ಶ್ರೀಪಾದ್‌ ಭಟ್ ನೋಡಿದ ‘ದ ಲಾಸ್ಟ್ ಡಾಟರ್’ ಸಿನಿಮಾ

ಶ್ರೀಪಾದ್‌ ಭಟ್

‘ಆಕೆ ನಿನಗೆ ಅರ್ಥವಾಗಲಿಲ್ಲ ಎಂಬುದಲ್ಲ, ಆಕೆ ನಿನಗೆ ಅರ್ಥವಾಗಬೇಕಿಲ್ಲ ಎಂಬುದು’

ಇತ್ತೀಚೆಗೆ ಪಶ್ಚಿಮ ದೇಶಗಳಲ್ಲಿ ಮಹಿಳಾ ಕೇಂದ್ರಿತ ಸಿನಿಮಾಗಳು ಸೂಕ್ಷ್ಮ ಸಂವೇದನೆಯಿಂದ ಮೂಡಿಬರುತ್ತಿವೆ ಮತ್ತು ತಾಕಲಾಟಗಳ ಹಾಲಾಹಲವನ್ನು ಪರಿಣಾಮಕಾರಿಯಾಗಿ ನಿರೂಪಿಸುತ್ತಿದ್ದಾರೆ.

1967 ರಲ್ಲಿ ಕೆನ್ ಲೋಚ್ ನಿರ್ದೇಶನ ಮಾಡಿದ ‘ಪೂರ್ ಕೌ’ ಮಹಿಳಾ ದೃಶ್ಟಿಕೋನದ ಕಲ್ಟ್ ಸಿನಿಮವಾಗಿತ್ತು. ಐರ್ಲೆಂಡ್ ನ ಜಾಯ್ ಎನ್ನುವ ಹದಿಹರೆಯದ ಮಹಿಳೆಯ ಬದುಕಿನ ತಲ್ಲಣ ಮತ್ತು ಬರವಸೆಗಳನ್ನು ಲೋಚ್ ಕಟ್ಟಿದ ರೀತಿ ಹೊಸ ಗಾಳಿ ಬೀಸಿದಂತಿತ್ತು. ಆ ನಂತರ ಸಾಕಶ್ಟು ನೀರು ಹರಿದಿದೆ.

ಕಳೆದ ಕೆಲ ವರ್ಶಗಳಿಂದ ಮತ್ತೆ ಲೋಚ್ ಘರಾಣದ ಕಥನ ಹೊಸ ಬಗೆಯಲ್ಲಿ ಮರಳಿದೆ. 21ನೆ ಶತಮಾನದ ವಿಕಾರಗಳೊಂದಿಗೆ ಸಂಘರ್ಶಿಸುತ್ತಲೇ ಬದುಕುತ್ತಿರುವ ಆದುನಿಕ ಮಹಿಳೆಯ ಖಾಸಗಿ ಬದುಕನ್ನು ಪ್ರಾಮಾಣಿಕವಾಗಿ ನಿರೂಪಿಸುತ್ತಿದ್ದಾರೆ ಮತ್ತು ಇವರು ಮಹಿಳಾ ನಿರ್ದೇಶಕರಾಗಿರುವುದು ವಿಶೇಶ.

ಜಸ್ಮಿಲಾ ಬಾನಿಕ್ ನಿರ್ದೇಶನದ ‘ಕ್ವಾ ವಾಡೀಸ್ ಐಡಾ’ ಎಂಬ ಬೋಸ್ನಿಯಾ ಸಿನಿಮಾ, ಚ್ಲೋಯ್ ಝಾವೋ ನಿರ್ದೇಶನದ ‘ನೋಮಾಡ್ ಲ್ಯಾಂಡ್’ ಇತ್ತೀಚಿನ ಉದಾಹರಣೆಗಳು. ಇಲ್ಲಿನ ಮಹಿಳಾ ಪ್ರೊಟಗಾನಿಸ್ಟ್ ರ ಬದುಕಿನಲ್ಲಿ ಗೊಂದಲಗಳಿವೆ, ತಲ್ಲಣಗಳಿವೆ. ಆದರೆ ಪುರುಶಾದಿಪತ್ಯವನ್ನು ಮುರಿದುಕೊಂಡ ದಿಟ್ಟತನವಿದೆ. ತನ್ನ ಬದುಕಿಗೆ ತಾನೇ ಹೊಣೆಗಾರಳು ಎನ್ನುವ ಸ್ಪಶ್ಟತೆಯಿದೆ. ಆದುನಿಕ ಜಗತ್ತಿನ ಎಲ್ಲಾ ವೈರುದ್ಯಗಳನ್ನು ಏಕಾಂಗಿಯಾಗಿ ಎದುರಿಸುವ ಚಲವಿದೆ. ನಾ ನಿಲ್ಲುವಳಲ್ಲ ಎಂಬ ದೃಡತೆಯಿದೆ. ಇದು ಕುಶಿಯ ವಿಚಾರ.

ಇದೇ ಮಾದರಿಯ ಮುಂದುವರಿಕೆಯಾಗಿ 2021ರ ಕಡೆಯ ಬಾಗದಲ್ಲಿ ಬಿಡುಗಡೆಯಾದ ಮ್ಯಾಗಿ ಗಿಲೆನ್ ಹಾಲ್ ಳ ಮೊದಲ ನಿರ್ದೇಶನದ ‘ದ ಲಾಸ್ಟ್ ಡಾಟರ್’ ಸಿನಿಮಾ ಅನೇಕ ಚರ್ಚೆಗಳನ್ನು ಹುಟ್ಟು ಹಾಕಿದೆ. ಈ ಸಿನಿಮಾದ ಪ್ರೊಟಗಾನಿಸ್ಟ್ ಲಿಡಾ ಇಂಗ್ಲೀಶ್ ಸಾಹಿತ್ಯದ ಪ್ರೊಫೆಸರ್. ಆಕೆ ತನ್ನ ಸಾಹಿತ್ಯ ಸಂಶೋದನೆಗೋಸ್ಕರ ಸೆಬಾಟಿಕ್ ರಜೆಯ ಮೇಲೆ ಗ್ರೀಕ್ ದ್ವೀಪದಲ್ಲಿ ಕೆಲ ದಿನಗಳ ಕಳೆಯಲು ಬಂದಿದ್ದಾಳೆ. ಅಂತರ್ಮುಖಿ ವ್ಯಕ್ತಿತ್ವ.

ಲಿಡಾಗೆ 48 ವರ್ಶ, ಹದಿಹರೆಯದ ಇಬ್ಬರು ಹೆಣ್ಣುಮಕ್ಕಳಿದ್ದಾರೆ ಎಂದು ಅನೇಕ ಬಾರಿ ಪ್ರಸ್ತಾಪಗೊಳ್ಳುತ್ತಿರುತ್ತದೆ. ಇದು ಕತೆಗೆ ಸಂಬಂದಿಸಿದೆಯೇ? ಹೌದು. ಹೇಗೆ? ಗೊತ್ತಿಲ್ಲ. ಇಡೀ ಸಿನಿಮಾದ ಚಿತ್ರಕತೆ ಈ ರೀತಿಯ ಹೌದು ಆದರೆ ಗೊತ್ತಿಲ್ಲ ಎನ್ನುವ ವೈರುದ್ಯಗಳಲ್ಲಿ ನಿರೂಪಿತವಾಗಿದೆ. ಪ್ರಸ್ತುತ ಮತ್ತು ಫ್ಲಾಶ್ ಬ್ಯಾಕ್ ತಂತ್ರಗಳನ್ನು ಸಿನಿಮಾದ ಉದ್ದಕ್ಕೂ ಜಾಣತನದಿಂದ ಪೋಣಿಸುವ ಮ್ಯಾಗಿ ಕಡೆಗೂ ಎಲ್ಲವನ್ನೂ ಹೇಳಿ ಏನೂ ಹೇಳದೆ ಮುಗಿಸುತ್ತಾಳೆ.

ಈ ತಂತ್ರವೇ ‘ದ ಲಾಸ್ಟ್ ಡಾಟರ್’ ಸಿನಿಮಾವನ್ನು ಗೆಲ್ಲಿಸಿದೆ. ಫ್ರೊಫೆಸರ್ ಲಿಡಾಳ ಬದುಕಿನ ನಿಗೂಡತೆಯನ್ನು ಹೇಳುತ್ತಲೇ ಅದು ಅಥೆಂಟಿಕ್ ಎನ್ನುವ ಲೇಬಲ್ ಕೊಡುವ ಆಕರ್ಶಣೆಯಿಂದ ಪಾರಾಗುವ ನಿರ್ದೇಶಕಿ ಗಿಲೆನ್ ಹಾಲ್ ಪ್ರೊಟಗಾನಿಸ್ಟ್ ಲಿಡಾಳ ನಿಜ – ಬ್ರಮೆಗಳ ಜಗತ್ತನ್ನು ಸಮರ್ಥವಾಗಿ ಬಿಚ್ಚಿಡುತ್ತಾಳೆ. ಯಾವುದು ನಿಜ? ಯಾವುದು ಬ್ರಮೆ ಎನ್ನುವ ಪ್ರಶ್ನೆಗಳು ಹಾಗೆಯೇ ಉಳಿದುಕೊಂಡರೂ ಸಹ ನೋಡುಗರಿಗೆ ನಿರಾಶೆಯಾಗದೆ ಅವರೂ ಲಿಡಾಳ ದ್ವಂದ್ವ, ವಿಕ್ಷಿಪ್ತತೆಯಲ್ಲಿ ಬಾಗಿಯಾಗುತ್ತಾರೆ.

ಕಡೆಗೂ ಉಳಿದಿದ್ದು ಆಕಾಶ ಮತ್ತು ಬೂಮಿಯಶ್ಟೆ. ಲಿಡಾ ಮತ್ತು ಆಕೆಯ ಬದುಕು ‘ನಮಗೆ ಅರ್ಥವಾಗಲಿಲ್ಲ ಎಂಬುದಲ್ಲ, ನಮಗೆ ಅರ್ಥವಾಗುವುದೇ ಇಲ್ಲ’ ಎಂಬುದು ಇಲ್ಲಿನ ದನಿ. ಇದು ನಿಜಕ್ಕೂ ಆದುನಿಕ ಮಹಿಳಾ ದನಿ. ‘ಆಕೆ ನಿನಗೆ ಅರ್ಥವಾಗಲಿಲ್ಲ ಎಂಬುದಲ್ಲ, ಆಕೆ ನಿನಗೆ ಅರ್ಥವಾಗಬೇಕಿಲ್ಲ’ ಎಂಬ ಆದುನಿಕ ಮಹಿಳಾ ದನಿ.

‘ಅಕ್ಕ ಅರ್ಥವಾಗಲಿಲ್ಲ ಎಂಬುದಲ್ಲ, ಆಕೆ ಯಾಕೆ ಅರ್ಥವಾಗಬೇಕು ಎಂಬುದು’ ಲಿಡಾ obsessive ಮಹಿಳೆ. ಸಾಹಿತ್ಯ, ಲೈಂಗಿಕತೆ, ಕಾಮ ಮತ್ತು ಮಕ್ಕಳು ಹೀಗೆ. ಆದರೆ ಅವೆಲ್ಲವೂ ಒಂದು ಬಗೆಯ ಒತ್ತಾಯದಲ್ಲಿ ಪೂರೈಸಿಕೊಂಡಂತಿದೆ. ಇದು ಲಿಡಾಳ ಅಂತರಿಕ ತಾಕಲಾಟ. ನಿಬಾಯಿಸಿದಳೆ? ಇಲ್ಲವೇ? ಅದು ಆಕೆಗೂ ಗೊತ್ತಿಲ್ಲ, ನಮಗೂ ಗೊತ್ತಾಗುವುದಿಲ್ಲ.

‘ಹೇಳದೆ ಉಳಿದ ಮಾತುಗಳು ಹೆಚ್ಚಿನದನ್ನು ಹೇಳುತ್ತವೆ’ ಎನ್ನುವುದನ್ನು ಗಿಲೆನ್ ಹಾಲ್ ಸಮರ್ಥವಾಗಿ ನಿರೂಪಿಸಿದ್ದಾಳೆ. ‘ಲಾಸ್ಟ್ ಡಾಟರ್’ ಸಿನಿಮಾ ಬದುಕಿನ ಕುರೂಪಗಳನ್ನು ಅದು ಇದ್ದ ಹಾಗೆಯೇ ಸ್ವೀಕರಿಸುತ್ತದೆ. ಲಿಡಾ ಒಂದು ನೆಪ ಮಾತ್ರ. ಇಲ್ಲಿ ಅನೇಕ ಬಾವುಕ ಸನ್ನಿವೇಶಗಳಿವೆ. ಆದರೆ ಅದು ಉದ್ರೇಕವಲ್ಲ.

48 ವರ್ಶದ ಲಿಡಾಳ ಪಾತ್ರದಲ್ಲಿ ಒಲಿವಿಯಾ ಕೋಲ್ ಮನ್ ಮತ್ತು 30 ವರ್ಶದ ಲಿಡಾಳ ಪಾತ್ರದಲ್ಲಿ ಜೆಸ್ಸಿ ಬಕ್ಲೀ ಇಬ್ಬರೂ ಅದ್ಬುತ. ಒಂದೇ ಪಾತ್ರವನ್ನು ವಿಬಿನ್ನ ಕಾಲದಲ್ಲಿ ಸಮರ್ಥವಾಗಿ ಅಬಿವ್ಯಕ್ತಿಸಿದ್ದಾರೆ. ನಿರ್ದೇಶಕಿ ಗಿಲೆನಾಲ್ ಮುಂಬರುವ ನಿರ್ದೇಶಕರಿಗೆ ದೊಡ್ಡ ಸವಾಲನ್ನು ಮುಂದಿಟ್ಟಿದ್ದಾರೆ.

‍ಲೇಖಕರು Admin

January 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: