ಶ್ರೀಶೈಲ್ ನಾಗರಾಳ ಓದಿದ ‘ರಂಗ ಕಲಾವಿದೆ ರೆಹಮಾನವ್ವ ಕಲ್ಮನಿ’

ಡಾ ಶ್ರೀಶೈಲ್ ನಾಗರಾಳ

ಬಾಳಿನ ಒರೆಗಲ್ಲಿನಲ್ಲಿ ಬಹುಕಾಲದವರೆಗೂ ಪರೀಕ್ಷೆಗೊಳಗಾಗಿ
ನಿಲ್ಲುವ ಚಿರ ಪ್ರೇಮವು ಮಿಂಚಿನಂತಲ್ಲ ನಂದಾದೀದಂತಿರುತ್ತದೆ.
-ರಾಷ್ಟ್ರಕವಿ ಕುವೆಂಪು

ಹೈದರಾಬಾದ ಕರ್ನಾಟಕದ ಧೀಮಂತ ರಂಗಕಲಾವಿದೆ ರೆಹಮಾನವ್ವ ಕಲ್ಮನಿ ಇದು ಕವಿ, ರಂಗ ಚಿಂತಕ ಗವೀಶ ಹಿರೇಮಠ ಅವರು ರಚಿಸಿದ ಕೃತಿ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗವು ಹೈದರಾಬಾದ ಕರ್ನಾಟಕ ಮಾಲೆಯಡಿಯಲ್ಲಿ ಪ್ರಕಟಿಸಿದೆ. ಬಹುಮುಖ್ಯವಾಗಿ ಲೇಖಕರು ಇಲ್ಲಿ ಜನಪ್ರಿಯರಂಗ ಕಲಾವಿದೆಯಾಗಿದ್ದಂತಹ ರೆಹಮಾನವ್ವ ಕಲ್ಮನಿಯವರ ರಂಗಜೀವನದ ವಿವಿಧ ಹಂತಗಳನ್ನು ಕಟ್ಟಿಕೊಡುವುದರ ಜೊತೆಗೆ ಕನ್ನಡ ರಂಗಭೂಮಿಯ ಇತಿವೃತ್ತ, ಕಲಾವಿದರ ನೋವು ನಲಿವಿನ ಬದುಕು ಸಾಧನೆ ಸಿದ್ಧಿ, ತಾವು ನಂಬಿ ಬಂದ ಕ್ಷೇತ್ರದಲ್ಲೇ ಗಟ್ಟಿಯಾಗಿ ನಿಂತು ತಾವು ಮತ್ತು ರಂಗಭುಮಿಯ ಉಳಿವಿಗಾಗಿ ನಡೆಸಿದ ಹೋರಾಟಗಳ ಸಂಕಥನವನ್ನು ಕಟ್ಟಿಕೊಡಲು ಮಾಡಿದ ಪ್ರಯತ್ನವನ್ನು ಕಾಣುತ್ತೇವೆ.

ಒಂದು ನಾಟಕದ ಸಾಫಲ್ಯತೆ ಅದರ ಪ್ರಯೋಗದಲ್ಲಿರುತ್ತದೆ. ರಚನೆಗೊಂಡ ಒಂದು ಕೃತಿಯು ರಂಗ ಪ್ರಯೋಗವಾಗಿ, ಜನ ಬಂದು ನೋಡಿ, ಅದರ ಬಗ್ಗೆ ಅವರಲ್ಲಿ ಜಿಜ್ಞಾಸೆ ಮೂಡಿದಾಗಲೇ ಆ ನಾಟಕದ ಸಾಫಲ್ಯ ರಂಗದ ಸಾಫಲ್ಯವೂ ಆಗುತ್ತದೆ. ಅಷ್ಟೇ ಏಕೆ ಈ ಎರಡಕ್ಕೂ ತನ್ನ ಪ್ರತಿಭೆಯನ್ನು ಧಾರೆಯರೆದ ಕಲಾವಿದನ ಸಾಫಲ್ಯವನ್ನು ಆಗುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು, ರಂಗಭೂಮಿಯ ಸಾಫಲ್ಯಕ್ಕೆ ದುಡಿದ ಅನೇಕ ಪ್ರತಿಭಾವಂತ ಕಲಾವಿದರನ್ನು ರಂಗಭೂಮಿಯ ಸುಮಾರು ನೂರಾರು ವರ್ಷಗಳ ಇತಿಹಾಸದಲ್ಲಿ ಕಂಡರಿತಿದ್ದೇವೆ. ಅಂತಹವರಲ್ಲಿ ಪ್ರತಿಭಾವಂತ ರಂಗಕಲಾವಿದೆ ರಹಮಾನವ್ವ ಕಲ್ಮನಿಯವರೂ ಕೂಡ ಒಬ್ಬರಾಗಿದ್ದಾರೆ.

ಗವೀಶ ಹಿರೇಮಠರು ರಹಮಾನವ್ವಳ ಕುರಿತು ಹೀಗೆ ಬರೆಯುತ್ತ ರೆಹಮಾನವ್ವ ವೃತ್ತಿರಂಗಭೂಮಿಯಲ್ಲಿ ನಿರಂತರ ಬೆಳಗುವ ತಾರೆ, ಅತ್ಯುತ್ತಮ ನಡಿಯರ ಸಾಲಿನಲ್ಲಿ ಗುರುತಿಸಿಕೊಂಡ ಪ್ರತಿಭಾವಂತೆ, ಕಲಾವಿದೆಯಾಗಿ, ನಿರ್ದೇಶಕಿಯಾಗಿ, ಕಂಪನಿಯ ಒಡತಿಯಾಗಿ ರಂಗಭೂಮಿಯಲ್ಲಿ ಇತಿಹಾಸ ನಿರ್ಮಿಸಿದಳು, ಈ ಕಲಾವಿದೆಯನ್ನು ಯಾರಿಗೂ ಹೋಲಿಸಲಾಗದು.

ರೆಹಮಾನವ್ವನಿಗೆ ರೆಹಮಾನವ್ವನೇ ಸಾಟಿ ಈ ಕಲಾವಿದೆಯ ಕಾಯಕ ಪ್ರಜ್ಞೆಗೆ, ನಿಷ್ಠೆಗೆ, ಬದ್ಧತೆಗೆ ಬೇರೆ ಉದಾಹರಣೆಗಳೇ ಸಿಕ್ಕುವುದಿಲ್ಲ, ಅವಳ ಜೀವನದ ಉಸಿರೇ ರಂಗಭೂಮಿಯಾಗಿತ್ತು. ತನ್ನ ಬದುಕಿನ ಆಶೆ-ಆಕಾಂಕ್ಷೆ, ಸುಖ-ಸಂತಸಗಳನ್ನು ತೊರೆದು ಇಡೀ ಜೀವನವನ್ನು ರಂಗಭೂಮಿ, ಕಲಾವಿದರ ಕಲ್ಯಾಣಕ್ಕೆ ಮೀಸಲಾಗಿಟ್ಟ ಹಿಂದಿನ ಹೈದ್ರಾಬಾದ ಕರ್ನಾಟಕದ ಇಂದಿನ ಕಲ್ಯಾಣ ಕರ್ನಾಟಕದ ಐಕೈಕಳು ಕಲಾವಿದೆ ರೆಹಮೇನವ್ವ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ರೆಹಮಾನವ್ವಳ ಬದುಕು ತುಂಬಾ ಸಂಕೀರ್ಣವಾದುದು, ಹುಟ್ಟಿದ್ದು ಇಸ್ಲಾಂ ಧರ್ಮದಲ್ಲಿಯಾದರೂ ಬಾಳಿ ಬದುಕಿದ್ದು ಮಾತ್ರ ಅಪ್ಪಟ ಭಾರತೀಯಳಾಗಿ, ಕಲಾವಿದರಿಗೆ ಜಾತಿ, ಧರ್ಮ, ಕುಲ ಸೀಮೆಯಿಲ್ಲದ ನಿಸ್ಸಿಮರು ಜಾತ್ಯತೀತರು, ಅವರು ಗಂಧರ್ವರು ಎನ್ನುವುದಕ್ಕೆ ಕಲಾವಿದೆ ರೆಹಮಾನವ್ವನೇ ಪ್ರತ್ಯಕ್ಷ ಸಾಕ್ಷಿ, ನಿಜಾರ್ಥದಲ್ಲಿ ಅವಳದು ಭಾವೈಕ್ಯ ಬದುಕು, ಆದರೂ ಹುಟ್ಟು ಅಂತ ಬಂದಿರುತ್ತಿಲ್ಲ. ತಾಯಿ ಹುಸೇನಮ್ಮ ಆದರೆ ತಂದೆ ಯಾರೋ ಗೊತ್ತಿಲ್ಲ.

ರೆಹಮಾನವ್ವಳ ಜನನವಾದುದ್ದು ೧೯೧೭ರಲ್ಲಿ ಹುಟ್ಟು ಹೆಸರು ರೆಹಮಾನಬಿ ಈಕೆ ಮೂಲಾನಕ್ಷತ್ರದಲ್ಲಿ ಹುಟ್ಟಿದ್ದರಿಂದ ಮನೆಯವರಿಗೆಲ್ಲ ತುಂಬಾ ಆತಂಕ ಎಲ್ಲಿ ಏನು ಅನಾಹುತವಾಗುವುದೇ ಎಂಬ ಭಯದಲ್ಲಿದ್ದರ ಬೇಕಾದರೆ ಕಾಕತಾಳಿಯವೆನ್ನುವಂತೆ, ಈಕೆ ಹುಟ್ಟಿದ ವರ್ಷವೇ ತಾಯಿಯನ್ನು ಕಳೆದುಕೊಳ್ಳುವಳು, ಬೆನ್ನಿಗೆ ಮನೆಯಲ್ಲಿ ಎಮ್ಮೆ ಸತ್ತು ಹೋಗುತ್ತದೆ. ಇದು ವಿಧಿಯ ವಿಚಿತ್ರ ತಾಯಿಯಿಲ್ಲದೆ ತಬ್ಬಲಿಯಾದ ರೆಹಮಾನಬಿ ತಾಯಿಯ ತಾಯಿ ಹಸನಮ್ಮನ ಮಡಿಲಲ್ಲಿ ಬೆಳಯುತ್ತಾಳೆ. ಬಡತನದಲ್ಲೇ ಜೀವನವನ್ನು ನೂಕುತ್ತಿದ್ದ ಹುಸನಮ್ಮಗೂ ಮಗುವನ್ನು ಸಾಕಲಾಗುವುದಿಲ್ಲ. ಅದಕ್ಕಾಗಿ ಈಕೆಯನ್ನು ತಮಗೆ ಪರಿಚಯವಿದ್ದ ಶ್ರೀಮಂತರಾದ ಸೋಮರೆಡ್ಡಿಯವರ ಮನೆಗೆ ತಂದು ಬಿಡುತ್ತಾಳೆ. ಶ್ರೀಮಂತರ ಮನೆಯಲ್ಲಿ ದನ ಕಾಯುವ ಕೆಲಸ ಮಾಡುತ್ತ ಎರಡು ಹೊತ್ತು ಊಟಕ್ಕಾದರೂ ಆಗುತ್ತದೆ ಎಂಬ ಆಲೋಚನೆ ಅಜ್ಜಿಯದಾಗಿತ್ತು.

ಸೋಮರೆಡ್ಡಿ ಎಂಬುವವರು ಶ್ರೀಮಂತರಾದರು ಕಲೆ, ಸಾಹಿತ್ಯ ಸಂಗೀತಗಳಲ್ಲಿ ತುಂಬಾ ಆಸಕ್ತರು, ಮನೆಯಲ್ಲಿ ಜರುಗುತ್ತಿದ್ದ ಸಂಗೀತ, ನೃತ್ಯಗಳು ಪುಟ್ಟ ಬಾಲಕಿ ರೆಹಮಾನಬಿ ಮೇಲೆ ತುಂಬಾ ಪ್ರಭಾವ ಬೀರುತ್ತವೆ. ಇದು ಎಷ್ಟೋ ವರ್ಷಗಳ ವರೆಗೆ ನಡೆಯುತ್ತದೆ. ವೆಂಕಟರೆಡ್ಡಿಯವರು ೧೯೭೫-೭೬ರಲ್ಲಿ ಶ್ರೀರಂಜಿನಿ ನಾಟ್ಯ ಸಂಘ ತಳಕಲ್ ಎನ್ನುವ ನಾಟಕ ಪಾತ್ರ ಮಾಡುವುಕ್ಕಾಗಿ ನಟಿಯರನ್ನು ಹುಡುಕುತ್ತಿರಬೇಕಾದರೆ, ತಮ್ಮ ಮೆನಯ ಕೆಲಸಗಳನ್ನು ಮಾಡಿಕೊಂಡಿದ್ದ ರೆಹಮಾನಬಿ ಅವರ ಕಣ್ಣಿಗೆ ಗೋಚರಿಸುವಳು, ಅವರೇ ಆಕೆಯನ್ನು ಬಣ್ಣದ ಲೋಕಕ್ಕೆ ಕರೆತರುವರು. ಇಲ್ಲಿಂದ ರೆಹಮಾನಬಿ ರೆಹಮಾನವ್ವಳಾಗಿ ತನ್ನ ಬಣ್ಣದ ಲೋಕದ ಪಯಣ ಪ್ರಾರಂಭಿಸುವಳು ತನ್ನ ಜೀವಿತದ ಕೊನೆಯವರೆಗೂ ಅವಳು ಹಚ್ಚಿದ ಬಣ್ಣ ಮಾಸುವುದಿಲ್ಲ.

ರೆಹಮಾನವ್ವ ಹುಟ್ಟು ಪ್ರತಿಭೆ, ತಾಯಿ ಶಿಕ್ಷಕಿಯಾಗಿದ್ದರೂ ಅಕ್ಷರ ಅಭ್ಯಾಸ ಮಾಡಲಾಗಲಿಲ್ಲ. ಆದರೂ ಆಕೆ ಹೆಚ್ಚು ಕಲಿತದ್ದು ಶಾಲೆಯ ಹೊರಗೆ ಬದುಕಿನ ಪಾಠದಿಂದ ತನ್ನ ವಿವೇಕವನ್ನು ಹೆಚ್ಚಿಸಿಕೊಂಡವಳು, ನಾಟಕದ ಯಾವುದೇ ಸಂಭಾಷಣೆ, ಹಾಡು ಒಮ್ಮೆ ಕೇಳಿಸಿಕೊಂಡರೆ ಆಯಿತು. ಅವು ಅವಳ ಜ್ಞಾನಕೋಶದಲ್ಲಿ ಶಾಶ್ವತವಾಗಿ ಬಿಡುತ್ತಿದ್ದವು ಅಂತಹ ಅಪ್ಪಟ ಕಲಾ ಪ್ರತಿಭೆಯೆಂಬುದನ್ನು ಗವೀಶ ಹಿರೇಮಠರು ರೆಹಮಾನವ್ವಳ ಕುರಿತು ನೆನೆಸಿಕೊಳ್ಳುತ್ತಾರೆ.

ಇಲ್ಲಿ ಗಮನಿಸಬೇಕಾದದ್ದು ಒಂದು ಮುಖ್ಯ ಅಂಶವಿದೆ. ಅದೆಂದರೆ, ರೆಹಮಾನವ್ವ ರಂಗಭೂಮಿಗೆ ಕಾಲಿಟ್ಟಾಗ ನಮ್ಮ ಸಮಾಜ ಇನ್ನೂ ಮಡಿವಂತಿಯ ಸ್ಥಿತಿಯಲ್ಲಿತ್ತು, ನಾಟಕಗಳಲ್ಲಿ ಇನ್ನೂ ಸ್ತ್ರೀ ಪಾತ್ರಗಳನ್ನು ಗಂಡಸರೇ ಹಾಕುವ ಸಂಪ್ರದಾಯ ಚಾಲ್ತಿಯಲ್ಲಿತ್ತು. ಸ್ತ್ರೀಯರು ಹೀನಾಯ, ಸಂಶಯದ ದೃಷ್ಠಿಯಿಂದ ನೋಡುತ್ತಿತ್ತು. ಅಂತಹ ಸಂಧಿಗ್ದ ಕಾಲಘಟದಲ್ಲಿ ಉತ್ತರ ಕರ್ನಾಟಕದಿಂದ ರಂಗಪ್ರವೇಶ ಮಾಡಿದ ಕೆಲವೇ ಕೆಲವು ಮಹಿಳೆಯರಲ್ಲಿ ಇವಳು ಒಬ್ಬಳಾಗಿದ್ದಳೆಂಬುದು ತುಂಬಾ ಗಮನಾರ್ಹ ಮತ್ತು ಅಷ್ಟೇ ಕ್ರಾಂತಿಕಾರಕವಾದುದಾಗಿದೆ. ಇವರಿಗೆ ಸಮಕಾಲೀನರಾಗಿ ಯಲ್ಲವ್ವ ಗುಳೇದಗುಡ್ಡ ಶಿವಮೂರ್ತಿಸ್ವಾಮಿ ಕಣಬುರಗಿ ಮಠ ಅವರ ಕಾಡಸಿದ್ದೇಶ್ವರ ಸಂಗೀತ ನಾಟಕ ಮಂಡಳಿಯಲ್ಲಿ ಎಂ.ವ್ಹಿ. ರಾಜಮ್ಮ ಗುಬ್ಬಿ ಗುಬ್ಬಿ ಕಂಪನಿಯಲ್ಲಿ ಅದರಂತೆ ಸುಬದ್ರಮ್ಮ ಅಮೀರಬಾಯಿ ಕರ್ನಾಟಕಿಯಂಥ ಕೇವಲ ಬರಳೆಣಿಕೆಯಂಥ ಮಹಿಳೆಯರು ಸಂಪ್ರದಾಯಸ್ಥ ಸಮಾಜದ ಎದುರಿನಲ್ಲೆ ಅತ್ಯಂತ ದಿಟ್ಟತನದಿಂದ ರಂಗಭೂಮಿಯಲ್ಲಿ ತಮ್ಮನ್ನು ಗುರುತಿಸಿಕೊಂಡರು, ಆ ಕಾಲಕ್ಕೆ ಈ ಕಲಾವಿದೆಯರು ತೆಗೆದುಕೊಂಡ ನಿರ್ಧಾರ, ಇಟ್ಟ ಹೆಜ್ಜೆ, ಅತ್ಯಂತ ಕ್ರಾಂತಿಕಾರವಾಗಿದೆ.

ರೆಹಮಾನವ್ವಳ ಅಭಿನಯ ಎಷ್ಟೊಂದು ಪ್ರಬುದ್ಧವಾಗಿತ್ತೆಂದರೆ, ಅವಳು ಅಭಿನಯಿಸಿದ ನಾಟಕಗಳ ಗಲ್ಲಾಪೆಟ್ಟಿಗೆ ತುಂಬುತ್ತಿತ್ತು. ಅವಳ ಎತ್ತರ ನಿಲುವು ಆಕರ್ಷಕ ರೂಪ, ಸಂಭಾಷಣೆಗಳ ಉಚ್ಛಾರ ಸ್ಪಷ್ಟತೆ, ವ್ಯಕ್ತಪಡಿಸುತ್ತಿದ್ದ ಹಾವಭಾವ ಅಭಿನಯ ಕೌಶಲ್ಯದಿಂದ ಬಹುಬೇಗನೆ ಜನಪ್ರಿಯತೆಯನ್ನು ಗಳಿಸಿ ವೃತ್ತಿ ನಾಟಕ ಕಂಪನಿಗಳ ಬೇಡಿಕೆಯ ನಟಿಯಾಗುತ್ತಾಳೆ. ವೆಂಕಟರೆಡ್ಡಿಯವರ ಕಂಪನಿಯಲ್ಲಿ ರೆಹಮಾನವ್ವಗೆ ಖಾಯಂ ನಾಯಕಿ ನಟಿಯಾಗಿ ಸ್ಥಾನ ಮೀಸಲಾಗಿತ್ತು.

ಒಂದರ್ಥದಲ್ಲಿ ವೆಂಕಟರೆಡ್ಡಿಯವರೇ ಈಕೆಗೆ ಗುರು, ಮಾರ್ಗದರ್ಶಕ, ಪೋಷಕ ಎಲ್ಲವೂ ಆಗಿದ್ದರು. ಆ ಕಾಲದಲ್ಲಿ ಹೊಸ ನಟಿಯರಿಗೆ ದೊಡ್ಡ ದೊಡ್ಡ ಪಾತ್ರಗಳಾಗಲಿ, ನಾಯಕ, ನಾಯಕಿ ಪಾತ್ರಗಳು ಅಷ್ಟು ಸುಲಭವಾಗಿ ದೊರಕುವುದು ಕಷ್ಟ ಸಾಧ್ಯವಾಗಿತ್ತು. ಅಂತಹದರಲ್ಲಿ ರೆಹಮಾನವ್ವಳು ನಾಯಕಿ ಪಾತ್ರದ ಮೂಲಕವೇ ರಂಗಪ್ರವೇಶ ಮಾಡಿದ ಅಪ್ರತಿಮ ಕಲಾವಿದೆ ಎಂಬುದನ್ನು ಆಕೆಯ ಅಭಿನಯ ಸಾಮರ್ಥ್ಯವನ್ನು ಎತ್ತಿತೋರಿಸಿದ್ದಾರೆ.

ರೆಹಮಾನವ್ವ ನಾಯಕಿಯಾಗಿ ಕಿತ್ತೂರ ರಾಣಿ ಚೆನ್ನಮ್ಮದಲ್ಲಿ ಚನ್ನಮ್ಮಳಾಗಿ ಕಂದಗಲ್ಲ ಹಣಮಂತರಾಯರ ರಕ್ತ ರಾತ್ರಿಯಲ್ಲಿ ದ್ರೌಪದಿಯಗಿ ಯಲಿವಾಳ ಸಿದ್ದಯ್ಯನವರ ಚಿತ್ರರಂಗದಲ್ಲಿ ಚಿತ್ರಾಂಗದೆಯಾಗಿ, ಹೆಮರೆಡ್ಡಿ ಮಲ್ಲಮ್ಮ ನಾಟಕದಲ್ಲಿ ತಾಯಿ ಗೌರಮ್ಮ ದಿ. ಪಿ.ಬಿ. ದುತ್ತರಗಿಯವರ ತಾಯಿ ಕರುಳು ನಾಟಕದಲ್ಲಿ ತಾಯಿ ಗೌರಮ್ಮ ಹರಿಶ್ಚಂದ್ರದಲ್ಲಿ ತಾರಾಮತಿ ಶ್ರೀಕೃಷ್ಣದಲ್ಲಿ ರುಕ್ಮಿಣಿ ಹೀಗೆ ಅನೇಕ ನಾಟಕಗಳಲ್ಲಿ ನಾಯಕ ನಟಿಯಾಗಿ ಹೆಸರು ಮಾಡಿದಳು ಆಕೆಗೆ ಎದುರಾಗಿ ಯಲಿವಾಳ ಸಿದ್ದಯ್ಯ ಹಂದಿಗನೂರ ಸಿದ್ರಾಮಪ್ಪ ಏಳಗಿ ಬಾಳಪ್ಪರಂಥ ಅನೇಕ ದಿಗ್ಗಜ ಕಲಾವಿದರು ನಾಯಕರಾಗಿ ಅಭಿನಯಿಸಲು ಮುತುವರ್ಜಿ ವಹಿಸುತ್ತಿದ್ದರೆಂದು ಹೇಳಲಾಗುತ್ತದೆ.

ಇನ್ನೊಂದು ವಿಶೇಷವೆಂದರೆ, ರಹಮಾನವ್ವ ಹೇಮರೆಡ್ಡಿ ಮಲ್ಲಮ್ಮ ನಾಟಕದಲ್ಲಿ ಮಲ್ಲಯ್ಯನಾಗಿ ಪುರುಷದಲ್ಲಿ ಅಭಿನಯಿಸಿ ಸೈಯೆನಿಸಿಕೊಳ್ಳುವಳು ರೆಹಮಾನವ್ವ ಅಭಿನಯಿಸಿದ ನಾಟಕಗಳನ್ನು ನೋಡುವುದಕ್ಕೆಂದೇ ಬೇರೆ ಬೇರೆ ಕಂಪನಿಯ ಒಡೆಯರುಗಳು ಪ್ರೇಕ್ಷಕರಾಗಿ ಬರುತ್ತಿದ್ದರೆಂದು ಹೇಳಲಾಗುತ್ತದೆ. ಅಂಥ ಅಪ್ರತಿಮ ಕಲಾವಿದೆಯಾಗಿ ಹೆಸರು ಮಾಡಿದ್ದಳು. ಹೀಗಿರಬೇಕಾದರೆ ಗದುಗಿನ ಅಡತಿಯೊಂದರಲ್ಲಿ ಗುಮಾಸ್ತನಾಗಿದ್ದ ಅಮೇಚುರ್ ಕಲಾವಿದ ನಂಜರಾಜ ಎಂಬವನ ಜೊತೆ ಪ್ರೇಮವಾಗಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುವರು, ಇದು ರೆಹಮಾನವ್ವ ಅಭಿನಯಿಸುತ್ತಿದ್ದ ಕಂಪನಿ ಒಡೆಯರಾದ ವೆಂಕಟರೆಡ್ಡಿಯವರಿಗೆ ಅಸಮಧಾನ ತರಿಸುತ್ತದೆ. ಬೇಡಿಕೆಯ ನಟಿಯಾಗಿದ್ದ ಈ ಹೊತ್ತಿನಲ್ಲಿ ಅವಳು ಈ ರೀತಿ ಮಾಡಿದ್ದಕ್ಕೆ ಅವರ ಕೆಂಗಣ್ಣಿಗೆ ಗುರಿಯಾಗಿ ಕಂಪನಿ ಬಿಟ್ಟು ಹೊರಗೆ ಬರುತ್ತಾಳೆ ಇಲ್ಲಿಂದ ರಹಮಾನವ್ವಳ ಬದುಕು ಮತ್ತೊಂದು ತಿರುವು ಪಡೆದುಕೊಳ್ಳುವುದು.

ಮುಂದೆ ಶ್ರೀಕಂಠಶಾಸ್ತ್ರೀ, ಏಣಗಿ ಬಾಳಪ್ಪ ಹಂದಿಗನೂರ ಸಿದ್ರಾಮಪ್ಪ ವಿಶ್ವರಂಜನಿ ನಾಟಕ ಮಂಡಳಿ, ಕೆ.ಬಿ.ಆರ್. ಡ್ರಾಮಾ ಕಂಪನಿ ಮುಂತಾದಗಳಲ್ಲಿ ಕೆಲವು ದಿನಗಳ ಕಾಲ ಅಭಿನಯಿಸಿ ೧೯೪೭ರಲ್ಲಿ ತನ್ನ ಹುಟ್ಟೂರಾದ ಕೊಪ್ಪಳ ಜಿಲ್ಲೆಯ ಕುಕನೂರಿನ ಗ್ರಾಮದೇವತೆ ಮಹಮ್ಮಾಯ ನಾಟಿಕ ಮಂಡಳಿ ಪ್ರಾರಂಭಿಸುವಳು, ಈ ಕಂಪನಿ ಆರ್ಥಿಕ ಮುಗ್ಗಟ್ಟನ್ನು ಅನುಭವಿಸಲು ಮತ್ತೆ ಬೇರೆ ವೃತ್ತಿ ಕಂಪನಿಗಳಲ್ಲಿ ಹೋಗಿ ಅಭಿನಯ ಮುಂದುವರಿಸುವಳು, ಮತ್ತೆ ೧೯೫೧ರಲ್ಲಿ ತನ್ನ ಸ್ವಂತ ಮನೆ ಒತ್ತೆ ಇಟ್ಟು ೩೦ಸಾವಿರ ರೂಪಾಯಿ ಬಂಡವಾಳದಲ್ಲಿ ಲಲಿತಕಲಾ ನಾಟ್ಯ ಸಂಘ ‘ಗದಗ’ ಎಂಬ ಕಂಪನಿ ಪ್ರಾರಂಭಿಸಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ನಾಡಿನ ಬಹುಭಾಗಗಳಲ್ಲಿ ಕ್ಯಾಪ ಹಾಕಿ ಅನೇಕ ಯಶಸ್ವಿ ನಾಟಕಗಳನ್ನು ಪ್ರಯೋಗಿಸುವಳು, ಕಂಪನಿ ನಡೆಸುವುದು ತುಂಬಾ ಕಷ್ಟದ ಸಾಹಸ, ರೆಹಮಾನವ್ವಳ ವೃತ್ತಿ ಬುದಕಿನಲ್ಲಿ ಅನೇಕ ಪ್ರತಿಕೂಲಗಳು ಸಮಸ್ಯೆ ಸವಾಲುಗಳು ಎದುರಾದವು, ಏರಿಳಿತಗಳು ಕಂಡವು ಆದರೆ ಅವೆಲ್ಲವುಗಳನ್ನಲ್ಲ ರೆಹಮಾನವ್ವಗೆ ಬಾಬಣ್ಣ, ಉಮೇಶ (ಉಮೇಶ ಸಾಬ) ನೆಂಬ ಗಂಡು ಮಕ್ಕಳು ಲಲಿತ ಮತ್ತು ಮಂಜುಳಾ ಎರಡು ಹೆಣ್ಣು ಮಕ್ಕಳಾಗುತ್ತವೆ. ಮಕ್ಕಳು ಬೆಳೆದು ತಾಯಿಯಂತೆ ರಂಗಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ರೆಹಮಾನವ್ವ ನಾಟಕಗಳಿಲ್ಲದ ಬಿಡುವಿನ ವೇಳೆಯಲ್ಲಿ ಹಳ್ಳಿ ಹಳ್ಳಿಗಳಿಗೆ ಹೋಗಿ ರಂಗಭೂಮಿಯ ಬಗ್ಗೆ ಆಸಕ್ತ ಕಲಾವಿದರಿಗೆ ತರಬೇತಿ ನೀಡುವುದು, ಅಮೇಚುರ್ ಕಂಪನಿಗಳಿಗೆ ಹೋಗಿ ಅಭಿನಯಿಸುವುದು, ಕೃಷಿ ಕಾಯಕ ಮಾಡುವುದನ್ನು ರೂಢಿಸಿಕೊಂಡಿದ್ದಳು ರೆಹಮಾನವ್ವ ಸರಳ ವ್ಯಕ್ತಿತ್ವದ ಸಹೃದಯಿ ಅಷ್ಟೇ ನಿಷ್ಠಂಠವಾದಿ, ಗ್ರಾಮೀಣ ಸೊಗಡಿನ ಸೀದಾ ಸಾದ ಹೆಣ್ಣು ಮಗಳು ಉರ್ದು ಮನೆ ಭಾಷೆಯಾಗಿದ್ದರೂ ಅಚ್ಚ ಕನ್ನಡತಿ, ಬಡವರ ದೀನ ದಲಿತರ ಬಗ್ಗೆ ಕಳಕಳಿಯನ್ನು ಮಾನವತೆ ಅವರಲ್ಲಿ ಕಾಣುತ್ತೇವೆ.

ಎಲ್ಲ ಕೀರ್ತಿ ಎತ್ತರಗಳನ್ನು ಬೀಗಿದವಳಲ್ಲಿ, ಒಬ್ಬ ಮಗ, ಒಬ್ಬ ಮಗ ಅಕಾಲಿಕ ಮರಣಕ್ಕೆ ತುತ್ತಾದಾಗಲೂ ಅಧ್ಯರ್ಯಗೊಳ್ಳದ ದಿಟ್ಟ ಮಹಿಳೆ ಕಂಪನಿ ಕಲಾವಿದರಿಗೆ, ಸಂಗೀತಗಾರರಿಗೆ ಆಶ್ರಯ ನೀಡಿದಂತೆ, ಹೈದರಾಬಾದ ಕರ್ನಾಟಕ ವಿಮೋಚನೆ ಚಳವಳಿಗಾರರಿಗು ಆಶ್ರಯ, ಸಹಾಯ ನೀಡಿ ರಾಷ್ಟ್ರೀಯತೆಯನ್ನು ಮೆರೆದಳು. ಅವಳು ಯಾವುದನ್ನು ಕೈಗೆತ್ತಿಕೊಂಡರೂ ತಮ್ಮ ವಿಶಿಷ್ಟ ಸ್ಪರ್ಶದಿಂದ ಅದಕ್ಕೊಂದು ಹೊಸತನವನ್ನು ತಂದು ಕೊಟ್ಟು ಅಚ್ಚು ಮೆಚ್ಚಿನವರೆನಿಸಿದ್ದಳು ಯಾರಿಗೂ ತಲೆ ಬಾಗದ ಪ್ರಶಸ್ತಿ ಕೀರ್ತಿಗೆ ಆಶೆಪಡೆದಾಕೆ ಅನೇಕ ಪ್ರಶಸ್ತಿಗಳು ಕಲಾವಿದೆಯನ್ನು ಹುಡುಕಿಕೊಂಡು ಬಂದಿವೆ. ರಾಜ್ಯ ಪ್ರಶಸ್ತಿ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಅವರ ಮುಡಿಯನ್ನು ಅಲಂಕರಿಸಿದವು. ರೆಹಮಾನವ್ವ ತನ್ನ ೭೬ ವರ್ಷಗಳ ತುಂಬು ಜೀವನವನ್ನು ಅನುಭವಿಸಿ ತನ್ನ ಕಲೆ, ವ್ಯಕ್ತಿತ್ವವನ್ನು ಶಾಶ್ವತವಾಗಿ ಉಳಿಸಿ ಭೌತಿಕ ದೇಹದಿಂದ ದೂರಾದಳು.

ರೆಹಮಾನವ್ವ ತನ್ನ ಬದುಕಿಗೆ ಶಿಲ್ಪಿ ತಾನೇ ಆಗಿದ್ದಳು. ಆವಳು ಏನು ಮಾಡಬೇಕೆಂದಿದ್ದಳೋ ಅದನ್ನೇ ಮಾಡುತ್ತಿದ್ದ ಛಲಗಾರ್ತಿ, ಜೀವನದ ಮೇಲೆ ಶ್ರದ್ಧೆ ಇರಿಸಿಕೊಂಡು ಬಂದಿದ್ದ ರೆಹಮಾನವ್ವ ಉಕ್ಕಿನ ಶಕ್ತಿ ಪಡೆದಿದ್ದಳು. ಅವಳ ಕಲಾ ಬದುಕಿನಲ್ಲಿ ಎಂದು ಸೋಲನ್ನೇ ಕಾಣದ ಧೀಮಂತೆಯ ಬದುಕಿನ ಚಿತ್ರಗಳನ್ನು ಕಲಾವಿಮರ್ಶಕರು, ಕವಿ, ಕಥೆಗಾರ ಗವೀಶ ಹಿರೇಮಠ ಅವರು ಈ ಗ್ರಂಥದಲ್ಲಿ ಕಲಾರತ್ನ ರೆಹಮಾನವ್ವಳನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಕೃತಿ ಓದಿನ ಪರಿ ಲೇಸು ಎನ್ನುವಂತಿದೆ.

‍ಲೇಖಕರು Admin

November 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: