ಜಯರಾಮಚಾರಿ ಹೊಸ ಕಥೆ – ಹಾರಿಹೋದ ಕೆಂಪು ಜಾಕಿ ಚಡ್ಡಿ…

ಜಯರಾಮಚಾರಿ

ಅಂತಹದೊಂದು ಕಳ್ಳತನ ಅವನೆಂದು ನೋಡಿರಲಿಲ್ಲ.

ಚೇ ! ನ ಚಡ್ಡಿ ಕಳುವಾಗಿತ್ತು. ಅದೆಂಗೆ ಅದು ಕಳ್ಳತನವೇ ,ಯಾರೋ ಕದ್ದಿದ್ದಾರೆಂದು ಹೇಳ್ತಿಯ ಅವನನ್ನು ಗೆಳೆಯ ರುಸ್ತುಮ್ ಪ್ರಶ್ನಿಸಿದಾಗ .ಇದು ಮೊದಲ ಸಲ ಅವನ ಚಡ್ಡಿ ಕಳುವಾದದ್ದು, ಈ ಹಿಂದೆಯೂ ಆಗಷ್ಟೇ ತಂದು ಒಂದು ಸಲ ಹಾಕಿಕೊಂಡು ಮಾರನೇ ದಿನ ಒಗೆದು ಹಾಕಿದ್ದ ಅದು ಸಂಜೆ ಬರುವುದರೊಳಗೆ ಕಳೆದುಹೋಗಿತ್ತು. ಕದಿಯದೇ ಗಾಳಿಗೆ ಹಾರಿಹೋಗುತ್ತದೆ ಎಂದು ನಂಬಲಸಾಧ್ಯ, ಅದು ಹಾರದಂತೆ ಗಟ್ಟಿಯಾದ ಕ್ಲಿಪ್ ಹಾಕಿದ್ದ. ಅದು ಹಸಿರು ಕಲರಿನದ್ದು ಎಂದು ಕೇಳದಿದ್ದರೂ ಅದರ ಬಣ್ಣ ಹೇಳಿದ್ದ, ಕೆಳಗೊಂದು ಮನೆ ಮೇಲೆ ಇವನ ರೂಮು.

ಕೆಳಗಿನ ಮನೆಯವರಲ್ಲಿ ಒಬ್ಬ ಮುದುಕ, ಒಬ್ಬ ಮಧ್ಯವಯಸ್ಕ, ಒಬ್ಬ ಬಾಲಕ ಇದ್ದುದು, ಮಧ್ಯವಯಸ್ಕನದೇ ಮನೆ ಅದು, ಬಾಡಿಗೆ ಮನೆಯವನ ಚಡ್ಡಿಯನ್ನು ಮಾಲೀಕ ಕದ್ದಿರಲು ಸಾಧ್ಯವಿಲ್ಲ ಎಂದು ಅನಿಸಿದ್ದರು ಅವನ ಚಡ್ಡಿ ಕಳುವಾದುದು ಅಂತೂ ನಿಜ. ಅಲ್ಲಿಗೆ ಅವಂತ್ತಿರ ಇದ್ದ ಎರಡು ಚಡ್ಡಿಯಲ್ಲಿ ಒಂದು ಚಡ್ಡಿ ಪವಾಡ ಸಾದೃಶ್ಯದಲ್ಲಿ ಕಳುವಾಗಿತ್ತು. ಯಾರ ಹತ್ತಿರವೂ ಹೇಳಿಕೊಳ್ಳಲಾಗದ ಯಾವ ಪೊಲೀಸ್ ಸ್ಟೇಷನ್ ಲಿ ಲಾಡ್ಜ್ ಮಾಡಲಾಗದ ಕಳ್ಳತನಕ್ಕೆ ಚೇ ಸಾಕ್ಷಿಯಾಗಿದ್ದ.

ಈ ಚೇ ಯ ಪೂರ್ತಿ ಹೆಸರು ಚೇರನ್ ಅಂದು, ತಮಿಳುನಾಡಿನಿಂದ ಚಿಕ್ಕ ವಯಸ್ಸಲ್ಲೇ ಓಡಿ ಬಂದು ಹೋಟೆಲು ಗ್ಯಾರೇಜು ಪೇಪರ್ ಹಾಕೋದು ಈ ತರದ ಕೆಲಸ ಮಾಡಿ ಬದುಕುತ್ತಿದ್ದವನಿಗೆ ಒಂದು ದಿನ ಯಾರೋ ಅವನು ಹೋಟೆಲಿನಲ್ಲಿ ತಟ್ಟೆ ಎತ್ತುವಾಗ ಶಿಕ್ಷಣ ಪವರ್ ಫುಲ್ ಟೂಲ್ ಅದರಿಂದ ಅಷ್ಟೇ ಮನುಷ್ಯ ಉದ್ದಾರ ಆಗಬಹುದು ಅಟ್ಲಿಸ್ಟ್ ಭಾರತದಲ್ಲಿ ಪಕ್ಕದವನ ಜೊತೆ ವಾದಿಸುತ್ತಿದ್ದ, ಪಕ್ಕದವನು ಉದ್ದಿನವಡೆ ತಿನ್ನುತ್ತಾ ಯೂ ಆರ್ ರೈಟ್ ಡ್ಯೂಡ್ ಅನ್ನುತ್ತಿದ್ದ. ಅವತ್ತು ರಾತ್ರಿ ಮತ್ತೆ ಚೇ ಓಡಿದ, ಓಡಿದವನು ಕಷ್ಟಪಟ್ಟು ಇಷ್ಟಪಟ್ಟು ಓದಿದ, ಕೆಲಸವೂ ಸಿಕ್ತು. ಅವನಿಗೆ ಚೆಗುವಾರನ ಹುಚ್ಚು, ಅವನ ಪುಸ್ತಕಗಳು, ಅವನ ಪಿಚ್ಚರು, ಒಟ್ಟಿನಲ್ಲಿ ಚೆಗುವಾರ ಎಂದರೆ ಬಾಯಲ್ಲೇ ಅವನ ಬಗ್ಗೆ ಇಡೀ ದಿನ ಹೇಳುವಷ್ಟು ದೊಡ್ಡ ಭಕ್ತನಾಗಿದ್ದ, ತಾನು ಏನಾದರೂ ಕ್ರಾಂತಿ ಮಾಡಬಹುದು ಎಂದು ಮೊದಲೆಲ್ಲ ಕನಸು ಕಂಡಿದ್ದ, ಒಂದು ಸಲ ವಾಸ್ತವ ಬದುಕಿನ ಹೊಡೆತ ಬಿದ್ದ ಮೇಲೆ ಅದರ ಕನಸನ್ನು ಸೈಡಿಗೆ ಸೆಟಲ್ ಆಗಬೇಕು ಎಂದು ಒದ್ದಾಡಿ, ಒಂದು ಲೆವಲ್ ಗೆ ಸೆಟಲ್ ಆಗಿದ್ದ, ಗೆರಿಲ್ಲಾ ವಾರ್ ಫೇರ್, ಮೋಟಾರ್ ಸೈಕಲ್ ಡೈರೀಸ್ ಅವನ ಟ್ರಂಕಿನಲ್ಲಿ ಶಾಶ್ವತವಾಗಿ ಉಳಿದು ಹೋಗಿತ್ತು, ಚೆಗುವಾರನ ಒಂದು ಫೋಟೋ ಗೋಡೆ ಮೇಲೆ ಇವನ ನಕಲಿತನ ಕಂಡು ಹಾಗೆ ಕೂತಿತ್ತು, ಚೆಗುವಾರನ ಟೋಪಿ ಎಲ್ಲಿ ಹೋಗಿತ್ತೋ ಅವನಿಗೂ ತಿಳಿಯದು, ಕ್ರಾಂತಿ ಬಯಸುತ್ತಿದ್ದ ದಿನಗಳಲ್ಲಿ ಅವನಿಗೆ ಜೈಲು ಸೇರುವ ಅತೀವ ಆಸೆಯಿತ್ತು, ಆ ಯೋಗ ಕೂಡಿ ಬರಲೇ ಇಲ್ಲ. ಇಷ್ಟೆಲ್ಲಾ ಜೀವನ ಕಂಡ ಅವನು ಈಗ ತನ್ನ ಚಡ್ಡಿ ಕಳೆದುಹೋಗಿರುವದಕ್ಕೆ ಖಿನ್ನವಾಗುವಷ್ಟು ಬದಲಾಗಿದ್ದ.

ಚಡ್ಡಿ ಕಳೆದುಹೋದ ಮೂರನೇ ದಿನಕ್ಕೆ, ಅವನ ಮನೆಯ ಬಾಗಿಲನು ಪೊಲೀಸರು ತಟ್ಟಿದರು, ಅವನು ಆಗಷ್ಟೇ ಕಣ್ಬಿಟ್ಟು ಎದ್ದು ಯಾವನೋ ಲೇ ಅಷ್ಟು ಜೋರಾಗಿ ತಟ್ಟೋದು, ಮುಚ್ಕೊಂಡಿರು ಸ್ವಲ್ಪ ಬರ್ತಾ ಇದ್ದೀನಿ ಎಂದು ಸಿಟ್ಟಿನಿಂದ ಬಾಗಿಲು ತೆಗೆಯುವುದಕ್ಕೂ, ಬೋಳಿಮಗನೇ ಎಷ್ಟೊತ್ತೋ ಬಾಗಿಲು ತೆಗೆಯಕ್ಕೆ, ಪೊಲೀಸರುಗೆ ಮುಚ್ಕೊಂಡಿರು ಅಂತೀಯಾ ಎಂದು ಅವನ ಕೆನ್ನೆಗೆ ಬಲವಾದ ಏಟು ಬೀಳುವುದಕ್ಕೂ ಒಂದೇ ಆಯ್ತು.ಇದೇನು ಕನಸ ಎಂದು ಒಂದು ಸಲ ಗಿವುಟಿಕೊಂಡ ತನ್ನನ್ನೇ, ಇಲ್ಲ ಇದು ನನಸೇ, ಬೆಳ್ ಬೆಳಗ್ಗೆ ಏಕಾಏಕಿ ಪೊಲೀಸರು ಏಕೆ ಹುಡುಕಿ ಬಂದರು ಎಂದು ಗೊತ್ತಾಗದೆ, ಸರ್ ಸರ್ ಎನ್ನುವ ಒಳಗೆ ಅವನನ್ನು ದರ ದರ ಎಳೆದುಕೊಂಡು ಹೋಗಿ, ಜೀಪಿನೊಳಗೆ ಕೂರಿಸ್ಕೊಂಡು ಹೋಗೆ ಬಿಟ್ಟರು .ಅವನ ರೂಮಿನ ಬಾಗಿಲು ಹಾಗೆ ತೆರೆದಿತ್ತು, ನೇತು ಹಾಕಿದ ಹೊಸ ಚಡ್ಡಿ ಈಚೆ ಹಾರಾಡುತ್ತಿತ್ತು

**
ಸಾಕ್ಷಾಧಾರದ ಕೊರತೆಯಿಂದ ಅವನಿಗೆ ಶಿಕ್ಷೆ ಆಯಿತೆಂದು ಸುದ್ದಿ ಬಂತು, ಇಲ್ಲ ಇಲ್ಲ ಯಾವ ಶಿಕ್ಷೆಯು ಆಗಿಲ್ಲ ಜೀಪಿನಲ್ಲಿ ಎತ್ತಿಕೊಂಡು ಹೋಗಿ ದಾರಿ ಮಧ್ಯೆ ಅವನು ಉಚ್ಚೆಗೆಂದು ಇಳಿದಾಗ ಎನ್ ಕೌಂಟರ್ ಮಾಡಲಾಯ್ತು ಎಂದು ಇನ್ನೊಂದು ಸುದ್ದಿ, ಇಲ್ಲ ಇಲ್ಲ ಜೀಪಿನಿಂದ ಎಗರಿ ಅವನು ತಪ್ಪಿಸಿಕೊಂಡ ಎಂದು ಇನ್ನೊಂದು ಸುದ್ದಿ

**

ಅಸಲು ಆದದ್ದಿಷ್ಟು , ಅವನ ಮನೆಯಿಂದ ಕಿಮೀ ದೂರದಲ್ಲೊಂದು ಮಸೀದಿ, ಅದರ ಎದುರೊಂದು ಮಂದಿರ, ಶಿವಾರಾತ್ರಿಯ ದಿನ ಸರಿಯಾಗಿ ಹನ್ನೆರಡಕ್ಕೆ ಎಲ್ಲಿಂದಲೋ ಕಲ್ಲು ತೂರಾಟ, ಕಲ್ಲುಗಳು ಬಂದು ದೇವಸ್ಥಾನಕ್ಕೆ ಬಡಿದವು, ಎಲ್ಲಿಂದ ಬಂದವು ಅಂದು ನೋಡುವ ಮುಂಚೆ ನಿಂತು ಹೋದವು, ತೂರಾಟ ನಿಂತ ಮೇಲೆ ಹಾರಾಟ ಸುರು ಆಯ್ತು ,ರೊಚ್ಚಿಗೆದ್ದ ಜನ ಮಸೀದಿಗೂ ಕಲ್ಲು ತೂರಿದರು, ಅದು ಇನ್ನೇನೋ ಸ್ವರೂಪ ಪಡೆದು ಜೋರು ಜಗಳ ಆಗಿ, ಮಧ್ಯೆ ಪೊಲೀಸರು ಬಂದು ಸಿಕ್ಕ ಸಿಕ್ಕವರ ಕುಂಡೆಗೆ ಬತ್ತಾಸು ಕೊಟ್ಟು, ಆಶ್ರುವಾಯು ಸಿಡಿಸಿ, ಸಿಕ್ಕ ಸಿಕ್ಕವರನ್ನು ಪೊಲೀಸ್ ವ್ಯಾನ್ ಗೆ ಹಾಕಿ ಗುಮ್ಮಿದ ಮೇಲೆ ಹತೋಟಿಗೆ ಬಂತು, ಆ ರಾತ್ರಿ ತೋರಿ ಹೋದ ಕಲ್ಲುಗಳಲ್ಲಿ ಒಂದು ಮೂರು ಕಲ್ಲುಗಳನ್ನು ಇವನು ಕಳೆದುಕೊಂಡ ಕೆಂಪನೆಯ ಹೊಸ ಜಾಕಿ ಚಡ್ಡಿಯಲ್ಲಿ ಹಾಕಿ ಯಾರೋ ಕಿಡಿಗೇಡಿ ಎಸೆದಿದ್ದರು, ಆ ಚಡ್ಡಿಯ ಜಾಡು ಹಿಡಿದು ಏನು ಇವನನ್ನು ಪತ್ತೆ ಹಚ್ಚಿರಲಿಲ್ಲ, ಆ ಸಮಯದಲ್ಲಿ ಸುತ್ತ ಮುತ್ತ ಇರುವ ವ್ಯಕ್ತಿಗಳ ಮೇಲೆ ಅವರ ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇರಿಸಿ ,ಕೆದಕಿದಾಗ , ಇವನು ಕಳೆದು ಕೊಂಡ ಚಡ್ಡಿಯನ್ನು ತಮಾಷೆ ಮಾಡಿ ಅವನ ಸ್ನೇಹಿತ ರುಸ್ತುಮ್ ‘ಕಂಗ್ರಾಟ್ಸ್ ನಿನ್ನ ಚಡ್ಡಿ ಕಳೆದುಕೊಂಡಿದ್ದಕ್ಕೆ, ಕೆಂಪು ಬೇರೆ, ಅಪಾಯ ಹತ್ತಿರದಲ್ಲಿದೆ ” ಎಂದು ತನ್ನ ಕವಿ ಭಾಷೆ ಸುರಿದು ಪೋಸ್ಟು ಮಾಡಿದ್ದ ಅವನ ಮೂತಿಗೂ ನಾಲ್ಕು ಲೈಕ್ ಬಿದ್ದಿರಲಿಲ್ಲ, ಆದರೆ ಅವನು ಆ ದಿನ ನಡೆದ ಗಲಾಟೆಯಲ್ಲಿ ಪಾಲ್ಗೊಂಡು ಕಲ್ಲು ತೂರಿದ್ದ, ಅವನ ಫೇಸ್ ಬುಕ್ ಲಿ ಈ ಪೋಸ್ಟ್ ನೋಡಿ , ಟ್ಯಾಗ್ ಮಾಡಿದ್ದವರ ಮೆನೆಯೆಲ್ಲ ಹುಡುಡಕಾಡಿ, ಎಳೆದುಕೊಂಡ ಹೋದವರಲ್ಲಿ ಚೇ ಕೂಡ ಒಬ್ಬ, ಮತ್ತೆ ಅವನ ರೂಮಿಗೆ ಬಂದು ಬಲವಾದ ಸಾಕ್ಷಿ ಏನಾದರೂ ಸಿಕ್ಕಿತ  ಎಂದು ಹುಡುಕಿದಾಗ ಚೇ ಗುವಾರನ ಒಂದಷ್ಟು ಪುಸ್ತಕಗಳು, ಅವನ ಟ್ರಂಕಿನಲ್ಲಿ ಎಷ್ಟೋ ವರುಷಗಳ ಹಿಂದೆ ಚೆಗುವಾರನ ಟೋಪಿ ಹಾಕಿ ತೆಗೆಸಿಕೊಂಡ ಫೋಟೋ, ಒಂದಷ್ಟು ಕ್ರಾಂತಿಕಾರಕ ಕೋಟುಗಳು ಅವನ ಫೇಸ್ ಬುಕ್ಕಿನಲ್ಲಿ, ಜೊತೆಗೆ ಇತ್ತೀಚೆಗೆ ಪರಿಚಯವಾದ ಹೊಸ ಫೇಸ್ ಬುಕ್ ಹುಡುಗಿಯ ಚಾಟ್ ಲಿ ನನಗೆ ಜೈಲಿಗೆ ಹೋಗುವ ಆಸೆಯಿತ್ತು ಹೋಗಲಾಗಲಿಲ್ಲ, ಒಂದಲ್ಲ ಒಂದು ದಿನ ಹೋಗುವೆ ಎಂದು ನಕ್ಕಿದ್ದ ಮೆಸೇಜು ಸಿಕ್ಕಿತ್ತು.

ಈ ಎಲ್ಲ ಸಾಕ್ಷಿಗಳಿಂದ ಅವನನ್ನು ಹಿಡಿದು ಜೈಲಿಗೆ ಹಾಕಿದ್ದರು. ಮುಖ್ಯ ಸಾಕ್ಷಿ ತೂತಾದ ಅವನ ಕೆಂಪು ಚಡ್ಡಿ .

**

ಮಾಬ್ ವೊಯ್ಲೆನ್ಸ ಲಿ ಪಾಲ್ಗೊಂಡಿದ್ದಕ್ಕಾಗಿ ಅವನಿಗೆ ಹತ್ತು ವರುಷದ ಜೈಲು ಕೂಡ ಆಯ್ತು

**
ಅವನು ಕಳೆದುಕೊಂಡ್ಡಿದ್ದ ಮೊದಲ ಚಡ್ಡಿ ಹಾಕಿಕೊಂಡ ಭಿಕ್ಷಕನೊಬ್ಬ ಬರಿ ಚಡ್ಡಿಯಲ್ಲಿ ಮಲಗಿದ್ದ, ಜೋರು ಮಳೆ ಬಂಡ ಕಾರಣ ಅಲ್ಲೇ ಇದ್ದ ಹಾಳು ಪಾಳು ಕಟ್ಟಡಕ್ಕೆ ನುಗ್ಗಿದ ಅಲ್ಲಿ ಚೇ ಸ್ಲೇಟು ಹಿಡಿದುಕೊಂಡು ಅರೆಸ್ಟ್ ಆದ ಸುದ್ದಿ ಪತ್ರಿಕೆ ಇತ್ತು. ಭಿಕ್ಷುಕ ಗಮನಿಸಿಲೇ ಇಲ್ಲ.

‍ಲೇಖಕರು Admin

April 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: