ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಗೀತ ರವಿರಾಜ್ ಕವಿತೆ- ಹೂವ ನೇಯುವ ಸುಖ…

ಸಂಗೀತ ರವಿರಾಜ್

ಅವ್ವ, ಅಮ್ಮ ಚಿಕ್ಕಮ್ಮನಾದಿಯಾಗಿ
ಅಕ್ಕನು ಕಲಿಯುತ್ತಾ
ಹೂ ಮಾಲೆ ನೇಯುವಾಗ
ಈ ಕಲೆ ಒಲಿಯಬಹುದೇ ನನ್ನೊಳಗೆ
ಸೋಜಿಗದಿಂದ ನೋಡಿದ ಬಾಲ್ಯವಿತ್ತು !
ಭಯದ ಎದೆಯಲ್ಲಿ….
ಚುಕ್ಕರ ಕುಳಿತು ಬೆರಗು ಕಣ್ಣಲ್ಲಿ
ನೋಡಿದ್ದನ್ನು
ಈಗ ತನ್ನ ತೆಕ್ಕೆಗೆ ದಕ್ಕಿಸಿಕೊಂಡಿದೆ ಕಾಲ

ನಯ ನಾಜೂಕಿನ ಮೃದು
ಅಚ್ಚ ಬಿಳುಪಿನ ಶುಭ್ರ ಮಲ್ಲಿಗೆಯ
ಸುಖದ ಸ್ಪರ್ಶದ ಮಾಲೆ ಹೆಣೆಯುತ್ತಾ
ಇನ್ನೇನು ಬೆರಳ ತುದಿಯಲ್ಲಿ ಇತ್ತೆಂದಾಗ
ತೊಟ್ಟು ತುಂಡಾಗುವ ವೈರುಧ್ಯಗಳು.

ಆಚೆ ತೊಟ್ಟು ಈಚೆ ತೊಟ್ಟು ಸೇರಿಸಿ,
ಎಳೆ ಬಾಳೆ ನಾರಿನ ದಾರದಿ
ಸುತ್ತು ಹಾಕಿ
ಎರಡೆಳೆಯ ಒಂದು ಗಂಟು
ಹಾಗೆಯೇ ಎರಡನೆಯ ಗಂಟು
ಮೂರು ಗಂಟು ಹಾಕಿ ಬಿಡುತ್ತೇವೆ
ಬೆರಳ ಚಮತ್ಕಾರದಲ್ಲಿ
ಶಾಶ್ವತವೆಂಬ ಭ್ರಮೆಯಲ್ಲಿ …

ಮೂರರ ಆಸೆಯ ಮೂವತ್ತರ
ಹರೆಯಕ್ಕು ದಾಟಿಸಿ
ಈಗ ಒಂದಲ್ಲ, ಎರಡಲ್ಲ
ಮೊನ್ನೆ ತಾನೆ ಮೂರನೇ ನಮೂನೆಯ
ಮಾಲೆ ಕಟ್ಟಲು ಕಲಿತ ಬಿಸುಪು
ಬೆರಳ ತುದಿಯಲ್ಲೇ ಇತ್ತೆಂದಾಗ ಈಗದೆ ಮಗಳ ಸೋಜಿಗ ಕಣ್ಣು
ನನ್ನ ಸುತ್ತಲೇ ಗಸ್ತು ತಿರುಗುತ್ತಾ ನೇಯುವ ಅವಳದೇ ಆಸೆ
ನನ್ನೆದೆ ತುಂಬುತ್ತಿದೆ.

ಅವ್ವನಿಂದ, ಅಮ್ಮನಿಗೆ
ಅಮ್ಮನಿಂದ ನನಗೆ
ನನ್ನಿಂದ ಮಗಳಿಗೆ
ಹಿಂತಿರುಗಿ ನೋಡಿದರೆ
ಹೀಗೆ ರವಾನಿಸಲ್ಪಟ್ಟ
ಈ ನೇಯುವ ಸುಖದ ಕಲೆಯ
ಇತಿಹಾಸವೇ ಹೆಣ್ಣು.

‍ಲೇಖಕರು avadhi

28 March, 2023

1 Comment

  1. ಸಂಗೀತ ರವಿರಾಜ್

    ಧನ್ಯವಾದ ಗಳು ಅವಧಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading