕೆ ಹೋದಿರಿ? ವಿವರವಾಗಿ ಕಾಗದ ಬರೆದಿದ್ದೆನಲ್ಲಾ?” ಎಂದರಂತೆ. ವಾಸ್ತವವಾಗಿ ಅವರು ಬರೆದಿದ್ದ ಕಾಗದ ಅಣ್ಣಯ್ಯ—ಭಾವ ವರದಹಳ್ಳಿಗೆ ಹೊರಟ ಮರುದಿನವೇ ನಮ್ಮ ಕೈ ಸೇರಿತ್ತು. ಅಣ್ಣಯ್ಯ ಜತನದಿಂದ ಕಾಪಾಡಿಕೊಂಡು ಬಂದಿರುವ ಆ ಪತ್ರದ ಕೆಲವು ಭಾಗಗಳನ್ನು ಯಥಾವತ್ತಾಗಿ ಸಾದರ ಪಡಿಸುತ್ತೇನೆ:
“ಪ್ರಿಯ ನಾಗರಾಜ—ಮೂರ್ತಿಗಳಿಗೆ, ನನಗೀಗ ಹೊಸ ಜನ್ಮವಾಗಿದೆ. ತಂದೆ ಬ್ರಹ್ಮ, ತಾಯಿ ಸರಸ್ವತಿ. ನನ್ನ ಹೆಸರು ನಿತ್ಯಾನಂದ ಸರಸ್ವತಿ. ಜನ್ಮದಿನ—12/3/92. ಸ್ಥಾನ—ಗೋಕರ್ಣ ಮಹಾಕ್ಷೇತ್ರ.. ಮಹಾಬಲೇಶ್ವರನ ದಿವ್ಯ ಸನ್ನಿಧಿ.. ಮೂವತ್ತು ವರ್ಷಗಳಿಂದ ಹೃದಯದಲ್ಲಿ ಅಡಗಿದ್ದ ಸದಿಚ್ಛೆಯೊಂದು ಪೂರ್ಣವಾಗಿದೆ.. ಇದರ ಪುಣ್ಯ ಪ್ರಭಾವವು ಇಂದಿಗೆ ಮಾತ್ರವಲ್ಲ, ಹಿಂದಿನ—ಮುಂದಿನ ಏಳೇಳು ತಲೆಗಳವರೆಗೂ ಸರ್ವದೋಷಗಳ ಪ್ರಾಯಶ್ಚಿತ್ತವನ್ನು ಮಾಡಿದಂತಾಗಿದೆ. ಯಾರೂ ವಿಚಾರಿಸದೆ ಹೀಗಾಗಿಬಿಟ್ಟಿತಲ್ಲಾ ಎಂದು ದುಃಖಿಸಬಾರದು.. ಉದ್ವೇಗಿಗಳಾಗಬಾರದು. ಯಾರ ಪತಿಯು ಸನ್ಯಾಸಿಯಾಗುತ್ತಾನೆ, ಅವಳ ಸೌಭಾಗ್ಯವು ಚಿರಸ್ಥಾಯಿಯಾಗಿರುವುದು. ಅವಳ ಸ್ತ್ರೀ ಜನ್ಮಕ್ಕೆ ಇತಿಶ್ರೀ ಹಾಡಿದಂತೆ. ಮುಂದಿನ ಜನ್ಮದಲ್ಲಿ ಬ್ರಹ್ಮಜ್ಞಾನಿಯಾಗಿ ಜನ್ಮವೆತ್ತುತ್ತಾಳೆ. ಇದಕ್ಕೆ ಶಾಸ್ತ್ರವೇ ಪ್ರಮಾಣವು. ಪುತ್ರ ಪುತ್ರಿಯರೂ ನೀವುಗಳೂ ಅವಳ ಸಕಲ ಯೋಗಕ್ಷೇಮವನ್ನು ವಹಿಸಿಕೊಂಡಿರುವಾಗ, ಎಲ್ಲಾ ಸಾಂಸಾರಿಕ ಜವಾಬ್ದಾರಿಗಳೂ ಪೂರ್ಣಗೊಂಡಿರುವಾಗ ಈ ಮುಂದಿನ ಮೆಟ್ಟಿಲನ್ನು ಹತ್ತದಿದ್ದರೆ ನಾನು ಆತ್ಮ ವಂಚಕನಾಗುತ್ತಿದ್ದೆ… ಒಂದು ಮಹಾ ಕರ್ತವ್ಯ ಪಾಲನೆಯಲ್ಲಿ ನಾನು ತೊಡಗಿರುವಾಗ ನೀವುಗಳೆಲ್ಲರೂ ಒಳ್ಳೆಯ ಮನಸ್ಸಿನಿಂದ ಸಫಲತೆಗಾಗಿ ಪ್ರಾರ್ಥಿಸಬೇಕು. ಇದೇ ಈ ಸಂದರ್ಭದಲ್ಲಿ ನೀವು ನನಗೆ ನೀಡಬೇಕಾದ ಮಹಾಕಾಣಿಕೆ…
ನನ್ನ ಯೋಗಾನುಷ್ಠಾನ, ಜ್ಞಾನಾಭ್ಯಾಸಗಳು ಮುಂದುವರಿಯುತ್ತಿವೆ. ಯಾವುದೇ ಕ್ಲೇಷಾದಿಗಳೂ ನನ್ನನ್ನು ಪೀಡಿಸುತ್ತಿಲ್ಲ. ಆರೋಗ್ಯವಾಗಿದ್ದೇನೆ, ನಿರಾಳವಾಗಿದ್ದೇನೆ. ಅದನ್ನು ಕೆಡಿಸಲು ದಯವಿಟ್ಟು ಯಾರೂ ಪ್ರಯತ್ನಿಸಬೇಡಿ. ಪೂರ್ವಭಾವಿಯಾಗಿ ಸಮಾಲೋಚನೆಯನ್ನು ಮಾಡಲಿಲ್ಲ ಎಂದು ದೋಷಾರೋಪಣೆಯನ್ನು ಮಾಡಬೇಡಿ. ನಿಮ್ಮೆಲ್ಲರಿಗೂ ಸದಾ ಸದ್ಗುರು ಭಗವಾನ್ ದತ್ತಾತ್ರೇಯರು ಶಾಂತಿ ಸಮಾಧಾನಗಳನ್ನು ನೀಡಲಿ.
ನಿತ್ಯಾನಂದ ಸರಸ್ವತಿ.”

ಇದು ನಮಗೆ ಬಂದ ಪತ್ರ ಸಂದೇಶವಾದರೆ ಅಣ್ಣಯ್ಯ—ಭಾವಂದಿರಿಗೆ ನೇರವಾಗಿ ಇದೇ ಮಾತುಗಳನ್ನಾಡಿ ಕಳಿಸಿಕೊಟ್ಟರಂತೆ.
ನಾವು ಕೇಳಬಹುದಾದ ಪ್ರಶ್ನೆಗಳೆಲ್ಲವನ್ನೂ ಊಹಿಸಿಕೊಂಡು ಉತ್ತರ ನೀಡಿಬಿಟ್ಟಿದ್ದರಿಂದ ಮತ್ತೇನೂ ಹೇಳುವಂತೆಯೂ ಇರಲಿಲ್ಲ. ಅಣ್ಣ ದೊಡ್ಡವರು; ಜ್ಞಾನಿಗಳು; ವಿಚಾರವಂತರು.. ದುಡುಕಿ ಏನೂ ನಿರ್ಧರಿಸುವವರಲ್ಲ.. ಸರಿಯೇ! ಅವರ ಬಗ್ಗೆ ಆಕ್ಷೇಪಣೆಗಳನ್ನು ಎತ್ತಿ ವಾದಿಸುವಷ್ಟು ಯೋಗ್ಯತೆಯಾಗಲೀ ಕ್ಷಮತೆಯಾಗಲೀ ನನಗೆಲ್ಲಿ ಬರಬೇಕು? ಆದರೆ ಬಾಳಸಂಗಾತಿಯ ಒಪ್ಪಿಗೆ ಪಡೆಯದೆ ಹಾಗೆ ಬಿಟ್ಟು ನಡೆದದ್ದು, ಸನ್ಯಾಸಾಶ್ರಮ ಸ್ವೀಕರಿಸಿದ್ದು ಸಿಂಧುವೇ ಎಂಬ ನನ್ನ ಪ್ರಶ್ನೆಗೆ ಮಾತ್ರ ಉತ್ತರ ದೊರೆಯಲಿಲ್ಲ. ಆ ಕಾರಣಕ್ಕಾಗಿಯೇ ಒಂದಷ್ಟು ದಿನ ಅಣ್ಣನ ಮೇಲೆ ಸಿಟ್ಟೂ ಬಂದಿತ್ತು. ಅಮ್ಮನ ಮ್ಲಾನ ವದನವನ್ನು ನೋಡಿದಾಗಲೆಲ್ಲಾ, ಅವರ ಕಣ್ಣಂಚಿನಲ್ಲಿ ನೀರು ಧುಮುಕಿದಾಗಲೆಲ್ಲಾ, ಅವರು ಸಂಕಟದಿಂದ ನಿಟ್ಟುಸಿರು ಬಿಟ್ಟಾಗಲೆಲ್ಲಾ ಕೆರಳುವಂತಾಗುತ್ತಿತ್ತು. ಆದರೆ ಎಲ್ಲಾ ಮುಗಿದು ಹೋದಮೇಲೆ ವಸ್ತುಸ್ಥಿತಿಯನ್ನು ಒಪ್ಪಿ ಅಪ್ಪುವುದು ಬಿಟ್ಟು ಬೇರೇನು ತಾನೇ ಮಾಡಲು ಸಾಧ್ಯವಾದೀತು? ಬೆರಳು ಹಿಡಿದು ನಡೆಯುವುದನ್ನು ಕಲಿಸಿದ ಅಣ್ಣ, ಬಾಲ್ಯದಿಂದ ಸದ್ವಿಚಾರಗಳನ್ನು ಬೋಧಿಸಿ ವ್ಯಕ್ತಿತ್ವ ರೂಪಿಸಿದ ಅಣ್ಣ, ಧಾರ್ಮಿಕತೆಯನ್ನು ಆತುಕೊಂಡಿದ್ದರೂ ಎಂದೂ ಮೂಢ ನಂಬಿಕೆಗಳನ್ನಾಗಲೀ ಗೊಡ್ಡು ಸಂಪ್ರದಾಯಗಳನ್ನಾಗಲೀ ಪಾಲಿಸದ ಅಣ್ಣ ‘ಎಲ್ಲ ಕರ್ತವ್ಯ ಮುಗಿಸಿದ್ದೇನೆ’ ಎಂಬ ಖುಷಿಯಲ್ಲಿ ನೆಮ್ಮದಿಯಿಂದ ಬದುಕು ಸಾಗಿಸುವ ಹೊತ್ತು ಬಂದಾಗ ಹೀಗೆ ಎಲ್ಲವನ್ನು ಬಿಟ್ಟು ಧಡಕ್ಕನೆದ್ದು ಹೊರಟು ಬಿಡುವುದೆಂದರೆ ಅಘಾತವಾಗುವುದಿಲ್ಲವೇ? ಒಂದಷ್ಟು ದಿನ ಮನೆಯಲ್ಲಿ ಎಲ್ಲರದೂ ಅಯೋಮಯ ಸ್ಥಿತಿ.. ಮತ್ತೆಂದೂ ಅಣ್ಣನನ್ನು ಅಣ್ಣನಾಗಿ ನೋಡಲಾರೆವೆಂಬ ಹೃದಯಭೇದಕ ಸಂಗತಿಯನ್ನು ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ…

ಹೀಗೇ ಮತ್ತಷ್ಟು ದಿನಗಳುರುಳುತ್ತಿದ್ದಂತೆ ಮತ್ತೊಂದು ತಲ್ಲಣಗೊಳಿಸುವ ಸಂಗತಿ ಎದುರಾಯಿತು.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

April 20, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: