ಸಂಗನಗೌಡ ಹಿರೇಗೌಡ ಓದಿದ ‘ಕಡಕೋಳ ನೆಲದ ನೆನಪುಗಳು’

ಸಂಗನಗೌಡ ಹಿರೇಗೌಡ

“ಯಡ್ರಾಮಿ ಸೀಮೆಯ ಕಥನಗಳು” ಕೃತಿಯಲ್ಲಿ ತಿಳಿಯಾದ ನೆರೆಟಿವ್ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ನಮ್ಮ ನೆಲದ ಉಪ್ಪಿನ ಗುಣವನ್ನು ಪರಿಚಿಯಿಸಿ ಕೊಟ್ಟ ಮಲ್ಲಿಕಾರ್ಜುನ ಕಡಕೋಳ ಅವರು; ತಮ್ಮ ಮನದ ಗೋದಾಮಿನಲ್ಲಿ ಅಡ್ಡಾದಿಡ್ಡಿಯಾಗಿ ಬಿದ್ದಿದ್ದ ಇನ್ನಷ್ಟು ಅನುಭವಗಳನ್ನು ಹದಮಾಡುವುದರ ಜೊತೆಗೆ ಇನ್ನೂ ಕೆಲ ವಿದ್ವಾಂಸರ ಪರಿಚಯಾತ್ಮಕ ಲೇಖನಗಳನ್ನು ಕ್ರೋಢೀಕರಿಸಿ “ಕಡಕೋಳ ನೆಲದ ನೆನಪುಗಳು” ಎನ್ನುವ ಕಿರು ಹೊತ್ತಿಗೆಯನ್ನು ಹೊರ ತಂದಿದ್ದಾರೆ. ಈ ಕೃತಿಯನ್ನು ಎರಡು ಸರತಿ ಓದಲು ಎರಡು ಕಾರಣಗಳಿದಾವೆ. ಒಂದು: ಸಮಗ್ರ ತತ್ವಪದ ಸಾಹಿತ್ಯದ ಮೇಲೆ ಸಂಶೋಧನೆ ಕೈಗೊಂಡಿದ್ದರಿಂದ. ಎರಡು: ತತ್ವಪದಕಾರನಾದ ಕಡಕೋಳ ಮಡಿವಾಳಪ್ಪನ ವೈಯಕ್ತಿಕ ಬದುಕಿನ ಕುರಿತು ಇಲ್ಲಿ ಮೂಡಿಬಂದ ಕಥನಗಳನ್ನು ತಿಳಿದುಕೊಳ್ಳಲು.

ಮಲ್ಲಿಕಾರ್ಜುನ ಕಡಕೋಳರನ್ನೂ ಒಳಗೊಂಡು ಎ.ಕೆ ರಾಮೇಶ್ವರ, ಕಲ್ಯಾಣರಾವ್ ಪಾಟೀಲ್, ಶ್ರೀಶೈಲ ನಾಗರಾಳ, ವಿಜಯಶ್ರೀ ಸಬರದ, ಪ್ರಕಾಶ್ ದೊರೆ, ಅಶೋಕರಾವ್ ಕುಲಕರ್ಣಿ ಮುಂತಾದವರ ವಿಶ್ಲೇಷಿಸಿದ ವಿಭಿನ್ನ ವ್ಯಾಖ್ಯಾನಗಳು ಗಮನಿಸಿದರೆ, ಈಗಾಗಲೇ ಮೊದಲ ತಲೆಮಾರಿನ ಮತ್ತು ಆಧುನಿಕ ಪರಿಭಾಷೆಯ ಮೂಲಕವೇ ವ್ಯಾಖ್ಯಾನಿಸಿರುವಂತೆ ತೋರುತ್ತದೆ. ಉಳಿದಂತೆ ಮಡಿವಾಳಪ್ಪನ ನೆಲದ ಜೊತೆಗೆ ಸುದೀರ್ಘ ಬದುಕನ್ನು ಬದಕಿದ ಅನುಭವಾತ್ಮಕ ಮಾತು ಮಲ್ಲಿಕಾರ್ಜುನ ಕಡಕೋಳ ಮತ್ತು ಎ.ಕೆ ರಾಮೇಶ್ವರ ಅವರು ಚೆನ್ನಾಗಿ ನಿರೂಪಿಸಿದ್ದಾರೆ. ಪ್ರಕಾಶ್ ದೊರೆ ಅವರು ‘ಹಿಂದೊಂದು ಕಾಲಕ್ಕೆ ಮೂಡಬೂಳ ಗ್ರಾಮವು ಮಾಟಮಂತ್ರಕ್ಕೆ ಹೆಸರಾಗಿತ್ತು’ ಎನ್ನುವ ಮಾತನ್ನಾಡಿದ್ದಾರೆ.

ಭಾರತೀಯ ಶ್ರಮಣ ಪಂಥಗಳಲ್ಲಿ ಮಾಟಮಂತ್ರವು ಹೆಚ್ಚು ಟ್ಯಾಗ್ ಆಗುವುದು ನಾಥಪಂಥದ ಗೋರಕ್ಷನಾಥ, ಮಚೇಂದ್ರನಾಥರಂಥವರಿಗೆ ಎನ್ನುವುದು ಈಗಾಗಲೇ ಚಿದಾನಂದಮೂರ್ತಿ, ಎಮ್ ಎಮ್ ಕಲ್ಬುರ್ಗಿ, ರಹಮತ್ ತರೀಕೆರೆ, ಬಸವರಾಜ ತೂಳಹಳ್ಳಿ, ಸುರೇಶ್ ನಾಗಲಮಡಿಕೆಯಂಥ ವಿಂದ್ವಾಸರು ಗುರುತಿಸಿದ್ದಾರೆ. ಮೂಡಬೂಳದ ಜೊತೆಗೆ ಮಡಿವಾಳಪ್ಪನ ಸಂಬಂಧವಿರುವುದು ಈಗಾಗಲೆ ಗೊತ್ತೇ ಇದೆ. ಹಾಗಾಗಿ ಮಡಿವಾಳಪ್ಪನಿಗೂ ನಾಥಪಂಥದ ಪ್ರಭಾವ ಇಲ್ಲದಿರಲು ಸಾಧ್ಯವಿಲ್ಲವೆನ್ನುವುದಕ್ಕೆ ಆತನ ‘ಜಯ ಜಯ ಮಂಗಳ ಮೂರತಿಗಾರುತಿ ಎತ್ತಲೆ ಬೇಕಮ್ಮ’ ಎನ್ನುವ ಮಂಗಳಾರತಿ ಪದವು ಮುಂದುವರೆದಂತೆ ಅಲ್ಲಿ ಬರುವ ರೂಪಕಗಳು, ನುಡಿಗಟ್ಟುಗಳು ನಾಥಪಂಥದ ಸಂಸ್ಕೃತಿಗೇ ಸಂಬಂಧಿಸಿಂಥವು ಎಂದು ಹೇಳಬೇಕಾಗುತ್ತದೆ. ಆ ತತ್ವಪದ ಹೀಗಿದೆ.

‘ಹಸುತೃಷೆ ಅಜಮಿತ ವಿಚಿತ್ರ ಗೊಂಬಿ
ಮಾಟವೆ ತಾಟಮ್ಮ ಆಕ್ರಳ ವಿಕ್ರಳ ಕೂಟಮ್ಮ
ಬಹುಬಹು ಬಂಗಾಲಿ ಆಟಮ್ಮ
ಅಸಮ ಮಾಂತನ ಕಾಣಗೊಡದ
ಧೂಳ್ ದುಂಬಿ ಬುಕಿಟ ಗಾಟಮ್ಮ’
ಇಲ್ಲಿಯ ‘ಮಾಟ’, ‘ಬಂಗಾಳಿ’ ಪದಗಳು ನಾಥಪಂಥಕ್ಕೆ ಸೇರಿರುವಂಥವು. ಮಡಿವಾಳಪ್ಪನ ಇನ್ನೊಂದು ತತ್ವಪದ ‘ಬಂಗಾಳಿ ಸಂತಿ ಬಲು ಗಡಿಬಿಡಿ’ ಇದೂ ಕೂಡ ನಾಥಪಂಥದ ಪ್ರಭಾವವನ್ನು ಸೂಚ್ಯವಾಗಿ ಹೇಳುತ್ತದೆ.

ಮೊದಲೇ ಹೇಳಿದಂತೆ ಮಲ್ಲಿಕಾರ್ಜುನ ಕಡಕೋಳ ಅವರು ಮಡಿವಾಳಪ್ಪನು ಐಕ್ಯವಾದ ಊರಿನವರೇ ಆಗಿರುವುದರಿಂದ ಅಲ್ಲಿಯ ಮಠದ ಒಟ್ಟು ಪರಂಪರೆಯನ್ನು, ಮತ್ತು ಪ್ರಕಾಶನದಂಥ ಸಾಹಸ ಕಾರ್ಯದ ಕುರಿತು ಅವರಿಗಿರುವ ಅನುಭವ ಲೋಕ ದೊಡ್ಡದು. ಅದನ್ನು ಓದುಗರಿಗೆ ಸರಳವಾದ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅವರ ಒಟ್ಟು ಮಾತಿನ ತಿರುಳಿನ್ನು ಗಮನಿಸಿದರೆ ‘ಕನ್ನಡ ಸಾಹಿತ್ಯದ ಸಾಂಸ್ಕೃತಿಕ ಚರಿತ್ರೆಕಾರರು’ ಸಾಹಿತ್ಯದ ಸಾಂಸ್ಕೃತಿಕ ಚರಿತ್ರೆಯಲ್ಲಾದ ಅಪರಾಧದಿಂದ ಪಾಪಪ್ರಜ್ಞೆ ತಾಳಿ ಈಗೀಗ ಕರಿಕುಂಬಳಕಾಯಿ ಕಡೆಗೆ ಬರುತ್ತಿದ್ದಾರೆ. ಮತ್ತು ಇನ್ನೊಂದು ಮುಖ್ಯವಾದ ಮಾತು ಇಲ್ಲಿ ಹೇಳಲೇಬೇಕಾಗುತ್ತದೆ.

ಮಡಿವಾಳಪ್ಪ, ಷರೀಫ, ಕೂಡಲೂರರು, ಚಿದಾನಂದಾವಧೂತರಂಥ ತತ್ವಪದಕಾರರು ಇತ್ತೀಚಿನ ವೀರಶೈವದ ‘ಪಂಚಪೀಠ ತತ್ವ’ ಮತ್ತು ಲಿಂಗಾಯತದ ‘ಅನುಭವ ಮಂಟಪ ತತ್ವ’ ಈ ಎರಡು ತತ್ತಗಳನ್ನು ಒಳಗೊಂಡಂತೆ ಕಂಡರೂ, ‘ಅಲ್ಲೆ ಹೌದು, ಹೌದೆ ಅಲ್ಲ’ ಎನ್ನುವ ತತ್ವಪದಕಾರರು ತೋರುಗದ್ದುಗೆಗಳ ಮೂಲಕ ವಿಭಿನ್ನವಾಗಿಯೇ ನಿಲ್ಲುತ್ತಾರೆ. ಇಂಥ ಸಮೃದ್ಧ ಪರಂಪರೆಯನ್ನು ಯಾವ ತತ್ವಕ್ಕೂ ಸಿಕ್ಕಾಕಿಕೊಳ್ಳದಂತೆ ಜತನವಾಗಿ ಕಾಪಿಟ್ಟುಕೊಳ್ಳುವುದು ಈ ಕಾಲಕ್ಕೆ ಮುಖ್ಯವಾಗಿದೆ.

‍ಲೇಖಕರು Admin

April 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಡಿ ಎಂ ನದಾಫ್ ಅಫಜಲಪುರ

    ಅವಧಿ ಆನ್‌ಲೈನ್
    We’ll return today at 06:30 PM

    ಅವಧಿಗೆ ಸ್ವಾಗತ,
    ಸಂಗನಗೌಡ ಹಿರೆಗೌಡ ಅವರು ಕಡಕೋಳ ನೆಲದ ನೆನಪುಗಳು ಕೃತಿಯ ಕುರಿತು ಮಾಡಿರುವ ವಿಮರ್ಶೆ ಅಧ್ಯಯನ ಪೂರ್ಣವಾದುದು. ತತ್ವಪದಕಾರರಲ್ಲಿ ಶರಣ ಸಾಹಿತ್ಯ ಮತ್ತು ಪಂಚಪೀಠಗಳ ಸಮಾನ ಸಮ್ಮಿಲನ ಇರುವ ಸಾಹಿತ್ತಿಕ ಲಕ್ಷಣಗಳು ಇವೆ ಎಂಬ ಹೊಸ ಲೇಖನ ನೀಡಿತು ಜೊತೆಗೆ ಕುರಿತು ಹೊಸದಾದ ಮಾತುಗಳು ಲೇಖನದಲ್ಲಿವೆ ಇದುವರೆಗೆ ಕನ್ನಡ ಸಾಹಿತ್ಯದ ಲೋಕ ಹಚ್ಚಲಿರುವ ಕ್ಷೇತ್ರವನ್ನು ಲೇಖಕರು ವಿಮರ್ಶಕರು ಮುಟ್ಟಿ ನೋಡಿದ್ದಾರೆ ಅದಕ್ಕಾಗಿ ಇಬ್ಬರಿಗೂ ಧನ್ಯವಾದಾಗಳು
    ಡಿ ಎಂ ನದಾಫ್ ಅಫಜಲಪುರ
     

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: